ಆ ಕ್ಷಣ | ಫಿರ್ಯಾದಿಯೇ ಆರೋಪಿಯಾದಾಗ...

Column
Published on

ತಮಿಳುನಾಡಿನಿಂದ ಸುಮಾರು 15 ವರ್ಷಗಳ ಹಿಂದೆ ಹೆಂಡತಿ ಮಕ್ಕಳೊಡನೆ ವಲಸೆ ಬಂದಿದ್ದ ಸೆಲ್ವಂ ಉತ್ತರ ಕರ್ನಾಟಕದ ನಗರವೊಂದರಲ್ಲಿ ವಾಸಿಸುತ್ತಿದ್ದ. ಕಟ್ಟಡಗಳನ್ನು ಕಟ್ಟುವ ಮೇಸ್ತ್ರಿಯ ಕೆಲಸವನ್ನು ಕೆಲಕಾಲ ಮಾಡಿಕೊಂಡು ಕಾಲಕ್ರಮೇಣ ರಿಯಲ್ ಎಸ್ಟೇಟ್ ದಂಧೆಗೆ ಇಳಿದ. ಕೆಲವೇ ವರ್ಷಗಳಲ್ಲಿ ಆತನ ವಹಿವಾಟು ಸಾಕಷ್ಟು ವೃದ್ಧಿಸಿತು. ಸೆಲ್ವಂನ ಏಕೈಕ ಪುತ್ರ ಅಶೋಕ್ ಪಿಯುಸಿ ನಂತರ ಮುಂದೆ ಓದಲಿಲ್ಲ. ಮಗ ನೌಕರಿಯನ್ನೂ ಮಾಡದೆ ತನ್ನ ವ್ಯವಹಾರದಲ್ಲಿಯೂ ಸಹಾಯಮಾಡದಿದ್ದುದು ಸೆಲ್ವಂಗೆ ಬೇಸರ ತಂದಿತ್ತು. ಮದುವೆಯಾದರೆ ಆತ ಬದಲಾಗಬಹುದೆಂದು ಯೋಚಿಸಿ ಸಂಬಂಧಿಕರೊಬ್ಬರ ಮಗಳೊಂದಿಗೆ ವಿವಾಹ ಮಾಡಿದ.

ಲಗ್ನವಾದ ನಂತರವೂ ಅಶೋಕನೇನೂ ಬದಲಾಗಲಿಲ್ಲ. ಸ್ನೇಹಿತರ ಜತೆ ಬಾರು ಕ್ಲಬ್ಬುಗಳಲ್ಲೇ ದಿನ ಕಳೆದು ರಾತ್ರಿಯ ನಂತರವೇ ಮನೆಗೆ ಬರುತ್ತಿದ್ದ. ಈ ಪರಿಸ್ಥಿತಿಯಿಂದ ರೋಸಿಹೋದ ಸೆಲ್ವಂ ಒಂದು ರಾತ್ರಿ ಅಶೋಕನನ್ನು ತರಾಟೆಗೆ ತೆಗೆದುಕೊಂಡು ‘ಇನ್ನೆಷ್ಟು ದಿನಗಳ ಕಾಲ ನಾನು ಸಂಪಾದಿಸಿದ ಹಣದಿಂದಲೇ ಜೀವನಮಾಡುವೆ? ನಿನ್ನ ಹೆಂಡತಿಯನ್ನೂ ನಾನೇ ಸಾಕಬೇಕೇ?’ ಎಂದು ಕೇಳಿದ. ತಂದೆಯ ಮಾತುಗಳಿಂದ ಕೋಪಗೊಂಡ ಅಶೋಕ್ ಆ ರಾತ್ರಿ ಮನೆಯಿಂದ ಹೊರಟುಹೋಗಿ ಎರಡು ದಿನ ವಾಪಸಾಗಲಿಲ್ಲ. ನಂತರ ಮನೆಗೆ ಬಂದವನು ತಂದೆಯ ಜತೆಗೆ ಮಾತುಕತೆಯನ್ನೇ ನಿಲ್ಲಿಸಿದ. ಆದರೂ ಮಗನ ಖರ್ಚಿಗೆಂದು ಸೆಲ್ವಂ ಹಣ ಕೊಡುತ್ತಲೇ ಇದ್ದ.

