ಆ ಕ್ಷಣ| ಅಚ್ಚರಿ ತಂದ ಸುಪಾರಿ ರಹಸ್ಯ

Murder Supari
Published on
ಪುಟ್ಟ ಗ್ರಾಮವೊಂದರಲ್ಲಿ ರಾಧಾಕೃಷ್ಣ ಎಂಬ ರೈತನು ಪತ್ನಿ ಪ್ರೇಮಲತಾ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದ. ಪಿತ್ರಾರ್ಜಿತವಾಗಿ ಬಂದಿದ್ದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ. ಮಗಳು ರೇಣುಕಾಳನ್ನು ಪಕ್ಕದ ಗ್ರಾಮದ ಮಹದೇವ ಎನ್ನುವವನಿಗೆ ಲಗ್ನ ಮಾಡಿಕೊಟ್ಟ ನಂತರ ತನ್ನ ಜವಾಬ್ದಾರಿ ಕಳೆಯಿತು ಎಂದು ಆತ ಸಮಾಧಾನ ಪಡುವಷ್ಟರಲ್ಲಿಯೇ ಎಸ್​ಎಸ್​ಎಲ್​ಸಿ ಕಲಿಯುತ್ತಿದ್ದ ಒಬ್ಬನೇ ಮಗ ಮೋಹನ್ ಶಾಲೆಗೆ ಹೋಗುವುದನ್ನು ಬಿಟ್ಟು ಕೆಟ್ಟ ಸಹವಾಸ ಬೆಳೆಸಿದ. ವ್ಯವಸಾಯದಲ್ಲಿ ತಂದೆಗೆ ನೆರವಾಗದೇ ದಿನಪೂರ್ತಿ ಮನೆಯ ಹೊರಗೇ ಇರುತ್ತಿದ್ದ.

ಇದೇ ಕೊರಗಿನಿಂದ ರಾಧಾಕೃಷ್ಣ ಹೃದಯಾಘಾತಕ್ಕೊಳಗಾಗಿ ಅಸುನೀಗಿದ. ಪ್ರೇಮಲತಾಗೆ ಮುಂದೇನು ಮಾಡುವುದೆಂದೇ ತೋಚಲಿಲ್ಲ. ಮಗನಂತೂ ಹಾದಿತಪ್ಪಿದ್ದು ಅವನಿಗೆ ಜಮೀನನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಏಕಾಂಗಿಯಾಗಿ ಆಸ್ತಿಯನ್ನು ನಿಭಾಯಿಸುವುದು ಆಕೆಗೆ ಕಷ್ಟವಾಗುತ್ತಿತ್ತು. ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಮಕ್ಕಳಿಗೆ ಸ್ವಲ್ಪ ಕೊಟ್ಟು ಉಳಿದಿದ್ದನ್ನು ತಾನಿಟ್ಟುಕೊಂಡು ತವರಿನ ಗ್ರಾಮದಲ್ಲಿ ಜೀವಿಸಲು ಆಕೆ ತೀರ್ವನಿಸಿದಳು.

ಆಸ್ತಿ ಮಾರಲು ಮಗಳು ಹಾಗೂ ಅಳಿಯನ ಒಪ್ಪಿಗೆ ದೊರೆತರೂ ಮೋಹನ್​ಗೆ ಇಷ್ಟವಿರಲಿಲ್ಲ. ‘ಇಷ್ಟು ಬೆಲೆಬಾಳುವ ಜಮೀನನ್ನು ಏಕೆ ಮಾರಬೇಕು? ನಾವೇ ವ್ಯವಸಾಯ ಮಾಡೋಣ’ ಎಂದು ಆತ ಹೇಳಿದಾಗ ತಾಯಿ ಒಪ್ಪಲಿಲ್ಲ. ‘ನೀನು ಪ್ರತಿದಿನವೂ ಜೂಜಾಟದಲ್ಲಿ ತೊಡಗಿರುವುದೇ ಅಲ್ಲದೆ ಇತ್ತೀಚೆಗೆ ಮಾದಕ ವಸ್ತುಗಳನ್ನೂ ಸೇವಿಸುತ್ತಿರುವೆ, ನನಗೆ ಏಕಾಂಗಿಯಾಗಿ ಜಮೀನನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ಮೇಲಾಗಿ ಸಂಸಾರವನ್ನು ಸಾಗಿಸಲು ಹಣ ಬೇಕಾಗಿದೆ. ಬೇಕಾದರೆ ನಿನ್ನ ಪಾಲಿನ ಜಮೀನನ್ನು ಕೊಡುವೆ, ಅದನ್ನು ನೀನು ನೋಡಿಕೋ, ಉಳಿದಿದ್ದನ್ನು ಮಾರುವೆ’ ಎಂದಳು. ಆದರೆ ಮೋಹನ್ ತೀವ್ರವಾಗಿ ವಿರೋಧಿಸಿದ.

