

ಸಮುದ್ರ ತೀರದಲ್ಲಿ ಸ್ತ್ರೀಯೊಬ್ಬಳ ಶವ ಬಿದ್ದಿದೆ ಎಂಬ ಮಾಹಿತಿ ಜುಲೈ ತಿಂಗಳ ಒಂದು ಸಂಜೆ ಆರೂವರೆಗೆ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಬಂದಾಗ ಸಬ್ಇನ್ಸ್ಪೆಕ್ಟರ್ ಪವಾರ್ ಅಲ್ಲಿಗೆ ಧಾವಿಸಿದರು. ಸಾರ್ವಜನಿಕರು ಹೆಚ್ಚು ಓಡಾಡದ ಜಾಗದಲ್ಲಿ ಶವವಿತ್ತು. ಅದು ಸುಮಾರು 25 ವರ್ಷದ ಯುವತಿಯದಾಗಿದ್ದು ಸಲ್ವಾರ್ ಕಮೀಜ್ ಧರಿಸಿದ್ದಳು. ಆಕೆಯ ಕೊರಳಲ್ಲಿದ್ದ ಚೈನಿಗೆ ಶಿಲುಬೆಯನ್ನು ತೂಗುಹಾಕಿದ್ದರಿಂದ ಮೃತಳು ಕ್ರಿಶ್ಚಿಯನ್ ಎಂದು ಊಹಿಸಲಾಯಿತು. ಕುತ್ತಿಗೆಗೆ ಇರಿತದ ಗಾಯವಾಗಿದ್ದು ತಲೆಯ ಹಿಂಭಾಗದಲ್ಲಿ ಹಲವಾರು ಸಣ್ಣ ಗಾಯಗಳಾಗಿದ್ದವು. ಶವದ ಪಕ್ಕದಲ್ಲಿಯೇ ಒಂದು ಜೋಡಿ ಹೆಂಗಸರ ಚಪ್ಪಲಿಯೂ, ಗಂಡಸರ ಚಪ್ಪಲಿಯೂ ಬಿದ್ದಿದ್ದವು. ಸುಮಾರು 30 ಮೀಟರ್ ದೂರದಲ್ಲಿ ಕಲ್ಲುಬಂಡೆ ಹಿಂದೆ ಸ್ತ್ರೀಯರ ಒಂದು ಪರ್ಸ್, ರಕ್ತಸಿಕ್ತ ಚೂರಿ, ರಕ್ತದ ಕಲೆಗಳಿದ್ದ ಒಂದು ಬಿಳಿಯ ಷರ್ಟು, ಮತ್ತು ಒಂದು ಜೊತೆ ಚಪ್ಪಲಿ ಬಿದ್ದಿದ್ದವು. ಪರ್ಸಿನಲ್ಲಿ ಸ್ವಲ್ಪ ನಗದು ಹಣ, ಪ್ರಸಾಧನ ವಸ್ತುಗಳು, ಕರ್ಚೀಫ್ಗಳಿದ್ದವು. ಯಾವುದೇ ಗುರುತಿನ ಚೀಟಿಯಿರಲಿಲ್ಲ. ಮೃತಳ ಮೈಮೇಲಿದ್ದ ಸರ ಹಾಗೂ ಅವಳ ಹಣ ಕಳವಾಗದೇ ಇದ್ದುದರಿಂದ ಇದು ಹಣಕ್ಕಾಗಿ ನಡೆದ ಕೊಲೆಯಲ್ಲ ಎಂದು ಊಹಿಸಲಾಯಿತು.