ಏತನ್ಮಧ್ಯೆ ಸೆಲ್ವಂನ ಹೆಂಡತಿ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ಕಾರಣ ಅಶೋಕನ ಹೆಂಡತಿ ಸಂಸಾರವನ್ನು ನಡೆಸತೊಡಗಿದಳು. ಕೆಲ ತಿಂಗಳ ನಂತರ ಸೆಲ್ವಂ ತನ್ನ ಪರಿಚಯವಿದ್ದ ವಿಧವೆ ಜತೆಗೆ ಸಂಬಂಧ ಬೆಳೆಸಿದ. ಅವಳನ್ನು ಲಗ್ನವಾಗದಿದ್ದರೂ ಅವಳಿಗಾಗಿ ಬೇರೆ ಮನೆ ಮಾಡಿದ. ಇಷ್ಟರಲ್ಲಿ ಅಶೋಕ್ ಗಂಡುಮಗುವಿನ ತಂದೆಯಾದ. ಆ ಮಗುವಿಗೆ ಒಂದು ವರ್ಷವಾದಾಗ ಸೆಲ್ವಂ ಸಂಬಂಧ ಬೆಳೆಸಿದವಳೂ ಗಂಡುಮಗುವನ್ನು ಹಡೆದಳು. ಇದನ್ನು ತಿಳಿದ ಅಶೋಕ್ ಕೆಂಡಾಮಂಡಲವಾದ. ತಂದೆಯ ಜತೆಗೆ ಜಗಳವಾಡಿ ಅನೈತಿಕ ಸಂಬಂಧ ಕಡಿದುಕೊಳ್ಳಲು ಹೇಳಿದ. ಸೆಲ್ವಂ ಇದಕ್ಕೊಪ್ಪದೆ ಅವಳನ್ನೇ ತಾನು ಮದುವೆಯಾಗುವುದಾಗಿ ಉತ್ತರಿಸಿದಾಗ ಪರಿಸ್ಥಿತಿ ಬಿಗಡಾಯಿಸಿತು. ತಂದೆ ಮಕ್ಕಳು ದಿನವೂ ಜಗಳವಾಡತೊಡಗಿ ಮನೆ ಸಣ್ಣ ರಣಭೂಮಿಯಂತಾಯಿತು.

