

ಪ್ರವೀಣ್ಗೆ ಸುಮಾರು 65 ವರ್ಷಗಳಾದಾಗ ಹೃದಯಾಘಾತವಾಗಿ ತುರ್ತು ಚಿಕಿತ್ಸೆಯ ಕಾರಣದಿಂದ ಬದುಕುಳಿದ. ಮುಂದೆ ಮತ್ತೊಮ್ಮೆ ಹೃದಯಾಘಾತವಾಗಿ ತಾನು ಸತ್ತರೆ ಕುಟುಂಬದವರಲ್ಲಿ ಆಸ್ತಿಯ ಬಗ್ಗೆ ಜಗಳವಾಗಬಾರದೆನ್ನುವ ಉದ್ದೇಶದಿಂದ ಆತ ವಿಲ್ (ಉಯಿಲು) ಬರೆದ. ಅದರಲ್ಲಿ ತನ್ನ ಸ್ಥಿರಾಸ್ತಿಗಳನ್ನು ಮೂರೂ ಗಂಡು ಮಕ್ಕಳಿಗೆ ಹಂಚಿ ಚರಾಸ್ತಿಗಳನ್ನು ಇಬ್ಬರು ಪತ್ನಿಯರ ಹೆಸರಿನಲ್ಲಿ ಬರೆದ. ಪಾರ್ವತಿಗೆ ಒಬ್ಬನೇ ಮಗನಿದ್ದ ಕಾರಣ ಅವನನ್ನು ತನ್ನ ವಾಣಿಜ್ಯ ಸಂಕೀರ್ಣದ ವಾರಸುದಾರನನ್ನಾಗಿ ಮಾಡಿದ. ಇದರ ಬೆಲೆಯೇ ಸುಮಾರು ಆರು ಕೋಟಿ ರೂ.ಗಳಷ್ಟಿತ್ತು. ಸುರೇಶ್ ಮತ್ತು ರಮೇಶ್ರ ಹೆಸರಿಗೆ ತಲಾ ನಾಲ್ಕು ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿಗಳನ್ನು ಬರೆದ. ಆನಂತರ ಉಯಿಲನ್ನು ವಕೀಲರೊಬ್ಬರ ಮುಖಾಂತರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿದ. ಅದೇ ರಾತ್ರಿ ಪತ್ನಿಯರು ಹಾಗೂ ಮಕ್ಕಳನ್ನು ಕರೆಸಿ ಆಸ್ತಿಯನ್ನು ಎಲ್ಲರಿಗೂ ಸಮನಾಗಿ ಹಂಚಿದ್ದೇನೆಂದು ಉಯಿಲು ಬರೆದಿರುವುದಾಗಿ ತಿಳಿಸಿದ. ಆದರೆ, ಯಾರಿಗೆ ಯಾವ ಆಸ್ತಿ ಹಂಚಿದ್ದೇನೆಂಬ ವಿವರಗಳನ್ನು ಆತ ನೀಡಲಿಲ್ಲ. ಐದು ವರ್ಷಗಳ ನಂತರ, ಪ್ರವೀಣ್ ಹೃದಯಾಘಾತದಿಂದ ನಿಧನ ಹೊಂದಿದ.
ನಂತರ ಆಸ್ತಿಯ ವಿಭಜನೆಯನ್ನು ಹೇಗೆ ಮಾಡಬೇಕು ಎನ್ನುವುದನ್ನು ತಿಳಿಯಲು ಲಕ್ಷ್ಮಿಯ ಮಕ್ಕಳಾದ ರಮೇಶ್ ಮತ್ತು ಸುರೇಶ್ ಸಂಬಂಧಪಟ್ಟ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದರು. ಪ್ರವೀಣ್ನ ಮರಣ ಪ್ರಮಾಣಪತ್ರವನ್ನು ಸಲ್ಲಿಸಿ ತಂದೆ ಬರೆದಿರುವ ಉಯಿಲಿನ ನಕಲನ್ನು ಕೊಡಲು ಕೋರಿ ಸಂಬಂಧಿಸಿದ ಶುಲ್ಕವನ್ನು ನೀಡಿದರು. ಕೆಲ ದಿನಗಳ ಬಳಿಕ ಉಯಿಲಿನ ದೃಢೀಕೃತ ಪ್ರತಿ ಬಂದಾಗ ಅವರಿಗೆ ಆಶ್ಚರ್ಯ ಕಾದಿತ್ತು. ತಂದೆ ತಮ್ಮಿಬ್ಬರಿಗೆ ಹಂಚಿರುವ ಆಸ್ತಿಗಿಂತ ಹೆಚ್ಚು ಬೆಲೆಬಾಳುವ ಆಸ್ತಿಯನ್ನು ಕಿರಿಯ ಸೋದರ ಹರ್ಷನಿಗೆ ಕೊಟ್ಟಿರುವುದು ತಿಳಿಯಿತು. ಹೆಚ್ಚು ಬಾಡಿಗೆ ತರುವ ವಾಣಿಜ್ಯ ಸಂಕೀರ್ಣವನ್ನು ತಮಗೆ ಕೊಡದೆ ಹರ್ಷನಿಗೆ ಕೊಟ್ಟು ಅನ್ಯಾಯ ಮಾಡಿದ್ದಾನೆಂದು ಅವರು ಭಾವಿಸಿದರು. ತಂದೆಯ ಉಯಿಲಿನ ಬಗ್ಗೆ ಅವರು ಕುಟುಂಬದ ಇತರರಿಗೆ ತಿಳಿಸಲಿಲ್ಲ. ಹೇಗಾದರೂ ಮಾಡಿ ಹರ್ಷನಿಗೆ ವಾಣಿಜ್ಯ ಸಂಕೀರ್ಣ ಸಿಗಬಾರದೆಂದು ತೀರ್ವನಿಸಿ ಆ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸತೊಡಗಿದರು.
ಈ ಯೋಜನೆಯ ಅನ್ವಯ ಅವರಿಬ್ಬರೂ ನಗರದ ಒಂದು ನೋಂದಣಿ ಕಚೇರಿಯಲ್ಲಿ ಕಾರಕೂನನಾಗಿದ್ದ ಶಂಕರ್ ಎನ್ನುವವನನ್ನು ಭೇಟಿಯಾದರು. ಆತನನ್ನು ಬಾರ್ಗೆ ಕರೆದೊಯ್ದು ಮದ್ಯಪಾನ ಮಾಡಿಸಿ ತಮ್ಮ ತಂದೆ ಬರೆದಿದ್ದ ವಿಲ್ ತೋರಿಸಿ ಏನಾದರೂ ಮಾಡಿ ವಾಣಿಜ್ಯ ಸಂಕೀರ್ಣ ಹರ್ಷನ ಹೆಸರಿಗೆ ಹೋಗದಂತೆ ಮಾಡಲು ಅವನ ಸಹಾಯ ಕೋರಿದರು. ಶಂಕರ್ ಒಂದು ಷರತ್ತಿನ ಮೇಲೆ ಸಹಾಯ ಮಾಡಲು ಒಪ್ಪಿದ. ವಾಣಿಜ್ಯ ಸಂಕೀರ್ಣದ ಅಂದಿನ ಮಾರುಕಟ್ಟೆ ಬೆಲೆಯ ಶೇಕಡಾ 10ರಷ್ಟನ್ನು ನಗದಿನ ರೂಪದಲ್ಲಿ ಕೊಟ್ಟರೆ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದ. ಇಬ್ಬರೂ ಒಪ್ಪಿದರು. 25 ಲಕ್ಷ ರೂ.ಗಳನ್ನು ಮುಂಗಡವಾಗಿ ಕೊಡಲು ಶಂಕರ್ ಕೇಳಿದಾಗ ಸುರೇಶ್ ಮತ್ತು ರಮೇಶ್ ಸಾಲ ಮಾಡಿ ಹೊಂದಿಸಿ ಕೊಟ್ಟರು. ಆನಂತರ ಶಂಕರ್ ತನ್ನ ಕಚೇರಿಯ ಕೆಲವು ಸಹೋದ್ಯೋಗಿಗಳ ಸಹಾಯದಿಂದ ಸೀತಾರಾಂ ಎನ್ನುವವರು ಮಾಡಿಸಿದ್ದ ವಿಲ್ವೊಂದನ್ನು ಹುಡುಕಿದ. ಆ ಉಯಿಲು ಇಂಗ್ಲಿಷ್ನಲ್ಲಿತ್ತು. ಸೀತಾರಾಂ ಸುಮಾರು 70 ವರ್ಷ ವಯಸ್ಸಿನವರಾಗಿದ್ದು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದು, ಅವರ ವಾರಸುದಾರರೆಲ್ಲರೂ ವಿದೇಶಗಳಲ್ಲಿಯೇ ಇದ್ದಾರೆನ್ನುವುದನ್ನೂ ಆ ಉಯಿಲಿನಲ್ಲಿ ನಮೂದಿಸಲಾಗಿತ್ತು. ಅದರ ಪ್ರತಿಗಳನ್ನು ಆತ ರಮೇಶ್ ಮತ್ತು ಸುರೇಶ್ರಿಗೆ ತಂದುಕೊಟ್ಟ. ಆನಂತರ ಅವರೆಲ್ಲ ಸೇರಿಕೊಂಡು ಇಂಗ್ಲಿಷಿನಲ್ಲಿದ್ದ ಆ ಉಯಿಲನ್ನು ಸಂಪೂರ್ಣವಾಗಿ ಅಳಿಸಿ ಹಿಂದಿಯಲ್ಲಿ ಪ್ರವೀಣ್ ಬರೆದಂತೆಯೇ ಉಯಿಲನ್ನು ಅದರ ಮೇಲೆ ಟೈಪ್ ಮಾಡಿಸಿದರು.
ಈ ನಕಲಿ ವಿಲ್ನಲ್ಲಿ ಪ್ರವೀಣ್ ತನ್ನ ಎಲ್ಲ ಸ್ಥಿರಾಸ್ತಿಗಳನ್ನು ಲಕ್ಷ್ಮಿ, ರಮೇಶ್ ಹಾಗೂ ಸುರೇಶ್ ಈ ಮೂವರ ಹೆಸರಿಗೆ ಬರೆದಂತೆ ತೋರಿಸಿದರು. ಪಾರ್ವತಿ ಮತ್ತು ಹರ್ಷರಿಗೆ ತಲಾ 25 ಲಕ್ಷ ರೂಗಳನ್ನು ಕೊಡಬೇಕೆಂದು ತೋರಿಸಿದರು. ಹಿಂದಿ ಭಾಷೆಯ ನಕಲಿ ಉಯಿಲಿನಲ್ಲಿ ಸೀತಾರಾಂನ ಫೋಟೋ ಮತ್ತು ಕೈಬೆರಳಚ್ಚುಗಳ ಬದಲಿ ಪ್ರವೀಣ್ನ ಉಯಿಲಿನಲ್ಲಿದ್ದ ಫೋಟೋ ಮತ್ತು ಬೆರಳಚ್ಚುಗಳನ್ನು ನಕಲು ಮಾಡಿ ಅವನ್ನು ಅಳವಡಿಸಿದರು. ಆದರೆ ಸೀತಾರಾಂ ಪಾವತಿಸಿದ್ದ ರಿಜಿಸ್ಟ್ರೇಷನ್ ಹಣ, ಅವರ ಉಯಿಲು ರಿಜಿಸ್ಟರ್ ಆಗಿದ್ದ ನೊಂದಣಿ ಸಂಖ್ಯೆ, ನೋಂದಣಿ ಕಚೇರಿಯ ಸೀಲ್ ಇತ್ಯಾದಿಗಳನ್ನೇ ನಕಲಿ ವಿಲ್ನಲ್ಲಿ ಅಳವಡಿಸಿದರು. ಆನಂತರ ಪ್ರವೀಣ್ ಹೆಸರಿನಲ್ಲಿದ್ದ ಅಸಲಿ ಉಯಿಲನ್ನು ಕಚೇರಿಯ ದಾಖಲೆಗಳಿಂದ ಹೊರತೆಗೆದು ಅದರ ಬದಲಾಗಿ ಹೊಸದಾಗಿ ತಯಾರು ಮಾಡಿದ್ದ ನಕಲಿ ಪತ್ರವನ್ನು ಸಬ್ ರಿಜಿಸ್ಟ್ರಾರ್ ಕಚೇರಿಯ ದಾಖಲೆಗಳಲ್ಲಿ ಶಂಕರ್ ಅಳವಡಿಸಿದ.
ಇದಾದ ಕೆಲ ದಿನಗಳ ನಂತರ ರಮೇಶ್ ಮತ್ತು ಸುರೇಶ್ ತಮ್ಮ ತಂದೆ ಸತ್ತರೆಂದು ಅವರ ಮರಣದ ಪ್ರಮಾಣ ಪತ್ರವನ್ನು ಮತ್ತೊಮ್ಮೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೀಡಿ ಹೊಸದಾಗಿ ತಯಾರಿಸಲಾಗಿದ್ದ ನಕಲಿ ಉಯಿಲಿನ ಪ್ರತಿಯನ್ನು ತೆಗೆದುಕೊಂಡರು. ಅದರ ಆಧಾರದ ಮೇಲೆ ವಾಣಿಜ್ಯ ಸಂಕೀರ್ಣವನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡು ನೋಂದಣಿಯನ್ನು ಬೇರೊಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾಡಿಸಿದರು.
