ಆ ಕ್ಷಣ; ಟೀನೇಜ್ ಹೆಣ್ಣುಮಕ್ಕಳ ಬಗ್ಗೆ ಗಮನವಿರಲಿ

AA KSHANA
Published on
ರಾಮಕೃಷ್ಣ ಮಹಾನಗರವೊಂದರಲ್ಲಿ ಸ್ಯಾನಿಟರಿವೇರ್ ಅಂಗಡಿಯನ್ನಿಟ್ಟುಕೊಂಡು ಪತ್ನಿ ಸೀಮಾ, ಪುತ್ರಿ ರಾಧಿಕಾ ಮತ್ತು ಪುತ್ರ ಕಿಶೋರ್ ಜತೆಗೆ ವಾಸಿಸುತ್ತಿದ್ದ. ಹದಿನೇಳು ವರ್ಷದ ರಾಧಿಕಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಪಾಸಾಗಿ ಆಗ ತಾನೇ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿಗೆ ಸೇರಿಕೊಂಡಿದ್ದಳು.

ಕಿಶೋರ್ ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದ. ಸಾಕಷ್ಟು ಅನುಕೂಲವಂತರಾಗಿದ್ದ ರಾಮಕೃಷ್ಣ ದಂಪತಿ ಮಕ್ಕಳನ್ನು ತೀರಾ ಮುದ್ದು ಮಾಡಿದ್ದರೂ ಅದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರದೆ ಇಬ್ಬರೂ ಆಟ-ಪಾಠಗಳೆರಡರಲ್ಲಿಯೂ ಮುಂದಿದ್ದರು.

ಹದಿಹರೆಯಕ್ಕೆ ಕಾಲಿಟ್ಟ ನಂತರ ರಾಧಿಕಾಳ ಸೌಂದರ್ಯ ಇಮ್ಮಡಿಯಾಗಿ ಆಕೆ ಚಲನಚಿತ್ರ ತಾರೆಯಂತೆ ಕಾಣುತ್ತಿದ್ದಳು. ಕಾಲೇಜಿನಲ್ಲಂತೂ ರಾಧಿಕಾಗೆ ‘ಬ್ಯೂಟಿಕ್ವೀನ್’ ಎಂದೇ ಹೆಸರಿಟ್ಟು ಹತ್ತಾರು ಹುಡುಗರು ಅವಳ ಹಿಂದೆಯೇ ಉಪಗ್ರಹಗಳಂತೆ ಸುತ್ತುತ್ತಿದ್ದರು. ಸಣ್ಣವಯಸ್ಸಿನಿಂದಲೂ ಸಿನಿಮಾ ನೋಡುವ ಹುಚ್ಚನ್ನು ಬೆಳೆಸಿಕೊಂಡಿದ್ದ ರಾಧಿಕಾಗೆ ತಾನೊಬ್ಬ ಪ್ರಸಿದ್ಧ ರೂಪದರ್ಶಿಯಾಗಬೇಕು, ಆನಂತರ ಬಾಲಿವುಡ್ ಚಿತ್ರನಟಿಯಾಗಬೇಕು ಎಂಬ ಬಯಕೆ ಇತ್ತು. ನಿಯತವಾಗಿ ವ್ಯಾಯಾಮ ಮಾಡುತ್ತಿದ್ದ ಆಕೆ ಆಹಾರ ಹಾಗೂ ನಿದ್ರೆಯ ವಿಷಯದಲ್ಲಿ ಕಟ್ಟುನಿಟ್ಟಾಗಿದ್ದಳು.

ಮನೆ ಬಳಿಯೇ ಹೊಸದಾಗಿ ತೆರೆದಿದ್ದ ಜಿಮ್ ಒಂದರ ಸದಸ್ಯಳಾದಳು. ಜಿಮ್ ಮಾಲೀಕ ಅವಳಿಗಾಗಿ ವಿನೋದ್ ಎನ್ನುವವನನ್ನು ವೈಯಕ್ತಿಕ ತರಬೇತಿದಾರನನ್ನಾಗಿ ನೇಮಿಸಿ, ‘ಮೇಡಂ, ವಿನೋದ್ ನಮ್ಮ ಮುಖ್ಯ ಟ್ರೇನರ್. ಆತನನ್ನು ನಾವು ಮುಂಬೈನಿಂದ ಕರೆಸಿದ್ದೇವೆ. ಆತ ಈ ಹಿಂದೆ ಹಲವಾರು ಸಿನಿಮಾ ತಾರೆಯರಿಗೆ ಹಾಗೂ ರೂಪದರ್ಶಿಗಳಿಗೆ ತರಬೇತಿ ನೀಡಿದ್ದಾನೆ.

ಆತ ನಿಮ್ಮ ದೇಹವನ್ನು ಸಮಗ್ರ ರೀತಿಯಲ್ಲಿ ಉತ್ತಮಗೊಳಿಸಲು ಸಹಾಯ ಮಾಡುತ್ತಾನೆ. ಜಿಮ್ಲ್ಲಿರುವಷ್ಟು ಸಮಯವೂ ಆತ ನಿಮ್ಮ ಜತೆಗಿರುತ್ತಾನೆ. ಆತನ ಸುಪರ್ದಿಯಲ್ಲಿ ನೀವು ನಿಮ್ಮ ಗುರಿಯನ್ನು ಶೀಘ್ರದಲ್ಲಿಯೇ ಮುಟ್ಟುವಿರಿ’ ಎಂದು ಹೇಳಿದಾಗ ರಾಧಿಕಾ ಸಂತಸಗೊಂಡಳು.

ಅದೇ ದಿನವೇ ರಾಧಿಕಾಗೆ ವಿನೋದನನ್ನು ಪರಿಚಯಿಸಲಾಯಿತು. 6 ಅಡಿ ಎತ್ತರವಿದ್ದು ವಿಶಾಲವಾದ ಎದೆ, ಬಲವಾದ ಸ್ನಾಯುಗಳು, ಮಾಟವಾದ ದೇಹ, ದಟ್ಟಮೀಸೆ ಹಾಗೂ ಬೆಕ್ಕಿನಂತೆ ಕಣ್ಣುಗಳನ್ನು ಹೊಂದಿದ್ದ ಆತ ಯುರೋಪಿಯನ್ ರೂಪದರ್ಶಿಯಂತೆಯೇ ಕಾಣುತ್ತಿದ್ದ. ಅವನನ್ನು ಕಂಡ ಕೂಡಲೇ ರಾಧಿಕಾ ಅವನತ್ತ ಆಕರ್ಷಿತಳಾದಳು.

‘ನೀನು ಮಾಡೆಲ್ ಆಗಬೇಕೆಂದಿರುವೆ. ಇನ್ನೊಂದು ವರ್ಷದಲ್ಲಿ ನಾನು ನಿನ್ನನ್ನು ಮಿಸ್ ಇಂಡಿಯಾ ಆಗುವಂತೆ ಮಾಡುವೆ. ಯಾವ ರೀತಿ ಮತ್ತು ಹೇಗೆ ವ್ಯಾಯಾಮ ಮಾಡಬೇಕು ಎಂದು ಹೇಳಿಕೊಡುವೆ. ಈ ಜಿಮ್ಲ್ಲಿ ನಿನಗೆ ತರಬೇತಿ ನೀಡಬೇಕಾದರೆ ನಾವಿಬ್ಬರೂ ಗುರಿಗಳನ್ನು ಹಾಕಿಕೊಳ್ಳಬೇಕು’ ಎಂದು ಹೇಳಿದ ವಿನೋದ್ ಅವಳಿಗೆ ಪ್ರತಿತಿಂಗಳೂ ಮುಟ್ಟಬೇಕಾದ ಮೈಲಿಗಲ್ಲುಗಳನ್ನು ಹಾಕಿಕೊಟ್ಟ.

