ತನಿಖೆಯ ಬಗ್ಗೆಯೇ ಸಂಶಯ; ಸಿಸ್ಟರ್ ಅಭಯಾ ಸಾವಿನ ಸುತ್ತ...

A kshana
Published on
ಅಭಯಾಳ ಶವದ ಪಂಚನಾಮೆ ಮಾಡಿದ ನಂತರ ಮೃತದೇಹವನ್ನು ಕೊಟ್ಟಾಯಂ ವ್ಯೆದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಯಿತು. ಈ ಪರೀಕ್ಷೆಯನ್ನು ನಡೆಸಿದ ವಿಧಿ ವಿಜ್ಞಾನ ತಜ್ಞ ಡಾ.ಸಿ.ರಾಧಾಕೃಷ್ಣನ್, ಮೃತಳ ತಲೆಯ ಹಿಂದೆ ಎರಡು ಗಾಯಗಳಿದ್ದು ಮಿದುಳಿನ ಮೇಲ್ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು, ಅಭಯಾ ಬಾವಿಯಲ್ಲಿ ಧುಮುಕುವಾಗ ತಲೆಯು ಬಾವಿಯ ಕಲ್ಲಿನ ಗೋಡೆಗೆ ತಗುಲಿರಬಹುದಾದ ಕಾರಣ ಈ ಗಾಯಗಳಾಗಿರಬಹುದು. ಅವಳ ದೇಹದ ಮೇಲೆ ಹಲವಾರು ತರಚಿದ ಗಾಯಗಳಿದ್ದು ಇವೂ ಬಾವಿಗೆ ಬೀಳುವಾಗ ಸಂಭವಿಸಿವೆ ಎಂದು ವರದಿಯಲ್ಲಿ ಬರೆದರು.

ತಲೆಗಾದ ಗಾಯಗಳ ಜತೆಗೆ ನೀರಿನಲ್ಲಿ ಮುಳುಗಿದಾಗ ಆಕೆಯ ಪುಪು್ಪಸದಲ್ಲಿ ನೀರು ತುಂಬಿ ಉಸಿರಾಟ ನಿಂತು ಸಾವು ಸಂಭವಿಸಿದೆ; ಅಭಯಾಳ ಮೇಲೆ ಅತ್ಯಾಚಾರ ನಡೆದಿರುವುದು ಕಂಡುಬಂದಿಲ್ಲ ಎಂದು ವೈದ್ಯರು ಸ್ಪಷ್ಟೀಕರಿಸಿದರು. ಆದರೂ ಲ್ಯಾಬೊರೇಟರಿ ಪರೀಕ್ಷೆಗಾಗಿ ಆಕೆಯ ಗುಪ್ತಾಂಗದ ದ್ರವಗಳನ್ನು ಸಂರಕ್ಷಿಸಲಾಗಿದೆ. ಅವಳದು ಆತ್ಮಹತ್ಯೆ ಎಂದು ಅವರು ಅಭಿಪ್ರಾಯ ಕೊಟ್ಟರು.

ಅಭಯಾಳ ಸಾವು ಆತ್ಮಹತ್ಯೆಯೆಂದು ಬಿಂಬಿತವಾದಾಗ ಸಾರ್ವಜನಿಕರಿಂದ ತೀವ್ರ ಪ್ರತಿಕ್ರಿಯೆ ಮೂಡಿಬಂದಿತು. ಅವಳ ಕೊಲೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆಯೆಂದು ಅಭಯಾಳ ಕುಟುಂಬವಲ್ಲದೆ ಸಾರ್ವಜನಿಕ ಗುಂಪುಗಳೂ ಆರೋಪಿಸತೊಡಗಿದವು. ಹೀಗಾಗಿ ರಾಜ್ಯದ ಡಿಜಿಪಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದರು. ಡಿವೈಎಸ್​ಪಿ ಸಾಮ್ಯುವೆಲ್ ಪ್ರಕರಣದ ತನಿಖಾಧಿಕಾರಿಯಾದರು. ಅಭಯಾಳ ಶವವನ್ನು ಬಾವಿಯಿಂದ ಹೊರತೆಗೆಯುವ ಸಮಯದಲ್ಲಿ ಕಾನ್ವೆಂಟಿಗೆ ಬಂದಿದ್ದ ಸಿಐಡಿ ಎಸ್.ಪಿ. ಮೈಕೇಲ್ ಅವರೇ ಈ ತನಿಖೆಯ ಉಸ್ತುವಾರಿ ವಹಿಸಿದರು.

ಆಭಯಾಳ ಸಾವಿನ ದಿನದಂದೇ ಅವಳ ಕಾನ್ವೆಂಟ್​ನ ತಾರಸಿಯ ಮೇಲಿದ್ದ ಮಿಂಚು ವಾಹಕವು (ಲೈಟ್ನಿಂಗ್ ಕಂಡಕ್ಟರ್) ಕಳ್ಳತನವಾಗಿತ್ತೆಂದೂ ಈ ಸಂಬಂಧ ಸ್ಥಳಿಯ ಪೊಲೀಸರು ಅಡಕೆ ರಾಜು ಎನ್ನುವ ಕಳ್ಳನನ್ನು ಬಂಧಿಸಿದ್ದಾರೆಂದೂ ಗೊತ್ತಾದಾಗ ಸಿಐಡಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಪ್ರಶ್ನಿಸಿದರು. ತಾನು ಅಭಯಾ ಸತ್ತ ರಾತ್ರಿ ಕಾನ್ವೆಂಟನ್ನು ಪ್ರವೇಶಿಸಿ ಕಟ್ಟಡದ ಹೊರಗಿದ್ದ ಕಬ್ಬಿಣದ ಮೆಟ್ಟಿಲುಗಳ ಮೂಲಕ ತಾರಸಿಯೇರಿ ವಿದ್ಯುತ್ ವಾಹಕವನ್ನು ಕದ್ದೆನೆಂದು ಆತ ಒಪ್ಪಿಕೊಂಡ. ಕಳ್ಳತನ ಮಾಡಿ ವಾಪಸಾಗುತ್ತಿದ್ದಾಗ ಹಾಸ್ಟೆಲ್ಲಿನ ಆವರಣದಲ್ಲಿ ಇಬ್ಬರು ಪಾದ್ರಿಗಳನ್ನು ನೋಡಿದ್ದಾಗಿ ರಾಜು ತಿಳಿಸಿದ. ತಾಮ್ರದ ತಂತಿಯನ್ನು ಮಾರಿದ್ದ ಜಾಗವನ್ನೂ ತೋರಿಸಿದ. ಅವನೇ ಅಭಯಾಳ ಕೊಲೆ ಮಾಡಿದ್ದಾನೆಂದು ಶಂಕಿಸಿದ ಸಿಐಡಿ ಪೊಲೀಸರು ಸುಮಾರು 50 ದಿನಗಳ ಕಾಲ ಅವನನ್ನು ವಶದಲ್ಲಿಟ್ಟುಕೊಂಡು ತೀವ್ರವಾಗಿ ಪ್ರಶ್ನಿಸಿದರು. ಅವನಿಂದ ಯಾವ ಮಾಹಿತಿಯೂ ಬರದಿದ್ದಾಗ ಅವನ ಮೇಲೆ ಕಳ್ಳತನದ 40 ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಕಳುಹಿಸಿದರು.

ಅಭಯಾಳದು ಆತ್ಮಹತ್ಯೆ ಎಂದು ಸಿಐಡಿ ತಂಡವು 1993ರ ಜನವರಿ ಅಂತ್ಯದಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಅಂತಿಮ ವರದಿಯನ್ನು ಸಲ್ಲಿಸಿತು. ಅಭಯಾ ಖಿನ್ನತೆಯಿಂದ ಬಳಲುತ್ತಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿತು. ಆಕೆಯ ಕುಟುಂಬದಲ್ಲಿ ಮಾನಸಿಕ ತೊಂದರೆಯ ಚರಿತ್ರೆಯಿದೆ. ಆಕೆಯ ತಾಯಿ ಮತ್ತು ಸೋದರಮಾವ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಆಕೆಯ ಸೋದರಮಾವ ಎರಡು ಬಾರಿ ಬಾವಿಯಲ್ಲಿ ಜಿಗಿದು ಆತ್ಮಹತ್ಯೆಗೆ ವಿಫಲ ಪ್ರಯತ್ನ ನಡೆಸಿದ್ದಾನೆ. ಇದಲ್ಲದೇ ಅಭಯಾ ಸಾಯುವ ಸಮಯದಲ್ಲಿ ಆಕೆಗೆ ಮಾಸಿಕ ಋತುಚಕ್ರವಾಗುತ್ತಿತ್ತು. ಆಕೆ ಪರೀಕ್ಷೆಗಳಲ್ಲಿ ಫೇಲಾಗಿದ್ದಳು. ಈ ಎಲ್ಲ ಕಾರಣಗಳಿಂದ ಅವಳ ಖಿನ್ನತೆಯು ತೀವ್ರವಾಗಿತ್ತು. ನೀರಿನಲ್ಲಿ ಮುಳುಗಿದ ಕಾರಣದಿಂದಲೇ ಅವಳ ಸಾವುಂಟಾಯಿತು ಎಂದು ವರದಿಯಲ್ಲಿ ತಿಳಿಸಿತು. ಜಪ್ತಿ ಮಾಡಿಕೊಂಡಿದ್ದ ಮೃತಳ ಬಟ್ಟೆಬರೆಗಳು, ಡೈನಿಂಗ್ ಹಾಲಿನಿಂದ ವಶಪಡಿಸಿಕೊಂಡಿದ್ದ ಇತರ ವಸ್ತುಗಳನ್ನೂ ಮ್ಯಾಜಿಸ್ಟ್ರೇಟರ ಕಚೇರಿಗೆ ಸಲ್ಲಿಸಲಾಯಿತು.

ಈ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟಗೊಂಡಾಗ ಸ್ಥಳೀಯರು ಆಕ್ರೋಶಗೊಂಡರು. ಯಾರದೋ ಪ್ರಭಾವಕ್ಕೊಳಗಾಗಿ ಪೊಲೀಸರು ಅಭಯಾಳ ಕೊಲೆಯನ್ನು ಮುಚ್ಚಿಹಾಕುತ್ತಿದ್ದಾರೆಂದು ಆರೋಪಿಸಿದ ನಾಗರಿಕರ ಗುಂಪೊಂದು ಆಕೆಯ ಹಾಸ್ಟೆಲಿನಲ್ಲಿದ್ದ ಇತರ ಸನ್ಯಾಸಿನಿಯರ ಮಾಹಿತಿಯಂತೆ ಅಭಯಾ ಸಾಯುವ ದಿನದಂದೂ ಲವಲವಿಕೆಯಿಂದಿದ್ದಳು, ಪರೀಕ್ಷೆಗಾಗಿ ಓದಲೆಂದು ಬೆಳಗಿನ 4 ಗಂಟೆಗೆ ಎದ್ದಿದ್ದಳು. ನಿದ್ರೆ ತೀವ್ರವಾಗಿ ಬಂದ ಕಾರಣ ತಣ್ಣನೆಯ ನೀರಿನಲ್ಲಿ ಮುಖತೊಳೆದು ಬರುತ್ತೇನೆಂದು ಖಾಲಿ ಬಾಟ್ಲಿಯನ್ನು ತೆಗೆದುಕೊಂಡು ಹಾಸ್ಟೆಲ್ಲಿನ ನೆಲಮಹಡಿಗೆ 4.15ಕ್ಕೆ ಹೋದಳು ಎಂದು ಹೇಳಿರುವುದರಿಂದ ಅವಳ ಸಾವು ಸಂದೇಹಾಸ್ಪದವಾಗಿದೆ ಎಂದರು.

