ಮಾನರಕ್ಷಣೆಗೆ ಆಕೆ ಮಾಡಿದ್ದೇನು?

Abusive Woman
Published on
2018ರ ಡಿಸೆಂಬರ್ ತಿಂಗಳ ಒಂದು ಮಧ್ಯಾಹ್ನ ಉತ್ತರ ಕರ್ನಾಟಕದ ಜಿಲ್ಲೆಯೊಂದರ ಗ್ರಾಮೀಣ ಪೊಲೀಸ್ ಠಾಣೆಯ ಕಾಂಪೌಂಡಿನ ಮುಂದೆ ಎತ್ತಿನ ಗಾಡಿ ಬಂದು ನಿಂತಿತು. ಠಾಣೆಯ ಕಾವಲುಗಾರ ಅಲ್ಲಿ ನಿಲ್ಲಿಸದಿರಲು ಕೂಗಿ ಹೇಳಿದರೂ ಆ ಗಾಡಿ ಅಲ್ಲಿಯೇ ನಿಂತಿತು. ಅದರಿಂದ ಕೆಳಗಿಳಿದ 35 ವರ್ಷ ವಯಸ್ಸಿನ ವ್ಯಕ್ತಿ ಠಾಣೆಯೊಳಗೆ ಬಂದ. ಅವನ ಹಿಂದೆಯೇ ತಲೆಗೆ ಸೆರಗು ಹೊದ್ದಿದ್ದ 30 ವರ್ಷದ ಮಹಿಳೆ ಬಂದಳು.

‘ನಾನು ಕೊಲೆ ಮಾಡಿರುವ ಮಾಹಿತಿ ನೀಡಿ, ಶರಣಾಗಲು ಬಂದಿರುವೆ’ ಎಂದು ಆ ಮಹಿಳೆ ಹೇಳಿದಾಗ ಗಾಬರಿಯಾದ ಕಾವಲುಗಾರ ಠಾಣಾಧಿಕಾರಿಯನ್ನು ಹೊರಗೆ ಕರೆತಂದ. ಠಾಣಾಧಿಕಾರಿ ಅವರಿಬ್ಬರನ್ನೂ ಅಡಿಯಿಂದ ಮುಡಿಯವರೆಗೆ ದೃಷ್ಟಿಸಿ, ‘ಏನಾಯಿತು?’ ಎಂದು ಕೇಳಿದರು.

‘ನಿನ್ನೆ ರಾತ್ರಿ ನಾನು ನನ್ನ ಮಾವನನ್ನು ಕೊಲೆ ಮಾಡಿದ್ದೇನೆ. ಕೊಲೆಗೆ ಉಪಯೋಗಿಸಿದ ಕಬ್ಬಿಣದ ಸಲಾಕೆ ಇಲ್ಲಿದೆ, ನನ್ನನ್ನು ಬಂಧಿಸಿ’ ಎಂದು ಕೈಚೀಲವನ್ನು ತೆಗೆದು ಅದರಲ್ಲಿದ್ದ ರಕ್ತಸಿಕ್ತ ಕಬ್ಬಿಣದ ಸಲಾಕೆಯನ್ನು ಆ ಮಹಿಳೆ ತೋರಿಸಿದಾಗ ಇಬ್ಬರನ್ನೂ ಒಳಕರೆದ ಪಿಎಸ್​ಐ ನಡೆದಿದ್ದೇನೆಂದು ವಿವರವಾಗಿ ತಿಳಿಸಲು ಹೇಳಿದರು. ಆ ವ್ಯಕ್ತಿ ತನ್ನ ಹೆಸರು ಕರಿಯಪ್ಪನೆಂದು ತಿಳಿಸಿ, ‘ನಾನು ಇಲ್ಲಿಗೆ 12 ಕಿ.ಮೀ. ದೂರದಲ್ಲಿರುವ ಸಾವಳಗಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದಿರುವ 5 ಎಕರೆ ಜಮೀನಿನಲ್ಲಿ ಒಕ್ಕಲುತನ ಮಾಡುತ್ತಿದ್ದೇನೆ. ತಂದೆ ಸಿದ್ದಣ್ಣ, ತಾಯಿ ಲಕ್ಷ್ಮಿಗೆ ನಾನು ಒಬ್ಬನೇ ಮಗನಾಗಿದ್ದು ಇಲ್ಲಿರುವ ನನ್ನ ಪತ್ನಿ ಪಾರ್ವತಿ ಪಕ್ಕದ ಗ್ರಾಮದವಳು. ನಮ್ಮ ಮದುವೆಯಾಗಿ 4 ವರ್ಷಗಳಾಗಿವೆ. ಇನ್ನೂ ಮಕ್ಕಳಾಗಿಲ್ಲ. ತಂದೆಗೆ 65 ವರ್ಷ ವಯಸ್ಸಾಗಿದ್ದು ಉಬ್ಬಸ ರೋಗದ ಕಾರಣ ಒಂದು ವರ್ಷದಿಂದೀಚೆಗೆ ಒಕ್ಕಲುತನ ಮಾಡಲು ಬರದೆ ಮನೆಯಲ್ಲಿಯೇ ಇರುತ್ತಿದ್ದ. ತಾಯಿ ಬೆನ್ನುನೋವಿನಿಂದ ಬಳಲುತ್ತಿರುವ ಕಾರಣ ಹೆಚ್ಚಿಗೆ ಅಡ್ಡಾಡುವುದಿಲ್ಲ. ನಿನ್ನೆ ರಾತ್ರಿ ಏನಾಯಿತೆಂದು ಪಾರ್ವತಿಯೇ ಹೇಳುತ್ತಾಳೆ’ ಎಂದು ಹೇಳಿದ.

