ಕೊಲೆಗೆ ಕಾರಣವಾದ ಅಸೂಯೆ: ಆ ಕ್ಷಣ...

Aa kshana
Published on
ಬೆಂಗಳೂರಿನ ಪೊಲೀಸ್ ಆಯುಕ್ತರ ಮುಂದೆ ಶರಣಾಗಲು ಅವಕಾಶವು ಸಿಗದಿದ್ದಾಗ ಮುಂದೇನು ಮಾಡಬೇಕೆಂದು ಸುಶೀಲ್​ನ ವಕೀಲರು ಯೋಚಿಸುತ್ತಿದ್ದರು. ಅಷ್ಟರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಇನ್ಸ್​ಪೆಕ್ಟರ್ ಒಬ್ಬರು ಶರ್ವನ ಬಳಿ ಬಂದು, ‘ನೀವು ಬೆಂಗಳೂರಿನ ನ್ಯಾಯಾಲಯದಲ್ಲಿ ಶರಣಾಗಲು ಬಂದಾಗ ನಾನಲ್ಲಿಯೇ ಇದ್ದೆ. ನಿಮ್ಮ ಅರ್ಜಿ ತಿರಸ್ಕೃತಗೊಂಡ ನಂತರ ನಿಮ್ಮನ್ನು ಹಿಂಬಾಲಿಸಿಕೊಂಡು ನಾನು ಇಲ್ಲಿಗೆ ಬಂದೆ. ನಾನು ನನ್ನ ಮೇಲಧಿಕಾರಿಯೊಡನೆ ಮಾತನಾಡಿದ್ದೇನೆ. ನಿಮ್ಮನ್ನು ಹೊಸಕೋಟೆಯ ನ್ಯಾಯಾಲಯದಲ್ಲಿ ಶರಣಾಗಿಸುತ್ತೇನೆ. ನನ್ನ ಜತೆ ಬನ್ನಿ’ ಎಂದು ಹೇಳಿ ತಮ್ಮೊಡನೆ ಅವರನ್ನು ಹೊಸಕೋಟೆಗೆ ಕರೆದುಕೊಂಡು ಹೋದರು. ಅಲ್ಲಿ ಶರ್ವನನ್ನು ತಮ್ಮ ವಶಕ್ಕೆ ತೆಗೆದುಕೊಂಡಂತೆ ಮಾಹಿತಿಯನ್ನು ದೆಹಲಿ ಪೊಲೀಸರಿಗೆ ರವಾನಿಸಿದರು. ನಂತರ ಈ ಮಾಹಿತಿಯನ್ನು ಮಾಧ್ಯಮದವರಿಗೂ ಕೊಟ್ಟರು. ಕೂಡಲೇ ಪ್ರಕರಣದ ತನಿಖಾಧಿಕಾರಿ ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಧಾವಿಸಿ ಶರ್ವನನ್ನು ತಮ್ಮ ವಶಕ್ಕೆ ಕೊಡಬೇಕೆಂದು ಹೊಸಕೋಟೆಯ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದರು.

