ಸಮಚಿತ್ತವಿಲ್ಲದೆ ಬಂದ ಸಂಕಟ; ಆ ಕ್ಷಣ...

Aa Kshana
Published on
ಮಂಗಳೂರು ಹೊರವಲಯದಲ್ಲಿರುವ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2020ರ ಜನವರಿ 20ರ ಮುಂಜಾನೆ ಒಬ್ಬ ವ್ಯಕ್ತಿ ಆಗಮಿಸಿದ. ಆತ ವಿಮಾನ ನಿಲ್ದಾಣದೊಳಗೆ ಹೋಗುವ ಗೇಟಿನ ಹೊರಗೆ ಹಾಕಿದ್ದ ಕುರ್ಚಿಯೊಂದರ ಮೇಲೆ ಕುಳಿತ. ತನ್ನ ಬೆನ್ನಿಗೆ ಹಾಕಿದ್ದ ಲ್ಯಾಪ್​ಟಾಪ್ ಬ್ಯಾಗನ್ನು ಹೊರತೆಗೆದು ಪಕ್ಕದ ಕುರ್ಚಿಯ ಮೇಲಿಟ್ಟ. ಒಂದು ನಿಮಿಷದ ತರುವಾಯ ಮೇಲಕ್ಕೆದ್ದು ಎಲ್ಲಿಗೋ ಹೋದ. ಕುರ್ಚಿಯ ಮೇಲೆಯೇ ಬಿಟ್ಟಿದ್ದ ಆತನ ಬ್ಯಾಗನ್ನು ಅಲ್ಲಿಯೇ ಇದ್ದ ಸಿಐಎಸ್​ಎಫ್​ನ ಕಾನ್​ಸ್ಟೆಬಲ್ ಮಾನಸ್ ನಾಯಕ್ ಗಮನಿಸಿದ.

ಬ್ಯಾಗನ್ನಿಟ್ಟಿದ್ದ ವ್ಯಕ್ತಿ ಹತ್ತು ನಿಮಿಷದ ತರುವಾಯವೂ ಬಾರದಿದ್ದಾಗ ನಾಯಕ್ ವಿಮಾನ ನಿಲ್ದಾಣದ ಸಿಐಎಸ್​ಎಫ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬ್ಯಾಗ್ ಬಗ್ಗೆ ತಿಳಿಸಿದ. ತಕ್ಷಣ ಹಿರಿಯ ಭದ್ರತಾ ಸಿಬ್ಬಂದಿ ಶ್ವಾನದಳದೊಂದಿಗೆ ಸ್ಥಳಕ್ಕೆ ಬಂದರು. ಶ್ವಾನವು ಬ್ಯಾಗನ್ನು ಮೂಸಿದ ಕೂಡಲೇ ಬೊಗಳತೊಡಗಿದಾಗ ಆ ಬ್ಯಾಗಿನಲ್ಲಿ ಸ್ಪೋಟಕ ವಸ್ತುವಿರುವ ಬಗ್ಗೆ ಅನುಮಾನ ಮೂಡಿತು.

ಕೂಡಲೇ ಸಿಐಎಸ್​ಎಫ್​ನ ಸಿಬ್ಬಂದಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲಿದ್ದ ಜನರನ್ನು ದೂರ ಸರಿಸಿ ಬಾಂಬ್ ನಿಷ್ಕಿ ್ರು ದಳವನ್ನು ಕರೆಸಲಾಯಿತು. ಈ ದಳದ ಸದಸ್ಯರು ಅಲ್ಲಿಗೆ ಬಂದು ಬ್ಯಾಕ್​ಪ್ಯಾಕನ್ನು ಸೂಕ್ಷ್ಮವಾಗಿ ಮೇಲೆತ್ತಿ ಅದನ್ನು ಎಕ್ಸರೇ ಮಷಿನ್​ಗೆ ಹಾಕಿದಾಗ ಅದರಲ್ಲಿ ಸ್ಪೋಟಕ ಮತ್ತು ಟೈಮರ್ ಇದ್ದದ್ದು ಕಂಡಿತು, ಆದರೆ ಟೈಮರನ್ನು ಬಾಂಬಿಗೆ ಜೋಡಿಸಿರಲಿಲ್ಲವಾದ್ದರಿಂದ ಯಾವ ವೇಳೆಗೆ ಬಾಂಬ್ ಸಿಡಿಯಬೇಕೆಂದು ನಿರ್ಧಾರವಾಗಿರಲಿಲ್ಲ ಎಂದು ತಿಳಿಯಿತು. ನಂತರ ಆ ಬ್ಯಾಗನ್ನು ಒಂದು ವಿಶೇಷ ವಾಹನದಲ್ಲಿಟ್ಟು ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಒಯ್ದು ಅದನ್ನಲ್ಲಿ ಸ್ಪೋಟಿಸಲಾಯಿತು.

