

ಅರವತ್ತು ವರ್ಷ ವಯಸ್ಸಿನ ಶ್ರೀಕೃಷ್ಣ ಬಹುರಾಷ್ಟ್ರೀಯ ಐಟಿ ಕಂಪನಿಯೊಂದರಲ್ಲಿ ಮುಖ್ಯ ಹಣಕಾಸು ಆಧಿಕಾರಿಯಾಗಿ ನಿವೃತ್ತಿ ಹೊಂದಿದ್ದು ಪತ್ನಿ 52 ವರ್ಷದ ರಾಧಾ ಜೊತೆ ಮಹಾನಗರವೊಂದರ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸ್ವಂತ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಅವರ ಮಗ ರವಿ ಮತ್ತು ಮಗಳು ಸುಧಾ ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ದರು. ಪ್ರತಿವರ್ಷವೂ ಶ್ರೀಕೃಷ್ಣ ಪತ್ನಿಯೊಡನೆ ಆರು ತಿಂಗಳ ಕಾಲ ಅಮೆರಿಕಕ್ಕೆ ಹೋಗಿ ಮಕ್ಕಳ ಮನೆಯಲ್ಲಿದ್ದು ಬರುತ್ತಿದ್ದರು. ತಾವಿಲ್ಲದಿದ್ದಾಗ ಮನೆಯತ್ತ ನಿಗಾ ಇಡಲು ಅವರು ಮನೆಗೆ ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ಅಳವಡಿಸಿಕೊಂಡಿದ್ದರು. ಮನೆಯ ಒಳಹೊರಗೆ ಸಿಸಿಟಿವಿ ಕ್ಯಾಮರಾಗಳಿದ್ದವು. ಮನೆಗೆ ಕಳ್ಳರು ಬಂದರೆ ಎಚ್ಚರಿಸುವ ಉಪಕರಣಗಳಿದ್ದವು. ಮನೆಯಲ್ಲಿ ಏನಾಗುತ್ತಿದೆ ಎನ್ನುವುದನ್ನು ಅವರು ಹೊರಗಿನಿಂದಲೇ ಮೊಬೈಲ್ ಮೂಲಕ ನೋಡಬಹುದಾಗಿತ್ತು. ಈ ಸೌಲಭ್ಯವನ್ನು ಅವರು ಮಗನಿಗೂ ಕೊಟ್ಟಿದ್ದರು.
ಅವರು ಮಹಾನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿ ಹತ್ತು ಎಕರೆ ಜಮೀನನ್ನು ಖರೀದಿಸಿ ಹಣ್ಣಿನ ಗಿಡಗಳನ್ನು ನೆಟ್ಟಿದ್ದರು. ಅಲ್ಲಿ ಸುಸಜ್ಜಿತ ತೋಟದ ಮನೆ ಕಟ್ಟಿಸಿ ವಾರಾಂತ್ಯ ಕಳೆಯುತ್ತಿದ್ದರು. ತೋಟ ನೋಡಿಕೊಳ್ಳಲು ರಾಮ್ಾಲ್ ಎನ್ನುವ ನೇಪಾಳಿಯನ್ನು ನೇಮಿಸಿಕೊಂಡಿದ್ದರು. ಆತ ನಂಬಿಕಸ್ಥ ವ್ಯಕ್ತಿಯಾಗಿದ್ದು ತನ್ನ ಕುಟುಂಬವನ್ನು ನೇಪಾಳದಲ್ಲಿಯೇ ಬಿಟ್ಟು ಬಂದಿದ್ದ. ಕೆಲ ವರ್ಷಗಳ ನಂತರ ರಾಮ್ಾಲ್ ತನ್ನ 16 ವರ್ಷದ ಮಗ ಸುಂದರ್ಗೆ ಉದ್ಯೋಗ ನೀಡಲು ಕೇಳಿದಾಗ, ಶ್ರೀಕೃಷ್ಣ ಅವನನ್ನು ಮನೆಕೆಲಸಕ್ಕೆ ಹಾಕಿಕೊಂಡರು. ಸುಂದರ್ಗೆ ವಾಸಿಸಲು ಮನೆಯಲ್ಲಿಯೇ ಕೋಣೆಯೊಂದನ್ನು ಕೊಟ್ಟರು. ಅವನಿಗೆ ಕಾರು ಓಡಿಸುವುದನ್ನು, ಬ್ಯಾಂಕ್ ವ್ಯವಹಾರ ಮಾಡುವುದನ್ನು ಹೇಳಿಕೊಟ್ಟರು. ರಾಧಾ ಅವನಿಗೆ ಅಡುಗೆ ಕಲಿಸಿದರು. ಅವನನ್ನು ದೂರಶಿಕ್ಷಣದ ಮೂಲಕ ಪಿಯುಸಿ ಪಾಸ್ ಮಾಡಿಸಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿಗೆ ಸೇರಿಸಿ ಸ್ವಂತ ಮಗನಂತೆಯೇ ನೋಡಿಕೊಳ್ಳುತ್ತಿದ್ದರು.
