ತಾರ್ಕಿಕ ಅಂತ್ಯ ದೊರೆತರೂ ಮುಗಿಯದ ಜಿಜ್ಞಾಸೆ; ಸಿಸ್ಟರ್ ಅಭಯಾ ಸಾವಿನ ಸುತ್ತ..

Column F
ಸಿಸ್ಟರ್ ಅಭಯ, ಪಾದ್ರಿ ಥಾಮಸ್ ಕೋಟೂರ್ ಮತ್ತು ಸಿಸ್ಟರ್ ಸೆಫಿ.
Published on
ಬೆಂಗಳೂರಿನಲ್ಲಿ ಶಂಕಿತ ಆರೋಪಿಗಳಾದ ಪಾದ್ರಿ ಕೋಟೂರ್ ಮತ್ತು ಪಾದ್ರಿ ಜೋಸ್ ಇವರಿಬ್ಬರ ಮೇಲೆ ನಡೆಸಿದ ಮಂಪರು ಪರೀಕ್ಷೆಯಿಂದ ತಿಳಿದು ಬಂದದ್ದೇನೆಂದರೆ- 1992ರ ಮಾರ್ಚ್ 23ರ ಬೆಳಗ್ಗೆ ಹಾಸ್ಟೆಲ್ಲಿನ ಅಡುಗೆ ಕೋಣೆಯಲ್ಲಿ ಸಿಸ್ಟರ್ ಸೆಫಿ ಮತ್ತು ಪಾದ್ರಿ ಜೋಸ್ ಸರಸಸಲ್ಲಾಪದಲ್ಲಿ ತೊಡಗಿದ್ದರು. ಬಾಗಿಲಿಲ್ಲದ ಅಡುಗೆಯ ಕೋಣೆಯೊಳಗೆ ಯಾರೂ ಬರದಂತೆ ಪಾದ್ರಿ ಕೋಟೂರ್ ಕಾವಲು ಕಾಯುತ್ತಿದ್ದರು. ಬೆಳಗಿನ 4 ಗಂಟೆಗೆ ಅಭಯಾ ಡೈನಿಂಗ್ ಹಾಲಿಗೆ ನೀರನ್ನು ತೆಗೆದುಕೊಳ್ಳಲು ಬಂದಾಗ ಆಕೆ ಅಡುಗೆಕೋಣೆಯಲ್ಲಿ ನಡೆಯುತ್ತಿದ್ದುದನ್ನು ನೋಡಿ ಗಾಬರಿಯಾಗಿ ಜೋರಾಗಿ ಅರಚಿದಳು. ಆನಂತರ ನಡೆದಿದ್ದನ್ನು ನೋಡಿಯೂ ನೋಡದಂತೆ ಸಾವರಿಸಿಕೊಂಡು ಫ್ರಿಜ್ ಬಾಗಿಲನ್ನು ತೆರೆದು ಬಾಟಲಿಗೆ ನೀರನ್ನು ತುಂಬಿಸತೊಡಗಿದಳು. ಅವಳು ತಮ್ಮನ್ನು ಕಂಡದ್ದನ್ನರಿತ ಮೂರೂ ಜನರು ಹೆದರಿ ಅವಳತ್ತ ಧಾವಿಸಿದರು. ಸಿಸ್ಟರ್ ಸೆಫಿ ಅವಳ ಕುತ್ತಿಗೆಯನ್ನು ಹಿಸುಕಲು ಹೋದಾಗ ಪಾದ್ರಿ ಕೋಟೂರ್ ಅಲ್ಲೇ ಟೇಬಲಿನ ಮೇಲಿದ್ದ ಕೊಡಲಿಯೊಂದರ ಕಾವಿನಿಂದ ಅಭಯಾಳ ತಲೆಗೆ ಹೊಡೆದರು. ಅಭಯಾ ಕೆಳಗೆ ಬಿದ್ದು ಪ್ರಜ್ಞಾಹೀನಳಾದಳು.

ಆಕೆ ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿದ ಅವರೆಲ್ಲರೂ ಆಕೆ ಬದುಕಿದ್ದರೆ ತಮ್ಮ ಗುಟ್ಟು ರಟ್ಟಾಗುವುದೆಂಬ ಹೆದರಿಕೆಯಿಂದ ಮುಂದೇನು ಮಾಡುವುದೆಂದು ಯೋಚಿಸಿದರು. ಸಿಸ್ಟರ್ ಸೆಫಿಯ ಸೂಚನೆ ಮೇರೆಗೆ ಅಭಯಾಳನ್ನು ಬಾವಿಗೆ ಎಸೆಯಬೇಕೆಂದು ತೀರ್ವನಿಸಿದರು. ನಂತರ ಇಬ್ಬರೂ ಪಾದ್ರಿಗಳು ಹಾಸ್ಟೆಲ್ಲಿನ ಹೊರಗೆ ಹೋಗಿ ಬಾವಿಯವರೆಗೆ ಹೋಗುವ ಕಾಲ್ದಾರಿಯನ್ನು ಟಾರ್ಚ್ ಬೆಳಕಿನ ಮೂಲಕ ಪರಿಶೀಲಿಸಿದರು. ಬಾವಿಕಟ್ಟೆಯ ಮೇಲಿದ್ದ ಬಕೆಟ್ಟನ್ನು ಕೆಳಗೆಸೆದರು. ಪ್ರಜ್ಞಾಹೀನಳಾಗಿದ್ದ ಅಭಯಾಳನ್ನು ಮೂರೂ ಜನರು ಅಡುಗೆ ಕೋಣೆಯ ಹಿಂದಿನ ಬಾಗಿಲ ಮೂಲಕ ಬಾವಿಯವರೆಗೆ ದರದರನೆ ಎಳೆದುಕೊಂಡು ಹೋದರು. ಪಾದ್ರಿ ಜೋಸ್ ಅಭಯಾಳ ತಲೆಯನ್ನು, ಸಿಸ್ಟರ್ ಸೆಫಿ ಬೆನ್ನನ್ನು ಹಾಗೂ ಪಾದ್ರಿ ಕೋಟೂರ್ ಅವಳ ಕಾಲುಗಳನ್ನು ಹಿಡಿದು ದೇಹವನ್ನು ಮೇಲಕ್ಕೆತ್ತಿ ಬಾವಿಗೆ ಎಸೆದರು. ಆನಂತರ ಕೃತ್ಯಕ್ಕೆ ಬಳಸಿದ ಕೊಡಲಿಯನ್ನು ಅಡುಗೆ ಕೋಣೆಯ ಕಪಾಟೊಂದರ ಕೆಳಗೆ ಬಚ್ಚಿಟ್ಟರು. ನಂತರ ಇಬ್ಬರೂ ಪಾದ್ರಿಗಳು ಕಾನ್ವೆಂಟಿನ ಹಿಂಬಾಗಿಲಿಗೆ ಚಿಲಕ ಹಾಕಿ ಹೊರಗೆ ಹೊರಟುಹೋದರು.

ಮಂಪರು ಪರೀಕ್ಷೆಯ ನಂತರ ಆ ಮೂವರನ್ನೂ ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ ಮಿದುಳು ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ ಪಾದ್ರಿ ಕೋಟೂರ್​ರನ್ನು ಅಭಯಾಳ ತಲೆಗೆ ಹೊಡೆದ ಬಗ್ಗೆ ಪ್ರಶ್ನಿಸಿದಾಗ ಅವರ ಮಿದುಳಿನ ತರಂಗಗಳಲ್ಲಿ ಚಟುವಟಿಕೆ ಕಂಡುಬಂದಿತು.

ಸಿಸ್ಟರ್ ಸೆಫಿ ಲೈಂಗಿಕ ಸಂಪರ್ಕ ಹೊಂದಿದ್ದರೆಂದು ಸಾಬೀತು ಮಾಡಲು ಅವರನ್ನು ಕನ್ಯತ್ವದ ಪರೀಕ್ಷೆಗೆ ಒಳಪಡಿಸಲಾಯಿತು. ಮಂಪರು ಪರೀಕ್ಷೆ ಮುಗಿಸಿ ಪಾದ್ರಿ ಕೋಟೂರ್ ಕೊಟ್ಟಾಯಂಗೆ ವಾಪಸಾದ ನಂತರ, ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವುದನ್ನೇ ಚಾಳಿಯಾಗಿ ಮಾಡಿಕೊಂಡಿದ್ದ ವೇಣುಗೋಪಾಲ್ ಎನ್ನುವವನು ಅವರನ್ನು ಭೇಟಿಮಾಡಿದ. ಮಂಪರು ಪರೀಕ್ಷೆ ಬಗ್ಗೆ ವಿಚಾರಿಸಿದ. ‘ಸಿಬಿಐ ನನ್ನನ್ನು ಕೊಲೆಯ ಆರೋಪಿಯನ್ನಾಗಿ ಮಾಡಿ ಬಂಧಿಸುವುದು ಖಚಿತವಾಗಿದೆ. ಹೀಗಾಗಿ ನೀನು ಮಂಪರು ಪರೀಕ್ಷೆಯನ್ನು ಸಾಕ್ಷ್ಯವೆಂದು ಪರಿಗಣಿಸುವ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಬೇಕು, ಅದಕ್ಕೆ ಬೇಕಾದ ಹಣವನ್ನು ನಾನು ಕೊಡುತ್ತೇನೆ’ ಎಂದು ಕೋಟೂರ್ ಹೇಳಿದರು.

ಆದರೆ ವೇಣುಗೋಪಾಲ್ ನೇರವಾಗಿ ಸಿಬಿಐ ಅಧಿಕಾರಿಗಳ ಬಳಿಗೆ ಹೋಗಿ ಪಾದ್ರಿ ಕೋಟೂರ್ ತನ್ನೆದುರು ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿಸಿದ. ‘ಆ ದಿನ ಅವರು ತೀರಾ ವಿಚಲಿತರಾಗಿದ್ದರು. ಅವರಿಗೆ ಸಮಾಧಾನ ಮಾಡಿ ಏನಾಯಿತೆಂದು ಕೇಳಿದಾಗ ತಾವು ಸಿಸ್ಟರ್ ಸೆಫಿಯೊಡನೆ ಬಹಳ ದಿನಗಳಿಂದ ಲೈಂಗಿಕ ಸಂಪರ್ಕವನ್ನಿಟ್ಟುಕೊಂಡಿರುವುದಾಗಿ ತಿಳಿಸಿದ್ದಲ್ಲದೆ ತಾವಿಬ್ಬರೂ ಪತಿ ಪತ್ನಿಯರಂತೆಯೇ ಇದ್ದೆವೆಂದು ಹೇಳಿದರು. ಆನಂತರ ಅವರು ಮೇಲಕ್ಕೆದ್ದು ತಾವು ಹಾಕಿಕೊಂಡಿದ್ದ ಪಾದ್ರಿಯ ಗೌನನ್ನು ಝಾಡಿಸುತ್ತಾ, ಪಾದ್ರಿಯ ಈ ಪೋಷಾಕಿನೊಳಗೆ ಒಬ್ಬ ಪುರುಷನೂ ಇದ್ದಾನೆಂದು ತಿಳಿಯಬೇಕು ಎಂದರು’ ಎಂದು ವೇಣುಗೋಪಾಲ್ ಹೇಳಿದ. ಸಿಬಿಐ ಅಧಿಕಾರಿಗಳು ಅವನ ಹೇಳಿಕೆಯನ್ನು ದಂಡಸಂಹಿತೆಯ ಕಲಂ 164ರನ್ವಯ ನ್ಯಾಯಾಧೀಶರೊಬ್ಬರ ಮುಂದೆ ದಾಖಲು ಮಾಡಿಸಿದರು.

