ಮುಗಿಲೆತ್ತರದಲ್ಲೊಂದು ಒದ್ದೆ ಮರುಭೂಮಿ...

ವಿಜಯವಾಣಿ (2)
Published on
ಸಾಮಾನ್ಯವಾಗಿ ಹತ್ತನ್ನೆರಡು ಸಾವಿರ ಅಡಿಯ ಮೇಲೆ ಯಾವ ರೀತಿಯ ಹಸಿರೂ ಬೆಳೆಯಲಾರದು. ಪರ್ವತಾರೋಹಿಗಳಿಗೂ ಒಂಬತ್ತರಿಂದ ಹತ್ತು ಸಾವಿರ ಅಡಿ ಎತ್ತರ ದಾಟುತ್ತಿದ್ದಂತೆ ಏರುಮುಖದಲ್ಲಿ ಶ್ವಾಸಕೋಶಕ್ಕೆ ಪೂರೈಸಬೇಕಾದ ಆಮ್ಲಜನಕ ಕಡಿಮೆಯಾಗುವ ಅನುಭವ ತುಂಬ ಸಹಜ. ಸ್ವತಃ ಹಲವು ಬಾರಿ ಇಂಥ ಆಕ್ಸಿಜನ್ ಶಾರ್ಟೆಜ್ ಎಂಬ ಹವೆಗೆ ಸಿಕ್ಕಿ ನಾನೂ ಒದ್ದಾಡಿದ್ದೇನೆ. ಮೂಗು, ಬಾಯಿಯಿಂದ ರಕ್ತ ಸುರಿಸಿಕೊಂಡೂ ಇದ್ದೇನೆ. ಆದರೆ ಭೂಮುಖದ ಪರಿಸರ ವೈಶಿಷ್ಟ್ಯ ನೋಡಿ. ಅನಾಮತ್ತು ಹದಿನೈದು ಸಾವಿರ ಎತ್ತರದ ಇಲ್ಲಿ ಹೇರಳ ವಾಯು ಮತ್ತು ಹಸಿರು ಕಂಗೊಳಿಸುತ್ತಿದೆ.

ವಿಪರೀತ ಎತ್ತರದಲ್ಲಿದ್ದೂ ಪರಿಸರ ಕೃಪೆಯ ಕಾರಣ ಒಂದರ್ಥದಲ್ಲಿ ಇದು ‘ಹಸಿರು ಮರುಭೂಮಿ’. ಕಾರಣ ಹುಲ್ಲುಗಾವಲಿಗೆ ಮಾತ್ರ ಸಮೃದ್ಧ. ಈಗೀಗ ಬಾರ್ಲಿ ಬೆಳೆ ಪ್ರಗತಿಯಲ್ಲಿದೆ. ಪ್ರತಿ ವರ್ಷ ಈ ಒದ್ದೆ ಮರುಭೂಮಿಗೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆ ಸರಾಸರಿ ಅರವತೈದು ಸಾವಿರ.

ಭೂಮಿಯ ಮೇಲೆ ಹದಿನೈದು ಸಾವಿರ ಅಡಿ ಎತ್ತರದಲ್ಲಿ ಇವತ್ತಿಗೂ ಬದುಕು ಮತ್ತು ಹಸಿರು ಎರಡೂ ಅರಳುತ್ತಿದೆಯೆಂದಾದರೆ ಅದು ಡೆಮುಲ್​ನಲ್ಲಿ ಮಾತ್ರ. ನಾನು ಲೇಹದಿಂದ ಹೊರಟು, ಚಂದ್ರತಾಲ್ ಹೋಗುವಾಗ, ಸ್ಪಿಟಿ ವ್ಯಾಲಿಯ ಆರಂಭದಲ್ಲೇ ಎಡಕ್ಕೆ ತಿರುಗಿ ಮೇಲಕ್ಕೆ ಕ್ರಮಿಸಿದರೆ ಸಿಗುವುದೇ ನಾಕೋ ಎಂಬ ಬಟಾಣಿ ಬೆಳೆಗಾರರ ಹಳ್ಳಿ. ಆ ಹಳ್ಳಿಗೆ ತಿರುಗುವ ಹಂತದಲ್ಲಿ ದಾರಿ ಮೇಲೆ ಕೂತಿದ್ದ ದೊಡ್ಡ ಗುಂಪು ಗಮನ ಸೆಳೆಯಿತು.

