ಆ ಕ್ಷಣ: ಪ್ರತೀಕಾರದ ಪರಿಣಾಮ

Rivalery
Published on
2016ರ ಜೂನ್​ನ ಒಂದು ಸಂಜೆ ಲಕ್ಷ್ಮಿ ಎನ್ನುವವಳು ಮಹಾನಗರದ ಪೊಲೀಸ್ ಠಾಣೆಯೊಂದಕ್ಕೆ ಹಾಜರಾಗಿ ಹೀಗೆ ಹೇಳಿದಳು: ‘ನನ್ನ ಗಂಡ ನಾಗರಾಜ ಕಟ್ಟಡಗಳ ಕಾಂಟ್ರಾಕ್ಟರ್ ಆಗಿರುವುದಲ್ಲದೆ ರಿಯಲ್ ಎಸ್ಟೇಟ್ ಏಜೆಂಟನ ಕೆಲಸವನ್ನೂ ಮಾಡುತ್ತಾನೆ. ಸುಮಾರು 45 ವರ್ಷ ವಯಸ್ಸಿನ ಆತ ನಿನ್ನೆ ಬೆಳಿಗ್ಗೆ ಎಂದಿನಂತೆ ತನ್ನ ಕಚೇರಿಗೆ ಹೋದವನು ಮನೆಗೆ ಬಂದಿಲ್ಲ. ಮೊಬೈಲ್​ಗೆ ಕರೆ ಮಾಡಿದರೆ ಸ್ವಿಚ್​ಆಫ್ ಎಂದೇ ಬರುತ್ತಿದೆ. ನಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದಾಗ ಆತ ಬಂದಿಲ್ಲ ಎಂದರು. ಆತ ಹಿಂದೆ ಹೀಗೆ ಮಾಡಿಲ್ಲದಿರುವುದರಿಂದ ಆತಂಕವಾಗಿದೆ. ದಯವಿಟ್ಟು ಆತನನ್ನು ಪತ್ತೆಮಾಡಿ’.

ವ್ಯಕ್ತಿ ಕಾಣೆಯಾದ ಪ್ರಕರಣ ದಾಖಲು ಮಾಡಿದ ಪೊಲೀಸರು ಆತನ ಫೋಟೋ, ಚಹರೆಪಟ್ಟಿ ಮತ್ತು ಇತರ ವಿವರಗಳನ್ನು ಬೇರೆ ಪೊಲೀಸ್ ಠಾಣೆಗಳಿಗೆ ಕಳುಹಿಸಿದರು. ಅಪರಿಚಿತ ಶವಗಳು, ಆಸ್ಪತ್ರೆಗಳಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ಜತೆಗೆ ಫೋಟೋವನ್ನು ಹೋಲಿಸಿ ನೋಡಬೇಕೆಂದು ವಿನಂತಿಸಿದರು. ಆತನ ಫೋನು ಸದ್ಯಕ್ಕೆ ಎಲ್ಲಿದೆ ಹಾಗೂ ಅದಕ್ಕೆ ಬಂದುಹೋದ ಕರೆಗಳ ವಿವರಗಳನ್ನು ತಿಳಿಸುವಂತೆ ಮೊಬೈಲ್ ಸಂಸ್ಥೆಗೆ ಕೋರಿದರು.

ಮಾರನೆಯ ದಿನ ಲಕ್ಷ್ಮಿ ಮತ್ತೆ ಠಾಣೆಗೆ ಬಂದು, ಗಂಡ ಇನ್ನೂ ಬರದಿರುವ ಕಾರಣ ಅವನನ್ನು ಯಾರೋ ಅಪಹರಣ ಮಾಡಿರಬಹುದು ಎಂಬ ಅನುಮಾನ ಬರುತ್ತಿರುವುದಾಗಿ ಹೇಳಿದಳು. ಅನುಮಾನಕ್ಕೆ ಕಾರಣವೇನೆಂದು ಪೊಲೀಸರು ಕೇಳಿದಾಗ ಆಕೆ ಹೀಗೆಂದಳು:‘ನನಗೆ ಇಬ್ಬರು ಸೋದರರಿದ್ದಾರೆ. ಅಶೋಕ ಮತ್ತು ಶ್ರೀನಿವಾಸ. ಇಬ್ಬರೂ ಸಣ್ಣ ಸಣ್ಣ ಬಿಸಿನೆಸ್ ಮಾಡಿಕೊಂಡಿದ್ದಾರೆ. ಅಶೋಕ ಈ ಹಿಂದೆ ಕಮಲಾ ಎನ್ನುವವಳನ್ನು ಲಗ್ನ ಮಾಡಿಕೊಂಡಿದ್ದ. ಅವಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಳೆಂದು ಅನುಮಾನವಿದ್ದ ಕಾರಣ ಮದುವೆಯಾದ ದಿನದಿಂದಲೂ ಗಂಡ ಹೆಂಡಿರ ಸಂಬಂಧ ಸರಿಯಾಗಿರಲಿಲ್ಲ. ಅವರಿಗೆ ಮಕ್ಕಳಾಗಿರಲಿಲ್ಲ. ಲಗ್ನವಾದ ಒಂದೂವರೆ ವರ್ಷದ ನಂತರ ವೈಯಕ್ತಿಕ ಒಪ್ಪಿಗೆಯ ಮೇರೆಗೆ ವಿವಾಹ ವಿಚ್ಛೇದನಕ್ಕೆ ತೀರ್ವನಿಸಿದರು.

