ಪದ್ಮಜಾ ಹೇಳ್ತಿದ್ದಾರೆ ಒಂದು ಗಿಫ್ಟ್​ನ ಕಥೆ; ಫೇಸ್​ಬುಕ್ ಪೇಜ್​ನಲ್ಲಿ ಶೀಘ್ರವೇ ಬಿಡುಗಡೆ

Padmaja 22 April 20
Published on

ಬೆಂಗಳೂರು: ಲಾಕ್​ಡೌನ್ ಸಮಯದಲ್ಲಿ ಎಲ್ಲರೂ ತಮ್ಮ ಮನೆಯಲ್ಲೇ ಇದ್ದು ಕೆಲಸ ಮಾಡುತ್ತಿರುವಾಗ, ಪದ್ಮಜಾ ರಾವ್ ಸಹ ಸದ್ದಿಲ್ಲದೆ ‘ಒಂದು ಗಿಫ್ಟ್​ನ ಕಥೆ’ ಎಂಬ ಕಿರುಚಿತ್ರ ಮಾಡಿ ಮುಗಿಸಿದ್ದಾರೆ. ಈಗಾಗಲೇ ಈ ಕಿರುಚಿತ್ರ ಸಂಪೂರ್ಣವಾಗಿದ್ದು, ಇನ್ನೊಂದೆರೆಡು ದಿನಗಳಲ್ಲಿ ಫೇಸ್​ಬುಕ್​ನ ‘ಒಂದು ಗಿಫ್ಟ್​ನ ಕಥೆ’ ಪೇಜ್​ನಲ್ಲಿ ಬಿಡುಗಡೆಯಾಗಿದೆ.

30 ನಿಮಿಷದ ಈ ಕಿರುಚಿತ್ರವನ್ನು ಕ್ವಾರಂಟೈನ್ ಸಮಯದಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶೇಷವೆಂದರೆ, ಅಮೆರಿಕಾ, ಕೆನಡಾ ಅಲ್ಲದೆ ಬೆಂಗಳೂರಿನ ಏಳು ಜಾಗಗಳಲ್ಲಿ ಈ ಕಿರುಚಿತ್ರದ ಚಿತ್ರೀಕರಣ ಮಾಡಲಾಗಿದೆ. ಪ್ರಮುಖವಾಗಿ ಇಲ್ಲಿ 11 ಪಾತ್ರಗಳಿದ್ದು, 10 ಛಾಯಾಗ್ರಾಹಕರು ಕೆಲಸ ಮಾಡಿದ್ದಾರೆ. ಪದ್ಮಜಾ ರಾವ್ ಅಲ್ಲದೆ, ಸುಧಾ ಬೆಳವಾಡಿ, ಪ್ರವೀಣ್ ಡಿ ರಾವ್, ಸುನೇತ್ರಾ ಪಂಡಿತ್, ರಮೇಶ್ ಪಂಡಿತ್ ಜತೆಗೆ ಹೊರದೇಶದ ಕೆಲವು ಹೊಸ ಪ್ರತಿಭೆಗಳು ಅಭಿನಯಿಸಿದ್ದಾರೆ.

ಈ ಕುರಿತು ಮಾತನಾಡುವ ಪದ್ಮಜಾ ರಾವ್, ‘ಸಂಪೂರ್ಣವಾಗಿ ಕ್ವಾರಂಟೈನ್ ಸಮಯದಲ್ಲಿ ಮಾಡಿದ ಚಿತ್ರವಿದು. ಹಿಂದಿಯಲ್ಲಿ ‘ಫ್ಯಾಮಿಲಿ’ ಎಂಬ ಚಿತ್ರ ಬಂತಲ್ಲ, ಅದಕ್ಕೂ 10 ದಿನಗಳ ಮುನ್ನವೇ ಕೆಲಸ ಶುರು ಆಗಿದ್ದು. ಒಂದು ಹಾಸ್ಯಮಯ ಘಟನೆಯನ್ನಿಟ್ಟುಕೊಂಡು, ಕಥೆ ಮಾಡಲಾಗಿದ್ದು, ಎಲ್ಲಾ ಕಲಾವಿದರು ತಮ್ಮ ಮನೆಗಳಲ್ಲೇ ಮೊಬೈಲ್ ಮೂಲಕ ಚಿತ್ರೀಕರಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದು, ಇನ್ನೊಂದೆರೆಡು ದಿನಗಳಲ್ಲಿ ಫೇಸ್​ಬುಕ್ ಪೇಜ್​ನಲ್ಲಿ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.

ಕರೊನಾ ವೈರಸ್ಸಿಗೆ ಭಯಬಿದ್ದು ಬಳಲಿರುವ ಜನರ ಮುಖದಲ್ಲಿ ನಗು ಮೂಡಿಸುವ ಒಂದು ಸಣ್ಣ ಪ್ರಯತ್ನ ಇದು ಎಂಬುದು ಪದ್ಮಜಾ ರಾವ್ ಅವರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net