ಏತನ್ಮಧ್ಯೆ, ಅಶೋಕ ತನ್ನ ಕಾಲಮೇಲೆ ತಾನು ನಿಲ್ಲುವಂತಾಗಬೇಕೆಂದು ಹೆಂಡತಿಯ ಸೂಚನೆಯ ಮೇರೆಗೆ ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಲುದ್ದೇಶಿಸಿ ಗೆಳೆಯನ ಬಳಿ ಐದು ಲಕ್ಷ ರೂ. ಸಾಲ ಪಡೆದು ಒಂದು ಸೈಟನ್ನು ಖರೀದಿಸಿದ. ಆದರೆ ಆ ಸೈಟನ್ನು ಮಾರಿದಾಗ ನಷ್ಟವನ್ನನುಭವಿಸಬೇಕಾಯಿತು. ಈ ಕಾರಣದಿಂದ ಸಾಲ ತೀರಿಸಲಾಗದೇ ಸಾಲಗಾರನಿಂದ ಕಿರುಕುಳಕ್ಕೆ ಈಡಾದಾಗ ಅಶೋಕ್ ತಂದೆಯ ಮೊರೆ ಹೋಗಿ ಸಾಲ ತೀರಿಸಲು ಹಣ ಕೇಳಿದ. ಆದರೆ ಸೆಲ್ವಂ ಹಣ ಕೊಡಲು ಸಾರಾಸಗಟಾಗಿ ನಿರಾಕರಿಸಿದ. ‘ನಾನೇ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವಾಗ ನೀನು ನನ್ನ ಜೊತೆ ಬಿಟ್ಟು ನನಗೇ ಪೈಪೋಟಿ ಮಾಡಲು ಬಂದೆಯಲ್ಲಾ, ನಿನಗೆ ಹಣ ಕೊಡುವುದಿಲ್ಲ’ ಎಂದ. ಈ ವಿಷಯದ ಬಗ್ಗೆ ಮತ್ತೊಮ್ಮೆ ವಾಗ್ವಾದವಾಯಿತು. ತಂದೆಯೇ ತನ್ನ ಅಭಿವೃದ್ಧಿಗೆ ಅಡ್ಡಿ ಬರುತ್ತಿದ್ದಾನೆ ಎಂದು ಅಶೋಕನಿಗೆ ಅನಿಸಿತು, ಅವನ ಪತ್ನಿಯೂ ಈ ಯೋಚನೆಗೆ ಇಂಬುಕೂಡಿಸಿದಳು. ಕೋಟ್ಯಂತರ ರೂಗಳ ಆಸ್ತಿಯನ್ನು ಸೆಲ್ವಂ ತಾನು ಸಂಬಂಧವಿಟ್ಟುಕೊಂಡವಳ ಮಗನ ಹೆಸರಿಗೆ ಬರೆಯಬಹುದು ಎನ್ನುವ ಹೆದರಿಕೆ ಅಶೋಕನಿಗಾಯಿತು. ಹೀಗಾಗಿ ಆತ ತಂದೆಯನ್ನೇ ಕೊಲ್ಲುವ ತೀರ್ವನಕ್ಕೆ ಬಂದ. ತನ್ನ ಕೆಲವು ಗೆಳೆಯರ ಮೂಲಕ ಇಬ್ಬರು ಬಾಡಿಗೆ ಹಂತಕರನ್ನು ಪರಿಚಯ ಮಾಡಿಕೊಂಡ. ಅವರಿಬ್ಬರೂ ತಲಾ ಒಂದು ಲಕ್ಷ ರೂ. ನೀಡಿದರೆ ಸೆಲ್ವಂನ ಕೊಲೆ ಮಾಡುವುದಾಗಿ ತಿಳಿಸಿದರು. ಅಶೋಕ ಮತ್ತೊಬ್ಬ ಗೆಳೆಯನಿಂದ 50 ಸಾವಿರ ರೂ. ಸಾಲಪಡೆದು ಹಂತಕರಿಗೆ ಮುಂಗಡ ಹಣ ಕೊಟ್ಟ.

ಪ್ರತಿದಿನ ಮುಂಜಾನೆ ಆರೂವರೆಗೆೆ ಸೆಲ್ವಂ ತನ್ನ ಮನೆಯ ಬಳಿಯ ದೇವಾಲಯಕ್ಕೆ ಹೋಗಿಬರುತ್ತಾನೆ ಎಂದು ಅಶೋಕ ಹಂತಕರಿಗೆ ಮಾಹಿತಿಯಿತ್ತ ಮೇರೆಗೆ ಅವರಿಬ್ಬರೂ ದೇವಾಲಯದ ಬಳಿ ಹೊಂಚುಹಾಕತೊಡಗಿದರು. ನಾಲ್ಕೈದು ದಿನ ಪ್ರಯತ್ನಿಸಿದರೂ ಸೂಕ್ತ ಅವಕಾಶ ದೊರೆಯಲಿಲ್ಲ. ಒಂದು ವಾರದ ನಂತರ ರಸ್ತೆಯಲ್ಲಿ ಯಾರೂ ಜನರು ಇರದಿದ್ದಾಗ ಹಂತಕರು ಮುಖಕ್ಕೆ ಮುಸುಕನ್ನು ಧರಿಸಿ ಸೆಲ್ವಂನನ್ನು ಅಡ್ಡಗಟ್ಟಿ ದೊಣ್ಣೆಗಳಿಂದ ಥಳಿಸಲಾರಂಭಿಸಿದರು. ಸೆಲ್ವಂನ ಕಿರುಚಾಟ ಕೇಳಿದ ದಾರಿಹೋಕರು ಧಾವಿಸಿದಾಗ ಗಾಬರಿಯಾದ ಹಂತಕರು ದೊಣ್ಣೆಗಳನ್ನು ಅಲ್ಲಿಯೇ ಬಿಟ್ಟು ಓಡಿಹೋದರು. ಸೆಲ್ವಂನ ತಲೆಗೆ ತೀವ್ರ ಗಾಯವಾಗಿದ್ದ ಕಾರಣ ಅವನನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಸೇರಿಸಿದರು. ತನಗೆ ಹಲ್ಲೆಮಾಡಿದವರಾರೆಂದು ತಿಳಿದಿಲ್ಲ ಎಂದು ಸೆಲ್ವಂ ಹೇಳಿದ ಕಾರಣ ಅಪರಿಚಿತ ಹಲ್ಲೆಕೋರರ ವಿರುದ್ಧ ಪೊಲೀಸರು ಕೊಲೆಯತ್ನದ ಪ್ರಕರಣ ದಾಖಲಿಸಿದರು. ಹಲ್ಲೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳಿರದ ಕಾರಣ ಹಲ್ಲೆಕೋರರ ಗುರುತು ಗೊತ್ತಾಗಲಿಲ್ಲ.

