ಮುಳುಗುತ್ತಿದೆ ಮರುಭೂಮಿಯ ಹಡಗು

onte
Published on

ಕೆಲ ವರ್ಷಗಳ ಹಿಂದೆಯಷ್ಟೇ ಜಾಗತಿಕವಾಗಿ ಒಂಟೆಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ ಈಗ ಹತ್ತರ ಪಟ್ಟಿಯಿಂದಲೂ ಹೊರಬಿದ್ದಿದೆ. 2012ರಿಂದ 2019ರ ಒಳಗೆ ಭಾರತದಲ್ಲಿ ಒಂಟೆಗಳ ಸಂಖ್ಯೆ ಶೇಕಡ 37ರಷ್ಟು ಕಡಿಮೆಯಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಇದೀಗ ಅಳಿದುಳಿದಿರುವ ಒಂಟೆಗಳ ಸಂಖ್ಯೆ ಎರಡು ಲಕ್ಷದ ಆಸುಪಾಸಿನಲ್ಲಿದೆ.

Chowka
 ‘ಮೊದಲ ಬಾರಿಗೆ ಹೆಣ್ಣುಒಂಟೆಯನ್ನು ಮಾರಲು ಬಂದು ಕೂತಿದ್ದೇನೆ. ಸಂಜೆಯಾಗುತ್ತಿದರೂ ಇನ್ನೂ ಬೋಣಿಯಾಗಿಲ್ಲ. ಇವತ್ಯಾಕೋ ಬರಿಗೈಯೇ ಸೈ’. ಮುಳುಗುತ್ತಿದ್ದ ಸೂರ್ಯನನ್ನು ದಿಟ್ಟಿಸುತ್ತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದ ಭೋಲೂ ರೈಕನ ಕಣ್ಣುಗಳು ಒಣಗಿದ್ದವು. ದೂರದ ಬಿಕಾನೇರ್​ನಿಂದ ಪುಷ್ಕರ ಸಂತೆಗೆ ಒಂಟೆ ಮಾರಲು ಬಂದ ಆತನಿಗೆ ನಾಳೆಯಲ್ಲೂ ಭರವಸೆ ಇದ್ದಂಗಿರಲಿಲ್ಲ. ಅಷ್ಟಕ್ಕೂ ಇಂತಹ ಪರಿಸ್ಥಿತಿ ಕಳೆದ ಕೆಲವು ವರ್ಷಗಳಿಂದ ಭೋಲೂ ನೋಡುತ್ತಿದ್ದಾನೆ. ಆದರೆ ಮೊದಲೆಲ್ಲ ಪುಷ್ಕರ ಸಂತೆಯೆಂದರೆ ಅದು ಜಾತ್ರೆಯಂತೆ. ಮರಳ ರಾಶಿಯಲ್ಲಿ ಮೈಚಾಚಿ ಎಲ್ಲೆಂದರಲ್ಲಿ ಮಲಗಿರುವ ಒಂಟೆಗಳು, ತಲೆಗೆ ಮುಂಡಾಸು ಸುತ್ತಿಕೊಂಡು ಅದನ್ನು ಮಾರಲು ಬಂದ ಒಡೆಯರ ರುಬಾಬು. ಅದರ ಖದರೇ ಬೇರೆಯದಿತ್ತು. ಆದರೆ ಈಗ ಆ ದಿನಗಳು ಬರೀ ಕನಸಷ್ಟೇ. ರಾಜಸ್ಥಾನವೆಂದಾಕ್ಷಣ ಕಣ್ಣಮುಂದೆ ಬರುತ್ತಿದ್ದ ಒಂಟೆಗಳು ಇವತ್ತಿನ ದಿನಕ್ಕೆ ಮಾಲೀಕನ ಪಾಲಿಗೆ ಭಾರವಾಗಿವೆ. ಪರಿಸ್ಥಿತಿ ಹೀಗೆ ಬದಲಾಗುವುದರ ಹಿಂದೆ ಕಾರಣಗಳೂ ನೂರೆಂಟಿವೆ.

