

ಒಂದು ಮದ್ಯಾಹ್ನದ ಬಿಡುವಿನ ವೇಳೆಗೆ ರಂಗ ರಚನಾಳ ಶಾಲೆಗೆ ಬಂದ. ನಾವಿಬ್ಬರೂ ಸಿನಿಮಾಕ್ಕೆ ಹೋಗೋಣವೆಂದು ಅವಳನ್ನು ಕರೆದ. ಆತನ ಮಾತಿಗೆ ಒಪ್ಪಿದ ರಚನಾ ಆ ದಿನದ ಅಪರಾಹ್ನದ ತರಗತಿಗಳಿಗೆ ಚಕ್ಕರ್ ಹಾಕಿ ಅವನ ಜೊತೆ ಸಿನಿಮಾ ಥಿಯೆಟರ್ಗೆ ಹೋದಳು. ಇಬ್ಬರೂ ಮ್ಯಾಟಿನಿ ಷೋ ನೋಡಿದ ನಂತರ ತಮ್ಮ ಗ್ರಾಮಕ್ಕೆ ನಡೆದುಕೊಂಡು ಬರುತ್ತಿದ್ದರು. ಸ್ವಲ್ಪ ಹೊತ್ತು ವಿರಮಿಸೋಣವೆಂದು ಅವಳಿಗೆ ಹೇಳಿದ ರಂಗ ಅವಳನ್ನು ಹಾದಿಯಲ್ಲಿದ್ದ ತೋಟವೊಂದಕ್ಕೆ ಕರೆದುಕೊಂಡು ಹೋದ. ಅಲ್ಲಿ ಅವಳ ಮನವೊಲಿಸಿ ಅವಳೊಡನೆ ಲೈಂಗಿಕ ಕ್ರಿಯೆಯನ್ನು ನಡೆಸಿದ. ಇಬ್ಬರೂ ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ನಿರ್ಧರಿಸಿದರು. ಈ ಘಟನೆಯಾದ ನಂತರ ಅವರಿಬ್ಬರೂ ಕಾಲಕಾಲಕ್ಕೆ ಬೇರೆ ಬೇರೆ ಜಾಗಗಳಲ್ಲಿ ಗುಟ್ಟಾಗಿ ಕಲೆತು ತಮ್ಮ ಲೈಂಗಿಕ ಸಂಬಂಧವನ್ನು ಮುಂದುವರಿಸಿದರು. ಸುಮಾರು ಮೂರು ತಿಂಗಳ ನಂತರ ರಚನಾಗೆ ಮುಟ್ಟು ನಿಂತಾಗ ಆಕೆ ಈ ವಿಷಯವನ್ನು ತನ್ನ ತಾಯಿಯಿಂದ ಗುಟ್ಟಾಗಿಟ್ಟಳು. ಆದರೆ, ಅವಳಿಗೆ ಸುಮಾರು ಏಳು ತಿಂಗಳು ತುಂಬಿದ ನಂತರದ ಒಂದು ಸಂಜೆ ತೀವ್ರ ತರನಾದ ಹೊಟ್ಟೆನೋವು ಕಾಣಿಸಿತು. ಆಗ ಅವಳನ್ನು ಖಾಸಗಿ ಮಹಿಳಾ ವೈದ್ಯೆಯೊಬ್ಬರ ಬಳಿಗೆ ಅವಳ ಮಾತಾಪಿತರು ಕರೆದೊಯ್ದರು. ಕ್ಲಿನಿಕ್ಕಿನಲ್ಲಿ ಆಕೆ ಗರ್ಭಿಣಿಯಾಗಿರುವುದು ಪತ್ತೆಯಾಯಿತು. ವೈದ್ಯರು ಅವಳ ಗರ್ಭಕ್ಕೆ ಕಾರಣರಾರೆಂದು ತಿಳಿಸಲು ಆಕೆಯನ್ನು ಬಲವಂತ ಮಾಡಿದಾಗ, ರಚನಾ ಅನಿವಾರ್ಯವಾಗಿ ರಂಗನ ಹೆಸರನ್ನು ಹೇಳಿದಳು. ಈ ವಿಷಯವನ್ನು ಪೊಲಿಸರಿಗೆ ತಿಳಿಸಬೇಕಾಗುತ್ತದೆ ಎಂದು ವೈದ್ಯೆ ಹೇಳಿದಾಗ ರಚನಾಳ ಮಾತಾಪಿತರು ತಾವು ರಂಗನ ಮನೆಯವರೊಂದಿಗೆ ಮಾತನಾಡಿ ಪರಿಹಾರವೊಂದನ್ನು ಕಂಡುಕೊಳ್ಳುವುದಾಗಿ ಅವರಿಗೆ ಹೇಳಿ, ಪೊಲೀಸರಿಗೆ ಮಾಹಿತಿ ನೀಡದಿರಲು ದುಂಬಾಲು ಬಿದ್ದರು. ಆ ವೈದ್ಯೆ ಇದಕ್ಕೊಪ್ಪಿ ಸುಮ್ಮನಾದರು.
