ಆ ಕ್ಷಣ | ವಿವಾಹ ಬಾಂಧವ್ಯದಲ್ಲಿ ಹುಳಿಹಿಂಡಿದ!

Aa kshana
Published on
ನಮ್ಮ ರಾಜ್ಯದ ಗಡಿಜಿಲ್ಲೆಯೊಂದರ ನಿವಾಸಿ ಕಮಲಾ ತನ್ನ ಇಪ್ಪತ್ತಮೂರನೆಯ ವರ್ಷಕ್ಕೆ ವಸಂತ್ ಎನ್ನುವವನನ್ನು ಲಗ್ನವಾದಳು. ಮಧ್ಯಮವರ್ಗದ ಕಮಲಾಳಿಗೆ ಶ್ರೀಮಂತನೂಸ್ಪುರದ್ರೂಪಿಯೂ ಆಗಿದ್ದ ವಸಂತ್ ತನ್ನನ್ನು ಲಗ್ನವಾಗಲು ಸಮ್ಮತಿಸಿದ್ದೇ ಆಶ್ಚರ್ಯ ತಂದಿತ್ತು.ಪುಟ್ಟಗ್ರಾಮದ ತೋಟದ ಮನೆಯಲ್ಲಿ ವಾಸಮಾಡುವುದು ಪಟ್ಟಣ ನಿವಾಸಿಯಾಗಿದ್ದ ಆಕೆಗೆ ಆರಂಭದಲ್ಲಿ ಕಷ್ಟಕರವಾಗಿದ್ದರೂ ತನ್ನ ಮುಜುಗರವನ್ನು ಆಕೆ ತೋರಗೊಟ್ಟಿರಲಿಲ್ಲ.

ಮದುವೆಯಾದ ಒಂದು ವರ್ಷದ ತರುವಾಯ, ‘ಮದುವೆಯಾಗಿ ಇಷ್ಟು ದಿನಗಳಾದರೂ ಇನ್ನೂ ಸಿಹಿಸುದ್ದಿಯನ್ನು ಕೊಡಲೇ ಇಲ್ಲವಲ್ಲ’ ಎಂದು ಅತ್ತೆ ಕೇಳಿದಾಗ ಕಮಲಾ ಏನೂ ಪ್ರತಿಕ್ರಿಯಿಸಿರಲಿಲ್ಲ. ಆದರೆ ಕಾಲಕ್ರಮೇಣ ಇಂಥ ಪ್ರಶ್ನೆಗಳು ಎಲ್ಲರಿಂದಲೂ ಬರತೊಡಗಿದವು. ಕಮಲಾ ಚಿಂತೆಗೀಡಾದಳು. ಮದುವೆಯಾದ ಎರಡು ವರ್ಷದ ನಂತರ ‘ನಮ್ಮ ಕುಟುಂಬಕ್ಕೆ ವಾರಸುದಾರ ಬೇಕು, ಬೇಗನೇ ಗಂಡುಮಗುವಿನ ತಾಯಿಯಾಗಬೇಕು’ ಎಂದು ವಸಂತನೇ ಒತ್ತಡ ಹೇರತೊಡಗಿದ. ಕಮಲಾ ತನ್ನ ತಾಯಿಯನ್ನು ಸಂರ್ಪಸಿ ಆತಂಕ ವ್ಯಕ್ತಪಡಿಸಿದಳು. ‘ಚಿಂತೆ ಮಾಡಬೇಡ, ಮುಂದಿನ ಬಾರಿ ಇಲ್ಲಿಗೆ ಬಂದಾಗ ಪ್ರಸೂತಿ ತಜ್ಞೆ ಬಳಿ ಕರೆದೊಯ್ಯುವೆ’ ಎಂದಳಾಕೆ. ಜಿಲ್ಲಾಕೇಂದ್ರದಲ್ಲಿದ್ದ ತವರಿಗೆ ಕಮಲಾ ಹೋದಾಗ ಅವಳನ್ನು ತಾಯಿ ಪ್ರಸೂತಿ ತಜ್ಞರೊಬ್ಬರ ಬಳಿಗೆ ಕರೆದೊಯ್ದಳು. ಆ ವೈದ್ಯರು ‘ನಿನ್ನ ದೈಹಿಕ ಪರೀಕ್ಷೆಯಲ್ಲಿ ಯಾವುದೇ ತೊಂದರೆ ಕಂಡುಬರುತ್ತಿಲ್ಲ, ಪತಿಯನ್ನು ಇಲ್ಲಿಗೆ ಕರೆದುಕೊಂಡು ಬಂದರೆ ಆತನನ್ನು ಪರೀಕ್ಷೆ ಮಾಡಿ ಮಕ್ಕಳಾಗದಿರುವ ಬಗ್ಗೆ ಕಾರಣ ಕೊಡಬಹುದು’ ಎಂದರು. ಕಮಲಾ ಗಂಡನಿಗೆ ಈ ವಿಷಯವನ್ನು ತಿಳಿಸಿದಾಗ ಆತ ಸಿಟ್ಟಾಗಿ- ‘ನನಗೆ ಹೇಳದೇ ಕೇಳದೇ ನಿನ್ನ ತಾಯಿಯೊಡನೆ ಹೋಗಿ ತಪಾಸಣೆ ಮಾಡಿಸಿಕೊಂಡು ಬಂದಿದ್ದಲ್ಲದೆ ನನಗೇ ದೈಹಿಕವಾಗಿ ತೊಂದರೆಯಿರಬಹುದು ಎನ್ನಲು ನಿನಗೆಷ್ಟು ಧೈರ್ಯ? ನನಗೇನೂ ಆಗಿಲ್ಲ, ಯಾವ ವೈದ್ಯರ ಬಳಿಯೂ ಬರುವುದಿಲ್ಲ’ ಎಂದು ಕೂಗಾಡಿದ.

ಇದಾದ ಒಂದು ವರ್ಷದ ನಂತರವೂ ಕಮಲಾ ಗರ್ಭಿಣಿಯಾಗದಿದ್ದಾಗ ವಸಂತ್ ತಾನೂ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಲು ತೀರ್ಮಾನಿಸಿದ. ಆತ ಕಮಲಾಳ ಜತೆಯೇ ವೈದ್ಯರ ಬಳಿಗೆ ಹೋದ. ಇಬ್ಬರನ್ನೂ ಪರೀಕ್ಷಿಸಿದ ತಜ್ಞರು ವಸಂತನಿಗೆ ತೊಂದರೆಗಳಿರುವುದನ್ನು ಪತ್ತೆಮಾಡಿ ಕೆಲವು ಔಷಧಗಳನ್ನು ಬರೆದುಕೊಟ್ಟು ಮೂರು ತಿಂಗಳ ನಂತರ ಮತ್ತೆ ಬರಲು ಸೂಚಿಸಿದರು. ಮತ್ತೊಮ್ಮೆ ತಪಾಸಣೆಯಾದಾಗ ವಸಂತನಲ್ಲಿ ವೀರ್ಯಾಣುಗಳು ಸೂಕ್ತ ಮಟ್ಟದಲ್ಲಿ ಇಲ್ಲದಿರುವುದುಪತ್ತೆಯಾಯಿತು. ದಾನಿಯೊಬ್ಬರಿಂದ ವೀರ್ಯ ಪಡೆದು ಐವಿಎಫ್ ತಂತ್ರದ ಮೂಲಕ ಕಮಲಾಳಿಗೆ ಮಕ್ಕಳಾಗಲು ಸಾಧ್ಯ ಎಂದು ವೈದ್ಯರು ಸೂಚಿಸಿದಾಗ ವಸಂತ್ ಹೌಹಾರಿದ. ಮನೆಗೆ ಬಂದ ನಂತರ ತನಗಾಗಿದ್ದ ಅಸಂತೋಷವನ್ನು ಹೆಂಡತಿಯ ಮೇಲೆ ಹಲ್ಲೆ ಮಾಡಿ ವ್ಯಕ್ತಪಡಿಸಿದ. ಕಮಲಾ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾದ ಪರಿಸ್ಥಿ್ಥ ಉದ್ಭವವಾಯಿತು. ಪತಿ-ಪತ್ನಿಯರ ನಡುವೆ ಮಾತುಕತೆ ನಿಂತು ಹೋದವು. ‘ನೀನು ಬಂಜೆಯಾಗಿ ನನ್ನ ಮಗನನ್ನು ದೂಷಿಸುತ್ತಿರುವೆ, ಮಗನಿಗೆ ಇನ್ನೊಂದು ಹೆಣ್ಣನ್ನು ತಂದು ಲಗ್ನಮಾಡುವೆ’ ಎಂದು ವಸಂತನ ತಾಯಿ ಕಮಲಾಳಿಗೆ ಹೇಳಿದಾಗ ಆಕೆ ಖಿನ್ನತೆಗೆ ಜಾರಿದಳು.