ಒಂದು ತಿಂಗಳ ತರಬೇತಿ ನಂತರ ರಾಧಿಕಾ ತನ್ನ ಅಂಗಸೌಷ್ಟವ ಸಾಕಷ್ಟು ಉತ್ತಮಗೊಂಡಿರುವುದನ್ನು ಗಮನಿಸಿದಳು. ಅವಳಲ್ಲಿ ಲವಲವಿಕೆ ಹೆಚ್ಚಾಗಿತ್ತು. ಶೀಘ್ರದಲ್ಲಿಯೇ ಆಕೆ ತನ್ನ ಕಾಲೇಜಿನ ಫ್ಯಾಷನ್ ಶೋ ತಂಡದ ಸದಸ್ಯೆಯೂ ಆದಳು. ಆಕೆ ವಿನೋದನಿಂದ ಹೆಚ್ಚು ಪ್ರಭಾವಿತಳಾಗತೊಡಗಿದಳು.

‘ನೀನು ಮಿಸ್ ಇಂಡಿಯಾ ಆಗಬೇಕಾದರೆ ಈಜಾಡುವುದನ್ನು ಕಲಿಯಲೇಬೇಕು’ ಎಂದು ಹೇಳಿದ ವಿನೋದ್ ಆಕೆಯನ್ನು ಸ್ವಿಮಿಂಗ್ ಕ್ಲಬ್​ನ ಸದಸ್ಯಳನ್ನಾಗಿ ಮಾಡಿಸಿ ಈಜಲು ಕಲಿಸಿಕೊಟ್ಟ. ಇಬ್ಬರೂ ಬಹಳ ಸಮಯ ಜತೆಯಲ್ಲಿಯೇ ಇರುತ್ತಿದ್ದರಿಂದ ರಾಧಿಕಾ ತನ್ನ ವೈಯಕ್ತಿಕ ವಿಷಯಗಳನ್ನು ವಿನೋದನ ಜೊತೆ ಹಂಚಿಕೊಳ್ಳತೊಡಗಿದಳು.

ಉತ್ತರ ಭಾರತದ ರಾಜ್ಯವೊಂದಕ್ಕೆ ಸೇರಿದ್ದ 35 ವರ್ಷದ ವಿನೋದ್ ಬಡಕುಟುಂಬದಿಂದ ಬಂದಿದ್ದು ಪಿಯುಸಿ ಪಾಸಾದ ನಂತರ ನೌಕರಿ ಹುಡುಕಿಕೊಂಡು ಮುಂಬೈಗೆ ಹೋಗಿ ಅಲ್ಲಿ ಜಿಮ್ ಇನ್​ಸ್ಟ್ರಕ್ಟರ್​ನ ವೃತ್ತಿ ತರಬೇತಿ ಪಡೆದು ಒಂದಾನೊಂದು ದಿನ ತನ್ನದೇ ಆದ ಜಿಮ್ ಹೊಂದಬೇಕು ಎಂಬ ಆಸೆಯಿಂದಿದ್ದ.

ಪಿ.ಜಿ.ಯಲ್ಲಿ ತಾನು ವಾಸವಾಗಿದ್ದೇನೆ ಎಂದು ರಾಧಿಕಾಗೆ ಹೇಳಿ ತನಗಿನ್ನೂ ಮದುವೆಯಾಗಿಲ್ಲ ಎಂದಿದ್ದ. ಅವರಿಬ್ಬರೂ ಒಟ್ಟಿಗೆ ಮಾಲ್, ಸಿನಿಮಾ, ನಾಟಕ, ದೊಡ್ಡ ಶೋಗಳಿಗೆ ಹೋಗಲು ಪ್ರಾರಂಭಿಸಿದರು. ಆನಂತರ ಅವರಿಬ್ಬರ ನಡುವೆ ದೈಹಿಕ ಸಂಪರ್ಕ ಉಂಟಾಯಿತು. ರಾಧಿಕಾ ವಿನೋದ್​ನತ್ತ ಎಷ್ಟು ಅನುರಕ್ತಳಾಗಿದ್ದಳೆಂದರೆ ಮದುವೆಯಾದರೆ ಆತನನ್ನೇ ಎನ್ನುವ ತೀರ್ವನಕ್ಕೆ ಬಂದಳು. ಪಾಠಪ್ರವಚನ ಬಿಟ್ಟು ವಿನೋದನ ಚಿಂತೆಯಲ್ಲೇ ಇರಲಾರಂಭಿಸಿದಳು. ಮಗಳ ನಡವಳಿಕೆ ಬದಲಾಗಿದ್ದನ್ನು ಗಮನಿಸಿದ ಸೀಮಾ ರಾಧಿಕಾಳನ್ನು ಸೂಕ್ಷ್ಮವಾಗಿ ವಿಚಾರಿಸಿದಾಗ ತಾನು ಜಿಮ್ ತರಬೇತಿದಾರ ವಿನೋದ್​ನನ್ನು ಪ್ರೇಮಿಸುತ್ತಿದ್ದೇನೆ ಎಂದು ಹೇಳಿ ಅವನನ್ನೇ ಮದುವೆಯಾಗುವುದಾಗಿ ಹೇಳಿದಳು.