ಪ್ರೇಮಲತಾ ತನ್ನ ಗಂಡನ ಕಿರಿಯ ಸೋದರ ಪ್ರಶಾಂತ್ ಮತ್ತು ಊರ ಕೆಲವು ಹಿರಿಯರನ್ನು ಮನೆಗೆ ಕರೆಸಿ ಸಮಸ್ಯೆಯನ್ನು ಅವರ ಮುಂದಿಟ್ಟಳು. ಅವರೆಲ್ಲರೂ ಜಮೀನನ್ನು ಮಾರುವುದೇ ಲೇಸೆಂದು ಆಭಿಪ್ರಾಯಪಟ್ಟರು. ಆದರೆ ಮೋಹನ್ ಒಪ್ಪದೆ ತಾನು ಆಸ್ತಿಯ ವಿಭಜನೆ ಇಲ್ಲವೇ ಮಾರಾಟಮಾಡಲು ಬಿಡುವುದಿಲ್ಲ ಎಂದು ಹಠಹಿಡಿದ.

ಈ ಘಟನೆಯ ಬಳಿಕ ಮನೆಯಲ್ಲಿನ ವಾತಾವರಣವೇ ಬದಲಾಯಿತು. ಮೋಹನ್ ಪ್ರತಿದಿನವೂ ತನ್ನ ಚಟಗಳಿಗಾಗಿ ಹಣಕ್ಕಾಗಿ ತಾಯಿಯನ್ನು ಪೀಡಿಸತೊಡಗಿದ. ಮನೆಯಲ್ಲಿದ್ದ ಹಣವೆಲ್ಲಾ ಖರ್ಚಾದಾಗ ಆಕೆ ಮತ್ತೊಮ್ಮೆ ಮೈದುನ ಹಾಗೂ ಅಳಿಯನ ಸಲಹೆ ಕೇಳಿದಳು. ‘ಮೋಹನ್ ಮಾದಕ ವಸ್ತುಗಳ ವ್ಯಸನಿಯಾಗಿರುವ ಕಾರಣ ಅವನಿಗೆ ಬುದ್ಧಿ ಹೇಳಿದರೂ ಪ್ರಯೋಜನವಿಲ್ಲ, ನೀನು ಜಮೀನನ್ನು ಮಾರುವ ಪ್ರಕ್ರಿಯೆ ಆರಂಭಿಸು. ನೋಡೋಣ’ ಎಂದು ಅವರು ಹೇಳಿದರು. ಅಂತೆಯೇ ಪ್ರೇಮಲತಾ ಜಮೀನು ಮಾರಾಟಕ್ಕಿದೆಯೆಂದು ಗ್ರಾಮದಲ್ಲಿ ತಿಳಿಸಿದಾಗ ಹಲವಾರು ಜನರು ಖರೀದಿಗಾಗಿ ಬರತೊಡಗಿದರು. ಒಂದು ದಿನ ಖರೀದಿದಾರನೊಬ್ಬ ಮನೆಗೆ ಬಂದಾಗ ಮೋಹನ್ ಸಿಟ್ಟಿಗೆದ್ದು ಆ ವ್ಯಕ್ತಿಯನ್ನು ನಿಂದಿಸಿ ಓಡಿಸಿದ. ಈ ಘಟನೆಯ ನಂತರ ಖರೀದಿದಾರರು ಬರುವುದನ್ನು ನಿಲ್ಲಿಸಿದರು. ಇದರಿಂದ ಚಿಂತೆಗೊಂಡ ಪ್ರೇಮಲತಾ ಮತ್ತೊಮ್ಮೆ ಮೈದುನನ ಮೊರೆಹೋದಳು. ಆತ ಬುದ್ಧಿವಾದ ಹೇಳಲು ಹೊರಟಾಗ ಮೋಹನ್ ಚಿಕ್ಕಪ್ಪನನ್ನೇ ಥಳಿಸಲು ಬಂದ. ಮಾರನೆಯ ದಿನ ಪ್ರಶಾಂತ್ ಪ್ರೇಮಲತಾಳನ್ನು ಕಂಡು, ‘ಮೋಹನ್​ಗೆ ತಲೆ ಕೆಟ್ಟಿರುವಂತೆ ಕಾಣತ್ತದೆ, ಜಮೀನನ್ನು ಮಾರಲು ಅವನು ಬಿಡುವುದೇ ಇಲ್ಲ, ಈ ಸಮಸ್ಯೆಗೆ ಇರುವುದು ಒಂದೇ ಪರಿಹಾರ’ ಎಂದ. ಅದು ಯಾವುದೆಂದು ಪ್ರೇಮಲತಾ ಕೇಳಿದಾಗ ‘ಹೇಗಾದರೂ ಮಾಡಿ ಅವನೇ ಇಲ್ಲದಂತೆ ಮಾಡಿದರೆ ಈ ಸಮಸ್ಯೆಯೇ ಬಗೆಹರಿಯುತ್ತದೆ. ಅವನ ಪಾಲಿನ ಜಮೀನು ಸಹ ನಿನ್ನ ಹೆಸರಿಗೆ ಬರುತ್ತದೆ, ಆಗ ನೀನು ಸುಖದಿಂದಿರಬಹುದು’ ಎಂದ.

ಗಾಬರಿಗೊಂಡ ಪ್ರೇಮಲತಾ ಈ ಸಲಹೆಗೆ ಒಪ್ಪಲಿಲ್ಲ. 21 ವರ್ಷ ವಯಸ್ಸಿನ ಸ್ವಂತ ಮಗನನ್ನೇ ಕೊಲೆ ಮಾಡಿಸಲಾರೆ ಎಂದಳು. ಒಂದೆರಡು ತಿಂಗಳು ಕಳೆದ ನಂತರವೂ ಮಗನ ಕಿರುಕುಳ ಕಡಿಮೆಯಾಗದಿದ್ದಾಗ ರೋಸಿಹೋದ ಆಕೆ ಮೋಹನ್​ನನ್ನು ಕೊಲೆ ಮಾಡಿಸಲು ಒಪ್ಪಿಗೆ ನೀಡಿದಳು. ಮಹಾದೇವ ಮತ್ತು ಪ್ರಶಾಂತ್ ಜತೆಗೆ ಪ್ರೇಮಲತಾ ಸಮಾಲೋಚಿಸಿದಳು. ‘ನೀನೇನೂ ಚಿಂತಿಸಬೇಡ, ನನ್ನ ಪರಿಚಯದವನೊಬ್ಬನಿಗೆ ಹೇಳಿ ಈ ಕೆಲಸ ಮಾಡಿಸುತ್ತೇನೆ, ಆದರೆ ಕೊಲೆಮಾಡಿಸಲು ಸುಮಾರು ಒಂದು ಲಕ್ಷ ರೂಪಾಯಿ ಖರ್ಚಾಗುವುದರಿಂದ ನೀನು ಹಣವನ್ನು ಹೊಂದಿಸು’ ಎಂದ ಮಹಾದೇವ್. ಪ್ರೇಮಲತಾ ಒಪ್ಪಿದಳು.

