

ಅದಕ್ಕೆ ಶ್ರೀಕೃಷ್ಣ ಹೇಳಿದ, ‘ಜೀವನ ಅನುಕೂಲಕರವಾಗಿ ಮತ್ತು ಚೆನ್ನಾಗಿ ನಡೆಯುತ್ತಿರುವಾಗ, ನೀವು ದೂರುವುದಿಲ್ಲ. ಏಕೆಂದರೆ, ಕೆಲವು ಸನ್ನಿವೇಶಗಳನ್ನು ಒಳ್ಳೆಯದೆಂದು, ಮತ್ತೆ ಕೆಲವನ್ನು ಕೆಟ್ಟದೆಂದು ಪರಿಗಣಿಸುವಿರಿ ಅಥವಾ ಕೆಲವು ಸನ್ನಿವೇಶಗಳು ಅಗತ್ಯ ಮತ್ತು ಕೆಲವನ್ನು ಅನಗತ್ಯವೆಂದು ಪರಿಗಣಿಸುವಿರಿ, ಇದರಿಂದಾಗಿ ಜೀವನವನ್ನು ಕೇವಲ ಜೀವನದಂತೆ ನೋಡದೆ, ಇವೆಲ್ಲವೂ ನನಗೇಕೆ ಸಂಭವಿಸುತ್ತಿದೆ ಎಂಬುದಾಗಿ ಪ್ರಶ್ನಿಸಿಕೊಳ್ಳುತ್ತೀರಿ’.
ಆಧ್ಯಾತ್ಮಿಕ ಪಥದಲ್ಲಿ ಕಾಲಿಟ್ಟ ತಕ್ಷಣವೇ ಎಲ್ಲವೂ ಶೀಘ್ರಗತಿಯಲ್ಲಿ ನಡೆಯುತ್ತಿದೆಯೇನೋ ಎಂಬಂತೆ ಜೀವನ ಶ್ರೇಷ್ಠಮಟ್ಟದಲ್ಲಿ ಬದಲಾವಣೆ ಕಾಣುತ್ತದೆ. ಆದರೆ, ಒಂದನ್ನು ಒಳ್ಳೆಯದೆಂದು, ಮತ್ತೊಂದನ್ನು ಕೆಟ್ಟದೆಂದು ಗುರುತಿಸದಿದ್ದರೆ, ಜೀವನ ಗಾಢವಾಗಿ ಸಂಭವಿಸುತ್ತದೆ ಅಷ್ಟೆ. ಒಳ್ಳೆಯದು, ಕೆಟ್ಟದ್ದು ಎಂಬುವುದಿಲ್ಲ, ಜೀವನ ಸಾಗುತ್ತದೆ. ಕೆಲವರು ಅದನ್ನು ಆನಂದಿಸುತ್ತಾರೆ, ಕೆಲವರು ಅದರಿಂದ ವ್ಯಥೆಪಡುತ್ತಾರೆ.
