ನಾನು ಎನ್ನುವುದು ಸುಳ್ಳು, ರಂಗಭೂಮಿ ಮಾತ್ರ ನಿಜ...: ಸೆಲೆಬ್ರಿಟಿ ಕಾರ್ನರ್​ನಲ್ಲಿ ಶರಣ್​

Sharan 1
Published on

ಇಂದು ರಂಗಭೂಮಿಗಿಂತ ಸಿನಿಮಾಗೆ ಹೆಚ್ಚು ಪ್ರಾಮುಖ್ಯ ಸಿಗುತ್ತಿರಬಹುದು. ಮೀಡಿಯಂ ಬದಲಾಗಿರಬಹುದು.

ಇನ್ನೊಂದು ಹೊಸ ಶೈಲಿ ಬಂದಿರಬಹುದು. ಆದರೆ, ಕಲೆ ಒಂದೇ. ಅದರ ಆತ್ಮ ಬದಲಾಗಿಲ್ಲ. ಇನ್ನೂ ನೂರಾರು ವರ್ಷ ಕಳೆದರೂ ಅದು ಬದಲಾಗುವುದಿಲ್ಲ.

ರಂಗಭೂಮಿಗೆ ಶತಮಾನಗಳ ಇತಿಹಾಸವಿದೆ. ಅದು ಕಲೆಯ ಬುನಾದಿ. ರಂಗಭೂಮಿಯಿಂದಲೇ ಕಲೆಯ ಉಗಮ ಆಗಿದ್ದು. ಪರ್ಫಾರ್ವಿುಂಗ್ ಆರ್ಟ್ಸ್ ಅಂತ ನಾವೇನು ಕರೆಯುತ್ತೇವೆ, ಅದರ ಉಗಮವಾಗಿದ್ದು ರಂಗಭೂಮಿಯಿಂದಲೇ. ಅಂಥ ಭವ್ಯ ಇತಿಹಾಸ ಮತ್ತು ಶಕ್ತಿ ಅದಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಸಹಜವಾಗಿಯೇ ಬೇರೆಬೇರೆ ಮಾಧ್ಯಮಗಳಿಂದಾಗಿ ರಂಗಭೂಮಿಯ ಹೊಳಪು ಕಡಿಮೆಯಾಗುತ್ತಿದೆಯೇನೋ ಎಂದನಿಸುವಂತಿತ್ತು. ಅದರ ಮೇಲೆ ಕೋವಿಡ್​ನ ಬರೆ ಬೇರೆ. ಕೋವಿಡ್​ನಿಂದಾಗಿ ತಿಂಗಳುಗಟ್ಟಲೆ ಈ ರಂಗ ಸಕ್ರಿಯವಾಗಿರುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಎಲ್ಲ ಒತ್ತಡಗಳನ್ನು ರಂಗಭೂಮಿ ಹೇಗೆ ಸಹಿಸಿಕೊಳ್ಳುತ್ತದೆ, ಇಷ್ಟೆಲ್ಲ ಪೆಟ್ಟುಗಳನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಭಯ ನನ್ನನ್ನು ಕಾಡುತ್ತಲೇ ಇರುತ್ತದೆ.

ನಿಜ ಹೇಳಬೇಕೆಂದರೆ, ನಾವೆಲ್ಲ ಬಹಳ ಅದೃಷ್ಟವಂತರು. ರಂಗಭೂಮಿಯ ಸಹವಾಸವಿದ್ದವರು. ಅಲ್ಲಿಂದಲೇ ಬೆಳೆದು ಬಂದವರು. ಹಾಗೆ ನೋಡಿದರೆ, ನಾನು ಹಲವು ಕಂಪನಿಗಳಲ್ಲೇನೂ ನಟಿಸಲಿಲ್ಲ. ನಾನು ಈವರೆಗೆ ಅಭಿನಯಿಸಿದ್ದು ನಮ್ಮ ತಂದೆಯ ಕಂಪನಿಯಲ್ಲಿ ಮಾತ್ರ. ಜೆವಿ ಕೃಷ್ಣ ನಾಟಕ ಕಂಪನಿಯಲ್ಲಿ ‘ಹೆಣ್ಣಿನ ಜೀವನ’, ‘ಮನೆಮಗಳು’, ‘ಮುದುಕನ ಮದುವೆ’, ‘ಚೆನ್ನಪ್ಪ ಚೆನ್ನೇಗೌಡ’, ‘ಗೋಮುಖ ವ್ಯಾಘ್ರ’, ‘ಕೊರವಂಜಿ’, ‘ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಸೇರಿದಂತೆ ಹಲವಾರು ನಾಟಕಗಳ ನೂರಾರು ಪ್ರದರ್ಶನಗಳಾಗಿವೆ. ಆ ಎಲ್ಲ ನಾಟಕಗಳಲ್ಲೂ ನಾನು ಅಭಿನಯಿಸಿದ್ದು ಕಡಿಮೆಯೇ. ಓದುತ್ತಿದ್ದರಿಂದ ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿರಲಿಲ್ಲ. ಆಗಾಗ ಕೆಲವು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ ಎನ್ನುವುದು ಬಿಟ್ಟರೆ ನನ್ನದೇನು ಸುದೀರ್ಘವಾದ ಪಯಣವೇನಲ್ಲ. ಆದರೆ, ರಂಗಭೂಮಿಯ ನಂಟು ಮತ್ತು ಸಂಪರ್ಕ ಸತತವಾಗಿ ಸಿಕ್ಕಿತ್ತು.

ಈಗ ಎಲ್ಲದಕ್ಕೂ ಫಾರ್ಮಲ್ ಆದ ತರಬೇತಿಗಳಿರುತ್ತವೆ. ನಟನಾಗಬೇಕು ಎಂದು ಚಿತ್ರರಂಗಕ್ಕೆ ಬರುವವರಿಗೆ ಅನೇಕ ವೇದಿಕೆಗಳಿವೆ. ಚಿತ್ರರಂಗಕ್ಕೆ ಆಗಮಿಸುವವರು ಪಾದರಸದಂತೆ ಇರುತ್ತಾರೆ; ಎಲ್ಲ ರೀತಿಯಲ್ಲೂ ಸಾಕಷ್ಟು ತಯಾರಿ ಮಾಡಿಕೊಂಡು ಬರುತ್ತಾರೆ. ಆಂಗಿಕ ಅಭಿನಯ, ಡೈಲಾಗ್ ಡೆಲಿವರಿ, ಕ್ಯಾಮೆರಾ ಆಂಗಲ್​ಗಳು ... ಇವೆಲ್ಲವನ್ನು ಹೇಳಿಕೊಟ್ಟು, ಸಿನಿಮಾಗೆ ಬೇಕಾದ ಎಲ್ಲ ವಿದ್ಯೆಗಳನ್ನು ಕಲಿಸಿ, ನಟರನ್ನು ರೂಪಿಸುವ ಸಂಸ್ಥೆಗಳು ನಮ್ಮ ನಡುವೆ ಇವೆ ಎಂಬುದು ಖುಷಿಯ ವಿಚಾರ.

ನನ್ನ ಮಟ್ಟಿಗೆ ಹೇಳುವುದಾದರೆ, ರಂಗಭೂಮಿಯೇ ಗುರು, ಪಾಠಶಾಲೆ. ಇವತ್ತು ನಾನೇನಾದರೂ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದೀನಿ ಎಂದರೆ, ಅದು ರಂಗಭೂಮಿಯ ಆಶೀರ್ವಾದ. ರಂಗಭೂಮಿಯ ವೈಶಿಷ್ಟ್ಯವೆಂದರೆ ಅಲ್ಲಿ ಎಲ್ಲವನ್ನೂ ನೋಡನೋಡುತ್ತಾ ಕಲಿಯಬೇಕು. ಪ್ರತಿಯೊಬ್ಬರೂ ರಂಗದ ಮೇಲೆ ನಿಂತು ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಪ್ರೇಕ್ಷಕರ ಮುಂದೆ ನಿಂತು ಸರಿ-ತಪು್ಪಗಳನ್ನು ಅರಿತುಕೊಳ್ಳಬೇಕು; ಮಾಡಿದ ತಪು್ಪಗಳನ್ನು ಇನ್ನೊಂದು ಪ್ರದರ್ಶನದಲ್ಲಿ ಮಾಡದಂತೆ ಜಾಗ್ರತೆ ವಹಿಸಬೇಕು. ಇದೆಲ್ಲದರಿಂದ ಸಂಭಾಷಣೆ ಹೇಳುವ ರೀತಿ, ಸ್ಪಷ್ಟತೆ, ಭಾಷೆಯ ಮೇಲಿನ ಹಿಡಿತ, ಮ್ಯಾನರಿಸಂ... ಎಲ್ಲವೂ ಸುಧಾರಿಸುತ್ತದೆ.

‘ನೀನು ಚೆನ್ನಾಗಿ ಹಾಡುತ್ತೀಯ’ ಎಂದು ಹಲವರು ಹೇಳುತ್ತಾರೆ. ನಿಜ ಹೇಳಬೇಕೆಂದರೆ, ನಾನು ಶಾಸ್ತ್ರೀಯವಾಗಿ ಸಂಗೀತ ಕಲಿತಿಲ್ಲ. ನನಗೆ ಸರಿಗಮಪದನಿಸ ಗೊತ್ತಿಲ್ಲ. ಆದರೆ, ಸಂಗೀತಕ್ಕೂ ನನಗೂ ಒಂದು ಅವಿನಾಭಾವ ಸಂಬಂಧ ಇದೆ. ಅದಕ್ಕೆ ಕಾರಣ ರಂಗಭೂಮಿ. ಅಲ್ಲಿ ಕಲಿತಿದ್ದು, ಜೀವನಪೂರ್ತಿ ಕೈಹಿಡಿದಿದೆ. ರಂಗಭೂಮಿಯಲ್ಲಿ ನೋಡಿ ನಾನು ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದೆ. ಕೆಲವು ಸಿನಿಮಾಗಳಲ್ಲೂ ಹಾಡುತ್ತಿರುತ್ತೇನೆ. ಸಿನಿಮಾಗೆ ಬರುವುದಕ್ಕಿಂತ ಮುಂಚೆ ಕೆಲವು ಭಕ್ತಿಗೀತೆಗಳನ್ನು ಹಾಡಿದ್ದೆ. ಅದರ ಜತೆಗೆ, ಸಿನಿಮಾಗಳಲ್ಲಿ ಕೋರಸ್ ಹಾಡಿದ್ದೀನಿ. ನಮಗೆ ಗೊತ್ತಿಲ್ಲದೆಯೇ ಸಂಗೀತ, ವಸ್ತ್ರವಿನ್ಯಾಸ, ರಂಗಸಜ್ಜಿಕೆ, ಕಲಾ ನಿರ್ದೇಶನ ... ಹೀಗೆ ಹಲವು ವಿಷಯಗಳನ್ನು ಕಲಿತಿರುತ್ತೇವೆ. ಇಷ್ಟೆಲ್ಲ ಯಾಕೆ ಹೇಳಿದೆ ಅಂದರೆ, ‘ನಾನು ಎನ್ನುವುದು ಸುಳ್ಳು. ರಂಗಭೂಮಿ ಮಾತ್ರ ನಿಜ.’

ಇನ್ನು, ರಂಗಭೂಮಿ ನಶಿಸುತ್ತಿದೆ ಎಂಬ ಮಾತನ್ನು ನಾನು ಒಪು್ಪವುದಿಲ್ಲ. ಇಂದು ರಂಗಭೂಮಿಗಿಂತ ಸಿನಿಮಾಗೆ ಹೆಚ್ಚು ಪ್ರಾಮುಖ್ಯ ಸಿಗುತ್ತಿರಬಹುದು. ಮೀಡಿಯಂ ಬದಲಾಗಿರಬಹುದು. ಇನ್ನೊಂದು ಹೊಸ ಶೈಲಿ ಬಂದಿರಬಹುದು. ಆದರೆ, ಕಲೆ ಒಂದೇ. ಅದರ ಆತ್ಮ ಬದಲಾಗಿಲ್ಲ. ಇನ್ನು ನೂರಾರು ವರ್ಷ ಹೋದರೂ ಆ ಆತ್ಮ ಬದಲಾಗುವುದಿಲ್ಲ. ಇವತ್ತು ಮುಂಚಿನ ತರಹ ಕಂಪನಿಗಳಿಲ್ಲ. ಮುಂಚಿನಷ್ಟು ನಾಟಕಗಳಾಗುತ್ತಿಲ್ಲ. ಪ್ರಮುಖವಾಗಿ, ಎರಡು ವಲಯದಲ್ಲಿ ಒಂದಿಷ್ಟು ಕೆಲಸಗಳಾದರೆ, ರಂಗಭೂಮಿ ಮತ್ತೊಮ್ಮೆ ಸಕ್ರಿಯವಾಗಿ ಎದ್ದು ನಿಲ್ಲುತ್ತದೆ. ನಾಟಕ ಪ್ರದರ್ಶನ ಮಾಡುವವರು ಒಂದು ವಲಯವಾದರೆ, ನೋಡುವವರು ಇನ್ನೊಂದು ವಲಯ. ಪ್ರದರ್ಶನ ಮಾಡುವ ವಲಯವನ್ನು ನಾನು ಹತ್ತಿರದಿಂದ ಬಲ್ಲೆ. ಇಲ್ಲಿ ಸಹ ಸಾಕಷ್ಟು ಪ್ರಯೋಗಗಳಾಗುತ್ತಿವೆ. ಹೊಸ ಪ್ರಯತ್ನಗಳಾಗುತ್ತಿವೆ. ನೋಡುಗರ ವಲಯದ ಬಗ್ಗೆ ಹೇಳುವುದಾದರೆ, ಕೆಲವು ತಿಂಗಳುಗಳ ಹಿಂದೆ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ಪ್ರೀ-ರಿಲೀಸ್ ಇವೆಂಟ್​ಗೆ ಹುಬ್ಬಳ್ಳಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯ ಒಂದು ನಾಟಕ ಪ್ರದರ್ಶನವಾಗುತ್ತಿತ್ತು. ಸರಿ, ನಾಟಕ ನೋಡುವುದಕ್ಕೆ ಹೋದೆ. ಅಂದು ಭಾನುವಾರ. ಸ್ವಲ್ಪ ಲೇಟಾಗಿತ್ತು. ಮುಂದಿನ ಸೀಟಿದ್ದರೆ ಕೊಡಿ ಎಂದು ಮನವಿ ಮಾಡಿಕೊಂಡೆ. ‘ಅಣ್ಣಾರೆ, ಮುಂದಿನ ಸೀಟ್ ಇಲ್ಲ. ಕೊನೆಯ ಐದು ಟಿಕೆಟ್​ಗಳಿವೆ, ಬೇಕಾ?’ ಎಂದು ಕೌಂಟರ್​ನಲ್ಲಿದ್ದವರು ಕೇಳಿದರು. ಇಂತಹ ಸಮಯದಲ್ಲೂ ಫುಲ್​ಹೌಸ್ ಆಗಿದೆಯಲ್ಲ ಎಂದು ಬಹಳ ಸಂತೋಷವಾಯಿತು. ಟಿಕೆಟ್ ಖರೀದಿಸಿ, ಹಿಂದೆ ಕುಳಿತುಕೊಂಡು ನಾಟಕ ನೋಡಿದೆ. ಮಾಸ್ಕ್ ಹಾಕಿದ್ದರಿಂದ ಯಾರೂ ನನ್ನನ್ನು ಗುರುತಿಸಲಿಲ್ಲ. ಅಷ್ಟು ಜನರ ಮಧ್ಯೆ, ನಾಟಕ ನೋಡಿದ ಖುಷಿಯನ್ನು ವರ್ಣಿಸುವುದಕ್ಕೆ ಸಾಧ್ಯವಿಲ್ಲ.