‘ಯಾರಿವರೆಲ್ಲ’ ಎಂದು ಡ್ರೖೆವರ್ ಕಮ್ ಗೈಡ್ ಆಗಿದ್ದ ಪೆರಮಾಂಗ್​ನನ್ನು ವಿಚಾರಿಸಿದರೆ ಅವರೆಲ್ಲ ಡೆಮುಲ್​ಗೆ ಹೋಗುವವರು ಎಂದು ಗೊತ್ತಾಯಿತು. ಅವರೆಲ್ಲ ಕೆಳಗಿನ ‘ಲಿಡಾಂಗ್’ನಿಂದ ಹೊರಟವರು ವಿಶ್ರಾಂತಿಗಾಗಿ ಅಲ್ಲಿ ತಂಗಿದ್ದರು. ‘ಎರಡು ದಿನದ ದಾರಿ ಬೇಡುವ ಅಲ್ಲಿಗೆ ಯಾಕೆ ಹೋಗುತ್ತೀರಿ?’ ಎಂದರೆ ‘ಡೆಮುಲ್’ ಎಂದು ಉತ್ತರ ಬಂದಿತು. ಇದೇನು ‘ಡೆಮುಲ್’ ಎಂದರೆ ವೈರಲ್ ಆದ ಕತೆಯೊಂದಿತ್ತು.

ಶಿಮ್ಲಾದಲ್ಲಿದ್ದ ಕೃಷಿಕ ಕಳೆದುಹೋಗಿದ್ದ ಯಾಕ್ ಒಂದನ್ನು ಹುಡುಕುತ್ತ ಇಲ್ಲಿವರೆಗೂ ಬಂದು ಈ ಎತ್ತರಕ್ಕೇ ಏರಿದವನಿಗೆ, ಅಲ್ಲಿ ಮೇಯುತ್ತಿದ್ದ ಯಾಕ್ ಸಿಕ್ಕಿದೆ ಜೊತೆಗೆ ಈ ಎತ್ತರದ ಹಸಿರ ಹೊನ್ನೂ. ಡೆಮು ಎಂದರೆ ಹೆಣ್ಣು ಯಾಕ್. ಅದರಲ್ಲೂ ಹೆಣ್ಣು ಯಾಕ್ ಸಾಕಿದವರಿಗೇ ಗೊತ್ತು ಅದರ ಪ್ರೀತಿ ಮತ್ತು ಒಡನಾಟ. ಹಾಗಾಗಿ ಪ್ರೀತಿಯ ಯಾಕ್​ನ್ನು ಕಳೆದುಕೊಂಡ ಶಿಮ್ಲಾದ ಕಡೆಯ ಮಾಲೀಕನೋರ್ವ ಬಂದು ಮೊದಲು ಲಿಡಾಂಗ್ ತಲುಪಿದ್ದಾನೆ. ಆ ಲಿಡಾಂಗ್​ನಿಂದ ಹುಡುಕುತ್ತ ನಾಲ್ಕು ದಿನಗಳ ಕಾಲ ದಾರಿ ಕ್ರಮಿಸಿ ಮೇಲೆ ಏರಿ ಬಂದಾಗ ದೊರಕಿದ್ದು ಈ ಜಾಗ.

ಅಲ್ಲಿ ನೋಡಿದರೆ ಹಸಿರು ಹುಲ್ಲುಗಾವಲು ಮಧ್ಯೆ ಅವನ ಪ್ರೀತಿಯ ಎಮ್ಮೆ ಮೇಯುತ್ತ ನಿಂತಿದೆ. ಆಶ್ಚರ್ಯ ಎಂದರೆ ಆ ಎತ್ತರದಲ್ಲಿ ನೀರು ಬಿಡಿ ಸರಿಯಾಗಿ ಗಾಳಿಯೂ ಆಡದ ಪ್ರದೇಶ. ಅಲ್ಲಿ ಹಸಿರೇ ಉಸಿರು ಎನ್ನುವುದೇ ಅಚ್ಚರಿ. ಹಾಗಾಗಿ ಜನ ಸುಳಿವಿಲ್ಲದ, ಕಾಲೇ ಇಡದ ನೆಲದ ಮೇಲೆ ಕಾಲಿಟ್ಟ ಅವನು ತಡಮಾಡದೆ ಊರಿನಿಂದ ಇನ್ನಷ್ಟು ಜನರನ್ನು ಕಟ್ಟಿಕೊಂಡು ಬಂದು ಅಲ್ಲೇ ನೆಲೆ ನಿಂತ. ಮುಖ್ಯ ಅವರ ಡೆಮುಗಳಿಗೆ ಅಲ್ಲಿ ಯಥೇಚ್ಛ ಹಸಿರು ಇತ್ತಲ್ಲ. ಇನ್ನೇನು ಬೇಕು? ಅವನ ಡೆಮುವಿನಿಂದಾಗಿ ಊರಿಗೆ ಡೆಮುಲ್ ಎನ್ನುವ ಹೆಸರು ಬಂದರೆ, ಆ ಎತ್ತರದಲ್ಲಿ ಹಸಿರು ನೆಲೆ ಕಂಡಿದ್ದು ಮಾತ್ರ ಅವತ್ತಿಗೂ ಇವತ್ತಿಗೂ ವಿಸ್ಮಯ.