ಪಾರ್ವತಿ ಹೀಗೆ ಹೇಳಿದಳು: ‘ನಾನು ಮದುವೆಯಾಗಿ ಗಂಡನ ಮನೆಗೆ ಬಂದಾಗಿನಿಂದ ಮಾವ ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದ, ವರ್ತಿಸುತ್ತಿದ್ದ. ಒಮ್ಮೆ ಸ್ನಾನ ಮಾಡುತ್ತಿರುವಾಗ ಬಚ್ಚಲಮನೆಯ ಬಾಗಿಲ ಕಿಂಡಿಯಿಂದ ಇಣುಕಿ ನೋಡಿದಾಗ ರಂಪಾಟ ಮಾಡಿ ತಂದೆ ವಯಸ್ಸಿನವನಾದ ನೀನು ಹೀಗೆ ಮಾಡಬೇಡವೆಂದು ಹೇಳಿದ್ದೆ. ಮೂರ್ನಾಲ್ಕು ಬಾರಿ ಗದರಿದರೂ ಆತ ಬದಲಾಗಲಿಲ್ಲ. ಒಂದು ಮಧ್ಯಾಹ್ನ ಆತ ಹಿಂದಿನಿಂದ ಬಂದು ನನ್ನನ್ನು ಆಲಂಗಿಸಿ ಚುಂಬಿಸಿದಾಗ ಅವನನ್ನು ದೂರತಳ್ಳಿ ಅತ್ತೆಗೆ ದೂರು ನೀಡಿದೆ. ಆಕೆ ಮಾವನನ್ನು ತರಾಟೆಗೆ ತೆಗೆದುಕೊಂಡಳು. ‘ಇನ್ನು ಮುಂದೆ ಹೀಗೆ ಮಾಡುವುದಿಲ್ಲ, ತಪ್ಪಾಯಿತು’ ಎಂದು ಕಾಲಿಗೆ ಬೀಳಲು ಬಂದ. ಇವೆಲ್ಲ ಘಟನೆಗಳನ್ನೂ ಕಾಲಕಾಲಕ್ಕೆ ಗಂಡನಿಗೆ ತಿಳಿಸುತ್ತಲೇ ಬಂದೆ. ಆದರೆ ಆತ ‘ತಾಳ್ಮೆಯಿಂದ ಸ್ವಲ್ಪ ಸಹಿಸಿಕೊಂಡಿರು, ನಾವು ದೂರು ನೀಡಿದರೆ ಕುಟುಂಬದ ಮಾನ ಹೋಗುತ್ತದೆ, ಸಮಸ್ಯೆಯನ್ನು ಬಗೆಹರಿಸುವೆ’ ಎಂದು ಹೇಳಿ ಸುಮ್ಮನಾಗಿಸಿದ್ದ.

