

ತನಗೆ ಬಹಳ ಇಷ್ಟವಾಗಿದ್ದ ಇಲಾಖೆಯನ್ನು ಹತ್ತಿರದಿಂದ ನೋಡುವ ಅವಕಾಶ ದೊರೆತದ್ದಕ್ಕಾಗಿ ಆತ ಸಂತಸಗೊಂಡ. ನಗರದ ಎಲ್ಲ ಪೊಲೀಸ್ ಠಾಣೆಗಳಿಗೆ ಹೋಗಿ ಅಲ್ಲಿನ ಕಾನ್ಸ್ಟೇಬಲ್, ಪಿಎಸ್ಐ ಮತ್ತು ಇನ್ಸ್ಪೆಕ್ಟರ್ಗಳ ಸ್ನೇಹ ಗಳಿಸಿದ. ಹಲವಾರು ಗಂಟೆಗಳ ಕಾಲ ಅವರೊಡನೆಯೇ ಇದ್ದು ಮಾಹಿತಿ ಸಂಗ್ರಹಿಸತೊಡಗಿದ. ಅದಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸುವ ಎಲ್ಲಾ ಪತ್ರಿಕಾಗೋಷ್ಠಿಗಳಿಗೆ ಹಾಜರಾಗಿ ನಗರದಲ್ಲಿ ನಡೆಯುತ್ತಿದ್ದ ಕ್ರೈಮ್ಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಕೆಲವೇ ಕಾಲದಲ್ಲಿ ಆತ ಬಹಳ ಪೊಲೀಸ್ ಅಧಿಕಾರಿಗಳ ಮಿತ್ರನಾದ.
ಹೀಗೆ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಚಯವಾದ ನಂತರ ಅವರಿಗೆ, ‘ನೀವು ಮಾಡಿದ ಕೆಲಸಗಳ ಬಗ್ಗೆ ಹೆಚ್ಚಿನ ಪ್ರಚಾರ ಕೊಡುವೆ, ಆಗ ನೀವು ಇಲಾಖೆಯಲ್ಲಿ ಹೆಸರು ಗಳಿಸಿ ಮೇಲಧಿಕಾರಿಗಳ ಸನಿಹಕ್ಕೆ ಬರಬಹುದು’ ಎಂದು ಹೇಳಿದ. ಅವರ ಸಣ್ಣಪುಟ್ಟ ಕೆಲಸಗಳ ಬಗ್ಗೆ ರೋಚಕವಾಗಿ ಬರೆದು ತನ್ನ ಪತ್ರಿಕೆಯಲ್ಲಿ ಪ್ರಕಟಿಸತೊಡಗಿದ. ಇದರಿಂದ ಖುಷಿಗೊಂಡ ಆ ಅಧಿಕಾರಿಗಳು ಅವನಿಗೆ ಎಕ್ಸ್ ಕ್ಲೂಸಿವ್ ಮಾಹಿತಿಗಳನ್ನು ಕೊಡುತ್ತಿದ್ದರಲ್ಲದೆ, ದಾಳಿಗಳನ್ನು ಮಾಡಲು ಹೋಗುವಾಗ ಅವನನ್ನೂ ತಮ್ಮೊಡನೆ ಕರೆದೊಯ್ಯತೊಡಗಿದರು. ಅವನಿಗೆ ಗಿಫ್ಟ್ಗಳನ್ನು ನೀಡತೊಡಗಿದರು. ಮದಿರೆ ಮಾನಿನಿಯರ ಸಂಗವನ್ನೂ ಮಾಡಿಸಿದರು. ಕಾಲಕ್ರಮೇಣ ಆತ ಹಲವು ಪೊಲೀಸ್ ಅಧಿಕಾರಿಗಳ ನಿಕಟವರ್ತಿಯಾದ. ಕ್ರಮೇಣ ಅವರಿಂದ ಸಣ್ಣಪುಟ್ಟ ಸಾಲ ಮಾಡತೊಡಗಿದ್ದಲ್ಲದೆ, ಅವರ ಬಗ್ಗೆ ಬರೆಯಲು ಹಣ ಕೇಳತೊಡಗಿದ.