ಸಮಾಜದಿಂದ ಅನಾಮತ್ತು ಎರಡು ದಿನದ ದಾರಿ ಬೇಡುವ ದೂರದಲ್ಲಿರುವ ಜನಜೀವನ, ಅದಕ್ಕಾಗಿ ಬೇಸರಿಸಿಕೊಂಡದ್ದೇ ಇಲ್ಲ. ಏನಿದ್ದರೂ ಸಹಬಾಳ್ವೆ ಮಾತ್ರ ಇವರನ್ನು ಕಾಯುತ್ತದೆ. ಅದೊಂದು ವಿಭಿನ್ನ ಶ್ರಮಜೀವಿಗಳ ಕಥಾನಕವೇ ಸರಿ. ಇಲ್ಲಿ ಮೊಬೈಲ್ ಸಿಗ್ನಲ್ ಬರುತ್ತಾ? ಲ್ಯಾಂಡ್​ಲೈನ್ ಇದೆಯಾ? ಏನೂ ಇಲ್ಲ. ತರಕಾರಿ, ಇನ್ನಿತರ ದಿನಸಿ, ಮೆಡಿಸಿನ್ನು... ಇವೆಲ್ಲ ಹೋಗಲಿ ಕೊನೆಗೆ ಅಗತ್ಯಕ್ಕೆ ಬಿದ್ದರೆ ತಕ್ಷಣಕ್ಕೆ ಹೊರಕ್ಕೆ ಬಂದು ನಗರ ತಲುಪಿ ಬದುಕಿಕೊಳ್ಳೋಣ ಎಂದರೆ ಅನಾಮತ್ತು ಹತ್ತಾರು ಕಿ.ಮೀ. ಬೆಟ್ಟ ಇಳಿಯಬೇಕಿರುವ, ಅದೆಲ್ಲ ದಾಟಿ ಬಂದ ನಂತರವೂ ಹತ್ತಾರು ಕಿ.ಮೀ. ದೂರದವರೆಗೆ ರಸ್ತೆ ಮೂಲಕ ಪಯಣಿಸಿದರೆ ದಕ್ಕುವ ಸಣ್ಣ ಪಟ್ಟಣ ಲಿಡಾಂಗ್​ನಲ್ಲಿ ಲಭ್ಯ ಇರುವ ವ್ಯವಸ್ಥೆಯ ಮೂಲಕ ಜೀವನಾವಶ್ಯಕಗಳನ್ನು ದಕ್ಕಿಸಿಕೊಳ್ಳಬೇಕು. ಅದರ ಹೊರತಾಗಿ ಒಂದು ಚಿಟಿಕೆ ಉಪ್ಪು ಕೂಡ ಈ ಪರ್ವತದ ಮೇಲಕ್ಕೆ ಬರಲು ಯಾವ ಸಾಧನ ಸಹಾಯವೂ ಇಲ್ಲ. ಏನಿದ್ದರೂ ಡೆಮು ಮತ್ತು ನಡಿಗೆ, ನಡಿಗೆ ಮತ್ತು ಬರೀ ಏರುಮಖದ ಕಾಲ್ನಡಿಗೆ.

