

ಏನನ್ನೇ ಸಾಧಿಸಬೇಕಾದರೂ ಜೀವನದಲ್ಲಿ ಮೊಟ್ಟಮೊದಲು ಬೇಕಾಗಿರುವುದೇ ಆಸ್ಥೆ (Passion) ಅಥವಾ ಹೃತ್ಪೂರ್ವಕ, ಮನದಾಳದ ಆಸಕ್ತಿ, ತೀವ್ರ ಹಂಬಲ. ನೇರವಾಗಿ ಸ್ವಲ್ಪ ಹಗುರಭಾಷೆಯಲ್ಲಿ ಹೇಳಬೇಕೆಂದರೆ ‘ಹುಚ್ಚು’. ಭಗವದ್ಗೀತೆಯಲ್ಲಿ ಇದನ್ನೇ ಶ್ರೀಕೃಷ್ಣ ಗಂಭೀರಾರ್ಥದಲ್ಲಿ ಕರೆದದ್ದು ‘ಸ್ವಧರ್ಮ’ ಎಂದು. ಯಾವ ಕ್ಷೇತ್ರದಲ್ಲಿ ದೀರ್ಘಕಾಲ ಶ್ರಮಿಸಿದರೂ ಆಯಾಸವಾಗುವುದಿಲ್ಲವೋ, ಬೇಸರವಾಗುವುದಿಲ್ಲವೋ, ಕೆಲಸವೇ ಕ್ರೀಡೆಯಾಗುವುದೋ ಅದೇ ಅವನ ಸ್ವಧರ್ಮ. ‘ಯಾವುದಾದರೂ ಒಂದು ವಿಷಯದಲ್ಲಿ ಇಂತಹ ತೀವ್ರ ಹಂಬಲ ಇದ್ದಲ್ಲಿ ಅವನ ಜನ್ಮ ಸಾರ್ಥಕವಾಯಿತು’ ಎನ್ನುತ್ತಿದ್ದರು ಶ್ರೀರಾಮಕೃಷ್ಣರು. ಪ್ರತಿಯೊಬ್ಬ ವ್ಯಕ್ತಿಗೂ ಯಾವುದೋ ಒಂದು ವಿಷಯದಲ್ಲಿ ತೀವ್ರ ಆಸಕ್ತಿ ಇರುವುದು ಸಾಮಾನ್ಯ ಸಂಗತಿ. ದುರಂತವೆಂದರೆ ಎಲ್ಲಿ ತನಗೆ ಆ ಆಸಕ್ತಿ ಇದೆಯೆನ್ನುವುದನ್ನು ಕಂಡುಹಿಡಿಯುವುದರಲ್ಲಿ ವ್ಯಕ್ತಿಯ ವಿಫಲತೆ ಇಲ್ಲವೇ ಆಸಕ್ತ ಕ್ಷೇತ್ರವನ್ನು ಕಡೆಗಣಿಸಿ ಮತ್ತಾವುದೋ ಕ್ಷೇತ್ರವನ್ನು ಬೆನ್ನು ಹತ್ತುವ ಪ್ರವೃತ್ತಿ. ಇದಕ್ಕೆ ಬಹಳಷ್ಟು ಸಂದರ್ಭದಲ್ಲಿ ಕಾರಣವಾಗುವುದು ಅಲ್ಲಿರುವ ಹಣ, ಅಧಿಕಾರ ಮತ್ತು ಕೀರ್ತಿಗಳ ಆಕರ್ಷಣೆ. ನಿಜಹೇಳಬೇಕೆಂದರೆ ಪಾಲಕರ ಮತ್ತು ಶಿಕ್ಷಕರ ಪ್ರಧಾನ ಕರ್ತವ್ಯವೇ ಮಗುವಿಗೆ ತನ್ನ ‘ಸ್ವಧರ್ಮ’ವನ್ನು ಗುರ್ತಿಸುವಲ್ಲಿ ಸಹಾಯ ಮಾಡುವುದು ಮತ್ತು ಅದರಲ್ಲೇ ಆಳವಾಗಿ ಮುಳುಗಲು ಪ್ರೋತ್ಸಾಹ ನೀಡುವುದು. ಹೀಗೆ ತನ್ನ ಪಾಲಿನ ಕರ್ತವ್ಯವನ್ನು ಕ್ರೀಡೆಯನ್ನಾಗಿಸುವುದೇ ಕರ್ಮಯೋಗ ಅಥವಾ ಕರ್ಮರಹಸ್ಯ. ಆಗ ಮಾತ್ರವೇ ಕರ್ಮದಲ್ಲೇ ಅದರ ಫಲ ಕಾಣುವುದಕ್ಕೆ ಸಾಧ್ಯ. ಈಠಿಢ ಯನ್ನು ಈಛ್ಝಿಜಿಜಜಠಿ ಆಗಿ ಪರಿವರ್ತಿಸಿಕೊಳ್ಳಬೇಕಾದ್ದೇ ಮೊದಲ ಹೆಜ್ಜೆ. ವಿದ್ಯಾರ್ಥಿ ಸಮುದಾಯ ಇದನ್ನು ತಿಳಿಯಬೇಕಾದ್ದು ಬಹಳ ಮುಖ್ಯ. ಯಾವುದು ನಮಗೆ ಆಸ್ಥೆಯುಳ್ಳದ್ದೋ ಅದಂತೂ ಆಸಕ್ತಿದಾಯಕವೇ. ಆದರೆ, ಪ್ರತಿ ವಿಷಯದಲ್ಲೂ ಆಸ್ಥೆ ಮೂಡಿಬರಲು ಏನು ಮಾಡಬೇಕು?
ಅದಕ್ಕೆ ಇಷ್ಟೇ ಉಪಾಯ, ಆಸ್ಥೆ ಮೂಡಬೇಕಾದ ಕ್ಷೇತ್ರದಲ್ಲಿ ಈಗಾಗಲೇ ಸಾಧನೆ ಮಾಡಿದ ವ್ಯಕ್ತಿಗಳನ್ನು ತನ್ನ ಆದರ್ಶ, (Role model)ವನ್ನಾಗಿ ಮಾಡಿಕೊಳ್ಳಬೇಕು. ಭೌತಶಾಸ್ತ್ರವನ್ನು ಆಸ್ಥೆಯುಳ್ಳದ್ದನ್ನಾಗಿಸಲು ಆರ್ಯಭಟನೋ , ಐನ್ಸ್ಟೀನರೋ ನಮ್ಮ ಆರಾಧನೆಯ (Adore) ವಸ್ತುವಾಗಬೇಕು. ಮನಸ್ಸಿನಲ್ಲಿ ನಿರಂತರ ಹೇಳಿಕೊಳ್ಳುತ್ತಿರಬೇಕು, ‘ಈ ಕ್ಷೇತ್ರ ಬಹಳ ಅದ್ಭುತ; ರೋಮಾಂಚಕಾರಿ; ಆಸಕ್ತಿದಾಯಕ’ ಎಂದು. ತಾನು ಆ ಕ್ಷೇತ್ರದಲ್ಲಿ ಸಾಕಷ್ಟು ಪರಿಣತಿ ಪಡೆದವನಂತೆ ಅದರ ಫಲವಾಗಿ ಗೌರವ- ಕೀರ್ತಿ ಅಧಿಕಾರ ಇತ್ಯಾದಿ ಹೇರಳವಾಗಿ ಲಭಿಸಿ ಜೀವನ ಸಾರ್ಥಕವಾದಂತೆ ಕನಸನ್ನು ಕಾಣುತ್ತಿರಬೇಕು. ನೂರಾರು ಯುವಕರ ಜೀವನದಲ್ಲಿ ರಚನಾತ್ಮಕ ಪರಿವರ್ತನೆಗಳನ್ನು ತಂದ ಮುತ್ಸದ್ದಿಯೊಬ್ಬರು ನನ್ನ ಮುಂದೆ ಹೇಳಿದ್ದುಂಟು, ‘ಭಯ ಹೋಗಬೇಕಾದರೆ ಧೈರ್ಯದ ಮೇಲೆ ಉಪನ್ಯಾಸ ಮಾಡು; ಪುಸ್ತಕ ಬರೆ’ ಎಂದು. ಅವರ ಈ ಸೂಚನೆಯಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆದೇ ಈ ಮಾತನ್ನು ಇಲ್ಲಿ ಬರೆಯುತ್ತಿದ್ದೇನೆ. ವಿವೇಕಾನಂದರು ‘ನಮ್ಮ ಮತ್ತು ಇತರರ ಜೀವನದಲ್ಲಿ ಆನಂದ ವರ್ಷಿಸಬೇಕಾದರೆ ಯಾವುದೇ ವಿಷಯದಲ್ಲಿ ಅತ್ಯಂತ ಆಳವಾಗಿ ಹೋಗಬೇಕಾದ್ದು ಅನಿವಾರ್ಯ’ ಎನ್ನುತ್ತಾರೆ. ಶ್ರೀರಾಮಕೃಷ್ಣರಂತೂ ‘ಒಂದು ವಿಷಯವನ್ನು ನೀನು ಅರಿಯಬೇಕಾದರೆ ನೀನು ಸ್ವಯಂ ಅದೇ ಆಗಿ ಬಿಡಬೇಕು’ ಎನ್ನುವುದರ ಮೂಲಕ ಆಸ್ಥೆಯ ಮಹತ್ವದ ಪರಾಕಾಷ್ಠೆಯನ್ನೇ ನಮ್ಮ ಮುಂದಿಡುತ್ತಾರೆ. ಆಸ್ಥೆ ಇದ್ದರಷ್ಟೇ ಸಾಲದು ಗುರಿಯ ಬಗ್ಗೆ ಸ್ಪಷ್ಟ ಚಿತ್ರವಿದ್ದರೂ ಸಾಲದು, ಮುಖ್ಯವಾಗಿ ಇರಬೇಕಾದ್ದೇ ಯೋಜನೆ (Planning).
ಯಾವುದೇ ಯೋಜನೆಯು ಪ್ರಥಮತಃ ನಾಲ್ಕು ಅಂಶಗಳ ಬಗೆಗಿನ ಸ್ಪಷ್ಟ ಹಾಗೂ ಪೂರ್ಣ ಜ್ಞಾನವನ್ನು ಒಳಗೊಂಡಿರುತ್ತದೆ. 1. ನಮ್ಮ ಮುಂದಿರುವ ಕಾರ್ಯದ ಬೃಹತ್ತತೆ ಅಥವಾ ಪರಿಮಾಣ (Hugeness or Quantum), 2. ಕಾಲದ ಅವಧಿ (Time duration), 3. ಸಿದ್ಧ ಸಂಪನ್ಮೂಲಗಳು (Available resource), 4. ಕಾರ್ಯ ವಿಭಾಗ (Division of Work). ಪರಿಪೂರ್ಣ ಯೋಜನೆಯೊಂದು ವ್ಯಕ್ತಿಯನ್ನು ಹೇಗೆ ಎಲ್ಲ ಅನಿಶ್ಚಿತತೆಗಳಿಂದಲೂ ಪಾರು ಮಾಡಿ ಯಶಸ್ಸಿನ ಶಿಖರಕ್ಕೆ ಮುಟ್ಟಿಸುತ್ತದೆ ಎನ್ನುವುದಕ್ಕೆ ಕೆಳಗಿನ ಉದಾಹರಣೆಯೇ ಸಾಕ್ಷಿ.