ಭಾರತದಲ್ಲಿ ಕಾಣಬರುವ ಒಂಟೆಗಳನ್ನು ಎರಡು ಪ್ರಮುಖ ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಮೊದಲನೆಯದು ಬೆನ್ನಿನ ಮೇಲೆ ಎರಡು ಉಬ್ಬುಗಳುಳ್ಳ ಬ್ಯಾಕ್ಟ್ರಿಯನ್ ಮತ್ತು ಎರಡನೆಯದು ಒಂದೇ ಉಬ್ಬನ್ನು ಹೊಂದಿರುವ ಡ್ರೊಮೆಡೇರಿಯನ್ ಒಂಟೆಗಳು. ಬ್ಯಾಕ್ಟ್ರಿಯನ್ ಒಂಟೆಗಳು ಮೂಲತಃ ಅಫ್ಘಾನಿಸ್ತಾನದಲ್ಲಿನ ಹಿಂದುಕುಶ್ ಪರ್ವತಶ್ರೇಣಿಯನ್ನೊಳಗೊಂಡ ಬ್ಯಾಕ್ಟ್ರಿಯನ್ ಪ್ರದೇಶದ ಮೂಲದವಾಗಿದ್ದರೆ ಡ್ರೊಮೆಡೇರಿಯನ್ ಒಂಟೆಗಳು ಅರೇಬಿಯಾ ಮತ್ತು ಸೊಮಾಲಿಯಾದಿಂದ ಬಂದಿರುವಂತವು. ರಾಜಸ್ಥಾನದಲ್ಲಿ ಭಾರತದಲ್ಲಿನ ಒಟ್ಟೂ ಒಂಟೆಗಳ ಪೈಕಿ ಶೇಕಡ ಎಪ್ಪತ್ತರಷ್ಟು ಕಂಡುಬರುತ್ತವೆ. ತದನಂತರದ ಸ್ಥಾನದಲ್ಲಿ ಅನುಕ್ರಮವಾಗಿ ಹರಿಯಾಣ, ಗುಜರಾತ್ ಮತ್ತು ಉತ್ತರಪ್ರದೇಶಗಳಿವೆ. ಎರಡು ಉಬ್ಬುಗಳುಳ್ಳ ಬ್ಯಾಕ್ಟ್ರಿಯನ್ ಒಂಟೆಗಳು ಶೀತ ವಾತಾವರಣದಲ್ಲಿ ಕಾಣಸಿಗುತ್ತವೆ. ಹೀಗಾಗಿ ಭಾರತದಲ್ಲಿ ಅವುಗಳ ಸಂಖ್ಯೆ ಕಡಿಮೆಯಿದ್ದು, ಲಡಾಖ್ ಪ್ರದೇಶಕ್ಕಷ್ಟೇ ಸೀಮಿತವಾಗಿವೆ.