ಹಾಗಾದರೆ ಇಷ್ಟೆಲ್ಲ ಕಷ್ಟಪಟ್ಟು ಇಂಥಲ್ಲೆಲ್ಲ ಇರೋದ್ಯಾಕೆ? ಲಿಡಾಂಗ್​ನಲ್ಲೇ ಕೆಳಗೆ ಮನೆ ಕಟ್ಟಿಕೊಂಡು ಬದುಕಬಹುದಿತ್ತಲ್ಲ. ಹೌದು, ಅದು ಎಲ್ಲ ಕಾಲಕ್ಕೂ ಎಲ್ಲೆಡೆಗೂ ಅನಿಸುವ ಮಾತೇ. ಆದರೆ ಇದೆಲ್ಲ ಕಷ್ಟ ಎನ್ನಿಸದಂತೆ, ಉತ್ತಮ ಯೋಜನೆ ರೂಪಿಸಿಕೊಂಡಿರುವ ಡೆಮುಲ್ ಜನರಿಗೆ ತಮ್ಮ ಊರೇ ಅತ್ಯಂತ ಉತ್ತಮ, ಪರಮಶ್ರೇಷ್ಠ. ಲಿಂಡಾಂಗನಲ್ಲಿ ಖರೀದಿಸಿದ ಸಾಮಾನು ಸರಂಜಾಮು ಹೇರಿಕೊಂಡು ಒಮ್ಮೆ ಕೆಳಗಿನಿಂದ ಮೇಲಕ್ಕೆ ಯಾಕ್ ಮತ್ತು ಹೆಸರಗತ್ತೆಗಳ ಮೇಲೆ ಹೊರಟರೆ ಎರಡನೆಯ ದಿನ ಸಂಜೆಗೆ ಒಂದು ತಂಡ ಡೆಮುಲ್ ತಲುಪುತ್ತದೆ.

ಅದರಲ್ಲಿ ಹಳ್ಳಿಗರ ಅಗತ್ಯವನ್ನೆಲ್ಲ ಪೂರೈಸುವ ಸಾಮಾನಿನ ಪಟ್ಟಿ ಪ್ರಕಾರ ಖರೀದಿಯಾಗಿರುತ್ತದೆ. ಅವರ ಮೊದಲ ಹಂತದ ದಾರಿ ಕ್ರಮಿಸುವಿಕೆ ನಿಲ್ಲುವುದೇ ಈ ನಾಕೋ ತಿರುವಿನಲ್ಲಿ. ಮೊದಲ ಸಲ ನನಗೆ ಸಿಕ್ಕ ತಂಡ ಅಲ್ಲಿಯೇ ಬೀಡುಬಿಟ್ಟಿತ್ತು. ಲಾಹುಲ್ ಸ್ಪಿಟಿ ವ್ಯಾಲಿಯ ಕಾಮಿಕ್ ಹಾಯ್ದು, ಲಿಡಾಂಗ್ ಮೂಲಕ ಮೊದಲ ಇಪ್ಪತ್ತು ಕಿ.ಮೀ ಕ್ರಮಿಸಿದರೆ ನಂತರ ಐದಾರು ಕಿ.ಮೀ ಮಾತ್ರ ಎಂಥ ಪ್ರವಾಸಿಗನಿಗೂ ಉಸಿರು ನೆತ್ತಿಗೇರುತ್ತದೆ. ಕಾರಣ ಡೆಮುಲ್ ಬರೋಬ್ಬರಿ ಹದಿನೈದು ಸಾವಿರ ಅಡಿಗೂ ಮಿಗಿಲಾದ ಎತ್ತರದ ಪರ್ವತದ ನೆತ್ತಿಯಲ್ಲಿ ನೆಲೆಗೊಂಡಿರುವ ಹಸಿರು ಮರುಭೂಮಿ. ತಲುಪಲು ಸುಲಭ ಸಾಧ್ಯವಿಲ್ಲ. ದೈಹಿಕ ಸಿದ್ಧತೆ ಮತ್ತು ಮಾನಸಿಕ ಬದ್ಧತೆ ಎರಡನ್ನೂ ಬೇಡುವ ಡೆಮುಲ್ ತಲುಪಿದ ಮೇಲೆ ಮಾತ್ರ ಸ್ವರ್ಗಸದೃಶ.

