ಆಸ್ತಿಗೆ ಆಧಾರ್ ಲಿಂಕ್ ಅಸಾಧ್ಯ!

Aadhar
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಅಕ್ರಮ ವಹಿವಾಟು ತಡೆಗಟ್ಟಲು ರೂಪಿಸಿರುವ ‘ಆಸ್ತಿಗೆ ಆಧಾರ್ ಲಿಂಕ್’ಯೋಜನೆಗೆ ಕಾನೂನು ತೊಡಕು ಎದುರಾಗಿದೆ. ಸದ್ಯಕಂತು ಆಸ್ತಿಗೆ ಆಧಾರ್ ಜೋಡಣೆ ಕಷ್ಟಸಾಧ್ಯವಾಗಿದೆ. ಯಾರದೋ ಭೂಮಿ, ಸೈಟು, ಮನೆ, ಕಟ್ಟಡ ಇನ್ನಿತರ ಆಸ್ತಿಗಳನ್ನು ಕೆಲವರು ತಾವೇ ವಾರಸುದಾರರು ಎಂದು ನಕಲಿ ದಾಖಲೆ ಸೃಷ್ಟಿಸಿ ಮತ್ಯಾರಿಗೋ ಕ್ರಯ, ಮಾರಾಟ, ವರ್ಗಾವಣೆ ಪತ್ರ ಅಥವಾ ಅಡಮಾನ ಪತ್ರಗಳನ್ನು ಉಪನೋಂದಣಿ ಕಚೇರಿಗಳಲ್ಲಿ ಮಾಡಿಸುತ್ತಿದ್ದರು. ಮೂಲ ವಾರಸುದಾರರು ಆಸ್ತಿಯನ್ನು ಕಳೆದುಕೊಂಡು ನ್ಯಾಯಕ್ಕಾಗಿ ಕೋರ್ಟ್ ಕಚೇರಿ ಮೆಟ್ಟಿಲೇರಿ ವರ್ಷಾನುಗಟ್ಟಲೇ ಅಲೆದಾಟ ನಡೆಸುತ್ತಿದ್ದಾರೆ. ಇದನ್ನು ತಪ್ಪಿಸಲು ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಮೊದಲ ಹಂತವಾಗಿ ಆಸ್ತಿ ನೋಂದಣಿ ವೇಳೆ ಆಧಾರ್​ಗೆ ಲಿಂಕ್ ಆಗಿರುವ ಅಥವಾ ಅನ್ಯ ಮೊಬೈಲ್ ನಂಬರ್ ಪಡೆದು ಅದಕ್ಕೆ ಬರುವ ಒಟಿಪಿಯನ್ನು ಕಡ್ಡಾಯವಾಗಿ ನಮೂದಿಸುತ್ತಿದ್ದರು. ಕೇವಲ ಒಟಿಪಿ ಪಡೆದು ನೋಂದಣಿ ನಡೆಸಲಾಗಿದೆ.

ಇದರಿಂದ ಅಕ್ರಮ ವಹಿವಾಟು ಅಥವಾ ನಕಲಿ ದಾಖಲೆ ಸೃಷ್ಟಿಸುವನ್ನು ತಡೆಗಟ್ಟಲು ಸಾಧ್ಯವಿಲ್ಲ. ಜತೆಗೆ ಒಟಿಪಿ ಪಡೆಯುತ್ತಿರುವ ಕ್ರಮದಿಂದ ದಿನನಿತ್ಯದ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬುದು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಮನದಟ್ಟಾಗಿದೆ.

ಆಸ್ತಿಗೆ ಆಧಾರ್ ಲಿಂಕ್ ಮಾಡುವ ಯೋಜನೆ ಜಾರಿಗೆ ತರುವ ಕುರಿತು ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿಎಐ) ‘ದಕ್ಷಿಣ ಭಾರತ ಆಧಾರ್’ ಮುಖ್ಯಸ್ಥರ ಜತೆ ಚರ್ಚೆ ನಡೆಸಿದಾಗ ಆಸ್ತಿಗೆ ಆಧಾರ್ ಲಿಂಕ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಇಲಾಖೆಗೆ ಹಿನ್ನಡೆ ಉಂಟಾಗಿದೆ. ಈ ಕುರಿತು ಅಧ್ಯಯನ ನಡೆಸಲು ನೋಡಲ್ ಅಧಿಕಾರಿಯಾಗಿ ಜಯನಗರ ಜಿಲ್ಲಾ ನೋಂದಣಾಧಿಕಾರಿ ಸತೀಶ್​ಕುಮಾರ್ ನೇತೃತ್ವದಲ್ಲಿ ಉಪನೋಂದಣಾಧಿಕಾರಿಗಳಾದ ವೆಂಕಟೇಶ್, ವಿಶ್ವನಾಥ್, ಸಿ.ಜೆ. ಪ್ರಭಾಕರ್, ಗಿರೀಶ್ ಹಾಗೂ ಕಂಪ್ಯೂಟರ್ ಟೆಕ್ನಿಷಿಯನ್ ವಿಭಾಗದ ಇಂಜಿನಿಯರ್ ಒಳಗೊಂಡ ಸಮಿತಿ ರಚನೆ ಮಾಡಿದ್ದಾರೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೇಂದ್ರ ಕಚೇರಿ ಸಹಾಯಕ ನೋಂದಣಿ ಮಹಾಪರಿವೀಕ್ಷಕರೊಂದಿಗೆ (ಗಣಕೀಕರಣ) ಸಮಾಲೋಚಿಸಿ ಇಲಾಖೆಗೆ ವರದಿ ಸಲ್ಲಿಸಬೇಕು.