ಹೌಹಾರಿದ ಸೀಮಾ ಗಂಡನಿಗೆ ವಿಷಯ ತಿಳಿಸಿದಳು. ಇಬ್ಬರೂ ಸೇರಿ ರಾಧಿಕಾಳಿಗೆ, ‘ನೀನು ನಮ್ಮ ಒಬ್ಬಳೇ ಮಗಳು. ನಿನಗಿನ್ನೂ ಮದುವೆಯ ವಯಸ್ಸಾಗಿಲ್ಲ. ಪದವಿ ಗಳಿಸಿ ಮಾಡೆಲ್ ಆಗುವ ನಿನ್ನ ಕನಸನ್ನು ಸಾಕಾರಗೊಳಿಸಬೇಕಾಗಿದೆ. ಈಗಲೇ ಲಗ್ನವಾದರೆ ಇವೆರಡೂ ಸಾಧ್ಯವಾಗುವುದಿಲ್ಲ. ಕಾಲ ಬಂದಾಗ ನಿನಗೆ ಒಂದು ಒಳ್ಳೆಯ ಮನೆತನವನ್ನು ನೋಡಿ ಮದುವೆ ಮಾಡುತ್ತೇವೆ. ವಿನೋದನನ್ನು ಮರೆತುಬಿಡು’ ಎಂದು ಹೇಳಿ ಆಕೆಯನ್ನು ಜಿಮ್ಂದ ಬಿಡಿಸಿದರು.

ಆಕೆ ಗುಟ್ಟಿನಲ್ಲಿ ವಿನೋದನನ್ನು ಭೇಟಿಯಾಗತೊಡಗಿದಾಗ ಮನಶಾಸ್ತ್ರಜ್ಞರ ಬಳಿಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿಸಿದರು. ಯಾರೇನು ಹೇಳಿದರೂ ರಾಧಿಕಾ ತಾನು ವಿನೋದ್​ನನ್ನೇ ಮದುವೆಯಾಗುವುದಾಗಿ ಹಠ ಹಿಡಿದಳು. ‘ನೀವು ಅವನೊಡನೆ ನಾನು ಮದುವೆಯಾಗುವುದನ್ನು ತಪ್ಪಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಇಲ್ಲವೇ ಮನೆ ಬಿಟ್ಟು ಓಡಿಹೋಗುತ್ತೇನೆ’ ಎಂದಳು. ಮಾತಾಪಿತರಿಗೆ ಮುಂದೇನು ಮಾಡಬೇಕು ಎಂದೇ ತೋಚಲಿಲ್ಲ. ಅವರು ಸಮೀಪದ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯ ತಿಳಿಸಿ ವಿನೋದನನ್ನು ಕರೆಸಿ ಬುದ್ಧಿ ಹೇಳಿ ಎಂದು ಕೋರಿದರು.

