

| ವಿಶ್ವನಾಥ ಚಕ್ರವರ್ತಿ
ಧಾರ್ವಿುಕ ಪಾದಯಾತ್ರೆಗಳು ಗುರಿ ತಲುಪಲು ಹಲವಾರು ಊರು ಕೇರಿಗಳನ್ನು ಹಾಯ್ದು ಹೋಗುತ್ತವೆ. ಹಾಗೆ ಹೋಗುವಾಗ ಆಯಾ ಊರು ಕೇರಿಗಳ ಜನರೂ ದೇವರ ನಾಮ ಸಂಕೀರ್ತನೆ ಭಜನೆಗಳಲ್ಲಿ ತಲ್ಲೀನರಾಗುತ್ತಾರೆ. ಅನಾಯಾಸವಾಗಿ ಅವರ ಮನಸ್ಸು ಧಾರ್ವಿುಕ ಭಾವನೆಯತ್ತ ತಿರುಗುತ್ತದೆ. ಇಂಥದೇ ಒಂದು ಪಾದಯಾತ್ರೆ ನ. 26ರಂದು ಆರಂಭವಾಗಿದ್ದು, ಡಿ. 10ರಂದು ಕೊನೆಗೊಳ್ಳಲಿದೆ.
ಉತ್ತರ ಕರ್ನಾಟಕದ 36 ಹಳ್ಳಿಗಳಿಂದ 15 ದಿನಗಳ ಹಿಂದೆ ಆರಂಭವಾಗಿರುವ ಧಾರ್ವಿುಕ ಪಾದಯಾತ್ರೆ ಯೊಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಇದು ಕೆಂಗೇರಿ ಮುರುಗೋಡಿನತ್ತ ಪ್ರಯಾಣ ಬೆಳೆಸಿದ್ದು, ಇನ್ನೆರಡು ದಿನಗಳಲ್ಲಿ ಗಮ್ಯ ತಲುಪಲಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕು ಮುರುಗೋಡಿನಲ್ಲಿರುವ ಈ ಪುಣ್ಯ ಕ್ಷೇತ್ರ ಅಯೋನಿಜರಾದ ಮತ್ತು ಅಷ್ಟ ವರ್ಷಾತ್ಮಕರಾಗಿ, ಶಿವಸ್ವರೂಪಿಯಾಗಿ ಆವಿರ್ಭವಿಸಿ, ಅನಂತ ಲೀಲೆಗಳನ್ನು ಪ್ರದರ್ಶಿಸಿದ ಚಿದಂಬರ ಮಹಾಸ್ವಾಮಿಗಳ ಪುಣ್ಯಭೂಮಿ.ಮಹಾವಿಷ್ಣುವಿನ ಅವತಾರವಾದ ಜ್ಞಾನೇಶ್ವರ ಮಹಾರಾಜರು ವಾರ್ಕರಿ ಸಂಪ್ರದಾಯವನ್ನು ಪ್ರಾರಂಭಿಸಿದರು.
