ಮೀನುಗಾರರ ಹತ್ಯೆ ಪ್ರಕರಣ ಕುರಿತು...

Edit 2
Published on

ಟಲಿಯ ತೈಲ ಟ್ಯಾಂಕರ್ ‘ಎನ್​ರಿಕಾ ಲೆಕ್ಸಿ’ಯಲ್ಲಿ ಇದ್ದವರು 2012 ಫೆಬ್ರವರಿ 15ರಂದು ಹಾರಿಸಿದ ಗುಂಡು ತಾಗಿ ಭಾರತದ ಇಬ್ಬರು ಮೀನುಗಾರರಾದ ಅಂಜೀಶ್ ಬಿಂಕಿ ಮತ್ತು ವ್ಯಾಲೆಂಟೈನ್ ಜೆಲಸ್ಟೈನ್ ಮೃತಪಟ್ಟರು. ಅವರು ‘ಸೈಂಟ್ ಅಂತೋನಿ’ ಎಂಬ ನಾವೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಭಾರತ ಕರಾವಳಿಯ ಲಕ್ಷದ್ವೀಪ ಸಮುದ್ರದಲ್ಲಿ ಈ ಘಟನೆ ನಡೆದಿತ್ತು. ಎನ್​ರಿಕಾ ಲೆಕ್ಸಿಯನ್ನು ಸುತ್ತುವರಿದ ಭಾರತೀಯ ಕರಾವಳಿ ಕಾವಲು ಪಡೆ, ಅದನ್ನು ಕೊಚ್ಚಿಯ ಬಂದರಿನಲ್ಲಿ ಲಂಗರು ಹಾಕುವಂತೆ ಮಾಡಿತು. ಗುಂಡು ಹಾರಿಸಿದ ಆರೋಪಿಗಳಾದ ಇಟಲಿಯ ನಾವಿಕರಾದ ಮಸ್ಸಿಮಿಲಾನೊ ಲಾಟೊರೆ ಮತ್ತು ಸಾಲ್ವಟೊರ್ ಗೈರೋನ್​ರನ್ನು ಕಾನೂನು ಕ್ರಮಕ್ಕೆ ಒಳಪಡಿಸುವುದು ಇದರ ಉದ್ದೇಶವಾಗಿತ್ತು. ಈ ಪ್ರಕರಣ ಭಾರತ ಮತ್ತು ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಯಿತು. ಭಾರತದ ಜಲಸೀಮೆಯಲ್ಲಿ ಘಟನೆ ನಡೆದಿರುವುದರಿಂದ ಭಾರತೀಯ ಕಾನೂನಿನ ಪ್ರಕಾರ ಇಟಲಿ ನಾವಿಕರನ್ನು ಶಿಕ್ಷಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತು. ಆದರೆ ಭಾರತದ ಈ ವಾದವನ್ನು ಇಟಲಿಯ ವಿದೇಶಾಂಗ ಸಚಿವಾಲಯ ತಿರಸ್ಕರಿಸಿತು. ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಘಟನೆ ನಡೆದಿದೆ. ಯಾವ ನೌಕೆ ತನ್ನ ದೇಶದ ಧ್ವಜವನ್ನು ಹೊಂದಿರುತ್ತದೋ, ಯಾವುದೇ ವಿವಾದದಲ್ಲಿ ಆ ದೇಶದ ಕ್ರಿಮಿನಲ್ ಕಾನೂನಿನ ವ್ಯಾಪ್ತಿ ಅನ್ವಯವಾಗುತ್ತದೆ ಎನ್ನುವುದು ಇಟಲಿಯ ಅಭಿಪ್ರಾಯವಾಗಿತ್ತು. ಅಲ್ಲದೆ ತನ್ನ ನೌಕಾ ಪಡೆಯ ನಾವಿಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಶಂಕಿತ ಕಡಲುಗಳ್ಳತನದ ವಿರುದ್ಧ ರಾಷ್ಟ್ರೀಯ ಆಸ್ತಿಯನ್ನು ರಕ್ಷಿಸುವಲ್ಲಿ ನಿರತರಾಗಿದ್ದರು. ಹೀಗಾಗಿ ಅವರಿಗೆ ಬೇರೊಂದು ದೇಶದಲ್ಲಿ ಕ್ರಿಮಿನಲ್ ಶಿಕ್ಷೆಯಿಂದ ವಿನಾಯಿತಿ ಇರುತ್ತದೆ ಎಂಬುದೂ ಅದರ ವಾದ.

