

ಸುಮಾರು ಹತ್ತು ದಿನಗಳ ಹಿಂದೆ ನಾನು ರಮೇಶ್ ಜೊತೆ ಪಾರ್ಕೆಂದಕ್ಕೆ ಹೋಗಿದ್ದೆ. ಆಗತಾನೇ ಸೂರ್ಯ ಮುಳುಗಿದ್ದ. ಬೆಂಚ್ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದೆವು. ಸುಮಾರು ಏಳೂವರೆ ಗಂಟೆಯ ಸಮಯಕ್ಕೆ ಹತ್ತಿರದಲ್ಲಿ ಬುಲೆಟ್ ಮೋಟರ್ ಸೈಕಲ್ ಬಂದು ನಿಂತ ಶಬ್ದವಾಯಿತು. ಖಾಕಿ ಉಡುಗೆ ತೊಟ್ಟಿದ್ದ ವ್ಯಕ್ತಿ ಲಾಠಿ ಹಿಡಿದು ನಮ್ಮ ಬಳಿ ಬಂದ.
‘ಯಾರು ನೀವು, ಇಲ್ಲೇನು ಮಾಡುತ್ತಿದ್ದೀರಿ’ ಎಂದು ಆತ ನಮ್ಮ ವಿವರಗಳನ್ನು ಕೇಳತೊಡಗಿದ. ‘ಸಾರ್ವಜನಿಕ ಸ್ಥಳದಲ್ಲಿ ಸರಸಸಲ್ಲಾಪ ನಡೆಸುತ್ತಿದ್ದೀರಿ. ಇದು ಅಪರಾಧವಾದ್ದರಿಂದ ಪೊಲೀಸ್ ಠಾಣೆಗೆ ಬನ್ನಿ’ ಎಂದ. ‘ನಾವೇನೂ ತಪ್ಪು ಮಾಡಿಲ್ಲ, ನಾವು ಮದುವೆಮಾಡಿಕೊಳ್ಳುತ್ತಿದ್ದೇವೆ’ ಎಂದು ರಮೇಶ್ ಹೇಳಿದಾಗ ಆತ ಅವನಿಗೆ ನಾಲ್ಕೈದು ಲಾಠಿಯೇಟು ಬಿಗಿದ. ರಮೇಶ್ ಅಲ್ಲಿಂದ ಓಡಿಹೋದ. ಆನಂತರ ಆ ಪೊಲೀಸ್ ನನ್ನ ಕೈ ಹಿಡಿದು ಪೊಲೀಸ್ ಠಾಣೆಗೆ ಬಾ ಎಂದು ದರದರನೆ ಎಳೆಯತೊಡಗಿದ. ಆಗ ನಾನು ಹೆದರಿ ‘ಅಣ್ಣಾ ತಪ್ಪಾಯಿತು, ಇನ್ನು ಮುಂದೆ ಈ ರ್ಪಾಗೆ ಬರುವುದಿಲ್ಲ’ ಎಂದೆ. ಆಗ ಆತ ನನ್ನ ವಿವರಗಳನ್ನು ಪಡೆದ. ನಾನು ಮದುವೆಯಾಗಿರುವ ಗೃಹಿಣಿ ಎಂದು ಅವನಿಗೆ ತಿಳಿದಾಗ ‘ಎಷ್ಟು ದುಡ್ಡಿದೆ’ ಎಂದು ಕೇಳಿದ.