2019ರ ಅಕ್ಟೋಬರ್ನಲ್ಲಿ ಶ್ರೀಕೃಷ್ಣ ದಂಪತಿ ಅಮೆರಿಕಾಕ್ಕೆ ಹೊರಟರು. ಅವರು ಮೊಬೈಲ್ ಮೂಲಕ ಮನೆಯ ಮೇಲೆ ನಿಗಾ ಇಡುತ್ತಿದ್ದದ್ದು ಸುಂದರ್ಗೆ ಗೊತ್ತಿತ್ತು. ಮನೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನೆಲ್ಲಿ ಅಳವಡಿಸಲಾಗಿದೆ ಅದರ ರೆಕಾರ್ಡರ್ ಎಲ್ಲಿದೆ ಎಂದೂ ಅವನಿಗೆ ತಿಳಿದಿತ್ತು. 2020ರ ಏಪ್ರಿಲ್ 8ರ ಬೆಳಗಿನ 3 ಗಂಟೆಗೆ ಶ್ರೀಕೃಷ್ಣ ದಂಪತಿ ಊರಿಗೆ ವಾಪಸ್ ಬಂದರು. ಅವರನ್ನು ವಿಮಾನ ನಿಲ್ದಾಣದಲ್ಲಿ ಸುಂದರ್ ಎದುರುಗೊಂಡ. ಆತ ಜತೆಯಲ್ಲಿ ಒಬ್ಬ ಯುವಕನನ್ನು ಕರೆತಂದಿದ್ದು ತನ್ನ ಸಂಬಂಧಿ ರಾಜು ಎಂದು ಪರಿಚಯಿಸಿದ. 4.30ಕ್ಕೆ ಮನೆಯನ್ನು ತಲುಪಿದರು. ಅಮೆರಿಕದಲ್ಲಿದ್ದ ರವಿ ತನ್ನ ಮಾತಾಪಿತರು ಮನೆ ತಲುಪಿದ ಬಗ್ಗೆ ಫೋನ್ ಮಾಡಲಿಲ್ಲವೆಂದು ಬೆಳಿಗ್ಗೆ 9 ಗಂಟೆಗೆ ಅವರಿಗೆ ಕರೆ ಮಾಡಿದ. ಇಬ್ಬರ ಫೋನ್ಗಳು ರಿಂಗ್ ಆದರೂ ಉತ್ತರ ಬರಲಿಲ್ಲ. ಫೋನುಗಳನ್ನು ಸೈಲೆಂಟ್ ಮೋಡಿನಲ್ಲಿಟ್ಟಿರಬೇಕೆಂದು ಊಹಿಸಿದ ರವಿ ಸುಂದರ್ಗೆ ಫೋನು ಮಾಡಿದ. ಅದು ಸ್ವಿಚ್ ಆಫ್ ಆಗಿತ್ತು. ನಂತರ ಆತ ವಿಮಾನ ನಿಲ್ದಾಣಕ್ಕೆ ಫೋನ್ ಮಾಡಿದಾಗ ವಿಮಾನವು ಊರು ತಲುಪಿ 6 ಗಂಟೆಗಳಾದವು ಎಂದು ತಿಳಿಯಿತು. ತಂದೆಯ ಮನೆಯಲ್ಲಿ ಏನಾಗುತ್ತಿದೆ ಎಂದು ಅಲ್ಲಿನ ಸಿಸಿಟಿವಿ ಕ್ಯಾಮರಾಗಳೇ ತಿಳಿಸುತ್ತವೆಯಲ್ಲವೇ ಎಂದುಕೊಂಡ ರವಿ ತನ್ನ ಮೊಬೈಲ್ನ ಆಪ್ ಚಾಲೂ ಮಾಡಿ ನೋಡಿದ. ಮನೆಯಲ್ಲಿದ್ದ ಅಷ್ಟೂ ಸಿಸಿಟಿವಿಗಳು ಸ್ವಿಚ್ ಆಫ್ ಆಗಿದ್ದವು. ಗಾಬರಿಗೊಂಡ ರವಿ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡಲು ವಿನಂತಿಸಿದ.
