ವಿಶ್ವ ಸಿನಿಮಾಕ್ಕೆ 125 ವರ್ಷ; ಚಲಿಸುವ ಚಿತ್ರಗಳು

CINIMA
Published on

1895ರಲ್ಲಿ ಲೂಮಿಯೇರ್ ಸಹೋದರರು ಮೊದಲ ಬಾರಿಗೆ ಚಲನಚಿತ್ರವೊಂದನ್ನು ನಿರ್ವಿುಸಿ ಪ್ಯಾರಿಸ್​ನಲ್ಲಿ ಪ್ರದರ್ಶಿಸಿದರು. ಮರುವರ್ಷವೇ (1896) ಅದು ಭಾರತಕ್ಕೂ ಬಂತು. ಮುಂಬೈನಲ್ಲಿ ಪ್ರದರ್ಶಿತಗೊಂಡಿತು. ಅದನ್ನು ನೋಡಿ ಆಕರ್ಷಿತರಾದ ಕೆಲವರು ಆಗಲೇ ಛಾಯಾಗ್ರಹಣ ಯಂತ್ರ ಖರೀದಿಸಿ ಚಿತ್ರೀಕರಣ ಶುರು ಮಾಡಿದರು. ಆದರೂ ಪೂರ್ಣಪ್ರಮಾಣದ ರೂಪಕ ಚಿತ್ರಗಳು ತೆರೆ ಕಾಣಲು ದಶಕಗಳೇ ಹಿಡಿದವು. ಈಗ ವಿಶ್ವದಲ್ಲೇ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ವಿುಸುವ ದೇಶ ಭಾರತ. ಇಂಥದೊಂದು ಹೆಗ್ಗಳಿಕೆಯ ಆರಂಭಿಕ ಘಟನೆಗೆ ಈಗ 125 ವರ್ಷ. ಈ ಹಿನ್ನೆಲೆಯಲ್ಲಿ ಚಲನಚಿತ್ರರಂಗ ನಡೆದು ಬಂದ ದಾರಿಯ ಮೆಲುಕು.

ಆವಿಷ್ಕಾರ- ಅನ್ವೇಷಣೆಗಳಿಂದಾಗಿ 18ನೇ ಶತಮಾನ ಬಹಳ ಗಮನಾರ್ಹ. ಕೈಗಾರಿಕಾ ಕ್ರಾಂತಿಯ ನಂತರ ಆವಿಷ್ಕಾರಗೊಂಡ ಹಲವು ವಸ್ತುವಿಶೇಷಗಳು ಇಡೀ ಜಗತ್ತಿನ ಗಮನ ಸೆಳೆದಿದ್ದು ಮಾತ್ರವಲ್ಲ, ಜನಜೀವನವನ್ನೂ ಆವರಿಸಿಕೊಂಡಿದ್ದು ಈಗ ಚರಿತ್ರೆಯ ಭಾಗ.

ಪ್ರಪಂಚವನ್ನೆಲ್ಲ ಆವರಿಸಿರುವ ನೂತನ ಆವಿಷ್ಕಾರಗಳಲ್ಲಿ ನಿಸ್ಸಂದೇಹವಾಗಿ ಸಿನಿಮಾ ಕೂಡ ಒಂದು. ಕ್ಷಿಪ್ರವಾಗಿ ವಿಶ್ವವನ್ನೆಲ್ಲಾ ತನ್ನ ತೆಕ್ಕೆಗೆ ತೆಗೆದುಕೊಂಡ ಮನರಂಜನಾ ಮಾಧ್ಯಮ ಸಿನಿಮಾ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಜಾಗತಿಕ ಸಾಂಸ್ಕೃತಿಕ ಇತಿಹಾಸದಲ್ಲಿ ಬಹುಮುಖ್ಯ ಸ್ಥಾನ ಗಳಿಸಿಕೊಂಡ ಪ್ರಮುಖ ನಗರಗಳಲ್ಲಿ ಪ್ಯಾರಿಸ್​ಗೆ ಅಗ್ರಸ್ಥಾನ. ಶತಮಾನಗಳ ನಂತರವೂ ಪ್ಯಾರಿಸ್​ಗೆ ಈ ಸ್ಥಾನ ಅಬಾಧಿತ.

