

ಹನುಮಂತ ಸ್ಥಳಕ್ಕೆ ಧಾವಿಸಿದ. ಅಲ್ಲಿದ್ದ ಜನರು ತೇಲಿ ಹೋಗುತ್ತಿದ್ದ ಕೈಯನ್ನು ನದಿಯಿಂದ ಹೊರಗೆ ತೆಗೆದಿಲ್ಲವೆಂದು ತಿಳಿಯಿತು. ಅಲ್ಲಿದ್ದ ಯುವಕರನ್ನು ಆತ ವಿಚಾರಿಸುತ್ತಿರುವ ಸಮಯದಲ್ಲಿಯೇ ಬಾಲಕನೊಬ್ಬ ನದಿಯಲ್ಲಿ ತೇಲಿ ಬರುತ್ತಿರುವ ದೇಹವೊಂದರತ್ತ ಗಮನ ಸೆಳೆದ. ಕೂಡಲೇ ಕಾನ್ಸ್ಟೇಬಲ್ ಹನುಮಂತ ಯುವಕರ ಸಹಾಯದಿಂದ ಆ ದೇಹವನ್ನು ನದಿಯಿಂದ ಹೊರತೆಗೆದು ದಡದ ಮೇಲೆ ತಂದ. ಆ ದೇಹದ ತಲೆ ಹಾಗೂ ಒಂದು ಕೈ, ಕಾಲು ಕತ್ತರಿಸಲ್ಪಟ್ಟಿತ್ತು. ಈಗಾಗಲೇ ನೀರಿನಲ್ಲಿ ಹರಿದು ಹೋಗಿದ್ದ ಕೈ ಇದೇ ದೇಹದ ಭಾಗವಾಗಿದ್ದಿರಬಹುದೆಂದು ಸಂದೇಹಿಸಿ ಕತ್ತರಿಸಿದ್ದ ಉಳಿದ ಭಾಗಗಳು ತೇಲಿಬರುತ್ತವೆಯೋ ಎಂದು ಕಾಯತೊಡಗಿದರು.
ಹನುಮಂತ ತನ್ನ ಠಾಣಾಧಿಕಾರಿಗೆ ಸ್ಥಳಕ್ಕೆ ಬರಲು ತಿಳಿಸಿ ಅವರಿಗಾಗಿ ಕಾಯುತ್ತಿದ್ದ. ಹತ್ತು ನಿಮಿಷದ ತರುವಾಯ ನದಿಯಲ್ಲಿ ತಲೆಯೊಂದು ತೇಲಿ ಬಂದಿತು, ಅದನ್ನೂ ನೀರಿನಿಂದ ಹೊರತೆಗೆಯಲಾಯಿತು. ಅದರ ಹಿಂದೆಯೇ ಒಂದು ಕಾಲೂ ತೇಲಿಬಂದಿತು. ತಲೆ ಮತ್ತು ಕಾಲನ್ನು ಮುಂಡದ ಜೊತೆ ಜೋಡಿಸಿದಾಗ ತೇಲಿ ಬಂದಿದ್ದ ದೇಹದ ಎಲ್ಲ ಭಾಗಗಳೂ ಒಬ್ಬನೇ ವ್ಯಕ್ತಿಯದಾಗಿದ್ದು ಅದು ಪುರುಷನ ದೇಹವೆಂದು ಖಾತ್ರಿಯಾಯಿತು. ಠಾಣಾಧಿಕಾರಿ ಸ್ಥಳಕ್ಕೆ ಬಂದಕೂಡಲೇ ವಿವಿಧ ಕೋನಗಳಿಂದ ಶವದ ಫೋಟೋಗಳನ್ನು ತೆಗೆದುಕೊಂಡು ನಂತರ ದೇಹದ ಮೇಲೆ ಪಂಚನಾಮೆ ಮಾಡಿದರು. ಮೃತನು ಷರ್ಟನ್ನು ಧರಿಸಿದ್ದರೂ ಅದರ ಜೇಬಿನಲ್ಲಿ ಆತನನ್ನು ಗುರುತಿಸುವಂತಹ ಯವುದೇ ವಸ್ತು ಸಿಗಲಿಲ್ಲ. ಮೃತ ವ್ಯಕ್ತಿ ಯಾರೆಂಬುದೆಂದು ತಿಳಿಯಲಿಲ್ಲ. ಹೀಗಾಗಿ ಶವದ ಬೆರಳಚ್ಚು ಮತ್ತು ಕಾಲಚ್ಚುಗಳನ್ನು ತೆಗೆದುಕೊಳ್ಳಲಾಯಿತು. ಹರಿತವಾದ ಆಯುಧದಿಂದ ತಿವಿದು ಸಾಯಿಸಿ ದೇಹವನ್ನು ಕತ್ತರಿಸಿರುವುದು ಮೇಲ್ನೋಟಕ್ಕೇ ವಿಧಿತವಾಗಿತ್ತು. ಪೊಲೀಸರು ಪಂಚನಾಮೆ ಮಾಡುತ್ತಿರುವ ಸಮಯದಲ್ಲಿ ಸ್ಥಳೀಯರೂ ಪಂಚನಾಮೆಯ ವಿಡಿಯೋ ಚಿತ್ರೀಕರಿಸಿ ಅದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.