ಇವರು ನೀಡುವ ವರದಿಯನ್ನು ಸರ್ಕಾರದ ಮೂಲಕ ಯುಐಡಿಎಐಗೆ ಸಲ್ಲಿಸಲಿದ್ದಾರೆ. ಆನಂತರ ಯುಐಡಿಎಐ ಅಧಿಕಾರಿಗಳು ಕೇಂದ್ರ ಸರ್ಕಾರದ ಜತೆ ಚರ್ಚೆ ಕಾನೂನಿನಲ್ಲಿ ತಿದ್ದುಪಡಿ ತರಲು ಕುರಿತು ವರದಿ ಸಲ್ಲಿಸಲಿದ್ದಾರೆ. ಅಲ್ಲಿಯವರೆಗೂ ಆಸ್ತಿಗೆ ಆಧಾರ್ ಲಿಂಕ್ ಮಾಡುವುದು ಸಾಧ್ಯವಿಲ್ಲ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಕಾನೂನಿನ ತೊಡಕೇನು?

ಜಮೀನು, ನಿವೇಶನ, ಮನೆ, ಕಟ್ಟಡ ಇನ್ನಿತರ ಆಸ್ತಿಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ಕಾನೂನಿನಲ್ಲಿ ತೊಡಕು ಇದೆ ಎಂದು ಪಿಐಎಲ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಸರ್ಕಾರದಿಂದ ಪಡೆಯುವ ಹಣಕಾಸಿನ ಸೌಲಭ್ಯ ಅಂದರೆ ಉದ್ಯೋಗ ಖಾತ್ರಿ, ಭವಿಷ್ಯ ನಿಧಿ, ಪಿಂಚಣಿ, ಬ್ಯಾಂಕ್ ಖಾತೆಗೆ ಮಾತ್ರ ಆಧಾರ್ ಲಿಂಕ್ ಮಾಡಲು ಅವಕಾಶ ಕಲ್ಪಿಸಿದೆ. ಉಳಿದ ಯಾವುದೇ ಸಮಯದಲ್ಲಿ ಆಧಾರ್ ಬಳಸಬಾರದು. ಅದರಲ್ಲಿ ಜನರ ಬೆರಳಚ್ಚು, ಕಣ್ಣಿನ ರೆಟಿನಾ ಇನ್ನಿತ್ತರ ಗೌಪ್ಯ ಮಾಹಿತಿ ಅಡಕವಾಗಿತ್ತದೆ. ಅದನ್ನು ಬಹಿರಂಗ ಪಡಿಸುವಂತಿಲ್ಲ. ಜನರ ಖಾಸಗಿತನಕ್ಕೆ ಧಕ್ಕೆ ಉಂಟಾಗಲಿದೆ ಎಂದು ತೀರ್ಪು ನೀಡಿದೆ. ಅದಕ್ಕಾಗಿ ಆಸ್ತಿಗೆ ಆಧಾರ್ ಲಿಂಕ್ ಮಾಡುವುದಕ್ಕೆ ಕಾನೂನಿನ ತೊಡಕು ಉಂಟಾಗಿದೆ. ಸಂವಿಧಾನದ ಮೂಲಭೂತ ಹಕ್ಕಗಳ ಕಲಂ 21ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದರೇ ಮಾತ್ರ ಸಾಧ್ಯವಾಗಲಿದೆ.

ಅನುಕೂಲ ಏನು?

ಆಸ್ತಿಗೆ ಆಧಾರ್ ನಂಬರ್ ಲಿಂಕ್ ಮಾಡಿದರೆ ಬೇರೆಯವರ ಸ್ಥಿರಾಸ್ತಿಯ ಅಕ್ರಮ ವಹಿವಾಟನ್ನು ತಡೆಗಟ್ಟಬಹುದು. ಆಸ್ತಿ ಕ್ರಯ, ವರ್ಗಾವಣೆ ಪತ್ರ ಮತ್ತು ಅಡಮಾನ ಪತ್ರವನ್ನು ನೋಂದಣಿ ಮಾಡಿಸುವಾಗ ಆಧಾರ್ ನಂಬರ್ ನಮೂದು ಮಾಡಿದರೆ ವಾರಸುದಾರನ ಮೊಬೈಲ್​ಗೆ ಸಂದೇಶ ಹೋಗಲಿದೆ. ಜತೆಗೆ ನಕಲಿ ದಾಖಲೆ ಸೃಷ್ಟಿಸಿದ್ದರೆ ನೋಂದಣಿ ಕಚೇರಿ ಅಧಿಕಾರಿಗಳಿಗೆ ತಿಳಿಯಲಿದೆ. ಕಿಡಿಗೇಡಿಗಳು ಸಹ ಅಕ್ರಮ ವಹಿವಾಟಿಗೆ ಪ್ರಯತ್ನಿಸುವುದಿಲ್ಲ. ಸದ್ಯ ಇರುವ ನೋಂದಣಿ ವೇಳೆ ಮೊಬೈಲ್ ನಂಬರ್ ಮತ್ತು ಅದಕ್ಕೆ ಬರುವ ಒಟಿಪಿ ಪಡೆಯುವ ಯೋಜನೆ ಪ್ರಯೋಜನವಿಲ್ಲ ಎಂಬುದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳಿಗೆ ಮನವರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net