ಪೆಟ್ಟುಗಳ ಮೆಟ್ಟಿ ನಿಂತ ಜ್ಯೋತಿ; ನ್ಯೂನತೆ ಮನಸ್ಸಿಗೆ ದೇಹಕ್ಕಲ್ಲ!

JYOTI
Published on

ದುಡಿಯಲು ಶಕ್ತಿ ಇದ್ದರೂ ಉದ್ಯೋಗ ಸಿಗುತ್ತಿಲ್ಲ ಎಂದು ಗೋಳಾಡುವ ಯುವಜನರೇ ಹೆಚ್ಚು. ಕೆಲವರಿಗೆ ತಮ್ಮ ಪದವಿಗೆ ತಕ್ಕಂಥ ಉದ್ಯೋಗ ಸಿಗುತ್ತಿಲ್ಲ ಎಂಬ ಕೊರಗಾದರೆ, ಮತ್ತೆ ಕೆಲವರಿಗೆ ಸಂಬಳ ಕಡಿಮೆ, ಕೆಲಸದ ಅವಧಿ ಹೊಂದಿಕೆ ಆಗುವುದಿಲ್ಲ ಎಂಬ ನೆಪ. ಆದರೆ ದೇಹಕ್ಕೆ ಮೇಲಿಂದ ಮೇಲೆ ಪೆಟ್ಟುಬೀಳುತ್ತಿದ್ದರೂ, ಸೋಲನ್ನೊಪ್ಪದೆ ಮನೆಯಲ್ಲಿ ಕುಳಿತೇ ವಿದೇಶಿಗರಿಗೆ ಪಾಠ ಮಾಡುತ್ತಿದ್ದಾರೆ ಜ್ಯೋತಿ ಬೀಳಗಿ.

ಇಂದು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆದರೆ ಮನಸ್ಸೊಂದಿದ್ದರೆ, ಎಂಥ ಸಮಸ್ಯೆ ಇದ್ದರೂ ಅದನ್ನು ಮೆಟ್ಟಿನಿಂತು ಉದ್ಯೋಗ ಮಾಡಬಹುದು ಎನ್ನುತ್ತಿದ್ದಾರೆ ಅಂಗವಿಕಲೆಯಾಗಿರುವ ಜ್ಯೋತಿ ಬೀಳಗಿ.

ಅಮೆರಿಕದ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲೇ ಪಾಠ ಮಾಡುವ ಮೂಲಕ ಸಾಕಷ್ಟು ಹಣ ಸಂಪಾದನೆಯನ್ನು ಮಾಡುತ್ತಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದವರಾದ ಜ್ಯೋತಿ ಆರು ತಿಂಗಳ ಮಗುವಾಗಿದ್ದಾಗಲೇ ಪೋಲಿಯೋ ರೋಗಕ್ಕೆ ತುತ್ತಾದರು. ಚಿಕಿತ್ಸೆಗಾಗಿ ವೈದ್ಯರ ಬಳಿ ಅಲೆದಾಡಿದರೂ ಪ್ರಯೋಜನವಾಗಲಿಲ್ಲ.

ಆದರೆ ಈ ಬಾಲಕಿಯಲ್ಲಿದ್ದ ಮನೋಸ್ಥೈರ್ಯದ ಮುಂದೆ ದೈಹಿಕ ನ್ಯೂನತೆ ಕುಗ್ಗಿ ಹೋಯಿತು. ಛಲಗುಂದದ ಜ್ಯೋತಿ, ತೇರದಾಳದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಜೀಣ ಸೇನಾಚಾರ್ಯ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಪ್ರಭುಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. ವಿಜ್ಞಾನವನ್ನು ಪೂರೈಸಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯ ವಿದ್ಯಾರ್ಥಿನಿಯಾಗಿ ಕಲಾ ಪದವಿಯನ್ನು ಮುಗಿಸಿದ್ದುದು ಮಾತ್ರವಲ್ಲದೇ ಇಂಗ್ಲಿಷ್ ವಿಷಯದಲ್ಲಿ ಅತಿ ಹೆಚ್ಚು ಅಂಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮಾನಸಗಂಗೋತ್ರಿಯಲ್ಲಿ ಪೂರೈಸಿದರು. ಅಷ್ಟೇ ಅಲ್ಲದೆ, ಡಿ.ಎಡ್., ಬಿ.ಎಡ್. ಶಿಕ್ಷಣವನ್ನೂ ಪೂರ್ಣಗೊಳಿಸಿದರು.