ಕೆನಡಾದ ಅತ್ಯಂತ ಪ್ರಸಿದ್ಧ ವೈದ್ಯಶಾಸ್ತ್ರಜ್ಞ ಡಾ. ವಿಲಿಯಂ ಒಸ್ಲರ್ ವಿದ್ಯಾರ್ಥಿ ಜೀವನದಲ್ಲಿ ಅತಿಯಾದ ಚಿಂತೆಗೊಳಗಾದ ವ್ಯಕ್ತಿಯಾಗಿದ್ದರು. ಮೋಂಟ್ರೀಲಿನ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಅವರಿಗೆ ತಮ್ಮ ಭವಿಷ್ಯವನ್ನು ಕುರಿತ ಚಿಂತೆ, ಭಯ, ಉದ್ವೇಗ, ಸಂದೇಹ, ಗೊಂದಲಗಳ ಪೀಡೆ ಪ್ರಾರಂಭವಾಗಿತ್ತು. ಕೊನೆಯ ವರ್ಷದ ಪರೀಕ್ಷೆಗಾಗಿ ಅಷ್ಟೊಂದು ಬೃಹತ್ ಗ್ರಂಥಗಳ ಅಧ್ಯಯನ ಸಾಧ್ಯವಾಗುವುದೇ? ಅವುಗಳನ್ನೆಲ್ಲ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆ ಬರೆಯಲು ತನ್ನಿಂದಾದೀತೇ? ಒಂದು ವೇಳೆ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಮುಂದೆ ಸ್ವಂತ ಪ್ರಾಕ್ಟೀಸ್ ಮಾಡಲೇ ಹೇಗೆ? ಅದಕ್ಕಾದರೂ ಹಣ ಬೇಕು, ಅದೃಷ್ಟವೂ ಬೇಕು. ಈ ಸ್ಪರ್ಧಾಮಯ ಜಗತ್ತಿನಲ್ಲಿ ಜೀವನ ಯಾತ್ರೆ ಸುಗಮವಾದೀತೇ? ಒಟ್ಟಿನಲ್ಲಿ ಉದ್ವೇಗ, ಸಂಶಯ, ಚಿಂತೆಗಳ ಕಾರ್ವೇಡಗಳು ಅವರ ಮನಸ್ಸನ್ನು ತಲ್ಲಣಗೊಳಿಸಿದ್ದವು. ಅಕಸ್ಮಾತಾಗಿ ಅವರ ಕಣ್ಣಿಗೆ ಬಿದ್ದ ಸುಪ್ರಸಿದ್ಧ ಬ್ರಿಟಿಷ್ ಚಿಂತಕ ಥಾಮಸ್ ಕಾರ್ಲೆಲರ ಒಂದು ನುಡಿ ‘ನಮ್ಮ ಅತಿ ಮುಖ್ಯವಾದ ಕರ್ತವ್ಯ ಸಮೀಪದಲ್ಲಿರುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿದೆ. ದೂರದ ದಿಗಂತದಲ್ಲಿ ಅಸ್ಪಷ್ಟವಾಗಿ ಗೋಚರಿಸುವ ಭವಿಷ್ಯದೆಡೆ ನೋಡುವುದರಲ್ಲಲ್ಲ’ ಅವರ ಬದುಕಿನ ದಿಕ್ಕನ್ನೇ ಬದಲಿಸಿತು, ಅಸಾಮಾನ್ಯ ವ್ಯಕ್ತಿಯಾಗಲು ಬೇಕಾದ ಸ್ಪೂರ್ತಿಯ ಕಿಡಿಯನ್ನು ಹೃದಯದಲ್ಲಿ ಹೊತ್ತಿಸಿತು. ಮುಂದೆ ಅವರು ಹೆಸರಾಂತ ಜಾನ್ ಹಾಪ್ಕಿನ್ಸ್ ಸಂಸ್ಥೆಯ ಸರ್ವತೋಮುಖ ಪ್ರಗತಿಗೆ ಕಾರಣರಾದರು.
ವಿಲಿಯಂ ಒಸ್ಲರ್ ಒಮ್ಮೆ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಾ, ‘ಜನಪ್ರಿಯ ಗ್ರಂಥಕರ್ತನಾಗಿ, ಆಕ್ಸ್ಫರ್ಡ್ನಂಥ ಉನ್ನತ ಮಟ್ಟದ ವಿಶ್ವವಿದ್ಯಾನಿಲಯದ ಮಹಾಪ್ರಾಧ್ಯಾಪಕನಾಗಿ ಪ್ರಸಿದ್ಧನಾದ ನನ್ನನ್ನು ಹುಟ್ಟಿನಿಂದಲೇ ಮಹಾಮೇಧಾವಿ ಎಂದು ಹಲವರು ಊಹಿಸಿರಬಹುದು. ಆದರೆ, ವಸ್ತುಸ್ಥಿತಿ ಹಾಗಿಲ್ಲ. ನಾನು ಅತ್ಯಂತ ಸಾಮಾನ್ಯ ಮಿದುಳು ಶಕ್ತಿಯುಳ್ಳ ವ್ಯಕ್ತಿಯಾಗಿದ್ದೆನೆಂಬುದು ನನ್ನ ಆಪ್ತಮಿತ್ರರಿಗೆ ತಿಳಿದಿದೆ’ ಎಂದರಂತೆ.
ಹಾಗಾದರೆ ಅವರ ಈ ವಿಜಯದ ರಹಸ್ಯವೇನು? ಒಸ್ಲರ್ ‘ವರ್ತಮಾನ ಕಾಲದಲ್ಲಿ’ ಬದುಕಿದೆ ಎನ್ನುತ್ತಾರೆ. ಎಂದರೆ? ಭವಿಷ್ಯದ ಸುಖ ಸ್ವಪ್ನಗಳನ್ನು ಕಲ್ಪಿಸಿಕೊಳ್ಳುತ್ತ ಸೋಮಾರಿಯಾಗಿ ಕುಳಿತುಕೊಳ್ಳಲಿಲ್ಲ. ಗತಕಾಲದ ಘಟನೆಗಳನ್ನು ಮೆಲುಕು ಹಾಕುತ್ತ, ಕೊರಗುತ್ತಾ ಕಾಲಕಳೆಯಲಿಲ್ಲ. ಅವರ ಮಾನಸಿಕ ಶಕ್ತಿಯು ವರ್ತಮಾನದಲ್ಲಿ ಮಾಡಲೇಬೇಕೆಂದು ಯೋಚಿಸಿಕೊಂಡಿದ್ದ ಕೆಲಸಗಳನ್ನು ದಕ್ಷತೆಯಿಂದ ಮಾಡುವುದರಲ್ಲೇ ಲೀನವಾಯಿತು.
ಒಸ್ಲರ್ ಮಾತುಗಳಿವು: ‘ಭವಿಷ್ಯವು ಇಂದೇ ರೂಪಿತವಾಗುತ್ತದೆ. ನಿನ್ನೆಯ ಚಿಂತೆ ಬಿಡಿ. ನಾಳಿನ ಘಟನೆಗಳ ಬಗೆಗೆ ಕಾತರತೆಯಿಂದ ಕನಸು ಕಾಣುತ್ತಾ ಉದ್ವಿಗ್ನರಾಗಬೇಡಿ. ಭೂತ ಮತ್ತು ಭವಿಷ್ಯತ್ಕಾಲಗಳ ಬಾಗಿಲನ್ನು ಭದ್ರವಾಗಿ ಮುಚ್ಚಿ. ವರ್ತಮಾನದಲ್ಲೇ ನಿರ್ದಿಷ್ಟ ಕಾರ್ಯಸೀಮೆಯನ್ನು ಯೋಚಿಸಿ ನಿಶ್ಚಿಂತೆಯಿಂದ ದುಡಿಯುವ ಅಭ್ಯಾಸ ಮಾಡಿ. ಈ ಕ್ಷಣ ಕಾರ್ಯೋನ್ಮುಖರಾಗಿ. ಯೋಜಿಸಿಕೊಂಡ ದಿನದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವಲ್ಲಿಗೇ ನಿಮ್ಮ ಮಹತ್ವಾಕಾಂಕ್ಷೆ ಸೀಮಿತವಾಗಲಿ.’
ಒಸ್ಲರ್ ಹೇಳಿದ ಮಾತುಗಳನ್ನೇ ಭಾರತದ ಋಷಿಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರು. ನಾವು ಅದನ್ನೀಗ ಮರೆತಿದ್ದೇವೆ. ಆ ಮಾತುಗಳು ಇಂತಿವೆ- ‘ಬುದ್ಧಿವಂತರು ಗತಕಾಲದ ಘಟನೆಗಳನ್ನು ಕುರಿತು ಶೋಕಿಸುವುದಿಲ್ಲ. ಭವಿಷ್ಯದ ಬಗೆಗೆ ಚಿಂತಿಸುವುದಿಲ್ಲ. ಅವರು ವರ್ತಮಾನ ಕಾಲದಲ್ಲೇ ಕಾರ್ಯನಿರ್ವಹಿಸುತ್ತಾರೆ’.
