

ಲಡಾಖ್ಗೆ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ಬುಧವಾರ ಹಿಂಸಾರೂಪಕ್ಕೆ ತಿರುಗಿದ್ದರಿಂದ ನಾಲ್ವರು ಮೃತಪಟ್ಟಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಗುರುವಾರ 50ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆಂದೋಲನಕಾರ ಸೋನಮ್ ವಾಂಗ್ಚುಕ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ. ಪರಿಸ್ಥಿತಿ ಶಾಂತವಾಗಿದ್ದರೂ, ಉದ್ವಿಗ್ನತೆ ಇನ್ನೂ ತಗ್ಗಿಲ್ಲ. ಲಡಾಖ್ ಜನರ ಬೇಡಿಕೆಗಳೇನು, ಪ್ರತಿಭಟನೆಯ ಹಿಂದೆ ಯಾರೆಲ್ಲ ಇದ್ದಾರೆ, ಸರ್ಕಾರದ ನಿಲುವೇನು? ಈ ಕುರಿತಾದ ವಿವರ ಇಲ್ಲಿದೆ.
ಪ್ರವಾಸೋದ್ಯಮಕ್ಕೆ ಹೆಸರಾದ, ಬೈಕ್ ಸವಾರರಿಗೆ ಪ್ರಿಯವಾದ ಹಿಮದ ನಾಡು ಲಡಾಖ್ ಶಾಂತಿಪ್ರಿಯ. ಆದರೆ, ಸೆ.25ರ ಘಟನೆ ಬೆಚ್ಚಿಬೀಳಿಸಿದೆ. ಲೇಹ್ಗೆ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಡೆದ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಉದ್ರಿಕ್ತರ ಗುಂಪು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಚೇರಿಗೆ ಬೆಂಕಿ ಇಟ್ಟಿದ್ದಲ್ಲದೆ, ಹಲವೆಡೆ ಅಗ್ನಿಸ್ಪರ್ಶ ಮಾಡಿತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು. ಈ ಹಿಂಸೆಯ ಕೆನ್ನಾಲಿಗೆ ನಾಲ್ವರ ಪ್ರಾಣವನ್ನೇ ಆಹುತಿ ತೆಗೆದುಕೊಂಡಿತು. ಹಲವರು ಗಾಯಗಳನ್ನು ಅನುಭವಿಸಿದ್ದಾರೆ. ಶುಕ್ರವಾರ ಶಾಲೆ-ಕಾಲೇಜ್, ಮಾರುಕಟ್ಟೆ ಬಂದ್ ಆಗಿದ್ದವು. ಶನಿವಾರ ಕೂಡ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಷ್ಟಕ್ಕೂ, ಇದು ನಿನ್ನೆ-ಮೊನ್ನೆ ಆರಂಭವಾದ ಹೋರಾಟವೇನಲ್ಲ.
ಲೇಹ್ ಅಪೆಕ್ಸ್ ಬಾಡಿ (ಎಲ್ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸಂಘಟನೆಗಳು ಕಳೆದ ಐದು ವರ್ಷಗಳಿಂದ ಹೋರಾಟ ನಡೆಸುತ್ತಿವೆ. ಆದರೆ, ಪ್ರತಿಭಟನೆ ಹಿಂಸಾಚಾರದ ರೂಪ ತಳೆದಿದ್ದು ಇದೇ ಸೆ.25ರಂದು. ಪರಿಸರ ಹೋರಾಟಗಾರ ಮತ್ತು ಎಲ್ಎಬಿ ಮುಖಂಡ ಸೋನಮ್ ವಾಂಗ್ಚುಕ್ ತಮ್ಮ ಬೆಂಬಲಿಗರೊಂದಿಗೆ 2024ರ ಅಕ್ಟೋಬರ್ 6ರಿಂದ 21ರವರೆಗೆ 25 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಲಡಾಖ್ ಬಗೆಗಿನ ಬೇಡಿಕೆಗಳ ಕುರಿತಂತೆ ಡಿಸೆಂಬರ್ನಲ್ಲಿ (2024) ಮಾತುಕತೆ ನಡೆಸುವುದಾಗಿ ಕೇಂದ್ರ ಗೃಹ ಸಚಿವಾಲಯ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ನಿಲ್ಲಿಸಿದ್ದರು. ಗೃಹ ಸಚಿವಾಲಯದ ಉನ್ನತ ಮಟ್ಟದ ಸಮಿತಿ ವಾಂಗ್ಚುಕ್ ಮತ್ತು ಇತರ ಹೋರಾಟಗಾರರೊಡನೆ ಕಳೆದ ವರ್ಷದ ಅಕ್ಟೋಬರ್ 21 ಮತ್ತು ಡಿಸೆಂಬರ್ 3ರಂದು ಮಹತ್ವದ ಮಾತುಕತೆ ನಡೆಸಿತಾದರೂ, ಫಲಪ್ರದವಾಗಲಿಲ್ಲ. ಕೇಂದ್ರ ಗೃಹ ಸಚಿವಾಲಯ ಭಾಗಶಃ ಬೇಡಿಕೆಗಳನ್ನು ಒಪ್ಪಿಕೊಂಡಿತಾದರೂ, ಆಂದೋಲನಕಾರರು ಎಲ್ಲ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ, ವಿವಾದ ಬಗೆಹರಿಯದೆ ಮುಂದುವರಿಯಿತು.