ಆಗ ನನ್ನ ಪರ್ಸಿನಲ್ಲಿ ಸುಮಾರು 5000 ರೂಪಾಯಿಗಳಿದ್ದವು. ಅಷ್ಟನ್ನೂ ಕಸಿದುಕೊಂಡ ಆತ ಇನ್ನು ಮುಂದೆ ಈ ರ್ಪಾಗೆ ಬರಬೇಡ ಎಂದು ಹೇಳಿ ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ನನ್ನನ್ನು ಹೋಗಲು ಬಿಟ್ಟ. ನಾನು ರ್ಪಾನ ಹೊರಗೆ ಬಂದಾಗ ರಮೇಶ ಅಲ್ಲಿರಲಿಲ್ಲ. ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ನಾನು ಆತನಿಗಾಗಿ ಹುಡುಕಾಡಿದರೂ ಆತ ಸಿಗಲಿಲ್ಲ. ನಾನು ಹೆದರಿಕೊಂಡೇ ಮನೆಗೆ ವಾಪಸಾದೆ. ರಮೇಶ್ ಹೀಗೆ ನನ್ನನ್ನು ನಡುನೀರಿನಲ್ಲಿ ಪೊಲೀಸನ ಬಳಿ ಬಿಟ್ಟು ಹೋಗಿದ್ದು ಆಘಾತವಾಗಿತ್ತು. ಹೀಗಾಗಿ ಅವನ ಜತೆಗಿನ ಸಂಬಂಧ ಮುರಿಯಬೇಕು ಎಂದು ಮನಸ್ಸು ಮಾಡಿದೆ.
ಈ ಘಟನೆಯಾದ ಸುಮಾರು ಒಂದು ವಾರದ ನಂತರ ಅದೇ ಪೊಲೀಸ್ ನನಗೆ ಕರೆ ಮಾಡಿ ‘ನಿನ್ನ ಮೇಲೆ ಕೇಸನ್ನು ಮಾಡದೇ ಸುಮ್ಮನೇ ಬಿಟ್ಟಿರುವುದು ಹಿರಿಯ ಅಧಿಕಾರಿಗಳಿಗೆ ಗೊತ್ತಾಗಿದೆ. ಅವರು ನಿನ್ನನ್ನು ಕೂಡಲೇ ಠಾಣೆಗೆ ಕರೆದುಕೊಂಡು ಬರಲು ಹೇಳಿದ್ದಾರೆ. ನಾನು ಏನೇನೋ ಸಬೂಬು ಹೇಳಿ ನಿನ್ನನ್ನು ಬಚಾವ್ ಮಾಡಿಸಿದ್ದೇನೆ. ಆದರೆ ಸಾಹೇಬರು ಯಾರಾದರೂ ಪೊಲೀಸರನ್ನು ನಿನ್ನ ಮನೆಗೆ ವಿಚಾರಣೆ ಮಾಡಲು ಕಳಿಸಬಹುದು. ಅವರೇನಾದರೂ ಬಂದರೆ ನೀನೇನು ಮಾಡಬೇಕೆಂದು ನಾನು ಹೇಳಿಕೊಡುವೆ. ಇನ್ನು ಒಂದು ಗಂಟೆಯ ನಂತರ ಸಿಟಿ ಮಾಲ್ ಬಳಿಗೆ ಬಾ’ ಎಂದ. ಅಂತೆಯೇ ನಾನು ಹೋದೆ.
ಅವನು ತನ್ನನ್ನು ಸುಂದರ್ ಎಂದು ಪರಿಚಯಿಸಿಕೊಂಡು ಹೋಟೆಲಿಗೆ ಕರೆದುಕೊಂಡು ಹೋಗಿ ತಿಂಡಿ ಕಾಫಿ ಕೊಡಿಸಿದ. ಆನಂತರ ತನ್ನ ಮೋಟರ್ ಸೈಕಲ್ನಲ್ಲಿ ಜನನಿಬಿಡ ಬಡಾವಣೆಯ ಒಂದು ಮನೆಗೆ ಕರೆದುಕೊಂಡು ಹೋದ. ಮನೆಯೊಳಗೆ ಕರೆದೊಯ್ದು ಸ್ವಲ್ಪ ಸಮಯ ಲೋಕಾಭಿರಾಮವಾಗಿ ಮಾತನಾಡಿ ನಂತರ ನನ್ನ ಮೇಲೆ ಬಲಾತ್ಕಾರ ಮಾಡಿದ. ನಾನು ಕಾಪಾಡಿ ಎಂದು ಅರಚಿದರೂ ಯಾರಿಗೂ ಕೇಳಲಿಲ್ಲ. ‘ಇದನ್ನು ಯಾರಿಗಾದರೂ ಹೇಳಿದರೆ ಎನ್ಕೌಂಟರ್ ಮಾಡುತ್ತೇನೆ ಹುಷಾರ್’ ಎಂದು ಪಿಸ್ತೂಲನ್ನು ತೋರಿಸಿ ಬೆದರಿಸಿದ.