ಮುಂದೇನೂ ಮಾಡಲು ತೋಚದ ಕಮಲಾ ಭಗವಂತನ ಮೊರೆ ಹೋದಳು. ಚಿಂತೆಯಿಂದ ಕಮಲಾ ಕೊರಗುತ್ತ ಕೃಶಳಾದಳು. ಒಂದು ದಿನ ಬಾಲ್ಯದ ಗೆಳತಿ ಸೌಮ್ಯಾ ಕಮಲಾಳನ್ನು ಭೇಟಿಯಾದಳು. ಗೆಳತಿಯ ಪರಿಸ್ಥಿತಿ ನೋಡಿ ಆತಂಕಗೊಂಡು ಕಾರಣ ತಿಳಿದುಕೊಂಡಳು. ಮಗುವೊಂದನ್ನು ದತ್ತು ತೆಗೆದುಕೊಳ್ಳಲು ಸೂಚಿಸಿದ ಆಕೆ ತನಗೆ ಪರಿಚಯವಿರುವ ಒಬ್ಬಾಕೆ ತನ್ನ ಗಂಡುಮಗುವೊಂದನ್ನು ಮಕ್ಕಳಿಲ್ಲದವರಿಗೆ ದತ್ತು ಕೊಡಲು ತಯಾರಿದ್ದಾಳೆ ಎಂದಳು. ಕಮಲಾ ವಸಂತನಿಗೆ ಇದನ್ನು ಹೇಳಿದಾಗ ಆತ ಈ ಸಲಹೆಯನ್ನೂ ಸಾರಾಸಗಟಾಗಿ ತಿರಸ್ಕರಿಸಿದ.

ಕೆಲವು ದಿನಗಳ ನಂತರ ಸೌಮ್ಯಾ ಮತ್ತೊಂದು ಸಲಹೆ ನೀಡಿದಳು- ‘ನಮ್ಮ ಊರಿನ ಬಳಿ ‘ಸಂತಾನಸ್ವಾಮಿ’ ಎನ್ನುವವರಿದ್ದಾರೆ. ಮಕ್ಕಳಿಲ್ಲದವರಿಗೆ ಅವರ ಔಷಧದಿಂದ ಮಕ್ಕಳಾಗಿವೆ. ನೀನೂ ಅವರಲ್ಲಿಗೆ ಹೋಗಿ ಒಮ್ಮೆ ಪ್ರಯತ್ನಿಸಬಾರದೇಕೆ?’ ಎಂದಳು. ಕಮಲಾ ಒಪ್ಪಿದಳು. ಮುಂದಿನ ವಾರವೇ ಕಮಲಾ ತವರುಮನೆಗೆ ಹೋಗಿಬರುತ್ತೇನೆಂದು ಹೇಳಿ, ಸೌಮ್ಯಾಳ ಜೊತೆ ಸಂತಾನಸ್ವಾಮಿಯ ಆಶ್ರಮಕ್ಕೆ ಹೋದಳು. ಅಲ್ಲಿಗೆ ಮಕ್ಕಳಾಗದ ಹಲವಾರು ಮಹಿಳೆಯರು ಬಂದಿದ್ದರು. ಸ್ವಾಮಿ ವೇಷದ ವ್ಯಕ್ತಿ ಕಮಲಾಗೆ ಆಕೆಯ ವೈಯಕ್ತಿಕ ವಿವರಗಳನ್ನು ಕೇಳಿದ. ಕಮಲಾ ಶ್ರೀಮಂತ ಕುಟುಂಬವೊಂದರ ಸೊಸೆ ಎಂದುತಿಳಿದು, ‘ನಾನು ನಿನಗೆ ಮಕ್ಕಳಾಗುವ ಉತ್ತಮ ಉಪಾಯ ಹೇಳುತ್ತೇನೆ. ಅದಕ್ಕಾಗಿ ಸಾಕಷ್ಟು ಖರ್ಚು ಬರುತ್ತದೆ. ಆದರೆಒಂದು ವರ್ಷದಲ್ಲಿ ನಿನಗೆ ಖಂಡಿತವಾಗಿ ಮಕ್ಕಳಾಗುತ್ತವೆ’ ಎಂದ. ಕಮಲಾ ‘ಎಷ್ಟು ಖರ್ಚು ಬರುವುದು’ ಎಂದು ಕೇಳಿದಾಗ ಆ ಸ್ವಾಮಿ ಎರಡು ಲಕ್ಷ ರೂ. ತರಲು ಹೇಳಿದ. ಕೆಲ ದಿನಗಳ ನಂತರ ತನ್ನ ಕೆಲವು ಆಭರಣಗಳನ್ನು ಮಾರಿ ನಗದುಹಣ ತೆಗೆದುಕೊಂಡು ಸ್ವಾಮೀಜಿ ಬಳಿ ಹೋದಳು. ಆತ, ‘ನಿನಗೆಒಂದು ವಸ್ತುವನ್ನು ತರಿಸಿ ಕೊಡುವೆ, ಅದನ್ನುಮನೆಯಲ್ಲಿ ಅಮಾವಾಸ್ಯೆಯ ರಾತ್ರಿ ಪೂಜೆ ಮಾಡಿ ನಂತರ ಗಂಡ ಮಲಗುವ ಮಂಚದ ಮೇಲೆ ಹಾಸಿಗೆಯ ಕೆಳಗಿಟ್ಟರೆ ವರ್ಷದೊಳಗೆ ಮಗುವಾಗುತ್ತದೆ’ ಎಂದ. ಹಣ ಪಡೆದ ಸ್ವಾಮಿ ಆಕೆಗೆ ಒಂದು ಚೀಟಿ ಕೊಟ್ಟು, ‘ಇದನ್ನು ಪೇಟೆಯಲ್ಲಿರುವ ಬಸಪ್ಪನ ಅಂಗಡಿಯಲ್ಲಿ ಕೊಡು. ಆತ ನಿನಗೆಕೊಡುವ ವಸ್ತುವನ್ನು ಇಲ್ಲಿಗೆ ತೆಗೆದುಕೊಂಡು ಬಾ’ ಎಂದ. ಆ ಅಂಗಡಿಯಾತ ಪೊಟ್ಟಣವೊಂದರಲ್ಲಿ ಕಟ್ಟಿಕೊಟ್ಟಿದ್ದ ವಸ್ತುವನ್ನು ಸ್ವಾಮಿಗೆ ತಂದುಕೊಟ್ಟಳು. ಅದನ್ನು ಹೊರತೆಗೆದ ಸ್ವಾಮಿ, ‘ಇದು ಹಿಮಾಲಯದಲ್ಲಿ ಓಡಾಡುವ ಉಡದ ಜನನಾಂಗ. ಇದನ್ನು ಮಂತ್ರಿಸಿ ಕೊಡುವೆ, ಮನೆಗೊಯ್ದು ಪೂಜೆ ಮಾಡಿ ನಾನು ಹೇಳಿದಂತೆ ಮಾಡು’ ಎಂದ.

ರಾತ್ರಿ ಎಲ್ಲರೂ ಮಲಗಿದ ನಂತರ ಆ ವಸ್ತುವಿಗೆಪೂಜೆ ಮಾಡಿ ಗಂಡನ ಹಾಸಿಗೆಯ ಕೆಳಗಿಟ್ಟಳು. ಕೆಲವು ದಿನಗಳ ನಂತರ ವಸಂತ್ ಕೋಣೆಯಲ್ಲಿ ಏನನ್ನೋ ಹುಡುಕುವಾಗ ಅಕಸ್ಮಾತ್ತಾಗಿ ಉಡದ ಜನನಾಂಗವನ್ನು ಕಂಡು ಅದೇನೆಂದು ಕಮಲಾಳನ್ನು ಕೇಳಿದ. ಆಕೆಯ ಉತ್ತರವನ್ನು ಕೇಳಿ ಕೋಪಗೊಂಡ ಆತ ಕಮಲಾಗೆ ಥಳಿಸಿದ್ದಲ್ಲದೆ ಸಂತಾನಸ್ವಾಮಿಗೆ ಬುದ್ಧಿ ಕಲಿಸಿ ಹಣವನ್ನು ಮರಳಿ ಪಡೆಯುವೆ ಎಂದ. ಕಮಲಾಳ ಜತೆಗೆ ಆಶ್ರಮಕ್ಕೆ ಹೋದ ವಸಂತ್ ತಗಾದೆ ತೆಗೆದಾಗ ಸಂತಾನಸ್ವಾಮಿ ತನ್ನದೇನೂ ತಪ್ಪಿಲ್ಲ ಎಂದು ಸಾಧಿಸಿ ಕಮಲಾ ತನಗೆ ಕೊಟ್ಟ ಹಣವನ್ನು ಮರಳಿಸಲು ನಿರಾಕರಿಸಿದ. ಆತನ ಶಿಷ್ಯರು ವಸಂತನಿಗೆ ಹೊಡೆದಾಗ ಆತ ಪೊಲೀಸ್ ಠಾಣೆಗೆ ಹೋಗಿ ಸಂತಾನಸ್ವಾಮಿಯ ವಿರುದ್ಧ ದೂರನ್ನು ನೀಡಿದ. ಅವನ ದೂರಿನ ಮೇರೆಗೆ ಪೊಲೀಸರು ಆಶ್ರಮದ ಮೇಲೆ ದಾಳಿ ಮಾಡಿದರು. ಸ್ವಾಮಿಯ ಕೋಣೆಯಲ್ಲಿ ಹಲವಾರು ಸೆಕ್ಸ್ ವಿಡಿಯೋಗಳು ಹಾಗೂ ಸ್ತ್ರೀಯರ ನಗ್ನಚಿತ್ರಗಳು ಸಿಕ್ಕವು. ತನಿಖೆಯಲ್ಲಿ ಆತ ಮಕ್ಕಳಾಗಬೇಕೆಂದು ಬಯಸಿ ಬಂದ ಅಮಾಯಕ ಸ್ತ್ರೀಯರ ಜತೆ ಲೈಂಗಿಕ ಕ್ರಿಯೆಯನ್ನು ನಡೆಸಿ ಅವುಗಳನ್ನು ಗುಪ್ತಕ್ಯಾಮರಾ ಮೂಲಕ ವಿಡಿಯೋ ಮಾಡುತ್ತಿದ್ದುದಾಗಿ ತಿಳಿಯಿತು. ‘ಶ್ರೀಮಂತ ಮಹಿಳೆಯರ ಜತೆ ಹೀಗೆ ಮಾಡದೆ ಅವರಿಗೆ ಮಂತ್ರಿಸಿದ ವಸ್ತುಗಳನ್ನು ನೀಡುತ್ತಿದ್ದೆ’ ಎಂದು ಸಂತಾನಸ್ವಾಮಿ ಒಪ್ಪಿಕೊಂಡ.

