

ತನಗೊದಗಿರುವ ಸಮಸ್ಯೆಯನ್ನು ಸಕಾರಾತ್ಮಕವಾಗಿ ಬಿಡಿಸಿಕೊಳ್ಳುವ ಚಿಂತನಶೀಲಳೂ ಆಗಿದ್ದಾಳೆ. ಇಂಥ ಗಟ್ಟಿ ವ್ಯಕ್ತಿತ್ವ ನೀವೇ ಅವಳಿಗೆ ಕಲಿಸಿದ್ದೀರಿ ಜತೆಗೆ ವಿದ್ಯೆ ಮತ್ತು ತನ್ನದೇ ಜಾಣತನಗಳಿಂದ ಕುಸಿಯದ ಮನೋಭಾವವನ್ನು ಬೆಳೆಸಿಕೊಂಡಿದ್ದಾಳೆ. ಅವಳ ಜಾಗದಲ್ಲಿ ಬೇರೆಯವರಿದ್ದರೆ, ಈ ಹೊತ್ತಿಗೆ ಗಂಡ ಮತ್ತು ಅತ್ತೆಮಾವನ ಜತೆ ಜಗಳವಾಡಿಕೊಂಡು ತವರಿಗೆ ವಾಪಸಾಗುತ್ತಿದ್ದರು. ನಿಮ್ಮ ಮಗಳ ಬಗ್ಗೆ ಹೆಮ್ಮೆ ಪಡಿ.
ನಿಮಗೀಗ ಎರಡು ಮಾರ್ಗಗಳಿವೆ. ನೀವೂ ಕೊರಗುತ್ತಾ, ಆ ಕೊರಗನ್ನು ಮಗಳಿಗೂ ದಾಟಿಸುತ್ತಾ ‘ಏನಾದರೂ ಮಾಡು’ ಎಂದು ಅವಳ ಮೇಲೆ ಒತ್ತಡ ಹಾಕುವುದನ್ನು ಬಿಡಿ. ಬದಲಿಗೆ, ನಮ್ಮ ಮಗಳು ಜಾಣೆ, ಈ ಸಮಸ್ಯೆಯನ್ನು ಅವಳಿಗೆ ಹಿತವಾಗುವಂತೆ ಬಿಡಿಸಿಕೊಳ್ಳುತ್ತಾಳೆ ಎನ್ನುವ ನಂಬಿಕೆಯನ್ನು ಗಟ್ಟಿಮಾಡಿಕೊಳ್ಳಿ ಮತ್ತು ಈ ನಂಬಿಕೆಯನ್ನು ಅವಳಿಗೂ ತಲುಪಿಸಿ. ಇದು ಅವಳಿಗೆ ಮನೋಬಲ ಕೊಡುತ್ತದೆ. ದಯವಿಟ್ಟು ನೆಂಟರಿಷ್ಟರನ್ನು ಮಧ್ಯೆ ತರಬೇಡಿ. ನಾಲ್ಕು ಜನ ಸೇರಿದಾಗ ತಲೆಗೊಂದು ಮಾತನಾಡಿ ಸಮಸ್ಯೆಯನ್ನು ಮತ್ತಷ್ಟು ಗೋಜಲುಗೊಳಿಸಿಬಿಡಬಹುದು.
ಮಕ್ಕಳು ವಿದ್ಯಾವಂತರಾಗಿ, ಉದ್ಯೋಗಸ್ಥರಾಗಿ ತಮ್ಮ ಬದುಕನ್ನು ನಡೆಸಿಕೊಳ್ಳುತ್ತಿರುವಾಗ ಏನಾದರೂ ಸಮಸ್ಯೆ ಎದುರಾದಾಗ ತಂದೆತಾಯಿಯರು ನಮ್ಮ ಮಕ್ಕಳಿಗೆ ಏನೂ ತಿಳಿಯುವುದಿಲ್ಲ, ನಾವೇ ಅವರ ಸಮಸ್ಯೆಯನ್ನು ನಿವಾರಿಸಬೇಕು ಎಂದು ಭಾವಿಸುತ್ತಾರೆ. ಇದನ್ನು ‘ಕರ್ಜ್ ಆಫ್ ನಾಲೆಜ್’ ಎನ್ನುತ್ತಾರೆ.
ಅಂದರೆ ನೀವು ಅವರ ಸಮಸ್ಯೆಯನ್ನಷ್ಟೇ ಗಮನಿಸುತ್ತಿದ್ದೀರಿ. ಅದನ್ನು ನಿವಾರಿಸಿಕೊಳ್ಳಲು ಅವರಿಗಿರುವ ಬುದ್ಧಿಶಕ್ತಿಯನ್ನು ಗಮನಿಸುತ್ತಿಲ್ಲ. ನಿಮ್ಮ ಮಿತಿಮೀರಿದ ‘ಅಯ್ಯೋಪಾಪ’ ಎನ್ನುವ ಈ ನಡವಳಿಕೆ ಅವರ ಸ್ವಾಭಿಮಾನವನ್ನೂ ಮತು ಬುದ್ಧಿಶಕ್ತಿಯನ್ನೂ ಅವಹೇಳನ ಮಾಡಿದಂತಾಗುತ್ತದೆ. ಅದನ್ನು ವೃದ್ಧರಾದ ತಂದೆತಾಯಿಯರು ಅರ್ಥ ಮಾಡಿಕೊಳ್ಳುವುದಿಲ್ಲ. ನಾವು ಬದುಕಿರುವ ಕೊನೆಯ ಗಳಿಗೆಯವರೆಗೆ ನಮ್ಮ ಮಕ್ಕಳ ಕಷ್ಟವನ್ನು ನಾವೇ ನಿವಾರಿಸಬೇಕು ಎಂದು ತಮಗೆ ತಾವೇ ನಿಬಂಧನೆಗಳನ್ನು ಹಾಕಿಕೊಳ್ಳುತ್ತಾರೆ.
ಇದರಿಂದ ಅವರೂ ಕೊರಗುತ್ತಾರೆ ಮತ್ತು ಮಕ್ಕಳ ಆತ್ಮಸ್ಥೈರ್ಯವನ್ನೂ ಕುಸಿಯುವಂತೆ ಮಾಡುತ್ತಾರೆ. ನಾನು ಎಲ್ಲಾ ವೃದ್ಧರಿಗೂ ಈ ಮಾತನ್ನು ಹೇಳುತ್ತಿರುತ್ತೇನೆ. ತೆಂಗಿನಮರ ಹತ್ತುವವರನ್ನು ನಾವು ನೆಲದ ಮೇಲಿದ್ದು ಎಲ್ಲಿಯವರೆಗೆ ಸಹಾಯ ಮಾಡಬಹುದು? ಕೈ ನಿಲುಕುವವರೆಗೆ ಮಾತ್ರ, ಮುಂದೆ ಅವರೇ ಹತ್ತಬೇಕು ತಾನೆ? ಹೆತ್ತವರ ಜವಾಬ್ದಾರಿಯೂ ಅಷ್ಟೆ. ವಿದ್ಯೆ ಕೊಡಿಸುವುದು ಮದುವೆ ಮಾಡುವುದು ಅಷ್ಟೇ. ಅಲ್ಲಿಗೆ ಪೇರೆಂಟಿಂಗ್ ಮುಗಿಯಿತು. ಮುಂದಿನ ಬದುಕನ್ನು ಅವರವರೇ ನಡೆಸಿಕೊಳ್ಳಬೇಕು. ಆದ್ದರಿಂದ ನೀವು ನಿಮ್ಮ ಮಗಳಿಗೆ ಮಾರಲ್ ಸಪೋರ್ಟ್ ಕೊಡಿ. ‘ಕರ್ಜ್ ಆಫ್ ನಾಲೆಜ್’ ಮಾಡಬೇಡಿ.