ಪ್ರವಾಸೋದ್ಯಮ ಬಿಟ್ಟರೆ ಲಡಾಖ್ ಪ್ರದೇಶಕ್ಕೆ ಆದಾಯದ ಹೆಚ್ಚು ಆಯ್ಕೆಗಳಿಲ್ಲ. ಪ್ರತಿಕೂಲ ಹವಾಮಾನವಿದ್ದಾಗ ಆ ಆದಾಯವೂ ಬರುವುದಿಲ್ಲ. ಮುಖ್ಯವಾಹಿನಿಯೊಂದಿಗೆ ಸಂಪರ್ಕವೂ ತಪ್ಪಿಹೋಗುತ್ತದೆ. ಹೀಗಾಗಿ ಸ್ಥಳೀಯ ಸಮಸ್ಯೆಗಳ ಸ್ವರೂಪ ದೊಡ್ಡದಾಗಿದೆ. ಇದರ ನಿವಾರಣೆಗೆ ರಾಜ್ಯದ ಸ್ಥಾನಮಾನ ಸಿಗಬೇಕು ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ. ಅಲ್ಲದೆ, ಲಡಾಖ್ನ ಸೂಕ್ಷ್ಮ ಪರಿಸರ, ಭೂಮಿಯ ಹಕ್ಕುಗಳು, ವೈವಿಧ್ಯಮಯ ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಸಾಂವಿಧಾನಿಕ ರಕ್ಷಣೆ ಅಗತ್ಯ ಎಂದು ಹೋರಾಟಗಾರರು ಪ್ರತಿಪಾದಿಸಿದ್ದಾರೆ. ಮೊದಲಿಗೆ ಹೋರಾಟವು ಪ್ರತಿಭಟನೆ, ರ್ಯಾಲಿ, ಮೆರವಣಿಗೆಗೆ ಸೀಮಿತವಾಗಿತ್ತು. ಆದರೆ, 2024ರಲ್ಲಿ ಸೋನಮ್ ವಾಂಗ್ಚುಕ್ ಮತ್ತು ಅವರ ಬೆಂಬಲಿಗರು ಹಲವು ದಿನಗಳ ಕಾಲ ಉಪವಾಸ ನಡೆಸುವ ಮೂಲಕ ಲಡಾಖ್ ರಾಷ್ಟ್ರದ ಗಮನ ಸೆಳೆಯಿತು. ಮಾತ್ರವಲ್ಲ ಹೋರಾಟದ ತೀವ್ರತೆಯೂ ಹೆಚ್ಚಿತು. ಈ ಬಾರಿ ಸಂಯಮದ ರೇಖೆ ದಾಟಿ ಹಿಂಸಾರೂಪಕ್ಕೆ ತಲುಪಿರುವುದು ಕಳವಳಕಾರಿ. ‘ಇದು ಝೆನ್ ಝಿ’ ಹೋರಾಟ ಎಂದು ವಾಂಗ್ಚುಕ್ ಬಣ್ಣಿಸಿದ್ದು, ಸಾಮಾಜಿಕ ಮಾಧ್ಯಮಗಳೂ ಹಾಗೇ ಬಿಂಬಿಸುತ್ತಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ಹಿಂಪಡೆದುಕೊಂಡಿತು ಮತ್ತು ಕಾಶ್ಮೀರ, ಲಡಾಖ್ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತು. ಆಗ ಲಡಾಖ್ನ ಜನರು ಸಂತೋಷದಿಂದ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದರು ಮತ್ತು ಕೇಂದ್ರಾಡಳಿತದ ಅವಧಿಯಲ್ಲಿ ಅಭಿವೃದ್ಧಿಯತ್ತ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದರು. ವಿಶೇಷ ಸ್ಥಾನಮಾನ ರದ್ದು ಪಡಿಸಿದಾಗ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದರೂ, ವಿಧಾನಸಭೆಯನ್ನು ಉಳಿಸಿಕೊಳ್ಳಲಾಗಿತ್ತು (ವಿಧಾನ ಪರಿಷತ್ನ್ನು ರದ್ದುಗೊಳಿಸಲಾಯಿತು). ಆದರೆ, ಲಡಾಖ್ ಅನ್ನು ಶಾಸಕಾಂಗ ವ್ಯವಸ್ಥೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಲಾಯಿತು. ಈ ವ್ಯವಸ್ಥೆ ಅಲ್ಪಾವಧಿಗೆ ಇರಬಹುದು ಎಂದು ಲಡಾಖ್ ಜನರು ಭಾವಿಸಿದ್ದರು. ಆದರೆ, ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಈಗಾಗಲೇ ಆರು ವರ್ಷಗಳು ಕಳೆದಿವೆ. ಅಲ್ಲಿ ರಾಜಕೀಯ ಶೂನ್ಯತೆ ಆವರಿಸಿಕೊಂಡಿದೆ. ಮಾತ್ರವಲ್ಲ, ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ಮೂಲಕ ನೇರವಾಗಿ ಆಡಳಿತ ನಡೆಸುತ್ತಿದ್ದು, ಸ್ಥಳೀಯರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದಂತಾಗಿದೆ. ಜೆನ್ ಝಿ ಪೀಳಿಗೆಯ ಯುವಕರ ಆಕ್ರೋಶಕ್ಕೆ ಇದುವೇ ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೆ, ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದು ಕೂಡ ಪ್ರತಿಭಟನಾಕಾರರ ತಾಳ್ಮೆಯನ್ನು ಕಸಿದುಕೊಂಡಿದೆ.