ನ್ಯಾಯಾಧೀಶರು ಜುಲೈ 22ರವರೆಗೆ ಶರ್ವನನ್ನು ದೆಹಲಿ ಪೊಲೀಸರ ವಶಕ್ಕೆ ಕೊಟ್ಟ ನಂತರ ಅವನ ಸೂಚನೆಯ ಮೇರೆಗೆ ಅವನಿದ್ದ ಬೆಂಗಳೂರಿನ ಹೋಟೆಲ್ ಕೋಣೆಗೆ ಹೋಗಿ ಅವನ ಬ್ರೀಫ್ ಕೇಸ್ ಮತ್ತು ರಿವಾಲ್ವರನ್ನು ವಶಪಡಿಸಿಕೊಂಡು ಅವನನ್ನು ವಿಮಾನದಲ್ಲಿ ದೆಹಲಿಗೆ ಕರೆತರಲಾಯಿತು. ಜುಲೈ 13ರ ಬೆಳಗಿನಿಂದ ದೆಹಲಿ ಪೊಲೀಸರು ಶರ್ವನ ವಿಚಾರಣೆಯನ್ನಾರಂಭಿಸಿದರು. ಆತ ಪೊಲೀಸರು ಕೇಳಿದ ಯಾವುದೇ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರಗಳನ್ನು ಕೊಡದೆ ಸುಳ್ಳು ಹೇಳುತ್ತಿದ್ದ. ಅವನನ್ನು ಬೆದರಿಸಿದಾಗ ತಾನು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಮರುಬೆದರಿಕೆಯನ್ನು ಹಾಕಿದ. ಅವನ ವಿಚಾರಣೆಯನ್ನು ಮಾಡುತ್ತಿದ್ದ ತಂಡ ಗಾಬರಿಗೊಂಡು ಆತನ ಕೈಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ವಸ್ತುವೂ ಸಿಗದಂತೆ ಎಚ್ಚರಿಕೆಯನ್ನು ವಹಿಸಿತು.

ದೆಹಲಿ ಪೊಲೀಸರ ಮುಂದೆ ಕಡೆಗೂ ಬಾಯ್ಬಿಟ್ಟ ಸುಶೀಲ್ ಹೀಗೆಂದ: ನಮ್ಮ ಮದುವೆಯಾದ ನಂತರ ನೈನಾ ತನ್ನ ಹಳೆಯ ಪ್ರೇಮಿ ಮತ್​ಲೂಬ್ ಕರೀಂನ ಜೊತೆ ಸಂಪರ್ಕವನ್ನು ಮುಂದುವರಿಸಿದ್ದುದನ್ನು ಕಂಡು ನನಗೆ ಕೋಪ ಬಂದಿತ್ತು. ಅವನಿಂದ ದೂರವಿರಲು ನಾನು ಅವಳಿಗೆ ಎಷ್ಟು ಬಾರಿ ತಾಕೀತು ಮಾಡಿದರೂ ಆಕೆ ಕರೀಂ ಜತೆಗಿನ ಸಂಪರ್ಕವನ್ನು ಮುಂದುವರಿಸಿದ್ದಳು. ನಾನು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಆಕೆ ಕರೀಂನ ಮೇಲೆ ಸುರಿಯುತ್ತಿ್ತದ್ದಾಳೆ ಎಂದು ಗೊತ್ತಾದಾಗ ನನಗೆ ಅವಳ ಮೇಲೆ ತಡೆಯಲಾರದ ಸಿಟ್ಟು ಬಂದಿತ್ತು.

ಜುಲೈ 2ರ ರಾತ್ರಿ ನಾನು ಮನೆಗೆ ಬಂದ ಕೂಡಲೇ ನೈನಾ ಸಿಡುಕು ಮುಖದಲ್ಲಿ ನನ್ನನ್ನು ಎದುರುಗೊಂಡಳು. ಆಗ ಆಕೆ ವೋದ್ಕಾ ಕುಡಿಯುತ್ತಿದ್ದಳು. ನಾನೂ ಒಂದು ಪೆಗ್ ವಿಸ್ಕಿಯನ್ನು ಹಾಕಿಕೊಂಡು ಅವಳೆದುರು ಕುಳಿತೆ. ನಾವಿಬ್ಬರೂ ಮೌನವಾಗಿ ಡ್ರಿಂಕ್ ಸೇವಿಸತೊಡಗಿದವು. ನಾನಿಲ್ಲದಾಗ ಆಕೆ ಕರೀಂನನ್ನು ಸಂರ್ಪಸಿದಳೇ ಎಂದು ತಿಳಿಯಲು ನಾನು ಮನೆಯ ಲ್ಯಾಂಡ್​ಲೈನ್ ಟೆಲಿಫೋನ್​ನಿಂದ ಕಟ್ಟಕಡೆಗೆ ಹೋಗಿದ್ದ ನಂಬರಿಗೆ ರೀಡಯಲ್ ಮಾಡಿದೆ. ಎರಡು ರಿಂಗ್ ಆದ ಕೂಡಲೇ ಹಲೋ ಎಂದು ಉತ್ತರಬಂದಾಗ ಉತ್ತರಿಸಿದ ವ್ಯಕ್ತಿ ಮತಲೂಬ್ ಕರೀಂ ಎಂದು ಕೂಡಲೇ ಗುರುತಿಸಿ ರಿಸೀವರ್ ಕೆಳಗಿಟ್ಟೆ. ‘ನೀನು ಇನ್ನೂ ಮತ್​ಲೂಬ್​ನ ಜೊತೆಯ ಸಂಪರ್ಕವನ್ನು ಏಕೆ ಕಡಿತಗೊಳಿಸಲಿಲ್ಲ?’ ಎಂದು ನಾನು ನೈನಾಳನ್ನು ಕೋಪದಿಂದ ಕೇಳಿದೆ. ‘ನಾನು ನನಗಿಷ್ಟಬಂದಂತೆ ಮಾಡುವೆ. ನನ್ನ ಖಾಸಗಿ ಜೀವನದಲ್ಲಿ ಮೂಗು ತೂರಿಸಲು ನಿನಗೆ ಯಾವ ಹಕ್ಕೂ ಕೊಟ್ಟಿಲ್ಲ’ ಎಂದಾಕೆ ದಿಮಾಕಿನ ಉತ್ತರವನ್ನು ಕೊಟ್ಟಳು. ಆಗ ನನ್ನ ಕೋಪ ನೆತ್ತಿಗೇರಿತು. ಆಕೆ ಪಾನಮತ್ತಳಾಗಿದ್ದರಿಂದ ಅವಳಿಗೆ ಬುದ್ಧಿ ಕಲಿಸಲು ಅದೇ ಸೂಕ್ತ ಸಮಯವೆಂದು ನನಗನಿಸಿತು.

ನಾನು ನಮ್ಮ ಬೆಡ್ ರೂಮಿಗೆ ಹೋಗಿ ಕಪಾಟಿನಲ್ಲಿದ್ದ ನನ್ನ ರಿವಾಲ್ವರ್ ತೆಗೆದು ಅದರಲ್ಲಿ ಗುಂಡುಗಳನ್ನು ತುಂಬಿಸಿದೆ. ಅಷ್ಟರಲ್ಲಿ ನೈನಾಳೂ ಕೋಣೆಗೆ ಬಂದು ಹಾಸಿಗೆಯ ಮೇಲೆ ಕುಳಿತಳು. ನಾನು ಅವಳ ತಲೆಯತ್ತ ಆ ರಿವಾಲ್ವರ್ ಗುರಿ ಮಾಡಿ ಪದೇಪದೆ ಟ್ರಿಗರ್ ಎಳೆದೆ. ನೈನಾ ಕೂಡಲೇ ಕುಸಿದು ಸತ್ತು ಬಿದ್ದಳು. ಅಕೆಯ ದೇಹದಿಂದ ಧಾರಾಕಾರವಾಗಿ ರಕ್ತದ ಕೋಡಿ ಹರಿಯತೊಡಗಿತು.

ನೈನಾಳ ಶವವನ್ನು ದೆಹಲಿಯಲ್ಲಿಯೇ ಹರಿಯುವ ಯಮುನಾ ನದಿಯಲ್ಲಿ ಎಸೆಯಬೇಕೆಂದು ಹಾಸಿಗೆಯ ಬೆಡ್​ಶೀಟ್​ನಿಂದಲೇ ಅವಳ ಶವವನ್ನು ಸುತ್ತಿ ಅನಂತರ ಡೈನಿಂಗ್ ಟೇಬಲ್​ನ ಮೇಲೆ ಹಾಸಿದ್ದ ದಪ್ಪ ಪ್ಲಾಸ್ಟಿಕ್ ಹಾಳೆಯಲ್ಲಿ ಬೆಡ್​ಶೀಟ್​ನಲ್ಲಿ ಶವವನ್ನು ಸುತ್ತಿದೆ. ರಕ್ತಹತ್ತಿದ್ದ ನನ್ನ ಬಟ್ಟೆಗಳನ್ನು ಬದಲಿಸಿದೆ. ನಂತರ ಆ ಮೂಟೆಯನ್ನು ನನ್ನ ಮಾರುತಿ ಕಾರಿನಲ್ಲಿ ಹಾಕಿಕೊಂಡು ಯಮುನಾ ನದಿ ಸೇತುವೆಗೆ ಹೋದೆ. ಅಲ್ಲಿ ವಾಹನ ಸಂಚಾರ ತುಂಬಾ ಜಾಸ್ತಿಯಾಗಿದ್ದು ಕಾರನ್ನು ನಿಲ್ಲಿಸಲಾಗಲಿಲ್ಲ. ಆಗ ನಾನು ಶವವನ್ನು ನನ್ನದೇ ಆದ ಬಗಿಯಾ ರೆಸ್ಟೋರೆಂಟ್​ಗೆ ತೆಗೆದುಕೊಂಡು ಬಂದು ಅಲ್ಲಿ ಅದನ್ನು ಸುಟ್ಟೆ. ಪೊಲೀಸರು ಅಲ್ಲಿಗೆ ಬಂದಾಗ ನಾನು ಅವರಿಗೆ ಕಾಣದಂತೆ ಹೊರಟು ನನ್ನ ಮನೆಗೆ ವಾಪಸಾದೆ. ಮನೆಯಲ್ಲಿ ನನ್ನ ಬಟ್ಟೆಬರೆಗಳು, ಹಣ ಮತ್ತಿತರ ಅವಶ್ಯಕ ವಸ್ತುಗಳನ್ನು ತೆಗೆದುಕೊಂಡು ಹೊರಬಂದು ಕಾರಿನಲ್ಲಿ ಕುಳಿತೆ. ಮುಂದೇನು ಮಾಡಬೇಕೆಂದು ಯೋಚಿಸಿದಾಗ ನನ್ನ ಮಿತ್ರರಾದ ಗುಜರಾತ್ ಕೇಡರ್ ಐಎಎಸ್ ಅಧಿಕಾರಿ ಡಿ.ಕಿಶೋರ್ ರಾವ್ ದೆಹಲಿಯದ್ದಾರೆಂದು ತಿಳಿದಿತ್ತು. ನಾನು ಅವರು ಇಳಿದುಕೊಂಡಿದ್ದ ಗುಜರಾತ್ ಭವನಕ್ಕೆ ಹೋದೆ. ಆಗ ರಾತ್ರಿ 2 ಗಂಟೆಯಾಗಿತ್ತು. ರಾವ್​ಗೆ ನಾನು ತೀವ್ರ ತೊಂದರೆಯಲ್ಲಿರುವುದಾಗಿ ಹೇಳಿ ಅಲ್ಲಿದ್ದ ಮಂಚದ ಮೇಲೆ ಮಲಗಿದೆ. ನಿದ್ರೆ ಬರಲಿಲ್ಲ. ಬೆಳಗಿನ 4.30ಕ್ಕೆ ಎದ್ದ ರಾವ್ ಅಹ್ಮದಾಬಾದಿಗೆ ಹೊರಡಲು ತಯಾರಾದರು. ಆ ರೂಮನ್ನು ಇನ್ನು ಎರಡು ದಿನಗಳವರೆಗೆ ನನ್ನ ಸ್ನೇಹಿತ ಹಾಗೂ ಅಂತರರಾಷ್ಟ್ರೀಯ ಕುಸ್ತಿ ಪಟು ಜಯಪ್ರಕಾಶ್​ನ ಹೆಸರಿನಲ್ಲಿ ಬುಕ್ ಮಾಡಲು ಅವರನ್ನು ಕೋರಿದಾಗ ಅವರು ಒಪ್ಪಿ ಹಾಗೆಯೇ ಮಾಡಿಸಿದರು. ಅವರು ಹೋದ ನಂತರ ನಾನು ಜಯಪ್ರಕಾಶ್​ನನ್ನು ಅಲ್ಲಿಗೆ ಕರೆಸಿ ಅವನಿಗೆ ನಡೆದ ವಿಷಯವನ್ನು ತಿಳಿಸಿದೆ.

ಜಯಪ್ರಕಾಶ್ ನನ್ನ ಕಾರನ್ನು ಗುಜರಾತ್ ಭವನದ ಆವರಣದಿಂದ ಕೂಡಲೇ ಹೊರಗೆ ತೆಗೆಯಬೇಕೆಂದು ಸೂಚಿಸಿದಾಗ ನಾನು ನನ್ನ ಕಾರನ್ನು ಭವನದಿಂದ ಹೊರತೆಗೆದೆ. ನನ್ನ ಹಿಂದೆ ಜಯಪ್ರಕಾಶ್ ತನ್ನ ಕಾರನ್ನು ಓಡಿಸಿಕೊಂಡು ಬಂದ. ನಾವಿಬ್ಬರೂ ಮಾಲ್ಚಾ ಮಾರ್ಗ್ ತಲುಪಿದ ನಂತರ ನಾನು ಕಾರಿನಿಂದಿಳಿದು ಅದನ್ನು ಅಲ್ಲಿಯೇ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಒಂದು ಟ್ಯಾಕ್ಸಿ ತೆಗೆದುಕೊಂಡು ಗೀತಾ ಕಾಲೋನಿಗೆ ಹೋಗಿ ನನ್ನ ಉದ್ದಿಮೆ ಪಾಲುದಾರನಾಗಿದ್ದ ಸಚದೇವನ ಮನೆಗೆ ಹೋದೆ. ಅವನಿಗೆ ನಡೆದ ಘಟನೆಯನ್ನು ವಿವರಿಸಿದೆ. ಅಷ್ಟರಲ್ಲಾಗಲೇ ಪೊಲೀಸರು ನನ್ನ ಬಗ್ಗೆ ಪ್ರಶ್ನಿಸಲು ಅವನನ್ನು ಕರೆದಿದ್ದರು. ಆಗಲೇ ಪೊಲೀಸರು ನನ್ನನ್ನು ತೀವ್ರವಾಗಿ ಹುಡುಕತೊಡಗಿದ್ದಾರೆ ಎಂದು ನನಗರಿವಾಯಿತು. ಹೆದರಿದ ನಾನು ಅಲ್ಲಿಂದ ಗುಜರಾತ್ ಭವನಕ್ಕೆ ವಾಪಸಾಗಿ ರಕ್ತ ಹತ್ತಿದ್ದ ನನ್ನ ಬಟ್ಟೆಗಳನ್ನು ತೊಳೆದು ಸ್ನಾನ ಮಾಡಿದೆ. ಒದ್ದೆ ಬಟ್ಟೆಗಳನ್ನು ಪ್ಲಾಸ್ಟಿಕ್ ಬ್ಯಾಗೊಂದರಲ್ಲಿ ಹಾಕಿ ಆ ಬ್ಯಾಗನ್ನು ಗುಜರಾತ್ ಭವನದ ಹೊರಗೆ ಇದ್ದ ಒಂದು ಕಲ್ಲು ಬಂಡೆಯ ಕೆಳಗೆ ಅಡಗಿಸಿದೆ. ನೈನಾಳ ದೇಹವನ್ನು ಸುಡುವಾಗ ಸುಟ್ಟಿದ್ದ ನನ್ನ ಕುರ್ತಾ ಪೈಜಾಮಗಳನ್ನು ಇನ್ನೊಂದು ಬ್ಯಾಗಿನಲ್ಲಿ ಹಾಕಿಕೊಂಡು ಮಧ್ಯಾಹ್ನ ಗುರುಗ್ರಾಮಕ್ಕೆ ಹೋಗಿ ಅಲ್ಲಿಂದ ಟ್ಯಾಕ್ಸಿ ಹಿಡಿದು ಜೈಪುರಕ್ಕೆ ಹೋದೆ. ಹೆದ್ದಾರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಪಕ್ಕದಲ್ಲಿದ್ದ ಪೊದೆಗಳ ಹಿಂದೆ ಬಟ್ಟೆಗಳಿದ್ದ ಬ್ಯಾಗನ್ನು ಎಸೆದೆ.

ನಾನು ಜೈಪುರದಲ್ಲಿ ಆ ರಾತ್ರಿ ತಂಗಿ ಮಾರನೆಯ ಬೆಳಿಗ್ಗೆ ಮುಂಬೈಗೆ ಹೋದೆ. ಅಲ್ಲಿಂದ ಡಿ.ಕೆ.ರಾವ್​ಗೆ ಕರೆ ಮಾಡಿದೆ. ನೀನು ಪೊಲೀಸರಿಗೆ ಕೂಡಲೇ ಶರಣಾಗುವುದು ಸೂಕ್ತ. ನನಗೆ ಇನ್ನು ಮುಂದೆ ಕರೆ ಮಾಡಬೇಡ ಎಂದವರು ಫೋನ್ ಕೆಳಗಿಟ್ಟರು. ಅದೇ ಸಂಜೆ ನಾನು ಮದ್ರಾಸ್​ಗೆ ಹೋಗಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಸಹಾಯದಿಂದ ವಕೀಲರನ್ನು ಭೇಟಿ ಮಾಡಿ ಜಾಮೀನು ಅರ್ಜಿಯನ್ನು ಹಾಕಿದೆ. ನಂತರ ನಾನು ತಿರುಪತಿಗೆ ಹೋಗಿ ತಲೆಕೂದಲ ಮುಡಿ ಕೊಟ್ಟು ಮದ್ರಾಸ್​ಗೆ ವಾಪಸಾಗಿ ನಿರೀಕ್ಷಣಾ ಜಾಮೀನನ್ನು ಪಡೆದೆ. ಆದರೆ ಆ ಜಾಮೀನು ದಾಖಲೆಗೆ ಸಹಿ ಮಾಡಲು ಇಬ್ಬರು ಜಾಮೀನುದಾರರು ಸಿಗಲಿಲ್ಲ. ಮುಂದೆ ನನ್ನ ವಕೀಲರ ಸಲಹೆಯ ಮೇರೆಗೆ ಶರಣಾಗಲು ಬೆಂಗಳೂರಿಗೆ ಬಂದೆ. ಮುಂದೇನಾಯಿತು ಎನ್ನುವುದು ನಿಮಗೇ ತಿಳಿದಿದೆ.

ಶರ್ಮಾ ಪೊಲೀಸರನ್ನು ಗುಜರಾತ್ ಭವನಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದ ಬಂಡೆಯೊಂದರ ಹಿಂದೆ ತನ್ನ ರಕ್ತಸಿಕ್ತ ಬಟ್ಟೆಗಳನ್ನು ಅಡಗಿಸಿಟ್ಟಿದ್ದ ಜಾಗವನ್ನು ತೋರಿಸಿದ. ಒಂದು ಕರಿಯ ಬಣ್ಣದ ಪಾಲಿಥೀನ್ ಬ್ಯಾಗಿನಲ್ಲಿ ಒಂದು ಕುರ್ತಾ ಮತ್ತು ಪೈಜಾಮವಿದ್ದು ಪೈಜಾಮದ ಪಾಕೆಟ್​ನಲ್ಲಿ ಶರ್ಮನ ವಿಸಿಟಿಂಗ್ ಕಾರ್ಡ್ ಮತ್ತು ಕೆಲವು ಕಾಗದ ಪತ್ರಗಳಿದ್ದವು. ನಂತರ ಆತ ಪೊಲೀಸರನ್ನು ಜೈಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಕರೆದುಕೊಂಡು ಹೋಗಿ ಅಲ್ಲಿ ಎಸೆದಿದ್ದ ತನ್ನ ಇನ್ನೊಂದು ಕುರ್ತಾ ಪೈಜಾಮವನ್ನು ತೋರಿಸಿದ. ತನ್ನ ಅಪಾರ್ಟ್​ವೆುಂಟ್​ಗೆ ಮತ್ತು ಬಗಿಯಾ ರೆಸ್ಟೊರೆಂಟಿಗೆ ಪೊಲೀಸರನ್ನು ನಂತರ ಕರೆದುಕೊಂಡು ಹೋದ ಶರ್ಮಾ ತಾನು ಕೃತ್ಯವನ್ನು ಹೇಗೆ ಮಾಡಿದ್ದಾಗಿ ವಿವರಿಸಿದ.

ಏತನ್ಮಧ್ಯೆ ದೊಡ್ಡ ಸಮಸ್ಯೆಯೊಂದು ಪೊಲಿಸರಿಗೆ ಎದುರಾಗಿತ್ತು. ಜುಲೈ 7ರಂದು ನೈನಾಳ ದೇಹದ ಮೇಲೆ ಮರಣೋತ್ತರ ಪರೀಕ್ಷೆ ಮಾಡಿದ್ದ ವೈದ್ಯ ಡಾ.ಸಾರಂಗಿ ನ್ಯೂಸ್ ಟ್ರಾಕ್ ಎನ್ನುವ ಟೆಲಿವಿಷನ್ ವಾಹಿನಿಗೆ ಸಂದರ್ಶನವನ್ನು ಕೊಟ್ಟು ಪೋಸ್ಟ್ ಮಾರ್ಟಂ ವಿವರಗಳನ್ನು ನೀಡಿದರು. ನೈನಾಳ ಕಾಲುಗಳನ್ನು ಹಾಗೂ ಕೈಗಳನ್ನು ಸಾಯುವ ಮೊದಲೇ ಕತ್ತರಿಸಲಾಗಿತ್ತು ಎಂದವರು ತಿಳಿಸಿದರು. ತಾವು ಪೊಲೀಸರಿಗೆ ಪೋಸ್ಟ್ ಮಾರ್ಟಂ ವರದಿ ಕೊಡುವ ಮೊದಲೇ ಈ ಸಂದರ್ಶನವನ್ನು ಅವರು ಕೊಟ್ಟಿದ್ದು ಅನೈತಿಕವಾಗಿದ್ದು ವೈದ್ಯರ ವೃತ್ತಿ ಸಂಹಿತೆಗೆ ವ್ಯತಿರಿಕ್ತವಾಗಿತ್ತು. ಮಾರನೆಯ ದಿನ ಪೊಲೀಸರಿಗೆ ಮರಣೋತ್ತರ ವರದಿಯು ತಲುಪಿತು. ಅದರಲ್ಲಿ ಭಾರಿ ಗಾಯವಾದ ಪರಿಣಾಮವಾಗಿ ಸಾವು ಸಂಭವಿಸಿದೆ; ದೇಹದ ಕೈಕಾಲುಗಳನ್ನು ಕತ್ತರಿಸಲಾಗಿದೆ; ನೈನಾ ಸತ್ತ ನಂತರ ದೇಹವನ್ನು ಸುಡುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಡಾ.ಸಾರಂಗಿ ಬರೆದಿದ್ದರು.

(ಮುಂದುವರಿಯುವುದು)

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net