ಇಂತಹ ಪ್ಯಾರಿಸ್​ನಲ್ಲೇ ನವಮನರಂಜನಾ ಮಾಧ್ಯಮ ‘ಸಿನಿಮಾ’ ಪ್ರಪ್ರಥಮವಾಗಿ ತೆರೆದುಕೊಂಡಿದ್ದು. ಅಂದು 28 ಡಿಸೆಂಬರ್ 1895. ಪ್ಯಾರಿಸ್​ನ ಸಭಾಂಗಣವೊಂದರ ನೆಲ ಅಂತಸ್ತಿನಲ್ಲಿ ವಿಶ್ವದ ಮೊದಲ ಚಲನಚಿತ್ರ ಅನಾವರಣಗೊಂಡಿತು. ಲೂಮಿಯೇರ್ ಸಹೋದರರು ತಾವು ವಿನ್ಯಾಸಗೊಳಿಸಿದ್ದ ಯಂತ್ರವೊಂದರ ಮೂಲಕ ಚಿಕ್ಕ ಚಿಕ್ಕ ಚಿತ್ರಗಳನ್ನು ಪ್ರದರ್ಶಿಸಿದರು. ಕೆಲವೇ ದಿನಗಳಲ್ಲಿ ಈ ಕಿರುಚಿತ್ರಗಳು ಜನಪ್ರಿಯವಾದವು. ಹೋಟೆಲ್​ಗಳಲ್ಲಿ, ರಂಗಮಂದಿರಗಳಲ್ಲಿ ಈ ಕಿರುಚಿತ್ರಗಳ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚಿತು. ನಿರಂತರವಾಗಿ ಪ್ರದರ್ಶನಗಳು ಏರ್ಪಟ್ಟವು. ಕಾಸು ಕಮಾಯಿ ಜೋರಾಗಿತ್ತು.

ವೈಜ್ಞಾನಿಕ ಆವಿಷ್ಕಾರಗಳೆಲ್ಲಾ ವಾಣಿಜ್ಯೀಕರಣ ಗೊಳ್ಳುತ್ತಿದ್ದ ಕಾಲವದು. ತಮ್ಮ ಪ್ರದರ್ಶನ ನೋಡಿದ ಜನರ ಪ್ರತಿಕ್ರಿಯೆ ಕಂಡ ಲೂಮಿಯೇರ್ ಸಹೋದರರು ತಾವು ಸಿದ್ಧ ಮಾಡಿದ್ದ ಸಿನಿಮಾ ಯಂತ್ರವನ್ನು ಮಾರುಕಟ್ಟೆಗೆ ಬಿಟ್ಟು ಆದಾಯ ಗಳಿಸಲು ಮುಂದಾಗಿ ಅದಕ್ಕೆ ತಯಾರಿ ಮಾಡಿಕೊಂಡರು. ಪ್ರದರ್ಶನ ಯಂತ್ರ ತಯಾರಿಕೆ ಮತ್ತು ಅದನ್ನು ಸೂಕ್ತವಾಗಿ ಪ್ರದರ್ಶಿಸಲು ತಂತ್ರಜ್ಞರನ್ನು ಅಣಿಗೊಳಿಸಿದ ಇವರು ಬೇರೆ ಬೇರೆ ನಗರಗಳಲ್ಲಿ ಇದರ ಪ್ರದರ್ಶನಗಳನ್ನು ಏರ್ಪಡಿಸಲು ನಿರ್ಧರಿಸಿದರು.