ವ್ಯಕ್ತಿಯ ಕೊಲೆ ಮಾಡಿ ದೇಹವನ್ನು ಕತ್ತರಿಸಿ ಆ ಸಾಕ್ಷ್ಯವನ್ನು ನಾಶ ಮಾಡುವ ಉದ್ದೇಶದಿಂದ ದೇಹವನ್ನು ನದಿಯಲ್ಲಿ ಹಾಕಿದ್ದಾರೆ ಎನ್ನುವುದು ಸ್ಪಷ್ಟವಾಗಿತ್ತು. ಪೊಲೀಸರು ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಶವದ ಚಿತ್ರಗಳನ್ನು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ಕಳುಹಿಸಿ, ಪತ್ರಿಕೆಗಳಲ್ಲಿ ಪ್ರಕಟಿಸಿದರು. ಮೃತ ವ್ಯಕ್ತಿಯು ಸುಮಾರು 55 ರಿಂದ 60 ವಯಸ್ಸಿನವನಾಗಿದ್ದು, ಅವನನ್ನು ಚಾಕುವಿನಿಂದ ಹಲವಾರು ಬಾರಿ ಇರಿದು ಕೊಲೆ ಮಾಡಿ ಆನಂತರ ದೇಹವನ್ನು ಕತ್ತರಿಸಲಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಯಿತು.
ಪ್ರಕರಣ ದಾಖಲಾದ ಎರಡು ದಿನಗಳ ನಂತರ ನಾಗರತ್ನಾ ಎಂಬಾಕೆ ಪೊಲೀಸ್ ಠಾಣೆಗೆ ಬಂದು ತಾನು ಸುಮಾರು 10 ಕಿಮೀ ದೂರದ ಗ್ರಾಮದ ನಿವಾಸಿ ಎಂದು ಪರಿಚಯಿಸಿಕೊಂಡಳು. ತಾನು ಶವದ ಮಹಜರ್ ವಿಡಿಯೋವನ್ನು ಕಳೆದ ರಾತ್ರಿ ನೋಡಿದ್ದು, ಆ ಶವವು ತನ್ನ ಗಂಡ ಬೋರಯ್ಯನದು ಎನ್ನುವ ಗುಮಾನಿಯಿದೆ ಎಂದಳು. ಗಂಡ ನಾಲ್ಕು ದಿನಗಳ ಹಿಂದೆ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತೇನೆ ಎಂದು ಹೋದವನು ಇದುವರೆಗೆ ವಾಪಸ್ಸಾಗಿಲ್ಲ, ನಾವು ಅವನ ಸ್ನೇಹಿತರನ್ನು ವಿಚಾರಿಸಿದಾಗ ಆತ ಪಾರ್ಟಿಯ ನಂತರ ಹೊರಟುಹೋದನೆಂದು ತಿಳಿಸಿದರು ಎಂದಳು.
ಆಕೆಯನ್ನು ಆಸ್ಪತ್ರೆಯ ಶವಾಗಾರಕ್ಕೆ ಕರೆದುಕೊಂಡು ಹೋಗಿ ಶವವನ್ನು ತೋರಿಸಿದಾಗ ಅದು ನಿಸ್ಸಂದೇಹವಾಗಿ ತನ್ನ ಗಂಡ ಬೋರಯ್ಯನದೇ ಎಂದಳು. ತಾವು ಬೆಸ್ತರ ಜನಾಂಗಕ್ಕೆ ಸೇರಿದ್ದು 55 ವರ್ಷದ ಬೋರಯ್ಯ ಊರಿನಲ್ಲಿ ಜಮೀನನ್ನು ಮಾಡಿಕೊಂಡಿದ್ದ. ತಮಗೆ ಒಬ್ಬ ಮಗನಿದ್ದು ಆತ ಸೈನ್ಯದಲ್ಲಿದ್ದಾನೆ ಎಂದ ನಾಗರತ್ನ, ಬೋರಯ್ಯನಿಗೆ ಯಾರೂ ವೈರಿಗಳಿರದೆ ತಮಗೆ ಜಮೀನಿನ ಬಗ್ಗೆಯಾಗಲೀ, ಹಣದ ಬಗ್ಗೆಯಾಗಲೀ ಯಾರೊಡನೆಯೂ ತಕರಾರು ಇರಲಿಲ್ಲ ಎಂದಳು.