ಬಸವರಾಜ್ಗೆ ತನ್ನ ಮಗಳ ಈ ಕೃತ್ಯದಿಂದ ರೋಷ ಉಕ್ಕೇರಿತ್ತು. ರಂಗ ಬೇರೊಂದು ಜಾತಿಗೆ ಸೇರಿದ್ದ ಕಾರಣ ಅವನ ಕೋಪವು ಇಮ್ಮಡಿಸಿತ್ತು. ಆತ ತನ್ನ ಸಂಬಂಧಿಕರ ಜತೆಗೆ ರಂಗನ ಮನೆಗೆ ಹೋಗಿ ತಕರಾರು ತೆಗೆದ. ತಾನು ರಚನಾಳ ಗರ್ಭಕ್ಕೆ ಕಾರಣವಲ್ಲ ಎಂದು ರಂಗ ಖಡಾಖಂಡಿತವಾಗಿ ಹೇಳಿದಾಗ ಎರಡೂ ಕುಟುಂಬಗಳ ನಡುವೆ ವಾಗ್ಯುದ್ಧ ನಡೆಯಿತು. ನಂತರ ಈ ಸಮಸ್ಯೆಯನ್ನು ಪಂಚಾಯಿತಿಯ ಮೂಲಕ ಬಗೆಹರಿಸಬೇಕೆಂದು ನಿರ್ಧರಿಸಲಾಯಿತು. ಎರಡು ದಿನಗಳ ಬಳಿಕ ಗ್ರಾಮದಲ್ಲಿ ಪಂಚಾಯಿತಿಯ ಸಭೆಯು ಸೇರಿತು. ಪಂಚಾಯಿತಿಯು ರಂಗ ಮತ್ತು ರಚನಾಳ ಲಗ್ನವನ್ನು ಮಾಡಬೇಕೆಂದು ಎರಡೂ ಕುಟುಂಬಗಳಿಗೆ ಸೂಚಿಸಿತು. ಆದರೆ, ಈ ನಿರ್ಧಾರಕ್ಕೆ ತಲೆಬಾಗಲು ಎರಡು ಕುಟುಂಬಗಳೂ ಸಿದ್ದರಿರಲಿಲ್ಲ.