ಸಚಿವರ ರಾಜೀನಾಮೆ: ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿತ್ತೆಂದರೆ ಭಾರತದಲ್ಲಿ ನಾವಿಕರ ವಿಚಾರಣೆ ಆರಂಭವಾಗುತ್ತಲೇ ಇಟಲಿಯ ವಿದೇಶಾಂಗ ಸಚಿವರು ರಾಜೀನಾಮೆ ನೀಡಿದರು. ತನ್ನ ದೇಶದ ನಾವಿಕರನ್ನು ಮರಳಿ ಪಡೆಯಲು ಸಾಧ್ಯವಾಗದ ಹತಾಶೆಯಿಂದ ಅವರು ಹಾಗೆ ಮಾಡಿದರು. 2014ರ ಫಿಫಾ ವಿಶ್ವ ಕಪ್​ಗಿಂತ ಮುಂಚೆ ಇಟಲಿ ಫುಟ್​ಬಾಲ್ ಫೆಡರೇಶನ್ ಈ ಇಬ್ಬರು ನಾವಿಕರ ಹೆಸರಿದ್ದ ಜೆರ್ಸಿಗಳ್ನು ಬಿಡುಗಡೆ ಮಾಡಿತು. 2012ರ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ವೇಳೆ ಇಟಲಿಯ ಫಾಮುಲಾ 1 ತಂಡದವರು ತಮ್ಮ ಕಾರ್ ಮೇಲೆ ಇಟಲಿ ನೌಕಾಪಡೆಯ ಧ್ವಜ ಹಾರಿಸಿದರು. ಇವೆಲ್ಲದಕ್ಕೆ ಪ್ರತಿಯಾಗಿ ಭಾರತ, ಇಟಲಿಯೊಂದಿಗಿನ ಎಲ್ಲ ಉನ್ನತ ಮಟ್ಟದ ಮಿಲಿಟರಿ ಸಂಪರ್ಕಗಳನ್ನು ಕಡಿದುಕೊಂಡಿತು. ಇದನ್ನೂ ಓದಿ: ಲಾ ಆ್ಯಂಡ್​ ಆರ್ಡರ್​: ಕಸ್ಟಡಿ ಹಿಂಸೆ, ಲಾಕಪ್​ಡೆತ್​ಗೆ ಕೊನೆಯೆಂದು?

ಸಂಧಾನಕ್ಕೆ ಒಲವು: ಕ್ರಮೇಣ ಅಂತಾರಾಷ್ಟ್ರೀಯ ಸಂಧಾನದ ಮೈತ್ರಿಯುತ ಹಾಗೂ ಪರಸ್ಪರ ಒಪ್ಪಿಗೆಯಾಗುವ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವತ್ತ ಉಭಯ ದೇಶಗಳು ಮುಂದಾದವು. ಆಗಸ್ಟ್ ಎರಡರಂದು ಸಂಧಾನ ನ್ಯಾಯಾಲಯ (ಆರ್ಬಿಟ್ರೇಷನ್ ಕೋರ್ಟ್) ತನ್ನ ನಿರ್ಧಾರ ಪ್ರಕಟಿಸಿದೆ. ಮಾಧ್ಯಮಗಳ ವರದಿ ಪ್ರಕಾರ ಭಾರತೀಯರಿಗೆ ಗೆಲುವು ಸಿಕ್ಕಿದೆ ಎನ್ನಲಾಗಿದೆ. ಸೈಂಟ್ ಅಂತೋನಿ ನಾವೆ ಮೇಲೆ ಕಾನೂನು ಬಾಹಿರವಾಗಿ ದಾಳಿ ನಡೆಸಲಾಗಿತ್ತು. ಅದರ ಪರಿಣಾಮವಾಗಿ ಪ್ರಾಣಹಾನಿ ಸಂಭವಿಸಿದೆ. ಆಸ್ತಿಪಾಸ್ತಿಗೂ ನೈತಿಕವಾಗಿಯೂ ಹಾನಿಯಾಗಿದೆ ಎಂಬ ಕಾರಣಗಳ ಮೇಲೆ ಭಾರತದ ಪರ ತೀರ್ಪು ಕೊಟ್ಟಿರುವ ಕೋರ್ಟ್, ಭಾರತಕ್ಕೆ ಇಟಲಿ ಪರಿಹಾರ ನೀಡಬೇಕು ಎಂದಿದೆ. ಮೃತಕುಟುಂಬಗಳಿಗೆ ಈಗಾಗಲೇ ಪಾವತಿಸಿರುವ ತಲಾ ಒಂದು ಕೋಟಿ ರೂಪಾಯಿಗೆ ಹೆಚ್ಚುವರಿಯಾಗಿ ನಿಡಬೇಕಾದ ಪರಿಹಾರವನ್ನು ಉಭಯ ದೇಶಗಳು ನಿರ್ಧರಿಸಲಿವೆ.