ಅದರಲ್ಲೂ ಹನ್ನೆರಡು ಸಾವಿರ ಅಡಿ ದಾಟುತ್ತಿದ್ದಂತೆ, ಹಸಿರ ಬೆಳೆಯುವ ನೆಲ ಭೂಮಿಯ ಮೇಲೆ ಎಲ್ಲಾದರೂ ಇದ್ದರೆ ಅದು ಡೆಮುಲ್ ಮಾತ್ರ. ವರ್ಷದ ಆರು ತಿಂಗಳು ವಿಪರೀತ ಹಿಮದ ಹೊಡೆತಕ್ಕೆ ನಲುಗುವ ಡೆಮುಲ್ ನಂತರದಲ್ಲಿ ಅಪ್ಪಟ ಹಸಿರು ಹುಲ್ಲುಗಾವಲು. ಈಗ ಹುಲ್ಲು ಜೊತೆಗೆ ಆಲೂ ಮತ್ತು ಬಾರ್ಲಿಗೂ ಸೈ. ಹಿಮ ಕಳೆದು ಚಟುವಟಿಕೆ ಗರಿಗೆದರುತ್ತಿದ್ದರೆ ಕೆಳಗಿನಿಂದ ಬರುವ ಚಾರಣಿಗರಿಗೆ ಡೆಮುಲ್ ಟ್ರಾನ್ಸಿಟ್ ಪ್ರದೇಶ ಇದ್ದಂತೆ. ಅದರಲ್ಲೂ ನಾಲ್ಕೂ ದಿಕ್ಕಿನಲ್ಲೂ ಅಪರಿಮಿತ ಸೃಷ್ಟಿ ಸೌಂದರ್ಯ ಹೊಂದಿರುವುದರಿಂದ ಡೆಮುಲ್ ಪ್ರತೀ ಚಾರಣಿಗರ ಪ್ರವಾಸಿಗರ ಆಕರ್ಷಣೀಯ ಕೇಂದ್ರ. ಫೋಟೊಗ್ರಾಫಿಗೆ ಹೇಳಿ ಮಾಡಿಸಿದ ತಾಣ.

ಊರಿನ ಪ್ರಧಾನನ ಮನೆಯಲ್ಲೊಂದು ಸೆಟ್​ಲೈಟ್​ಫೋನ್ ಸೌಲಭ್ಯ ಬಿಟ್ಟರೆ ಬೇರಾವ ಸಂವಹನವೂ ಇರದ ಪ್ರದೇಶದಲ್ಲಿ ಯಾತ್ರಿಕನಿಗೆ ದೈಹಿಕ ತಯಾರಿ ಅತ್ಯಗತ್ಯ ಇಲ್ಲಿ ತಲುಪಲು. ನಾಲ್ಕು ಪಟ್ಟು ಆಮ್ಲಜನಕ ಕಡಿಮೆ ಇರುವ ಡೆಮುಲ್ ಭೌಗೋಳಿಕವಾಗಿ ಅದ್ಭುತ ಲ್ಯಾಂಡ್​ಸ್ಕೇಪು. ಇರುವ ಅರವತ್ತೈದು ಮನೆಗಳಲ್ಲಿ ಪ್ರತೀ ಮನೆಯೂ ಪೇಯಿಂಗ್ ಗೆಸ್ಟ್​ಹೌಸುಗಳೇ. ಆದರೆ ಸರದಿಯ ಮೇಲೆ ಅತಿಥಿಗಳಿಗೆ ಮನೆ ಒದಗಿಸಲು ಒಬ್ಬ ಮುಖಂಡ ನಿಯಮಿತನಾಗಿದ್ದು ಸಮಾನವಾಗಿ ಎಲ್ಲರಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳುತ್ತಾನೆ. ಇದರಿಂದ ಪ್ರತಿ ಮನೆಗೂ ಸಮಾನ ಆದಾಯ. ಆದಾಗ್ಯೂ ಮನೆಗಳು ಖಾಲಿ ಇರುವ ಸಮಯ ತುಂಬ ಕಮ್ಮಿ.