ಮೊದಲ ಸಿನಿಮಾ ತೆರೆ ಕಂಡ (28 ಡಿಸೆಂಬರ್ 1895) ವರ್ಷದೊಳಗೆ (7 ಜುಲೈ 1896) ಭಾರತದಲ್ಲೂ ಈ ಸಿನಿಮಾ ಪ್ರದರ್ಶನ ಜರುಗಿತು. ಈಗ ಬಾಲಿವುಡ್ ಎನ್ನಿಸಿಕೊಂಡಿರುವ ಮುಂಬೈನ ವಾಟ್ಸನ್ ಹೋಟೆಲ್ ತೆರೆಯ ಮೇಲೆ ಚಲಿಸುವ ಚಿತ್ರಗಳು ಮೂಡಿಬಂದವು. ಆಗಿನ ಕಾಲಕ್ಕೆ ತುಸು ಹೆಚ್ಚೇ ಎನ್ನಬಹುದಾಗಿದ್ದ ಒಂದು ರೂಪಾಯಿ ಪ್ರವೇಶಧನ ಕೊಟ್ಟು ಪ್ರದರ್ಶನ ವೀಕ್ಷಿಸಿದವರಲ್ಲಿ ಭಾರತೀಯ ಫೋಟೋಗ್ರಾಫರ್ ಹರಿಶ್ಚಂದ್ರ ಸಖಾರಾಂ ಭಟವಾಡೇಕರ್ ಅವರೂ ಸೇರಿದ್ದರು.

ಅವರ ಇನ್ನೊಂದು ಹೆಸರು ‘ಸಾವೇ ದಾದಾ’. ಫೋಟೋಗ್ರಫಿ ಮಾಡುವುದರ ಜತೆಗೆ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅವರು ತಮ್ಮ ವ್ಯಾಪಾರ ವಿಸ್ತರಣೆಯ ದೂರದೃಷ್ಟಿಯಿಂದ ಸಿನಿಮಾ ಪ್ರದರ್ಶನದ ಪ್ರೊಜೆಕ್ಟರ್ ಅನ್ನು ಖರೀದಿಸಿದರು. ನಂತರ ಚಿತ್ರ ಛಾಯಾಗ್ರಹಣ ಕ್ಯಾಮರಾ ಖರೀದಿಸಲು ಅವರು ತಡ ಮಾಡಲಿಲ್ಲ. ಛಾಯಾಗ್ರಹಣ ಕಲೆಯೂ ಗೊತ್ತಿದ್ದುದರಿಂದ ಮುಂಬೈನ ಆಯ್ದ ಘಟನಾವಳಿಗಳನ್ನು ಚಿತ್ರೀಕರಿಸಿ ಸಂಸ್ಕರಿಸಿ ಹೋಟೆಲ್​ಗಳು ಮತ್ತು ಖಾಸಗಿ ಬಂಗ್ಲೆಗಳಲ್ಲಿ ಪ್ರದರ್ಶನ ಮಾಡಿ ಯಶಸ್ಸು ಗಳಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶುರುವಾದ ಮರುವರ್ಷವೇ ಭಾರತಕ್ಕೆ ಸಿನಿಮಾ ಬಂದರೂ ಇಲ್ಲಿ ಪ್ರದರ್ಶಿತವಾಗುತ್ತಿದ್ದ ಕಿರುಚಿತ್ರಗಳು ವಿದೇಶಿ ವಿಷಯಗಳನ್ನೇ ಒಳಗೊಂಡಿರುತ್ತಿದ್ದವು. ಕೆಲ ವರ್ಷಗಳಲ್ಲಿ ಭಾರತೀಯ ಪೌರಾಣಿಕ ಕಥೆಗಳು ಕಿರುಚಿತ್ರಗಳಲ್ಲಿ ಕಾಣಿಸಿಕೊಂಡರೂ ಭಾರತೀಯ ರೂಪಕ ಚಿತ್ರಗಳ ತಯಾರಿಕೆಗೆ ದಶಕಗಳೇ ಹಿಡಿದವು. ಫಾಲ್ಕೆ ಅವರು ಹರಿಶ್ಚಂದ್ರರ ಕಥೆಯನ್ನು ತೆರೆಯ ಮೇಲೆ ತರುವ ವೇಳೆಗೆ ಬೇರೆ ದೇಶಗಳಲ್ಲಿ ಕಥಾರೂಪಕ ಚಿತ್ರಗಳ ತಯಾರಿಕೆ ತ್ವರಿತ ಗತಿಯನ್ನು ಕಂಡಿತ್ತು.

