

ಜಿಲ್ಲಾ ಕೇಂದ್ರವೊಂದರಲ್ಲಿ ಬೆಳೆದ ಶೀತಲ್ ಹತ್ತನೆಯ ತರಗತಿಯಲ್ಲಿದ್ದಾಗ ಅವಳ ತಂದೆ ವಾಹನ ಅಪಘಾತದಲ್ಲಿ ಮೃತಪಟ್ಟ ಕಾರಣ ತಾಯಿ ರಮಾಳೇ ಅವಳನ್ನು ಮತ್ತವಳ ಸೋದರನನ್ನು ಪಾಲನೆ ಮಾಡಿದರು. ಶೀತಲ್ ಊರಿನಲ್ಲಿದ್ದ ಕಾಲೇಜಿನಲ್ಲಿಯೇ ಡಿಸ್ಟಿಂಕ್ಷನ್ನಲ್ಲಿ ಬಿಇ ಪಾಸಾದ ನಂತರ ಅವಳಿಗೆ ಕ್ಯಾಂಪಸ್ ನೇಮಕಾತಿಯಲ್ಲಿ ದೊಡ್ಡ ಕಂಪನಿಯೊಂದರಲ್ಲಿ ನೌಕರಿ ದೊರಕಿತು. ತಾಯಿ-ತಮ್ಮನನ್ನು ಬಿಟ್ಟು ದೂರದ ಊರಿಗೆ ಹೋಗಲು ಆಕೆ ಹಿಂಜರಿದರೂ ತಾಯಿ ಧೈರ್ಯ ತುಂಬಿದ್ದರಿಂದ ನೌಕರಿಗೆ ಸೇರಿದಳು.
ಇಬ್ಬರಿಗೂ ದೈಹಿಕ ಸಂಪರ್ಕವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೆಲಕಾಲದ ನಂತರ ಕಂಪನಿ ಪ್ರಶಾಂತನನ್ನು ಅಮೆರಿಕದಲ್ಲಿ ಇದ್ದ ತನ್ನ ಕಕ್ಷಿದಾರ ಕಂಪನಿಗೆ ಆನ್ಸೈಟ್ ಕೆಲಸಕ್ಕಾಗಿ ವರ್ಗ ಮಾಡಿತು. ಇಬ್ಬರೂ ಲಗ್ನವಾಗಿ ಅಮೆರಿಕದಲ್ಲಿ ಸುಖೀ ಸಂಸಾರ ನಡೆಸೋಣ ಎಂದು ಶೀತಲ್ ಸೂಚಿಸಿದಾಗ ತಾನು ವಿವಾಹದ ಬಗ್ಗೆ ಇನ್ನೂ ಯೋಚಿಸಿಯೇ ಇಲ್ಲವೆಂದೂ ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾದ್ದರಿಂದ ತನ್ನ ಮನೆಯವರನ್ನು ಒಪ್ಪಿಸುವುದು ಸುಲಭವಲ್ಲವೆಂದೂ ಪ್ರಶಾಂತ್ ತಿಳಿಸಿದ. ಮೊದಲು ತಾನು ಅಮೆರಿಕಾಗೆ ಹೋಗಿ ಅಲ್ಲಿನ ಪರಿಸ್ಥಿತಿ ಅರಿತು ಒಂದು ವರ್ಷದ ನಂತರ ನಿರ್ಧಾರಕ್ಕೆ ಬರುವೆನೆಂದು ಹೇಳಿದ.