ಮೃತಪಟ್ಟವಳು ನರ್ಸ್ ಆಗಿದ್ದಿರಬಹುದು ಎಂದು ಊಹಿಸಿದ ತನಿಖಾಧಿಕಾರಿ ಸಮೀಪದಲ್ಲಿದ್ದ ಆಸ್ಪತ್ರೆಗಳಲ್ಲಿ ಟಿ.ರ್ವ ಎಂಬ ಹೆಸರಿನ ನರ್ಸ್ ಇದ್ದಾಳೆಯೇ ಎಂದು ವಿಚಾರಿಸಲು ಸಿಬ್ಬಂದಿಗೆ ಸೂಚಿಸಿದರು. ನಾನಾವತಿ ಆಸ್ಪತ್ರೆಯಲ್ಲಿ ಟ್ರೀಜಾ ರ್ವ ಎಂಬ ನರ್ಸ್ ಕೆಲಸಮಾಡುತ್ತಿದ್ದು ಆಕೆ ಆಸ್ಪತ್ರೆಯ ನರ್ಸ್ಗಳ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದು ನಿನ್ನೆ ಸಂಜೆ ನಾಲ್ಕರ ವೇಳೆಗೆ ಅರ್ಜೆಂಟ್ ಕೆಲಸವಿರುವುದಾಗಿ ಹೇಳಿ ಹೊರಗೆ ಹೋದವಳು ಇಲ್ಲಿಯವರೆಗೆ ವಾಪಸ್ ಬಂದಿಲ್ಲವೆಂದು ಒಬ್ಬ ಕಾನ್ಸ್ಟೆಬಲ್ ಮಾಹಿತಿ ತಂದ. ಏತನ್ಮಧ್ಯೆ ಮೃತಳ ಸಾವು ಇರಿತದ ಕಾರಣದಿಂದ ಆಗಿದೆ ಹಾಗೂ ಆಕೆಯ ಮೇಲೆ ಅತ್ಯಾಚಾರವಾಗಿಲ್ಲ ಎಂದು ಮರಣೋತ್ತರ ವರದಿಯಲ್ಲಿ ತಿಳಿಯಿತು.
ಪೊಲೀಸರು ನಾನಾವತಿ ಆಸ್ಪತ್ರೆಯ ನರ್ಸೆಬ್ಬಳನ್ನು ಶವಾಗಾರಕ್ಕೆ ಕರೆದೊಯ್ದಾಗ ಆಕೆ ಶವವನ್ನು ತನ್ನ ಸಹೋದ್ಯೋಗಿ ಟ್ರೀಜಾ ರ್ವಯದೇ ಎಂದು ಗುರುತಿಸಿದಳು. ಆಕೆ ಸೌಮ್ಯ ಸ್ವಭಾವದವಳಾಗಿದ್ದು ಅವಳಿಗೆ ಯಾವ ಶತ್ರುವೂ ಇರಲಿಲ್ಲ ಎಂದಳು. ಟ್ರೀಜಾ ವಾಸವಿದ್ದ ಹಾಸ್ಟೆಲ್ ಕೊಠಡಿಯಲ್ಲಿ ಮಲೆಯಾಳಂ ಭಾಷೆಯಲ್ಲಿ ಬರೆದಿದ್ದ ಹಲವಾರು ಪತ್ರಗಳು ದೊರೆತವು. ಟ್ರೀಜಾ ಮೊಬೈಲ್ ಫೋನ್ ಬಳಸುತ್ತಿರಲಿಲ್ಲವೆಂದು ಹೇಳಿದ ಅವಳ ಸಹೋದ್ಯೋಗಿಗಳು ಅಲ್ಲಿ ಸಿಕ್ಕ ಪತ್ರಗಳು ಪ್ರೇಮಪತ್ರಗಳೆಂದು ತಿಳಿಸಿ ಅವನ್ನು ‘ಎಂ.ಎನ್.ಜಯನ್’ ಎನ್ನುವವನು ಬರೆದಿದ್ದ ಎಂದರು. ಜಯನ್ ತನ್ನ ವಿಳಾಸವನ್ನು ನೌಕಾ ಕೇಂದ್ರ ಸ್ಥಾನ, ನವದೆಹಲಿ ಎಂದು ಅವುಗಳಲ್ಲಿ ನಮೂದಿಸಿದ್ದ. ಕೇರಳದಲ್ಲಿ ವಾಸವಿದ್ದ ಟ್ರೀಜಾಳ ತಂದೆಯನ್ನು ಸಂರ್ಪಸಿದಾಗ, ಮಗಳು ಉತ್ತಮ ನಡತೆಯುಳ್ಳವಳಾಗಿದ್ದಳು, ಜಯನ್ ಯಾರೆಂದು ತನಗೆ ತಿಳಿದಿಲ್ಲ ಎಂದರು.