ಸಂಬಂಧಿಕರು ಬಂದು ನೋಡಿದಾಗ ಮನೆಗೆ ಬೀಗ ಹಾಕಿತ್ತು. ಶ್ರೀಕೃಷ್ಣರ ಕಾರೂ ಕಾಣಲಿಲ್ಲ. ಆಗವರು ಆತಂಕಗೊಂಡು ಪರಿಚಯದ ಹಿರಿಯ ಐಪಿಎಸ್ ಅಧಿಕಾರಿಗೆ ಕರೆ ಮಾಡಿದರು. ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿದರು. ಪೊಲೀಸರು ರವಿಯ ಸೂಚನೆಯಂತೆ ಬೀಗ ಒಡೆದು ಮನೆಯೊಳಗೆ ಹೋದರು. ಮನೆಯ ನೆಲವನ್ನು ಫಿನೈಲ್ ಹಾಕಿ ಸಾರಿಸಿದ್ದ ವಾಸನೆ ಬಂದಿತು. ಆದರೆ ವೃದ್ಧ ದಂಪತಿ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ. ಶ್ರೀಕೃಷ್ಣ ದಂಪತಿ ವಿಮಾನ ನಿಲ್ದಾಣದಿಂದ ನೇರವಾಗಿ ತೋಟದಮನೆಗೆ ಹೋಗಿರಬಹುದೆಂದು ಶಂಕಿಸಿದ ರವಿ ಅಲ್ಲಿಗೆ ಹೋಗಲು ಪೊಲೀಸರನ್ನು ವಿನಂತಿಸಿದ. ಅಲ್ಲಿಯೂ ಯಾರೂ ಇರಲಿಲ್ಲ. ಆಗ ಚಾಲಕ ಸುಂದರ್ನ ಮೇಲೆ ಶಂಕೆ ಮೂಡಿತು. ಆದರೆ ಅವನ ವಿವರಗಳು ಯಾರಲ್ಲಿಯೂ ಇರಲಿಲ್ಲ. ಆಗ ರವಿಯಿಂದ ಶ್ರೀಕೃಷ್ಣರ ಕಾರು ಮತ್ತು ಸುಂದರ್ನ ವಿವರಗಳನ್ನು ಪಡೆದ ಪೊಲೀಸರು ನಗರದ ಎಲ್ಲ ಪೊಲೀಸ್ ಠಾಣೆಗಳಿಗೂ ಅದನ್ನು ರವಾನಿಸಿ ನಿಗಾ ಇಡುವಂತೆ ಕೋರಿದರು.
ಏತನ್ಮಧ್ಯೆ, ಪೊಲೀಸ್ ಕಾನ್ಸ್ಟೆಬಲ್ ಒಬ್ಬ ತೋಟದಲ್ಲಿ ಒಂದೆಡೆ ಹೊಸದಾಗಿ ಗುಂಡಿ ತೋಡಿ, ಮಣ್ಣನ್ನು ಮುಚ್ಚಿರುವುದನ್ನು ಗಮನಿಸಿದ. ಗುಂಡಿಯನ್ನು ಅಗೆದಾಗ ಅದರೊಳಗೆ ಶ್ರೀಕೃಷ್ಣ ದಂಪತಿ ಮೃತದೇಹಗಳು ಕಂಡವು. ಅವರ ಎರಡು ಮೊಬೈಲ್ ಫೋನುಗಳೂ ಅಲ್ಲಿಯೇ ಬಿದ್ದಿದ್ದವು. ಶವಗಳನ್ನು ಹೊರತೆಗೆದು ಮಹಜರ್ ಮಾಡಲಾಯಿತು. ಶ್ರೀಕೃಷ್ಣರ ತಲೆಗೆ ಭಾರೀ ವಸ್ತುವಿನಿಂದ ಹೊಡೆಯಲಾಗಿತ್ತು. ರಾಧಾರ ಹೊಟ್ಟೆ, ಎದೆ ಮತ್ತು ಕುತ್ತಿಗೆಗೆ ಇರಿದು ಕೊಲ್ಲಲಾಗಿತ್ತು. ಜೋಡಿಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲು ಮಾಡಿದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ದಂಪತಿಯ ಎರಡೂ ಫೋನುಗಳನ್ನು ಪರೀಕ್ಷಿಸಲಾಗಿ ಅವೆರಡೂ ಚಾಲೂ ಸ್ಥಿತಿಯಲ್ಲಿಯೇ ಇದ್ದವು. ಅವುಗಳನ್ನು ಪರಿಶೀಲನೆ ಮಾಡುತ್ತಿರುವಾಗ ಶ್ರೀಕೃಷ್ಣರ ಮೊಬೈಲ್ಗೆ ಎಸ್ಎಂಎಸ್ ಸಂದೇಶವೊಂದು ಬಂದಿತು. ಆ ಸಂದೇಶವು ಆಗತಾನೇ ಅವರ ಕಾರು ಆಂಧ್ರಪ್ರದೇಶದ ಒಂದು ಟೋಲ್ಗೇಟ್ನಲ್ಲಿ ಫಾಸ್ಟಾ್ಯಗ್ ಮೂಲಕ ಸುಂಕ ಕೊಟ್ಟ ಬಗ್ಗೆ ಇತ್ತು. ಕೂಡಲೇ ಆಂಧ್ರಪ್ರದೇಶದ ಪೊಲೀಸರನ್ನು ಸಂರ್ಪಸಿದ ತನಿಖಾಧಿಕಾರಿ, ಹೆದ್ದಾರಿಯಲ್ಲಿ ಚಲಿಸುತ್ತಿರುವ ಶ್ರೀಕೃಷ್ಣರ ಕಾರನ್ನು ಟ್ರಾ್ಯಕ್ ಮಾಡಲು ಕೋರಿದರು. ಒಂದು ಗಂಟೆಯ ಅಂತರದಲ್ಲಿ ಆಂಧ್ರ ಪೊಲೀಸರು ಕಾರನ್ನು ಪತ್ತೆ ಮಾಡಿ, ಕಾರಿನಲ್ಲಿದ್ದ ಇಬ್ಬರು ಯುವಕರನ್ನು ವಶದಲ್ಲಿಟ್ಟುಕೊಂಡಿರುವುದಾಗಿ ತನಿಖಾಧಿಕಾರಿಗೆ ಮಾಹಿತಿ ನೀಡಿದರು.
