

ಚಿಕ್ಕಂದಿನಲ್ಲಿ ರಾಜೇಶ್ ಖನ್ನಾ ಅಭಿನಯದ ‘ಬಾವರ್ಚಿ’ ಎಂಬ ಚಿತ್ರ ನೋಡಿದ್ದೆ. ಅದರಲ್ಲಿ, It is so simple to be happy but it is so difficult to be simple ಎಂಬ ಸಂಭಾಷಣೆ ಇದೆ. ಚಿತ್ರ ನೋಡಿದ ಸಂದರ್ಭದಲ್ಲಿ ಆ ಸಂಭಾಷಣೆಯ ಮಹತ್ವ ಅರ್ಥವಾಗಿರಲಿಲ್ಲ. ಕ್ರಮೇಣ ವರ್ಷಗಳು ಉರುಳಿದಂತೆ ಮತ್ತು ನಾನು ಚಿತ್ರರಂಗಕ್ಕೆ ಬಂದ ನಂತರದ ದಿನಗಳಲ್ಲಿ ಅರ್ಥವಾಗುತ್ತ ಹೋಯಿತು. ಈ ಜೀವನದಲ್ಲಿ ಯಾವುದೂ ಸರಳವಲ್ಲ, ಆದರೂ ನಾವು ಸರಳವಾಗುತ್ತ ಹೋಗಬೇಕು. ಈ ಮಾತಿನ ಮಹತ್ವ ಗೊತ್ತಿದ್ದರೂ, ಅನಿವಾರ್ಯವಾಗಿ ಜೀವನವೆಂಬ ರೇಸ್ನಲ್ಲಿ ಭಾಗವಹಿಸಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ಕೆಲವೊಮ್ಮೆ ಬೇರೆಯವರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಆದರೆ, ಈ ಕರೊನಾ ನಮಗೆಲ್ಲರಿಗೂ ಸರಳತೆಯ ಮಹತ್ವವನ್ನು ಅರ್ಥ ಮಾಡಿಸಿದೆ.
ಈ ಕರೊನಾದಿಂದ ಕಲಿತ ಪ್ರಮುಖ ಪಾಠವೇನು? ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಕುಟುಂಬ, ಆರೋಗ್ಯ, ಮನಃಶಾಂತಿ, ಸಂತೋಷ ಮತ್ತು ಹಣ ಎಲ್ಲವೂ ಬಹಳ ಮುಖ್ಯ ಎಂದು ಅರ್ಥವಾಗಿದೆ. ನಾವು ಅದೆಷ್ಟೇ ದೊಡ್ಡವರಾಗಿದ್ದರೂ ಮತ್ತು ಅದೆಷ್ಟೇ ಸಾಧನೆಗಳನ್ನು ಮಾಡಿದರೂ, ನಾವೆಲ್ಲರೂ ಮನುಷ್ಯರೇ ಮತ್ತು ಮನುಷ್ಯರಾಗಿರುವುದೇ ಎಲ್ಲಕ್ಕಿಂತ ದೊಡ್ಡದು ಎಂಬುದು ಗೊತ್ತಾಗಿದೆ. ಆದರೂ, ಕೆಲವೊಮ್ಮೆ ಭ್ರಮೆಗೊಳಗಾಗುತ್ತವೆ ಮತ್ತು ಕೃತಕ ಪ್ರಪಂಚದಲ್ಲಿ ಕಳೆದು ಹೋಗುತ್ತೇವೆ.