ಮಾವ ಈ ಹಿಂದೆ ಒಬ್ಬ ಹೆಣ್ಣುಮಗಳನ್ನು ಬಲಾತ್ಕಾರ ಮಾಡಲು ಹೋಗಿ ಊರ ಪಂಚಾಯಿತಿಯಲ್ಲಿ ದಂಡ ತುಂಬಿದ್ದ ಎಂಬ ವಿಷಯ ತಿಳಿದಾಗ ಅತ್ತೆಯನ್ನು ಈ ಬಗ್ಗೆ ವಿಚಾರಿಸಿದೆ. ತನ್ನ ಗಂಡ ಹೆಣ್ಣುಬಾಕನೆಂದು ತಿಳಿಸಿದ ಆಕೆ ತಾನು ಅವನಿಗೆ ಸುಖ ಕೊಡಲು ಸಾಧ್ಯವಾಗದ ಕಾರಣ ಅವನ ವರ್ತನೆಗೆ ಕಡಿವಾಣ ಹಾಕಲಾಗದೆ ಸುಮ್ಮನಿದ್ದೇನೆ ಎಂದಳು. 6 ತಿಂಗಳ ಹಿಂದೆ ಗಂಡ ಗೊಬ್ಬರ ತರಲು ಬೇರೆ ಊರಿಗೆ ಹೋದಾಗ, ಮಾವ ನಾನು ಮಲಗಿದ್ದ ಕೋಣೆಗೆ ಮೆಲ್ಲನೆ ಬಂದು ನನ್ನ ಮೈತಡವಿದ. ಗಾಬರಿಯಿಂದ ಮೇಲೆದ್ದು ಅವನನ್ನು ತಳ್ಳಿ ಗಟ್ಟಿಯಾಗಿ ಅರಚಿದಾಗ ಅತ್ತೆ ಎದ್ದು ಬಂದು ಅವನನ್ನು ಹೊರತಳ್ಳಿದರು. ಅವನು ಆ ರಾತ್ರಿ ಮನೆಯಿಂದ ಹೊರಗೆ ಹೋದವನು ಬೆಳಗಾಗುವವರೆಗೂ ಬರಲಿಲ್ಲ. ಗಂಡ ಮನೆಗೆ ವಾಪಸ್ಸಾದಾಗ ಈ ವಿಷಯ ತಿಳಿಸಿ ಆ ಮನೆಯಲ್ಲಿರಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿ ನನ್ನನ್ನು ತವರಿಗೆ ಕಳಿಸುವಂತೆ ಬಲವಂತ ಮಾಡಿದೆ. ಗಂಡ ತನ್ನ ತಂದೆ ಜತೆಗೆ ಜಗಳವಾಡಿ ನಾವಿಬ್ಬರೂ ಬೇರೆ ಮನೆ ಮಾಡುವುದಾಗಿ ತಿಳಿಸಿದ. ಆಗ ಮಾವ ಗೊಳೋ ಎಂದು ಅಳುತ್ತ, ‘ಯಾವುದೋ ಕೆಟ್ಟಕ್ಷಣದಲ್ಲಿ ಹೀಗೆ ಮಾಡಿದೆ, ಇನ್ನು ಮುಂದೆ ಪಾರ್ವತಿ ಜತೆಗೆ ಸಭ್ಯವಾಗಿ ವರ್ತಿಸುವೆ. ಮುಂದೇನಾದರೂ ಹೀಗಾದರೆ ನಾನೇ ಈ ಊರನ್ನು ಬಿಟ್ಟುಹೋಗುತ್ತೇನೆ’ ಎಂದು ದೇವರ ಮುಂದೆ ಪ್ರಮಾಣ ಮಾಡಿದ. ಅದೇ ಕಡೆಯ ಅವಕಾಶವೆಂದು ಅವನಿಗೆ ತಿಳಿಸಿ ಪ್ರಕರಣವನ್ನು ಮುಗಿಸಿದೆವು.