ಜೀವನ ಹೇಗಿದೆಯೋ ಹಾಗೆಯೇ ಸ್ವೀಕರಿಸಬೇಕು. ಸೃಷ್ಟಿ ಇರುವ ಹಾಗೆ ಜೀವನ. ಬಹುತೇಕ ಜನರು ಹಲವಾರು ವಿಷಯಗಳನ್ನು ಜೀವನವೆಂದು ಪರಿಗಣಿಸುತ್ತಾರೆ, ಆದರೆ ನೈಜ ಅರ್ಥದಲ್ಲಿ ಅವುಗಳಿಗೆ ಜೀವನದ ಕುರಿತು ಯಾವುದೇ ಸಂಬಂಧವಿರುವುದಿಲ್ಲ. ಕಾರು ಇಲ್ಲದಿರುವ ಜನರು ಕಾರು ಇರುವವರನ್ನು ನೋಡಿ, ‘ಇವರು ಬಹಳ ಅದೃಷ್ಟವಂತರು’ ಎಂದು ಯೋಚಿಸುತ್ತಾರೆ. ಕಾರಿನ ಸೌಲಭ್ಯ ಖಂಡಿತವಾಗಿಯೂ ಅನುಕೂಲಕರ. ಆದರೆ ಅದೊಂದು ದೊಡ್ಡ ಅದೃಷ್ಟವಲ್ಲ, ಕಾರುಗಳೇ ಇಲ್ಲದಿದ್ದಲ್ಲಿ ಯಾರಿಗೂ ಅದರ ಮೇಲೆ ಆಸೆಯೇ ಇರುತ್ತಿರಲಿಲ್ಲ. ಇಲ್ಲಿ ಸಮಸ್ಯೆಯೆಂದರೆ, ನೀವು ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದು, ‘ಓಹ್! ಅವರಿಗೆ ಆ ಸೌಕರ್ಯವಿದೆ, ನನಗಿಲ್ಲ’ ಎಂಬುವ ಅರ್ಥದಲ್ಲಿ, ಅದಕ್ಕೂ ವಾಸ್ತವಕ್ಕೂ ಸಂಬಂಧವಿಲ್ಲ. ಅದೊಂದು ಮಾನಸಿಕ ಸ್ಥಿತಿ. ಎಲ್ಲ ಸಂಕಟಗಳೂ ಆ ಹೋಲಿಸಿಕೊಳ್ಳುವಿಕೆ, ಕೀಳರಿಮೆಯಿಂದ ಬರುತ್ತವೆ.
ಆಧ್ಯಾತ್ಮಿಕ ಪಥದಲ್ಲಿ ನಡೆದಾಗ ಆಂತರಿಕ ಸ್ಥಿತಿಯ ವಿಕಾಸವಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಒಂದು ಪ್ರಮುಖ ಕಾರಣವೆಂದರೆ ನಿಮ್ಮ ‘ಪ್ರಾರಬ್ಧ’- ನಿಮಗೆ ಈ ಜೀವಮಾನಕ್ಕೆ ಹಂಚಿಕೆಯಾಗಿರುವ ಕರ್ಮ- ಸೃಷ್ಟಿಯು ಬಹು ಕರುಣಾಮಯಿ. ಅದೇನಾದರೂ ‘ಸಂಚಿತ’ ಎಂದು ಕರೆಯಲ್ಪಡುವ ನಿಮ್ಮೆಲ್ಲ ಕರ್ಮಗಳನ್ನು ಒಮ್ಮೆಗೇ ಈ ಜೀವಮಾನದಲ್ಲಿಯೇ ಅನುಭವಿಸಲು ನೀಡಿದರೆ, ಬಳಲಿ ಹೋಗುವಿರಿ, ಹೈರಾಣಾಗುವಿರಿ. ಬಹಳಷ್ಟು ಜನರಿಗೆ ಈ ಜೀವಮಾನದ ನೆನಪುಗಳನ್ನೇ ಕೊಡವಿ ಹಾಕಲು ಸಾಧ್ಯವಿಲ್ಲ. ನಿಮ್ಮ ನೂರು ಹಿಂದಿನ ಜನ್ಮಗಳನ್ನು ನಾನು ತೀವ್ರತೆಯಿಂದ ನೆನಪಿಸಿದರೆ, ನಿಮ್ಮಲ್ಲಿ ಬಹುತೇಕರಿಗೆ ಆ ನೆನಪಿನ ಹೊರೆಯನ್ನು ಸಹಿಸಲಾಗುವುದಿಲ್ಲ. ಆದ್ದರಿಂದಲೇ ಜೀವನ ನೀವು ನಿರ್ವಹಿಸುವಷ್ಟು ಮಾತ್ರ ಪ್ರಾರಬ್ಧ ಕರ್ಮವನ್ನು ಹಂಚುತ್ತದೆ. ಜೀವನದ ಹಂಚಿಕೆಯಂತೆ (ನೀವು ಹೊಸ ಕರ್ಮಗಳನ್ನು ಸೃಷ್ಟಿಸಿಕೊಳ್ಳುವುದಿಲ್ಲವೆಂದು ಊಹಿಸುತ್ತೇನೆ. ಆದರೆ ಅದು ಪೂರ್ಣವಾಗಿ ನಿಜವಲ್ಲ!) ನೂರು ಜನ್ಮಗಳ ಕರ್ಮಗಳನ್ನು ವಿಲೀನಗೊಳಿಸಿಕೊಳ್ಳಲು, ನಿಮಗೆ ಕನಿಷ್ಠ ನೂರು ಜನ್ಮಗಳು ಬೇಕಾಗುತ್ತವೆ. ಆದರೆ ಈ ನೂರು ಜನ್ಮಗಳ ಜೀವಮಾನದ ಪ್ರಕ್ರಿಯೆಯಲ್ಲಿ, ಮುಂದಿನ ಸಾವಿರ ಜನ್ಮಗಳಿಗಾಗುವಷ್ಟು ಕರ್ಮವನ್ನು ಸಂಗ್ರಹಿಸುವಿರಿ.
ಆಧ್ಯಾತ್ಮಿಕ ಪಥದಲ್ಲಿ ಇರುವಾಗ, ನಿಮ್ಮ ಅಂತಿಮ ಗುರಿಯನ್ನು ತಲುಪಲು ಆತುರರಾಗುವಿರಿ. ಅದು ನೂರು ಜೀವಮಾನಗಳನ್ನು ತೆಗೆದುಕೊಳ್ಳುವುದು ನಿಮಗಿಷ್ಟವಿಲ್ಲ. ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಪ್ರವೇಶಿಸುವುದೆಂದರೆ, ಜೀವನವನ್ನು ಭಾರಿ ಪ್ರಮಾಣದಲ್ಲಿ ಅನುಭವಿಸುವ ಬಯಕೆ ಎಂದಾಗುತ್ತದೆ. ಒಮ್ಮೆ ನೀವು ನನ್ನ ಬಳಿ ಬಂದು ಕುಳಿತುಕೊಂಡರೆ ಇದುವೇ ನನ್ನ ಆಶೀರ್ವಾದವಾಗಿರುತ್ತದೆ- ‘ಜೀವನದಲ್ಲಿ ಇರುವುದೆಲ್ಲವೂ ನಿಮಗೆ ಸಂಭವಿಸಲಿ’. ಮರಣ ಸಂಭವಿಸಿದರೆ? ಅದೂ ಅದ್ಭುತವೇ ಸರಿ. ನೀವು ಅಲ್ಲಿಗೆ 75 ವರ್ಷಗಳಿಗೆ ಬದಲಾಗಿ 35 ವರ್ಷಗಳಲ್ಲಿಯೇ ತಲಪುವುದು ವಿಸ್ಮಯಕಾರಿಯಲ್ಲವೇ? ಇದು ಕೇವಲ ರ್ತಾಕತೆಯ ಪ್ರಶ್ನೆಯಲ್ಲ, ಇದುವೇ ಜೀವನದ ವಾಸ್ತವ. ಇದನ್ನೇ ಶ್ರೀಕೃಷ್ಣನು ಗೀತೆಯಲ್ಲಿ ಯಥಾರ್ಥವಾಗಿ ನೀಡಿರುವ ಸಂದೇಶವಾಗಿದೆ. ನೀವು ಅವರಿಗೆ ಯುಕ್ತ ರೀತಿಯ ಸನ್ನಿವೇಶ ಒದಗಿಸಿಕೊಟ್ಟರೆ ಅವರು ಅಲ್ಲಿಗೆ ಶೀಘ್ರವಾಗಿ ತಲುಪಲಿ.
ಒಬ್ಬ ಬಾಲಯೋಗಿ ಹಾಗೂ ಭಕ್ತೆಯಾದ ಓರ್ವ ಹುಡುಗಿಯ ಮದುವೆ ಸಂದರ್ಭದ ಕುರಿತು ತಮಿಳಿನಲ್ಲಿ ಸುಂದರವಾದ ಕವಿತೆ ಇದೆ. ಅವರು ಮೂರು ಸಾವಿರ ಅತಿಥಿಗಳ ಉಪಸ್ಥಿತಿಯಲ್ಲಿ ಅದ್ಧೂರಿ ವಿವಾಹಮಹೋತ್ಸವ ಏರ್ಪಡಿಸಿದ್ದರು. ಅವರಿಗೆ ವಿವಾಹವಾಯಿತು. ತಾನೇ ಶ್ರೇಷ್ಠ ಕವಿಯಾದ್ದರಿಂದ ಬಾಲಯೋಗಿ ಭಾವಯುಕ್ತ ಭಕ್ತಿಗೀತೆ ಹಾಡಿದ. ಎಲ್ಲರ ಗಮನ ಅವನ ಮೇಲೆಯೇ ಇತ್ತು. ಅವನಿಗೂ ಅದೇ ಬೇಕಾಗಿತ್ತು. ಅವನು ಈ ರೀತಿಯ ಭಾವಯುಕ್ತವಾದ ಗಮನ ಸೆಳೆಯುವ ಕ್ಷಣಗಳನ್ನು ಅವರನ್ನು ಲೀನಗೊಳಿಸಲು ಬಳಸಿಕೊಂಡ. ಅವರೆಲ್ಲರೂ ಅವರ ಶರೀರಗಳನ್ನು ಮದುವೆ ಮಂಟಪದಲ್ಲಿಯೇ ತ್ಯಜಿಸಿದರು. ಹಲವಾರು ವರ್ಷಗಳ ನಂತರ, ಒಬ್ಬ ಕವಿ ಸುಂದರವಾಗಿ ತನ್ನ ಕವಿತೆ ಮೂಲಕ ಈ ರೀತಿ ಪ್ರಲಾಪಿಸುತ್ತಾನೆ, ‘ನನ್ನನ್ನು ಆ ವಿವಾಹ ಮಹೋತ್ಸವಕ್ಕೆ ಆಹ್ವಾನಿಸಿದ್ದಿದ್ದರೆ, ನಾನು ಹೀಗೆ ಪ್ರಯಾಸ ಪಡುವ ಸ್ಥಿತಿ ಬರುತ್ತಿರಲಿಲ್ಲ. ನಾನು ಸಹ ಅವರಂತೆಯೇ ಮುಕ್ತಿ ಹೊಂದುತ್ತಿದ್ದೆ. ನಾನು ಕೆಲವು ವರ್ಷಗಳು ವಿಳಂಬವಾಗಿ ಬಂದೆ. ಓಹ್! ಅಂತಹುದೇ ಮತ್ತೊಂದು ವಿವಾಹದ ಸಮಯ ನನಗಾಗಿ ಬರುವುದೇ?’ ಅವನು ಆ ವಿವಾಹ ಮಂಟಪದಲ್ಲಿ ನಡೆದ ಘಟನೆಯನ್ನು ಒಂದು ದುರಂತವೆಂದೇ ಪರಿಗಣಿಸಲಿಲ್ಲ. ಅದೊಂದು ಅದೃಷ್ಟವೆಂದು ಭಾವಿಸಿದ. ಬಾಲಯೋಗಿ ಉಪಸ್ಥಿತಿಯಿಂದಲೇ ಎಲ್ಲರೂ ಒಂದೇ ಸಮಯದಲ್ಲಿ ಸದ್ಗತಿ ಹೊಂದಿದರು. ಆಧ್ಯಾತ್ಮಿಕ ವ್ಯಕ್ತಿ ಯಾವುದೇ ಘಟನೆಗಳನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ದೃಷ್ಟಿಯಲ್ಲಿ ನೋಡುವುದಿಲ್ಲ. ನೀವು ಜೀವನ ಎಷ್ಟು ತೀವ್ರವಾಗಿ ಸಂಭವಿಸುತ್ತಿದೆ ಎಂಬುದರ ಕುರಿತು ಆಸಕ್ತಿ ವಹಿಸುತ್ತಿರಿ. ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವುದು ಸಾಮಾಜಿಕ ವಿದ್ಯಮಾನವಷ್ಟೆ. ಅದಕ್ಕೂ ಜೀವನಕ್ಕೂ ಸಂಬಂಧವಿಲ್ಲ. ನಿರ್ದಿಷ್ಟ ಪಥದಲ್ಲಿ ಉಪಕ್ರಮಿಸಿದರೆ ಪ್ರಾರಬ್ಧಕ್ಕೆ ಎಂದಿಗೂ ಸೀಮಿತವಾಗುವುದಿಲ್ಲ. ನಿಮಗೆ ಹಂಚಿರುವ ಒಂದು ನೂರು ಜನ್ಮಗಳ ಪಾಲನ್ನು ಈಗಲೇ ನಿರ್ವಹಿಸಲು ಇಚ್ಛಿಸಿದರೆ, ಸಹಜವಾಗಿಯೇ ಜೀವನ ಅಸಾಧಾರಣವಾದ ತೀವ್ರತೆಯಿಂದ ಸಂಭವಿಸುತ್ತದೆ. ಚಿತ್ತಸ್ವಾಸ್ಥ್ಯತೆ ಕಾಪಾಡಿಕೊಂಡರೆ ಜೀವನದಲ್ಲಿ ಜರುಗುವ ಪ್ರತಿಯೊಂದು ಘಟನೆ ಮತ್ತೊಂದು ಹೆಜ್ಜೆ ಮುಂದೆ ನಡೆಸುತ್ತಿರುವುದನ್ನು ಗಮನಿಸುವಿರಿ. ಇದನ್ನು ಗಮನಿಸದೆ ಸಾಮಾಜಿಕ ಸನ್ನಿವೇಶಗಳಿಂದ ಉತ್ತೇಜಿತರಾದರೆ, ಆಗ ಜೀವನ ವೇಗದಲ್ಲಿ ಸಂಭವಿಸುತ್ತಿರುವ ಕಾರಣದಿಂದ ಜೀವನದಲ್ಲಿ ಯಾವುದೋ ತಪು್ಪ ನಡೆಯುತ್ತಿದೆ ಎಂದು ಯೋಚಿಸಬಹುದು. ಅದು ಹಾಗಾಗುವುದಿಲ್ಲ. ಅನುಗ್ರಹವು ನಿಮ್ಮನ್ನು ನೀವೀಗ ಸಿಕ್ಕಿಹಾಕಿಕೊಂಡಿರುವ ಮಿತಿಗಳಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದೆ. ಈ ಮಿತಿಗಳು ನೆಲ, ಜನರು, ದೇಹ, ಮನಸ್ಸು, ಭಾವನೆಗಳು ಇತ್ಯಾದಿ ಎಲ್ಲವನ್ನೂ ಒಳಗೊಂಡಿವೆ. ಅನುಗ್ರಹವನ್ನು ಆಮಂತ್ರಿಸಿ, ಹಾಗೂ ಅದು ಅದರ ಕರ್ತವ್ಯವನ್ನು ಮಾಡುತ್ತ, ನಿಮ್ಮನ್ನು ಮೇಲಕ್ಕೆ ಎತ್ತುತ್ತಿರುವಾಗ, ನಿಮಗಾಗಿ ದೊಡ್ಡ ಲಂಗರೊಂದನ್ನು ಕೆಳಗೆ ಹಾಕಿ ಅದಕ್ಕೆ ನಿಮ್ಮನ್ನು ಕಟ್ಟಿಕೊಂಡಿದ್ದರೆ, ಅನಗತ್ಯವಾದ ಸಂಘರ್ಷ ಸೃಷ್ಟಿಸಿಕೊಳ್ಳುವಿರಿ.
ಆಧ್ಯಾತ್ಮಿಕ ಪಥದಲ್ಲಿ ಇರಲು ಇಚ್ಛಿಸಿದಲ್ಲಿ, ಮೂಲಭೂತವಾಗಿ ಈಗಿರುವ ರೀತಿಯನ್ನು ನಾಶಪಡಿಸಬೇಕೆಂದು ಇಷ್ಟಪಡುವಿರಿ ಎಂಬುದಾಗಿ ಅರ್ಥವಾಗುತ್ತದೆ. ನಾಶಪಡಿಸುವುದು ಎನ್ನುವುದು ನಕಾರಾತ್ಮಕ ಎಂದು ನೀವು ಯೋಚಿಸಿದರೆ, ನಾನು ಪ್ರಜ್ಞಾಯುತವಾಗಿಯೇ ನಕಾರಾತ್ಮಕ ಪರಿಭಾಷೆಯನ್ನು ಬಳಸುತ್ತೇನೆ. ಏಕೆಂದೆರೆ, ಅದನ್ನು ತಪ್ಪಾಗಿ ಗ್ರಹಿಸಲಾರಿರಿ. ಇಲ್ಲಿ ವಿಷಯವೇನೆಂದರೆ ಸಕಾರಾತ್ಮಕ ಪರಿಭಾಷೆಯನ್ನು ಯಾವಾಗಲೂ ಲಕ್ಷಾಂತರ ವಿಭಿನ್ನ ರೀತಿಗಳಲ್ಲಿ ತಪ್ಪಾಗಿ ವ್ಯಾಖ್ಯಾನಿಸಬಹುದು, ಏಕೆಂದರೆ, ಮನಸ್ಸು ಅದರಲ್ಲಿಯೇ ಕೇಂದ್ರೀಕೃತವಾಗಿರುತ್ತದೆ. ಅದನ್ನು ಸಕಾರಾತ್ಮಕ ರೀತಿಯಲ್ಲಿ ಹೇಳಬೇಕೆಂದರೆ, ನೀವು ವಿಮೋಚನೆಯನ್ನು ಅರಸುತ್ತಿದ್ದೀರಿ. ನಿಮ್ಮ ಸರ್ವಶ್ರೇಷ್ಠತೆಯ ಸಹಜ ಗುಣವನ್ನು ಅರಸುತ್ತಿರುವಿರಿ; ದೇವರನ್ನು ಅರಸುತ್ತಿರುವಿರಿ; ಅಮಿತವಾಗಿರಬೇಕೆಂದು ಬಯಸುತ್ತಿರುವಿರಿ. ಅಮಿತವಾಗಿ ಇರಬೇಕೆಂದು ಬಯಸಿದರೆ, ಈಗಿರುವ ರೀತಿಯ ಅಸ್ತಿತ್ವವನ್ನು ನಾಶಪಡಿಸಬೇಕೆಂದು ಬಯಸುವಿರಿ. ಈ ಬಯಕೆಯನ್ನು ವ್ಯಕ್ತಪಡಿಸಿದರೆ ಹಾಗೂ ಅದಕ್ಕೆ ಅಗತ್ಯವಾದ ಶಕ್ತಿ ನಿಮ್ಮಲ್ಲಿ ಸಂಯೋಜನೆಗೊಂಡರೆ ಸಂಗತಿಗಳು ನೀವು ಈಗಿರುವ ರೀತಿಯನ್ನು ನಾಶಪಡಿಸುತ್ತವೆ. ಹೀಗೆಂದು ನಕಾರಾತ್ಮಕ ಸಂಗತಿಗಳು ಸಂಭವಿಸುತ್ತವೆ ಎಂದರ್ಥವಲ್ಲ. ಇದು ಜೀವನ ಅತ್ಯಮೋಘ ಮತ್ತು ಶೀಘ್ರಗತಿಯಲ್ಲಿ ಮುನ್ನಡೆಯುವುದಾಗಿದೆ ಅಷ್ಟೇ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)