ಇಷ್ಟೇ ಸಾಲದೆಂಬಂತೆ, ಅನೈತಿಕ ವ್ಯವಹಾರಗಳನ್ನು ಮಾಡುವವರನ್ನು ತಾನೇ ಭೇಟಿ ಮಾಡಿ ಪೊಲೀಸರೊಡನೆ ತನ್ನ ನಿಕಟ ಸಂಪರ್ಕವಿರುವುದನ್ನು ಅವರಿಗೆ ತೋರಿಸಿಕೊಂಡು ಹಣ ಪಡೆಯತೊಡಗಿದ. ಕೆಲವೇ ದಿನಗಳಲ್ಲಿ ಆತನ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿತು. ಒಂದೇ ವರ್ಷದಲ್ಲಿ ಆತ ಐಷಾರಾಮಿ ಕಾರನ್ನು ಖರೀದಿಸಿದ. ಮೈತುಂಬಾ ಚಿನ್ನದ ಆಭರಣಗಳನ್ನು ಧರಿಸತೊಡಗಿದ. ಐಪಿಎಸ್ ಅಧಿಕಾರಿಗಳಿಗೂ ನಿಕಟನಾದ. ಅಷ್ಟರಲ್ಲಿ ಆತನ ಪತ್ರಿಕೆಯ ಸಂಪಾದಕರಿಗೆ ಈತ ರೋಲ್ಕಾಲ್ ಪತ್ರಕರ್ತನಾಗಿದ್ದ ವಿಷಯ ತಿಳಿದು ಅವನನ್ನು ನೌಕರಿಯಿಂದ ವಜಾ ಗೊಳಿಸಿದರು. ಇದರಿಂದ ವಿಚಲಿತನಾಗದ ಆತ ಹೊಸದಾಗಿ ಆರಂಭವಾಗಿದ್ದ ಟಿವಿ ಚಾನಲ್ವೊಂದರಲ್ಲಿ ಕ್ರೈಮ್ ವರದಿಗಾರನಾಗಿ ಸೇರಿದ. ಅಲ್ಲೂ ಅವನು ಇದೇ ಚಾಳಿಯನ್ನು ಮುಂದುವರಿಸಿದ. ಆದರೆ, ಪತ್ರಿಕೆಗಿಂತ ಚಾನಲ್ ಕೆಲಸದಲ್ಲಿ ಆತನಿಗೆ ಒಳ್ಳೆಯ ಆದಾಯ ಬರತೊಡಗಿತು. ಪೊಲೀಸರಿಗಷ್ಟೇ ಅಲ್ಲದೆ, ಕ್ರಿಮಿನಲ್ಗಳಿಗೆ ಅವರ ಕುಕೃತ್ಯಗಳನ್ನು ಬಯಲುಮಾಡುವುದಾಗಿ ಬ್ಲ್ಯಾಕ್ಮೇಲ್ ಮಾಡುತ್ತಾ ಅವರಿಂದ ಹಣ ಕೀಳತೊಡಗಿದ. ಕೆಲವು ಪೊಲೀಸ್ ಅಧಿಕಾರಿಗಳಿಗೆ ಅವರ ಸಾಧನೆಗಳ ಬಗ್ಗೆ ಟಿವಿಯಲ್ಲಿ ಪ್ರಚಾರ ಕೊಡುವುದಾಗಿ ಹೇಳಿಕೊಂಡು ಅವರಿಂದಲೂ ಹಣ ವಸೂಲಿ ಮಾಡತೊಡಗಿದ. ಕಸ್ಟಮ್್ಸ, ಆದಾಯ ತೆರಿಗೆ, ಮಾದಕ ವಸ್ತುಗಳ ನಿಯಂತ್ರಣಾಲಯ ಮುಂತಾದ ಕಚೇರಿಯ ಅಧಿಕಾರಿಗಳ ಸ್ನೇಹವನ್ನೂ ಬೆಳೆಸಿ ಅವರ ಬಗ್ಗೆಯೂ ಪ್ರಚಾರ ಕೊಡತೊಡಗಿದ.
