

ಪೋಸ್ಟ್ಮಾರ್ಟಂ ನಡೆಸಿದ ವೈದ್ಯರು ದೇಹದ ಮೇಲೆ ಸುಟ್ಟ ಗಾಯಗಳಲ್ಲದೇ ಹಲವಾರು ಇರಿತದ ಗಾಯಗಳಾಗಿದ್ದು ಕುತ್ತಿಗೆಯ ಮೇಲೆ ನೇಣುದಾರ ಬಿಗಿದ ಗುರುತಿದೆ. ಮೃತಳು ಗರ್ಭಿಣಿಯಾಗಿದ್ದು ಹೊಟ್ಟೆಯಲ್ಲಿ ಆರರಿಂದ ಎಂಟು ವಾರಗಳ ಭ್ರೂಣವಿತ್ತು ಎಂದರು. ಹರಿತ ಆಯುಧಗಳಿಂದ ತಿವಿದು ಕುತ್ತಿಗೆಗೆ ಹಗ್ಗ ಬಿಗಿದ ಕಾರಣದಿಂದ ಸಾವು ಸಂಭವಿಸಿದೆ ಎಂಬ ಅಭಿಪ್ರಾಯ ನೀಡಿದರು. ಶವದ ಗುರುತು ಹಿಡಿಯಲು ಅನುಕೂಲವಾಗುವಂತೆ ತಲೆಬುರುಡೆಯನ್ನು ಪೊಲೀಸರು ಜೋಪಾನ ಮಾಡಿದರು.
ಶವದ ಫೋಟೋಗಳನ್ನು ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೆ ಕಳುಹಿಸಿ, ಅಕ್ಕಪಕ್ಕದ ಹಳ್ಳಿಗಳಲ್ಲಿ ಕಳೆದ ಕೆಲವು ದಿನಗಳಿಂದ ಯಾರಾದರೂ ಹೆಣ್ಣುಮಗಳು ಕಾಣೆಯಾಗಿದ್ದಾಳೆಯೇ ಎಂದು ಪೊಲೀಸರು ವಿಚಾರಿಸತೊಡಗಿದರು. ಪಕ್ಕದ ತಾಲ್ಲೂಕಿನಲ್ಲಿನ ಪೆರೂರು ಗ್ರಾಮದಲ್ಲಿ ಮೇಖಲಾ ಎನ್ನುವವಳು ಕಾಣೆಯಾಗಿದ್ದಾಳೆಂದು ತಿಳಿದು ಅಲ್ಲಿಗೆ ಹೋದಾಗ ಆಕೆಯ ಮಾತಾಪಿತರು ಬೇರೆ ಊರಿಗೆ ವಲಸೆ ಹೋದರೆಂದೂ ಮೇಖಲಾಳ ಗಂಡ ಆನಂದ ತಿರುಪ್ಪೂರಿನಲ್ಲಿದ್ದಾನೆಂದೂ ತಿಳಿಯಿತು. ಗ್ರಾಮದಲ್ಲಿದ್ದ ಮೇಖಲಾಳ ಚಿಕ್ಕಪ್ಪ ಷಣ್ಮುಗ ಶವವನ್ನು ಗುರುತು ಹಿಡಿಯದಿದ್ದರೂ ಶವದ ಮೇಲಿನ ಬಟ್ಟೆಗಳು ಆಕೆಯದ್ದೇ ಇರಬಹುದೆಂದ. ಆನಂದನನ್ನು ಸಂರ್ಪಸಿದಾಗ ಹೆಂಡತಿ ತನ್ನೊಡನೆ ಒಂದೇ ತಿಂಗಳು ಸಂಸಾರ ನಡೆಸಿ ಮನೆಬಿಟ್ಟು ಓಡಿಹೋದಳೆಂದು ತಿಳಿಸಿ, ತಾನು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ. ಶವದ ಫೋಟೋವನ್ನು ತನ್ನ ಪತ್ನಿಯದೆಂದು ಆತನೂ ನಿಖರವಾಗಿ ಗುರುತಿಸಲಿಲ್ಲ, ಅವನ ಬಳಿಯಿದ್ದ ಮೇಖಲಾಳ ಫೋಟೋವನ್ನು ಪೊಲೀಸರು ತೆಗೆದುಕೊಂಡು ಶವದ ತಲೆಬುರುಡೆಯ ಜತೆಗಿನ ಹೋಲಿಕೆಗಾಗಿ ಪ್ರಯೋಗಾಲಯಕ್ಕೆ ಕಳಿಸಿದರು.