ಹಾಗೆ ನೋಡಿದರೆ, ನಮಗೆ ಗೊತ್ತಿಲ್ಲದ ಪಾಠವನ್ನೇನು ಕರೊನಾ ಹೇಳಿಕೊಡಲಿಲ್ಲ. ಆದರೆ, ಭ್ರಮಾಲೋಕದಲ್ಲಿ ಅದೆಷ್ಟು ಕಳೆದು ಹೋಗಿದ್ದೆವೆಂದರೆ, ನಿಜಜೀವನದಲ್ಲಿ ಏನಾಗುತ್ತಿದೆ ಎಂಬುದರ ಪರಿವೆಯೂ ನಮಗಿರಲಿಲ್ಲ. ಇವತ್ತು ಸೋಷಿಯಲ್ ಮೀಡಿಯಾನೇ ನಮ್ಮ ಸಮಾಜವಾಗಿದೆ ಮತ್ತು ಡಿಜಿಟಲ್ ವೇದಿಕೆಯಲ್ಲೇ ಬದುಕುವುದು ಅಭ್ಯಾಸವಾಗಿಬಿಟ್ಟಿದೆ. ಹಾಗಂತ ಸೋಷಿಯಲ್ ಮೀಡಿಯಾ ಅಥವಾ ಈ ಡಿಜಿಟಲ್ ಲೋಕ ಕೆಟ್ಟದ್ದು ಎಂದು ಹೇಳುತ್ತಿಲ್ಲ. ಅದರಿಂದ ಹಲವು ಉಪಯೋಗಗಳೂ ಇವೆ. ಆದರೆ, ಈ ಮಾಧ್ಯಮದಲ್ಲಿ ನಾವು ನಾವಾಗಿರದೆ, ಬರೀ ಕೃತಕವಾಗಿರುವುದಕ್ಕೆ ಇಷ್ಟಪಡುತ್ತೇವೆ. ನಮ್ಮ ನಿಜ ಬಣ್ಣವನ್ನು ಬಚ್ಚಿಟ್ಟು, ನಾಟಕೀಯವಾಗಿ ಬದುಕುವುದಕ್ಕೆ ಅಭ್ಯಾಸ ಮಾಡಿಕೊಂಡಿದ್ದೇವೆ. ಹಾಗೆ ಬದುಕುವುದು ಯಾಕೆ ಮುಖ್ಯವಾಗುತ್ತದೆ? ನಮ್ಮ ಜೀವನದ ಕುರಿತು ಬೇರೆಯವರ ಅನುಮತಿ ನಮಗ್ಯಾಕೆ ಬೇಕಾಗಿದೆ? ಈ ಲಾಕ್ಡೌನ್ ನನಗಂತೂ ನನ್ನನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಮತ್ತು ಬೇರೆಯವರಿಗಿಂತ ನನ್ನನ್ನು ನಾನು ನಂಬುವುದಕ್ಕೆ ಹೇಳಿಕೊಟ್ಟಿದೆ.
ಲಾಕ್ಡೌನ್ನಿಂದ ಸಾಕಷ್ಟು ಸಮಸ್ಯೆಗಳಾಗಿವೆ. ನಾನು ಸಹ ಸೋಮಾರಿಯಾಗಿದ್ದೆ. ದೇಹದ ಆಲಸ್ಯದ ತರಹ ಮನಸ್ಸಿಗೂ ಆಲಸ್ಯ ಹಿಡಿದುಬಿಟ್ಟಿತ್ತು. ಹೇರಳವಾಗಿ ಸಮಯವೇನೋ ಇತ್ತು. ಆದರೆ, ಅದನ್ನು ಎಂಜಾಯ್ ಮಾಡುವುದಕ್ಕೆ ಮನಸ್ಸು ಒಪ್ಪುತ್ತಿರಲಿಲ್ಲ. ಏನೋ ಕಳೆದುಕೊಂಡಂತಹ ಭಾವನೆ ಒಳಗೇ ಆವರಿಸಿತ್ತು. ಸುತ್ತಮುತ್ತಲು ಸಾವು, ನೋವು, ಕಷ್ಟಗಳನ್ನು ನೋಡಿ ಎಲ್ಲರೂ ಕುಸಿದುಹೋಗಿದ್ದೆವು. ಆದರೆ, ಇದರ ಮಧ್ಯದಲ್ಲೊಂದು ಒಳ್ಳೆಯದೂ ಆಯಿತು. ನಮಗೆಲ್ಲರಿಗೂ ಅಧ್ಯಾತ್ಮದ
ಅರಿವಾಯಿತು. ಸರಳ ಜೀವನದ ಮಹತ್ವದ ಬಗ್ಗೆ ಗೊತ್ತಾಯಿತು. ಗೊತ್ತಾಗುವುದಷ್ಟೇ ಅಲ್ಲ, ಸರಳವಾಗಿ ಬದುಕುವುದಕ್ಕೆ ಈ ಕರೊನಾ ನಮ್ಮೆಲ್ಲರನ್ನೂ ದೂಡಿತು. ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ನಾವೆಲ್ಲರೂ ಬದುಕಬಹುದು ಎಂದು ತೋರಿಸಿಕೊಟ್ಟಿತು. ನಮ್ಮ ಕುಟುಂಬ, ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಸದೃಢರಾಗುವುದು ನಮ್ಮೆಲ್ಲರ ಆದ್ಯತೆ ಆಯಿತು. ನಿಜ ಹೇಳಬೇಕೆಂದರೆ, ಜೀವನದ ನಿಜವಾದ ಸಾರವೇ ಅದು.