3 ತಿಂಗಳ ಕಾಲ ಮಾವನ ವರ್ತನೆ ಸರಿಯಾಗಿತ್ತು. ನಿನ್ನೆ ರಾತ್ರಿ ಗಂಡ ಹೊಲಕ್ಕೆ ನೀರು ಬಿಡಲು ಹೋಗಿದ್ದಾಗ ನನ್ನ ಕೋಣೆಯಲ್ಲಿ ಮಲಗಿದ್ದೆ. ಆಗ ಮಾವ ಅಲ್ಲಿಗೆ ಬಂದು ಅತ್ಯಾಚಾರ ಮಾಡಲು ಯತ್ನಿಸಿದ. ಅವನಿಂದ ಬಿಡಿಸಿಕೊಳ್ಳಲು ಅವನ ಕೈಯನ್ನು ಕಚ್ಚಿದಾಗ ಆತ ಮುಖ ಹಾಗೂ ಮೈಗೆ ಗುದ್ದತೊಡಗಿ ಸೀರೆಯನ್ನು ಕಳಚಿದ. ಆಗ, ಪಕ್ಕದಲ್ಲಿಯೇ ಬಿದ್ದಿದ್ದ ಕಬ್ಬಿಣದ ಸಲಾಕೆಯನ್ನು ಕೈಗೆ ತೆಗೆದುಕೊಂಡು ಆತನ ತಲೆಗೆ ಎರಡು ಪೆಟ್ಟು ಕೊಟ್ಟೆ. ಗಾಯವಾದರೂ ಆತ ಸುಮ್ಮನಾಗದೆ ಅಪ್ಪಿಕೊಳ್ಳಲು ಬಂದ. ಅಷ್ಟರಲ್ಲಿ ನಮ್ಮಿಬ್ಬರನ್ನೂ ಬಿಡಿಸಲು ಅತ್ತೆ ಕೋಣೆಗೆ ಬಂದಾಗ ಸಲಾಕೆಯ ಏಟೊಂದು ಹಣೆಗೆ ಬಡಿದು ಆಕೆ ಪ್ರಜ್ಞಾಹೀನಳಾದಳು. ಕೋಪಗೊಂಡ ಮಾವ ಕೆಳಕ್ಕೆ ಕೆಡವಿ ನನ್ನ ಮೈಮೇಲೇರಿದಾಗ ಸಲಾಕೆಯಿಂದ ಇನ್ನೊಮ್ಮೆ ತಲೆಗೆ ಹೊಡೆದೆ. ಆತ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಸತ್ತುಹೋದ. ಅತ್ತೆ ಉಸಿರಾಡುತ್ತಿದ್ದಳು. ಅವಳಿಗೆ ನೀರು ಚಿಮುಕಿಸಿ ಗಾಯಕ್ಕೆ ಬಟ್ಟೆ ಕಟ್ಟಿ ಉಪಚಾರ ಮಾಡಿದೆ. ನಂತರ ಕತ್ತಲಲ್ಲೇ ಹೊಲಕ್ಕೆ ಧಾವಿಸಿ ಗಂಡನಿಗೆ ವಿಷಯ ತಿಳಿಸಿ ಮನೆಗೆ ಕರೆದುಕೊಂಡು ಬಂದೆ.

ಈ ಮಾಹಿತಿಯನ್ನು ಪೊಲೀಸರಿಗೆ ಕೊಟ್ಟು ಶರಣಾಗಬೇಕು ಎಂದು ಗಂಡ ಹೇಳಿದ. ಅತ್ತೆ ಹುಷಾರಾಗಿಯೇ ಇದ್ದ ಕಾರಣ ಅವಳನ್ನು ಮನೆಯಲ್ಲಿಯೇ ಬಿಟ್ಟು ನಾವಿಬ್ಬರೂ ಒಂದು ಚೀಲದಲ್ಲಿ ಮಾವನ ಶವವನ್ನು ಹಾಕಿಕೊಂಡು ತಂದಿದ್ದೇವೆ. ಶವವಿರುವ ಮೂಟೆ ಠಾಣೆ ಮುಂದೆ ನಿಲ್ಲಿಸಿರುವ ಗಾಡಿಯಲ್ಲಿದೆ. ತಾವು ನನ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಿ’ ಎಂದು ಹೇಳಿ ರಕ್ತಸಿಕ್ತ ಸಲಾಕೆಯನ್ನು ಒಪ್ಪಿಸಿದಳು.

ಆಕೆಯ ಕಥೆಯನ್ನು ಕೇಳಿ ಚಕಿತನಾದ ಠಾಣಾಧಿಕಾರಿ ಗಾಡಿಯಲ್ಲಿದ್ದ ಮೃತದೇಹವನ್ನು ಹೊರಗೆ ತೆಗೆಸಿದರು. ಶವದ ಮೇಲೆ ಠಾಣೆಯಲ್ಲಿಯೇ ಮಹಜರ್ ಮಾಡಲಾಯಿತು. ಮೃತ ವೆಂಕಪ್ಪ 65 ವರ್ಷ ವಯಸ್ಸಿನವನಾಗಿದ್ದು ಕಟ್ಟುಮಸ್ತಾದ ಶರೀರವುಳ್ಳವನಾಗಿದ್ದ. ಅವನ ತಲೆ ಮೇಲೆ ಹಾಗೂ ಕಿವಿ ಮೇಲ್ಭಾಗದಲ್ಲಿ 2 ತೀವ್ರ ಗಾಯಗಳಾಗಿದ್ದು ರಕ್ತಸ್ರಾವವಾಗಿತ್ತು. ಅವನ ಕೈಮೇಲೆ ಹಲ್ಲಿನಿಂದ ಕಚ್ಚಿದ ಗುರುತುಗಳಿದ್ದವು.