ಮೇಖಲಾಳಿಗೆ 15 ವರ್ಷ ವಯಸ್ಸಾದಾಗ ಅವಳ ತಾಯಿ ರಾಧಾ ತನ್ನ ಗಂಡ ಮುತ್ತುವನ್ನು ಬಿಟ್ಟು ತಿರುಪ್ಪೂರಿಗೆ ಹೋಗಿ ಬೇರೊಬ್ಬನ ಜತೆಗೆ ವಾಸ ಮಾಡತೊಡಗಿದಾಗ ಮುತ್ತು ಸಹ ಪೆರೂರನ್ನು ತೊರೆದು ತನ್ನ ಹುಟ್ಟೂರಿಗೆ ವಾಪಸಾದನೆಂದು ಮುಂದಿನ ತನಿಖೆಯಲ್ಲಿ ತಿಳಿಯಿತು. ತಿರುಪ್ಪೂರಿನಲ್ಲಿ ಮೇಖಲಾ ಆನಂದನನ್ನು ಲಗ್ನವಾಗಿ ತನ್ನ ತಾಯಿ ಸತ್ತ ನಂತರ ಮನೆಬಿಟ್ಟು ಹೋದಳೆಂದೂ ಕೆಲಕಾಲ ಪೆರೂರಿನಲ್ಲಿ ತನ್ನ ಚಿಕ್ಕಪ್ಪ ಷಣ್ಮುಗನ ಮನೆಯಲ್ಲಿದ್ದು ಆನಂತರ ಅಲ್ಲಿಂದಲೂ ಕಾಣೆಯಾದಳೆಂದೂ ತಿಳಿಯಿತು.
ಮೇಖಲಾ ಹಲವಾರು ತಿಂಗಳುಗಳಿಂದ ಕಾಣೆಯಾಗಿರುವುದು ಖಾತ್ರಿಯಾಗಿದ್ದರೂ ಸೇತುವೆಯ ಕೆಳಗೆ ಸಿಕ್ಕ ಶವ ಅವಳದ್ದೇ ಎಂದು ಇನ್ನೂ ಸಾಬೀತಾಗಿರಲಿಲ್ಲ. ಅಷ್ಟರಲ್ಲಿ ಮೇಖಲಾಳ ಫೋಟೋವನ್ನು ಶವದ ತಲೆಬುರುಡೆಯ ಜತೆ ಹೋಲಿಸಿದ ವಿಧಿವಿಜ್ಞಾನ ತಜ್ಞರು ಮೃತಳು ಮೇಖಲಾಳೇ ಎಂಬ ಅಭಿಪ್ರಾಯ ನೀಡಿದರು. ಪೊಲೀಸರ ಮುಂದಿದ್ದ ಸವಾಲೆಂದರೆ ಆಕೆ ಯಾವ ಕಾರಣಕ್ಕಾಗಿ, ಯಾರಿಂದ ಕೊಲೆಯಾದಳು ಎನ್ನುವುದು. ತನಿಖೆ ಮುಂದುವರಿದಾಗ ಮೇಖಲಾ ಪೆರೂರಿನಲ್ಲಿ ತನ್ನ ತಾಯಿಯ ಹೆಸರಿನಲ್ಲಿದ್ದ ಮನೆಯನ್ನು ಕೊವಿಲ್ಪಿಳ್ಳೈ ಎನ್ನುವವನಿಗೆ ಮಾರಾಟ ಮಾಡಿದ್ದಳೆಂದೂ, ಆತ ಮಾರಾಟದ ಪೂರ್ತಿ ಹಣವನ್ನು ಕೊಟ್ಟಿರಲಿಲ್ಲವೆಂದೂ, ಬಾಕಿ ಹಣಕ್ಕಾಗಿ ಮೇಖಲಾ ಪದೇಪದೆ ಪೀಡಿಸುತ್ತಿದ್ದಳೆಂದೂ ತಿಳಿಯಿತು.