ತನಿಖಾಧಿಕಾರಿ ಅಲ್ಲಿಗೆ ಧಾವಿಸಿದರು. ಆಂಧ್ರ ಪೊಲೀಸರ ವಶದಲ್ಲಿದ್ದ ಚಾಲಕ ಸುಂದರ್ ಮತ್ತವನ ಸ್ನೇಹಿತ ರಾಜುವನ್ನು ವಶಕ್ಕೆ ಪಡೆದು ಪ್ರಶ್ನಿಸಿದರು. ಸುಂದರ್ನ ಕಿಟ್ಬ್ಯಾಗಿನಲ್ಲಿ ನೂರು ತೊಲ ಚಿನ್ನದ ಬಿಸ್ಕತ್ತುಗಳು ಹಾಗೂ 20 ಕೆಜಿ ಭಾರದ ಬೆಳ್ಳಿಯ ಗಟ್ಟಿಗಳು ಮತ್ತು 15 ಲಕ್ಷ ರೂ ನಗದು ಇದ್ದವು. ಪೊಲೀಸರ ವಿಚಾರಣೆಯಲ್ಲಿ ಸುಂದರ್ ಹೀಗೆ ಹೇಳಿದ: ‘ನನ್ನ ಮಾಲೀಕರು ಅಮೆರಿಕಾಕ್ಕೆ ಹೋಗುವ ಹಿಂದಿನ ದಿನ ಯಾರೊಡನೆಯೋ ಫೋನಿನಲ್ಲಿ ಮಾತನಾಡುತ್ತಾ ಅವರಿಗೆ 40 ಕೋಟಿ ರೂಪಾಯಿ ಕೊಡುವುದಾಗಿ ಹೇಳಿದರು. ಈ ಹಣವನ್ನವರು ಮನೆಯಲ್ಲಿಯೇ ಇಟ್ಟಿರಬೇಕೆಂದು ನಾನು ಊಹಿಸಿದೆ. ಇದನ್ನು ಲಪಟಾಯಿಸಿ ನೇಪಾಳಕ್ಕೆ ಹೋಗಿ ಸುಖೀಜೀವನ ನಡೆಸಬೇಕೆಂದು ಉದ್ದೇಶಿಸಿ ಕಳ್ಳತನಕ್ಕೆ ಪ್ಲಾನ್ ಮಾಡತೊಡಗಿದೆ. ಮಾಲೀಕರು ಪ್ರತಿದಿನವೂ ಮನೆಯ ಆಗುಹೋಗುಗಳನ್ನು ಗಮನಿಸುವ ಬಗ್ಗೆ ನನಗರಿವಿತ್ತು. ವಿಮಾನದಲ್ಲಿ ಅವರು ಫೋನ್ ಉಪಯೋಗಿಸಲು ಸಾಧ್ಯವಿಲ್ಲದ್ದರಿಂದ ಕಳ್ಳತನವೆಸಗಲು ಅದೇ ಸೂಕ್ತ ಸಮಯವೆಂದು ನಿರ್ಧರಿಸಿದೆ. ತಂದೆ ರಾಮ್ಾಲ್ಗೆ ಊರಿಗೆ ಹೋಗಲು ಸೂಚಿಸಿದೆ. ಗೆಳೆಯ ರಾಜುವಿಗೆ ನಾನಿದ್ದ ಮನೆಗೆ ಬರಲು ಸೂಚಿಸಿದೆ.
ಮಾಲೀಕರಿದ್ದ ವಿಮಾನವು ಇಳಿಯುವ ಒಂದು ಗಂಟೆಯ ಮುಂಚೆ ಮನೆಯಲ್ಲಿದ್ದ ಸಿಸಿಟಿವಿಗಳನ್ನು ಬಂದ್ ಮಾಡಿದೆ. ಮಾಲೀಕರು ಮನೆಗೆ ಬಂದನಂತರ ಮಲಗುವ ಕೋಣೆಗೆ ಹೋಗಿ ಆಲ್ಮೇರಾ ತೆಗೆಯತೊಡಗಿದರು. ಕೂಡಲೇ ಅವರತ್ತ ಧಾವಿಸಿ 40 ಕೋಟಿ ರೂ ಎಲ್ಲಿಟ್ಟಿರುವಿರೆಂದು ಕೇಳಿದೆ. ಅವರು ತಬ್ಬಿಬ್ಬಾದಾಗ ರಾಡಿನಿಂದ ಅವರ ತಲೆಗೆ ಹೊಡೆದು ಕೊಂದೆ. ಅದನ್ನು ಕಂಡ ಅಮ್ಮ ಗಾಬರಿಯಾಗಿ ಕಿರುಚಿದಾಗ ರವಿ ಅವರನ್ನು ಇರಿದು ಕೊಂದ. ಅಲ್ಮೇರಾದಲ್ಲಿ 40 ಕೋಟಿ ರೂ. ಇರಲಿಲ್ಲ. ಇದ್ದ ಎರಡು ಲಕ್ಷ ನಗದು, ಚಿನ್ನ ಬೆಳ್ಳಿಯನ್ನು ಕಿಟ್ ಬ್ಯಾಗಲ್ಲಿ ತುಂಬಿಕೊಂಡು ಆಲ್ಮೇರಾಗೆ ಬೀಗ ಹಾಕಿದೆವು. ನೆಲದ ಮೇಲಾಗಿದ್ದ ರಕ್ತದ ಕಲೆಗಳನ್ನು ಫಿನೈಲ್ ಮಿಶ್ರಿತ ನೀರಿನಲ್ಲಿ ತಿಕ್ಕಿ ತೊಳೆದೆವು. ಆನಂತರ ಮನೆಯ ಮೇನ್ ಸ್ವಿಚ್ ಆಫ್ ಮಾಡಿ ಇಬ್ಬರ ದೇಹಗಳನ್ನೂ ಬೆಡ್ಶೀಟ್ನಲ್ಲಿ ಸುತ್ತಿ ಕಾರಿನ ಡಿಕ್ಕಿಯಲ್ಲಿ ಹಾಕಿದೆವು. ಏತನ್ಮಧ್ಯೆ ನನ್ನ ತಂದೆಯನ್ನು ಊರಿಗೆ ಕಳಿಸಿದ ನಂತರ ರಾಜುವಿನ ಜತೆಗೂಡಿ ತೋಟದಲ್ಲಿ ಗುಂಡಿ ತೋಡಿದ್ದೆ. ತೋಟದ ಮನೆಗೆ ಹೋಗಿ, ಗುಂಡಿಯಲ್ಲಿ ಎರಡೂ ಶವಗಳನ್ನು ಹಾಕಿ ಅವರ ಮೊಬೈಲ್ ಫೋನ್ಗಳನ್ನು ಅದರ ಮೇಲೆಸೆದು ಗುಂಡಿ ಮುಚ್ಚಿ ನೇಪಾಳಕ್ಕೆಂದು ಬೆಳಗಿನ 8 ಗಂಟೆಗೆ ಪರಾರಿಯಾದೆವು.’ ಶ್ರೀಕೃಷ್ಣರ ಕಾರಿನ ಫಾಸ್ಟಾ್ಯಗ್ನಿಂದ ಈ ಪ್ರಕರಣ ಪತ್ತೆಯಾಗದೇ ಹೋಗಿದ್ದರೆ ಬಹುತೇಕ ಅದು ನಾಪತ್ತೆಯಾಗಿಯೇ ಉಳಿಯುತ್ತಿತ್ತು. ಸದ್ಯ ಸುಂದರ್ ಮತ್ತು ರಾಜು ವಿಚಾರಣಾಧೀನ ಕೈದಿಗಳಾಗಿದ್ದಾರೆ. ಅವರಿಗೆ ಮರಣದಂಡನೆ ನೀಡುವುದು ಬಹುತೇಕ ಖಚಿತ. ಶ್ರೀಕೃಷ್ಣ ಅಷ್ಟು ಪ್ರಮಾಣದ ಚಿನ್ನ ಬೆಳ್ಳಿಯನ್ನು ಮನೆಯಲ್ಲೇಕೆ ಇಟ್ಟುಕೊಂಡರೆನ್ನುವುದೇ ಒಗಟಾಗಿದೆ. ಇಬ್ಬರು ಮಕ್ಕಳಿಗೂ ತಂದೆಯ ಆಸ್ತಿ ಬೇಡದಿದ್ದಾಗ ಅವಶ್ಯಕತೆಗಿಂತ ಹೆಚ್ಚಾಗಿದ್ದ ಚರಾಸ್ತಿಯನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಿದ್ದರೆ ಬಹುಶಃ ಅವರಿಗೆ ಇಂತಹ ದುರಂತ ಅಂತ್ಯ ಬರುತ್ತಿರಲಿಲ್ಲವೇನೋ? ‘ಒಬ್ಬ ವ್ಯಕ್ತಿಯ ಆಸ್ತಿಯ ಮಿತಿ ಎಷ್ಟಿರಬೇಕು? ಮೊದಲನೆಯದಾಗಿ ಯಾವುದು ಅವಶ್ಯವೋ ಅದನ್ನಷ್ಟೇ ಹೊಂದಬೇಕು ಮತ್ತು ಎರಡನೆಯದಾಗಿ ನಮಗೆ ಸಾಕಾಗುವಷ್ಟನ್ನು ಮಾತ್ರ ಹೊಂದಬೇಕು’ ಎಂದ ತತ್ವಜ್ಞಾನಿ ಹಿರಿಯ ಸೆನೆಕಾ. ಸಾಫ್ಟ್ವೇರ್ ಸಂಸ್ಥೆಗಳ ಸ್ಥಾಪಕರನೇಕರು ಕೋಟ್ಯಾನುಗಟ್ಟಲೇ ಆಸ್ತಿಯನ್ನು ಸಮಾಜಮುಖಿ ಕಾರ್ಯಗಳಿಗಾಗಿ ದಾನಮಾಡಿ ಮೇಲ್ಪಂಕ್ತಿ ಹಾಕಿದ್ದನ್ನು ಶ್ರೀಕೃಷ್ಣ ಅನುಕರಿಸಬೇಕಾಗಿತ್ತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)