ಆನಂತರ ಅಶೋಕ್ ಆ ಬಾಡಿಗೆ ಹಂತಕರನ್ನು ಸಂರ್ಪಸಿ ‘ನಿಮಗೆ ಮುಂಗಡ ಕೊಟ್ಟರೂ ಒಂದು ಕೊಲೆ ಮಾಡಲು ಸಾಧ್ಯವಾಗಲಿಲ್ಲ, ನನ್ನ ಹಣ ವಾಪಸ್ ಮಾಡಿ, ಇಲ್ಲದಿದ್ದರೆ ಪೊಲೀಸರಿಗೆ ನೀವೇ ನನ್ನ ತಂದೆ ಮೇಲೆ ಹಲ್ಲೆಮಾಡಿದ್ದೀರೆಂದು ದೂರುವೆ’ ಎಂದು ಬೆದರಿಸಿದ. ‘ಹೇಗಾದರೂ ಮಾಡಿ ಕೆಲಸ ಮುಗಿಸುತ್ತೇವೆ, ಕಾಲಾವಕಾಶ ಕೊಡಿ’ ಎಂದು ಆ ಹಂತಕರು ಹೇಳಿದರು. ಸುಮಾರು ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸೆಲ್ವಂ ಮನೆಗೆ ವಾಪಸಾದ ನಂತರ ಅಶೋಕ್ ಅವನೊಂದಿಗೆ ಉತ್ತಮವಾಗಿಯೇ ವರ್ತಿಸತೊಡಗಿದ. ‘ನೀನು ಮರುಜನ್ಮ ಪಡೆದು ಬಂದಿರುವೆ, ನಾನು ಸರಿದಾರಿಗೆ ಬರುತ್ತೇನೆ’ ಎಂದು ಹೇಳಿ ತಂದೆಯ ವಿಶ್ವಾಸ ಗಳಿಸಿದ.

ಒಂದು ದಿನ ಸೆಲ್ವಂ ದೇವಾಲಯಕ್ಕೆ ಹೊರಟಾಗ, ಅವನ ಮನೆಯ ಮುಂದೆಯೇ ಮಾರುತಿ ವ್ಯಾನ್​ನಲ್ಲಿ ಬಂದ ಬಾಡಿಗೆ ಹಂತಕರು ಆತನನ್ನು ಅಪಹರಿಸಿ ನಗರದ ಹೊರವಲಯಕ್ಕೆ ಕರೆದೊಯ್ದು ಅಶೋಕನಿಗೆ ಕರೆ ಮಾಡಿದರು. ಅಶೋಕ ಅಲ್ಲಿಗೆ ಹೋದ. ಸೆಲ್ವಂನ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ನಾಲ್ಕು ಜನರಿದ್ದ ವಾಹನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗತೊಡಗಿತು. ಹಾದಿಯಲ್ಲಿ ಹಂತಕನೊಬ್ಬ ಸೆಲ್ವಂನ ತೋಳಿಗೆ ನಿದ್ರೆ ಬರಿಸುವ ಔಷಧವಿದ್ದ ಇಂಜೆಕ್ಷನ್ ಚುಚ್ಚಿದ. ಸೆಲ್ವಂ ನಿದ್ರಾಧೀನನಾದಾಗ ಅವನ ಮೂಗು ಬಾಯಿಗೆ ಟವಲನ್ನಿಟ್ಟು ಉಸಿರು ಕಟ್ಟಿಸಿದ. ಕೆಲವೇ ನಿಮಿಷಗಳಲ್ಲಿ ಸೆಲ್ವಂ ಅಸುನೀಗಿದ. ಆತ ಸತ್ತದ್ದನ್ನು ಖಾತ್ರಿಪಡಿಸಿಕೊಂಡ ಹಂತಕರು ಅವನ ವಾಚು, ಚೈನು, ಹಣ, ಮೊಬೈಲ್ ಫೋನ್ ಮುಂತಾದವನ್ನು ದೋಚಿ ಶವವನ್ನು ಸಮೀಪದ ಅರಣ್ಯದಲ್ಲಿ ಎಸೆದು ಊರಿಗೆ ವಾಪಸ್ಸಾದರು.