ಇದನ್ನು ಅರಿತ ಪಾರ್ವತಿ ಮತ್ತು ಹರ್ಷ ಇವರಲ್ಲದೆ, ಲಕ್ಷ್ಮಿ ಕೂಡ ಆಘಾತಗೊಂಡರು. ಪ್ರವೀಣ್ ಜೀವಂತವಾಗಿದ್ದಾಗಲೇ ಇಬ್ಬರೂ ಪತ್ನಿಯರಿಗೆ ಆಸ್ತಿಯನ್ನು ಸಮನಾಗಿ ಕೊಡುತ್ತಿರುವುದಾಗಿ ಹೇಳಿದ್ದರು. ಆತ ಪತ್ನಿಯರು ಮತ್ತು ಮಕ್ಕಳ ನಡುವೆ ಯಾವುದೇ ಭೇದಭಾವ ಮಾಡುತ್ತಿರಲಿಲ್ಲವೆಂಬುದು ಅವರ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ತಿಳಿದಿತ್ತು. ಹೀಗಾಗಿ, ಕೆಲವು ಹಿರಿಯರ ಸಲಹೆಯ ಮೇರೆಗೆ ವಾಣಿಜ್ಯ ಸಂಕೀರ್ಣ ಯಾವ ಆಧಾರದ ಮೇಲೆ ರಮೇಶ್ ಮತ್ತು ಸುರೇಶರ ಹೆಸರಿನಲ್ಲಿ ವರ್ಗಾವಣೆಗೊಂಡಿತೆಂದು ತಿಳಿಯಲು ಪಾರ್ವತಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಸಂಬಂಧಿಸಿದ ದಾಖಲೆಗಳನ್ನು ಪಡೆದರು. ಆ ದಾಖಲೆಗಳಲ್ಲಿ ಪ್ರವೀಣ್ ಮಾಡಿದ್ದ ಉಯಿಲು ಪತ್ರದ ಪ್ರತಿಯಿತ್ತು. ಅದನ್ನು ಕೂಲಂಕಷವಾಗಿ ಗಮನಿಸಿ ಅದು ನಕಲಿ ಉಯಿಲೆಂದು ತಿಳಿದ ಪಾರ್ವತಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು. ಆರಂಭದಲ್ಲಿ ಪೊಲೀಸರು ಈ ದೂರನ್ನು ಸಿವಿಲ್ ವ್ಯಾಜ್ಯವೆಂದು ಪರಿಗಣಿಸಿ ಅದನ್ನು ದಾಖಲು ಮಾಡಲಿಲ್ಲ. ಆದರೆ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಧ್ಯಪ್ರವೇಶದಿಂದ ದೂರು ದಾಖಲಾಯಿತು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತನಿಖಾಧಿಕಾರಿ ವಿಚಾರಣೆ ಮಾಡಿದಾಗ, ಪ್ರವೀಣ್ ಉಯಿಲನ್ನು ನೋಂದಣಿ ಮಾಡಿಸಿದಾಗ ಕೊಟ್ಟಿದ್ದ ನೋಂದಣಿ ಸಂಖ್ಯೆಗೂ, ಮತ್ತು ವಾಣಿಜ್ಯ ಸಂಕೀರ್ಣದ ಪರಭಾರೆ ಮಾಡಿಸುವಾಗ ಕೊಟ್ಟ ನೋಂದಣಿ ಸಂಖ್ಯೆಗೂ ಇದ್ದ ವ್ಯತ್ಯಾಸವು ತಿಳಿಯಿತು. ಮುಂದಿನ ತನಿಖೆಯಲ್ಲಿ ಸೀತಾರಾಂ ಮಾಡಿಸಿದ್ದ ವಿಲ್ನ ಬಗ್ಗೆ ಮಾಹಿತಿ ದೊರೆಯಿತು. ಅನುಮಾನಗೊಂಡ ತನಿಖಾಧಿಕಾರಿ ಸಬ್ ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ ವರ್ಗದವರನ್ನು ತೀವ್ರತರವಾಗಿ ವಿಚಾರಣೆ ಮಾಡಿದಾಗ ರಮೇಶ್ ಮತ್ತು ಸುರೇಶ್ಗೆ ಸಹಾಯ ಮಾಡಲು ಶಂಕರ್ ಹಣ ಪಡೆದ ಸತ್ಯ ಹೊರಬಂದಿತು.
ಪ್ರವೀಣ್ ಬರೆದಿದ್ದ ಮೂಲ ಉಯಿಲನ್ನು ಬೇರೆ ಕಚೇರಿಗೆ ಸ್ಥಳಾಂತರಿಸಲಾಗಿದ್ದು ಅದನ್ನು ಹೇಗೋ ಪತ್ತೆ ಮಾಡಲಾಯಿತು, ಆಸ್ಟ್ರೇಲಿಯದಲ್ಲಿದ್ದ ಸೀತಾರಾಂರನ್ನು ಸಂರ್ಪಸಿ ಅವರ ಹೇಳಿಕೆ ಪಡೆಯಲಾಯಿತು. ಶಂಕರ್ ಮತ್ತು ರಮೇಶ್-ಸುರೇಶ್ರ ಟೆಲಿಫೋನ್ ಕರೆಗಳ ವಿವರಗಳ ಮೂಲಕ ಅವರ ನಡುವೆ ನಡೆದಿದ್ದ ಷಡ್ಯಂತ್ರವನ್ನು ಬೆಳಕಿಗೆ ತರಲಾಯಿತು. ಈ ಪ್ರಕರಣದಲ್ಲಿ ಶಂಕರ್ ತನ್ನ ಕಚೇರಿಯ ಇನ್ನೂ ಕೆಲವರ ಸಹಾಯ ಪಡೆದಿದ್ದು ಗೊತ್ತಾಯಿತು. ನಂತರ ಸುರೇಶ್, ರಮೇಶ್, ಶಂಕರ್ ಮತ್ತು ಆರು ಮಂದಿ ಇತರರ ವಿರುದ್ಧ ವಂಚನೆ, ಷಡ್ಯಂತ್ರ, ನಕಲಿ ದಾಖಲೆಗಳ ಸೃಷ್ಟಿ, ಮುಂತಾದ ಆರೋಪಗಳನ್ನೊಳಗೊಂಡ ಆರೋಪಪಟ್ಟಿ ಸಲ್ಲಿಸಲಾಯಿತು. ಸರ್ಕಾರಿ ನೌಕರರಾಗಿದ್ದ ಆರೋಪಿಗಳನ್ನು ನೌಕರಿಯಿಂದ ಅಮಾನತು ಮಾಡಲಾಯಿತು. ಬಹುತೇಕ ಆರೋಪಿಗಳು ಸದ್ಯ ವಿಚಾರಣಾ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ‘ಈ ವಿಶ್ವದಲ್ಲಿ ಮೂರು ವಿಷಯಗಳ ಬಗ್ಗೆ ದಯೆ ತೋರಲಾಗದು-ಅವೇ ದಬ್ಬಾಳಿಕೆ, ಬೂಟಾಟಿಕೆ ಮತ್ತು ವಂಚನೆ’ ಎನ್ನುತ್ತಾನೆ ಬ್ರಿಟಿಷ್ ಲೇಖಕ ಮತ್ತು ಧರ್ಮಶಾಸ್ತ್ರಜ್ಞ ಫ್ರೆಡರಿಕ್ ವಿಲಿಯಂ ರಾಬರ್ಟ್ಸನ್. ಆದರೆ, ನಮ್ಮ ದೇಶದಲ್ಲಿ ವಂಚನೆ ಮತ್ತು ನಕಲಿ ದಾಖಲಾತಿಗಳ ಸೃಷ್ಟಿಯಂತಹ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುವುದರಿಂದಲೂ, ಹಾಗೂ ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಬಿಡುಗಡೆಯಾಗುವಂತಹ ಸಾಧ್ಯತೆಗಳು ಹೆಚ್ಚಾಗಿರುವುದರಿಂದಲೂ ಇವು ನಿರಂತರವಾಗಿ ನಡೆಯುತ್ತಿವೆ. ಹೀಗಾಗುವುದನ್ನು ತಪ್ಪಿಸಲು ಸಂಬಂಧಿಸಿದ ಕಾನೂನುಗಳನ್ನು ಬದಲಿಸಬೇಕಾಗಿದೆ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)