ಅದೇ ಸಂಜೆ ಮಹಾದೇವ್ ಮತ್ತು ಪ್ರಶಾಂತ್ ತಮ್ಮ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಬಾ ನಡೆಸುತ್ತಿದ್ದ ಅಲೋಕ್​ನನ್ನು ಭೇಟಿಯಾದರು. ಈ ಹಿಂದೆ ಕೊಲೆ ಕೇಸೊಂದರಲ್ಲಿ ಆರೋಪಿಯಾಗಿದ್ದು ಬಿಡುಗಡೆ ಹೊಂದಿದ್ದ ಅಲೋಕ್ ಸುಪಾರಿ ಪಡೆಯಲು ಸಮ್ಮತಿಸಿ, ‘ನನ್ನ ಡಾಬಾಕ್ಕೆ ಮೋಹನ್ ಬಂದುಹೋಗುವುದರಿಂದ ನನಗೆ ಈ ಕೆಲಸ ಸುಲಭ. ಐವತ್ತು ಸಾವಿರ ರೂಪಾಯಿ ಮುಂಗಡ ಕೊಟ್ಟರೆ ಮಾತ್ರ ಕೊಲೆ ಮಾಡುವೆ’ ಎಂದ. ಪ್ರೇಮಲತಾ ಯಾರಿಂದಲೋ ಸಾಲ ಮಾಡಿ ಹಣ ಹೊಂದಿಸಿ ಕೊಟ್ಟಳು.

2018ರ ಏಪ್ರಿಲ್ 6ರ ಮಧ್ಯಾಹ್ನ ಮೋಹನ್ ಮಾದಕ ವಸ್ತುಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಸಂಧಿಸಲು ಹೆದ್ದಾರಿಗೆ ಹೋದ. ಆತ ಮನೆಗೆ ವಾಪಸಾಗುತ್ತಿದ್ದಾಗ ಅಲೋಕ್ ಅವನನ್ನು ತಡೆದು ಆ ದಿನ ತನ್ನ ಹುಟ್ಟುಹಬ್ಬವಾದ ಕಾರಣ ತನ್ನ ಡಾಬಾದಲ್ಲಿಯೇ ಮುಫತ್ತಾಗಿ ಊಟಮಾಡಲು ಆಹ್ವಾನಿಸಿದ. ಒಪ್ಪಿದ ಮೋಹನ್​ಗೆ ಎರಡು ಬಾಟ್ಲಿ ತಣ್ಣನೆಯ ಬಿಯರನ್ನು ನೀಡಿದ. ಆನಂತರ ಅವನ ಊಟದಲ್ಲಿ ನಿದ್ರೆಗುಳಿಗೆಗಳನ್ನು ಬೆರೆಸಿ ಕೊಟ್ಟ.

ಊಟ ಮುಗಿಸಿ ಮನೆಗೆ ಹೋಗಲು ಮೋಹನ್ ಎದ್ದಾಗ ‘ನನ್ನ ಡಾಬಾದಲ್ಲಿಯೇ ಕೆಲಸ ಮಾಡುವ ಅನಿಲ್​ಗೆ ನಿನ್ನ ಮೋಟರ್ ಸೈಕಲ್​ನಲ್ಲಿ ಮುಂದಿನ ಗ್ರಾಮದವರೆಗೆ ಡ್ರಾಪ್ ಕೊಡು’ ಎಂದು ಅಲೋಕ್ ಕೋರಿದ. ಮೋಹನ್ ಒಪ್ಪಿದ. ಆತ ಹೊರಟ ಅರ್ಧಗಂಟೆಯ ಬಳಿಕ ಅಲೋಕ್ ಇನ್ನೊಂದು ವಾಹನದಲ್ಲಿ ಹಿಂಬಾಲಿಸಿದ.