ಬಡಾವಣೆಯಲ್ಲಿ ಪ್ರಭಾವಿಯಾಗಿದ್ದ ರಾಮಕೃಷ್ಣನ ಕೋರಿಕೆಗೆ ಸ್ಪಂದಿಸಿದ ಪೊಲೀಸರು ವಿನೋದ್​ನನ್ನು ಕರೆಸಿದರು. ಠಾಣೆಯ ರೈಟರ್ ಅವನನ್ನು ಗುರುತಿಸಿ, ‘ನೀನು ಈಗಾಗಲೇ ನಮ್ಮ ಠಾಣೆಗೆ ಬಂದಿರುವುದು ನಿಜ ತಾನೆ?’ ಎಂದು ಕೇಳಿದಾಗ, ವಿನೋದ್ ಹೌಹಾರಿದ. ತನ್ನ ಹೆಂಡತಿಗೆ ಕಿರುಕುಳ ಕೊಟ್ಟ ದೂರಿನ ಮೇಲೆ ಈ ಹಿಂದೆ ಅವನನ್ನು ಠಾಣೆಗೆ ಕರೆಸಲಾಗಿತ್ತು ಹಾಗೂ ಅವನ ಮೇಲೆ ಪ್ರಕರಣವೂ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಹೆಂಡತಿ ಅವನ ವಿರುದ್ಧ ಸಾಕ್ಷ್ಯ ಹೇಳದಿದ್ದ ಕಾರಣ ಪ್ರಕರಣ ಬಿದ್ದುಹೋಯಿತು ಎಂದು ರೈಟರ್ ತಿಳಿಸಿದಾಗ ಎಲ್ಲರಿಗೂ ಆಶ್ಚರ್ಯವಾಯಿತು.

ಪೊಲೀಸರು ವಿನೋದನಿಗೆ ರಾಧಿಕಾಳಿಂದ ದೂರವಿರಲು ತಾಕೀತು ಮಾಡಿದರು. ಆತ ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟ. ಠಾಣೆಯಿಂದ ಹೊರಬಂದಾಗ ರಾಮಕೃಷ್ಣ ವಿನೋದನಿಗೆ ‘ನನ್ನ ಮಗಳ ತಂಟೆಗೆ ಬರದಿದ್ದರೆ ನಿನಗೆ ಹಣ ಕೊಡುತ್ತೇನೆ’ ಎಂದೂ ಹೇಳಿದರು. ವಿನೋದ ಮಾತನಾಡದೆ ಹೊರಟುಹೋದ. ಏತನ್ಮಧ್ಯೆ ರಾಧಿಕಾ ತಾನು ವಿನೋದನ ಜೊತೆಗೆ ದೈಹಿಕ ಸಂಪರ್ಕ ಹೊಂದಿದ್ದಾಗಿ ಮತ್ತು ಎರಡು ತಿಂಗಳಿನಿಂದ ಋತುಸ್ರಾವ ಆಗದಿದ್ದುದರಿಂದ ಮನೆಯಲ್ಲಿಯೇ ಗರ್ಭಧಾರಣೆ ಪರೀಕ್ಷೆ ಮಾಡಿಕೊಂಡಾಗ ರಿಸಲ್ಟ್ ಪಾಸಿಟಿವ್ ಬಂದಿದೆ ಎಂದು ತಾಯಿಗೆ ತಿಳಿಸಿ ಗರ್ಭ ನಿಲ್ಲಿಸಲು ತಾನು ಕೆಲವು ಗುಳಿಗೆಗಳನ್ನು ತೆಗೆದುಕೊಂಡಿದ್ದೇನೆ ಎಂದಳು.

ಗಾಬರಿಯಾದ ಸೀಮಾ ಅವಳನ್ನು ವೈದ್ಯರಲ್ಲಿಗೆ ಕರೆದೊಯ್ದಾಗ ವೈದ್ಯರೂ ಗರ್ಭಧಾರಣೆಯನ್ನು ದೃಢೀಕರಿಸಿದರು. ರಾಮಕೃಷ್ಣ ಮತ್ತೊಮ್ಮೆ ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದಾಗ ಪೊಲೀಸ್ ಅಧಿಕಾರಿ ರಾಧಿಕಾಳ ವಯಸ್ಸೆಷ್ಟು ಎಂದು ವಿಚಾರಿಸಿದರು. ಅವಳಿಗೆ ಹದಿನೇಳು ವರ್ಷ ಎಂದು ತಿಳಿದ ಕೂಡಲೇ ಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳ (ಪೋಕ್ಸೋ) ತಡೆ ಕಾಯಿದೆಯ ಅಡಿ ವಿನೋದನ ಮೇಲೆ ದೂರನ್ನು ಬರೆಸಿಕೊಂಡು ಬಂಧಿಸಿದರು. ನ್ಯಾಯಾಲಯ ವಿನೋದನಿಗೆ ಏಳು ವರ್ಷ ಕಾರಾಗೃಹವಾಸದ ಶಿಕ್ಷೆ ವಿಧಿಸಿತು.