ಮೊನ್ನೆ ಭಾರತಕ್ಕೆ ಭೇಟಿ ಕೊಟ್ಟ ಅಮೆರಿಕಾ ಅಧ್ಯಕ್ಷ ಟ್ರಂಪ್ ಅಹಮದಾಬಾದ್​ನಲ್ಲಿ ಭಾಷಣ ಮಾಡುವಾಗ ಜನರಿಂದ ಹೆಚ್ಚಿನ ಚಪ್ಪಾಳೆ ಕೇಕೆಗಳನ್ನು ಗಿಟ್ಟಿಸಿಕೊಂಡಿದ್ದು ಭಾರತೀಯ ಚಿತ್ರರಂಗದ ವಿಷಯವನ್ನು ಪ್ರಸ್ತಾಪಿಸಿದಾಗ. ಅದೂ ಶೋಲೆ, ಡಿಡಿಎಲ್​ಜೆ ಚಿತ್ರಗಳನ್ನು ಉಲ್ಲೇಖಿಸಿದ ಸಂದರ್ಭದಲ್ಲಿ! ಜಗತ್ತಿನ ಅತಿ ದೊಡ್ಡ ಸಿನಿಮಾ ತಯಾರಿಕಾ ಕೇಂದ್ರ ಹಾಲಿವುಡ್ ಇರುವ ದೇಶದ ರಾಷ್ಟ್ರಾಧ್ಯಕ್ಷರು ಮುಖ್ಯವಾಗಿ ಪ್ರಸ್ತಾಪಿಸಿದ ಭಾರತೀಯ ಚಿತ್ರೋದ್ಯಮ ‘ಬಾಲಿವುಡ್’ ಈಗ ಜಗತ್ತಿನಲ್ಲೇ ಅತ್ಯಂತ ಪ್ರಬಲ ಸಮೂಹ ಮನರಂಜನಾ ಮಾಧ್ಯಮ. ವಿಶ್ವದ ಅತಿ ಹೆಚ್ಚು ಚಲನಚಿತ್ರಗಳನ್ನು ತಯಾರಿಸುವ ಬೃಹತ್ ಉದ್ಯಮವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನಗಳ ಸಂಗಮವಾದ ಚಿತ್ರರಂಗ, ಭಾರತದ ನೆಲದಲ್ಲಿ ಒಂದೂ ಕಾಲು ಶತಮಾನದ ಹಿಂದೆಯೇ ರೂಪ ಪಡೆಯಿತಾದರೂ ಆರಂಭದಲ್ಲಿ ಅದು ಹೋಟೆಲ್-ಖಾಸಗಿ ಬಂಗ್ಲೆಗಳಲ್ಲಿ ಪ್ರದರ್ಶಿತಗೊಳ್ಳುತ್ತಿದ್ದ ವಿದೇಶಿ ವಿಷಯವಸ್ತುವುಳ್ಳ ಕಿರುಚಿತ್ರ, ಸಾಕ್ಷ್ಯತ್ರಗಳಿಗೆ ಸೀಮಿತವಾಗಿತ್ತು. ಸಾರ್ವಜನಿಕರಿಗೆ ಪ್ರದರ್ಶನ ದಕ್ಕಿದ್ದು 1913ರಲ್ಲಿ. ಈ ನೆಲದ ಪುರಾಣ ಅಂಶಗಳನ್ನು ಹೊಂದಿದ್ದ, ಭಾರತೀಯರೇ ನಿರ್ವಿುಸಿ ನಿರ್ದೇಶಿಸಿದ ಪ್ರಥಮ ಚಿತ್ರ ‘ರಾಜಾ ಹರಿಶ್ಚಂದ್ರ’. ಅಷ್ಟೊತ್ತಿಗೆ ಕೆಲವರು ಭಾರತೀಯರು ಚಿತ್ರ ನಿರ್ವಣಕ್ಕೆ ಇಳಿದಿದ್ದರೂ ಹತ್ತುಹಲವು ಅಡ್ಡಿ ಆತಂಕಗಳನ್ನು ದಾಟಿ ‘ಹರಿಶ್ಚಂದ್ರ’ ನಿರ್ವಿುಸಿ ತೆರೆಗಿಟ್ಟವರು ದಾದಾಸಾಹೇಬ್ ಫಾಲ್ಕೆ. ಹಣಕಾಸು, ಪಾತ್ರಧಾರಿಗಳ ಕೊರತೆ, ತಂತ್ರಜ್ಞಾನ ಅವಜ್ಞೆ ಮತ್ತಿತರ ಸಂಕಷ್ಟಗಳೊಂದಿಗೆ ಸಿದ್ಧಗೊಂಡ ಚಿತ್ರ ಫಾಲ್ಕೆ ಅವರ ‘ಹರಿಶ್ಚಂದ್ರ’.