ಸಾಕಷ್ಟು ಹಣ ಗಳಿಸಿದ ಆತ ತನ್ನದೇ ಆದ ಸ್ವಂತ ಪತ್ರಿಕೆ ಪ್ರಾರಂಭಿಸಬೇಕೆಂಬ ಉದ್ದೇಶದಿಂದ ಚಾನಲ್ಗೆ ರಾಜೀನಾಮೆ ಕೊಟ್ಟು ನಾಲ್ಕು ಪುಟಗಳ ಕಪ್ಪು ಬಿಳುಪು ಟ್ಯಾಬ್ಲಾಯ್್ಡ ಪತ್ರಿಕೆ ಆರಂಭಿಸಿದ. ಪ್ರತಿವಾರವೂ ಪತ್ರಿಕೆಯಲ್ಲಿ ಪೊಲೀಸ್ ಇಲಾಖೆಯ ಆಗುಹೋಗುಗಳ ಬಗ್ಗೆಯೇ ವರದಿಗಳನ್ನು ಬರೆಯುತ್ತಿದ್ದ. ಈ ಮಾಹಿತಿ ಸಂಗ್ರಹಿಸಲು ಆತ ಪೊಲೀಸ್ ಇಲಾಖೆಯ ವಿವಿಧ ಸ್ತರಗಳ ಅಧಿಕಾರಿಗಳನ್ನು ಸಂಪರ್ಕ ಮಾಡುತ್ತಿದ್ದ ಕಾರಣ ಅವನಿಗೆ ಬಹಳ ಅಧಿಕಾರಿಗಳ ಬಗ್ಗೆ ಮಾಹಿತಿಗಳು ಬರತೊಡಗಿದವು. ಯಾವುದಾದರೂ ಪೊಲೀಸರ ಹುಳುಕುಗಳು ತಿಳಿದುಬಂದರೆ ಕೂಡಲೇ ಅವರನ್ನು ಸಂರ್ಪಸಿ ಆ ಮಾಹಿತಿಯನ್ನು ತನ್ನ ಪತ್ರಿಕೆಯಲ್ಲಿ ಬಯಲು ಮಾಡುವೆನೆಂದು ಬೆದರಿಸಿ ಸುಮ್ಮನಿರಲು ಅವರಿಂದ ಹಣ ವಸೂಲಿ ಮಾಡುತ್ತಿದ್ದ.
ಏತನ್ಮಧ್ಯೆ ಅವನಿಗೆ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಪರಿಚಯವಾದ. ಆತ ಈ ಪತ್ರಕರ್ತನ ಪಕ್ಕದ ಊರಿನವನೇ ಆಗಿದ್ದು ನಗರ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಶೀಘ್ರದಲ್ಲಿಯೇ ಇಬ್ಬರೂ ಖಾಸಾಮಿತ್ರರಾದರು. ಎಲ್ಲೆಲ್ಲಿ ಕೆಟ್ಟ ಕೆಲಸಗಳು ನಡೆಯುತ್ತಿವೆ ಎಂಬ ಮಾಹಿತಿ ಆ ಕಾನ್ಸ್ಟೇಬಲ್ಗೆ ಬರುತ್ತಿತ್ತು. ಅದನ್ನಾತ ಈ ಪತ್ರಕರ್ತನೊಂದಿಗೆ ಹಂಚಿಕೊಳ್ಳುತ್ತಿದ್ದ. ಆತ ಆ ವ್ಯಕ್ತಿಯ ಬಳಿಗೆ ಹೋಗಿ ನಿಮ್ಮ ಕೆಲಸವನ್ನು ಬಯಲಿಗೆಳೆಯುತ್ತೇನೆ ಎಂದು ಹೆದರಿಸಿ ಅವರಿಂದ ದುಡ್ಡು ಕೀಳಲು ಶುರುಮಾಡಿದ. ಪೊಲೀಸರಲ್ಲದೆ, ಬಾರ್ ಓನರ್ಗಳು, ಕಳ್ಳಕಾಕರು, ವೇಶ್ಯಾವಾಟಿಕೆಗಳು, ಮಸಾಜ್ ಪಾರ್ಲರ್ಗಳು, ರಿಯಲ್ ಎಸ್ಟೇಟ್ ಜನರು ಇತ್ಯಾದಿಗಳಿಂದ ಪ್ರತಿ ತಿಂಗಳು ಮಾಮೂಲು ಪಡೆಯತೊಡಗಿದ.
ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದ ನಂತರ ಆತ ತನ್ನ ಸುತ್ತಲೂ ಐದಾರು ಜನ ಗೂಂಡಾಗಳ ತಂಡವನ್ನು ಕಟ್ಟಿಕೊಂಡು ಅವರನ್ನೂ ಸಾಕತೊಡಗಿದ. ಒಬ್ಬ ದೊಡ್ಡ ರಿಯಲ್ ಎಸ್ಟೇಟ್ ಏಜೆಂಟ್ ವರ್ಷದ ಹಿಂದೆ ಮೃತಪಟ್ಟಿದ್ದು ಆತನ ಮನೆಯಲ್ಲಿ ಕೋಟ್ಯಾನುಗಟ್ಟಲೇ ಹಣವಿದೆ ಎಂಬ ಮಾಹಿತಿಯನ್ನು ಕಾನ್ಸ್ಟೇಬಲ್ ಒಂದು ದಿನ ತಂದ. ಆತನ ಮನೆಗೆ ಕನ್ನ ಹಾಕಿದರೆ ಬಹಳಷ್ಟು ಹಣ ಸಂಪಾದಿಸಬಹುದೆಂದು ತಿಳಿಸಿದ. ಅಧಿಕಾರಿಗಳ ಸೋಗಿನಲ್ಲಿ ಆ ಮನೆಗೆ ದಾಳಿಮಾಡಿ ಅಲ್ಲಿದ್ದ ಹಣವನ್ನು ರಾಜಾರೋಷವಾಗಿ ದೋಚುವುದು ಸೂಕ್ತ ಎಂದ. ಇಬ್ಬರೂ ಸುದೀರ್ಘವಾಗಿ ರ್ಚಚಿಸಿ ಹೇಗೆ ದಾಳಿ ಮಾಡಬೇಕೆನ್ನುವ ರೂಪರೇಷೆಗಳನ್ನು ಹಾಕಿಕೊಂಡ.
ಮುಂದಿನ ವಾರವೇ ಒಂದು ಇನ್ನೊವಾ ಕಾರನ್ನು ಬಾಡಿಗೆಗೆ ಪಡೆದು ಪತ್ರಕರ್ತನು ಕಾನ್ಸ್ಟೆಬಲ್ ಹಾಗೂ ತನ್ನ ರೌಡಿ ಶಿಷ್ಯರನ್ನು ಕೂರಿಸಿಕೊಂಡು ಉದ್ಯಮಿ ಮನೆಗೆ ಹೋದ. ಮನೆಯಲ್ಲಿ ಆ ಉದ್ಯಮಿಯ ತಾಯಿ, ಪತ್ನಿ ಹಾಗೂ ಮಗಳು ಇದ್ದರು. ಮಗ ಕಾಲೇಜಿಗೆ ಹೋಗಿದ್ದ. ಮನೆಯ ಬಾಗಿಲು ತೆಗೆದಾಗ ಸಫಾರಿ ಸೂಟ್ ಧರಿಸಿದ್ದ ಈ ಪತ್ರಕರ್ತ, ತಾನು ಆದಾಯ ತೆರಿಗೆ ಅಧಿಕಾರಿಯೆಂದು ಪರಿಚಯ ಮಾಡಿಕೊಂಡು ನಕಲಿ ಗುರುತಿನ ಚೀಟಿಯನ್ನು ತೋರಿಸಿದ. ‘ನಿಮ್ಮ ಸಂಪತ್ತಿಗೆ ಆದಾಯ ತೆರಿಗೆ ಕಟ್ಟಿಲ್ಲ’ಎಂದು ತಿಳಿಸಿ ಅವರ ಮನೆಯನ್ನು ಶೋಧಿಸಲು ಬಂದಿರುವುದಾಗಿ ಹೇಳಿದ. ‘ಮನೆಯಲ್ಲಿ ಯಾರೂ ಗಂಡಸರಿಲ್ಲ, ನಾಳೆ ಬನ್ನಿ’ ಎಂದರೂ ಕೇಳದೆ ಮನೆಯಲ್ಲಿರುವ ಎಲ್ಲ ಮೊಬೈಲ್ಫೋನುಗಳನ್ನೂ ಟೇಬಲ್ಲಿನ ಮೇಲಿಡಲು ಆದೇಶಿಸಿ ಮನೆಯ ಲ್ಯಾಂಡ್ಲೈನನ್ನು ನಿಷ್ಕಿ›ಯಗೊಳಿಸಲು ಸೂಚಿಸಿದ. ಬಂದವರು ನಿಧಾನವಾಗಿ ಮನೆಯನ್ನು ಶೋಧಿಸಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಜಾಲಾಡಿ, ಬಂಗಾರದ ಆಭರಣಗಳು, ಬೆಳ್ಳಿಯ ವಸ್ತುಗಳು, ನಗದು ಹಣ ಮುಂತಾದುವನ್ನು ತೆಗೆದುಕೊಂಡರು. ವಸ್ತುಗಳನ್ನು ಜಫ್ತಿ ಮಾಡಿದ್ದ ಬಗ್ಗೆ ಕಾನ್ಸ್ಟೆಬಲ್ ಪಂಚನಾಮೆ ಬರೆದು ಮನೆಯಲ್ಲಿದ್ದವರಿಂದ ಅದರ ಮೇಲೆ ಸಹಿ ಮಾಡಿಸಿದ. ನಂತರ ಕಾರಿನಲ್ಲಿ ಎಲ್ಲರೂ ಹೊರಟುಹೋದರು.
ಕೆಲವೇಹೊತ್ತಿನ ನಂತರ ಉದ್ಯಮಿಯ ಮಗ ಕಾಲೇಜಿನಿಂದ ಮನೆಗೆ ವಾಪಸಾದ. ಮನೆಯಲ್ಲಿ ನಡೆದ ಘಟನೆಯನ್ನು ತಿಳಿದು ಗಾಬರಿಯಾದ ಆತ ತನ್ನ ತಂದೆಯ ಚಾರ್ಟರ್ಡ್ ಅಕೌಂಟೆಂಟ್ಗೆ ಫೋನ್ ಮಾಡಿ ವಿಷಯ ತಿಳಿಸಿದ. ಕೂಡಲೇ ಅಲ್ಲಿಗೆ ಧಾವಿಸಿದ ಚಾರ್ಟರ್ಡ್ ಅಕೌಂಟೆಂಟ್ ಎಲ್ಲವನ್ನೂ ಪರಿಶೀಲಿಸಿ ಆದಾಯ ತೆರಿಗೆ ಕಚೇರಿಗೆ ಕರೆ ಮಾಡಿದರು. ದಾಳಿ ಮಾಡಿದ ಬಗ್ಗೆ ಕಾರಣ ಕೇಳಿದರು. ಆದರೆ, ತೆರಿಗೆ ಅಧಿಕಾರಿಗಳು ತಾವು ಉದ್ಯಮಿ ಮನೆ ಮೇಲೆ ದಾಳಿಯನ್ನೇ ಮಾಡಿಲ್ಲ ಎಂದಾಗ ಸಂಶಯಗೊಂಡ ಚಾರ್ಟರ್ಡ್ ಅಕೌಂಟೆಂಟ್ ಸಂಬಂಧಪಟ್ಟ ಡಿಸಿಪಿ ಕಚೇರಿಗೆ ಹೋಗಿ ಘಟನೆಯ ಬಗ್ಗೆ ದೂರನ್ನು ನೀಡಿದರು.