2008ರ ನವೆಂಬರ್​ನಲ್ಲಿ ಸಿಸ್ಟರ್ ಸೆಫಿ ಹಾಗೂ ಪಾದ್ರಿಗಳಾದ ಕೋಟೂರ್ ಮತ್ತು ಜೋಸ್ ಇವರನ್ನು ಸಿಬಿಐ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಿತು. ಈ ದೃಶ್ಯವನ್ನು ಟೆಲಿವಿಷನ್​ನಲ್ಲಿ ನೋಡಿದ ಕಳ್ಳ ಅಡಕೆ ರಾಜು ಇಬ್ಬರೂ ಪಾದ್ರಿಗಳನ್ನು ಗುರುತಿಸಿ ಅಭಯಾಳ ಕೊಲೆಯಾದ ರಾತ್ರಿ ತಾನು ಹಾಸ್ಟೆಲಿನಲ್ಲಿ ನೋಡಿದ್ದು ಅವರನ್ನೇ ಎಂಬ ಹೇಳಿಕೆಯನ್ನು ಸಿಬಿಐಗೆ ನೀಡಿದ. ಏತನ್ಮಧ್ಯೆ ಹಾಸ್ಟೆಲ್ಲಿನ ಅಡುಗೆ ಕೋಣೆಯ ಕಪಾಟಿನ ಕೆಳಗೆ ಅಭಯಾಳ ತಲೆಗೆ ಹೊಡೆದಿದ್ದ ಕೊಡಲಿಯೂ ದೊರಕಿತು. ಇದನ್ನು ಆರಂಭಿಕ ತನಿಖೆ ಮಾಡಿದ್ದ ಕೇರಳದ ಪೊಲೀಸರು ಜಪ್ತಿ ಮಾಡಿರಲೇ ಇಲ್ಲ. ಕೊಲೆಯನ್ನು ಮುಚ್ಚಿಹಾಕುವಲ್ಲಿ ತನ್ನ ಪಾತ್ರ ಬಯಲಾಗುತ್ತದೆಂಬ ಹೆದರಿಕೆಯಿಂದ ಪ್ರಕರಣದ ಆರಂಭಿಕ ತನಿಖೆ ಮಾಡಿದ್ದ ಅಡಿಷನಲ್ ಪಿಎಸ್​ಐ ಅಗಸ್ಟೀನ್ ಆತ್ಮಹತ್ಯೆ ಮಾಡಿಕೊಂಡರು. ಸಿಬಿಐ ಅಧಿಕಾರಿಗಳ ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ಅವರು ಡೆತ್​ನೋಟ್​ನಲ್ಲಿ ತಿಳಿಸಿದ್ದರು.

ಏತನ್ಮಧ್ಯೆ ಕನ್ಯತ್ವದ ಪರೀಕ್ಷೆಯನ್ನು ತಮ್ಮ ಒಪ್ಪಿಗೆಯಿಲ್ಲದೆ ಮಾಡಿಸಲಾಗಿದೆಯೆಂದು ಸಿಸ್ಟರ್ ಸೆಫಿ ಸಿಬಿಐ ವಿರುದ್ಧ ದೂರನ್ನು ಸಲ್ಲಿಸಿದರು. ಇದನ್ನು ವಿರೋಧಿಸಿದ ಸಿಬಿಐ, ಈ ಪ್ರಕರಣ ಬೆಳಕಿಗೆ ಬಂದ ನಂತರ ತಾನು ಕನ್ಯೆಯೆಂದು ಬಿಂಬಿಸಲು ಆಕೆ ಹೈಮೆನೋಪ್ಲಾಸ್ಟಿ ಎಂಬ ವಿಶೇಷ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದಾಗಿ ತಿಳಿಸಿ ಆ ಸಂಬಂಧದ ದಾಖಲೆಗಳನ್ನು ಹಾಜರುಪಡಿಸಿತು. ನ್ಯಾಯಾಲಯ ಸೆಫಿ ಮನವಿಯನ್ನು ವಜಾಮಾಡಿತು. ಅಷ್ಟರಲ್ಲಿ ಮೂವರೂ ಆರೋಪಿಗಳು ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದೇ ವಾದಿಸಿದರು. ಮಂಪರು ಪರೀಕ್ಷೆಯ ರೆಕಾರ್ಡಿಂಗ್ ಇದ್ದ ಸಿ.ಡಿಗಳನ್ನು ತಿದ್ದಲಾಗಿದ್ದು, ಆ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಳ್ಳದಿರಲು ಕೋರಿದರು. 