ಅಭಯಾಗೆ ಆತ್ಮಹತ್ಯೆ ಉದ್ದೇಶವಿದ್ದರೆ ಎಲ್ಲರೂ ಮಲಗಿದ್ದಾಗಲೇ ಕೆಳಮಹಡಿಗೆ ಹೋಗಿ ಅಡುಗೆ ಮನೆಯ ಬಾಗಿಲನ್ನು ತೆಗೆದು ಬಾವಿಗೆ ಹೋಗಿ ಬೀಳಬಹುದಾಗಿತ್ತಲ್ಲಾ? ಆತ್ಮಹತ್ಯೆಯ ಉದ್ದೇಶವಿದ್ದರೆ ಆಕೆ ಬಾವಿಯವರೆಗೆ ಚಪ್ಪಲಿಗಳನ್ನು ಏಕೆ ಧರಿಸಿಕೊಂಡು ಹೋಗಲಿಲ್ಲ? ಅಡುಗೆ ಕೋಣೆಯಿಂದ ಹೊರಹೋಗುವ ಬಾಗಿಲಿಗೆ ಹೊರಗಿನಿಂದ ಚಿಲಕವನ್ನೇಕೆ ಹಾಕಲಾಗಿತ್ತು? ಬಾವಿಕಟ್ಟೆಯ ಮೇಲಿದ್ದ ಬಕೆಟ್ಟು ದೂರದಲ್ಲಿ ಏಕೆ ಬಿದ್ದಿತ್ತು? ಅಭಯಾಳ ಎರಡು ಚಪ್ಪಲಿಗಳು ಬೇರೆ ಬೇರೆಯಾಗಿ ಏಕೆ ಬಿದ್ದವು? ಡೈನಿಂಗ್ ಹಾಲಿನ ಪರಿಸ್ಥಿತಿ ಗಮನಿಸಿದರೆ ಅಭಯಾ ನೀರು ಕುಡಿಯಲು ರೆಫ್ರಿಜರೇಟರ್ ಬಾಗಿಲನ್ನು ತೆರೆದಾಗ ಯಾರೋ ಹಿಂದಿನಿಂದ ಬಂದು ಅವಳ ತಲೆಗೆ ಪೆಟ್ಟು ನೀಡಿದ್ದಾರೆ, ಆಗ ಅವಳ ಕೈಯಲ್ಲಿದ್ದ ಅರ್ಧ ತುಂಬಿದ ನೀರಿನ ಬಾಟಲಿ ಕೆಳಗೆ ಬಿದ್ದು ಅದರಿಂದ ನೀರು ಸುರಿದಿರಬಹುದು ಎನಿಸುತ್ತಿದೆ. ಆನಂತರ ಹಂತಕರು ಅವಳನ್ನು ಬಾವಿಯವರೆಗೆ ಎಳೆದುಕೊಂಡು ಹೋಗುವಾಗ ಚಪ್ಪಲಿಗಳು ಕೆಳಗೆ ಬಿದ್ದಂತೆ ಕಾಣುತ್ತಿದೆ, ಎಂದು ರ್ತಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಕೆಲವು ಪತ್ರಿಕೆಗಳು, ಯಾರೇ ಆಗಲಿ ಆತ್ಮಹತ್ಯೆ ಉದ್ದೇಶದಿಂದ ಸುತ್ತಲೂ ಕಟ್ಟೆಯಿರುವ ಬಾವಿಗೆ ಧುಮುಕಿದರೆ ತಲೆಯು ಬಾವಿಯ ಗೋಡೆಗೆ ಬಡಿಯುವುದಿಲ್ಲ. ಅಭಯಾಳ ತಲೆಗೆ ಹಿಂಭಾಗದಿಂದ ಯಾರೋ ಹೊಡೆದ ಕಾರಣದಿಂದಲೇ ಆಕೆಯ ಕೊಲೆಯಾಗಿದೆ ಎಂದವು. ಈ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸಿದ ಎಸ್.ಪಿ. ಮೈಕೇಲ್ ಕಾನ್ವೆಂಟಿನ ಪರವಾಗಿದ್ದು ಯಾರನ್ನೋ ರಕ್ಷಿಸಲು ಕೊಲೆಯನ್ನು ಆತ್ಮಹತ್ಯೆಯೆಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ ಎಂದು ಇನ್ನು ಕೆಲವು ಪತ್ರಿಕೆಗಳು ಆಪಾದಿಸಿದವು. ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ 1993ರ ಮಾರ್ಚ್ ಅಂತ್ಯದಲ್ಲಿ, ಅಂದರೆ ಅಭಯಾ ಸತ್ತ ಒಂದು ವರ್ಷದ ನಂತರ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತು,