ಎರಡನೆಯದಾಗಿ ನಿಮ್ಮ ಮಗಳು ವಕೀಲರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನಿಸಿದರೆ ಅವಳಿಗೆ ಸಹಕರಿಸಿ. ಅದಕ್ಕೂ ಮೊದಲು ಫ್ಯಾಮಿಲಿ ಕೌನ್ಸಿಲಿಂಗ್ ಮಾಡಿಸಿಕೊಳ್ಳಲು ತಿಳಿಸಿ. ಇದು ನಿಮ್ಮ ಮಗಳ ಮತ್ತು ಮೊಮ್ಮಗನ ಭವಿಷ್ಯವಾಗಿರುವುದರಿಂದ ಆಕೆಯ ಗಂಡ ಇದಕ್ಕೆ ಸಹಮತಿಸಲೇ ಬೇಕು. ನಿಮ್ಮ ಮಗಳಿಗೆ ಮತ್ತೊಂದು ವಿಚಾರವನ್ನು ನೀವು ತಿಳಿಸಲೇಬೇಕಾಗಿದೆ. ನಿಮ್ಮ ಅಳಿಯ ಈಗ ಮಾಡುತ್ತಿರುವುದು ಅಪರಾಧವಾಗಿದೆ. ಹೆಂಡತಿಯನ್ನು ಹೀನಾಯವಾಗಿ ನೋಡಿಕೊಳ್ಳುವುದು, ಮಾನಸಿಕ ಹಿಂಸೆ ಕೊಡುವುದು ಅಪರಾಧವೆಂದು ಕೋರ್ಟ್ ಹೇಳಿದೆ.
ನಿಮ್ಮ ಅಳಿಯ ಎರಡೆರಡು ಅಪರಾಧ ಮಾಡುತ್ತಿದ್ದಾರೆ. ಹೆಂಡತಿಗೆ ವಿಚ್ಛೇದನ ಕೊಡದೇ ಮತ್ತೊಬ್ಬಳ ಸಹವಾಸ ಮಾಡುವುದು ಒಂದು ಹಾಗೂ ಹೆಂಡತಿಗೆ ಹಿಂಸೆ ಕೊಡುವುದು ಇನ್ನೊಂದು. ಮಹಿಳೆಯರಿಗಾಗಿ ಕಾನೂನುಗಳು ಹೇರಳವಾಗಿವೆ. ನಿಮ್ಮ ಮಗಳು ಜಾಣೆ ಆಕೆ ಪುರಾವೆಗಳನ್ನು ಕಲೆಹಾಕುತ್ತಿದ್ದಾಳೆ. ಆಕೆ ವಕೀಲರನ್ನು ಕಂಡು ತನ್ನ ಬದುಕನ್ನು ನೇರಗೊಳಿಸಿಕೊಳ್ಳುತ್ತಾಳೆ. ನೀವು ನಿದ್ರೆ ಊಟ ಬಿಟ್ಟು ಕೊರಗದೇ ಅವಳಿಗೆ ಸಹಾಯಮಾಡಿ ಸಾಕು.
ಶಾಂತಾ ನಾಗರಾಜ್ ಅವರಿಂದ ಉಚಿತ ಸಲಹೆಗಾಗಿ (ಸಂಜೆ 6ರಿಂದ 8) ಈ ಕೆಳಗಿನ ವಿಳಾಸದಲ್ಲಿ ನೇರವಾಗಿ ಭೇಟಿ ಮಾಡಬಹುದು. ಮೊದಲೇ ಅಪಾಯಿಂಟ್ವೆುಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಪ್ರತಿ ಸೋಮವಾರ: ಅರುಣಚೇತನ, ಕ್ಲೂನಿ ಕಾನ್ವೆಂಟ್ ಎದುರು, ಎಂ.ಇ.ಎಸ್ ಕಾಲೇಜ್ ಹಿಂಭಾಗ, ಮಲ್ಲೇಶ್ವರ, ಬೆಂಗಳೂರು. ಪ್ರತಿ ತಿಂಗಳ ಕೊನೆಯ ಗುರುವಾರ: ನಚಿಕೇತ ಮನೋವಿಕಾಸ ಕೇಂದ್ರ, 14ನೇ ಮೇನ್, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು. ಪತ್ರಗಳನ್ನು ಲಲಿತಾ ಪುರವಣಿಗೆ ಬರೆಯಬೇಕು.