ಆನಂತರ ಸುಂದರ್ ನನ್ನ ಮನೆಯಿದ್ದ ಬಡಾವಣೆಯಲ್ಲಿ ಬಿಟ್ಟ. ಆಗ ಅವನು ನನ್ನ ಮೊಬೈಲ್ ಹಾಗೂ 200 ರೂ.ಗಳನ್ನೂ ಕಸಿದುಕೊಂಡು ಹೊರಟುಹೋದ. ನಾನು ಅವನ ಬೈಕಿನ ನೋಂದಣಿ ಸಂಖ್ಯೆ ಗುರುತು ಹಾಕಿಕೊಳ್ಳಲಿಲ್ಲ. ಅವನನ್ನು ನೋಡಿದರೆ ಗುರುತಿಸಬಲ್ಲೆ. ಈ ವಿಷಯವನ್ನು ನನ್ನ ಗಂಡನಿಗಾಗಲೀ ಬೇರಾರಿಗೇ ಆಗಲಿ ತಿಳಿಸಿಲ್ಲ. ಅವನು ನಿಮ್ಮ ಠಾಣೆಯಲ್ಲಿ ಕೆಲಸಮಾಡುತ್ತಿರುವೆನೆಂದು ಹೇಳಿದ ಪ್ರಯುಕ್ತ ದೂರು ಕೊಡಲು ಬಂದಿದ್ದೇನೆ. ನನ್ನ ಮೊಬೈಲ್ ಫೋನನ್ನು ಮರಳಿಸಿ ಅವನ ಮೇಲೆ ಕ್ರಮ ಕೈಗೊಳ್ಳಬೇಕು.’
ರಮಾಳ ದೂರನ್ನು ದಾಖಲಿಸಿದ ಠಾಣಾಧಿಕಾರಿ ತಮ್ಮ ಠಾಣೆಯಲ್ಲಿ ಆ ಸಮಯದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನೂ ಕರೆಸಿದರು. ರಮಾ ‘ಇವರಲ್ಲಿ ಆರೋಪಿ ಸುಂದರ್ ಇಲ್ಲ’ ಎಂದಳು. ಆ ನಂತರ ಅವಳಿಗೆ ಠಾಣೆಯಲ್ಲಿರದ ಇತರ ಕಾನ್ಸ್ಟೆಬಲ್ಗಳ ಚಿತ್ರಗಳನ್ನು ತೋರಿಸಲಾಯಿತು. ಅವರಲ್ಲೂ ಆರೋಪಿ ಇರದ ಕಾರಣ ಆ ವ್ಯಕ್ತಿ ಬೇರೆ ಠಾಣೆಯ ಕಾನ್ಸ್ಟೆಬಲ್ ಇರಬಹುದೆಂದು ಊಹಿಸಲಾಯಿತು. ರಮಾಳ ವಿವರಣೆಯ ಮೇರೆಗೆ ಕಂಪ್ಯೂಟರ್ನಲ್ಲಿ ಆರೋಪಿಯ ಚಿತ್ರವನ್ನು ತಯಾರಿಸಿ ಅದನ್ನು ಸನಿಹದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಯಿತು. ರಮಾಳನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದಾಗ ರೇಪ್ ಆಗಿದೆಯೆಂದು ಸಾಬೀತಾಯಿತು.