‘ನಿನ್ನ ಗಂಡನ ಶವವನ್ನು ಕೊಚ್ಚಿ ದೇಹದ ಭಾಗಗಳನ್ನು ಕತ್ತರಿಸಿ ನದಿಗೆಸೆದಿರುವುದನ್ನು ಕಂಡರೆ ತೀವ್ರ ವೈಷ್ಯಮದಿಂದಾದ ಕೊಲೆ ಎನ್ನುವುದರಲ್ಲಿ ಸಂಶಯವಿಲ್ಲ’ ಎಂದ ತನಿಖಾಧಿಕಾರಿ ಆ ಬಗ್ಗೆ ಇನ್ನಷ್ಟು ಯೋಚಿಸಲು ಆಕೆಗೆ ಸೂಚಿಸಿದರು. ಆದರೆ, ನಾಗರತ್ನಾ ತನ್ನ ಗಂಡನಿಗೆ ವೈರಿಗಳೇ ಇರಲಿಲ್ಲವೆಂದು ಸಾಧಿಸಿದಳು. ಪೊಲೀಸರು ಬೋರಯ್ಯ ಪಾರ್ಟಿ ಮಾಡಲು ಯಾರೊಂದಿಗೆ ಹೋಗಿದ್ದನೆಂಬ ವಿವರಗಳನ್ನು ನಾಗರತ್ನಳಿಂದ ಪಡೆದು ಅವರೆಲ್ಲರನ್ನೂ ಠಾಣೆಗೆ ಬರಹೇಳಿದರು. ಅಲ್ಲದೆ, ಬೋರಯ್ಯನ ಮೊಬೈಲ್ ಫೋನ್ ವಿವರಗಳನ್ನೂ ಪಡೆದರು.
ಬೋರಯ್ಯನ ಫೋನು ನಾಲ್ಕು ದಿನಗಳ ಹಿಂದೆ ಗ್ರಾಮದಿಂದ 5 ಕಿಮೀ ದೂರದಲ್ಲಿದ್ದ ಪ್ರದೇಶವೊಂದರಲ್ಲಿದ್ದು ರಾತ್ರಿ 8 ಗಂಟೆಗೆ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಯಿತು. ಏತನ್ಮಧ್ಯೆ ಬೋರಯ್ಯನನ್ನು ಪಾರ್ಟಿ ಮಾಡಲು ಕರೆದಿದ್ದ ರಾಮಪ್ಪ ತನ್ನ ಗೆಳೆಯರಾದ ಸಿದ್ದಣ್ಣ ಮತ್ತು ರವೀಶ್ ಜತೆಗೆ ಠಾಣೆಗೆ ಬಂದ. ರಾಮಪ್ಪ ಮತ್ತು ಬೋರಯ್ಯ ದೂರದ ಸಂಬಂಧಿಗಳಾಗಿದ್ದು ಬಹಳ ವರ್ಷಗಳಿಂದ ಹತ್ತಿರದ ಸ್ನೇಹಿತರಾಗಿದ್ದರು. ಅವರಿಬ್ಬರೂ ವಾರಕ್ಕೊಮ್ಮೆ ಗೆಳೆಯರೊಂದಿಗೆ ಗುಂಡಿನ ಪಾರ್ಟಿ ಮಾಡುತ್ತಿದ್ದುದಲ್ಲದೆ, ಇಸ್ಪೀಟ್ ಆಡುತ್ತಿದ್ದರು.