ಏತನ್ಮಧ್ಯೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಆತಂಕವಾದಿ ನಿಗ್ರಹ ಪ್ರಕರಣಗಳ ಕಾಯ್ದೆ ಹಾಗೂ ಸ್ಪೋಟಕ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಾಯಿತು. ತನಿಖಾಧಿಕಾರಿ ಸಿಸಿಟಿವಿಗಳಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲಿಸಿದರು. ಸುಮಾರು 5 ಅಡಿ 7 ಅಂಗುಲ ಎತ್ತರವಿದ್ದ 35-36 ವರ್ಷದ ವಯಸ್ಸಿನ ಬಿಳಿಯ ಬಣ್ಣದ ಒಬ್ಬ ವ್ಯಕ್ತಿ ಸೀಟಿನ ಮೇಲೆ ಬ್ಯಾಗನ್ನು ಬಿಟ್ಟು ಆಟೋವೊಂದರಲ್ಲಿ ಹೊರಟು ಹೋಗಿದ್ದು ದಾಖಲಾಗಿತ್ತು. ಆಟೋದ ನಂಬರ್ ದಾಖಲಾಗಿರಲಿಲ್ಲ. ಅಲ್ಲದೆ ಆ ವ್ಯಕ್ತಿಯ ಮುಖವೂ ಸ್ಪಷ್ಟವಾಗಿ ಕಂಡುಬರುತ್ತಿರಲಿಲ್ಲ. ಪ್ರಕರಣದ ತನಿಖಾಧಿಕಾರಿ ಎಸಿಪಿ ಬೆಳ್ಳಿಯಪ್ಪ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ಎಲ್ಲ ಆಟೋ ಚಾಲಕರನ್ನು ಸಂರ್ಪಸಿದರಲ್ಲದೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ವ್ಯಕ್ತಿಯ ಚಿತ್ರದ ಪ್ರತಿಗಳನ್ನು ಮಾಡಿಸಿ ಆತ ಯಾರು ಎಂದು ತಿಳಿಯಲು ಮಾಧ್ಯಮಗಳಿಗೆ ಹಾಗೂ ಸ್ಥಳೀಯ ಕೇಬಲ್ ವಾಹಿನಿಗಳಿಗೆ ಹಂಚಿದರು.

ಅದೇ ಮಧ್ಯಾಹ್ನ 2.45ಕ್ಕೆ ಮಂಗಳೂರಿನ ಏರ್​ಪೋರ್ಟ್ ಮ್ಯಾನೇಜರಿನ ಮೊಬೈಲ್ ಫೋನಿಗೆ ಕರೆಯೊಂದು ಬಂದಿತು. ಕರೆ ಮಾಡಿದಾತ ಮಂಗಳೂರನ್ನು ಕೆಲವೇ ನಿಮಿಷಗಳ ಬಳಿಕ ಬಿಡುತ್ತಿರುವ ಇಂಡಿಗೋ ವಿಮಾನದಲ್ಲಿ ತಾನು ಬಾಂಬನ್ನಿಟ್ಟಿರುವುದಾಗಿ ತಿಳಿಸಿದ. ಕೂಡಲೇ ಏರ್​ಪೋರ್ಟ್ ಮ್ಯಾನೇಜರ್ ಪೊಲೀಸರಿಗೆ ಸೂಚನೆಯನ್ನು ನೀಡಿದರು. ಪೊಲೀಸರು ಕಾಲ್ ಟ್ರೇಸ್ ಮಾಡಿ ಅದು ಮಲ್ಪೆಯಿಂದ ಬಂದಿತ್ತೆಂದು ಪತ್ತೆಮಾಡಿ ಅಲ್ಲಿಗೆ ಧಾವಿಸಿದರು. ಆದರೆ ಆ ಫೋನ್ ಸ್ವಿಚ್ ಆಫ್ ಆಗಿದ್ದು ಆರೋಪಿ ಪತ್ತೆಯಾಗಲಿಲ್ಲ.