ಮೊದಲೇ ಪ್ಲಾನ್ ಮಾಡಿದ್ದಂತೆ, ಸುಮಾರು 15 ಕಿ.ಮೀ ಕ್ರಮಿಸಿದ ನಂತರ ತನಗೆ ಬಾಯಾರಿಕೆಯಾಗುತ್ತಿದೆ ಎಂದ ಅನಿಲ್ ಮುಂದಿನ ಡಾಬಾದಲ್ಲಿ ವಾಹನ ನಿಲ್ಲಿಸಲು ಮೋಹನ್​ಗೆ ಸೂಚಿಸಿದ. ಡಾಬಾದಲ್ಲಿ ಮೋಹನ್​ಗೆ ಆತ ಬಲವಂತವಾಗಿ ಮತ್ತಷ್ಟು ಮದ್ಯಪಾನ ಮಾಡಿಸಿದ. ಆನಂತರ ರಸ್ತೆಯಲ್ಲಿ ಒಂದು ಕಿ.ಮೀ ಕ್ರಮಿಸುವಷ್ಟರಲ್ಲಿಯೇ ಮೋಹನ್​ನಿಗೆ ತೀವ್ರವಾಗಿ ನಿದ್ರೆ ಬರತೊಡಗಿತು. ಆತ ಮೋಟರ್ ಸೈಕಲನ್ನು ನಿಲ್ಲಿಸಿ ‘ನನಗೆ ವಾಹನ ಓಡಿಸಲು ಸಾಧ್ಯವಾಗುತ್ತಿಲ್ಲ, ನಾನು ಇಲ್ಲೇ ಮಲಗುವೆ, ನೀನು ಬೇರೊಂದು ವಾಹನದಲ್ಲಿ ಹೋಗು’ ಎಂದು ಅನಿಲನಿಗೆ ಹೇಳಿ ಪಕ್ಕದ ಹೊಲದಲ್ಲಿಯೇ ಮಲಗಿಬಿಟ್ಟ. ಆಗ ಇನ್ನೇನು ಸೂರ್ಯ ಮುಳುಗುತ್ತಿದ್ದ.

ಕೆಲ ಸಮಯದ ನಂತರ ಅಲೋಕ್ ಅಲ್ಲಿಗೆ ಬಂದು ಸಂಪೂರ್ಣವಾಗಿ ನಶೆಯಲ್ಲಿ ಮಲಗಿದ್ದ ಮೋಹನ್​ನ ಕುತ್ತಿಗೆಗೆ ಟವಲನ್ನು ಗಟ್ಟಿಯಾಗಿ ಬಿಗಿದ. ಕ್ಷಣಾರ್ಧದಲ್ಲಿ ಆತ ಅಸುನೀಗಿದ. ಆನಂತರ ಮೋಹನ್​ನ ಶವವನ್ನು ಮತ್ತು ಮೋಟರ್ ಸೈಕಲನ್ನು ಅಲ್ಲಿಯೇ ಬಿಟ್ಟು ಅನಿಲ್ ಜತೆ ಅಲೋಕ್ ವಾಪಸಾದ.

ಹೆದ್ದಾರಿಯಲ್ಲಿ ಬರುತ್ತಿದ್ದ ಟ್ರಕ್ ಚಾಲಕನೊಬ್ಬ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮೋಟರ್ ಸೈಕಲ್ ನೋಡಿ ಕೆಳಗಿಳಿದು ಪರೀಕ್ಷಿಸಿದ. ಬೈಕ್​ನ ಪಕ್ಕದಲ್ಲಿಯೇ ಶವ ಬಿದ್ದಿರುವುದನ್ನು ನೋಡಿ ಗಾಬರಿಯಾದ ಆತ ವಾಹನ ಅಪಘಾತ ನಡೆದಿದೆ ಎಂದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಸ್ಥಳಕ್ಕೆ ಬಂದ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ, ಶವದ ಪಂಚನಾಮೆ ಮಾಡಿದರು. ಸತ್ತ ವ್ಯಕ್ತಿ ಯಾರು ಎಂದು ತಿಳಿಯದ ಕಾರಣ ಶವದ ಫೋಟೋಗಳನ್ನು ತೆಗೆದು, ಮೋಟರ್ ಸೈಕಲನ್ನು ಜಪ್ತು ಮಾಡಿದರು. ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿರುವ ಕಾರಣ ಸಾವಾಗಿದೆ ಎಂದು ತಿಳಿದ ಮೇರೆಗೆ ಕೊಲೆ ಪ್ರಕರಣ ದಾಖಲಾಯಿತು.