ಈ ಚಿತ್ರದ ತಳಹದಿ ಮೇಲೆ ಬೆಳೆದು ನಿಂತ ಭಾರತೀಯ ಚಿತ್ರರಂಗ ಇಂದು ಕೋಟಿ ಕೋಟಿ ವ್ಯವಹಾರ ನಡೆಸುವ ಉದ್ಯಮ. ಇದು ನಮ್ಮ ದೇಶದ ಅತ್ಯಂತ ಹಳೆಯ ಹಾಗೂ ಬೃಹತ್ ಉದ್ಯಮವೂ ಹೌದು.

1930ರ ದಶಕದ ವೇಳೆಗೆ ಭಾರತದ ಇತರ ಚಿತ್ರ ತಯಾರಕರು ಹಲವಾರು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ವಿುಸಿ ಭಾರತೀಯ ಚಿತ್ರೋದ್ಯಮದ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಹೆಗಲು ಕೊಟ್ಟಿದ್ದು ಈಗ ಇತಿಹಾಸ. ವೈಯಕ್ತಿಕ ಆಸಕ್ತಿಯ ನೆಲೆಯಿಂದ ಶುರುವಾದ ಚಿತ್ರನಿರ್ವಣ ಪ್ರಕ್ರಿಯೆ ಸ್ವಲ್ಪ ಸಮಯದ ಬಳಿಕ ಸಂಸ್ಥೆಗಳ ಮೂಲಕ ಮುಂದುವರೆಯಿತು. ಮುಂಬೈ, ಕೋಲ್ಕತಾ, ಮದ್ರಾಸ್ ಮೊದಲಾದ ಕಡೆಗಳಲ್ಲಿ ಚಿತ್ರ ತಯಾರಿಕಾ ಸಂಸ್ಥೆಗಳು ಆರಂಭಗೊಂಡು ಚಿತ್ರೋದ್ಯಮದ ಚಟುವಟಿಕೆಗಳು ವ್ಯಾಪಕವಾಗಿ ಬೆಳೆದವು.

ಭಾರತದಲ್ಲಿ ಚಲನಚಿತ್ರ ನಿರ್ಮಾಣ ಆರಂಭಗೊಂಡ ನಂತರ ಮೊದಲ ಎರಡು ದಶಕಗಳ ಕಾಲ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಇರಲಿಲ್ಲ. ಕಡಿಮೆ ಅವಧಿಯ ಚಿತ್ರಗಳು, ಸಮಾಚಾರಚಿತ್ರಗಳು, ಸಾಕ್ಷ್ಯತ್ರಗಳಿಗೆ ಮಾತ್ರ ಇದು ಸೀಮಿತವಾಗಿತ್ತು. ಪ್ರೇಕ್ಷಕರನ್ನು ಸೆಳೆಯಲು ಚಿತ್ರಮಂದಿರಗಳಿಗೆ ಜನರನ್ನು ಆಕರ್ಷಿಸಲು ವಿದೇಶಗಳಲ್ಲಿ ಜರುಗುತ್ತಿದ್ದ ಪ್ರಯತ್ನಗಳಿಗೆ ಅಡೆತಡೆ ಇರಲಿಲ್ಲ. ಕೇವಲ ಘಟನಾವಳಿಗಳು ಮಾತ್ರ ಮೂಡಿಬರುತ್ತಿದ್ದ ಚಲನಚಿತ್ರಗಳಲ್ಲಿ ಕಥಾ ಅಂಶಗಳೂ ಸೇರಿಕೊಂಡಿದ್ದಲ್ಲದೆ ಚಿತ್ರಗಳ ಉದ್ದ, ನಿಮಿಷಗಳಿಂದ ಅವಧಿಯೂ ವಿಸ್ತಾರವಾಯಿತು.