ರಾಮಪ್ಪ ತಾನು ಬೋರಯ್ಯನ ಜತೆ ಶುಕ್ರವಾರ ರಾತ್ರಿ ಪಾರ್ಟಿ ಮಾಡಿದ್ದು, ನದಿ ತೀರದ ಸಮೀಪದ ಬಯಲಲ್ಲಿ ಕುಳಿತು ಇಸ್ಪೀಟ್ ಆಡಿ ಮದ್ಯಪಾನ ಮಾಡಿ ಮಾಂಸಾಹಾರ ಸೇವಿಸಿದ್ದಾಗಿ ತಿಳಿಸಿದ. ಪಾರ್ಟಿ ನಂತರ ಬೋರಯ್ಯ ತನ್ನ ಮನೆಗೆ ಹೋಗುತ್ತೇನೆಂದು ಹೇಳಿ ಸಿದ್ದಣ್ಣನ ಮೋಟರ್ ಸೈಕಲ್ಲಿನಲ್ಲಿ ಕುಳಿತು ಹೊರಟುಹೋದ ಎಂದ. ಈ ಮಾತಿಗೆ ತಲೆದೂಗಿದ ಸಿದ್ದಣ್ಣ ಆ ರಾತ್ರಿ 9 ಗಂಟೆಗೆ ತಾನು ಬೋರಯ್ಯನನ್ನು ಆತನ ಗ್ರಾಮದ ಹೊರವಲಯದಲ್ಲಿ ಬಿಟ್ಟೆ ಎಂದ. ಹಾಗಾದರೆ ಬೋರಯ್ಯನ ಫೋನಿನ ಕಡೆಯ ಲೊಕೇಷನ್ ಅವನ ಗ್ರಾಮವೆಂದು ತೋರಿಸುತ್ತಿಲ್ಲವಲ್ಲ ಎಂದು ಪ್ರಶ್ನಿಸಿದಾಗ ಆತ ಉತ್ತರಿಸಲಿಲ್ಲ.
ನೀವು ಪಾರ್ಟಿ ಮಾಡಿದ ಜಾಗವನ್ನು ತೋರಿಸಿ ಎಂದು ಕೇಳಿದಾಗ ರಾಮಪ್ಪ ಪೊಲೀಸರನ್ನು ಸ್ಥಳಕ್ಕೆ ಕರೆದೊಯ್ದ. ಆ ಸ್ಥಳ ಕಾಡು ಪ್ರದೇಶವಾಗಿದ್ದು ನದಿ ತೀರಕ್ಕೆ ಬಹು ಸಮೀಪದ ಜಾಗವಾಗಿತ್ತು. ಪಾರ್ಟಿ ಮಾಡಿದ್ದ ಸ್ಥಳದಲ್ಲಿ ಖಾಲಿ ಮದ್ಯದ ಬಾಟಲಿಗಳು ಇದ್ದದ್ದಲ್ಲದೆ, ಭೂಮಿಯ ಮೇಲೆ ರಕ್ತದ ಕಲೆಗಳು ಹತ್ತಿದ್ದು ಕಂಡುಬಂದವು. ಆ ಬಗ್ಗೆ ರಾಮಪ್ಪನನ್ನು ತೀವ್ರವಾಗಿ ವಿಚಾರಿಸಿದಾಗ ಆತ ಹೇಳಿದ್ದಿಷ್ಟು: ‘ಬೋರಯ್ಯ ನಮ್ಮ ಮನೆಗೆ ಅಗಿಂದ್ದಾಗೆ ಬಂದು ಹೋಗುತ್ತಿದ್ದು, ನನ್ನ ಕುಟುಂಬದವರೊಡನೆ ಸಲಿಗೆಯಿಂದಿದ್ದ. ಆರು ತಿಂಗಳ ಹಿಂದೆ ಮನೆಯಲ್ಲಿ ನನ್ನ ಮಗಳು 14 ವರ್ಷದ ಸುಜಾತಾ ಒಬ್ಬಳೇ ಇದ್ದಾಗ ಅವಳೊಡನೆ ಕೆಲ ಸಮಯ ಕಳೆದು ಬೋರಯ್ಯ ಹೊರಟುಹೋಗಿದ್ದ. ಬೋರಯ್ಯ ತನ್ನನ್ನು ಬಲವಂತವಾಗಿ ಚುಂಬಿಸಿದ್ದಲ್ಲದೆ, ತನ್ನ ಗುಪ್ತಾಂಗಗಳನ್ನೂ ಮುಟ್ಟಿದನೆಂದು ಎರಡು ದಿನಗಳ ನಂತರ ಸುಜಾತಾ ತನ್ನ ಅಮ್ಮನಿಗೆ ತಿಳಿಸಿದಳು. ಇದನ್ನು ಕೇಳಿ ಕೋಪಗೊಂಡ ನಾನು ಅಂದೇ ಬೋರಯ್ಯನನ್ನು ಭೇಟಿಯಾದೆ. ಮಗಳ ಸಮಾನಳಾದ ಸುಜಾತಳ ಮಾನಭಂಗ ಮಾಡಲು ನಿನಗೆ ನಾಚಿಕೆಯಾಗುವುದಿಲ್ಲವೇ ಎಂದು ಗದರಿಸಿ ಇನ್ನು ಮೇಲೆ ಹೀಗೆ ಮಾಡಬೇಡವೆಂದು ತಾಕೀತು ಮಾಡಿದೆ.