ಪೊಲೀಸರು ಬಂದು ಪರಿಶೀಲಿಸಿದಾಗ ಉದ್ಯಮಿ ಬೆಡ್ರೂಂನಲ್ಲಿ ಸಿಸಿಟಿವಿ ಕ್ಯಾಮರಾ ಇರುವುದನ್ನು ಗಮನಿಸಿದರು. ಆ ಕ್ಯಾಮರಾ ರೆಕಾರ್ಡ್ ಮಾಡಿದ್ದ ಫುಟೇಜ್ ಪರಿಶೀಲಿಸಿದಾಗ ತಮ್ಮ ಇಲಾಖೆಯವನೇ ಆಗಿದ್ದ ಕಾನ್ಸ್ಟೆಬಲ್ ಮತ್ತು ಪತ್ರಕರ್ತ ಈ ಕೃತ್ಯ ಮಾಡಿದ್ದು ತಿಳಿಯಿತು. ಕಾನ್ಸ್ಟೆಬಲ್ನನ್ನು ಕಚೇರಿಗೆ ಕರೆಸಿಕೊಂಡ ಡಿಸಿಪಿ ಅವನ ವಿಚಾರಣೆ ನಡೆಸಿ ಅವನ ಮಾಹಿತಿಯ ಮೇರೆಗೆ ಉಳಿದೆಲ್ಲ ಆರೋಪಿಗಳನ್ನು ಬಂಧಿಸಿದರು. ರಿಯಲ್ ಎಸ್ಟೇಟ್ ಉದ್ಯಮಿ ಮನೆಯಿಂದ ಕದ್ದಿದ್ದ 25 ಲಕ್ಷ ರೂ. ಬೆಲೆಬಾಳುವ ಆಭರಣಗಳನ್ನು ಯಥಾವತ್ತಾಗಿ ಮರಳಿ ಪಡೆದರು. ಕದ್ದ ಹಣದಲ್ಲಿ ಸುಮಾರು 5000 ರೂಗಳನ್ನು ಖರ್ಚು ಮಾಡಿದ್ದು ತಿಳಿಯಿತು. ಆರೋಪಿಗಳ ಮೇಲೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ವಿಚಾರಣೆಯ ನಂತರ ಎಲ್ಲರಿಗೂ ಐದು ವರ್ಷದ ಶಿಕ್ಷೆ ವಿಧಿಸಲಾಯಿತು.
‘ಬೇಕು ಬೇಕದುಬೇಕು, ಬೇಕಿದೆನನಗಿನ್ನೊಂದು ಬೇಕೆನುತ ಬೊಬ್ಬಿಡತಲಿಹ ಘಟವನಿದನು, ಏಕೆಂದು ರಚಿಸಿದನೋ ಬೊಮ್ಮನೀ ಬೇಕು ಜಪ ಸಾಕೆನುಪುವುದೆಂದಿಗೆಲೊ ಮಂಕುತಿಮ್ಮ’ ಎಂದಂತೆ ಬೇಕು ಜಪದಿಂದಲೇ ಆ ಪತ್ರಕರ್ತ ಕೆಟ್ಟ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)