ಆಗ ಅಶೋಕನ ವಕೀಲರು ‘ವಿಚ್ಛೇದನದ ನಂತರ ಕಮಲಾಳಿಗೆ ಜೀವನಾಂಶ ಕೊಡಬೇಕಾಗುತ್ತದೆ ಇಲ್ಲವೇ ಒಂದೇ ಬಾರಿಯ ಸೆಟಲ್​ವೆುಂಟ್​ಗಾಗಿ ಹಣ ಅಥವಾ ಸ್ಥಿರಾಸ್ತಿ ಕೊಡಬೇಕಾಗುತ್ತದೆ. ಅವಳ ವಕೀಲರೊಂದಿಗೆ ಮಾತನಾಡಿ ತೀರ್ವನಿಸಬೇಕಾಗುತ್ತದೆ. ನಿನ್ನ ಬಳಿ ಯಾವ ಆಸ್ತಿಯಿದೆ’ ಎಂದು ಕೇಳಿದರು. ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಬೆಲೆಬಾಳುವ ಸೈಟನ್ನು ತಾನು ಖರೀದಿಸಿದ್ದು ಅದರಲ್ಲಿ ಮನೆ ಕಟ್ಟಲು ನಿರ್ಧರಿಸಿರುವುದಾಗಿ ಆತ ಹೇಳಿದ. ಸೋದರ ಹಾಗೂ ತಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ತನ್ನ ಹೆಂಡತಿಗೆ ಸೈಟಿನ ಬಗ್ಗೆ ತಿಳಿಸಿಲ್ಲ ಎಂದ. ‘ಸೈಟಿನ ವಿಷಯ ತಿಳಿದರೆ ಆಕೆ ನಿನ್ನಿಂದ ಅದರ ಇಂದಿನ ಬೆಲೆಯ ಅರ್ಧದಷ್ಟು ಹಣವನ್ನು ಕೇಳಬಹುದು’ ಎಂದು ವಕೀಲರು ಹೇಳಿದಾಗ ಗಾಬರಿಯಾದ ಅಶೋಕ ಅವರನ್ನೇ ಸಮಸ್ಯೆಗೆ ಪರಿಹಾರ ಕೋರಿದ. ‘ಸೈಟನ್ನು ನಿನಗೆ ನಂಬಿಕೆ ಇರುವವರ ಹೆಸರಿಗೆ ಮಾಡಿಬಿಡು, ವಿವಾಹ ವಿಚ್ಛೇದನವಾದ ಎರಡು ಮೂರು ವರ್ಷಗಳ ನಂತರ ಅವರಿಂದ ಅದನ್ನು ಮರಳಿ ಪಡೆ’ ಎಂದರು ವಕೀಲರು. ಈ ಸಲಹೆಗೆ ಒಪ್ಪಿದ ಆತ ನನ್ನ ಗಂಡನ ಬಳಿ, ‘ಭಾವ, ಈ ಸೈಟನ್ನು ನಿಮ್ಮ ಹೆಸರಿಗೆ ಮಾಡಿಕೊಡುತ್ತೇನೆ, ನಮ್ಮ ವಿಚ್ಛೇದನವಾದ ಒಂದು ವರ್ಷದ ನಂತರ ನಿಮ್ಮಿಂದ ಮರಳಿ ಪಡೆಯುತ್ತೇನೆ’ ಎಂದ. ಇದಕ್ಕೆ ಒಪ್ಪಿದ ನನ್ನ ಗಂಡನನ್ನು ಅಶೋಕ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿ ಆ ಸೈಟನ್ನು ಅವನ ಹೆಸರಿಗೆ ಮಾಡಿಕೊಟ್ಟ.