ಆಳಂದಿಯಿಂದ ಪಂಡರಾಪುರಕ್ಕೆ ಮೊದಲ ಪಾದಯಾತ್ರೆ ಪ್ರಾರಂಭವಾಯಿತು. ನಂತರ ಏಕನಾಥ, ನಾಮದೇವ, ತುಕಾರಾಮ, ರಾಜಾರಾಮ ಮಹಾ ರಾಜರು, ಸಂತಮಾತಾ ವಿಠಾಬಾಯಿಯಂಥ ಧೀಮಂತ ಶ್ರೇಷ್ಠ ಸಂತರು ಈ ಸಂಪ್ರದಾಯವನ್ನು ದೇಶದ ಉದ್ದಗಲಕ್ಕೂ ಪ್ರಸಾರ ಮಾಡಿದರು. ಇದರಲ್ಲಿ ಅತ್ಯಂತ ಮಹತ್ವದ ಘಟ್ಟವಾದ ಈ ಪಾದಯಾತ್ರೆಯಲ್ಲಿ ಭಕ್ತರು ನಾಮಸ್ಮರಣೆ ಮಾಡುತ್ತ ದಾರಿಯುದ್ದಕ್ಕೂ ಭಜನೆ ಕೀರ್ತನೆಗಳನ್ನು ಶ್ರವಣ ಮಾಡುತ್ತ ಮುನ್ನಡೆಯುತ್ತಾರೆ. ಯಾತ್ರಾರ್ಥಿಯು ತನ್ನ ದೇಹವನ್ನು ದಂಡಿಸುತ್ತ, ದೇಹಭಾವವನ್ನು ಕಳೆದುಕೊಳ್ಳುತ್ತಾನೆ. ಪಾದಯಾತ್ರೆಯ ಉದ್ದೇಶವು ಸ ಕಾಮವೇ ಇರಲಿ ನಿಷ್ಕಾಮವೇ ಇರಲಿ ಅದು ಭಗವಂತನ ಅನುಪಮ ಸೇವೆಯಾಗಿದೆ. ಮುಖ್ಯವಾಗಿ ಪಾದಯಾತ್ರಿಗಳು ತಮ್ಮ ದೇಹದ ಅನೇಕ ನ್ಯೂನತೆಗಳನ್ನು ಬದಿಗೊತ್ತಿ ದೇವರ ಸೇವೆಯಲ್ಲಿ ತೊಡಗಿರುತ್ತಾರೆ. ಇಷ್ಟದೈವದ ಕಡೆಗೆ ಆ ಪುಣ್ಯಕ್ಷೇತ್ರಕ್ಕೆ ತಲುಪುವವರೆಗೂ ಬ್ರಹ್ಮಾನಂದ ಸುಖದಲ್ಲಿ ಇರುತ್ತಾರೆ. ಪಾದಯಾತ್ರೆಗೆ ನಾನಾ ಜಾತಿಯವರು ಶ್ರದ್ಧಾ ಭಕ್ತಿಯಿಂದ ಬಂದಿರುತ್ತಾರೆ. ಅವರೆಲ್ಲರೂ ಒಂದೇ ಕುಟುಂಬದವರಂತೆ ಅನ್ಯೋನ್ಯತೆಯಿಂದ ನಡೆದುಕೊಳ್ಳುತ್ತಾರೆ. ದಾರಿಯುದ್ದಕ್ಕೂ ಅನೇಕ ಗ್ರಾಮಗಳಲ್ಲಿ ನೂರಾರು ಜನರು ತಳಿರು ತೋರಣಗಳಿಂದ ಶೃಂಗರಿಸಿ, ರಂಗವಲ್ಲಿ ಹಾಕಿ ಸಾಕ್ಷಾತ್ ಭಗವಂತನೇ ಆಗಮಿಸಿದ್ದಾನೆ ಎಂಬ ಭಾವದಿಂದ ಪಾದಯಾತ್ರಿಗಳನ್ನು ಸ್ವಾಗತಿಸುತ್ತಾರೆ. ತಮಗೆ ತೃಪ್ತಿಯಾಗುವಷ್ಟು ಅನ್ನದಾನ ಮಾಡಿ ಪುನೀತರಾಗುತ್ತಾರೆ. ಪಾದಯಾತ್ರೆಯಲ್ಲಿ ಬಂದ ವ್ಯಕ್ತಿ ಮೊದಲು ಎಂತಹ ಪ್ರವೃತ್ತಿಯವರಾಗಿದ್ದರೂ ಯಾತ್ರೆಯಲ್ಲಿ ನಡೆಯುವ ಭಜನೆ ಕೀರ್ತನೆಯಿಂದ ಅದರಲ್ಲಿರುವ ಅನೇಕ ನೀತಿಬೋಧಕ ಕಥೆಗಳನ್ನು ಕೇಳಿ ತನ್ನ ಜೀವನದ ದಾರಿ ಬದಲಾಯಿಸಿಕೊಳ್ಳುತ್ತಾರೆ. ಪಾದಯಾತ್ರೆ ಎಂದರೆ ಭಗವಂತನನ್ನು ಸಾಕ್ಷಾತ್ಕಾರ ಗೊಳಿಸಿಕೊಳ್ಳುವ ಅತ್ಯಂತ ಸಹಜ ಉಪಾಸನಾ ಮಾರ್ಗವಾಗಿದೆ.
ಭಗವಂತನೇ ರಕ್ಷಿಸುತ್ತಾನೆ...