ಪ್ರಶಾಂತ್ ಅಮೆರಿಕಾಗೆ ಹೋದ ನಂತರ ಪ್ರತಿದಿನವೂ ಸ್ಕೈಪ್ ಮತ್ತು ವಾಟ್ಸಾಪ್ ಮೂಲಕ ಶೀತಲ್ ಜತೆಗೆ ಬಹಳ ಸಮಯ ಚಾಟ್ ಮಾಡುತ್ತಿದ್ದ. ಇಷ್ಟರಲ್ಲಿ ಶೀತಲ್ಗೆ ವಾಕರಿಕೆ, ವಾಂತಿಯಾಗುವುದು, ಪದೇಪದೆ ಮೂತ್ರಕ್ಕೆ ಹೋಗುವ ಲಕ್ಷಣಗಳು ಕಾಣಿಸತೊಡಗಿದವು. ಇದನ್ನು ಗಮನಿಸಿದ ಗೆಳತಿಯರು ‘ನೀನು ಗರ್ಭವತಿಯಾಗಿರಬಹುದು, ವೈದ್ಯರಿಂದ ತಪಾಸಣೆ ಮಾಡಿಸಿಕೋ’ ಎಂದು ಸೂಚಿಸಿದರು. ಶೀತಲ್ ವೈದ್ಯರ ಬಳಿಗೆ ಹೋದಾಗ, ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿತು.
ಪ್ರಶಾಂತ್ಗೆ ಶೀತಲ್ ಈ ಸುದ್ದಿಯನ್ನು ತಿಳಿಸಿದಾಗ ಆತ ಸಂತೋಷ ವ್ಯಕ್ತಪಡಿಸಿ ‘ನೀನು ಮಗುವಿನ ತಾಯಿಯಾಗುವಷ್ಟರಲ್ಲಿ ನಾನು ನನ್ನ ತಂದೆತಾಯಿಯರಿಗೆ ನಮ್ಮ ಸಂಬಂಧದ ಬಗ್ಗೆ ಮನವರಿಕೆ ಮಾಡುತ್ತೇನೆ, ನನಗೆ ಇನ್ನೊಂದು ವರ್ಷದವರೆವಿಗೆ ರಜೆ ದೊರೆಯದಿರುವ ಕಾರಣ ನಾನು ಭಾರತಕ್ಕೆ ಮರಳಿದ ನಂತರ ಮದುವೆಯಾಗೋಣ, ಮದುವೆಗೆ ಮುಂಚೆಯೇ ಮಗು ಹುಟ್ಟಿತು ಎಂದು ಜನರು ಮಾತನಾಡಬಹುದು, ಅದರ ಬಗ್ಗೆ ನೀನೇನೂ ತಲೆಕೆಡಿಸಿಕೊಳ್ಳಬೇಡ, ನಿನ್ನ ತಾಯಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಷ್ಟೇ’ ಎಂದ. ಆತನ ಮಾತುಗಳಿಂದ ಶೀತಲ್ ಸಮಾಧಾನಗೊಂಡಳು. ಹೇಗಿದ್ದರೂ ಪ್ರಶಾಂತ ಮದುವೆಯಾಗುವುದಾಗಿ ಆಶ್ವಾಸನೆ ನೀಡಿರುವುದರಿಂದ ತನ್ನ ತಾಯಿಯನ್ನು ಮದುವೆಗೆ ಒಪ್ಪಿಸಿದರೆ ಸಾಕು ಎಂದು ರ್ತಸಿದಳು. ಮುಂದಿನ ತಿಂಗಳು ಊರಿಗೆ ಹೋದಾಗ ಪ್ರಶಾಂತ್ ಜತೆಗಿನ ತನ್ನ ಸಂಬಂಧ ಮತ್ತು ತಾನು ಗರ್ಭಿಣಿಯಾಗಿರುವ ಬಗ್ಗೆ ತಾಯಿಗೆ ತಿಳಿಸಿದಳು. ಈ ಸುದ್ದಿಯನ್ನು ಕೇಳಿ ರಮಾ ಕೆಂಡಾಮಂಡಲವಾಗಿ ಕುಟುಂಬದ ಮರ್ಯಾದೆಯನ್ನು ಹರಾಜಿಗೆ ಹಾಕಿರುವೆ ಎಂದು ಮಗಳನ್ನು ನಿಂದಿಸಿದಳು. ‘ಮದುವೆಗೆ ಮುಂಚೆ ನೀನು