ಕಲ್ಯಾಣನಾಡಿನ ಕುಂಭಮೇಳ; ಅಬ್ಬೆತುಮಕೂರಿನ ಸದ್ಗುರು ವಿಶ್ವಾರಾಧ್ಯರ ಜಾತ್ರೆ

Abbetumakuru Jatre 26 Feb 20
Published on

ನಮ್ಮ ಪೂರ್ವಿಕರು ಈ ನೆಲದ ಸಂಸ್ಕೃತಿ, ಧರ್ಮರಕ್ಷಣೆಗಾಗಿ ನೀಡಿದ ಕೊಡುಗೆ ಅಪಾರ. ಅಂತಹ ಮಹಾತ್ಮರ ತತ್ವ-ಸಿದ್ಧಾಂತಗಳನ್ನು ಪ್ರಚುರಪಡಿಸುವ ಹಿನ್ನೆಲೆಯಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳು ಅವರಿಗೆ ಸಲ್ಲಿಸುವ ಗೌರವದ ಪ್ರತೀಕ. ಈ ಹಿನ್ನೆಲೆಯಲ್ಲಿ ನಾಡಿನ ಬೃಹತ್ ಜಾತ್ರೆಗಳಲ್ಲೊಂದು ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ಸದ್ಗುರು ವಿಶ್ವಾರಾಧ್ಯರ ರಥೋತ್ಸವ.

ಮರಣವೇ ಮಹಾನವಮಿ ಎಂದು ಸಾರಿದ ಶರಣಪರಂಪರೆಯಲ್ಲಿ ಮಹಾತ್ಮರ ಜನ್ಮದಿನಕ್ಕಿಂತ ಹೆಚ್ಚಿನ ಆದ್ಯತೆ ಲಿಂಗೈಕ್ಯರಾದ ದಿನಕ್ಕೆ ನೀಡಲಾಗುತ್ತದೆ. ಅಂತೆಯೇ ಪವಾಡಪುರುಷರಾಗಿದ್ದ ಘನಪಂಡಿತ ವಿಶ್ವಾರಾಧ್ಯರು ಲಿಂಗೈಕ್ಯರಾದ ಪಾಲ್ಗುಣ ಶುದ್ಧ ಪಂಚಮಿಯಂದು ಅಬ್ಬೆತುಮಕೂರು ಅವಿಚ್ಛಿನ್ನ ಕ್ಷೇತ್ರದಲ್ಲಿ ಬೃಹತ್ ಜಾತ್ರಾ ಮಹೋತ್ಸವ ನಡೆಯುತ್ತದೆ. ಕೊಪ್ಪಳ ಗವಿಸಿದ್ಧೇಶ್ವರ ಸ್ವಾಮಿ ರಥೋತ್ಸವವು ದಕ್ಷಿಣದ ಕುಂಭಮೇಳ ಎಂದು ಪ್ರಸಿದ್ಧವಾಗಿದ್ದು, ಅದರ ನಂತರದ ಮತ್ತೊಂದು ಬೃಹತ್ ಜಾತ್ರೆಯಾಗಿರುವ ಅಬ್ಬೆತುಮಕೂರು ವಿಶ್ವಾರಾಧ್ಯರ ರಥೋತ್ಸವಕ್ಕೆ 3-4 ಲಕ್ಷ ಜನರು ಸೇರುವುದರಿಂದ ‘ಕಲ್ಯಾಣ ನಾಡಿನ ಕುಂಭಮೇಳ’ ಎಂದು ಕರೆಯಬಹುದು.

ಆರೂಢ ಪರಂಪರೆಯಲ್ಲಿ ಅಧ್ಯಾತ್ಮದ ಅನುಭೂತಿ ಪಡೆದಿದ್ದ ಸದ್ಗುರು ವಿಶ್ವಾರಾಧ್ಯರು ತ್ರಿಕಾಲ ಜ್ಞಾನಿಗಳಾಗಿದ್ದರು. ದೇಶದ ಸ್ವಾತಂತ್ರ್ಯ ಮಹಾತ್ಮ ಗಾಂಧಿಯವರ ಹತ್ಯೆ, ಪುಣ್ಯಪುರುಷರ ಆಗಮನಗಳ ಬಗ್ಗೆ ಮೊದಲೇ ಹೇಳಿದ್ದರು. ಒಂದು ದಿನ ನೂರಾರು ಭಕ್ತರ ಸಮಕ್ಷಮದಲ್ಲಿ ಕುಳಿತಿದ್ದ ವಿಶ್ವಾರಾಧ್ಯರು; ಮಠದ ಎಡಭಾಗಕ್ಕೆ ನೋಡಿ, ‘ಅಬ್ಬಬ್ಬಾ ಅಲ್ನೋಡ್ರಪ್ಪ! ಎಷ್ಟೊಂದು ಜನ ಬರ್ತಿದ್ದಾರೆ’ ಎಂದು ಹೇಳುತ್ತಾರೆ. ಆಗ ಅಲ್ಲಿದ್ದ ಭಕ್ತರು ಯಾರೂ ಕಾಣದೆ, ‘ಎಲ್ಲಿದ್ದಾರೆ ಅಪ್ಪಾವರೆ ಜನ?’ ಅಂತ ಪ್ರಶ್ನೆ ಮಾಡುತ್ತಾರೆ. ಆಗ ವಿಶ್ವಾರಾಧ್ಯರು, ‘ಈಗಲ್ಲಪ್ಪ, ಇನ್ನು ಇಪ್ಪತ್ತು ವರ್ಷದ ಮೇಲೆ ನನ್ನ ಜಾತ್ರೆಗೆ ಬರ್ತಿರೋ ಲಕ್ಷಾಂತರ ಜನರನ್ನ ನೋಡ್ರಿ’ ಅಂದ್ರಂತೆ. ಅಂದು ಅವರು ಹೇಳಿದ ಭವಿಷ್ಯವಾಣಿ ಇಂದು ನಿಜವಾಗಿದೆ.

ಪೂರ್ವಾಶ್ರಮ, ಪರಂಪರೆ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗವ್ಹಾರ ಹಿರೇಮಠ ಸದ್ಗುರು ವಿಶ್ವಾರಾಧ್ಯರ ಜನ್ಮಸ್ಥಳ. ಕಾಶಿಪೀಠದ 65ನೇ ಜಗದ್ಗುರುಗಳು ಈ ಸ್ಥಳದಲ್ಲಿ ಅನುಷ್ಠಾನಗೈದು, ಇಲ್ಲಿ ಮಠವನ್ನು ಸ್ಥಾಪಿಸಿ ತಮ್ಮ ಶಿಷ್ಯರೊಬ್ಬರನ್ನು ಇಲ್ಲಿ ನೇಮಿಸಿದರು. ಹೀಗೆ ಆರಂಭವಾದ ಗವ್ಹಾರ ಹಿರೇಮಠದ ಪರಂಪರೆಯಲ್ಲಿ ಹಲವು ವಿದ್ವಾಂಸರು, ಪಂಡಿತರು ಜನಿಸಿದ್ದಾರೆ. ಅಂತೆಯೇ ವಿಶ್ವಾರಾಧ್ಯರು ಸಹ ಬಹುಕಾಲ ಕಾಶಿಯಲ್ಲಿದ್ದು ಹಲವು ಶಾಸ್ತ್ರಗಳನ್ನು ಕಲಿತು ಅಧ್ಯಾತ್ಮ ಶಿಕ್ಷಣದಲ್ಲಿ ಪ್ರವೀಣರಾಗಿ ಕಾಶಿ ಜಗದ್ಗುರುಗಳಿಂದ ‘ಘನಪಂಡಿತ’ ಎಂಬ ಬಿರುದು ಪಡೆದುಕೊಂಡರು. ಅಲ್ಲಿಂದ ಬಂದ ನಂತರ ಗುಳೇದಗುಡ್ಡದ ಅಡವಿಸ್ವಾಮಿಗಳಿಂದ ಆರೂಢ ದೀಕ್ಷೆಯನ್ನು ಪಡೆದು ಜಗನ್ಮಾತೆ ಶಾಂಭವಿಯ ಆರಾಧಕರಾಗಿ ಶಾಕಾಪುರದಲ್ಲಿ ಕೆಲವು ಕಾಲ ಅನುಷ್ಠಾನ ಮಾಡಿದರು. ಹಾಗೂ ಎಲಗೋಡದಲ್ಲಿ ಸರ್ಪಾನುಷ್ಠಾನವನ್ನು ಮಾಡಿ ಸರ್ಪರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದರು. ಮುಂದೆ ಸದ್ಭಕ್ತರಾದ ಸಕ್ರಪ್ಪಗೌಡರ ಕೋರಿಕೆಯಂತೆ ಯಾದಗಿರಿ ತಾಲೂಕಿನ ಅಬ್ಬೆತುಮಕೂರಿಗೆ ಆಗಮಿಸಿದರು.

ಅಬ್ಬೆತುಮಕೂರಿನಲ್ಲಿ ತಪಸ್ಸನ್ನು ಮಾಡಿ ದೇವಿಯ ಸಾಕ್ಷಾತ್ಕಾರ ಮಾಡಿಕೊಂಡು, ತನ್ನನ್ನು ನಂಬಿ ಬರುವ ಭಕ್ತರ ಭವ ಕಳೆಯಬೇಕೆಂದು ಶಾಂಭವಿಯಲ್ಲಿ ವರ ಪಡೆದುಕೊಂಡರು.