ಕೊವಿಲ್ಪಿಳ್ಳೈನನ್ನು ವಿಚಾರಿಸಿದಾಗ ಆತ ತಾನು ಖರೀದಿಸಿದ ಮನೆಯ ಪೂರ್ತಿ ಕ್ರಯವನ್ನು ಕೊಟ್ಟಿದ್ದಾಗಿಯೂ ಕೊಲೆಗೂ ತನಗೂ ಸಂಬಂಧವಿಲ್ಲವೆಂದೂ ತಿಳಿಸಿದ. ಇದನ್ನು ನಂಬದ ಪೊಲೀಸರಿಂದ ನಡೆದ ಚಿತ್ರಹಿಂಸೆಯನ್ನು ತಡೆಯಲಾರದ ಆತ ಮನೆ ಮಾರಾಟದ ಬಾಕಿ ಹಣಕ್ಕಾಗಿ ಪೀಡಿಸುತ್ತಿದ್ದ ಕಾರಣದಿಂದಲೇ ಮೇಖಲಾಳ ಕೊಲೆ ಮಾಡಿದೆ ಎಂದು ಒಪ್ಪಿಕೊಂಡ. ಪೊಲೀಸರು ಅವನ ತಪ್ಪೊಪ್ಪಿಗೆ ಹೇಳಿಕೆಯನ್ನು ಹೀಗೆ ದಾಖಲಿಸಿದರು: ‘ಮೇಖಲಾಳನ್ನು ನಮ್ಮೂರಿನಿಂದ ದೂರದಲ್ಲಿರುವ ಜಾಗದಲ್ಲಿ ಕೊಲೆ ಮಾಡಿದರೆ ಕೃತ್ಯ ಬೆಳಕಿಗೆ ಬರುವುದಿಲ್ಲವೆಂದು ನಾನು ಗೆಳೆಯರೊಂದಿಗೆ ಸಂಚು ರೂಪಿಸಿದೆ. ಬಾಕಿ ಹಣ ಕೊಡುವೆನೆಂದು ಹೇಳಿ ಮೇಖಲಾಳನ್ನು ಗೆಳೆಯ ಕುಮಾರನ ಮನೆಗೆ ಕರೆಸಿದೆ. ಕುಮಾರ್ ಅವಳನ್ನು ಕೊಲೆಗೆ ನಿಗದಿಪಡಿಸಿದ್ದ ಸ್ಥಳಕ್ಕೆ ಕರೆತಂದ. ಅವರಿಬ್ಬರೂ ಬಂದಕೂಡಲೇ ನಾನು, ನನ್ನ ಮಗ ಬಾಲು ಮತ್ತು ಗೆಳೆಯ ದಾಸನ್ ಅವಳ ಮೇಲೆರಗಿ ಅವಳನ್ನು ರಸ್ತೆ ಸೇತುವೆಯ ಕೆಳಗೆ ಎಳೆದುಕೊಂಡು ಬಂದು ನೆಲದ ಮೇಲೆ ಕೆಡವಿದೆವು. ದಾಸನ್ ಅವಳ ಕುತ್ತಿಗೆಗೆ ಹಗ್ಗ ಬಿಗಿದ. ಕುಮಾರ್ ಅವಳು ಚೀರದಂತೆ ಬಾಯಿಯನ್ನು ಮುಚ್ಚಿದ. ಬಾಲು ಅವಳಿಗೆ ಚುಚ್ಚುಮದ್ದನ್ನು ನೀಡಿ ಜ್ಞಾನ ತಪ್ಪಿಸಿದ. ಆನಂತರ ದಾಸನ್ ಅವಳಿಗೆ ಚಾಕುವಿನಿಂದ ಇರಿದ. ಮೇಖಲಾ ಸತ್ತ ನಂತರ ನಾವು ಅವಳ ಗುರುತು ಗೊತ್ತಾಗಬಾರದೆಂದು ಶವದ ಮೇಲೆ ಪೆಟ್ರೋಲ್ ಹಾಕಿ ಸುಟ್ಟೆವು.’