ಬಸಪ್ಪನ ಅಂಗಡಿ ಮೇಲೆ ದಾಳಿ ನಡೆಸಿದಾಗ ಅಂಗಡಿಯ ಕಪಾಟಿನಲ್ಲಿ ಉಡದ ಶಿಶ್ನಗಳು,ಹುಲಿಯ ಉಗುರುಗಳು ಮತ್ತು ಕೆಲವು ಬಗೆಯ ಮೀನುಗಳ ಅಸ್ಥಿಪಂಜರಗಳಿದ್ದವು. ಅವುಗಳ ಬಗ್ಗೆ ವಿಚಾರಿಸಿದಾಗ ಆತ ‘ನಾನು ಕೆಲವು ಅಲೆಮಾರಿಗಳ ಮೂಲಕ ಅವುಗಳನ್ನು ಅರಣ್ಯಗಳಿಂದ ತರಿಸುತ್ತೇನೆ. ನನ್ನಲ್ಲಿ ಮಾರಾಟವಾಗುವ ವಸ್ತುಗಳಿಗೆ

ಸ್ವಾಮಿಗೆ ಕಮಿಷನ್ ಕೊಡುತ್ತಿದ್ದೆ’ ಎಂದು ತಿಳಿಸಿದ. ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಆ ವಸ್ತುಗಳನ್ನು ತೋರಿಸಿದಾಗ ಅವೆಲ್ಲವೂ ನಿಷೇಧಿತ ವಸ್ತುಗಳೆಂದು ತಿಳಿಸಿ ಅವುಗಳನ್ನು ಮಾರುವುದು, ಖರೀದಿಸುವುದು ಮತ್ತು ಮನೆಯಲ್ಲಿಟ್ಟುಕೊಳ್ಳುವುದು ಅಪರಾಧವೆಂದು ತಿಳಿಸಿದರು. ಆನಂತರ ಸಂತಾನಸ್ವಾಮಿಯ ವಿರುದ್ಧ ಮೋಸ ಮತ್ತು ನಂಬಿಕೆದ್ರೋಹದ ಪ್ರಕರಣವಲ್ಲದೆ, ಮಾಹಿತಿ-ತಂತ್ರಜ್ಞಾನ ಕಾಯ್ದೆ ಮತ್ತುವನ್ಯಪ್ರಾಣಿ (ರಕ್ಷಣಾ) ಕಾಯ್ದೆಯನ್ವಯ ಪ್ರಕರಣವೊಂದನ್ನು ದಾಖಲಿಸಲಾಯಿತು. ಬಸಪ್ಪನ ಮೇಲೆ ವನ್ಯಪ್ರಾಣಿ (ರಕ್ಷಣಾ) ಕಾಯ್ದೆಯಪ್ರಕರಣವನ್ನು ದಾಖಲಿಸಿ ಅವನ ಮಾಹಿತಿ ಮೇರೆಗೆ ಅಲೆಮಾರಿ ಜನಾಂಗದ ಇತರ ಮೂವರನ್ನು ಬಂಧಿಸಲಾಯಿತು. ಈ ಪ್ರಕರಣವನ್ನು ಆಲಿಸಿದ ನ್ಯಾಯಾಲಯ ಸಂತಾನಸ್ವಾಮಿಗೆ ಐದು ವರ್ಷಗಳ ಜೈಲುವಾಸವನ್ನೂ ಉಳಿದವರಿಗೆ ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತು. ‘ಕೇವಲ ಮಕ್ಕಳನ್ನು ಹಡೆಯುವುದೇ ಒಬ್ಬ ಸ್ತ್ರೀಯ ಮಹತ್ವವಲ್ಲ. ಆಕೆ ತನ್ನನ್ನು ತಾನು ಹೇಗೆ ತಾಳಿಕೊಳ್ಳುತ್ತಾಳೆ ಎನ್ನುವುದೇ ಆಕೆಯ ಮುಖ್ಯ ಹಾಗೂ ಅಪಾಯಕಾರಿ ಹಣೆಬರಹ’ ಎಂದ ಖ್ಯಾತ ಲೇಖಕ ಡಿ.ಎಚ್.ಲಾರೆನ್ಸ್​ನ ಮಾತುಗಳನ್ನು ಸಮಾಜ ಅರಿತಾಗ ಮಾತ್ರ ದಾಂಪತ್ಯ ಜೀವನ ಸುಖಕರವಾಗುತ್ತದೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net