ಅದೇ ಗಾಡಿಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಯಿತು. ತಲೆಗೆ ಬಿದ್ದ ಏಟಿನಿಂದಾಗಿಯೇ ಸಾವು ಸಂಭವಿಸಿದೆ ಎಂದು ಹೇಳಿದ ವೈದ್ಯರು ಪಾರ್ವತಿ ಹಾಜರುಪಡಿಸಿದ್ದ ಸಲಾಕೆಯಿಂದ ಆ ಗಾಯಗಳಾಗಿರಬಹುದೆಂದು ಅಭಿಪ್ರಾಯಪಟ್ಟರು. ಅದೇ ಆಸ್ಪತ್ರೆಯಲ್ಲಿಯೇ ಪಾರ್ವತಿಯನ್ನೂ ಪರೀಕ್ಷೆ ಮಾಡಲಾಯಿತು. ಆಕೆಯ ಮುಖ, ಕೈಗಳು ಮತ್ತು ಎದೆಯ ಮೇಲೆ ಉಗುರಿನಿಂದ ಮಾಡಿದ ಗೀರುಗಾಯಗಳಿದ್ದವು. ತನ್ನ ಮೇಲಾಗುವ ಅತ್ಯಾಚಾರವನ್ನು ತಡೆಯುವಾಗ ಆ ಗಾಯಗಳಾಗಿರಬಹುದೆಂದು ವೈದ್ಯರು ಹೇಳಿದರು. ಪಾರ್ವತಿಯನ್ನು ಬಂಧಿಸಿ ಅವಳನ್ನು ಸಾವಳಗಿಯ ಮನೆಗೆ ಕರೆದುಕೊಂಡು ಹೋದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಲಕ್ಷ್ಮಿ ತಾನು ಮಲಗಿದ್ದ ಜಾಗದಲ್ಲಿಯೇ ಅಸುನೀಗಿದ್ದಳು. ಆಕೆಯ ಶವದ ಮಹಜರನ್ನು ಮಾಡಿದಾಗ ಆಕೆಯ ಹಣೆ ಮೇಲೆ ಒಂದೇ ರಕ್ತಗಾಯ ಕಂಡುಬಂದಿತು. ತಲೆಗಾದ ಗಾಯದಿಂದಾಗಿಯೇ ಆಕೆಯ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ರುಜುವಾತಾಯಿತು.

ಈ ಜೋಡಿ ಕೊಲೆ ಪ್ರ್ರರಣದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳಿರದೆ ಆರೋಪಿ ತಾನೇ ಕೊಲೆ ಮಾಡಿದ್ದಾಗಿ ತನ್ನ ಗಂಡನ ಮುಂದೆ ಹೇಳಿಕೆ ನೀಡಿದ್ದಲ್ಲದೆ ಮ್ಯಾಜಿಸ್ಟ್ರೇಟರ ಮುಂದೆಯೂ ತಪ್ಪೊಪ್ಪಿಕೊಂಡಿದ್ದಳು. ಅವಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದಾಗ, ಪಾರ್ವತಿ ಮಾವನನ್ನು ತನ್ನ ದೇಹದ ರಕ್ಷಣೆಗಾಗಿ ಹಿಮ್ಮೆಟ್ಟಿಸಿದಳೆ ಹೊರತು ಅವನನ್ನು ಕೊಲ್ಲಬೇಕೆಂಬ ಉದ್ದೇಶ ಅವಳಿಗಿರಲಿಲ್ಲ. ಅಲ್ಲದೆ ಲಕ್ಷ್ಮಿಯ ಸಾವು ಆಕಸ್ಮಿಕವಾಗಿ ಸಂಭವಿಸಿರುವ ಘಟನೆಯೆಂದು ತೀರ್ವನಿಸಿದ ನ್ಯಾಯಾಧೀಶರು ವಿಚಾರಣಾಧೀನ ಕೈದಿಯಾಗಿ ಪಾರ್ವತಿ ಜೈಲಿನಲ್ಲಿ ಕಳೆದ ಅವಧಿಯನ್ನೇ ಶಿಕ್ಷೆಯೆಂದು ಪರಿಗಣಿಸಿ ಅವಳನ್ನು ಬಿಡುಗಡೆ ಮಾಡಿದರು.

‘ಪುರುಷನ ರಕ್ಷಣೆಯನ್ನು ಅವಲಂಬಿಸದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸ್ತ್ರೀಯರಿಗೆ ಕಲಿಸಲೇಬೇಕು’ ಎಂದು ಅಮೆರಿಕದ ಸಾಮಾಜಿಕ ಹೋರಾಟಗಾರ್ತಿ ಸೂಸನ್ ಆಂಥೋನಿ ಕೊಟ್ಟ ಸಲಹೆ ಸೂಕ್ತವಾಗಿದೆಯಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net