ಕೊವಿಲ್ಪಿಳ್ಳೈ ತಪ್ಪೊಪ್ಪಿಗೆ ಹೇಳಿಕೆಯ ಮೇರೆಗೆ ಇತರ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಎಲ್ಲರೂ ಕೊಲೆಯಲ್ಲಿನ ತಮ್ಮ ಪಾತ್ರವನ್ನು ಒಪ್ಪಿದರು. ಕೊಲೆಗೆ ಉಪಯೋಗಿಸಿದ್ದ ಚಾಕುವನ್ನು ಕುಮಾರ್ ತೋರಿಸಿದ. ಈ ನಾಲ್ಕೂ ಜನರ ಮೇಲೆ ಒಳಸಂಚು, ಕೊಲೆ ಹಾಗೂ ಸಾಕ್ಷ್ಯನಾಶದ ಆರೋಪ ಹೊರೆಸಿ ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು.
ಪೊಲೀಸರು ಬಲವಂತದಿಂದ ತಮ್ಮ ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸಿದ್ದು ಮೇಖಲಾ ಕೊಲೆಗೂ ತಮಗೂ ಸಂಬಂಧವಿಲ್ಲ, ಪೊಲೀಸರು ಸುಳ್ಳುಸಾಕ್ಷ್ಯ ಸೃಜಿಸಿ ಪ್ರಕರಣದಲ್ಲಿ ಸಿಕ್ಕಿಹಾಕಿಸಿದ್ದಾರೆಂದು ಆರೋಪಿಗಳು ನ್ಯಾಯಾಲಯದಲ್ಲಿ ವಾದಿಸಿದರು. ಬಹುತೇಕ ಸಾಕ್ಷಿಗಳು ಪೊಲೀಸರನ್ನು ಸಮರ್ಥಿಸದೆ ಪ್ರತಿಕೂಲ ಸಾಕ್ಷಿಗಳಾದರು. ಇಡೀ ಪ್ರಕರಣ ಸಾಂರ್ದಭಿಕ ಸಾಕ್ಷ್ಯಗಳ ಮೇಲೆಯೇ ನಿಂತಿದ್ದು ಕೊಲೆಯಾದದ್ದನ್ನು ಯಾರೂ ಕಂಡಿಲ್ಲ ಮತ್ತು ಆರೋಪವನ್ನು ನಿಸ್ಸಂದೇಹವಾಗಿ ಸಾಬೀತುಮಾಡಿಲ್ಲ ಎಂದು ತೀರ್ವನಿಸಿದ ನ್ಯಾಯಾಧೀಶರು ನಾಲ್ಕೂ ಆರೋಪಿಗಳನ್ನು 2007ರಲ್ಲಿ ಬಿಡುಗಡೆ ಮಾಡಿದರು. ಈ ತೀರ್ಪಿನ ವಿರುದ್ಧ ಪೊಲೀಸರು ಉಚ್ಚನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂದಿರಲಿಲ್ಲ.
ಏತನ್ಮಧ್ಯೆ ಕುತೂಹಲಕರ ಘಟನೆಯೊಂದು ನಡೆಯಿತು. 2011ರ ಫೆಬ್ರವರಿಯಲ್ಲಿ, ಅಂದರೆ ತೀರ್ಪು ಹೊರಬಂದ ನಾಲ್ಕು ವರ್ಷದ ನಂತರ, ಮೇಖಲಾ ಪೆರೂರಿಗೆ ಬಂದಳು. ಅವಳನ್ನು ಕಂಡ ಗ್ರಾಮಸ್ಥರು ಕೊಲೆಯಾದವಳು ಹೇಗೆ ಮರಳಿ ಬಂದಳೆಂದು ಆಶ್ಚರ್ಯ ಮತ್ತು ಗಾಬರಿಗೊಂಡರು. ಜನರ ವಿಚಿತ್ರ ವರ್ತನೆಯನ್ನು ನೋಡಿ ಮೇಖಲಾ ಏನಾಯಿತೆಂದು ಪ್ರಶ್ನಿಸಿದಳು. ತನ್ನನ್ನು ಕೊಲೆಮಾಡಿದರೆಂದು ಕೋವಿಲ್ಪಿಳ್ಳೆ್ಯ ಮತ್ತು ಮೂವರ ಮೇಲೆ ಪ್ರಕರಣ ದಾಖಲಾಗಿ ಅವರ ಬಿಡುಗಡೆಯಾದ ಬಗ್ಗೆ ಅವಳಿಗೆ ತಿಳಿಯಿತು. ತಾನು ಬದುಕಿರುವೆನೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಗ್ರಾಮಸ್ಥರು ತಿಳಿಸಿದ ಮೇರೆಗೆ ಆಕೆ ಜಿಲ್ಲಾಧಿಕಾರಿಯನ್ನು ಭೇಟಿಯಾದಳು. ಮುಂದಿನ ಕ್ರಮಕ್ಕಾಗಿ ಆಕೆಯ ಮನವಿಯನ್ನು ಜಿಲ್ಲಾ ಎಸ್ಪಿ ಕಚೇರಿಗೆ ಕಳಿಸಲಾಯಿತು. ಯಾವ ಕ್ರಮವೂ ಜರುಗಲಿಲ್ಲ.
ಇಷ್ಟರಲ್ಲಿ ಕೊವಿಲ್ಪಿಳ್ಳೈ ಮತ್ತಿತರರು, ಮೇಖಲಾ ಬದುಕಿದ್ದರೂ ತಾವು ಆಕೆಯ ಕೊಲೆ ಮಾಡಿದ್ದೇವೆಂದು ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸರ ಮೇಲೆ ಕ್ರಮ ಜರುಗಿಸಬೇಕೆಂದು ಉಚ್ಚ ನ್ಯಾಯಾಲಯದ ಮೊರೆಹೋದರು. ಈ ಮನವಿಯನ್ನು ಕೊಲೆ ಪ್ರಕರಣದ ಬಿಡುಗಡೆಯ ಮೇಲ್ಮನವಿಯ ಜತೆ ಸೇರಿಸಿದ ನ್ಯಾಯಾಲಯವು ಮೇಖಲಾಳನ್ನು ತನ್ನ ಮುಂದೆ ಹಾಜರು ಪಡಿಸಿಕೊಂಡಿತು. ಮೇಖಲಾ ತಾನು ಆನಂದನನ್ನು ಬಿಟ್ಟ ನಂತರ ಚೆನ್ನೈಗೆ ಹೋಗಿ ಅಲ್ಲಿ ಮತಾಂತರಗೊಂಡು ಶಹಾಜಹಾನ್ ಎನ್ನುವವನನ್ನು ಲಗ್ನವಾಗಿ ಇಬ್ಬರು ಮಕ್ಕಳ ತಾಯಿಯಾಗಿರುವೆ ಎಂದಳು. ತನ್ನ ಗ್ರಾಮವನ್ನು ನೋಡಬೇಕೆಂಬ ಹಂಬಲ ಉಂಟಾಗಿ ಪೆರೂರಿಗೆ ಹೋಗಿದ್ದಾಗ ಈ ಪ್ರಕರಣದ ಬಗ್ಗೆ ಅರಿವಾಯಿತೆಂದೂ ಹೇಳಿ ತಾನೇ ಮೇಖಲಾ ಎಂದು ಗುರುತಿಸಲು ತನ್ನ ಸೋದರ ಸಂಬಂಧಿಯನ್ನು ಕರೆತಂದಿದ್ದೇನೆ ಎಂದು ಸ್ಟಾಲಿನ್ ಎನ್ನುವವನನ್ನು ತೋರಿಸಿದಳು. ‘ನಿನಗೆ ಜನ್ಮ ನೀಡಿದವರು ಯಾರಾದರೂ ಜೀವಂತವಾಗಿರುವರೇ’ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ ಮೇಖಲಾ ತನ್ನ ತಂದೆ ಮುತ್ತು ಬದುಕಿರಬಹುದೆಂದು ತಿಳಿಸಿ ಅವನಿರಬಹುದಾದ ಗ್ರಾಮದ ಹೆಸರನ್ನು ಹೇಳಿದಳು. ನ್ಯಾಯಾಧೀಶರು ಮುತ್ತುವನ್ನು ಹುಡುಕಿ ಅವನ ಮತ್ತು ಮೇಖಲಾಳ ಡಿಎನ್ಎ ಪರೀಕ್ಷೆಗೆ ಆದೇಶಿಸಿದರು. ತಲೆಬುರುಡೆ ಹೋಲಿಕೆಯ ತಂತ್ರಜ್ಞಾನದ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ಮುತ್ತುವನ್ನು ಆತನ ಸ್ವಗ್ರಾಮದಲ್ಲಿ ಪತ್ತೆ ಮಾಡಿ ಅವನ ರಕ್ತವನ್ನು ಪಡೆದು ಮೇಖಲಾಳ ರಕ್ತದಲ್ಲಿನ ಡಿಎನ್ಎಯೊಂದಿಗೆ ಹೋಲಿಸಿದಾಗ ಮೇಖಲಾ ಅವನದೇ ಮಗಳೆಂದು ಸಾಬೀತಾಯಿತು. ಪೊಲೀಸ್ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯದಿಂದ ಈ ಪ್ರಕರಣವನ್ನು ತನಿಖೆ ಮಾಡಿ ಆರೋಪಿಗಳಾದ ಕೊವಿಲ್ಪಿಳ್ಳೈ ಮತ್ತಿತರರಿಗೆ ಅನ್ಯಾಯ ಮಾಡಿದ್ದಾರೆ ಎಂದು ತೀರ್ವನಿಸಿದ ನ್ಯಾಯಾಲಯವು ಎಲ್ಲ ಆರೋಪಿಗಳಿಗೂ ತಲಾ ನಾಲ್ಕು ಲಕ್ಷ ರೂಗಳ ಪರಿಹಾರಧನವನ್ನು ನೀಡುವಂತೆ ಆದೇಶಿಸಿತು. ಅಪರಿಚಿತ ಶವದ ಬಗ್ಗೆ ದಾಖಲಾದ ಕೊಲೆ ಪ್ರಕರಣದ ಮರುತನಿಖೆಗೆ ಸೂಚಿಸಿದ ನ್ಯಾಯಾಧೀಶರು ಸುಳ್ಳು ಆರೋಪ ಹೊರೆಸಿ ಆರೋಪಿಗಳಿಗೆ ಮಾನಸಿಕ ಕಿರುಕುಳ ನೀಡಿದ ಪೊಲೀಸ್ ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ ನಡೆಸಬೇಕೆಂದು ಸೂಚಿಸಿತು. ಮೇಖಲಾಗೆ ಯಾವ ಪರಿಹಾರವೂ ದೊರೆಯಲಿಲ್ಲ.
‘ನಾವು ಮಾಯಾಲೋಕದಲ್ಲಿ ಜೀವಿಸುತ್ತೇವೆ; ಸತ್ಯದ ಅನ್ವೇಷಣೆಯೇ ಜೀವನದ ಅತಿ ದೊಡ್ಡ ಕೆಲಸ’ ಎಂದ ಕಾದಂಬರಿಗಾರ್ತಿ ಐರಿಸ್ ಮುಡೋಕ್ಳ ಮಾತುಗಳನ್ನು ಪಾಲಿಸುವ ತನಿಖಾಧಿಕಾರಿಗಳು ವಿರಳವಾದಾಗ ಇಂತಹ ಘಟನೆಗಳಾಗುತ್ತವೆ.