ಒಂದು ವೇಳೆ ರಾಧಿಕಾಗೆ 16 ವರ್ಷಕ್ಕಿಂತ ಕಡಿಮೆಯಾಗಿದ್ದಿದ್ದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗುತ್ತಿತ್ತು. 18 ವರ್ಷ ತುಂಬಿದ್ದಲ್ಲಿ ವಿನೋದನ ವಿರುದ್ಧ ಅಪರಾಧವೇ ದಾಖಲಾಗುತ್ತಿರಲಿಲ್ಲ. ಏಕೆಂದರೆ ದೈಹಿಕ ಸಂಪರ್ಕ ಪರಸ್ಪರ ಒಪ್ಪಂದದಿಂದ ನಡೆದಿತ್ತು.

ಅಮಾಯಕ ಯುವತಿಯರನ್ನು ಬಲೆಗೆ ಬೀಳಿಸಿ ನಾನಾ ರೀತಿಯ ಲಾಭಗಳನ್ನು ಪಡೆಯಲು ಹಲವಾರು ಜನರು ಹದ್ದುಗಳಂತೆ ಕಾಯುತ್ತಲೇ ಇರುತ್ತಾರೆ. ಶ್ರೀಮಂತ ಮನೆತನದ ಹೆಣ್ಣುಗಳನ್ನು ಮದುವೆ ಮಾಡಿಕೊಂಡು ಆಸ್ತಿ ಗಳಿಸುವುದರಿಂದ ಮೊದಲ್ಗೊಂಡು ಬ್ಲಾ್ಯಕ್​ವೆುೕಲ್ ಮಾಡಿ ಹಣ ಗಳಿಸುವವರೆಗೆ ಅಂಥವರ ಇರಾದೆಯಿರುತ್ತವೆ. ಹೀಗಾಗಿ ಹದಿಹರೆಯದ ಹೆಣ್ಣುಮಕ್ಕಳಿಗೆ ಸ್ನೇಹಿತರನ್ನು ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಲು ಹಿರಿಯರು ಸೂಚಿಸಿ ದೈಹಿಕ ಸಂಬಂಧಗಳನ್ನು ಮಾಡುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಬೇಕಾಗುತ್ತದೆ.

ವಿವಾಹಪೂರ್ವ ಸಂಬಂಧದ ಪರಿಣಾಮವಾಗಿ ಗರ್ಭ ಧರಿಸಿದರೆ ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳುವುದೂ ಸುಲಭವೇನಲ್ಲ. ಗರ್ಭಪಾತದ ನಂತರ ಉಂಟಾಗಬಹುದಾದ ಮಾನಸಿಕ ಹಾಗೂ ದೈಹಿಕ ಪರಿಣಾಮಗಳ ಬಗ್ಗೆ ಟೀನೇಜ್ ಯುವತಿಯರಿಗೆ ತಿಳಿಹೇಳಬೇಕಾಗುತ್ತದೆ. ‘ಅತಿ ಕಡಿಮೆ ಸಮಯವನ್ನು ತೆಗೆದುಕೊಳ್ಳುವ ಸೆಕ್ಸ್ ಅತಿ ಹೆಚ್ಚು ತೊಂದರೆಯನ್ನು ನೀಡುವಂತಹದು’ ಎನ್ನುತ್ತಾನೆ ಅಮೆರಿಕನ್ ಚಿತ್ರನಟ ಜಾನ್ ಬ್ಯಾರಿಮೋರ್. ಈ ಮಾತುಗಳನ್ನು 13ರಿಂದ 18ರ ವಯಸ್ಸಿನ ಯುವತಿಯರ ತಂದೆತಾಯಂದಿರು ಸದಾಕಾಲವೂ ನೆನಪಿನಲ್ಲಿಟ್ಟು ಮಕ್ಕಳ ರಕ್ಷಣೆ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net