ಆರು ತಿಂಗಳ ನಂತರ ಅಶೋಕನಿಗೆ ವಿವಾಹ ವಿಚ್ಛೇದನವಾಯಿತು. ಆತ ತನ್ನ ಹೆಂಡತಿಗೆ ಹೆಚ್ಚಿನ ಹಣವನ್ನೇನೂ ಕೊಡಬೇಕಾಗಿ ಬರಲಿಲ್ಲ. ಕೆಲಕಾಲಾನಂತರ ಆತ ಲಲಿತಾ ಎನ್ನುವವಳನ್ನು ಲಗ್ನವಾದ. ಆನಂತರ ಅವನು ನನ್ನ ಗಂಡನ ಬಳಿ ‘ಈಗ ನನಗೆ ಮೊದಲ ಹೆಂಡತಿಯ ಭಯವಿಲ್ಲ, ನನ್ನ ಸೈಟನ್ನು ಹಿಂತಿರುಗಿಸು’ ಎಂದ. ಈತ ಈಗ ಕೊಡುತ್ತೇನೆ, ಆಗ ಕೊಡುತ್ತೇನೆ ಎಂದು ಸತಾಯಿಸತೊಡಗಿದ. ಸೋದರನಿಗೆ ಮೋಸ ಮಾಡಬಾರದೆಂದು ನಾನು ಎಷ್ಟು ಹೇಳಿದರೂ ಕೇಳಲಿಲ್ಲ. ಎರಡು ಮೂರು ಬಾರಿ ನನ್ನ ಇಬ್ಬರೂ ಸೋದರರು ಮತ್ತು ತವರುಮನೆಯ ಹಿರಿಯರು ಬಂದು ಹೇಳಿದಾಗ ‘ಸಬ್ ರಿಜಿಸ್ಟ್ರಾರ್ ದಾಖಲೆಗಳ ಮೇರೆಗೆ ಈ ಸೈಟನ್ನು ನಾನು ಅಶೋಕನಿಂದ ಖರೀದಿಸಿದ್ದೇನೆ ಹಾಗೂ ರಿಜಿಸ್ಟ್ರೇಷನ್ ಶುಲ್ಕ ಪಾವತಿಸಿದ್ದೇನೆ, ಈಗ ಅದು ನನ್ನ ಸೈಟಾಗಿದೆ’ ಎಂದ.

ಹೌಹಾರಿದ ಅಶೋಕ, ‘ಇದೇನು ಭಾವ, ಸುಳ್ಳು ಹೇಳುತ್ತಿರುವೆ, ನಿನ್ನ ಕೈಯಿಂದ ಒಂದು ಪ್ಯೆಸೆಯನ್ನೂ ಖರ್ಚು ಮಾಡಿಸದೆ ನಿನಗೆ ಅರ್ಧ ಕೋಟಿ ರೂ ಬೆಲೆಬಾಳುವ ಆಸ್ತಿಯನ್ನು ಕೊಟ್ಟಿರುವೆ, ನಿನ್ನ ಮೇಲೆ ನಾನಿಟ್ಟ ನಂಬಿಕೆಗೆ ದ್ರೋಹ ಬಗೆಯಬೇಡ’ ಎಂದ. ಸೈಟನ್ನು ಮರಳಿಸುವುದಿಲ್ಲ ಎಂದು ನಾಗರಾಜ ಹಠಹಿಡಿದ. ‘ನನಗೆ ಮೋಸಮಾಡಿದ ನಿನಗೆ ಬುದ್ಧಿ ಕಲಿಸದೆ ಬಿಡುವುದಿಲ್ಲ’ ಎಂದು ಅಶೋಕ ಧಮಕಿ ಕೊಟ್ಟು ಹೊರಟುಹೋದ. ಆನಂತರ ಕೆಲವು ರೌಡಿಗಳು ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ಅಶೋಕನೇ ಅಪಹರಿಸಿ ಸೈಟ್ ಹಿಂತಿರುಗಿಸಲು ಬಲವಂತ ಮಾಡುತ್ತಿರಬಹುದು ಎಂದು ನನಗೆ ಸಂಶಯವಿದೆ.’

ಅಪಹರಣ ಪ್ರಕರಣ ದಾಖಲಿಸಲಾಯಿತು. ನಾಗರಾಜನ ಫೋನ್ ಲೊಕೇಷನ್ ಎರಡು ದಿನಗಳ ಹಿಂದಿನಿಂದಲೇ ನಗರದ ಹೊರವಲಯದ ಬಳಿ ಸ್ವಿಚ್​ಆಫ್ ಆಗಿದ್ದು ಈಗ ಎಲ್ಲಿದೆ ಎಂದು ತಿಳಿಯುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತು. ಆತ ಕಾಣೆಯಾದ ದಿನದಿಂದ ಒಂದು ತಿಂಗಳ ಅವಧಿಯಲ್ಲಿ ಅವನ ಫೋನಿಗೆ ಬಂದು ಹೋದ ಕರೆಗಳ ವಿವರಗಳನ್ನು (ಸಿ.ಡಿ.ಆರ್) ಪಡೆಯಲಾಯಿತು. ಯಾವ ನಂಬರಿನಿಂದ ಹೆಚ್ಚು ಬಾರಿ ಕರೆಗಳು ಬಂದಿವೆಯೋ ಅವರ ವಿವರ ಸಂಗ್ರಹಿಸಲಾಯಿತು. ನರಹರಿ ಎನ್ನುವವನು ಹೆಚ್ಚು ಬಾರಿ ಕರೆ ಮಾಡಿದ್ದನ್ನು ಗಮನಿಸಿ ಅವನನ್ನು ಹುಡುಕತೊಡಗಿದರು.

ನಾಗರಾಜನ ಫೋನ್ ಎಲ್ಲಿ ಸ್ವಿಚ್​ಆಫ್ ಆಗಿತ್ತೋ ಅದೇ ಪ್ರದೇಶದಲ್ಲಿ ನರಹರಿ ವಾಸಿಸುತ್ತಿದ್ದ ಕಾರಣ ಅವನ ಮೇಲೆ ಹೆಚ್ಚಿನ ಸಂಶಯ ಬಂತು. ಅವನನ್ನು ಪ್ರಶ್ನಿಸಿದಾಗ ಆತ ಅಶೋಕನ ಎರಡನೆಯ ಹೆಂಡತಿ ಲಲಿತಾಳ ಸೋದರ ಎನ್ನುವುದು ತಿಳಿಯಿತು. ‘ನಾಗರಾಜ ಭಾವನಾದ ಕಾರಣ ನನ್ನ ಮನೆ ಕಟ್ಟಿಸುವ ಬಗ್ಗೆ ಅವನೊಂದಿಗೆ ಮಾತನಾಡಿದ್ದೇನೆಯೇ ವಿನಾ ಬೇರೆ ಯಾವುದೇ ಕಾರಣದಿಂದಲ್ಲ’ ಎಂದು ಅವನು ಹಾರಿಕೆಯ ಉತ್ತರಗಳನ್ನು ಕೊಟ್ಟಾಗ ಪೊಲೀಸರು ಅವನನ್ನು ತೀವ್ರ ವಿಚಾರಣೆಗೊಳಪಡಿಸಿದರು. ಆಗ ಆತ ಹೀಗೆ ಹೇಳಿದ: ‘ನಾಗರಾಜ ತನ್ನ ಸೈಟನ್ನು ಹಿಂದಿರುಗಿಸದೇ ಮೋಸ ಮಾಡಿದ್ದ ಕಾರಣ ನನ್ನ ಭಾವ ಅಶೋಕ ತುಂಬಾ ಚಿಂತಿತನಾಗಿದ್ದ. ರೌಡಿಗಳಿಂದ ಬೆದರಿಕೆ ಹಾಕಿಸಿದರೂ ಪ್ರಯೋಜವಾಗದ್ದರಿಂದ ಮುಂದೇನು ಮಾಡಬೇಕೆಂದು ನನ್ನನ್ನು ಕೇಳಿದ. ನಾಗರಾಜನನ್ನು ಅಪಹರಿಸಿ ಬೆದರಿಸುವ ಪ್ಲಾನನ್ನು ನಾನೇ ಹಾಕಿದೆ. ನನಗೆ ಪರಿಚಯವಿದ್ದ ಕೆಲವು ರೌಡಿಗಳನ್ನು ಸಂರ್ಪಸಿ ಹಣ ನೀಡಿದೆ. ಅವರು ಆತನನ್ನು ಕಾರಲ್ಲಿ ಅಪಹರಿಸಿಕೊಂಡು ನನ್ನ ಮನೆಗೆ ಬಂದಾಗ ನಾನೂ ಅವರೊಡನೆ ತೆರಳಿ ಕಾರನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಸೂಚಿಸಿದೆ. ನಾಗರಾಜನ ಮೊಬೈಲ್ ಫೋನನ್ನು ಕಸಿದುಕೊಂಡು ಮೋರಿಯಲ್ಲಿ ಬಿಸಾಕಿದೆ. ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸಿ ‘ಸೈಟನ್ನು ವಾಪಸ್ ಮಾಡದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇವೆ’ ಎಂದು ಬೆದರಿಸಿದೆವು. ಆತ ಬೆದರಿಕೆಗೆ ಜಗ್ಗದೆ ಧಿಮಾಕಿನಿಂದ ಮಾತನಾಡಿದ. ಆಗ ಸಲೀಂ ಎಂಬಾತ ಕೋಪಗೊಂಡು ಅವನ ಹೊಟ್ಟೆಗೆ ಚಾಕುವಿನಿಂದ ಪದೇಪದೆ ಇರಿದ. ಆತ ಸತ್ತೇಹೋದ. ಮುಂದೇನು ಮಾಡುವುದೆಂದು ಯೋಚಿಸಿದಾಗ ನಮ್ಮ ಜತೆಯಲ್ಲಿದ್ದ ವಿಮಲ್ ದೇಹವನ್ನು ಅರಣ್ಯದಲ್ಲಿ ಸುಡೋಣವೆಂದು ಸೂಚಿಸಿದ. ಅದರಂತೆಯೇ ನಾವು ಸುಮಾರು ಅರವತ್ತು ಕಿ.ಮೀ ದೂರದಲ್ಲಿದ್ದ ಕಾಡೊಂದಕ್ಕೆ ಹೋಗಿ ನಿರ್ಜನ ಪ್ರದೇಶದಲ್ಲಿ ಆತನ ಜೇಬಿನಲ್ಲಿದ್ದ ವಸ್ತುಗಳನ್ನು ಹೊರಕ್ಕೆ ತೆಗೆದು ದೇಹದ ಮೇಲೆ ಪೆಟ್ರೋಲ್ ಸುರಿದು ಸುಟ್ಟೆವು.’