ರಂಗನನ್ನು ಕೊಲೆ ಮಾಡಿಸಿದರೆ ಸಮಸ್ಯೆಗೆ ಪರಿಹಾರ ಬರುತ್ತದೆ ಎಂಬ ಯೋಚನೆ ಬಸವರಾಜನ ಮನದಲ್ಲಿ ಮೂಡಿದರೂ ಅವನ ಹಿತಚಿಂತಕರು ಇದಕ್ಕೊಪ್ಪಲಿಲ್ಲ. ರಚನಾಗೆ ಗರ್ಭಪಾತವನ್ನು ಮಾಡಿಸಿ ಅವಳಿಗೆ ಮದುವೆಯನ್ನು ಮಾಡಿಸಿ ಬೇರೆ ಊರಿಗೆ ಕಳಿಸುವುದು ಸಮಸ್ಯೆಯ ಶಾಶ್ವತ ಪರಿಹಾರವೆಂದು ಬಸವರಾಜನ ಕುಟುಂಬವು ತೀರ್ವನಿಸಿತು. ಈ ಉದ್ದೇಶದಿಂದ ಅವಳ ಮಾತಾಪಿತರು ಅವಳನ್ನು ಪಟ್ಟಣದಲ್ಲಿದ್ದ ನರ್ಸಿಂಗ್ ಹೋಂ ಒಂದಕ್ಕೆ ಕರೆದೊಯ್ದರು. ಅವಳನ್ನು ವೈದ್ಯರು ಪರೀಕ್ಷೆ ಮಾಡುವಾಗಲೇ ರಚನಾಳಿಗೆ ಪ್ರಸವ ವೇದನೆಯು ಆರಂಭವಾಗಿ ಕೆಲವೇ ಗಂಟೆಗಳ ನಂತರ ಆಕೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು. ವೈದ್ಯರು ಆಕೆ ಇನ್ನೂ ಅಪ್ರಾಪ್ತ ವಯಸ್ಸಿನವಳಾಗಿರುವುದನ್ನು ಗಮನಿಸಿ ಮಗುವಿನ ತಂದೆ ಯಾರೆಂದು ರಚನಾಳನ್ನು ಕೇಳಿದಾಗ, ಆಕೆ ರಂಗನ ಹೆಸರನ್ನು ಹೇಳಲೇಬೇಕಾಯಿತು. ಇದೊಂದು ಅತ್ಯಾಚಾರದ ಪ್ರಕರಣವಾಗಿದ್ದು ಪೋಕ್ಸೋ ಕಾಯಿದೆಯ ಅಡಿ ಬರುವ ಅಪರಾಧವೆಂದರಿತ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ರಚನಾಳ ಹೇಳಿಕೆಯ ಮೇಲೆ ರಂಗನ ಮೇಲೆ ಕ್ರಿಮಿನಲ್ ಪ್ರಕರಣವೊಂದು ದಾಖಲಾಯಿತು. ಅಷ್ಟರಲ್ಲಿ ರಂಗ ತನ್ನ ಮನೆಯಿಂದ ಪರಾರಿಯಾದ. ಅವನನ್ನು ಹುಡುಕಲು ಪೊಲೀಸರು ಪ್ರಯತ್ನ ಮಾಡತೊಡಗಿದರು.
ಏತನ್ಮಧ್ಯೆ ರಚನಾಳ ಮಾತಾಪಿತರು ಅವಳನ್ನು ಬೇರೊಬ್ಬನಿಗೆ ಕೊಟ್ಟು ಲಗ್ನ ಮಾಡಬೇಕೆಂಬ ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದರು. ಈ ವಿಷಯದ ಬಗ್ಗೆ ಅವಳ ಕುಟುಂಬದಲ್ಲಿ ಹಲವಾರು ದಿನಗಳ ಕಾಲ ಚರ್ಚೆಗಳು ನಡೆದವು. ರಚನಾಗೆ ಈಗಾಗಲೇ ಮಗುವಾಗಿದ್ದ ಕಾರಣ ಅವಳನ್ನು ಲಗ್ನವಾಗಲು ಬಹುತೇಕರು ಒಪ್ಪುವುದಿಲ್ಲ ಎನ್ನುವ ಕಾರಣಕ್ಕೆ ತಮ್ಮ ದೂರದ ಸಂಬಂಧಿಕರ ಕುಟುಂಬಗಳಲ್ಲಿ ಯಾರಾದರೂ ಅವಳನ್ನು ಲಗ್ನವಾಗಲು ತಯಾರಾದರೆ ಅವರಿಗೆ ತನ್ನ ಅರ್ಧದಷ್ಟು ಆಸ್ತಿಯನ್ನು ಬರೆದುಕೊಡುವ ಆಮಿಷವನ್ನು ಬಸವರಾಜ್ ಹರಿಬಿಟ್ಟ. ಆದರೆ, ಮಗುವಿರುವುದೆಂದು ತಿಳಿದೂ ಅವಳನ್ನು ಮದುವೆಯಾಗಲು ಒಂದು ವೇಳೆ ಯಾರಾದರೂ ಒಪ್ಪಿದರೆ ಅವರಲ್ಲಿ ಯಾವುದಾದರೊಂದು ರೀತಿಯ ಊನವಿರುತ್ತದೆ ಎಂದು ರಚನಾಳ ಸೋದರಮಾವ ಹೇಳಿದ. ರಚನಾಳ ಮದುವೆ ಸರಿಯಾದ ವ್ಯಕ್ತಿಯ ಜತೆ ನಡೆಯಬೇಕಾದರೆ ಅವಳು ತಾಯಾದದ್ದನ್ನು ಯಾರಿಗೂ ತಿಳಿಸಬಾರದು ಮತ್ತು ಅವಳ ಮಗಳನ್ನು ಯಾವುದಾದರೂ ಅನಾಥಾಶ್ರಮಕ್ಕೆ ಕೊಡುವುದು ಸೂಕ್ತವೆಂದು ಇತರ ಸಂಬಂಧಿಕರು ಸೂಚಿಸಿದರು. ಏತನ್ಮಧ್ಯೆ ರಚನಾಳ ಬಾಣಂತನವೂ ಮುಂದುವರಿದಿತ್ತು. ಒಂದು ಬೆಳಿಗ್ಗೆ ರಚನಾ ತನ್ನ ತಾಯಿಯ ಬಳಿಗೆ ಓಡಿಬಂದು ತನ್ನ ಎರಡು ತಿಂಗಳ ಕೂಸು ಮೊಲೆ ಹಾಲು ಕುಡಿಯುವಾಗ ಇದ್ದಕ್ಕಿದ್ದಂತೆ ಹೆಚ್ಚಿಗೆ ಹಾಲು ಹೊರಬಂದು ಮಗುವಿನ ಶ್ವಾಸಕೋಶಕ್ಕೆ ಹೋಗಿ ಮಗು ಉಸಿರಾಡುವುದನ್ನು ನಿಲ್ಲಿಸಿದೆ ಎಂದಳು. ಮಗುವನ್ನು ಬದುಕಿಸಲು ಅವರೆಲ್ಲ ಮಾಡಿದ ಪ್ರಯತ್ನ ವಿಫಲವಾಯಿತು. ಒಳಗೊಳಗೇ ಬಸವರಾಜ್ ಸಂತಸಗೊಂಡರೂ ತನ್ನ ಪತ್ನಿಯ ಆಗ್ರಹದ ಮೇರೆಗೆ ರಚನಾ ಮತ್ತು ಅವಳ ಮಗುವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷೆ ಮಾಡಿದ ವೈದ್ಯರು ಅದು ಎರಡು ಗಂಟೆಗಳ ಹಿಂದೆಯೇ ಸತ್ತಿರುವುದಾಗಿ ತಿಳಿಸಿ ಹೇಗೆ ಸತ್ತಿದ್ದು ಎಂದು ಕೇಳಿದಾಗ, ರಚನಾ ಕೂಸು ಹಾಲು ಕುಡಿಯುವಾಗ ಎದೆ ಹಾಲು ಶ್ವಾಸಕೋಶಕ್ಕೆ ಹೋಗಿ ಕೆಮ್ಮುತ್ತಾ ಉಸಿರಾಟವನ್ನು ನಿಲ್ಲಿಸಿತೆಂದು ಹೇಳಿದಳು. ಅವಧಿಗೆ ಮುಂಚೆ ಜನಿಸುವ ಮಕ್ಕಳು ಸಡನ್ ಇನ್ಫೆಂಟ್ ಡೆತ್ ಸಿಂಡ್ರೋಮ್ ಎನ್ನುವ ಪರಿಸ್ಥಿ್ಥತಿಯಿಂದ ಏಕಾಏಕಿ ಸಾಯಬಹುದು, ರಾತ್ರಿಯ ವೇಳೆ ಮೊಲೆಯುಣಿಸುವಾಗ ತಾಯಿ ನಿದ್ರೆಗೆ ಜಾರಿ ಮಗುವಿನ ಮುಖವು ತಾಯಿಯೆದೆಗೆ ಬಲವಾಗಿ ಅದುಮಿ ಗಾಳಿ ಸಿಗದೆ ಮಗು ಸಾಯಬಹುದು, ಕೆಲವೇಳೆ ಸೋಂಕಿನ ಕಾರಣ ವಾಯುನಾಳದಲ್ಲಿ ರಂಧ್ರವುಂಟಾಗಿ ಬಾಯಿಗೆ ಹೋದ ಹಾಲು ಶ್ವಾಸಕೋಶವನ್ನು ತಲುಪಿ ಮಗು ಸಾಯಬಹುದು ಎನ್ನುವುದು ವೈದ್ಯರಿಗೆ ತಿಳಿದಿದ್ದರೂ ನಡೆದ ಘಟನೆಯ ಬಗ್ಗೆ ರಚನಾ ನೀಡಿದ ವಿವರಣೆಯನ್ನು ಕೇಳಿದ ಅವರಿಗೆ ಅವಳ ಹೇಳಿಕೆಯ ಬಗ್ಗೆ ಅನುಮಾನ ಮೂಡಿತು. ಹೀಗಾಗಿ, ಅವರು ಶಿಶುವಿನ ಸಾವನ್ನು ಅಸ್ವಾಭಾವಿಕವೆಂದು ಪರಿಗಣಿಸಿ ಪೊಲೀಸರಿಗೆ ದೂರು ನೀಡಿದರು.
ಸ್ಥಳಕ್ಕೆ ಬಂದ ಪೊಲೀಸರು ರಚನಾಳನ್ನು ಈ ಬಗ್ಗೆ ವೈದ್ಯರ ಸಮ್ಮುಖದಲ್ಲಿಯೇ ವಿಚಾರಿಸಿದಾಗ ಆಕೆ ಒಂದೊಂದು ಬಾರಿ ಒಂದೊಂದು ವಿವರಣೆಯನ್ನು ನೀಡಿದಳು. ಅವರು ಅಸ್ವಾಭಾವಿಕ ಸಾವಿನ ಪ್ರಕರಣವೊಂದನ್ನು ದಾಖಲಿಸಿ ಮೃತ ಕೂಸಿನ ದೇಹದ ಮೇಲೆ ಮಹಜರ್ ಮಾಡಿ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡುವುದು ಸೂಕ್ತ ಎಂದು ನಿರ್ಧರಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಕತ್ತನ್ನು ಹಿಸುಕಿ ಸಾಯಿಸಲಾಗಿದೆ ಎಂದು ವರದಿ ಬಂದಿತು. ಪೊಲೀಸರು ಆ ಕೂಸಿನ ತಂದೆ ಯಾರೆಂಬುದನ್ನು ಸಾಬೀತು ಮಾಡಲು ಮುಂದೆ ಡಿ.ಎನ್.ಎ ಪರೀಕ್ಷೆಯ ಅಗತ್ಯವಿದ್ದು ಈ ಕಾರಣಕ್ಕೆ ಮಗುವಿನ ದೇಹದ ಕೆಲವು ಭಾಗಗಳನ್ನು ರಕ್ಷಿಸಿಡಲು ವೈದ್ಯರನ್ನು ಕೋರಿದರು. ರಚನಾಳ ವಿರುದ್ಧ ಕೊಲೆಯ ಪ್ರಕರಣವೊಂದು ದಾಖಲಾಯಿತು. ಆಕೆ ಇನ್ನೂ ಅಪ್ರಾಪ್ತ ಬಾಲಕಿಯಾಗಿದ್ದ ಕಾರಣ ಅವಳನ್ನು ಮಹಿಳಾ ಪೊಲೀಸ್ ಅಧಿಕಾರಿಣಿಯೊಬ್ಬರು ಆಪ್ತ ಸಲಹೆಕಾರರ ಸಮ್ಮುಖದಲ್ಲಿ ವಿಚಾರಿಸಿದರು. ತಾನು ರಂಗನನ್ನು ವಿವಾಹವಾಗಲು ಸಾಧ್ಯವಾಗಲಿಲ್ಲ ಎನ್ನುವ ಕೋಪದಿಂದಲೂ, ತನ್ನ ಜತೆ ಮಗುವಿದ್ದರೆ ತನಗೆ ಮುಂದೆ ಮದುವೆಯೇ ಆಗುವುದಿಲ್ಲವೆಂಬ ಆತಂಕದಿಂದಲೂ ಮತ್ತು ತನ್ನ ಮೇಲೆ ತನಗೇ ಉಂಟಾದ ಜಿಗುಪ್ಸೆಯಿಂದ ತಾನು ಮಗುವನ್ನು ಕತ್ತು ಹಿಸುಕಿ ಕೊಂದೆನೆಂದು ರಚನಾ ಒಪ್ಪಿಕೊಂಡಳು. ಅವಳನ್ನು ಬಂಧಿಸಿ ರಿಮ್ಯಾಂಡ್ ಹೋಮಿನಲ್ಲಿರಿಸಲಾಯಿತು. ಕೂಸಿನ ಕೊಲೆಯ ತನಿಖೆಯನ್ನು ಬೇಗನೆ ಮುಗಿಸಿದ ಪೊಲೀಸರು ಅವಳ ವಿರುದ್ಧ ಬಾಲ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿದರು. ಬಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ರಚನಾ ಇನ್ನೂ ಅಪ್ರಾಪ್ತ ಬಾಲಕಿಯಾಗಿದ್ದ ಕಾರಣ ಅವಳ ಕೃತ್ಯವನ್ನು ಮಾನವಿಯತೆಯ ದೃಷ್ಟಿಯಿಂದ ಪರಿಗಣಿಸಿ ಅವಳನ್ನು ಕೇವಲ ಒಂದು ವರ್ಷಗಳ ಕಾಲ ರಿಮಾಂಡ್ ಹೋಂನಲ್ಲಿ ಇಡಲು ತೀರ್ವನಿಸಲಾಯಿತು. ಅಷ್ಟರಲ್ಲಿ ಪರಾರಿಯಾಗಿದ್ದ ರಂಗನನ್ನು ಪೊಲೀಸರು ಪತ್ತೆಮಾಡಿದರು. ಆತನ ಡಿಎನ್ಎ ಸ್ಯಾಂಪಲ್ಲನ್ನು ಕೂಸಿನ ಸ್ಯಾಂಪಲ್ಲಿನ ಜತೆ ಹೋಲಿಸಿದಾಗ ರಚನಾಳ ಮಗುವಿನ ತಂದೆ ಅವನೇ ಎಂದು ಸಾಬೀತಾಯಿತು. ನ್ಯಾಯಾಲಯದ ವಿಚಾರಣೆಯಲ್ಲಿ ಆತನಿಗೆ ಏಳು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಯಿತು. ‘ಆಸೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು, ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ, ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ ಮೋಸದಾಟವೊ ದೈವ ಮಂಕುತಿಮ್ಮ...’ ಎನ್ನುವಂತೆ ಹದಿಹರೆಯದ ಜೋಷ್ನಲ್ಲಿ ಉಂಟಾದ ಕೃತ್ಯವೇ ಇಬ್ಬರನ್ನೂ ಘಾಸಿಗೊಳಿಸಿ ಅವರ ಭವಿಷ್ಯವನ್ನು ಹಾಳುಮಾಡಿತು. ಹದಿಹರೆಯದ ವಯಸ್ಸಿನ ಬಾಲಕ ಬಾಲಕಿಯರು ತಮ್ಮ ತನುಮನಗಳ ಮೇಲೆ ನಿಯಂತ್ರಣವಿಡದಿರುವುದರಿಂದ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಮಾತಾಪಿತರು ಜಾಗರೂಕರಾಗಿರುವುದು ಅತ್ಯವಶ್ಯ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)