ಆ ನಂತರ ದೇವಿಯ ಅಷ್ಟಭುಜಾಕೃತಿಯ ಮಂದಿರದ ಪಕ್ಕದಲ್ಲಿ ಒಂದು ಧುನಿ (ಅಂಗಾರ ಕುಂಡ) ಸ್ಥಾಪಿಸಿದ್ದು, ಈ ಅಂಗಾರವನ್ನು ಧರಿಸಿಕೊಂಡು ದೇವಿಯಲ್ಲಿ ಪ್ರಾರ್ಥನೆ ಮಾಡುವ ಭಕ್ತರ ಸಂಕಷ್ಟಗಳು ಪರಿಹಾರವಾಗಿ ಭಕ್ತರ ಬಾಳು ಬಂಗಾರವಾಗುತ್ತದೆ ಎಂದು ತಿಳಿಸಿದರು. ಹೀಗೆ ತಮ್ಮ ಜೀವಿತದ ಕೊನೆಯವರೆಗೆ ಹಲವು ಲೀಲೆಗಳನ್ನು ಮಾಡಿದ ವಿಶ್ವಾರಾಧ್ಯರು ಭಕ್ತರ ಭಕ್ತಿಗೆ ಭಾವಬ್ರಹ್ಮನಾಗಿ, ಅಂಧಕಾರ ನಿವಾರಿಸುವ ಜ್ಯೋತಿಬ್ರಹ್ಮನಾಗಿ, ಸರ್ವಸಂಗ ಪರಿತ್ಯಾಗ ಮಾಡಿದ ಬಯಲು ಬ್ರಹ್ಮನಾಗಿ ಪಾಲ್ಗುಣ ಶುದ್ಧ ಪಂಚಮಿಯಂದು ಐಕ್ಯರಾದರು.

ಶ್ರೀಮಠದ ಸದ್ಯದ ಪೀಠಾಧಿಪತಿಗಳಾಗಿರುವ ಡಾ. ಗಂಗಾಧರ ಶಿವಾಚಾರ್ಯ ಸ್ವಾಮಿಗಳು ವಿಶ್ವಾರಾಧ್ಯರ ವಂಶಸ್ಥರೇ ಆಗಿದ್ದು, ಅಪಾರ ಭಕ್ತಸ್ತೋಮದ ಸಹಕಾರದಲ್ಲಿ ಶ್ರೀಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ಪ್ರತಿ ಅಮಾವಾಸ್ಯೆಯಂದು ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ಶಿವಾನುಭವ ಮತ್ತು ಮಹಾಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಘನಪಂಡಿತ ವಿಶ್ವಾರಾಧ್ಯರ ರಥೋತ್ಸವ: ಕಲ್ಯಾಣ ಕರ್ನಾಟಕದ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠದ ಕರ್ತೃ ಘನಪಂಡಿತ ವಿಶ್ವಾರಾಧ್ಯರು ದೇಹತ್ಯಾಗ ಮಾಡಿದ ಪಾಲ್ಗುಣ ಶುದ್ಧ ಪಂಚಮಿಯಂದು ಮಹಾರಥೋತ್ಸವವು ನಡೆಯಲಿದೆ. ಒಂದು ವಾರ ವಿವಿಧ ಧಾರ್ವಿುಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಫೆ. 17ರಿಂದ ಆರಂಭವಾಗಿರುವ ವಿಶ್ವಾರಾಧ್ಯರ ಪುರಾಣಪ್ರವಚನವು 27ರಂದು ಮಂಗಲಗೊಳ್ಳಲಿದೆ. 28ರಂದು ಮಹಾರುದ್ರಾಭಿಷೇಕ ಹಾಗೂ ರಥಾಂಗ ಹೋಮ ನಡೆಯಲಿದೆ. ಸಂಜೆ ಲಕ್ಷಾಂತರ ಭಕ್ತರ ಸಮಕ್ಷಮದಲ್ಲಿ ಮಹಾರಥೋತ್ಸವವು, ನಂತರ ಮಾನವಧರ್ಮ ಸಮಾವೇಶ ಜರುಗಲಿದೆ. 29ರಂದು ರೈತರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುವ ಭಕ್ತಬಾಂಧವ ಕಾರ್ಯಕ್ರಮ ನಡೆಯಲಿದ್ದು, ಮಾ. 1ರಂದು ಶರಣ ಸಂಸ್ಕೃತಿ ಶಿಬಿರ, 2ರಂದು ವಿಶ್ವಾರಾಧ್ಯ ವಿದ್ಯಾಸಂಸ್ಥೆಯ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಜಾತ್ರಾಮಹೋತ್ಸವ ಮುಗಿಯುವವರೆಗೂ ಪ್ರತಿನಿತ್ಯ ಡಾ. ಗಂಗಾಧರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು; ನಾಡಿನ ವಿವಿಧ ಮಠಾಧೀಶರು, ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

| ಪ್ರಶಾಂತ್​ ರಿಪ್ಪನ್​ಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net