1993ರ ಏಪ್ರಿಲ್ ಅಂತ್ಯದಲ್ಲಿ ಸಿಬಿಐ ಅಧಿಕಾರಿಗಳು ಪ್ರಕರಣದ ಕಡತಗಳನ್ನು ಮತ್ತು ಈ ಸಂಬಂಧ ಜಪ್ತಿಮಾಡಿದ್ದ ವಸ್ತುಗಳನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರ ಕಚೇರಿಯಿಂದ ಮುಂದಿನ ತನಿಖೆಗಾಗಿ ಪಡೆಯುವಾಗ ಅಭಯಾ ಸಾಯುವ ಸಮಯದಲ್ಲಿ ಧರಿಸಿದ್ದ ಬಟ್ಟೆಬರೆಗಳು ಮತ್ತಿತರ ವಸ್ತುಗಳು ಆ ಕಚೇರಿಯಿಂದ ಕಾಣೆಯಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿತು. ಶವದ ಮಹಜರ್ ಮಾಡುವ ಸಮಯದಲ್ಲಿ ತೆಗೆದ ಫೋಟೋಗಳೂ ಕಾಣೆಯಾಗಿದ್ದವು. ಕೆಲವು ದಾಖಲೆಗಳಲ್ಲಿ ತಿದ್ದುಪಡಿಗಳಾಗಿದ್ದದೂ ಗೋಚರಿಸಿತು. ಈ ಬಗ್ಗೆ ವಿಚಾರಿಸಿದಾಗ ಕೇರಳ ಪೊಲೀಸರು ಸಮರ್ಪಕ ಮಾಹಿತಿ ಒದಗಿಸಲಿಲ್ಲವೆಂದು ಸಿಬಿಐ ತನಿಖಾಧಿಕಾರಿ ಕೇಸ್ ಡೈರಿಯಲ್ಲಿ ನಮೂದಿಸಿದರು. ಯಾವುದೋ ಪ್ರಭಾವಕ್ಕೆ ಒಳಗಾಗಿ ಕೇರಳ ಪೊಲೀಸರು ಸಾಕ್ಷ್ಯನಾಶ ಮಾಡಿ ಆರೋಪಿಗಳನ್ನು ರಕ್ಷಿಸಲು ಹೊರಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿ ಅಭಯಾ ಪರ ಹೋರಾಡಲು ಸಂಘಟನೆಯೊಂದನ್ನು ಮಾಡಿಕೊಂಡರು.

1993ರ ಡಿಸೆಂಬರಿನಲ್ಲಿ ಸಿಬಿಐ ತನಿಖಾ ತಂಡದಲ್ಲಿದ್ದ ಅಧಿಕಾರಿ ವರ್ಗಿಸ್ ಥಾಮಸ್ ಹುದ್ದೆಗೆ ರಾಜೀನಾಮೆಯಿತ್ತರು. ಅಭಯಾ ಕೊಲೆಯಾಗಿರುವಳೆಂಬ ತೀರ್ವನಕ್ಕೆ ತಾವು ಬಂದಿದ್ದರೂ ತನಿಖೆಯ ಉಸ್ತುವಾರಿ ಹೊತ್ತಿರುವ ಎಸ್.ಪಿ ಈ ಸಾವನ್ನು ಆತ್ಮಹತ್ಯೆಯೆಂದು ಸಾಬೀತು ಮಾಡಲು ಒತ್ತಡ ಹೇರಿದ್ದರಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದರು. ಅಭಯಾಳ ತಲೆಯ ಮೇಲಾಗಿರುವ ಗಾಯಗಳನ್ನು ಗಮನಿಸಿದಾಗ ಯಾರೋ ಹಿಂದಿನಿಂದ ಬಂದು ಅವಳ ತಲೆಗೆ ಆಯುಧದಿಂದ ಪೆಟ್ಟನ್ನು ಕೊಟ್ಟಿರಬಹುದೆಂದು ನನಗನಿಸಿತು, ಎಂದವರು ಹೇಳಿದರು.

ಈ ಅಧಿಕಾರಿ ಹೇಳಿದಂತೆ ಅಭಯಾಳ ತಲೆಗೆ ಪೆಟ್ಟನ್ನು ನೀಡಿ ಕೊಲೆ ಮಾಡಿದ್ದರೆ ಅದನ್ನು ಯಾರು, ಏಕೆ ಮಾಡಿದರು ಎನ್ನುವುದನ್ನು ಅರಿಯಬೇಕಾಗಿತ್ತು. ಅಭಯಾಳಿದ್ದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯರು ಇಲ್ಲವೇ ಹಿರಿಯ ಸನ್ಯಾಸಿನಿಯರೇ ವಾಸವಾಗಿದ್ದರು. ಹೊರಗಿನವರಿಗೆ ಅಲ್ಲಿನ ಪ್ರವೇಶವು ಸುಲಭವಾಗಿರಲಿಲ್ಲ. ಒಂದು ವೇಳೆ ಒಳಗಿನವರೇ ಕೊಲೆ ಮಾಡಿದ್ದರೆ ಅದರ ಕಾರಣವೇನಿತ್ತು ಎನ್ನುವುದು ನಿಗೂಢವಾಗಿತ್ತು.

ಮುಂದಿನ ಒಂದು ವರ್ಷ ಕಾಲದ ಸಿಬಿಐ ತನಿಖೆಯಲ್ಲಿ ಯಾವ ಪ್ರಗತಿಯೂ ಕಾಣಲಿಲ್ಲ. ಈ ಅವಧಿಯಲ್ಲಿ ಮೂರು ಜನ ತನಿಖಾಧಿಕಾರಿಗಳು ಬಂದು ಹೋದರು. ಅವರಲ್ಲೊಬ್ಬರು ಬಾವಿಯಲ್ಲಿ ಯಾರಾದರೂ ಧುಮುಕಿದರೆ ಅವರ ತಲೆಗೆ ಅಭಯಾಳಿಗಾದಂತಹ ಪೆಟ್ಟುಗಳು ಸಂಭವಿಸಬಹುದೇ ಎನ್ನುವುದನ್ನು ಪರಿಶೀಲಿಸಲು 1995ರ ಏಪ್ರಿಲ್​ನಲ್ಲಿ ಕೊಟ್ಟಾಯಂಗೆ ರಾಜಸ್ಥಾನದಿಂದ ವಿಧಿ ವಿಜ್ಞಾನ ತಜ್ಞರ ತಂಡ ಕರೆಸಿದರು. ಆ ತಂಡವು ಅಭಯಾಳ ಎತ್ತರ, ಗಾತ್ರ ಮತ್ತು ತೂಕವನ್ನು ಹೋಲುವ ಬೊಂಬೆ ತಯಾರಿಸಿ ಕಾನ್ವೆಂಟಿನ ಬಾವಿಗೆ ಎಸೆದು ಪರೀಕ್ಷೆಗಳನ್ನು ಮಾಡಿತು. ಆನಂತರ ಆ ತಂಡವು ಅಭಯಾಳ ಸಾವು ಆತ್ಮಹತ್ಯೆಯಲ್ಲ, ಕೊಲೆಯೇ ಎಂಬ ಆಭಿಪ್ರಾಯಕ್ಕೆ ಬಂದು ಅಂತೆಯೇ ವರದಿಯನ್ನು ತನಿಖಾಧಿಕಾರಿಗೆ ನೀಡಿತು.

(ಮುಂದುವರಿಯುವುದು)

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net