ಕೆಲವೊಮ್ಮೆ ತಾತ್ಪೂರ್ತಿಕ ಗುಡಾರ ಎಬ್ಬಿಸಿ ಬಂದವರನ್ನು ಉಪಚರಿಸುವ ಕ್ರಮ ಕೈಗೊಂಡಿದ್ದೂ ಇದೆ. ಅತಿಥಿ ಉಪಚಾರಕ್ಕೆ, ಸೇವೆಗೆ ಡೆಮುಲ್ ಎಲ್ಲಕ್ಕಿಂತ ಎರಡು ಕೈ ಹೆಚ್ಚಿಗೆ ಇರುವ, ಎರಡು ಪಟ್ಟು ಹೆಚ್ಚಿನ ಸಮಯ ಮೀಸಲಿಡುವ ಜನರಿಗೆ, ಎರಡು ಕಾರ್ಯ ನಿರಂತರ ಕಾಯ್ದಿರುತ್ತದೆ. ಒಂದು ಬರುವ ಚಾರಣಿಗರಿಗೆ ಸೌಲಭ್ಯ, ಸೇವೆ ನೀಡುವುದು. ಎರಡನೆಯದ್ದು ಎಂಥದ್ದೇ ಪರಿಸ್ಥಿತಿಯಲ್ಲೂ ಡೆಮುಲ್​ನ ಪುರುಷರು ಸರದಿಯ ಮೇರೆಗೆ ಲಿಡಾಂಗ್​ಗೆ ಹೋಗಿ ಸರಂಜಾಮು ತರುವುದು. ಪ್ರತಿ ಶನಿವಾರ ಒಂದು ತಂಡ ಗುಂಪಾಗಿ ಕೆಳಗಿಳಿದರೆ ಮಂಗಳವಾರ ರಾತ್ರಿಗೆ ಮರಳಿ ಬರುತ್ತದೆ. ಕೆಲವೊಮ್ಮೆ ಮರುದಿನ. ಮತ್ತೆ ಇನ್ನೊಂದು ತಂಡ ಶನಿವಾರ ಯಾದಿ ಸಿದ್ಧಪಡಿಸಿಕೊಂಡು ಕೆಳಕ್ಕೆ ಹೊರಡುತ್ತದೆ.

ಇದಕ್ಕೂ ಸರದಿಯ ಪ್ರಕಾರ ಊರ ಜನವೆಲ್ಲ ಒಳಗೊಳ್ಳುವುದರಿಂದ ಯಾವ ಬಾಧೆ ಇಲ್ಲದೆ ಊರಿನ ಅಷ್ಟೂ ಅಗತ್ಯತೆ ಪೂರೈಕೆಯಾಗುತ್ತಿರುತ್ತದೆ. ನಿರಂತರ ದುಡಿಮೆ, ಶುದ್ಧ ಪರಿಸರ ಮತ್ತು ತಾವೇ ಬೆಳೆದು ಜೋಪಾನವಾಗಿ ಕಾಯ್ದಿರಿಸಿಕೊಳ್ಳುವ ಶುದ್ಧ ಆಹಾರೋತ್ಪನ್ನ ಇವರ ಆರೋಗ್ಯದ ಗುಟ್ಟು. ಊರಿನ ಮಹಿಳೆಯರು ಅತಿಥಿ ಉಪಚಾರದ ಇತರ ಕಾರ್ಯಗಳನ್ನು ಪೂರೈಸುತ್ತಿರುತ್ತಾರೆ. ಮಕ್ಕಳಿಗಾಗಿ ಒಂದು ಶಾಲೆಯೂ ಇಲ್ಲಿ ಕಣ್ಬಿಟ್ಟಿದೆ. ಒಮ್ಮೆ ಮೇಲೆ ಬರುವ ಮೇಷ್ಟ್ರು ಮತ್ತೆ ಕೆಳಕ್ಕೆ ಹೋಗಲಾರ. ಸರ್ಕಾರಿ ಸವಲತ್ತು ಇತ್ಯಾದಿ ಮನೆಬಾಗಿಲಿಗೆ ತಲುಪುತ್ತದೆ. ಮೇ ನಂತರ ಪರ್ವತಗಳೆಲ್ಲ ಬೋಳಾಗುತ್ತ, ನೆಲವೆಲ್ಲ ಹಸಿರಾಗಿ ನಿಲ್ಲುವ ವಿಸ್ಮಯದ ಜೊತೆಗೆ ಬೆಳಕು, ಸಂಜೆಗಳ ಸೂರ್ಯನ ವಿನ್ಯಾಸದ ಬೆಳಕಿನಾಟ ಡೆಮುಲ್​ನಲ್ಲಿ ಮಾತ್ರ ಸಾಧ್ಯ. ಅದೆಲ್ಲ ವಿವರಿಸಲಸಾಧ್ಯವಾದ ಭೂಮುಖದ ದೃಶ್ಯಕಾವ್ಯ.

(ಲೇಖಕರು ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net