ಲಡಾಖ್ ಇತರ ಪ್ರದೇಶಗಳಂತಲ್ಲ. ಇದು ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ನೈಸರ್ಗಿಕ ಸಂಪತ್ತು ಹೇರಳವಾಗಿರುವ ಈ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಕೈಗಾರಿಕೆಗಳಿಗೆ, ಗಣಿಗಾರಿಕೆಗೆ ಅವಕಾಶ ಮಾಡಿಕೊಡುತ್ತಿದೆ ಎಂಬ ಆರೋಪ ಸ್ಥಳೀಯರದ್ದು. ಈ ಚಟುವಟಿಕೆಗಳಿಂದ ಇಲ್ಲಿನ ಪರಿಸರ ನಾಶವಾಗುತ್ತಿದೆ, ಬುಡಕಟ್ಟು ಸಮುದಾಯಗಳಿಗೆ ತೊಂದರೆಯಾಗುತ್ತಿದೆ, ಲಡಾಖ್ನ ಸಾಂಸ್ಕೃತಿಕ ಅಸ್ಮಿತೆಗೂ ಧಕ್ಕೆಯಾಗುತ್ತಿದೆ. ಇದನ್ನು ತಡೆಯಲು ‘ಸ್ವಾಯತ್ತ ಪ್ರದೇಶ’ದ ಸ್ಥಾನಮಾನವೇ ಸೂಕ್ತ ಎಂದು ಆಗ್ರಹಿಸುತ್ತಿರುವ ಆಂದೋಲನಕಾರರು ಹೋರಾಟವನ್ನು ಮೊಟಕುಗೊಳಿಸುವುದಿಲ್ಲ ಎಂದಿದ್ದಾರೆ. ಲಡಾಖ್ನ್ನು ಆರನೇ ಪರಿಚ್ಛೇದಕ್ಕೆ ಸೇರಿಸುವುದಾಗಿ ಕೇಂದ್ರ ಸರ್ಕಾರ 2019ರಲ್ಲಿ ಭರವಸೆ ನೀಡಿದರೂ, ಈವರೆಗೂ ಈಡೇರಿಲ್ಲ. ಹಾಗಾಗಿ, ಕೇಂದ್ರ ಸರ್ಕಾರ ತಾನು ನೀಡಿರುವ ಭರವಸೆಯನ್ನು ಕೂಡಲೇ ಈಡೇರಿಸಬೇಕು ಎಂದು ಹೋರಾಟದ ಹಾದಿಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ, ಕೇಂದ್ರ ಸರ್ಕಾರದೊಂದಿಗೆ ಮುಂದಿನ ಸುತ್ತಿನ ಮಾತುಕತೆ ಅಕ್ಟೋಬರ್ 6ರಂದು ನಿಗದಿಯಾಗಿದೆ.
ಲಡಾಖ್ನಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆ ಪ್ರದೇಶವನ್ನು ಸಂವಿಧಾನದ ಐದನೇ/ಆರನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬಹುದು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ 2019ರ ಸೆಪ್ಟೆಂಬರ್ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
1 ಲಡಾಖ್ಗೆ ರಾಜ್ಯದ ಸ್ಥಾನಮಾನ. ಪ್ರಸ್ತುತ ಇದು ಕೇಂದ್ರಾಡಳಿತ ಪ್ರದೇಶವಾಗಿದೆ.
2 ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ಸ್ವಾಯತ್ತ ಪ್ರದೇಶ ಎಂದು ಘೋಷಿಸಬೇಕು.
3 ಲೇಹ್, ಕಾರ್ಗಿಲ್ಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ (ಪ್ರಸ್ತುತ ಲೇಹ್ ಮಾತ್ರ ಲೋಕಸಭಾ ಕ್ಷೇತ್ರ ಹೊಂದಿದೆ)
4 ರಾಜ್ಯ ಲೋಕಸೇವಾ ಆಯೋಗವನ್ನು ಸ್ಥಾಪಿಸ ಬೇಕು. ಉದ್ಯೋಗಾವಕಾಶಗಳು ಸ್ಥಳೀಯರಿಗೆ ದೊರೆಯಬೇಕು.