ಆರ್​ಟಿಓ ದಾಖಲೆಗಳಿಂದ ಸ್ಥಳದಲ್ಲಿದ್ದ ಬೈಕ್ ಮೋಹನ್​ದೆಂದು ಪತ್ತೆಮಾಡಿದ ಪೊಲೀಸರು ಅವನ ಮನೆಗೆ ಬಂದು ಪ್ರೇಮಲತಾಗೆ ಶವದ ಫೋಟೋಗಳನ್ನು ತೋರಿಸಿದಾಗ, ‘ಇವನು ನನ್ನ ಮಗ ಮೋಹನ್’ ಎಂದು ಗುರುತಿಸಿ ಬಿಕ್ಕಿಬಿಕ್ಕಿ ಅತ್ತಳು. ‘ಆತನಿಗೆ ಯಾರೂ ವೈರಿಗಳಿರಲಿಲ್ಲ, ಅವನನ್ನು ಕೊಂದವರು ಯಾರೆಂದು ಕೂಡಲೇ ಪತ್ತೆ ಮಾಡಿ’ ಎಂದು ಕೋರಿದಳು.

ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಎರಡು ಟೋಲ್ ಪ್ಲಾಜಾಗಳಲ್ಲಿ ಕೊಲೆಯಾದ ದಿನ ಬಂದು ಹೋದ ವಾಹನಗಳ ಸಿಸಿಟಿವಿ ರೆಕಾರ್ಡಿಂಗ್ ಪರಿಶೀಲಿಸಿದರು. ಮೋಹನ್ ತನ್ನ ಮೋಟರ್ ಸೈಕಲಿನಲ್ಲಿ ವ್ಯಕ್ತಿಯೊಬ್ಬನ ಜೊತೆಗೆ ಬಂದಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮೋಹನ್​ನ ಗ್ರಾಮಕ್ಕೆ ಬಂದು ಆ ಫೋಟೋವನ್ನು ತೋರಿಸಿ ಅದರಲ್ಲಿರುವ ವ್ಯಕ್ತಿ ಅನಿಲ್​ನೇ ಎಂದು ಪತ್ತೆಮಾಡಿದರು. ಅನಿಲ್​ನನ್ನು ಪ್ರಶ್ನಿಸಿದಾಗ ಆತ ಕೊಲೆ ಬಗ್ಗೆ ಬಾಯ್ಬಿಟ್ಟ.

ಆನಂತರ ಅಲೋಕ್​ನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಆತ ತಾನು ಮಹಾದೇವನಿಂದ ಸುಪಾರಿ ಪಡೆದು ಮೋಹನ್​ನ ಕೊಲೆ ಮಾಡಿದ್ದಾಗಿ ಒಪ್ಪಿದ. ಒಳಸಂಚು ಹಾಗೂ ಕೊಲೆಆರೋಪದ ಮೇರೆಗೆ ಪ್ರೇಮಲತಾ ಸೇರಿ ಐವರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ಎಲ್ಲರಿಗೂ ಜೈಲು ಶಿಕ್ಷೆಯಾಯಿತು.

‘ಜೀವನದ ಆಟವನ್ನು ಆಡಲು ಇಡುವ ಪಣವೇ ಸಾವು’ ಎಂದು ಫ್ರೆಂಚ್ ನಾಟಕಕಾರ ಜಾನ್ ಗಿರಾಡೂ ಹೇಳಿದ ಮಾತನ್ನು ಪ್ರೇಮಲತಾ ಪುಷ್ಟೀಕರಿಸಿದಳು. (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net