ಇಂತಹ ಕಷ್ಟದ ಸಮಯದಲ್ಲಿ ಜನಸಾಮಾನ್ಯರು ಕ್ರಿಯಾಶೀಲರಾಗಿರುವುದಕ್ಕೆ ಹೇಗೆ ಸಾಧ್ಯ? ನನ್ನ ಪ್ರಕಾರ ಸರಳತೆ, ವಾಸ್ತವವನ್ನು ಒಪ್ಪಿಕೊಳ್ಳುವುದು ಮತ್ತು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ರಿಯಾಶೀಲರಾಗಿರುವುದಕ್ಕೆ ಸಾಧ್ಯವಾಗುತ್ತದೆ. ಇದರ ಜತೆಗೆ ಭವಿಷ್ಯದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆ ಸಹ ಬಹಳ ಮುಖ್ಯ. ದೈನಂದಿನ ಚಟುವಟಿಕೆಗಳು ಇಲ್ಲದಿದ್ದರೆ ಮನಸ್ಸು ಎಲ್ಲೆಲ್ಲೋ ಸುಳಿಯುತ್ತದೆ ಮತ್ತು ಸೋಮಾರಿತನ ಆವರಿಸಿಕೊಳ್ಳುತ್ತದೆ. ದಿನಚರಿಯ ಜತೆಗೆ ಕುಟುಂಬಕ್ಕೆ ಮತ್ತು ಕ್ರಿಯಾಶೀಲ ಚಟುವಟಿಕೆಗಳಿಗೆ ಪ್ರತಿದಿನ ಒಂದಿಷ್ಟು ಸಮಯ ಎಂದು ಮೀಸಲಿಡುವುದರಿಂದ ಬಹಳ ಸಹಾಯವಾಗುತ್ತದೆ. ವಾಕಿಂಗ್ ಅಥವಾ ಸೈಕ್ಲಿಂಗ್ ಮನಸ್ಸಿಗೆ ಮುದ ನೀಡುತ್ತದೆ. ಅಡುಗೆ ಮಾಡುವುದು ಮತ್ತು ಓದುವುದರಿಂದ ಮನಸ್ಸು ಫ್ರೆಶ್ ಆಗುತ್ತದೆ. ವ್ಯಾಯಾಮ ಅಥವಾ ಯೋಗದಿಂದ ಮೂಡ್ ಚೆನ್ನಾಗಿರುತ್ತದೆ. ಪ್ರತಿದಿನ ವರ್ಕೌಟ್ ಮಾಡುವುದರಿಂದ ನೆಮ್ಮದಿ ಮತ್ತು ಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. 20 ನಿಮಿಷ ಧ್ಯಾನ ಮಾಡುವುದರಿಂದ ಹಾಗೂ ಸಂಗೀತ ಕೇಳುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದಂತೆ. ಇವೆಲ್ಲ ಸರಳವಾದ ವಿಷಯಗಳು ಮತ್ತು ಇದ್ಯಾವುದಕ್ಕೂ ಹೆಚ್ಚು ಸಮಯ, ಖರ್ಚು, ಶ್ರಮ ಬೇಕಾಗಿಲ್ಲ. ಜೀವನ ಸಂಕೀರ್ಣವಾಗುತ್ತಿದೆ ಅಥವಾ ಅನಿಶ್ಚಿತತೆ ಕಾಡುತ್ತಿದೆ ಎಂದನಿಸುತ್ತದೋ ಆಗ ನಾವೆಲ್ಲರೂ ಸರಳ ಜೀವನದತ್ತ ಮುಖ ಮಾಡಬೇಕು, ಆಗ ಎಲ್ಲವೂ ತನ್ನಿಂತಾನೇ ಸರಿ ಹೋಗುತ್ತದೆ.