ಅಲ್ಲಿಯವರೆಗೂ, ರಂಗಭೂಮಿಯ ಮುಂದಿನ ಕಥೆ ಏನು ಎಂಬ ಸಣ್ಣ ಅಳುಕೇನಿತ್ತು, ಅದು ಹೊರಟು ಹೋಯಿತು. ಇದೇ ತರಹ ಆತಂಕ ಇರುವ ಎಲ್ಲರಿಗೂ ನನ್ನ ಮನವಿ ಎಂದರೆ- ರಂಗಭೂಮಿ ನಶಿಸುತ್ತಿದೆ ಎಂಬ ಭಯ ಬೇಡ. ಈಗಲೂ ಜನ ಬರುತ್ತಿದ್ದಾರೆ. ನಾಟಕ ಕಂಪನಿಯವರು ಸಹ ಒಳ್ಳೆಯ ಪ್ರಯೋಗಗಳನ್ನು, ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇವತ್ತಿನ ಕಾಲಘಟ್ಟಕ್ಕೆ ಬೇಕಾದಂತಹ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈಗ ಮುಖ್ಯವಾಗಿ ಬೇಕಾಗಿರುವುದು ಪ್ರೇಕ್ಷಕರ ಸಹಕಾರ. ಪ್ರೇಕ್ಷಕರು ಯಾವತ್ತೂ ರಂಗಭೂಮಿಯನ್ನು ಕೈಬಿಟ್ಟಿಲ್ಲ. ಇಷ್ಟೆಲ್ಲ ಸವಾಲುಗಳ ಮಧ್ಯೆಯೂ ರಂಗಭೂಮಿ ಸಕ್ರಿಯವಾಗಿದೆ ಎಂದರೆ ಅದಕ್ಕೆ ಕಾರಣ ಪ್ರೇಕ್ಷಕರೇ. ಇನ್ನೂ ದೊಡ್ಡ ಸಂಖ್ಯೆಯಲ್ಲಿ ನಾಟಕಗಳನ್ನು ನೋಡುವುದರಿಂದ, ಹೊಸ ಚೈತನ್ಯ ಬರುತ್ತದೆ. ಹೊಸ ಕನಸುಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ, ದಯವಿಟ್ಟು ರಂಗಭೂಮಿಯನ್ನು ಕೈಬಿಡಬೇಡಿ. ನಾಟಕಗಳನ್ನು ನೋಡಿ, ಪೋ›ತ್ಸಾಹಿಸಿ...

(ಲೇಖಕರು ಖ್ಯಾತ ನಟ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net