ತಾನು ಅನ್ಯಮತೀಯನನ್ನು ಪ್ರೀತಿಸುತ್ತಿದ್ದು, ಅವನನ್ನೇ ಮದುವೆಯಾಗುವುದಾಗಿ ಟ್ರೀಜಾ ಹೇಳಿದ್ದಳು, ಆದರೆ ಅವನ ಬಗ್ಗೆ ಹೆಚ್ಚಾಗಿ ಏನನ್ನೂ ಹೇಳಿರಲಿಲ್ಲ ಎಂದು ಪೊಲೀಸರಿಗೆ ಟ್ರೀಜಾಳ ಸಹೋದ್ಯೋಗಿಯೊಬ್ಬಳು ಹೇಳಿದಳು. ದೆಹಲಿಯಲ್ಲಿರುವ ನೌಕಾದಳದ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಜಯನ್ನನ್ನು ಪತ್ತೆ ಮಾಡಿದರೆ ಈ ಕೊಲೆಯ ಸುಳಿವು ಸಿಗುತ್ತದೆ ಎಂದು ತನಿಖಾಧಿಕಾರಿ ನವದೆಹಲಿಗೆ ಹೋದರು. ಎಂ.ಎನ್.ಜಯನ್ ಎನ್ನುವವನು ನೌಕಾ ಉಗ್ರಾಣ ವಿಭಾಗದಲ್ಲಿ ಎರಡನೇ ದರ್ಜೆಯ ಗುಮಾಸ್ತನೆಂದು ತಿಳಿದು ಆ ಕಚೇರಿಗೆ ಹೋದಾಗ ತನಿಖಾಧಿಕಾರಿಗೆ ಆಶ್ಚರ್ಯ ಕಾದಿತ್ತು. ನರ್ಸ್ ಕೊಲೆಯಾದ ಎರಡು ದಿನಗಳ ಹಿಂದೆಯೇ ಜಯನ್ ಮುಂಬೈಗೆ ವರ್ಗವಾಗಿತ್ತು. ಹೊಸ ಹುದ್ದೆಗೆ ಸೇರುವ ಮೊದಲು ಹತ್ತು ದಿನಗಳ ರಜೆ ಬೇಕು ಎಂದು ಅರ್ಜಿ ಹಾಕಿದ್ದ ಜಯನ್ ತನ್ನ ಮುಂಬೈ ವಿಳಾಸವನ್ನು ಕೇರಾಫ್ ಎಂ.ವಿ.ಫಿಲಿಪ್, ಮೂರ್ ಲ್ಯಾಂಡ್ ರಸ್ತೆ ಎಂದು ನೀಡಿದ್ದ.
ದೆಹಲಿಯಲ್ಲಿ ಜಯನ್ ವಾಸವಿದ್ದ ಮನೆಗೆ ಹೋದಾಗ ಆತ ವರ್ಗವಾದ ಮರುದಿನವೇ ಮುಂಬೈಗೆ ಹೋಗಿದ್ದಾಗಿ ತಿಳಿಯಿತು. ತನಿಖಾಧಿಕಾರಿ ಕೂಡಲೇ ತನ್ನ ಪೊಲೀಸ್ ಠಾಣೆಯನ್ನು ಸಂರ್ಪಸಿ ಜಯನ್ ನಮೂದಿಸಿದ್ದ ಮುಂಬೈ ವಿಳಾಸದಲ್ಲಿ ಹುಡುಕಲು ಸೂಚಿಸಿದರು. ಸಮುದ್ರತೀರದಲ್ಲಿ ವಶಪಡಿಸಿಕೊಳ್ಳಲಾದ ಷರ್ಟನ್ನು ಆ ಬಡಾವಣೆಯಲ್ಲಿದ್ದ ಅಗಸನ ಅಂಗಡಿಯಲ್ಲಿ ತೋರಿಸಿದಾಗ ಅದು ಜಯನ್ದೆಂದು ಗುರುತಿಸಿದ ಅಂಗಡಿಯಾತ ಅಂಗಡಿಯ ರಸೀತಿ ಪುಸ್ತಕದಲ್ಲಿ ಜಯನ್ ಹಾಕಿದ್ದ ಸಹಿಯನ್ನು ತೋರಿಸಿದ. ಟ್ರೀಜಾಳಿಗೆ ಬರೆದಿದ್ದ ಪತ್ರಗಳಲ್ಲಿದ್ದ ಸಹಿಗೆ ಆ ಸಹಿ ತಾಳೆಯಾಯಿತು. ದೆಹಲಿಯಲ್ಲಿ ಜಯನ್ ಊಟ ಮಾಡುತ್ತಿದ್ದ ಕೇರಳ ಮೆಸ್ಗೆ ಹೋಗಿ ವಿಚಾರಿಸಿದಾಗ ಆತ ನರ್ಸೆಬ್ಬಳನ್ನು ಪ್ರೇಮಿಸುತ್ತಿದ್ದನೆಂದೂ, ಅವಳಿಗಾಗಿಯೇ ಮುಂಬೈಗೆ ವರ್ಗ ಮಾಡಿಸಿಕೊಂಡನೆಂದೂ ಹೇಳಿದರು. ಇತ್ತೀಚೆಗೆ ಆತ ಉದ್ದನೆಯ ಗಡ್ಡ ಬೆಳೆಸಿದ್ದನೆಂದೂ ತಿಳಿಯಿತು.
ಇಷ್ಟರಲ್ಲಾಗಲೇ ಜಯನ್ನನ್ನು ಪೊಲೀಸರು ವಶಕ್ಕೆ ಪಡೆದರು. ತನಿಖಾಧಿಕಾರಿ ಮುಂಬೈಗೆ ವಾಪಸ್ಸಾಗಿ ಜಯನ್ನನ್ನು ಕೂಲಂಕಷವಾಗಿ ಪ್ರಶ್ನಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡು ಹೀಗೆ ಹೇಳಿದ:‘ ನನಗೂ ಟ್ರೀಜಾಗೂ ಹಲವಾರು ವರ್ಷಗಳಿಂದ ಸ್ನೇಹವಿತ್ತು. ಅದು ಪ್ರೇಮಕ್ಕೆ ತಿರುಗಿ, ಮದುವೆಯಾಗಲು ನಿಶ್ಚಯಿಸಿದೆವು. ನಾನು ಅವಳಿಗಾಗಿಯೇ ದೆಹಲಿಯಿಂದ ಮುಂಬೈಗೆ ವರ್ಗ ಮಾಡಿಸಿಕೊಂಡೆ. ಆದರೆ ಈಗ ಎರಡು ಮೂರು ತಿಂಗಳುಗಳಿಂದ ಟ್ರೀಜಾಗೆ ನನ್ನ ಮೇಲಿದ್ದ ಪ್ರೇಮ ಕಡಿಮೆಯಾಗತೊಡಗಿದೆ ಎನ್ನಿಸಿತು. ‘ಸನ್ನಿ ಜಾರ್ಜ್ ಎಂಬ ಅವಳದೇ ಮತೀಯನಾದ ಯುವಕನ ಜೊತೆಗೆ ಟ್ರೀಜಾ ಓಡಾಡುತ್ತಿದ್ದಾಳೆ. ಆತ ನಿನಗಿಂತ ಸ್ಥಿತಿವಂತ ಹಾಗೂ ಸ್ಪುರದ್ರೂಪಿ’ಎಂದು ಮುಂಬೈನಲ್ಲಿದ್ದ ನನ್ನ ಸ್ನೇಹಿತನೊಬ್ಬ ತಿಳಿಸಿದ. ನನ್ನ ಸಂಶಯ ಬಲವಾಯಿತು.
ನಾನು ಹೇಗಿದ್ದರೂ ಮುಂಬೈಗೆ ವರ್ಗಗೊಂಡಿದ್ದರಿಂದ ಟ್ರೀಜಾಳನ್ನು ನೇರವಾಗಿ ಸಂರ್ಪಸಿ ತರಾಟೆಗೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದೆ. ನಾನು ಜುಲೈ 5ರ ಮುಂಜಾನೆಯೇ ಮುಂಬೈ ತಲುಪಿ ನನ್ನ ಸ್ನೇಹಿತ ಫಿಲಿಪ್ ವರ್ಗೀಸನ ಮನೆಯಲ್ಲಿ ವಸತಿ ಮಾಡಿದೆ. ಟ್ರೀಜಾ ಸನ್ನಿ ಚಾರ್ಜ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಆತ ದೃಢೀಕರಿಸಿದ. ಆಗ ನನಗೆ ಕೋಪ ತಡೆಯಲಾಗಲಿಲ್ಲ, ನನಗೆ ಮೋಸ ಮಾಡಿದ ಟ್ರೀಜಾಳನ್ನು ಕೊಲೆ ಮಾಡಬೇಕೆಂದು ಆಗಲೇ ತೀರ್ವನಿಸಿದೆ. ಅಂಗಡಿಗೆ ಹೋಗಿ ಚೂರಿ ಖರೀದಿಸಿದೆ. ಆ ಸಂಜೆಯೇ ನಾನು ಹಾಗೂ ಫಿಲಿಪ್ ನಾನಾವತಿ ಆಸ್ಪತ್ರೆಗೆ ಹೋಗಿ, ಟ್ರೀಜಾಳನ್ನು ಜುಹು ಬೀಚಿಗೆ ಬರಲು ಕರೆದೆವು. ಅವಳು ಸಂತೋಷದಿಂದಲೇ ಬಂದಳು. ನಾವು ಟ್ಯಾಕ್ಸಿಯಲ್ಲಿ ಹೋಗುವಾಗ ಸನ್ನಿ ಜಾರ್ಜನ ಸಂಬಂಧದ ಬಗ್ಗೆ ಕೇಳಿದಾಗ ಆತ ತನ್ನ ಉತ್ತಮ ಸ್ನೇಹಿತನಷ್ಟೇ ಎಂದಳು.