ಸರಳತೆ ಎನ್ನುವುದು ಜೀವನದ ಶೈಲಿ. ಇದು ಕರೊನಾ ಸಮಯಕ್ಕೆ ಮಾತ್ರ ಸೀಮಿತವಾಗಬಾರದು. ಆ ನಂತರವೂ ಅದನ್ನು ಮುಂದುವರಿಸುವಂತಾಗಬೇಕು. ನಿತ್ಯ ಜೀವನದಲ್ಲಿ ಹಲವು ಅನವಶ್ಯಕ ಕೆಲಸ ಮಾಡುತ್ತಿರುತ್ತೇವೆ ಮತ್ತು ಅವೆಲ್ಲವುಗಳನ್ನು ಜೀವನದಿಂದ ಕಿತ್ತೆಸೆಯದೆ ನೆಮ್ಮದಿ ಇರುವುದಿಲ್ಲ. ಮುಖ್ಯವಾಗಿ, ನಾವು ನಮಗೆ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಿದೆ. ನಮಗೆ ಅಗತ್ಯವಾಗಿರುವುದು ಏನು? ನಮ್ಮ ಜೀವನದಲ್ಲಿ ಮುಖ್ಯವಾದವರು ಯಾರು? ಇಂತಹ ಪ್ರಶ್ನೆಗಳನ್ನು ಪದೇಪದೆ
ಕೇಳಿಕೊಳ್ಳುವುದರಿಂದ, ಸ್ಪಷ್ಟತೆ ಸಿಗುತ್ತದೆ. ಸರಳ ಜೀವನಕ್ಕೆ ಹೊಂದಿಕೊಳ್ಳುವುದರ ಜತೆಗೆ, ಮುಂಚಿನ ಜೀವನಕ್ಕೂ ಹೊಂದಿಕೊಳ್ಳಬೇಕಿದೆ. ಇಷ್ಟು ದಿನ ಲಾಕ್ಡೌನ್ನಿಂದ ಮನೆಯಲ್ಲೇ ಬಂಧಿಯಾಗಿದ್ದವರು, ಕ್ರಮೇಣ ಅನ್ಲಾಕ್ ಪ್ರಕ್ರಿಯೆಯಿಂದ ಮತ್ತೆ ಮುಂಚಿನ ಜೀವನದತ್ತ ನಡೆಯಬೇಕಿದೆ. ಹಾಗಂತ ಇಷ್ಟು ದಿನ ಅಳವಡಿಸಿಕೊಂಡಿದ್ದ ಸರಳ ಜೀವನವನ್ನು ಮರೆಯಬಾರದು. ಪುನಃ ಹೊರಗೆ ಹೋಗಬೇಕು ಮತ್ತು ಹೊಸದೇನನ್ನೋ ಸಾಧಿಸಬೇಕು. ಜತೆಗೆ, ಇನ್ನಷ್ಟು ವಾಸ್ತವವಾದಿಗಳಾಗಿರಬೇಕಾಗಿದ್ದು ಮುಖ್ಯ. ಅಷ್ಟೇ ಅಲ್ಲ, ನಮ್ಮ ಸಾಧನೆಯಿಂದ ನಮಗೆ ಮತ್ತು ಸಮಾಜಕ್ಕೆ ಏನಾದರೂ ಒಳ್ಳೆಯದಾಗುತ್ತಿದೆಯೇ ಅಥವಾ ಇತರರನ್ನು ಸಂತೋಷಪಡಿಸಲು ಏನೋ ಮಾಡುವುದಕ್ಕೆ ಹೊರಟಿದ್ದೇವೆಯೇ ಎಂಬುದನ್ನು ಮನಗಾಣಬೇಕು. ನಮ್ಮ ಗುರಿಯಿಂದ ನಮಗೆ ಸಂತೋಷ ಮತ್ತು ತೃಪ್ತಿ ಸಿಗುವಂತಿದ್ದರೆ, ಅಂತಹ ಗುರಿಯನ್ನು ಬೆನ್ನಟ್ಟುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಗುರಿಗಳನ್ನು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಸುಮ್ಮನೆ ರೇಸ್ನಲ್ಲಿ ಓಡಿ ಆರೋಗ್ಯ, ನೆಮ್ಮದಿ ಮತ್ತು ಖುಷಿಯನ್ನು ಹಾಳು ಮಾಡಿಕೊಳ್ಳುವುದಲ್ಲ.
