ಧ್ಯೇಯಕ್ಕಾಗಿ ಜೀವ ತೆತ್ತ ನೈಜ ನೇತಾರ

Untitled design (4)
Published on

ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ್ದರ ವಿರುದ್ಧ ಜೀವನದುದ್ದಕ್ಕೂ ಹೋರಾಡಿ, ಅದೇ ಧ್ಯೇಯಕ್ಕಾಗಿ ಜೀವ ತೆತ್ತ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು ಭಾರತದ ನಿಜವಾದ ರಾಷ್ಟ್ರವಾದಿ ನೇತಾರರಲ್ಲೊಬ್ಬರು. ಹಿಂದುತ್ವದ ಪ್ರಬಲ ಪ್ರತಿಪಾದಕರು. ಅವರು ಜನಿಸಿದ್ದು 1901ರ ಜುಲೈ 6ರಂದು. ಅವರ ತಂದೆ ಅಶುತೋಷ ಮುಖರ್ಜಿ ಕಲ್ಕತ್ತಾ ಹೈಕೋರ್ಟಿನ ಖ್ಯಾತ ನ್ಯಾಯವಾದಿಗಳೂ, ನಂತರ ನ್ಯಾಯಾಧೀಶರೂ ಆಗಿದ್ದರು. ಮೇಧಾವಿ ವಿದ್ವಾಂಸರಾಗಿದ್ದ ಡಾ. ಶ್ಯಾಮಪ್ರಸಾದ್ 1934ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ತಮ್ಮ ಸಾರ್ವಜನಿಕ ಜೀವನ ಪ್ರಾರಂಭಿಸಿದರು. ಭಾರತ ಬಿಟ್ಟು ತೊಲಗಿ ಚಳವಳಿಯ ಕಾಲದಲ್ಲಿ ಇಂಗ್ಲಿಷರ ರಾಜ್ಯಭಾರ ಭಯಾನಕವಾಗಿದ್ದುದನ್ನು ನೋಡಿ ಇವರೂ ಹೋರಾಟಕ್ಕೆ ಇಳಿದರು. 1943ರಲ್ಲಿ ಬಂಗಾಲ ಪ್ರಾಂತದಲ್ಲಿ ಬಿದ್ದ ಭೀಕರ ಬರಗಾಲದಿಂದ ಜನತೆ ತತ್ತರಿಸಿತು. ಆಗ ಅವರು ಜನರ ಸೇವೆ ಮಾಡಿ ನಿಜವಾದ ನಾಯಕರೆನಿಸಿಕೊಂಡರು. ಅವರು ಬದುಕಿದ್ದು ಕೇವಲ 52 ವರ್ಷ. ಸ್ವಾತಂತ್ರ್ಯಾನಂತರ ಪಂ. ಜವಾಹರಲಾಲ ನೆಹರು ಅವರ ನೇತೃತ್ವದಲ್ಲಿ ರಚನೆಗೊಂಡ ಮಂತ್ರಿಮಂಡಲದಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರೂ ಇದ್ದರು. ಸಂಪುಟ ಸೇರಲು ಇವರನ್ನು ಮಹಾತ್ಮಾ ಗಾಂಧಿ ಒತ್ತಾಯಿಸಿದ್ದರು. ನಂತರ ನೆಹರು ಅವರಿಂದ ಅಧಿಕೃತ ಕರೆಯೂ ಬಂದಿತ್ತು. ಇವರಂತೆಯೇ ನೇಮಕವಾದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್.