ಈ ಎಲ್ಲ ಅಂಶ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಒಂದು ದೊಡ್ಡ ವಿಜಯವೆಂದು ಕಂಡರೂ ಕೋರ್ಟ್ ನಿರ್ಧಾರದ ಇನ್ನೊಂದು ಮಗ್ಗಲು ದೇಶಕ್ಕೆ ದೊಡ್ಡ ನಷ್ಟದಂತಿದೆ. ‘ಇಬ್ಬರು ನಾವಿಕರ ವಿರುದ್ಧ ಭಾರತ ಕ್ರಿಮಿನಲ್ ಕ್ರಮ ಕೈಗೊಂಡಿದ್ದು ತಪು್ಪ. ಅವರ ವಿರುದ್ಧ ಇನ್ನು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ’ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ಲಾ ಆ್ಯಂಡ್​ ಆರ್ಡರ್​;​ ಕೋರ್ಟ್​ಗಳ ಹೊರೆ ಇಳಿಸುವ ಪರ್ಯಾಯ ಮಾರ್ಗ…

‘ಇಟಲಿಯ ನಾವಿಕರು ಆ ದೇಶದ ಸರ್ಕಾರಿ ಅಧಿಕಾರಿಗಳಾಗಿದ್ದು, ತಮ್ಮ ದೇಶದ ಆಸ್ತಿಪಾಸ್ತಿ ರಕ್ಷಿಸುವ ಹೊಣೆ ಹೊತ್ತಿರುವವರಾಗಿದ್ದರು. ಹೀಗಾಗಿ ಅವರು ಬೇರೆ ದೇಶದ ಕಾಯಿದೆ ಪ್ರಕಾರ ಶಿಕ್ಷೆಗೆ ಒಳಪಡಲಾರರು’ ಎನ್ನುವುದು ಕೋರ್ಟ್​ನ ಅಭಿಪ್ರಾಯ. ‘ಭಾರತ ತನ್ನ ವಿಶೇಷ ಆರ್ಥಿಕ ವಲಯದೊಳಗೆ ಬೇರೆ ದೇಶದ ಧ್ವಜ ಹೊಂದಿರುವ ನೌಕೆ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತಿಲ್ಲ’ ಎಂಬುದು ಕೋರ್ಟ್​ನ ಇನ್ನೊಂದು ಅಭಿಮತ. ಈ ಎರಡೂ ಅಂಶಗಳು ಭಾರತಕ್ಕೆ ಪ್ರತಿಕೂಲವಾದುದು.