ತನ್ನದು ತಪ್ಪಾಯಿತೆಂದು ಹೇಳಿದ ಬೋರಯ್ಯ, ಇನ್ನು ಮುಂದೆ ಹೀಗೆ ಮಾಡುವುದಿಲ್ಲವೆಂದು ಹೇಳಿ ಕ್ಷಮಾಪಣೆ ಕೋರಿದ. ಇದಾದ ನಂತರವೂ ಎರಡು ಬಾರಿ ನಾವ್ಯಾರೂ ಮನೆಯಲ್ಲಿರದಿದ್ದಾಗ ಆತ ನನ್ನ ಮನೆಗೆ ಹೋಗಿ ಸುಜಾತಳ ಮೈಮುಟ್ಟಿದ್ದಲ್ಲದೆ, ರೇಪ್ ಮಾಡಲೂ ಪ್ರಯತ್ನಿಸಿದ. ನಾನು ಎಚ್ಚರಿಸಿದರೂ ಮಗಳ ಮೇಲಿನ ಕೆಟ್ಟ ದೃಷ್ಟಿಯನ್ನು ಬಿಡದ ಕಾರಣ ಆತನನ್ನು ಕೊಲೆ ಮಾಡುವುದೇ ಈ ಸಮಸ್ಯೆಗೆ ಪರಿಹಾರವೆಂದು ನಾನು ರ್ತಸಿದೆ.
ಅವನನ್ನು ಹೇಗೆ ಕೊಲೆ ಮಾಡಬೇಕೆಂದು ಯೋಜನೆ ತಯಾರಿಸಿದೆ. ಅವನನ್ನು ಪಾರ್ಟಿ ಮಾಡಲು ಕರೆದು ನಾನು, ಸಿದ್ದಣ್ಣ ಮತ್ತು ರವೀಶ್ ಅವನಿಗೆ ಕಂಠಪೂರ್ತಿ ಕುಡಿಸಿದೆವು. ನಂತರ ಆತನನ್ನು ತಿವಿದು ಕೊಂದೆವು. ನಮ್ಮ ಕೃತ್ಯ ಯಾರಿಗೂ ತಿಳಿಯಬಾರದೆಂದು ಮೀನನ್ನು ಕತ್ತರಿಸುವ ಚಾಕುವಿನಿಂದ ಅವನ ಕೈ, ಕಾಲು, ತಲೆಯನ್ನು ಕತ್ತರಿಸಿ ಅವನ್ನು ನದಿಯಲ್ಲಿ ಎಸೆದೆವು. ಅವನ ಮೊಬೈಲ್ ಮತ್ತಿತರ ವಸ್ತುಗಳನ್ನೂ ನದಿಗೆಸೆದೆವು. ಬೋರಯ್ಯನ ಶವವು ಪಕ್ಕದ ರಾಜ್ಯಕ್ಕೆ ಹರಿದುಹೋಗಿ ನಮ್ಮ ಕೃತ್ಯ ಬೆಳಕಿಗೆ ಬರುವುದಿಲ್ಲವೆಂದು ಭಾವಿಸಿದ್ದೆ.’
ನಂತರ ರಾಮಪ್ಪ ಕೊಲೆ ಮಾಡಲು ಬಳಸಿದ್ದ ಚಾಕುವನ್ನು ಬಚ್ಚಿಟ್ಟಿದ್ದ ಸ್ಥಳವನ್ನು ತೋರಿಸಿದ. ಅವನನ್ನು ಮತ್ತಿಬ್ಬರೊಡನೆ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಎಲ್ಲರಿಗೂ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ‘ಮಾನವರೋ ದಾನವರೋ ಭೂಮಾತೆಯನು ತಣಿಸೆ, ಶೋಣಿತವನೆರೆಯವರು ಭಾಷ್ಪ ಸಲುವುದರೆ? ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ! ಸೌನಿಕನ ಕಟ್ಟೆಯೇಂ? ಮಂಕುತಿಮ್ಮ’ ಎಂಬಂತೆ ಕೊಲೆಯಾದವನೂ ಕೊಲೆ ಮಾಡಿದವರೂ ರಾಕ್ಷಸೀ ಪ್ರವೃತ್ತಿ ರೂಢಿಸಿಕೊಂಡದ್ದೇ ಈ ಘಟನೆಗೆ ಕಾರಣವಾಯಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)