ಕಾಶ್ಮೀರದ ಬಗ್ಗೆ ಅವರು ತುಂಬಾ ನಿಖರ ಮತ್ತು ರಾಷ್ಟ್ರೀಯತ್ವದ ನಿಲುವನ್ನು ನಿರ್ಭೀತವಾಗಿ ವ್ಯಕ್ತಪಡಿಸುತ್ತಿದ್ದರು. ಪೂರ್ವ ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರ ಬಗ್ಗೆ ಮತ್ತು ಕಾಶ್ಮೀರ ವಿಷಯದ ಬಗ್ಗೆ ನೆಹರು ಹೊಂದಿದ್ದ ನೀತಿಯನ್ನು ಬಹಿರಂಗವಾಗಿಯೇ ಖಂಡಿಸುತ್ತಿದ್ದರು. ಇದು ತಾರಕಕ್ಕೆ ಹೋದಾಗ ಅನಿವಾರ್ಯವಾಗಿ ಡಾ. ಮುಖರ್ಜಿ ಅವರು ನೆಹರು ಸಂಪುಟದಿಂದ ಹೊರಬಂದರು. 1951ರ ಅಕ್ಟೋಬರ್ 21ರಂದು ಅವರ ಪ್ರಯತ್ನದ ಫಲವಾಗಿ ಭಾರತೀಯ ಜನಸಂಘ ಅಸ್ತಿತ್ವಕ್ಕೆ ಬಂದಿತು. ದೇಶದ ಮೊದಲ ಸಾರ್ವತ್ರಿಕ ಚುನಾವಣೆ 1952ರಲ್ಲಿ ನಡೆದಾಗ ಜನಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು ದಕ್ಷಿಣ ಕಲ್ಕತ್ತಾ ಮತಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಚುನಾಯಿತರಾದರು. ಮುಂದೆ ಒಂದೇ ತಿಂಗಳಲ್ಲಿ ಜನಸಂಘ, ಹಿಂದೂ ಮಹಾಸಭಾ, ರಾಮರಾಜ್ಯ ಪರಿಷತ್, ಜನತಂತ್ರ ಪರಿಷತ್ ಮತ್ತು ಕೆಲವು ಪಕ್ಷೇತರ ಸದಸ್ಯರನ್ನು ಒಗ್ಗೂಡಿಸಿದರು. ಕಾಂಗ್ರೆಸ್​ಗೆ ಪ್ರಬಲ ಪ್ರತಿಪಕ್ಷವಾಗಿ ಮತ್ತು ಸಮರ್ಥ ನಾಯಕರಾಗಿ ಅವರು ಸಂಸತ್ತಿನಲ್ಲಿ ತಮ್ಮ ಛಾಪನ್ನು ಒತ್ತಿದರು.

ತಮ್ಮ ಜೀವಿತದ ಕೊನೆಯ 15 ತಿಂಗಳುಗಳ ಸಮಯವನ್ನೆಲ್ಲ ಜಮ್ಮು ಮತ್ತು ಕಾಶ್ಮೀರವು ಭಾರತದೊಡನೆ ವಿಲೀನವಾಗುವ ಧ್ಯೇಯಕ್ಕೆ ಅರ್ಪಿಸಿದರು. ಕಾಶ್ಮೀರದ ಪ್ರಧಾನಿ ಎಂದುಕೊಳ್ಳುತ್ತಿದ್ದ ಶೇಖ್ ಅಬ್ದುಲ್ಲಾ ಅವರ ಪ್ರತ್ಯೇಕತೆ ಪರವಾದ ನೀತಿಗಳು; ರಾಷ್ಟ್ರೀಯವಾದಿಗಳನ್ನು ಧಿಕ್ಕರಿಸಿ ಪ್ರತ್ಯೇಕತಾವಾದಿಗಳನ್ನು ಪ್ರಚೋದಿಸುತ್ತಿದ್ದ ಶೇಖ್ ಅವರ ನೀತಿಯನ್ನು ಖಂಡತುಂಡವಾಗಿ ವಿರೋಧಿಸಿದವರಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರೇ ಪ್ರಮುಖರು. ‘ನಮ್ಮ ಸಂವಿಧಾನವು ಭಾರತದ ಜನತೆಗೆ ಯಾವ ಮೂಲಭೂತ ಹಕ್ಕುಗಳನ್ನು ಕೊಟ್ಟಿವೆಯೋ ಅವುಗಳಿಗೆ ಜಮ್ಮು ಕಾಶ್ಮೀರದ ಜನ ಅರ್ಹರಲ್ಲವೇ? ಶೇಖ್ ಅಬ್ದುಲ್ಲಾ ಅವರನ್ನು ಕಾಶ್ಮೀರದ ಚಕ್ರವರ್ತಿಯನ್ನಾಗಿ ಯಾರು ಮಾಡಿದರು? ಸಾರ್ವಭೌಮ ಗಣರಾಜ್ಯದೊಳಗೆ ಇನ್ನೊಂದು ಸಾರ್ವಭೌಮ ಗಣರಾಜ್ಯವನ್ನು ಸೃಷ್ಟಿಸಲು ನಾವು ಹಾಗೆ ಮಾಡಿದೆವೇ? ಸರ್ದಾರ್ ವಲ್ಲಭ ಭಾಯಿ ಪಟೇಲರು ದೇಶದ ಎಲ್ಲ ಸಂಸ್ಥಾನಗಳನ್ನು ವಿಲೀನಗೊಳಿಸುವಾಗ ಪ್ರತ್ಯೇಕ ಸಂವಿಧಾನದ ಬಗ್ಗೆ ಏನಾದರೂ ಪ್ರಸ್ತಾಪ ಮಾಡಿದ್ದರೇ? ಹಾಗಿದ್ದಲ್ಲಿ ಕಾಶ್ಮೀರಕ್ಕೆ ಒಂದು ನೀತಿ ಹಾಗೂ ಈಗಾಗಲೇ ವಿಲೀನಗೊಂಡ ಸಂಸ್ಥಾನಗಳಿಗೆ ಇನ್ನೊಂದು ನೀತಿ ಆದಂತಾಗುವುದಿಲ್ಲವೇ?’ ಎಂಬ ತಮ್ಮ ಪ್ರಖರ ವಿಚಾರಧಾರೆಯ ಮೂಲಕ ಅವರು ಆಡಳಿತ ಪಕ್ಷವನ್ನು ಮತ್ತು ಜನತೆಯನ್ನು ಎಚ್ಚರಿಸುತ್ತಲೇ ಇದ್ದರು.

ಅವರು ತಮ್ಮ 33ನೇ ವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡರು. ಅವರಿಗೆ ನಾಲ್ವರು ಮಕ್ಕಳಿದ್ದರು. ಮರುಮದುವೆ ಮಾಡಿಕೊಳ್ಳುವ ವಯಸ್ಸು ತಮ್ಮದಿದ್ದರೂ ಅದನ್ನು ನಿರ್ಲಕ್ಷಿಸಿದ ಅವರು ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ವಿರುದ್ಧ ಚಳವಳಿ ನಡೆಸಿ, 1953ರ ಮೇ 11ರಂದು ಬಂಧನಕ್ಕೊಳಗಾದರು. ಜೂ. 23ರಂದು ಅವರು ಮರಣ ಹೊಂದಿದ್ದಾರೆಂದು ಕಾಶ್ಮೀರದ ಶೇಖ್ ಅಬ್ದುಲ್ಲಾರ ಸರಕಾರ ಘೊಷಿಸಿತು. ‘ಪೋಲಿ, ಪುಂಡರನ್ನು ಅವರವರ ರಾಜ್ಯಗಳಿಗೆ ಗಡಿಪಾರು ಮಾಡುತ್ತಿರುವಾಗ ಮುಖರ್ಜಿ ಅವರನ್ನು ಬಂಧಿಖಾನೆಯಲ್ಲಿಟ್ಟಿದ್ದೇಕೆ? ದಿಲ್ಲಿಗೆ ಇಲ್ಲವೇ ಕಲ್ಕತ್ತೆಗೆ ಏಕೆ ಕಳಿಸಲಿಲ್ಲ?’ ಎಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಹಲವರು ಪ್ರಶ್ನಿಸಿದ್ದರು. ಈ ಕುರಿತ ಹಲವಾರು ವಿಷಯಗಳನ್ನು ಖ್ಯಾತ ಪತ್ರಕರ್ತ ಕೆ.ಆರ್. ಮಲ್ಕಾನಿ ತಮ್ಮ ‘ಪಾಲಿಟಿಕಲ್ ಮಿಸ್ಟರೀಸ್’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ನಿಧನಕ್ಕೆ 30 ದಿನ ಮುಂಚಿನಿಂದಲೂ ಡಾ. ಮುಖರ್ಜಿ ಎಲ್ಲಿದ್ದಾರೆಂದು ಗೊತ್ತಾಗದ ಕಾರಣ ನ್ಯಾಯವಾದಿ ಯು.ಎಂ. ತ್ರಿವೇದಿ, ಕಾಶ್ಮೀರ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಕಿಮ್ ವಿಚಾರಣೆ ಮಾಡಿದರು. ಮರುದಿನವೇ ತೀರ್ಪು ಬರುವುದಿತ್ತು. ಡಾ. ಮುಖರ್ಜಿ ಬಿಡುಗಡೆ ಆಗುತ್ತಾರೆಂಬ ಖಾತ್ರಿ ಇತ್ತು. ಅದೇ ವೇಳೆಗೆ ಅವರನ್ನು ಶ್ರೀನಗರದ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ತ್ರಿವೇದಿ ಆಸ್ಪತ್ರೆಗೆ ತೆರಳಿ ನೋಡಿದಾಗ ಡಾ. ಮುಖರ್ಜಿ ಆರೋಗ್ಯದಿಂದಲೇ ಇದ್ದರು. ತ್ರಿವೇದಿ ಅಲ್ಲಿಂದ ಹೊರಟ ಮೇಲೆ ರಾತ್ರೋರಾತ್ರಿ ಡಾ. ಮುಖರ್ಜಿ ನಿಧನರಾದರು. ಎಲ್ಲ ಪಕ್ಷಗಳು ಈ ನಿಗೂಢ ಸಾವಿನ ಸತ್ಯಶೋಧಕ್ಕೆ ಒತ್ತಾಯಿಸಿದರೂ ಪ್ರಯೋಜನವಾಗಲಿಲ್ಲ.

ಅವರು ಸ್ಥಾಪಿಸಿದ ಭಾರತೀಯ ಜನಸಂಘವೇ 1980ರಲ್ಲಿ ಭಾರತೀಯ ಜನತಾ ಪಕ್ಷವಾಗಿ ರೂಪಾಂತರಗೊಂಡಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು (ಕಲಂ) ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ದಿಟ್ಟ ನಿರ್ಧಾರದ ಮೂಲಕ ರದ್ದುಪಡಿಸಲಾಯಿತು. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎನ್ನುವ ನಮ್ಮ ನೀತಿಯು ಈ ಮೂಲಕ ವಾಸ್ತವವಾಗಿ ಜಾರಿಗೆ ಬಂದಿತು. ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ರಾಷ್ಟ ಧ್ವಜ ಮುಂತಾದವುಗಳೆಲ್ಲವೂ ರದ್ದುಗೊಂಡವು. ಅಲ್ಲದೆ, ಹಿಂದೂಗಳಿಗೂ ಸಮಾನ ಹಕ್ಕುಗಳು ದೊರೆತವು.

ಇವೆಲ್ಲ ರಾಷ್ಟ್ರೀಯ ವಿಚಾರಗಳಿಗೆ ಮೂಲ ದ್ರವ್ಯವಾದವರು ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು. ಅವರ ಸೇವೆ ಅನನ್ಯ ಅಷ್ಟೇ ಅಲ್ಲ, ರಾಷ್ಟ್ರೀಯ ವಿಚಾರಗಳಿಗೆ ಅಸ್ಥಿಭಾರವನ್ನೇ ಹಾಕಿದ ದ್ರಷ್ಟಾರ ಕೂಡ ಅವರೇ. 1951ರಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು ಸ್ಥಾಪಿಸಿದ ಭಾರತೀಯ ಜನಸಂಘ ಎಂಬ ಸಸಿಯು ಈಗ ಬಿಜೆಪಿ ಎಂಬ ಹೆಮ್ಮರವಾಗಿ ಸಂಪೂರ್ಣ ರಾಷ್ಟ್ರಕ್ಕೆ ನೆರಳು ಒದಗಿಸುತ್ತಿದೆ. ಅಂದಾಜು 19 ಕೋಟಿ ಕಾರ್ಯಕರ್ತರ ಪಡೆಯನ್ನು ಹೊಂದುವ ಮೂಲಕ ದೇಶ ಮಾತ್ರವಲ್ಲದೆ, ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ರೂಪುಗೊಂಡಿದೆ. ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ಜನ ಬೆಂಬಲದೊಂದಿಗೆ ಅಧಿಕಾರ ಗಳಿಸುವ ಮೂಲಕ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಮಾಡುತ್ತ ಡಾ. ಮುಖರ್ಜಿ ಅವರ ಕನಸನ್ನು ನನಸಾಗಿಸುವ ದಿಸೆಯಲ್ಲಿ ಮುನ್ನಡೆದಿದೆ. ಇಂತಹ ಪಕ್ಷದಲ್ಲಿ ನಾವೆಲ್ಲರೂ ಕಾರ್ಯಕರ್ತರಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ನಿಜವಾಗಿಯೂ ನಮಗೆಲ್ಲರಿಗೂ ಹೆಮ್ಮೆಯ ಹಾಗೂ ಅಭಿಮಾನಪಡುವ ಸಂಗತಿಯಾಗಿದೆ.

(ಲೇಖಕರು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಮತಕ್ಷೇತ್ರದ ಶಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net