ಸಾರ್ವಭೌಮತ್ವಕ್ಕೆ ಕುಂದು: ಭಾರತದ ವಿಶೇಷ ಆರ್ಥಿಕ ವಲಯದ ಮೂಲಕ ಹಾದು ಹೋಗುವ ವಿದೇಶಗಳ ಸರ್ಕಾರಿ ಸ್ವಾಮ್ಯದ ದೊಡ್ಡ ನೌಕೆಗಳಿಂದ ಭಾರತೀಯ ಮೀನುಗಾರರನ್ನು ರಕ್ಷಿಸುವ ದೇಶದ ಸಾರ್ವಭೌಮ ಅಧಿಕಾರ ಇದರಿಂದ ಕುಂದುತ್ತದೆ ಎನ್ನುವುದು ಈ ಎರಡು ಅಂಶಗಳ ಅರ್ಥವಾಗಿದೆ. ಘಟನೆಯ ಕಾರಣದಿಂದಾಗಿ ಇಟಲಿಯ ನೌಕೆ ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸಿದಂತೆ ಆಗಿಲ್ಲ ಎನ್ನುವುದು ತೀರ್ಪಿನ ಇನ್ನೊಂದು ಅಂಶವಾಗಿದೆ. ದೇಶಗಳು ತಮ್ಮ ವಿಶೇಷ ಆರ್ಥಿಕ ವಲಯಗಳ ವ್ಯಾಪ್ತಿವರೆಗೆ ಕ್ರಿಮಿನಲ್ ಕಾನೂನುಗಳನ್ನು ಅನುಷ್ಠಾನಗೊಳಿಸಿರುವುದು ಇತಿಹಾಸದುದ್ದಕ್ಕೂ ಕಂಡುಬರುವ ವಾಸ್ತವ. ಹಾಗೂ ಅದನ್ನು ಅಂತಾರಾಷ್ಟ್ರೀಯ ಕಾನೂನಿನಡಿ ಮಾನ್ಯ ಮಾಡಬೇಕು ಎಂದು ಭಾರತ ಪ್ರತಿಪಾದಿಸಬಹುದಿತ್ತು. ಆದರೆ, ಎನ್​ರಿಕಾ ಲೆಕ್ಸಿ ಮೇಲೆ ಇಟಲಿಯ ಧ್ವಜ ಹಾರುತ್ತಿದ್ದು ದರಿಂದ ಅದರ ವಿರುದ್ಧದ ಯಾವುದೇ ಕ್ರಿಮಿನಲ್ ದಾವೆಗಳನ್ನು ಇಟಲಿಯಲ್ಲಿ ಮಾತ್ರವೇ ನಡೆಸಬಹುದು ಎಂದು ಆರ್ಬಿಟ್ರೇಷನ್ ಕೋರ್ಟ್ ಹೇಳಿದೆ. ಇದನ್ನೂ ಓದಿ:ಬಾಲಾಕೋಟ್​ ಉಗ್ರರ ನೆಲೆ ಮೇಲಿನ ವೈಮಾನಿಕ ದಾಳಿಯ ರೂವಾರಿ ಸಮಂತ್​ ಗೋಯೆಲ್​ ಆರ್​ ಆ್ಯಂಡ್​ ಎಡಬ್ಲ್ಯು ಮುಖ್ಯಸ್ಥ

ಇಟಲಿಯ ಕೋರ್ಟ್​ಗಳು ಆರೋಪಿ ನಾವಿಕರಿಬ್ಬರನ್ನು ನಿದೋಷಿ ಎಂದು ಬಿಡುಗಡೆ ಮಾಡಬಹುದು. ಸೈಂಟ್ ಅಂತೋನಿ ಒಂದು ಕಡಲುಗಳ್ಳ ನೌಕೆ ಎಂದು ಭಾವಿಸಿ ಅದರ ಮೇಲೆ ಗುಂಡು ಹಾರಿಸಲಾಯಿತೆಂಬ ಅವರ ವಾದವನ್ನು ಒಪ್ಪಲೂಬಹುದು. ಹೀಗಾಗಿ, ವಿಚಾರಣೆ ನ್ಯಾಯಸಮ್ಮತವಾಗಿ ನಡೆಯುತ್ತಿದೆಯೇ ಇಲ್ಲವೇ ಎನ್ನುವುದನ್ನು ಖಾತರಿಪಡಿಸಲಿಕ್ಕಾಗಿ ಕೋರ್ಟ್ ಕಲಾಪಗಳಲ್ಲಿ ರೋಮ್ಲ್ಲಿರುವ ಭಾರತದ ಹೈಕಮಿಷನರ್​ರ ಪ್ರತಿನಿಧಿಯೊಬ್ಬರು ಹಾಜರಿರಲು ಅವಕಾಶ ಕೊಡುವಂತೆ ಇಟಲಿಯ ವಿದೇಶಾಂಗ ಸಚಿವಾಲಯಕ್ಕೆ ಭಾರತ ಪತ್ರ ಬರೆಯುವುದು ಒಳಿತು. ಒಂದು ವೇಳೆ ಯಾವುದೇ ಅನ್ಯಾಯ ನಡೆದಲ್ಲಿ ಅದನ್ನು ರಾಜತಾಂತ್ರಿಕ ಮಟ್ಟದಲ್ಲಿ ವಿರೋಧಿಸಬಹುದಾಗಿದೆ. ಏನೇ ಇರಲಿ, ಎನ್​ರಿಕಾ ಲೆಕ್ಸಿ ಪ್ರಕರಣ ಭಾರತದ ಸಾರ್ವಭೌಮತ್ವದ ಮೇಲೆ ಮಿತಿ ಹೇರಿರುವುದು ಮಾತ್ರವಲ್ಲದೆ ದೇಶಕ್ಕೆ ಒಂದು ಸ್ಪಷ್ಟ ನಷ್ಟ ಎಂಬುದು ವಿಷಾದದ ಸಂಗತಿ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net