ಶವ ಸುಟ್ಟ ಸ್ಥಳವನ್ನು ನರಹರಿ ಪೊಲೀಸರಿಗೆ ತೋರಿಸಿದ. ಆ ಸ್ಥಳದಲ್ಲಿ ಒಂದು ತಲೆಬುರುಡೆ, ಕಾಲು ಮತ್ತು ಕೈ ಮೂಳೆಗಳು ಮಾತ್ರ ಸಿಕ್ಕವು. ದೇಹವು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಅದು ಯಾರದೆಂದು ಗುರುತಿಸಲು ಆಗುತ್ತಿರಲಿಲ್ಲ. ಅದೃಷ್ಟವಶಾತ್ ಶವದ ಕೈ ಬೆರಳಿನಲ್ಲಿದ್ದ ಚಿನ್ನದ ಉಂಗುರ ಹಾಗೆಯೇ ಉಳಿದಿತ್ತು. ಲಕ್ಷ್ಮಿ ಅದು ಗಂಡನದೆಂದು ಗುರುತಿಸಿದಳು. ಡಿಎನ್​ಎ ಮತ್ತು ಸೂಪರ್ ಇಂಪೊಸಿಷನ್ ತಂತ್ರದ ಮುಖಾಂತರ ಶವವು ನಾಗರಾಜನದೇ ಎಂದು ಸಾಬೀತುಪಡಿಸಿ ಕೊಲೆಯಲ್ಲಿ ಪಾಲ್ಗೊಂಡಿದ್ದ ಐವರು ರೌಡಿಗಳನ್ನು ಬಂಧಿಸಲಾಯಿತು. ಅವರೆಲ್ಲರೂ 21 ರಿಂದ 25 ವಯಸ್ಸಿನವರಾಗಿದ್ದರು. ಅಶೋಕ ಮತ್ತು ಲಲಿತಾ ಸೇರಿ ಎಂಟು ಜನರ ಮೇಲೆ ಒಳಸಂಚು, ಅಪಹರಣ ಹಾಗೂ ಕೊಲೆಯ ಆರೋಪಪಟ್ಟಿ ಸಲ್ಲಿಸಲಾಯಿತು.

‘ಪ್ರತೀಕಾರವು ಭಾವೋದ್ವೇಗದ ಕ್ರಿಯೆ ಹೇಗೋ ಹಾಗೆಯೇ ಪ್ರತಿಹಿಂಸೆಯು ನ್ಯಾಯದು’ ಎನ್ನುತ್ತಾನೆ ಹೆಸರಾಂತ ಲೇಖಕ ಸಾಮ್ಯುವೆಲ್ ಜಾನ್ಸನ್. ತನಗೆ ಅನ್ಯಾಯವಾದ ಭಾವೋದ್ವೇಗದಿಂದ ಕಾನೂನನ್ನು ಕೈಗೆತ್ತಿಕೊಂಡ ಅಶೋಕನಿಗೆ ಕಡೆಗೂ ಸೈಟು ದಕ್ಕಲಿಲ್ಲ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net