ನಾವು ಇಲ್ಲಿ ಯಾರಿಗೂ ಏನೂ ನಿರೂಪಿಸಬೇಕಿಲ್ಲ. ಮೊದಲಿಗೆ, ಯಾವುದು ಸತ್ಯ ಮತ್ತು ಯಾವುದು ಮಿಥ್ಯ, ಯಾವುದನ್ನು ಬೆನ್ನಟ್ಟಬೇಕು, ಯಾವುದರಿಂದ ದೂರವಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕರೊನಾದಂತಹ ಸಮಯದಲ್ಲಿ ಈ ತಂತ್ರಜ್ಞಾನ ಮತ್ತು ಸೋಷಿಯಲ್ ಮೀಡಿಯಾ ಎಲ್ಲರಿಗೂ ಉಪಯುಕ್ತವಾಗಿತ್ತು. ಆದರೆ, ಒಂದು ಹಂತದ ನಂತರ ಎಲ್ಲ ವಿಷಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಹಾಗಾಗಿ, ಈ ಸೋಷಿಯಲ್ ಮೀಡಿಯಾ ಎನ್ನುವುದು ಎಷ್ಟು ನಿಜ ಮತ್ತು ಎಷ್ಟು ಸುಳ್ಳು ಎನ್ನುವ ರಿಯಾಲಿಟಿ ಚೆಕ್ ಆಗಾಗ ಮಾಡಿಕೊಳ್ಳುತ್ತಿರಬೇಕು. ಸರಳ ಜೀವನ ನಡೆಸುವುದರಿಂದ, ಇವೆರೆಡರ ನಡುವಿನ ವ್ಯತ್ಯಾಸ ಅರ್ಥವಾಗುತ್ತದೆ. ಪದೇಪದೆ, It is so simple to be happy but it is so difficult to be simple ಎಂದು ನಮಗೆ ನಾವೇ ಹೇಳಿಕೊಳ್ಳಬೇಕಾಗುತ್ತದೆ. ನಮಗೆ ಏನು ಮುಖ್ಯ? ಜೀವನವನ್ನು ಸರಳವಾಗಿ ಹೇಗೆ ಮುನ್ನಡೆಸಬೇಕು? ನಮ್ಮನ್ನು ಸ್ಪೂರ್ತಿಗೊಳಿಸುವುದೇನು? ನಮ್ಮನ್ನು ನಾವು ಅತ್ಯುತ್ತಮಗೊಳಿಸಿಕೊಳ್ಳುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದು ಕಷ್ಟವಲ್ಲ. ಉತ್ತರ ಬಹಳ ಸರಳ. ನಾವೆಷ್ಟು ಸರಳ ಮತ್ತು ಪ್ರಾಮಾಣಿಕವಾಗಿರುತ್ತೇವೋ, ಅಷ್ಟೇ ಚೆನ್ನಾಗಿರುತ್ತೇವೆ. ಜೀವನವನ್ನು ಉತ್ತಮಗೊಳಿಸಿಕೊಳ್ಳುವ ಶಕ್ತಿ ನಮಗಿದೆ. ಜೀವನವನ್ನು ಹೇಗೆ ಸರಳವಾಗಿ ಮುನ್ನಡೆಸಬೇಕು ಎಂದು ತಿಳಿಯುವ ಸಾಮರ್ಥ್ಯ ನಮಗಿದೆ. ಅದನ್ನು ಚೆನ್ನಾಗಿ ಬಳಸಿಕೊಳ್ಳಿ ಮತ್ತು ಈ ಕರೊನಾ ಕಲಿಸಿದ ಪಾಠಿದಿಂದ ನಿಮ್ಮ ಜೀವನವನ್ನು ಇನ್ನಷ್ಟು ಚೆನ್ನಾಗಿ ರೂಪಿಸಿಕೊಳ್ಳಿ.
(ಲೇಖಕಿ ನಟಿ)