ಅದೇ ರಾತ್ರಿ ಸುಮಾರು 7 ಗಂಟೆಗೆ ಪೊಲೀಸರಿಗೆ ಒಂದು ಫೋನ್ ಕರೆ ಬಂದಿತು. ಕರೆ ಮಾಡಿದಾತ ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿ ತನ್ನ ಸೋದರ ಆದಿತ್ಯ ಎಂದು ಹೇಳಿದ್ದಲ್ಲದೆ ಆದಿತ್ಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ತಾನು ಬಾಂಬ್ ಇಟ್ಟಿರುವುದಾಗಿ ಬೆದರಿಸಿದ್ದ ಎಂಬ ಮಾಹಿತಿಯನ್ನಿತ್ತ. ತನಿಖಾಧಿಕಾರಿ ಬೆಳ್ಳಿಯಪ್ಪ ಆತನನ್ನು ಇನ್ನಷ್ಟು ವಿಚಾರಿಸಿದಾಗ ಬೆದರಿಕೆಯ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಆದಿತ್ಯನನ್ನು ಬಂಧಿಸಿ ನಂತರದ ನ್ಯಾಯಾಲಯದ ವಿಚಾರಣೆಯಲ್ಲಿ ಆದಿತ್ಯ ಒಂದು ವರ್ಷ ಕಾರಾಗೃಹದಲ್ಲಿದ್ದು ಇತ್ತೀಚಿಗಷ್ಟೆ ಬಿಡುಗಡೆಗೊಂಡಿದ್ದ ಎಂದು ತಿಳಿಯಿತು.

ಶಂಕಿತ ಆರೋಪಿ ಆದಿತ್ಯ ಸುಮಾರು 36 ವರ್ಷದವನಾಗಿದ್ದು ಅವಿವಾಹಿತನಾಗಿರುವುದಾಗಿಯೂ ಆತ ಇಂಜಿನಿಯರಿಂಗ್ ಪಡೆದ ನಂತರ ಹಲವಾರು ಜಾಗಗಳಲ್ಲಿ ನೌಕರಿ ಮಾಡಿ ಯಾವ ಜಾಗದಲ್ಲಿಯೂ ಹೆಚ್ಚು ಕಾಲ ಕೆಲಸ ಮಾಡುತ್ತಿರಲಿಲ್ಲವೆಂದು ತಿಳಿಸಿದ ಆದಿತ್ಯನ ಸೋದರ. ಆತ ಮೆಕ್ಯಾನಿಕ್ ಕೆಲಸಕಾರ್ಯಗಳಲ್ಲಿ ಚಾಣಾಕ್ಷನೆಂದು ತಿಳಿಸಿದ. ಆದಿತ್ಯ ತನ್ನನ್ನು ಸಂರ್ಪಸಿಲ್ಲವೆಂದು ತಿಳಿಸಿದ ಆ ಸೋದರ ಆದಿತ್ಯ ಬೆಂಗಳೂರಿಗೆ ಹೋಗಿರಬಹುದೆಂದ. ಎಸಿಪಿ ಬೆಳ್ಳಿಯಪ್ಪ ಬೆಂಗಳೂರಿನ ಪೊಲೀಸ್ ಠಾಣೆಗಳಿಗೆ ಆದಿತ್ಯನ ವಿವರಗಳನ್ನು ಮುಟ್ಟಿಸಿ ಆತನನ್ನು ಪತ್ತೆಮಾಡಲು ಸಹಕಾರ ಕೋರಿದರು.

ಜನವರಿ 22 ರಂದು ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಗೆ ಹೋದ ಆದಿತ್ಯ ಡಿಜಿಪಿಗೆ ತಾನೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬನ್ನಿಟ್ಟ ವ್ಯಕ್ತಿ ಎಂದು ತಿಳಿಸಿದ. ಕೂಡಲೇ ಅವರು ತಮ್ಮ ಕಚೇರಿಯ ಸಮೀಪದಲ್ಲಿದ್ದ ಹಲಸೂರು ಗೇಟ್ ಠಾಣೆಯ ಠಾಣಾಧಿಕಾರಿಯನ್ನು ಕರೆಸಿ ಆದಿತ್ಯನನ್ನು ಅವರ ಸುಪರ್ದಿಗೆ ಒಪ್ಪಿಸಿದರು. ಆರೋಪಿಯನ್ನು ಹಲಸೂರು ಗೇಟ್ ಠಾಣೆಯಲ್ಲಿ ವಿಚಾರಣೆ ಮಾಡಿದಾಗ ಆತ 2012ರಲ್ಲಿ ಬೆಂಗಳೂರು ನಗರ ರೈಲ್ವೆ ನಿಲ್ದಾಣ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅಧಿಕಾರಿಗಳಿಗೆ ಸುಳ್ಳು ಕರೆ ಮಾಡಿದ್ದ ಮೇರೆಗೆ ಆತ ಒಂದು ವರ್ಷಗಳ ಕಾಲ ಕಾರಾಗೃಹವಾಸ ಶಿಕ್ಷೆಯನ್ನು ಅನುಭವಿಸಿದ್ದಾಗಿ ತಿಳಿದು ಬಂದಿತು. ಏತನ್ಮಧ್ಯೆ ಮಂಗಳೂರಿನ ಪೊಲೀಸ್ ಅಧಿಕಾರಿಗಳು ಬೆಂಗಳೂರಿಗೆ ಬಂದು ಆದಿತ್ಯನನ್ನು ವಶಕ್ಕೆ ಪಡೆದುಕೊಂಡು ಅವನನ್ನು ಮಂಗಳೂರಿಗೆ ಕರೆದೊಯ್ದರು. ಅಲ್ಲಿ ನಡೆದ ವಿಚಾರಣೆಯಲ್ಲಿ ಆದಿತ್ಯ ಹೀಗೆ ಹೇಳಿದ:

‘ಇಂಜಿನಿಯರಿಂಗ್ ಪರೀಕ್ಷೆ ಪಾಸಾದ ನಂತರ ನನಗೆ ಯಾವುದೇ ಸೂಕ್ತ ನೌಕರಿ ಸಿಗಲಿಲ್ಲ. ಕೆಲವು ದಿನಗಳ ಕಾಲ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಆನಂತರ ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡಿದೆ. ಬಳಿಕ ಮಂಗಳೂರಿಗೆ ಬಂದು ಅಲ್ಲಿನ ಒಂದು ಮಠದಲ್ಲಿ ಅಡುಗೆಯ ಕೆಲಸ ಮಾಡುತ್ತಿದ್ದೆ. ಆರು ತಿಂಗಳ ನಂತರ ಪುನಃ ಬೆಂಗಳೂರಿಗೆ ವಾಪಸಾಗಿ ವಿಮಾ ಕಂಪನಿಗೆ ಸೇರಿದೆ. ಆ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಸೂಪರ್​ವೈಸರ್​ಗಳ ಕೆಲಸಕ್ಕಾಗಿ ಅರ್ಜಿಗಳನ್ನು ಕರೆದರು. ನಾನು ಅರ್ಜಿ ಸಲ್ಲಿಸಿದ ನಂತರ ಆ ಕೆಲಸ ಸಿಗಬೇಕಾದರೆ 8 ಲಕ್ಷ ರೂಪಾಯಿ ಲಂಚ ಕೊಡಬೇಕೆಂದು ತಿಳಿಯಿತು. ಇದರಿಂದ ನೊಂದ ನಾನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕೆಂದು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದೇನೆಂದು ಬೆದರಿಕೆಯ ಕರೆ ಮಾಡಿದೆ. ಆ ಕರೆಯನ್ನು ಟ್ರೇಸ್ ಮಾಡಿದ ಪೊಲೀಸರು ನನ್ನನ್ನು ಬಂಧಿಸಿದರು. ನ್ಯಾಯಾಲಯ ನನಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿತು. ಶಿಕ್ಷೆ ಮುಗಿದ ನಂತರ ಮಂಗಳೂರಿಗೆ ವಾಪಸ್ಸಾದೆ. ಕಾರ್ಕಳದ ಹೋಟೆಲ್​ನಲ್ಲಿ ವೇಟರ್ ನೌಕರಿ ಸಿಕ್ಕಿ ಅಲ್ಲಿಯೇ ಉಳಿದುಕೊಳ್ಳಲು ಕೋಣೆಯನ್ನು ಕೊಟ್ಟರು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನಾನು ಬುದ್ಧಿ ಕಲಿಸಲಿಲ್ಲವಲ್ಲ ಎಂದು ಅಸಮಾಧಾನವಾಗಿತ್ತು. ಅವರುಗಳ ಮೇಲೆ ನನಗೆ ತೀವ್ರ ಸಿಟ್ಟಿತ್ತು. ಹುಸಿ ಬಾಂಬ್ ಕರೆಗಳನ್ನು ಮಾಡಿದ್ದು ವ್ಯರ್ಥವಾದ ಕಾರಣ ನಿಜವಾದ ಬಾಂಬನ್ನೇ ಇಡಬೇಕು ಎಂದೆನಿಸಿತು. ಅದೇ ರೀತಿ ಬಾಂಬ್ ಹೇಗೆ ತಯಾರಿಸಬೇಕೆಂದು ಇಂಟರ್​ನೆಟ್​ನಲ್ಲಿ ನೋಡಿದೆ. ಅವನ್ನು ತಯಾರಿಸಲು ಬೇಕಾದ ಸಾಮಗ್ರಿಗಳ ಪಟ್ಟಿ ಮಾಡಿಕೊಂಡೆ. ಆನ್​ಲೈನ್ ಅಂಗಡಿಗಳಿಂದ ಆ ವಸ್ತುಗಳನ್ನು ತರಿಸಿಕೊಂಡೆ. ಆನಂತರ ಮಂಗಳೂರಿನ ಹಾರ್ಡ್​ವೇರ್ ಅಂಗಡಿಗಳಿಗೆ ಹೋಗಿ ಬೇಕಾದ ಉಪಕರಣಗಳನ್ನು ಖರೀದಿಸಿದೆ. ಅವುಗಳನ್ನು ಬಳಸಿ ನನ್ನ ಕೋಣೆಯಲ್ಲಿಯೇ ಬಾಂಬನ್ನು ತಯಾರಿಸಿದೆ. ಆದರೆ ಆ ಬಾಂಬಿಗೆ ಟೈಮರ್ ಅಳವಡಿಸಿ ನನಗೆ ಬೇಕಾದ ವೇಳೆಗೆ ಸ್ಪೋಟವಾಗುವಂತೆ ಹೇಗೆ ಮಾಡುವುದು ಎಂದು ತಿಳಿಯಲಿಲ್ಲ. ಹೀಗಾಗಿ ಮಂಗಳೂರಿನಲ್ಲಿ ನಾನು ಇಟ್ಟಿದ್ದ ಬಾಂಬ್ ತಾನೇ ತಾನಾಗಿ ಸಿಡಿಯುತ್ತಿರಲಿಲ್ಲ.

ಆ ಮಧ್ಯಾಹ್ನ ನಾನು ಮತ್ತೆ ವಿಮಾನದಲ್ಲಿ ಬಾಂಬನ್ನಿಟ್ಟಿದ್ದೇನೆ ಎಂದು ಹುಸಿ ಕರೆಯನ್ನು ಮಾಡಿದೆ. ನಂತರ ನನ್ನ ಫೋನಿನ ಸಿಮ್ ಮುರಿದೆಸೆದು ಬಟ್ಟೆ ಬದಲಾಯಿಸಿ ಶಿವಮೊಗ್ಗೆಯ ಮೂಲಕ ಬೆಂಗಳೂರಿಗೆ ಹೋದೆ. ಅ ಸಂಜೆ ಕೇಬಲ್ ಟಿವಿಗಳಲ್ಲಿ ನನ್ನ ಫೋಟೋ ಬಂದದ್ದನ್ನು ಗಮನಿಸಿ ಪೊಲೀಸರು ಬೆನ್ನು ಹತ್ತುತ್ತಾರೆ ಎಂದು ಹೆದರಿ ಡಿಜಿಪಿಯವರ ಮುಂದೆ ಶರಣಾದೆ’.

ಆದಿತ್ಯನ ಹೇಳಿಕೆಗೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು ಅವನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು. ಸೆಷನ್ಸ್ ನ್ಯಾಯಾಲಯದ ಮುಂದೆ ಆದಿತ್ಯ ತಪ್ಪನ್ನೊಪ್ಪಿಕೊಂಡ. ಆದರೂ ಕೂಲಂಕಷ ವಿಚಾರಣೆ ನಡೆಸಿದ ನ್ಯಾಯಾಲಯ ಅವನಿಗೆ ಇಪ್ಪತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು.

‘ವೇದ ಶಾಸ್ತ್ರಾಗಮವನೋದಿದೊಡೆ ಫಲವೇನು, ವೇದಿಸುವ ಚಿತ್ತ ಸಮರಂಗವಿಲ್ಲದೊಡೆ ಬೂದಿಯ ಹೋಮ ಸರ್ವಜ್ಞ’ ಎನ್ನುವಂತೆ ವಿದ್ಯಾವಂತ ಆದಿತ್ಯ ಮಾನಸಿಕ ಖಿನ್ನತೆಯಿಂದಲೇ ತನ್ನ ಬಾಳನ್ನು ಹಾಳು ಮಾಡಿಕೊಂಡದ್ದು ದುರ್ದೈವ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net