ಮೂಕಿಯಾಗಿದ್ದ ಸಿನಿಮಾಗೆ ಮಾತು ಬಂದ ಮೇಲೆ ಜನಾಕರ್ಷಣೆ ಹೆಚ್ಚಿತು. ಭಾರತದಲ್ಲಂತೂ ಜನಮಾನಸದಲ್ಲಿ ಬೆರೆತುಹೋಗಿದ್ದ ಪುರಾಣ ಪುಣ್ಯಕಥೆಗಳು ಬೆಳ್ಳಿತೆರೆಯಲ್ಲಿ ಮೂಡಲು ಶುರುವಿಟ್ಟವು. ಚಿತ್ರತಯಾರಿಕಾ ಸಂಸ್ಥೆಗಳು ವಾಣಿಜ್ಯ ಉದ್ದೇಶವನ್ನೇ ಹೊಂದಿದ್ದರ ಪರಿಣಾಮ ಹೆಚ್ಚೆಚ್ಚು ಕಥಾ ಚಿತ್ರಗಳು ಸಿದ್ಧಗೊಂಡು ತೆರೆಗೆ ಬರತೊಡಗಿದವು. ಸ್ವಾತಂತ್ರ್ಯಾನಂತರ ಭಾರತೀಯ ಚಿತ್ರೋದ್ಯಮ ಹೊಸ ಆಯಾಮ ಪಡೆಯಿತು. ಈ ಶಕೆಯಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಿದ್ದು ಸುಧಾರಣಾವಾದಿ ಕಥನಗಳಿದ್ದ ಚಿತ್ರಗಳ ತಯಾರಿಕೆಗೆ. ಇವುಗಳಲ್ಲಿ ಬಾಲ್ಯವಿವಾಹ, ವರದಕ್ಷಿಣೆ, ವೇಶ್ಯಾಸಮಸ್ಯೆಗಳಂತಹ ವಿಷಯಗಳು ಸೇರಿಕೊಂಡವು. ಒಟ್ಟಾರೆ ಸಾಮಾಜಿಕ ಅರಿವು ಮೂಡಿಸುವ ಉದ್ದೇಶ ಚಲನಚಿತ್ರಗಳಲ್ಲಿ ಹೆಚ್ಚುಹೆಚ್ಚು ಕಾಣಿಸಿಕೊಂಡಿತು.

ಸತ್ಯಜಿತ್ ರೇ, ಬಿಮಲ್ ರಾಯ್ ಮೊದಲಾದವರಿಂದ ಭಿನ್ನ ಧಾಟಿಯ ಚಿತ್ರಪರಂಪರೆ ಭಾರತದಲ್ಲಿ ಪ್ರಕಟಗೊಂಡಿದ್ದು 1950ರ ದಶಕದಲ್ಲಿ. ಆವರೆಗೂ ಸಮಾಜ ಕಡೆಗಣಿಸಿದ್ದ ಸ್ತರದ ವಸ್ತುವಿಚಾರಗಳು ಈ ಚಿತ್ರಗಳ ಮೂಲಕ ಮುನ್ನೆಲೆಗೆ ಬಂದವು.

ಮುಂದಿನ ಹಂತದಲ್ಲಿ ಜನಸಮೂಹಕ್ಕೆ ಮನರಂಜನೆ ಒದಗಿಸುವ ಪಕ್ಕಾ ವಾಣಿಜ್ಯ ಚಿತ್ರಗಳು ಸಿದ್ಧಗೊಂಡವು. ಇವುಗಳ ಮುಖ್ಯ ನೆಲೆ ಮುಂಬೈ. ಮಸಾಲೆಚಿತ್ರಗಳ ಮಹಾಪೂರ ಕಂಡ ಮುಂಬೈಕೇಂದ್ರಿತ ಪ್ರದೇಶಕ್ಕೆ ಕಾಲಕ್ರಮೇಣ ‘ಬಾಲಿವುಡ್’ ಎಂಬ ಹೆಸರೂ ಬಂತು. ಪೌರಾಣಿಕ, ಚಾರಿತ್ರಿಕ, ವಾಸ್ತವಿಕ ವಿಷಯಗಳಿಂದ ಸಾಂಸಾರಿಕ ಕಥನಗಳ ಕಡೆಗೆ ಜಿಗಿದ ಭಾರತೀಯ ಚಿತ್ರರಂಗ ಪ್ರೇಮ, ಪ್ರಣಯ, ಹಾಸ್ಯ, ಸಂಗೀತಮಯ, ಸಾಹಸ, ವ್ಯಕ್ತಿವಿಕಸನ ಅಂಶಗಳನ್ನೂ ಅಳವಡಿಸಿಕೊಂಡು ಸರಾಗವಾದ ಹೆಜ್ಜೆಗಳನ್ನು ಹಾಕುತ್ತ ಹೋಯಿತು.

ಜಾಗತಿಕ ಸಿನಿಮಾ ಬೆಳವಣಿಗೆಗೆ ತಕ್ಕಂತೆ ತನ್ನನ್ನು ಒಡ್ಡಿಕೊಳ್ಳುತ್ತ ಬಂದ ಭಾರತೀಯ ಚಿತ್ರರಂಗ ಆಧುನಿಕ ತಂತ್ರಜ್ಞಾನ ಅದ್ದೂರಿತನಕ್ಕೆ ತೆರೆದುಕೊಂಡು ವಿಶ್ವದ ಗಮನ ಸೆಳೆದಿರುವುದು ಈಗಿನ ವಿದ್ಯಮಾನ.

ಮೊದಲ ನೂರು ವರ್ಷ ಭಾರತೀಯ ಚಿತ್ರೋದ್ಯಮವನ್ನು ಹೆಚ್ಚು ಆವರಿಸಿಕೊಂಡಿದ್ದು ಹಿಂದಿ ಭಾಷಿಕ ಚಿತ್ರಗಳೇ. ಭಾರತದುದ್ದಕ್ಕೂ ಗಲ್ಲಾ ಪೆಟ್ಟಿಗೆ ತುಂಬಿಸುವ ಹಿಂದಿ ಚಿತ್ರಗಳ ಮೇಲೆಯೇ ಹೆಚ್ಚು ಬಂಡವಾಳ ಹೂಡುವ ಪರಿಪಾಠ ಸಹಜವಾಗಿತ್ತು. ಈಗೀಗ ಕಾಣುತ್ತಿರುವ ಬೆಳವಣಿಗೆ ಹಿಂದಿ ಚಿತ್ರಗಳ ಸಾಲಿನಲ್ಲಿ ಕೆಲವು ಪ್ರಾದೇಶಿಕ ಭಾಷಾ ಚಿತ್ರಗಳೂ ನಿಲ್ಲುತ್ತಿರುವುದು. ಇದಕ್ಕೆ ಬಾಹುಬಲಿ, ಕಬಾಲಿ, ರೋಬೋ, ಕೆಜಿಎಫ್ ಚಿತ್ರಗಳು ಕೆಲವು ಉದಾಹರಣೆಗಳು.

ಭಾರತದ ಚಿತ್ರಗಳು ವಿದೇಶಗಳಿಂದಲೂ ಆದಾಯದ ಪಾಲು ಗಳಿಸಿ ಜಗತ್ತಿನ ಗಮನ ಸೆಳೆಯುತ್ತಿರುವುದು ಸಹಜ ಎನ್ನಿಸುತ್ತಿದೆ.

ಭಾರತೀಯ ಸಿನಿಮಾ

ಭಾರತೀಯ ಸಿನಿಮಾದ ಉಗಮಸ್ಥಳ ಮುಂಬೈ. ಹಿಂದಿ ಚಿತ್ರರಂಗ ಈಗಲೂ ಕೇಂದ್ರೀಕೃತವಾಗಿರುವುದು ಇಲ್ಲಿಯೇ. ಹಿಂದಿ ಚಿತ್ರರಂಗಕ್ಕೆ ಪೈಪೋಟಿ ನೀಡುತ್ತಿರುವ ದಕ್ಷಿಣ ಭಾರತದ ಚಿತ್ರರಂಗ ಪ್ರಾರಂಭವಾಗಿದ್ದು 1917ರಲ್ಲಿ. ಇದು ನೆಲೆಯೂರಿದ್ದು ಸಮುದ್ರತೀರ ಮದ್ರಾಸ್​ನಲ್ಲಿ