‘ಇಂದಿನ ದಿನ ಸುದಿನ, ನಾಳೆ ಎಂದರೆ ಅದು ಕಠಿಣ’ ಎಂದರು ಹರಿದಾಸರು. ‘ನೀನು ಈ ದಿನವನ್ನು ನೋಡಿಕೋ, ಅದು ನಾಳೆಯನ್ನು ನೋಡಿಕೊಳ್ಳುತ್ತದೆ’ ಎಂದು ಒಬ್ಬ ಆಂಗ್ಲ ವಿದ್ವಾಂಸ ಹೇಳಿದ, ‘ಈ ದಿನ’ ಎಂಬ ಒಂದೇ ಶಬ್ದವನ್ನು ತನ್ನ ಮೇಜಿನ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆದಿರಿಸಿಕೊಂಡಿದ್ದ ಅಮರ ಸಾಹಿತಿ ರಸ್ಕಿನ್. ‘ನಿನ್ನೆ ಸತ್ತಿಹುದೀಗ ನಾಳೆ ಹುಟ್ಟದೇ ಇಹುದು, ಇಂದು ಸೊಗವಿರಲದನು ಮರೆತಳುವುದೇಕೆ?’ ಎಂದ ಉಮರ್ ಖಯ್ಯಾಮ್ ಇವರೆಲ್ಲರೂ ಉಪಯೋಗಿಸಿದ ಶಬ್ದಗಳ ಅರ್ಥ ಒಂದೇ- ವರ್ತಮಾನ ಕಾಲದಲ್ಲಿ ಕಾರ್ಯನಿರತರಾಗಿರುವುದು ಅವಶ್ಯ ಎಂದು.
ಈ ಹೊತ್ತು ಉತ್ತಮ ಬದುಕನ್ನು ಬದುಕಿದ್ದಾದರೆ ನಾಳೆಗದು ಒಂದು ಸಂತಸದ ಸವಿನೆನಪಾಗಿ ಮನಸ್ಸಿಗೆ ನೆಮ್ಮದಿ ನೀಡುವುದು. ಭವಿಷ್ಯವಿನ್ನೂ ನಮ್ಮ ಕೈಗೆ ಸಿಕ್ಕಿಲ್ಲ. ವರ್ತಮಾನ ಮಾತ್ರ ನಮ್ಮ ಕೈಯಲ್ಲಿದೆ. ಅದನ್ನು ಸರ್ವ ಪ್ರಯತ್ನದಿಂದ ಸದುಪಯೋಗಗೊಳಿಸಬೇಕು.
ಸಾಮಾನ್ಯ ವಿದ್ಯಾರ್ಥಿಯೂ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆಯಬಲ್ಲ. ನನ್ನ ದೃಷ್ಟಿಯಲ್ಲಿ ಇಲ್ಲವೇ ವೇದಾಂತದ ದೃಷ್ಟಿಯಲ್ಲಿ ಸಾಮಾನ್ಯ ಎಂಬ ವಿದ್ಯಾರ್ಥಿಯೇ ಇಲ್ಲ. ತನ್ನೊಳಗಿನ ಶಕ್ತಿಗಳ ಪರಿಚಯವಿಲ್ಲದೇ ಅವನು ಸಾಮಾನ್ಯನಂತೆ ವರ್ತಿಸುತ್ತಿದ್ದನೇ ಹೊರತು ಅವನೆಂದೂ ಸಾಮಾನ್ಯನಾಗಿರಲಿಲ್ಲ. ಆದರೆ, ಅವನನ್ನು ಸಮಸ್ಯೆಗಳಿಂದ ಪಾರುಮಾಡಿದ್ದು ಮಾತ್ರ ಥಾಮಸ್ ಕಾರ್ಲೆನ್ನ ‘ನಮ್ಮ ಎಲ್ಲ ಗಮನ ಸದ್ಯದಲ್ಲಿ ಅಥವಾ ಇಂದು ಇವತ್ತು ಏನು ಮಾಡಬೇಕು ಎಂಬುದರ ಕಡೆಗಿರಬೇಕೇ ಹೊರತು ಮುಂದೆಂದೋ ಏನಾಗಬೇಕಿದೆ ಎಂಬುದರ ಕಡೆಗಲ್ಲ’ ಎಂಬ ವಾಕ್ಯ. ಮಹಾನ್ ಋಷಿ ವಸಿಷ್ಠ ‘ಯೋಗವಾಸಿಷ್ಠ’ದಲ್ಲಿ ಶ್ರೀರಾಮನಿಗೆ ಹೀಗೆಯೇ ಉಪದೇಶಿಸಿದ್ದಾನೆ.
‘ಗತಶೋಕಂ ನ ಕುರ್ವೀತ ಭವಿಷ್ಯಂ ನೈವ ಚಿಂತೆಯೇತ್ವರ್ತಮಾನೇಷು ಕಾರ್ಯುಷು ವರ್ತಯಂತಿ ವಿಚಕ್ಷಣಾಃ’- ‘ವಿವೇಕಿಗಳು ಹಿಂದೆ ಆಗಿದ್ದಕ್ಕೆ ರೋದಿಸುವುದಿಲ್ಲ, ಭವಿಷ್ಯದ ಬಗೆಗೂ ಉದ್ವೇಗಗೊಳ್ಳುವುದಿಲ್ಲ; ವರ್ತಮಾನದಲ್ಲಿನ ಕರ್ತವ್ಯದ ಬಗ್ಗೆಯೇ ಉತ್ಸುಕರಾಗಿರುತ್ತಾರೆ.’
ವಿಧಾತನ ಕಾರ್ಯವೈಖರಿಯೇ ವಿಚಿತ್ರ. ಅವನೇ ನಮ್ಮ ಆಯುಷ್ಯವನ್ನು ನೂರು ವರ್ಷಗಳಾಗಿ ವಿಭಾಗಿಸಿದ್ದಾನೆ. ಜತೆಗೆ ಒಂದೊಂದು ವರ್ಷವೂ ಕೆಲ ತಿಂಗಳು ಮತ್ತು ಪ್ರತಿ ತಿಂಗಳು ಕೂಡ ಕೆಲ ವಾರ, ಕೆಲ ದಿನ, ಕೆಲ ಗಂಟೆಗಳಂತೆ. ಜೀವನದಲ್ಲಿ ಸಾಧಿಸಬೇಕಾದ ಗುರಿ ಉದ್ದೇಶಗಳನ್ನು ಕೂಡ ‘ವಿಚಕ್ಷಣ’ನಾದವನು, ‘ಸಾವಿರಾರು ವರ್ತಮಾನಗಳಲ್ಲಿ ಹಂಚಲ್ಪಟ್ಟ ಅಂದಂದಿನ ಕರ್ತವ್ಯ’ಗಳಾಗಿ ವಿಭಾಗಿಸಿಕೊಳ್ಳಬೇಕು.
ಹೌದು! ನೂರಾರು ಮೈಲಿಗಳ ಪಾದಯಾತ್ರೆಯನ್ನು ಒಂದೊಂದೇ ಹೆಜ್ಜೆಯನ್ನಿಡುತ್ತಾ, ಆಕಾಶವನ್ನು ಮುಟ್ಟುವ ಗೌರೀಶಂಕರ ಶಿಖರವನ್ನು ಸ್ವಲ್ಪ ಸ್ವಲ್ಪವೇ ಏರುತ್ತಾ, ಬೃಹತ್ ಗ್ರಂಥವನ್ನು ಒಂದೊಂದೇ ಪುಟ ಓದುತ್ತಾ, ಸುಂದರ ಮೂರ್ತಿಯೊಂದನ್ನು ಒಂದೊಂದೇ ಉಳಿಪೆಟ್ಟನ್ನು ಕಾಡುಗಲ್ಲಿಗೆ ತಟ್ಟುತ್ತಾ, ಒಂದೊಂದೇ ಇಟ್ಟಿಗೆ ಇಲ್ಲವೇ ಕಲ್ಲಿನಿಂದ ಚೈನಾದ ಮಹಾಗೋಡೆಯನ್ನೋ, ಈಜಿಪ್ಟಿನ ಪಿರಮಿಡ್ಡನ್ನೋ ನಿರ್ವಿುಸುತ್ತಾ ಮನುಷ್ಯ ಇಡೀ ಮಾನವ ಜನಾಂಗವನ್ನೇ ದಿಗ್ಭ›ಮೆಗೊಳಿಸಿದ್ದಾನೆ. ಇದೊಂದು ಅದ್ಭುತ ಉಪಾಯ ಮತ್ತು ಯಶಸ್ಸಿನ ಸೂತ್ರ. ಅದೇ ಆಸ್ಥೆ ಮತ್ತು ಯೋಜನೆ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)