2009ರ ಜನವರಿ 1ರಂದು ಈ ಅರ್ಜಿಯ ಬಗ್ಗೆ ತೀರ್ಪಿತ್ತ ನ್ಯಾಯಾಧೀಶೆ ರಮಾ, ಸಿಡಿಗಳನ್ನು ತಿದ್ದಿರುವುದು ಸಾಬೀತಾಗಿದ್ದು ಹೀಗೆ ತಿದ್ದಲು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೇ ಕಾರಣವೆಂದು ತಿಳಿಸಿದರು. ಮೂವರೂ ಆರೋಪಿಗಳ ಮೇಲೆ ಸಿಬಿಐ ಸಂಗ್ರಹಿಸಿರುವ ಸಾಕ್ಷ್ಯಗಳು ಇನ್ನೊಬ್ಬರ ಹೇಳಿಕೆಗಳಿಂದ ತಿಳಿದ ಸಾಕ್ಷ್ಯ (ಹಿಯರ್​ಸೇ ಎವಿಡೆನ್ಸ್) ಎಂದು ತೀರ್ಪಿನಲ್ಲಿ ತಿಳಿಸಿ ಆರೋಪಿಗಳಿಗೆ ಜಾಮೀನನ್ನು ನೀಡಿದರು. ಇದನ್ನು ಬಲವಾಗಿ ಪ್ರತಿಭಟಿಸಿದ ಸಿಬಿಐ, ಮಂಪರು ಪರೀಕ್ಷೆಯ ಮೂಲ ಸಿಡಿಯನ್ನು ಹಾಜರುಪಡಿಸಿದ್ದಲ್ಲದೇ, ಸಿಡಿಗಳ ತಾಂತ್ರಿಕ ಪರಿಶೀಲನೆಯನ್ನು ತಜ್ಞರಿಂದ ಮಾಡಿಸಿ ನ್ಯಾಯಾಧೀಶರ ಆರೋಪ ನಿರಾಧಾರವಾದದ್ದು ಎಂದು ಇನ್ನೊಂದು ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಆ ನ್ಯಾಯಪೀಠವು ಬೆಂಗಳೂರಿನ ತಜ್ಞರು ಸಿಡಿಯನ್ನು ತಿದ್ದಿಲ್ಲ, ಈ ಪ್ರಕರಣದ ಪತ್ತೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆಂದು ಪ್ರಶಂಸಿಸಿತು.

2009ರ ಜುಲೈ 17ರಂದು ಮೂವರೂ ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯನಾಶ ಮತ್ತು ಮಾನನಷ್ಟದ ಆರೋಪಪಟ್ಟಿ ಸಲ್ಲಿಸಲಾಯಿತು. ಆರೋಪಿಗಳೆಲ್ಲರೂ ತಾವು ನಿದೋಷಿಗಳೆಂದು ವಾದಿಸಿ ತಮ್ಮ ವಿರುದ್ಧದ ಆರೋಪವನ್ನು ರದ್ದು ಮಾಡಬೇಕೆಂದು ಒಂದಾದರೊಂದಂತೆ ನ್ಯಾಯಾಲಯಗಳ ಮೆಟ್ಟಲೇರಿದರು. ಕೊಲೆ ನಡೆದಿದ್ದರೆ ಸ್ಥಳದಲ್ಲಿ ರಕ್ತದ ಕಲೆಗಳೇಕೆ ಇರಲಿಲ್ಲ? ಕೊಲೆಗಾಗಿ ಉಪಯೋಗಿಸಿದೆಯೆನ್ನಲಾದ ಕೊಡಲಿಯಿಂದಲೇ ಕೊಲೆಯಾಗಿದೆ ಎಂದು ಸಾಬೀತು ಪಡಿಸಿಲ್ಲ, ಕೊಲೆಗೆ ಯಾವ ಪ್ರತ್ಯಕ್ಷದರ್ಶಿಗಳೂ ಇಲ್ಲ ಎಂದು ವಾದಿಸಿದರು. 9 ವರ್ಷಗಳ ಕಾಲ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆದವು. 2018 ರಲ್ಲಿ ಸಿಬಿಐ ನ್ಯಾಯಾಲಯವು ಪಾದ್ರಿ ಜೋಸ್​ರ ಮೇಲೆ ಸೂಕ್ತವಾದ ಸಾಕ್ಷ್ಯಗಳಿಲ್ಲವೆಂದು ಅವರನ್ನು ಬಿಡುಗಡೆ ಮಾಡಿತು. ಉಳಿದಿಬ್ಬರು ಆರೋಪಿಗಳು ತಮ್ಮನ್ನೂ ಖುಲಾಸೆ ಮಾಡಬೇಕೆಂದು ಸವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು. ಆ ಮನವಿ ತಿರಸ್ಕೃತಗೊಂಡಿತು. ನಂತರ ಸಿಸ್ಟರ್ ಸೆಫಿ ತಮ್ಮ ಹೈಮೆನೋಪ್ಲಾಸ್ಟಿ ಆಪರೇಷನ್ ಬಗ್ಗೆ ವೈದ್ಯರು ಕೊಟ್ಟ ವರದಿ ಸುಳ್ಳು ಎಂದಾಗ ಸಿಬಿಐ ಅಧಿಕಾರಿಗಳು ಅವರನ್ನು ಬೇರೆ ಇಬ್ಬರು ಸ್ತ್ರೀರೋಗ ತಜ್ಞೆಯರಿಂದ ಪರೀಕ್ಷೆಗೆ ಒಳಪಡಿಸಿ ಅವರ ವಾದವನ್ನು ಅಲ್ಲಗಳೆದರು.

ಕಡೆಗೂ 2019ರ ಆಗಸ್ಟ್ 26ರಿಂದ ಕೊಚ್ಚಿಯ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಏತನ್ಮಧ್ಯೆ ಕೇರಳ ಉಚ್ಚ ನ್ಯಾಯಾಲಯವು ಆರೋಪಿಯು ಮಂಪರು ಪರೀಕ್ಷೆಯಲ್ಲಿ ಹೊರಗೆಡಹುವ ವಿವರಗಳನ್ನು ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲವೆಂಬ ತೀರ್ಪನ್ನು ನೀಡಿತು. ಇಡೀ ಪ್ರಕರಣ ಸಾಂರ್ದಭಿಕ ಸಾಕ್ಷ್ಯಗಳ ಮೇಲೆಯೇ ಅವಲಂಬಿತವಾಗಿತ್ತು. ಆರೋಪಿಗಳ ಪರವಾಗಿ ಹೆಸರಾಂತ ವಕೀಲರ ದಂಡೇ ವಾದ ಮಂಡಿಸಿತು. ಪ್ರಾಸಿಕ್ಯೂಷನ್ ಪರವಾಗಿದ್ದ 9 ಸಾಕ್ಷಿಗಳು ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ಪುಷ್ಟೀಕರಿಸಲಿಲ್ಲ. ಆದರೆ ಅಡಕೆ ರಾಜು ಮತ್ತು ಸಂಜು ಇದಕ್ಕೆ ಅಪವಾದವಾದರು. 2020ರ ಡಿಸೆಂಬರ್​ನಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶ ಸಾನಿಲ್ ಕುಮಾರ್, ಪಾದ್ರಿ ಕೋಟೂರ್ ಮತ್ತು ಸಿಸ್ಟರ್ ಸೆಫಿ ಇವರನ್ನು ದೋಷಿಗಳೆಂದು ತೀರ್ವನಿಸಿ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದರು. ಅವರಿಬ್ಬರೂ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಈ ಮನವಿ ತೀರ್ವನವಾಗುವವರೆಗೆ ನ್ಯಾಯಾಲಯವು ಅವರಿಗಿತ್ತಿರುವ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿದೆ. ಹೀಗಾಗಿ ಅವರಿಬ್ಬರೂ ಜೈಲಿನಲ್ಲಿಲ್ಲ.

ಪ್ರಭಾವೀ ವ್ಯಕ್ತಿಗಳು ಕ್ರಿಮಿನಲ್ ನ್ಯಾಯವ್ಯವಸ್ಥೆಯ ಎಲ್ಲ ಹುಳುಕುಗಳನ್ನೂ ಸ್ವಪ್ರಯೋಜನಕ್ಕಾಗಿ ಬಳಸಿಕೊಂಡ ಕಾರಣದಿಂದಲೇ ಈ ಪ್ರಕರಣ ಇತ್ಯರ್ಥವಾಗಲು ಇಷ್ಟು ವರ್ಷ ತೆಗೆದುಕೊಂಡಿತು. ಕೇರಳದ ಸಾರ್ವಜನಿಕ ಸಂಘಟನೆಗಳು ಮತ್ತು ಮಾಧ್ಯಮಗಳ ನಿರಂತರ ಹೋರಾಟದಿಂದ ಪ್ರಕರಣಕ್ಕೆ ರ್ತಾಕ ಅಂತ್ಯ ದೊರಕಿತು. ಭಗವಾನ್ ಬುದ್ಧ ಹೇಳಿದಂತೆ, ‘ಮೂರು ವಸ್ತುಗಳನ್ನು ಮುಚ್ಚಿಡಲು ಸಾಧ್ಯವಿಲ್ಲ-ಅವೇ ಸೂರ್ಯ, ಚಂದ್ರ ಮತ್ತು ಸತ್ಯ’. ಆದರೆ ಈ ಪ್ರಕರಣದ ಸತ್ಯವೇನು ಎನ್ನುವುದರ ಬಗ್ಗೆ ಇನ್ನೂ ಜಿಜ್ಞಾಸೆ ಇದೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net