ಗರ್ಭಿಣಿಯಾಗಿರುವುದು ಊರಲ್ಲಿ ಜಾಹೀರಾದರೆ ಜನರು ನಮ್ಮ ಬಗ್ಗೆ ನೂರಾರು ಮಾತನಾಡುತ್ತಾರೆ, ನೀನು ಕೂಡಲೇ ಗರ್ಭಪಾತ ಮಾಡಿಸಿಕೊ’ ಎಂದು ಒತ್ತಡ ಹೇರಲಾರಂಭಿಸಿದಳು. ಮಗುವಿನ ಜನನದ ನಂತರ ತಾನು ಪ್ರಶಾಂತ್ನನ್ನು ಲಗ್ನವಾಗುವುದರಿಂದಲೂ ಈ ಮಗುವಿನ ತಂದೆಯಾಗಿರುವವನೇ ಗರ್ಭವನ್ನು ಮುಂದುವರಿಸಲು ಒಪ್ಪಿರುವುದರಿಂದಲೂ ಗರ್ಭಪಾತ ಮಾಡಿಸಿಕೊಳ್ಳುವುದಿಲ್ಲ ಎಂದು ಶೀತಲ್ ಖಡಾಖಂಡಿತವಾಗಿ ಹೇಳಿದಾಗ ರಮಾಗೆ ಏನು ಮಾಡುವುದೆಂದು ತೋಚಲಿಲ್ಲ.
ಮಾರನೆಯ ದಿನವೇ ಶೀತಲ್ಗೆ ತೀವ್ರತರವಾದ ಹೊಟ್ಟೆನೋವು ಬಂದಿದ್ದರಿಂದ ವೈದ್ಯರ ಬಳಿಗೆ ಹೋಗಬೇಕಾದದ್ದು ಅನಿವಾರ್ಯವಾಯಿತು. ವೈದ್ಯರಿಗೆ ರಮಾ ತನ್ನ ಮಗಳ ಗರ್ಭ ತೆಗೆಯಲು ಕೋರಿದಾಗ ಅವರು, ‘ಶೀತಲ್ ಗರ್ಭ ಧರಿಸಿ ಈಗಾಗಲೇ ಐದು ತಿಂಗಳು ಕಳೆದಿರುವುದರಿಂದ ಗರ್ಭಪಾತ ಮಾಡಿದರೆ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತವೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಇಲ್ಲವೇ ತಾಯಿಯ ಜೀವಕ್ಕೆ ಅಪಾಯವಾಗುವ ರಿಸ್ಕ್ ಇದೆ, ಅಲ್ಲದೇ ಕಾನೂನಿನ ರೀತಿ ಅಪರಾಧವಾಗುವುದರಿಂದ ಗರ್ಭಪಾತ ಸಾಧ್ಯವಿಲ್ಲ’ ಎಂದರು. ಈ ಮಾತನ್ನು ಕೇಳಿದ ಶೀತಲ್ ಸಂತಸಗೊಂಡರೆ ರಮಾ ಗಾಬರಿಯಾದಳು. ತಾನು ಸಮಾಜದಲ್ಲಿ ತಲೆ ಎತ್ತಿಕೊಂಡು ಹೇಗೆ ಓಡಾಡುವುದು ಎನ್ನುವ ಚಿಂತೆ ಅವಳನ್ನು ಕಾಡತೊಡಗಿತು. ನಾಟಿ ಔಷಧಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದಾಗ ಶೀತಲ್ ಒಪ್ಪಲಿಲ್ಲ. ತನ್ನ ತಾಯಿ ಗರ್ಭಪಾತಕ್ಕೆ ಹೇರುತ್ತಿರುವ ಒತ್ತಡದ ಬಗ್ಗೆ ಪ್ರಶಾಂತನಿಗೆ ಹೇಳಿದಾಗ ಆತ ‘ನೀನು ಗರ್ಭಪಾತ ಮಾಡಿಸಿಕೊಳ್ಳುವುದು ನನಗೆ ಇಷ್ಟವಿಲ್ಲ, ಮಗುವನ್ನು ನಾವು ಪ್ರೀತಿಯಿಂದ ಬೆಳೆಸೋಣ, ನೀನು ಹೆದರಬೇಡ’ ಎಂದ.
ಶೀತಲ್ 8 ತಿಂಗಳ ಗರ್ಭಿಣಿಯಾದಾಗ ಇದ್ದಕ್ಕಿದ್ದಂತೆ ಪ್ರಶಾಂತ್ ತಾನು ಬೇರೆ ಊರಿಗೆ ಕೆಲಸದ ಮೇಲೆ ಹೋಗುತ್ತಿದ್ದೇನೆ ಎಂದು ಹೇಳಿ ನಂತರ ದೂರವಾಣಿ, ಸ್ಕೈಪ್ ಅಥವಾ ಈಮೇಲ್ ಸಂಪರ್ಕಕ್ಕೂ ಸಿಗಲಿಲ್ಲ. ಆಕೆ ಕಂಪನಿಯ ಹಿರಿಯರನ್ನು ವಿಚಾರಿಸಿದಾಗ ಪ್ರಶಾಂತ್ ರಾಜೀನಾಮೆ ನೀಡಿ ಅಮೆರಿಕದಲ್ಲಿಯೇ ಬೇರೊಂದು ಕಂಪನಿ ಸೇರಿಕೊಂಡಿದ್ದಾನೆ, ಆತನ ಹೊಸ ವಿಳಾಸ ತಮಗೆ ತಿಳಿದಿಲ್ಲ ಎಂದರು. ಪ್ರಶಾಂತನ ಸ್ನೇಹಿತರ ಮೂಲಕ ಅವನನ್ನು ಸಂರ್ಪಸಲು ಮಾಡಿದ ಪ್ರಯತ್ನಗಳೂ ವಿಫಲವಾದವು. ಏನೂ ಮಾಡಲು ತೋಚದ ಶೀತಲ್ ಮೌನಕ್ಕೆ ಶರಣಾದಳು. ಆಕೆಗೆ ಖಿನ್ನತೆ ಆವರಿಸಿತು.
ಇಷ್ಟರಲ್ಲಿ ಆಕೆ ಹೆರಿಗೆಗಾಗಿ ತವರಿಗೆ ಬಂದಳು. ಶೀತಲ್ ಯಾರ ಕಣ್ಣಿಗೂ ಬೀಳದಂತೆ ರಮಾ ಎಚ್ಚರ ವಹಿಸಿ ಆಕೆ ಊರಿಗೆ ಬಂದ ಸುದ್ದಿಯನ್ನು ತನ್ನ ಎಲ್ಲ ಸಂಬಂಧಿಕರಿಂದ, ಗೆಳೆಯರಿಂದ ಮರೆಮಾಚಿದ್ದಳು. ಶೀತಲ್ಗೆ ಮನೆಯಿಂದ ಹೊರಬರದಂತೆ ನಿರ್ಬಂಧ ಹಾಕಿದಳು.
ಶೀತಲ್ಗೆ ಒಂದು ರಾತ್ರಿ ಗರ್ಭದ ನೋವು ಕಾಣಿಸಿದಾಗ ರಮಾ ಅವಳನ್ನು ಮನೆಯ ಬಳಿಯ ಖಾಸಗಿ ನರ್ಸಿಂಗ್ ಹೋಂಗೆ ಸೇರಿಸಿದಳು. ಕೆಲ ಗಂಟೆಗಳಲ್ಲಿ ಅವಳಿಗೆ ಸುಂದರವಾದ ಗಂಡು ಮಗು ಜನಿಸಿತು. ಶೀತಲ್ ಖುಷಿಗೆ ಪಾರವೇ ಇರಲಿಲ್ಲ. ಆದರೆ ರಮಾಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಮದುವೆಯಾಗದ ಮಗಳು ಮಗುವನ್ನು ಹೆತ್ತಿರುವ ಸುದ್ದಿಯನ್ನು ಸಂಬಂಧಿಕರಿಂದ ಹೇಗೆ ಮುಚ್ಚಿಡುವುದು ಎನ್ನುವುದೇ ಅವಳ ಸಮಸ್ಯೆಯಾಗಿತ್ತು. ಹೆರಿಗೆಯಾದ ಮಾರನೆಯ ಬೆಳಿಗ್ಗೆ ಶೀತಲ್ ಎದ್ದಾಗ ಪಕ್ಕದಲ್ಲಿ ನವಜಾತ ಶಿಶು ಕಾಣಲಿಲ್ಲ. ದಾದಿಯನ್ನು ವಿಚಾರಿಸಿದಾಗ ‘ಜನಿಸಿದ ಕೂಡಲೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಗ ತಾನೇ ಹೆರಿಗೆಯಾಗಿದ್ದ ನಿನಗೆ ಮಂಪರು ಬರಿಸುವ ಔಷಧಿಯನ್ನು ನೀಡಿದ್ದುದರಿಂದ ಈ ವಿಷಯವನ್ನು ಹೇಳಲಾಗಲಿಲ್ಲ. ಮಧ್ಯರಾತ್ರಿಯೇ ನಿನ್ನ ಮಗು ಸತ್ತುಹೋಯಿತು. ಅದನ್ನು ಶವಾಗಾರಕ್ಕೆ ಕಳಿಸಲಾಯಿತು’ ಎಂದಳು. ಶೀತಲ್ಗೆ ಬರಸಿಡಿಲು ಎರಗಿದಂತಾಯಿತು. ಆಕೆಗೆ ಈ ಸುದ್ದಿಯನ್ನು ನಂಬಲು ಸಾಧ್ಯವೇ ಆಗಲಿಲ್ಲ. ತಾಯಿ ರಮಾಳೂ ದಾದಿ ಹೇಳಿದ್ದನ್ನೇ ಹೇಳಿದಳು. ಮಗುವನ್ನು ಕಳೆದುಕೊಂಡ ದುಃಖದಿಂದಾಗಿ ಆಕೆ ಇನ್ನಷ್ಟು ಖಿನ್ನತೆಗೆ ಒಳಗಾದಳು. ನಾಲ್ಕೇ ವಾರಗಳ ವಿಶ್ರಾಂತಿಯ ನಂತರ ಆಕೆ ಕೆಲಸಕ್ಕೆ ಹಾಜರಾಗಿ ಕೆಲಸದಲ್ಲಿ ಮಗ್ನಳಾಗಿ ನೋವನ್ನು ಮರೆಯಲು ಯತ್ನಿಸಿದಳು. ಮತ್ತೊಮ್ಮೆ ಪ್ರಶಾಂತನನ್ನು ಸಂರ್ಪಸಲು ಯತ್ನಿಸಿದರೂ ಫಲಪ್ರದವಾಗಲಿಲ್ಲ.
ಮೂರು ತಿಂಗಳ ನಂತರ ಶೀತಲ್ ತಾಯಿಯ ಮನೆಗೆ ಹೋದಳು. ವಸ್ತುವೊಂದನ್ನು ಖರೀದಿಸಲು ಆಕೆ ಅಂಗಡಿಗೆ ಹೋದಾಗ ಒಬ್ಬ ಅಪರಿಚಿತ ಮಹಿಳೆ ‘ನೀವು ಶೀತಲ್ ಅಲ್ಲವೇ’ ಎಂದು ಕೇಳಿದಾಗ ‘ಹೌದು’ ಎಂದಳು. ‘ನಾನು ನಿಮಗೆ ಹೆರಿಗೆಯಾದ ಆಸ್ಪತ್ರೆಯ ದಾದಿ, ನೀವು ವಿವಾಹ ಮಾಡಿಕೊಳ್ಳದೇ ಮಗುವನ್ನು ಹೆತ್ತಿದ್ದರಿಂದ, ನಿಮ್ಮ ತಾಯಿ ನಮ್ಮ ನರ್ಸಿಂಗ್ ಹೋಂನವರ ಸಹಾಯದಿಂದ ಆ ಮಗುವನ್ನು ಯಾರಿಗೋ ಮಾರಿಬಿಟ್ಟಿದ್ದಾರೆ, ನಿಮ್ಮ ಮಗ ಸತ್ತಿಲ್ಲ’ ಎಂದು ಹೇಳಿದಳು. ಆಘಾತಕ್ಕೀಡಾದ ಶೀತಲ್ ಮನೆಗೆ ವಾಪಸ್ಸಾಗಿ ತಾಯಿಯನ್ನು ತರಾಟೆಗೆ ತೆಗೆದುಕೊಂಡಳು. ‘ನೀನು ವಿವಾಹವಾಗದೇ ತಾಯಿಯಾದ್ದರಿಂದ ಹೀಗೆ ಮಾಡುವುದು ಅನಿವಾರ್ಯವಾಯಿತು, ಮೇಲಾಗಿ ಪ್ರಶಾಂತನೂ ನಿನ್ನ ಕೈಬಿಟ್ಟ ಕಾರಣ ನಾನು ಮಾಡಿದ್ದು ನಿನ್ನ ಒಳಿತಿಗೇ’ ಎಂದಳು. ತನ್ನ ಮಗುವನ್ನು ನೋಡಬೇಕು, ಅದನ್ನು ಎಂತಹ ಪರಿಸ್ಥಿತಿಯಲ್ಲಾದರೂ ಪಾಲಿಸಬೇಕು ಎಂದು ತಾಯಿಕರುಳು ಮಿಡಿಯಿತು. ಶೀತಲ್ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ತನ್ನ ತಾಯಿಯೇ ಮಾರಿರುವುದಾಗಿ ದೂರನ್ನು ನೀಡಿದಳು. ಪೊಲೀಸರು ರಮಾ ಮತ್ತು ನರ್ಸಿಂಗ್ ಹೋಂನ ವೈದ್ಯರ ವಿರುದ್ಧ ಅಪಹರಣದ ದೂರು ದಾಖಲಿಸಿ ಅದೇ ಊರಿನ ಒಂದು ಶ್ರೀಮಂತ ಕುಟುಂಬ ಆ ಮಗುವನ್ನು 45 ಸಾವಿರ ರೂಪಾಯಿಗೆ ಖರೀದಿಸಿರುವುದನ್ನು ಪತ್ತೆ ಮಾಡಿದರು. ಅವರಿಂದ ಮಗುವನ್ನು ವಾಪಸ್ ಪಡೆದು ನ್ಯಾಯಾಲಯದ ಆದೇಶದ ಮೇರೆಗೆ ಶೀತಲ್ಗೆ ಕೊಟ್ಟರು. ರಮಾ ಮತ್ತಿತರರಿಗೆ ಐದು ವರ್ಷದ ಸೆರೆವಾಸವಾಯಿತು.
‘ಕಾಣೆಯಾದ ಶಿಶುವಿನ ಮೌನಕ್ಕಿಂತ ಅಬ್ಬರವಾದದ್ದು ಯಾವುದೂ ಅಲ್ಲ’ ಎಂಬ ಅಮೆರಿಕನ್ ಕಾದಂಬರಿಕಾರ ಡೆನ್ನಿಸ್ ಲೆಹಾನೆಯ ಮಾತುಗಳನ್ನು ಶೀತಲ್ ಪುಷ್ಟೀಕರಿಸಿದಳು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)