(ಈಗಿನ ಚೆನ್ನೈ). ತಮಿಳು, ತೆಲುಗು, ಕನ್ನಡ, ಮಲೆಯಾಳಂ ಚಿತ್ರರಂಗ ಆರಂಭವಾಗಿದ್ದು ಮದ್ರಾಸ್​ನಲ್ಲಿ. ಮುಂಬೈ, ಕೋಲ್ಕತಾ ಹೊರತುಪಡಿಸಿದರೆ ಹೆಚ್ಚಿನ ಸಿನಿಮಾ ಸ್ಟುಡಿಯೋಗಳು ಸ್ಥಾಪನೆಯಾಗಿದ್ದು ಮದ್ರಾಸ್​ನಲ್ಲೇ. ವಾಕ್ಚಿತ್ರಗಳ ತಯಾರಿಕೆಗೆ ಮೊದಲು ಹೆಚ್ಚಾಗಿದ್ದ ಮೂಕಿ ಚಿತ್ರಗಳ ತಯಾರಿಕೆಯು ದಕ್ಷಿಣ ಭಾರತದ ಬೆಂಗಳೂರು, ಮದ್ರಾಸ್, ಹೈದರಾಬಾದ್​ಗಳಲ್ಲಿ ಪ್ರಮುಖವಾಗಿತ್ತು.

ಮದ್ರಾಸ್ ಮೂಲದ ಚಿತ್ರ ತಯಾರಿಕಾ ಸಂಸ್ಥೆಗಳು ಹಿಂದಿ ಚಿತ್ರರಂಗದ ಯಶಸ್ವಿ ಚಿತ್ರಗಳನ್ನು ನಿರ್ವಿುಸಿ ಯಶ ಸಾಧಿಸಿದ್ದೂ ಇದೆ. ಈಗ ಹಿಂದಿ ಚಿತ್ರಗಳಿಗಿಂತ ಹೆಚ್ಚಿನ ಚಿತ್ರಗಳನ್ನು ತಯಾರಿಸುವಲ್ಲಿ ತಮಿಳು, ತೆಲುಗು, ಕನ್ನಡ ಚಿತ್ರೋದ್ಯಮ ಮೇಲುಗೈ ಸಾಧಿಸಿವೆ. ದಕ್ಷಿಣದ ಭಾಷಾ ಚಿತ್ರಗಳು ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯುತ್ತಿರುವುದು ಉಲ್ಲೇಖಾರ್ಹ.

ಬೃಹತ್ ಉದ್ಯಮ

ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಒಂದೂವರೆ ಕೋಟಿ ಜನ ಪ್ರತಿದಿನ ಚಿತ್ರಮಂದಿರಗಳಿಗೆ ಹೋಗುತ್ತಾ ರೆಂಬ ಅಂದಾಜಿದೆ. ಅಮೆರಿಕಾದಲ್ಲಿ ಇವರ ಸಂಖ್ಯೆ 14 ಲಕ್ಷ ಮಾತ್ರ. 2019ರಲ್ಲಿ ಭಾರತದ ಚಿತ್ರರಂಗ ನಡೆಸಿರುವ ವಾರ್ಷಿಕ ವಹಿವಾಟು 18300 ಕೋಟಿ ರೂ.; ದೇಶದಲ್ಲೀಗ 6780 ಏಕಪರದೆ ಚಿತ್ರಮಂದಿರಗಳಿವೆ. ಮಲ್ಟಿಪ್ಲೆಕ್ಸ್​ಗಳ ಸಂಖ್ಯೆ 2100. ಅಮೆರಿಕದಲ್ಲಿ ಚಲನಚಿತ್ರಗಳ ಸರಾಸರಿ ಟಿಕೆಟ್ ದರ ಏಳೂವರೆ ಡಾಲರ್ (ಸುಮಾರು 540 ರೂ.); ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಕಡಿಮೆಯೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net