ಏತನ್ಮಧ್ಯೆ, ಆರೋಪಿಯು ಕಸಿದುಕೊಂಡಿದ್ದ ರಮಾಳ ಮೊಬೈಲ್ ಫೋನಿನ ವಿವರಗಳನ್ನು ಸಂಬಂಧಿಸಿದ ಸಂಸ್ಥೆಗೆ ನೀಡಿ ಫೋನನ್ನು ಲೊಕೇಷನ್ ಸರ್ಚ್ಗೆ ಹಾಕಲಾಯಿತು. ಆ
ಫೋನ್ ಸ್ವಿಚ್ ಆಫ್ ಆಗಿದ್ದಾಗಿ ತಿಳಿದುಬಂದಿತು. ಆರೋಪಿಯನ್ನು ಹೋಲುವ ಯಾವ ಪೊಲೀಸನೂ ಹತ್ತಿರದ ಠಾಣೆಗಳಲ್ಲಿ ಇಲ್ಲವೆಂದು ತನಿಖೆಯಲ್ಲಿ ತಿಳಿಯಿತು. ಸುಮಾರು ಹತ್ತು ದಿನಗಳ ನಂತರ ರಮಾಳ ಫೋನ್ ಚಾಲೂ ಆಗಿದೆ ಎಂದು ಫೋನ್ ಸಂಸ್ಥೆ ತಿಳಿಸಿ ಅದರ ಟವರ್ ಲೊಕೇಷನ್ ಕೊಟ್ಟಿತು. ಪೊಲೀಸರು ಕೂಡಲೇ ಅಲ್ಲಿಗೆ ಹೋದಾಗ ಅಲ್ಲಿನ ಉದ್ಯಾನದ ಗೇಟಿನ ಬಳಿ ಖಾಕಿ ಸಮವಸ್ತ್ರ ಧರಿಸಿದ್ದ ಒಬ್ಬ ವ್ಯಕ್ತಿ ಕಂಡ. ಪೊಲೀಸರನ್ನು ನೋಡಿ ಬೈಕಿನಲ್ಲಿ ಓಡಿಹೋಗಲು ಆತ ಪ್ರಯತ್ನಿಸಿದಾಗ ಬೆನ್ನಟ್ಟಿ ಹಿಡಿಯಲಾಯಿತು.
ಆತ ಸುಮಾರು ಐದು ಮುಕ್ಕಾಲು ಅಡಿ ಎತ್ತರವಿದ್ದು, ದಪ್ಪನೆಯ ಮೀಸೆ ಬಿಟ್ಟಿದ್ದು, ಆಜಾನುಬಾಹುವಾಗಿದ್ದು ನೋಡಲು ಪೊಲೀಸರಂತೆಯೇ ಕಾಣುತ್ತಿದ್ದ. ಅವನ ಬಳಿ ರಮಾಳಿಂದ ಕದ್ದಿದ್ದ ಫೋನ್ ಅಲ್ಲದೇ ಮತ್ತೊಂದು ಫೋನ್ ಸಹ ಸಿಕ್ಕಿತು. ಪೊಲೀಸ್ ಠಾಣೆಯಲ್ಲಿ ಆತ ಹೀಗೆ ಹೇಳಿದ:‘ನನ್ನ ಹೆಸರು ತ್ಯಾಗರಾಜ್. ನಾನು ಲಾರಿ ಚಾಲಕನಾಗಿದ್ದು ಊರಿಂದೂರಿಗೆ ಸರಕುಗಳನ್ನು ಸಾಗಣೆ ಮಾಡುತ್ತೇನೆ. ನನಗೆ ಪೊಲೀಸ್ ಇಲಾಖೆಗೆ ಸೇರಬೇಕೆಂದು ಆಸೆಯಿತ್ತು. ಪಿ.ಯು.ಸಿ ನಂತರ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದೆ. ಮೂರು ಬಾರಿ ಪ್ರಯತ್ನಿಸಿದರೂ ಆಯ್ಕೆಯಾಗಲಿಲ್ಲ. ಆಗ ಅನಿವಾರ್ಯವಾಗಿ ಚಾಲಕನಾದೆ. ಖಯಾಲಿಗಾಗಿ ಸದಾಕಾಲ ಖಾಕಿ ಬಟ್ಟೆಯನ್ನೇ ತೊಡುತ್ತೇನೆ. ನನಗೆ ಇನ್ನೂ ಮದುವೆಯಾಗಿರದೆ ಮಿತಿಮೀರಿದ ಲೈಂಗಿಕ ಆಸಕ್ತಿಯಿದೆ. ಒಂದು ಸಂಜೆ ನಾನು ರ್ಪಾನಲ್ಲಿ ವಿರಮಿಸುತ್ತಿದ್ದಾಗ ಯುವ ಜೋಡಿಯೊಂದು ಸರಸಸಲ್ಲಾಪದಲ್ಲಿದುದ್ದನ್ನು ನೋಡಿದೆ. ಆ ಯುವತಿಯ ಮೇಲೆ ಮನಸ್ಸಾಗಿ ಅವಳ ಜತೆಯಲ್ಲಿದ್ದವನನ್ನು ಹೆದರಿಸಿ ಆ ರ್ಪಾನಲ್ಲಿಯೇ ಆಕೆ ಮೇಲೆ ಅತ್ಯಾಚಾರ ಮಾಡಿದೆ. ಪೊಲೀಸರ ವೇಷದಲ್ಲಿ ಹೀಗೆ ಮಾಡುವುದರಿಂದ ಸುಲಭವಾಗಿ ನನ್ನ ಕಾಮತೃಷೆ ತೀರುವುದಲ್ಲದೆ, ನಾನು ಪೊಲೀಸನೆಂದೂ ಮತ್ತು ತಮ್ಮ ಪ್ರೇಮಸಲ್ಲಾಪವು ಜಾಹೀರಾಗುವುದೆಂದೂ ಹೆದರಿ ದೂರನ್ನು ನೀಡಲಾರರು ಎಂದು ರ್ತಸಿದ್ದೆ. ಆ ಯುವತಿಯೂ ದೂರು ನೀಡದ ಕಾರಣ ನನಗೆ ಧೈರ್ಯಬಂದು ಇದೇ ತಂತ್ರ ಉಪಯೋಗಿಸಿ ಒಂದು ವರ್ಷದಿಂದ ಈ ನಗರದ ಪಾರ್ಕಗಳಲ್ಲಿ ಯುವಜೋಡಿಗಳಿಗಾಗಿ ಹೊಂಚು ಹಾಕುತ್ತಾ 15-16 ಜನರನ್ನು ರೇಪ್ ಮಾಡಿದ್ದೇನೆ.
ಕಳೆದ ಮೂರು ತಿಂಗಳುಗಳಿಂದ ನಾನು ಅತ್ಯಾಚಾರ ಮಾಡಿದವರ ವಿಡಿಯೋ ಚಿತ್ರಣ ಮಾಡುತ್ತಿದ್ದೆ. ನಂತರ ಸಂತ್ರಸ್ತರನ್ನು ಸಂರ್ಪಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದೆ’.
ತ್ಯಾಗರಾಜನ ಮೊಬೈಲ್ ಫೋನಿನಲ್ಲಿ ಆತ ಐದಾರು ಜನರ ಮೇಲೆ ಅತ್ಯಾಚಾರ ಮಾಡಿದ್ದ ವಿಡಿಯೋಗಳಿದ್ದವು. ಅವರಲ್ಲಿ ಕೆಲವರನ್ನು ಪತ್ತೆಮಾಡಿ ಸಂರ್ಪಸಿದಾಗ ಯಾರೂ ದೂರು ಕೊಡಲು ಮುಂದಾಗಲಿಲ್ಲ. ಆದರೆ ರಮಾ ಕೊಟ್ಟ ದೂರಿನನ್ವಯ ತ್ಯಾಗರಾಜನ ಮೇಲೆ ರೇಪ್ ಮತ್ತು ಜಬರಿ ಕಳವಿನ ಆರೋಪದ ಮೇರೆಗೆ ಆರೋಪಪಟ್ಟಿ ಸಲ್ಲಿಸಲಾಯಿತು. ನ್ಯಾಯಾಲಯ ಆತನಿಗೆ ಏಳು ವರ್ಷಗಳ ಕಠಿಣ ಜೈಲುವಾಸ ವಿಧಿಸಿತು.
‘ಕಪಟವು ನಮಗೆ ಬೇಕಾದ್ದನ್ನು ವರ್ತಮಾನಕ್ಕೆ ಕೊಡಬಹುದು. ಆದರೆ ಅಂತ್ಯದಲ್ಲಿ ಅವನ್ನು ನಮ್ಮಿಂದ ಕಸಿದುಕೊಳ್ಳುತ್ತದೆ’ ಎಂಬ ಅಮೆರಿಕನ್ ಕಾದಂಬರಿಗಾರ್ತಿ ರಾಛೆಲ್ ಹಾಥಾರ್ನ್ ಮಾತು ನಿಜವಲ್ಲವೇ?
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)