ಜುಹು ಬೀಚಿನಲ್ಲಿ ನಾವು ಮೂವರೂ ನಿರ್ಜನ ಪ್ರದೇಶವೊಂದಕ್ಕೆ ಹೋಗಿ ಕುಳಿತೆವು, ಲೋಕಾಭಿರಾಮವಾಗಿ ಕೆಲಕಾಲ ಮಾತನಾಡಿದ ನಂತರ ‘ನನ್ನ ಮೇಲೆ ನಿನಗೆ ಪ್ರೀತಿ ಕಡಿಮೆಯಾಗಲು ಕಾರಣವೇನು’ ಎಂದು ಕೇಳಿದೆ. ಆಕೆ ಉತ್ತರಿಸಲಿಲ್ಲ. ‘ನನಗಿಂತ ನಿನಗೆ ಬೇರೆಯವರೇ ಹೆಚ್ಚಾದರೇ’ ಎಂದಾಗ, ಟ್ರೀಜಾ ‘ನಾನು ನಿನ್ನನ್ನು ಪ್ರೀತಿಸುವುದಿಲ್ಲ ಸನ್ನಿ ಜಾರ್ಜ್ನನ್ನೇ ಮದುವೆಯಾಗುತ್ತೇನೆ. ಇದೇ ನಮ್ಮಿಬ್ಬರ ಕಡೆಯ ಭೇಟಿ’ ಎಂದು ಕೋಪದಿಂದ ಹೇಳಿ ಮೇಲೆದ್ದಳು. ಅವಳ ಮಾತುಗಳನ್ನು ಕೇಳಿದ ನನಗೆ ರೋಷ ತಡೆಯಲಾಗದೆ ಚಾಕುವಿನಿಂದ ಇರಿಯಲು ಹೋದಾಗ ಓಡತೊಡಗಿದಳು. ಆಗ ಫಿಲಿಪ್ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡ. ನಾನು ಅವಳ ಕುತ್ತಿಗೆಗೆ ಇರಿದು ಕೊಂದೆ.
ಟ್ರೀಜಾ ಸನ್ನಿ ಜಾರ್ಜ್ನ ಜತೆ ಸಲಿಗೆಯಿಂದಿದ್ದಳೇ ಹೊರತು ಅವನನ್ನು ಪ್ರೀತಿಸಿರಲಿಲ್ಲ ಎಂದು ಆನಂತರ ನನಗೆ ತಿಳಿಯಿತು. ಬೇಕೆಂತಲೇ ನನ್ನನ್ನು ಛೇಡಿಸಲು ತಾನು ಆತನನ್ನು ಮದುವೆಯಾಗುವುದಾಗಿ ಹೇಳಿದ್ದಳು. ಅವಳು ಖಂಡಿತವಾಗಿಯೂ ನನ್ನನ್ನೇ ಮದುವೆಯಾಗುತ್ತಿದ್ದಳು. ನಾನು ವಿನಾಕಾರಣ ಅವಳನ್ನು ಕೊಂದೆ, ನನಗೆ ಪಶ್ಚಾತ್ತಾಪವಾಗಿದೆ’. ನಂತರ ಫಿಲಿಪ್ನನ್ನು ಬಂಧಿಸಿ, ಅವನ ಮನೆಯಿಂದ ಆತ ಧರಿಸಿದ್ದ ರಕ್ತಸಿಕ್ತ ಬಟ್ಟೆಗಳನ್ನು ವಶಪಡಿಸಿಕೊಂಡು ಜಯನ್ಗೆ ಚಾಕು ಮಾರಿದ್ದ ಅಂಗಡಿಯನ್ನು ಪತ್ತೆಮಾಡಿ ಇತರ ಎಲ್ಲಾ ಪುರಾವೆಗಳ ಸಂಗ್ರಹದ ನಂತರ ಆರೋಪಪಟ್ಟಿ ಸಲ್ಲಿಸಲಾಯಿತು. ನ್ಯಾಯಾಲಯವು ಅವರಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತು.
‘ಒಥೆಲೋ’ ನಾಟಕದಲ್ಲಿ ಷೇಕ್ಸ್ಪಿಯರ್, ‘ಅಸೂಯೆಯ ಬಗ್ಗೆ ಎಚ್ಚರದಿಂದಿರು, ಅದು ತಾನು ತಿನ್ನುವ ಆಹಾರದ ಜತೆಗೇ ಚೆಲ್ಲಾಟವಾಡುವ ಹಸಿರು ಕಣ್ಣಿನ ರಾಕ್ಷಸ’ ಎನ್ನುತ್ತಾನೆ. ಈ ರಾಕ್ಷಸನಿಂದಾಗಿಯೇ ಅಮಾಯಕ ಟ್ರೀಜಾ ಪ್ರಾಣತೆತ್ತದ್ದು ದುರ್ದೈವವೇ ಸರಿ...