ಸಮಕಾಲೀನ ಜಗತ್ತಿನಲ್ಲಾಗುತ್ತಿರುವ ಪಲ್ಲಟಗಳನ್ನು ವ್ಯಾಖ್ಯಾನಿಸುವಲ್ಲಿ ರಾಜಶೇಖರರ ದೃಷ್ಟಿಕೋನ ಸದ್ಯದ ಬಹುಪಾಲು ಕತೆಗಾರರಿಗಿಂತ ಭಿನ್ನವಾಗಿದೆ. ಬದಲಾವಣೆಯ ಬಗ್ಗೆ ಇನ್ನಿಲ್ಲದ ಉತ್ಸಾಹ ಅಥವಾ ಬದಲಾವಣೆಯಿಂದ ಹಳೆಯ ಜಗತ್ತಿನಲ್ಲಿ ಮೌಲಿಕವಾದುದೆಲ್ಲ ಕಳೆದುಹೋಗುತ್ತಿದೆ ಎಂಬ ವ್ಯಾಕುಲತೆ, ಹಳಹಳಿಕೆ - ಈ ಎರಡೂ ತುದಿ ನಿಲುವುಗಳಲ್ಲೇ ಕತೆಗಾರರು ಬರೆಯುತ್ತಾರೆ. ಇದರ ಬದಲಿಗೆ ಬದಲಾವಣೆ ಮತ್ತು ಪಲ್ಲಟವೆಂದರೆ ಕಳೆದುಕೊಳ್ಳುವುದು ಮತ್ತು ಪಡೆಯುವುದು ಎರಡೂ ಒಟ್ಟಿಗೇ ಜರುಗುತ್ತಿರುತ್ತದೆ ಎಂಬುದು ರಾಜಶೇಖರರ ದೃಷ್ಟಿಕೋನ. ‘ಒಂದೆಲಗದ ತಂಬುಳಿ’ ಕತೆಯ ಕರುಣಾಕರ ತನ್ನ ತಂದೆ ಬದುಕುತ್ತಿದ್ದ ಗ್ರಾಮ, ಪರಿಸರ, ಜೀವನಕ್ರಮದಿಂದ ಬಹುದೂರ ಬಂದಿದ್ದಾನೆ. ಯಶಸ್ಸನ್ನೂ ಪಡೆದಿದ್ದಾನೆ. ತಂದೆಯ ಮರಣದ ನಂತರ ಊರಿನ ಆಸ್ತಿ, ಭೂಮಿಯನ್ನೆಲ್ಲ ಹೇಗೆ ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಪುರೋಹಿತರು ಈ ಸವಾಲಿಗೆ ನೀಡುವ ಉತ್ತರದಲ್ಲಿ ರಾಜಶೇಖರರ ದೃಷ್ಟಿಕೋನ ವ್ಯಕ್ತವಾಗುತ್ತದೆ. ‘‘ಕಳೆದುಕೊಳ್ಳುವುದು, ಅದನ್ನು ಹುಡುಕುವುದು ಈ ನೆಲದ ಪರಂಪರೆ. ರಾಮ ಸೀತೆಯನ್ನು ಕಳಕೊಂಡ, ಮತ್ತೆ ಹುಡುಕಿದ. ಪಾಂಡವರು ರಾಜ್ಯ ಕಳಕೊಂಡರು, ಪಡಕೊಂಡರು. ನಾವೂ ಹಾಗೇ. ಕಳಕೊಳ್ಳುತ್ತೇವೆ, ಹುಡುಕುತ್ತೇವೆ. ಈಗ ನೀನೂ ಹಾಗೆ. ಕಳಕೊಂಡದ್ದನ್ನು ಗಳಿಸಿದ್ದೀಯ. ತಂದೆ ತಾಯಿಯನ್ನು ಕಳಕೊಂಡಿದ್ದೀಯ. ಅದೇನೋ ಭಯ ಅಂದೆಯಲ್ಲ ‘ಕಳಕೊಂಡರೆ’ ಎಂದು. ಹಾಗೇನಾದರೂ ಆದರೆ ಮಗ ಹುಡುಕಿಕೊಳ್ಳುತ್ತಾನೆ ಬಿಡು’’ (ಪುಟ-21). ಇದು ಭಿನ್ನ ದೃಷ್ಟಿಕೋನ ಮಾತ್ರವಲ್ಲ, ನಿರೂಪಣೆಗೆ ವಸ್ತುನಿಷ್ಠತೆಯನ್ನೂ ತಂದುಕೊಡುತ್ತದೆ ಎಂಬುದು ಮುಖ್ಯ. ಪಲ್ಲಟ, ಬದಲಾವಣೆಗಳನ್ನು ರಾಜಶೇಖರ್ ಹೊರಗಿನಿಂದಲೂ, ಒಳಗಿನಿಂದಲೂ ನೋಡುತ್ತಾರೆ. ಪಲ್ಲಟ, ಬದಲಾವಣೆ ನಾವೆಲ್ಲ ಮೇಲುಮೇಲೆ ಗ್ರಹಿಸುವಂತೆ, ನೇರವಾಗಿ ಚಲಿಸುವುದಿಲ್ಲ. ‘ಲಾಟೀನು’ ಕತೆ ಈ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಹಳ್ಳಿಗಳಿಂದ ನಗರಗಳಿಗೆ, ಮಹಾನಗರಕ್ಕೆ ಬಂದು ಬದುಕುವ ದಾರಿ ಹುಡುಕಿಕೊಳ್ಳುವವರದು ನೇರ ಹಾದಿಯಲ್ಲ. ಏಳುಬೀಳುಗಳಿಂದ ತುಂಬಿದ ಅಡ್ಡಾದಿಡ್ಡಿ್ಡ ಮಾರ್ಗ. ಈ ಮಾರ್ಗದಲ್ಲಿ ಸಿಗುವ ಎಲ್ಲ ಉತ್ತರಗಳು, ಅವಕಾಶಗಳು ನೈತಿಕವಾಗಿ ಸರಿಯಿಲ್ಲದೆಯೂ ಇರಬಹುದು. ಆದರೆ ಬದುಕುವ ದೃಷ್ಟಿಯಿಂದ ಈ ಸ್ತರಗಳನ್ನೆಲ್ಲ ಹಾದು ಹೋಗುವುದು ಅನಿವಾರ್ಯ. ಈ ವಿನ್ಯಾಸದಲ್ಲಿ ರಾಜಶೇಖರ್, ಬದುಕಿನ ಕೊರಕಲಿನಲ್ಲಿ ಸಿಕ್ಕಿಹಾಕಿಕೊಂಡವರ ಬಗ್ಗೆ ಯಾವ ರೀತಿಯ ನೈತಿಕ ತೀರ್ವನಗಳನ್ನೂ ಕೊಡದೇ ಕತೆ ಕಟ್ಟುತ್ತಾ ಹೋಗುತ್ತಾರೆ.