ಆ ಸಂಜೆಯೇ ಅಶೋಕ್ ಪೊಲೀಸ್ ಠಾಣೆಗೆ ಹೋಗಿ ‘ನನ್ನ ತಂದೆ ಬೆಳಿಗ್ಗೆ ದೇವಾಲಯಕ್ಕೆ ಹೋದವರು ಇನ್ನೂ ಮನೆಗೆ ವಾಪಸಾಗಿಲ್ಲ. ಯಾರೋ ಅವರನ್ನು ಅಪಹರಿಸಿರಬಹುದು ಇಲ್ಲವೇ ಕೊಲೆ ಮಾಡಿರಬಹುದು. ಈ ಹಿಂದೆಯೇ ಅವರ ಹತ್ಯೆ ಪ್ರಯತ್ನ ನಡೆದಿದ್ದು ನಿಮಗೆ ಗೊತ್ತಿದೆ. ವೃತ್ತಿಮಾತ್ಸರ್ಯದಿಂದ ಹೀಗಾಗಿರಬಹುದು’ ಎಂದು ದೂರಿತ್ತ. ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದರು. ಅಪಹರಣಕ್ಕೆ ಯಾವುದೇ ಪ್ರತ್ಯಕ್ಷದರ್ಶಿಗಳೂ ಸಿಗಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳೂ ಫಲಕಾರಿಯಾಗಲಿಲ್ಲ. ಸೆಲ್ವಂನ ಸೆಲ್ ಫೋನ್ ಸ್ವಿಚ್ ಆಫ್ ಎಂದೇ ಬರುತ್ತಿತ್ತು. ಅಪಹರಣವಾಗಿದ್ದರೆ ಯಾರಾದರೂ ಒತ್ತೆಹಣಕ್ಕಾಗಿ ಕರೆ ಮಾಡಬೇಕಾಗಿತ್ತು, ಆದರೆ ಅಂತಹ ಕರೆಗಳು ಬಂದಿರಲಿಲ್ಲ. ಸೆಲ್ವಂನನ್ನು ವೃತ್ತಿಮಾತ್ಸರ್ಯದಿಂದ ಅಪಹರಿಸಿರಬಹುದು ಎಂದು ಆಶೋಕ್ ದೂರಿನಲ್ಲಿ ತಿಳಿಸಿದ್ದ ಕಾರಣ ಆ ನಿಟ್ಟಿನಲ್ಲಿಯೂ ತನಿಖೆ ನಡೆಯಿತು. ಸೆಲ್ವಂಗೆ ವೈರಿಗಳು ಯಾರೂ ಇರಲಿಲ್ಲ ಎಂಬ ಮಾಹಿತಿ ಬಂದಿತು. ವಸ್ತುಸ್ಥಿತಿ ಹೀಗಿದ್ದರೂ ಮಾರಣಾಂತಿಕ ಹಲ್ಲೆಯಾಗಿ ಚೇತರಿಸಿಕೊಂಡು ಬಂದ ಕೆಲವೇ ವಾರಗಳ ನಂತರ ಸೆಲ್ವಂ ಮಾಯವಾದದ್ದು ನಿಗೂಢವಾಗಿತ್ತು.

ಒಂದು ವಾರವಾದರೂ ಪೊಲೀಸರಿಗೆ ಯಾವುದೇ ಮಾಹಿತಿ ಸಿಗಲಿಲ್ಲ. ಏತನ್ಮಧ್ಯೆ, ಅಶೋಕ್ ಪದೇಪದೆ ಪೊಲೀಸ್ ಠಾಣೆಗೆ ಹೋಗಿ ತಂದೆ ಪತ್ತೆಯಾದರೇ ಎಂದು ಕೇಳತೊಡಗಿದ. ಆತ ಏಕೆ ಇಷ್ಟುಬಾರಿ ಠಾಣೆಗೆ ಬರುತ್ತಿದ್ದಾನೆ ಎಂದು ಸಂಶಯಗೊಂಡ ಇನ್​ಸ್ಪೆಕ್ಟರ್ ಒಬ್ಬರು ಅವನ ಬಗ್ಗೆ ಹೆಚ್ಚಿನ ತನಿಖೆ ಮಾಡಲು ಸಿಬ್ಬಂದಿಗೆ ಸೂಚಿಸಿದರು. ಕೆಲ ದಿನಗಳ ನಂತರ ಅಶೋಕನ ಬಗ್ಗೆ ಪೂರ್ಣ ಮಾಹಿತಿ ಬಂದಿತು. ಆತ ಮಾಡಿದ್ದ ಸಾಲದ ವಿವರಗಳನ್ನು ಪೊಲೀಸರು ಪಡೆದರು. ಅಶೋಕನನ್ನು ಪೊಲೀಸ್ ಠಾಣೆಗೆ ಕರೆಸಿ ಕೂಲಂಕಷವಾಗಿ ವಿಚಾರಣೆ ಮಾಡಿದಾಗ ತಾನೇ ತಂದೆಯ ಕೊಲೆಯಲ್ಲಿ ಶಾಮೀಲಾದದ್ದಾಗಿ ಒಪ್ಪಿಕೊಂಡ. ಅವನ ಮಾಹಿತಿಯ ಮೇರೆಗೆ ಇಬ್ಬರೂ ಹಂತಕರನ್ನು ಬಂಧಿಸಲಾಯಿತು. ಆ ಹಂತಕರು ತಾವು ಈ ಹಿಂದೆ ಸೆಲ್ವಂನನ್ನು ಕೊಲೆಮಾಡಲು ಮೂರು ಬಾರಿ ಪ್ರಯತ್ನಿಸಿದ್ದಾಗಿಯೂ, ಮೂರೂ ಬಾರಿ ವಿಫಲಗೊಂಡಿದ್ದಾಗಿಯೂ ತಿಳಿಸಿದರು. ಸೆಲ್ವಂನ ದೇಹವನ್ನು ಎಸೆದಿದ್ದ ಜಾಗವನ್ನು ಅವರು ತೋರಿಸಿದರು. ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದಾಗ ಉಸಿರುಕಟ್ಟಿಸಿ ಕೊಲೆಯಾದದ್ದು ಸಾಬೀತಾಯಿತು. ಸೆಲ್ವಂನಿಂದ ಕದ್ದಿದ್ದ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಯಿತು. ಒಳಸಂಚು, ಕೊಲೆ, ಜಬರಿ ಕಳವು ಮತ್ತು ಸಾಕ್ಷ್ಯನಾಶದ ಆರೋಪ ಹೊರೆಸಿ ನ್ಯಾಯಾಲಯಕ್ಕೆ ಹಾಜರುಮಾಡಲಾಯಿತು. ನ್ಯಾಯಾಲಯ ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿತು.

‘ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ ಹೊಂದಿರವರವರಹಂತೆಯು ಮೊಳೆಯುವನಕ, ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ ಬಂಧ ಮುರಿವುದು ಬಳಿಕ ಮಂಕುತಿಮ್ಮ’ ಎಂದ ಡಿವಿಜಿಯವರ ನುಡಿಗಳು ಪ್ರಸ್ತುತವಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net