ಸರ್ಕಾರಿ ಸೇವೆಗೆ ಸೇರಬೇಕೆಂಬ ಹೆಬ್ಬಯಕೆ ಹೊಂದಿದ್ದ ಜ್ಯೋತಿಯವರು ಸಾಕಷ್ಟು ಬಾರಿ ಅರ್ಜಿ ಹಾಕಿದರೂ ನೌಕರಿ ಲಭಿಸಲಿಲ್ಲ. ಹಾಗೆಂದು ಅದಕ್ಕಾಗಿಯೇ ಕಾದು ಕುಳಿತುಕೊಳ್ಳದ ಅವರು, ಸ್ಥಳೀಯ ಖಾಸಗಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಆದರೆ, 2014ರಲ್ಲಿ ಬೆನ್ನು ಮೂಳೆ ಸ್ಕೊಲಿಯಾಸಿಸ್ ಸಮಸ್ಯೆ ಕಾಣಿಸಿಕೊಂಡಿತು. ಶಾಲೆಯಲ್ಲಿ ಪಾಠ ಮಾಡುವುದು ತುಂಬಾ ತೊಂದರೆಯಾಗಿದ್ದರಿಂದ ಕೆಲಸವನ್ನು ಬಿಡಬೇಕಾದ ಅನಿವಾರ್ಯತೆ ಉಂಟಾಯಿತು.

ಬೇರೆ ಯಾರಾದರೂ ಆಗಿದ್ದರೆ ಜೀವನವೇ ಮುಗಿಯಿತು ಎಂದು ಕುಗ್ಗಿ ಹೋಗುತ್ತಿದ್ದರೇನೋ. ಆದರೆ ಜ್ಯೋತಿ ಅಳುತ್ತಾ ಕುಳಿತುಕೊಳ್ಳಲಿಲ್ಲ. ಸ್ವಂತ ಟ್ರೈ ಸೈಕಲ್​ನಿಂದ 6-8 ಕಿ.ಮೀ ದೂರದ ಪದ್ಮಾವತಿ ಇಂಟರ್​ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಗೆ ಬೋಧಕರಾಗಿ ಸೇರಿದರು. ಆದರೆ ಪುನಃ ಬೆನ್ನು ಮೂಳೆ ಸಮಸ್ಯೆ ವಿಪರೀತವಾಗಿ ಬೋಧನೆಯ ಕೆಲಸವನ್ನು ಬಿಟ್ಟು ಮನೆಗೆ ಸೇರಬೇಕಾಯಿತು. ಇಷ್ಟಾದರೂ ಅವರು ಎದೆಗುಂದಲಿಲ್ಲ. ಹೊರಗಡೆ ಕೆಲಸಕ್ಕೆ ಹೋಗಲು ತನ್ನ ದೇಹ ತನಗೆ ಸಹಕರಿಸುತ್ತಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಮನೆಯಲ್ಲಿಯೇ ಮಾಡುವಂತಹ ಕೆಲಸಗಳನ್ನು ಜಾಲತಾಣಗಳಲ್ಲಿ ತಡಕಾಡಿದರು.

ಆನ್​ಲೈನ್ ಪಾಠ: ವೆಬ್​ಸೈಟ್ ಒಂದರಲ್ಲಿ ಜ್ಯೋತಿ ಅವರಿಗೆ ಹೈದರಾಬಾದ್ ಮೂಲದ ಸಂಸ್ಥೆಯೊಂದರಲ್ಲಿ ಆನ್​ಲೈನ್ ಮೂಲಕ ವಿದೇಶಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೆಲಸ ಖಾಲಿ ಇದೆ ಎಂದು ತಿಳಿಯಿತು. ಅದಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿ ಸ್ವೀಕೃತವಾಗಿ, ಸಂದರ್ಶನವು ಆನ್​ಲೈನ್​ನಲ್ಲಿಯೇ ನಡೆಯಿತು. ಜ್ಯೋತಿಯವರು ಆನ್​ಲೈನ್ ಮುಖಾಂತರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡರು.

ಬೆಳಗ್ಗೆ 4.30 ರಿಂದ 8.30 ರವರೆಗೆ ಅಮೆರಿಕ, ಸೌದಿಅರೇಬಿಯಾ, ರಷ್ಯಾ ಹಾಗೂ ಜರ್ಮನಿ ದೇಶಗಳ ಮಕ್ಕಳಿಗೆ ಪಾಠ ಮಾಡುತ್ತಾರೆ. ಪ್ರತಿದಿನ ಕನಿಷ್ಠ ನಾಲ್ಕು ವಿದ್ಯಾರ್ಥಿಗಳಿಗೆ ಇವರು ಬೋಧನೆ ಮಾಡುತ್ತಿದ್ದಾರೆ. ಜೀವ ವಿಜ್ಞಾನ ಮತ್ತು ರಸಾಯನ ವಿಜ್ಞಾನದಲ್ಲಿ ಪಿಯುಸಿ ಮಾಡಿರುವ ಕಾರಣ, ಅದೇ ವಿಷಯವನ್ನು ಇವರು ಬೋಧಿಸುತ್ತಾರೆ. ಇನ್ನೂ ಹೆಚ್ಚೆಚ್ಚು ತಿಳಿದುಕೊಳ್ಳುವ ಸಂಬಂಧ ಅನೇಕ ಪುಸ್ತಕಗಳನ್ನು ಅಭ್ಯಸಿಸುತ್ತಿದ್ದಾರೆ. ‘ಇಂಗ್ಲಿಷ್ ಚೆನ್ನಾಗಿರುವುದರಿಂದ ಸುಲಭವಾಗಿ ಪಾಠ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾರೆ ಜ್ಯೋತಿ.

ವಿದ್ಯಾರ್ಥಿಗಳು ತೆಗೆದುಕೊಳ್ಳುವ ತರಗತಿಯ ಮೇಲೆ ಶುಲ್ಕ ನಿಗದಿಯಾಗುತ್ತದೆ. ಒಂದು ಗಂಟೆಯ ತರಗತಿಗೆ 175 ರೂ. ಇದೆ. ಪ್ರತಿದಿನ ನಾಲ್ಕು ಗಂಟೆ ಪಾಠ ಮಾಡುತ್ತಾರೆ. ಇವರಿಗೆ ಆನ್​ಲೈನ್ ಮೂಲಕವೇ ವೇತನ ಸಂದಾಯವಾಗುತ್ತದೆ. ‘ಇಂದಿನ ಯುವಜನತೆ ಸರ್ಕಾರಿ ನೌಕರಿ ಸಿಕ್ಕಿಲ್ಲವೆಂದು ನೊಂದುಕೊಳ್ಳುವುದಕ್ಕಿಂತ ನಮ್ಮದೇ ಆದ ಜ್ಞಾನದಿಂದ ಬೆಳೆಯಲು ಸಾಧ್ಯವಿದೆ. ದೈಹಿಕ ನ್ಯೂನತೆ ಎನ್ನುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ’ ಎನ್ನುವುದು ಇವರ ಮಾತು.

ಜ್ಯೋತಿ ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ತೆಗೆದುಕೊಂಡಿರುವುದಿಲ್ಲ. ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ಮಕ್ಕಳ ಮಾಣಿಕ್ಯ, ಯುವ ಸಾಧಕಿ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಜ್ಯೋತಿಯವರು ಭಾಜನರಾಗಿದ್ದಾರೆ.

| ಸುರೇಶ ಗುದಗನವರ ರಾಮದುರ್ಗ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net