ಪಾದಯಾತ್ರಿಗಳನ್ನು ಭಗವಂತನು ಹೇಗೆ ರಕ್ಷಿಸುತ್ತಾ ನೆಂದರೆ ಅವರು ಆ ಕ್ಷೇತ್ರ ತಲುಪುವವರೆಗೂ ಅನೇಕ ಊರುಗಳಲ್ಲಿ ಅನೇಕ ರೀತಿಯ ಆಹಾರ, ನೀರನ್ನು ಕುಡಿದರೂ ಅನಾರೋಗ್ಯ ಕಾಡದು. ಬೆಳಗಿನ ಹೊತ್ತು ಚಳಿಯಲ್ಲಿ, ಮಧ್ಯಾಹ್ನ ಬಿಸಿಲಿನಲ್ಲಿ ನಡೆದರೂ ಬಳಲಿಕೆ ಆಗದು. ಏಕೆಂದರೆ ಅವರು ಭಗವಂತನ ಅಖಂಡ ನಾಮ ಸ್ಮರಣೆ ಮಾಡುತ್ತ ಭಗವಂತನನ್ನು ಸ್ಮರಿಸುತ್ತಾ ಹೆಜ್ಜೆ ಹಾಕುತ್ತಾರೆ. ಇದು ಭಗವಂತನ ರಕ್ಷಾಕವಚವಾಗಿದೆ. ಕೆಲ ವೊಮ್ಮೆ ಭಗವಂತನು ಅನೇಕ ರೀತಿಯ ಪರೀಕ್ಷೆ ಒಡ್ಡು ತ್ತಾನೆ, ಭಕ್ತಿಯನ್ನು ಪರೀಕ್ಷಿಸುತ್ತಾನೆ. ವಿಚಿತ್ರವೆಂದರೆ ಪಾದಯಾತ್ರೆ ನಡೆಯುವಾಗ ದಾರಿ ತಪ್ಪಿಸಿ ಭಗವಂತನು ನಾನಾ ರೂಪದಲ್ಲಿ ಬಂದು ಅವರನ್ನು ಸರಿಯಾದ ದಾರಿಗೆ ಸೆಳೆಯುತ್ತಾನೆ.
ವೀಣಾಧಾರಿಗೆ ವಿಶೇಷ ಗೌರವ: ಪಾದಯಾತ್ರೆಗಳಲ್ಲಿ ವೀಣೆ ಕರಿ ಮಹಾರಾಜ್ ಇವರಿಗೆ ವಿಶೇಷ ಗೌರವ. ವೀಣೆಯನ್ನು ಧರಿಸಿದವರು ಅತ್ಯಂತ ಶುದ್ಧ ಭಾವದಿಂದ ನಡೆದುಕೊಳ್ಳಬೇಕಾಗುತ್ತದೆ. ಇಲ್ಲಿ ವೀಣೆಯೇ ಭಗವಂತನ ಸ್ವರೂಪ. ಅದನ್ನು ಪ್ರಾರಂಭಿಸಿದ ಊರಿನಿಂದ ಕ್ಷೇತ್ರ ತಲುಪುವವರೆಗೂ ಕೆಳಗೆ ಇಡುವಂತಿಲ್ಲ, ಅಖಂಡ ನಾಮಸ್ಮರಣೆ ಮಾಡುತ್ತಾ ವೀಣೆಯನ್ನು ಧರಿಸಿರಬೇಕಾಗುತ್ತದೆ. ಪಾದರಕ್ಷೆ ಧರಿಸದೆ ಮುಳ್ಳು ಕಲ್ಲುಗಳೆನ್ನದೆ ನಡೆಯಬೇಕಾಗುತ್ತದೆ. ಅಭಂಗವನ್ನು, ಹಾಡನ್ನು ಹಾಡುವವರಿಗೆ ತಾಳ ಮೃದಂಗದವರು ಸಹಾಯಕರಾಗಿ ಸ್ಪಂದಿಸುತ್ತಾರೆ. ಪಾದಯಾತ್ರೆಯಲ್ಲಿ ಮೃದಂಗ ಮತ್ತು ತಾಳಗಳ ನಿನಾದವು ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತದೆ.