

ಅಭಯಾಳಿದ್ದ ಹಾಸ್ಟೆಲ್ಲಿನಲ್ಲಿ ವಾಸಿಸುತ್ತಿದ್ದವರು ಹಿಂದಿನ ತನಿಖಾಧಿಕಾರಿಗೆ ಪ್ರಕರಣದ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದ ಕಾರಣ ಆ 40 ಜನರನ್ನು 2005ರ ಆಗಸ್ಟ್ನಲ್ಲಿ ಬೆಂಗಳೂರಿಗೆ ಕರೆತಂದ ಸಿಬಿಐ ಅವರೆಲ್ಲರನ್ನೂ ಪಾಲಿಗ್ರಾಫ್ (ಸುಳ್ಳು ಪತ್ತೆ ಯಂತ್ರ) ಪರೀಕ್ಷೆಗೆ ಗುರಿಪಡಿಸಿತು. ಇವರ ಜತೆಗೆ ಶವದ ಮೇಲಿನ ಮಹಜರನ್ನು ಮಾಡಿದ್ದ ಎಎಸ್ಐ ಅಗಸ್ಟಿನ್ ಮತ್ತು ಪಾದ್ರಿ ಜೋಸ್ ಪುತ್ರುಕ್ಕಾಯಿಲ್ ಅವರ ಪರೀಕ್ಷೆಯನ್ನೂ ಮಾಡಲಾಯಿತು. ಪಾದ್ರಿ ಜೋಸ್, ರ್ಚಚಿನ ಮಾಲೀಕತ್ವದ ಪ್ರಿಂಟಿಂಗ್ ಪ್ರೆಸ್ನ ಮ್ಯಾನೇಜರಾಗಿದ್ದರಲ್ಲದೆ ಅಭಯಾ ಕಲಿಯುತ್ತಿದ್ದ ಕಾಲೇಜಿನಲ್ಲಿ ಲೆಕ್ಚರರ್ ಸಹ ಆಗಿದ್ದರು. ಅವರು ಪ್ರೆಸ್ನ ಕಾರ್ಯನಿಮಿತ್ತ ವಾರಕ್ಕೆರಡು ಮೂರು ಬಾರಿಯಾದರೂ ಅಭಯಾಳಿದ್ದ ಹಾಸ್ಟೆಲ್ಲಿಗೆ ಬರುತ್ತಿದ್ದ ಕಾರಣ ಅವರ ಮೇಲೆ ತನಿಖಾಧಿಕಾರಿಗೆ ಗುಮಾನಿ ಬಂದಿತ್ತು. ಪೊಲೀಸರು ಊಹಿಸಿದಂತೆಯೇ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಪಿ.ಎಸ್.ಐ ಅಗಸ್ಟಿನ್ ದಾಖಲೆಗಳನ್ನು ನಾಶ ಮಾಡಿರುವ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಕೊಟ್ಟ ಉತ್ತರಗಳು ಸುಳ್ಳು ಎಂದು ತಿಳಿಯಿತು. ಇದಲ್ಲದೆ ಹಾಸ್ಟೆಲ್ಲಿನ ಅಡುಗೆ ಕೋಣೆಯ ಉಸ್ತುವಾರಿ ವಹಿಸಿದ್ದ ಸಿಸ್ಟರ್ ಸೆಫಿ, ಪಾದ್ರಿ ಜೋಸ್ರೊಂದಿಗೆ ಸಂಬಂಧ ಹೊಂದಿರುವುದಾಗಿಯೂ ತಿಳಿದುಬಂದಿತು. ಈ ಸಂಬಂಧಕ್ಕೂ ಅಭಯಾ ಸಾವಿಗೂ ಏನಾದರೂ ಕೊಂಡಿಯಿದೆಯೇ ಎನ್ನುವ ಬಗ್ಗೆ ಮಾಹಿತಿ ಹೊರಬರಲಿಲ್ಲ. ಹೀಗಾಗಿ ಅಭಯಾ ಕೊಲೆಯನ್ನು ಯಾರು ಮಾಡಿದರೆಂದು ತಿಳಿದುಬರುತ್ತಿಲ್ಲವೆಂದು ಸಿಬಿಐ ಮತ್ತೊಮ್ಮೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ಈ ವರದಿಯನ್ನೂ ನ್ಯಾಯಾಲಯ ತಿರಸ್ಕರಿಸಿತು. ಮತ್ತೆ ತನಿಖೆ ಮುಂದುವರಿಯಿತು. 2007ರ ಜುಲೈ 11ರಂದು ಈ ಪ್ರಕರಣಕ್ಕೆ ತಿರುವು ಸಿಕ್ಕಿತು. ಕೊಲೆಯಾದ ದಿನದಂದು ಅಭಯಾಳ ಹಾಸ್ಟೆಲಿನಲ್ಲಿ ಮಿಂಚುವಾಹಕವನ್ನು ಕದ್ದಿದ್ದ ಆರೋಪದ ಮೇರೆಗೆ ಕೇರಳ ಪೊಲೀಸರು ಬಂಧಿಸಿದ್ದ ಅಡಕೆ ರಾಜು ಸ್ವಯಂಪೂರ್ವಕವಾಗಿ ಸಿಬಿಐ ತನಿಖಾಧಿಕಾರಿಯ ಮುಂದೆ ಹಾಜರಾಗಿ, ತಾನು ಕಾನ್ವೆಂಟಿನ ಆವರಣದಿಂದ ಕಳ್ಳತನ ಮಾಡಿಕೊಂಡು ವಾಪಸಾಗುತ್ತಿದ್ದಾಗ ಇಬ್ಬರು ಪಾದ್ರಿಗಳನ್ನು ಕಂಡದ್ದಾಗಿ ತಿಳಿಸಿ ಅವರಿಬ್ಬರೂ ಮಲೆಯಾಳಿ ಭಾಷೆಯಲ್ಲಿ ಮಾತನಾಡುತ್ತಿದ್ದು ಏನನ್ನೋ ಹುಡುಕುತ್ತಿದ್ದರೆಂದ. ‘ನನ್ನನ್ನು ಕೇರಳ ಸಿಐಡಿ ಪೊಲೀಸರು ಬಂಧಿಸಿದಾಗ ಈ ಮಾಹಿತಿ ಕೊಟ್ಟರೂ ಅವರು ನಾನು ಸುಳ್ಳು ಹೇಳುತ್ತಿರುವೆನೆಂದರು. ಅಭಯಾಳ ಕೊಲೆಯನ್ನು ನಾನೇ ಮಾಡಿದೆನೆಂದು ಒಪ್ಪಿಕೊಳ್ಳಲು ಹಲವಾರು ಆಮಿಷಗಳನ್ನೊಡ್ಡಿದರು, ನಾನು ಒಪ್ಪದಿದ್ದಾಗ ಚಿತ್ರಹಿಂಸೆ ನೀಡಿ ನನ್ನ ಮೇಲೆ 40 ಸುಳ್ಳು ಕೇಸುಗಳನ್ನು ಹಾಕಿದರು’ ಎಂದ. ಕಾಂಪೌಂಡಿನ ಪಕ್ಕದಲ್ಲಿ ಬೆಳೆದಿದ್ದ ಕೋಕೋ ಮರದ ರೆಂಬೆಯನ್ನೇರಿ ಕಾನ್ವೆಂಟನ್ನು ಪ್ರವೇಶಿಸಿದ್ದಾಗಿ ಹೇಳಿದ ಆತ ತನಿಖಾಧಿಕಾರಿಗೆ ಆ ಜಾಗವನ್ನೂ ತೋರಿಸಿದ. ಸಿಬಿಐ ಅಧಿಕಾರಿಗಳು ಆ ಜಾಗವನ್ನು ನೋಡಲು ಹೋದಾಗ, ರಾಜು ಹೇಳಿದ್ದು ಸತ್ಯವೆಂದು ಮನವರಿಕೆಯಾಯಿತು. ಅವರು ಆ ಜಾಗದ ಪಕ್ಕದಲ್ಲಿಯೇ ಇದ್ದ ಮನೆಗೆ ಹೋಗಿ ಅಭಯಾಳ ಸಾವುಂಟಾದ ಹಿಂದಿನ ರಾತ್ರಿ ಏನಾದರೂ ವಿಶೇಷವನ್ನು ಕಂಡಿರಾ ಎಂದು ಕೇಳಿದರು. ಮನೆಯ ಮಾಲೀಕ ಸಂಜು ಜಾರ್ಜ್, 1992ರ ಮಾರ್ಚ್ 26ರ ರಾತ್ರಿ ತನ್ನ ಮನೆಯ ಮುಂದೆ ಫಾದರ್ ಥಾಮಸ್ ಕೋಟೂರ್ ಎಂಬ ಪಾದ್ರಿ ತಮ್ಮ ಸ್ಕೂಟರ್ ನಿಲ್ಲಿಸಿದ್ದರು; ಬೆಳಿಗ್ಗೆ ಆ ವಾಹನ ಅಲ್ಲಿರಲಿಲ್ಲ ಎಂದ. ಸ್ಕೂಟರ್ ನಿಲ್ಲಿಸಿದ್ದ ಸ್ಥಳವು ಕೋಕೋ ಮರದ ರೆಂಬೆಯ ಕೆಳಗಿದ್ದುದನ್ನು ತನಿಖಾಧಿಕಾರಿ ಗಮನಿಸಿದರು. ಪಾದ್ರಿ ಕೋಟೂರ್ ಚರ್ಚ್ನ ಬಿಷಪ್ರ ಕಾರ್ಯದರ್ಶಿಯಾಗಿದ್ದರೆಂದು ತಿಳಿಯಿತು. ಅದೇ ಚರ್ಚ್ ಅಭಯಾ ಕಲಿಯುತ್ತಿದ್ದ ಕಾಲೇಜಲ್ಲದೇ ಹಾಸ್ಟೆಲ್ಲನ್ನೂ ನಡೆಸುತ್ತಿತ್ತು. ಪಾದ್ರಿ ಕೋಟೂರ್ ಆ ಕಾಲೇಜಿನಲ್ಲಿಯೇ ಮನಶ್ಶಾಸ್ತ್ರದ ಪೊ›ಫೆಸರ್ ಆಗಿದ್ದು ಕಾಲಕಾಲಕ್ಕೆ ಅಭಯಾಳಿದ್ದ ಹಾಸ್ಟೆಲ್ಲಿಗೆ ಬಂದುಹೋಗುತ್ತಿದ್ದರು ಎಂದು ತನಿಖಾಧಿಕಾರಿಗೆ ತಿಳಿಯಿತು. ಅವರು ಕೆಲವೊಮ್ಮೆ ರಾತ್ರಿಯ ಭೋಜನವನ್ನು ಸನ್ಯಾಸಿನಿಯರ ಜತೆ ಮಾಡುತ್ತಿದ್ದರು ಎಂದು ಹಾಸ್ಟೆಲಿನ ಸಿಬ್ಬಂದಿ ಹೇಳಿದರು. ಪಾದ್ರಿ ಕೋಟೂರ್ರನ್ನು ತೀವ್ರವಾಗಿ ಪ್ರಶ್ನಿಸಿದಾಗ ಹಾಸ್ಟೆಲಿನ ಹಿರಿಯ ಸನ್ಯಾಸಿನಿ ಸಿಸ್ಟರ್ ಸೆಫಿ ಜತೆ ಸಂಪರ್ಕವಿಟ್ಟುಕೊಂಡಿರುವುದಾಗಿ ತಿಳಿಸಿ ಆಕೆಯನ್ನು ಗುಟ್ಟಾಗಿ ಕಾಣಲು ಆ ರಾತ್ರಿ ಕೋಕೋ ಮರದ ಕೊಂಬೆಯೇರಿ ಹಾಸ್ಟೆಲ್ ಆವರಣ ಪ್ರವೇಶಿಸಿದ್ದಾಗಿ ತಿಳಿಸಿದರು. ಆ ರಾತ್ರಿ ಪಾದ್ರಿ ಜೋಸ್ ಪೂತ್ರಿಕಾಯಿಲ್ ಕೂಡಾ ಅಲ್ಲಿದ್ದರು ಎಂದು ಹೇಳಿದರು. ಈ ಹಿಂದೆ ಸಿಸ್ಟರ್ ಸೆಫಿ ಮತ್ತು ಪಾದ್ರಿ ಜೋಸ್ ಅವರನ್ನು ಸಿಬಿಐ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿದಾಗ ಅವರಿಬ್ಬರ ನಡುವೆ ಸಂಬಂಧವಿದ್ದದ್ದು ಬೆಳಕಿಗೆ ಬಂದಿದ್ದನ್ನು ಅರಿತಿದ್ದ ತನಿಖಾಧಿಕಾರಿ ಸಿಸ್ಟರ್ ಸೆಫಿಯನ್ನು ಮತ್ತೊಮ್ಮೆ ಪ್ರಶ್ನಿಸಿದರು. ಈ ಇಬ್ಬರೂ ಪಾದ್ರಿಗಳೊಡನೆ ಸಂಬಂಧವನ್ನಿಟ್ಟ್ಟುಕೊಂಡಿರುವುದಾಗಿ ಆಕೆ ಒಪ್ಪಿದರು. ಆಗ ತನಿಖಾಧಿಕಾರಿಗೆ ಕಳ್ಳ ರಾಜು ಆ ರಾತ್ರಿ ಹಾಸ್ಟೆಲ್ಲಿನ ಆವರಣದಲ್ಲಿ ನೋಡಿದ್ದ ಪಾದ್ರಿಗಳು ಇವರೇ ಇರಬಹುದೆಂಬ ಸಂಶಯ ಮೂಡಿತು. ಆದರೆ ಆ ಮೂವರು ಅಭಯಾಳ ಸಾವಿನ ಬಗ್ಗೆ ತಮಗೇನೂ ತಿಳಿಯದೆಂದು ಹೇಳಿದರು. ಅವರೆಲ್ಲರನ್ನೂ ಮಂಪರು ಪರೀಕ್ಷೆಗೆ ಗುರಿಪಡಿಸಲು ಸಿಬಿಐ ನಿರ್ಧರಿಸಿತು. ಏತನ್ಮಧ್ಯೆ ಕೆಲವು ಸಾರ್ವಜನಿಕರು ಕೇರಳ ಹೈಕೋರ್ಟಿನ ಮೆಟ್ಟಲೇರಿ, ಕೊಲೆ ಪ್ರಕರಣವನ್ನು ಮುಚ್ಚಿಹಾಕುವ ಯತ್ನಮಾಡಲಾಗುತ್ತಿರುವುದರಿಂದ ಕೂಡಲೇ ಸತ್ಯವನ್ನು ಹೊರತರಲು ಸಿಬಿಐಗೆ ಆದೇಶಿಸಬೇಕೆಂದು ಕೋರಿದರು. ಅಂತೆಯೇ 2008ರಲ್ಲಿ ಉಚ್ಚ ನ್ಯಾಯಾಲಯವು ಮೂರು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಬೇಕೆಂದು ಸಿಬಿಐಗೆ ಆದೇಶಿಸಿತು. ಆಗ ಸಿಬಿಐನ ಡಿವೈಎಸ್ಪಿ ನಂದಕುಮಾರ್ ನಾಯರ್ ತನಿಖೆಯ ಮುಂದಾಳತ್ವ ವಹಿಸಿದರು. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಶಾಲೆಯಲ್ಲಿ ಇಬ್ಬರು ಪಾದ್ರಿಗಳು ಮತ್ತು ಸಿಸ್ಟರ್ ಸೆಫಿಯವರನ್ನು 2008ರ ಮೇ 23 ರಂದು ಮಂಪರು ಪರೀಕ್ಷೆಗೆ ಗುರಿಪಡಿಸಲಾಯಿತು. ಸಿಸ್ಟರ್ ಸೆಫಿಗೆ ಮಂಪರು ಔಷಧಿ ನೀಡಿದ ನಂತರ ವಾಂತಿ ಬಂದ ಕಾರಣ ಪರೀಕ್ಷೆಯನ್ನು ಮುಂದುವರಿಸಲಿಲ್ಲ. ಆನಂತರ ಮೂರೂ ಜನರನ್ನು ಮತ್ತೊಮ್ಮೆ ಪಾಲಿಗ್ರಾಫ್ ಪರೀಕ್ಷೆಗೆ ಗುರಿಮಾಡಲಾಯಿತು. ಇದಲ್ಲದೇ ಪಾದ್ರಿ ಕೋಟೂರ್ ಅವರ ಸ್ಕೂಟರ್ ಬಗ್ಗೆ ಮಾಹಿತಿ ನೀಡಿದ ಸಂಜು ಸುಳ್ಳು ಹೇಳಿಲ್ಲವೆಂದು ಪುಷ್ಟೀಕರಿಸಲು ಅವರ ಪಾಲಿಗ್ರಾಫ್ ಪರೀಕ್ಷೆಯನ್ನೂ ಮಾಡಿಸಲಾಯಿತು.
(ಮುಂದುವರಿಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)