

ಶಂಕರ್ ನಾಗ್ ನಿಧನರಾಗಿ 30 ವರ್ಷಗಳಾಗುತ್ತಿವೆ. ಕನ್ನಡಿಗರು ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ. ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ನೆನಪಾಗುವ ಶಂಕರ್ ನಾಗ್ ಅವರನ್ನು ಇದೀಗ ‘ರಾಮಾಯಣ’ ಖ್ಯಾತಿಯ ದೀಪಿಕಾ ನೆನಪಿಸಿಕೊಂಡಿದ್ದಾರೆ.
ಹೌದು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ದೀಪಿಕಾ ಅವರಿಗೆ, ಅಭಿಮಾನಿಯೊಬ್ಬರು ‘ಹೊಸ ಜೀವನ’ ಚಿತ್ರದ ಹಾಡೊಂದನ್ನು ಶೇರ್ ಮಾಡಿದ್ದಾರೆ. ‘ಹೊಸ ಜೀವನ’ ಚಿತ್ರದಲ್ಲಿ ಶಂಕರ್ ನಾಗ್ ಎದುರು ನಾಯಕಿಯಾಗಿ ನಟಿಸಿದ್ದರು ದೀಪಿಕಾ. ಹಾಡನ್ನು ನೋಡುತ್ತಿದ್ದಂತೆಯೇ ಫ್ಲಾಶ್ಬ್ಯಾಕ್ಗೆ ಹೋದ ದೀಪಿಕಾ, ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಸಾವು ತಮಗೆ ಎಂಥಾ ದೊಡ್ಡ ಆಘಾತ ನೀಡಿತ್ತು ಎಂಬುದನ್ನು ಬರೆದುಕೊಂಡಿದ್ದಾರೆ. ‘ಹೊಸ ಜೀವನ’ ಚಿತ್ರದ ಹಾಡು ಇದು. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಆ ಚಿತ್ರದಲ್ಲಿ ನಾಯಕರಾಗಿದ್ದ ಶಂಕರ್ ನಾಗ್ ಅಪಘಾತವೊಂದರಲ್ಲಿ ನಿಧನರಾದರು. ಈ ಶಾಕ್ನಿಂದ ಹೊರಬರುವುದಕ್ಕೆ ನನಗೆ ಸಾಕಷ್ಟು ಸಮಯ ಹಿಡಿಯಿತು. ಆ ಚಿತ್ರ ದೊಡ್ಡ ಹಿಟ್ ಆಗಿ ಇತಿಹಾಸ ಬರೆಯಿತು. ಆದರೆ, ಅವರ ಸಾವಿನಿಂದ ನಾವೆಷ್ಟು ನಷ್ಟ ಅನುಭವಿಸಬೇಕಾಯಿತು’ ಎಂದು ದೀಪಿಕಾ ಹೇಳಿಕೊಂಡಿದ್ದಾರೆ. ಗಂಡ-ಮನೆ-ಮಕ್ಕಳು ಎಂದು ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ದೀಪಿಕಾ, ಕೆಲವು ವರ್ಷಗಳ ಹಿಂದೆ ನಟನೆಗೆ ವಾಪಸ್ಸಾಗಿದ್ದಾರೆ. ಸದ್ಯ ಸರೋಜಿನಿ ನಾಯ್ಡು ಕುರಿತ ಬಯೋಪಿಕ್ನಲ್ಲಿ ದೀಪಿಕಾ ನಟಿಸಲಿದ್ದಾರೆ. -ಏಜೆನ್ಸೀಸ್