ಮರುಭೂಮಿಯ ತಾಪಮಾನ ವೈಪರೀತ್ಯದ ಪರಿಸ್ಥಿತಿಯಲ್ಲಿ ಆಹಾರ, ನೀರಿಲ್ಲದೆ ಬದುಕುವ ಜೊತೆಗೆ ಅಲ್ಲಿನ ಮರಳಿನ ಧೂಳನ್ನು ತಡೆದುಕೊಳ್ಳಲು ರಚಿತವಾಗಿರುವ ಉದ್ದ ಕಣ್ಣುರೆಪ್ಪೆಗಳು, ಮುಚ್ಚಬಲ್ಲ ಮೂಗಿನ ಹೊಳ್ಳೆಗಳು, ಮುಳ್ಳಿನ ಪೊದೆಗಳನ್ನೂ ಆರಾಮಾಗಿ ತಿನ್ನಲು ಸಾಧ್ಯವಾಗಿಸುವ ದಪ್ಪತುಟಿ, ಮೈಯಿಂದ ಬೆವರನ್ನು ಆವಿಯಾಗಿಸದಂತೆ ತಡೆಯುವ ದಪ್ಪಚರ್ಮ, ಆಹಾರವನ್ನು ಕೊಬ್ಬಿನ ರೂಪದಲ್ಲಿ ಶೇಖರಿಸಿಡಲು ನೆರವಾಗುವ ಬೆನ್ನಮೇಲಿನ ಉಬ್ಬು, ಮರಳಿನ ಮೇಲೆ ಆರಾಮವಾಗಿ ನಡೆಯಲು ಅನುಕೂಲವಾಗಿರುವ ಗೊರಸುಗಳು, ಇವುಗಳೆಲ್ಲ ಒಂಟೆಯನ್ನು ಮರುಭೂಮಿಯಲ್ಲಿ ಬಹುಪಯೋಗಿ ಆಗಿಸಿವೆ.

ಭಾರತದಲ್ಲಿ ಹೆಚ್ಚಾಗಿರುವ ಒಂದೇ ಉಬ್ಬಿನ ಡ್ರೊಮೆಡೇರಿಯನ್ ಒಂಟೆಗಳಲ್ಲಿ ಪ್ರಾದೇಶಿಕವಾಗಿ ಕಂಡುಬರುವ ವೈವಿಧ್ಯಮಯ ದೇಹರಚನೆ ಮತ್ತು ಚಹರೆಯ ಕಾರಣ ಅವುಗಳನ್ನು ಹಲವು ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಜೈಸಲ್ಮೇರಿ, ಬಿಕಾನೇರಿ, ಮಾರ್ವಾರಿ ಮೇವಾರಿ, ಕಚ್ಚಿ, ಶೇಖಾವತಿ ಹೀಗೆ ಇವುಗಳನ್ನೆಲ್ಲ ಹೆಚ್ಚಾಗಿ ರಾಜಸ್ಥಾನದ ಪ್ರಾದೇಶಿಕ ಹೆಸರುಗಳಿಂದ ಗುರುತಿಸಲಾಗುತ್ತಿದ್ದು, ಒಂದೊಂದು ತಳಿಯೂ ಅವುಗಳದ್ದೇ ಆದ ವೈಶಿಷ್ಟ್ಯ ಹೊಂದಿವೆ. ಉದಾಹರಣೆಗೆ ಜೈಸಲ್ಮೇರಿ ಒಂಟೆಗಳು ಮಧ್ಯಮ ಗಾತ್ರದವಾಗಿದ್ದು, ಕಂದುಬಣ್ಣವನ್ನು ಹೊಂದಿರುತ್ತವೆ. ಮರಳುಗಾಡಿನಲ್ಲಿ ದೂರಪ್ರಯಾಣಕ್ಕೆ ಹೇಳಿ ಮಾಡಿಸಿದಂತಿರುವ ಇವುಗಳನ್ನು ಸಫಾರಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಜೊತೆಗೆ ಈ ಒಂಟೆಗಳನ್ನು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಮತ್ತು ರಾಜಸ್ಥಾನ ಆರ್ಮಡ್ ಕಂಟಾಬ್ಯೂಲರಿಯಂಥ ರಕ್ಷಣಾ ಸೇವೆಯಲ್ಲಿಯೂ ಬಳಸಲಾಗುತ್ತದೆ. ಇವುಗಳಿಗೆ ಹೋಲಿಸಿದಲ್ಲಿ ಸದೃಢ ಮೈಕಟ್ಟಿನ, ಕಪ್ಪುವಿಶ್ರಿತ ಕೆಂಪುಬಣ್ಣವನ್ನು ಹೊಂದಿರುವ ಬಿಕಾನೇರಿ ಒಂಟೆಗಳು ಪ್ರತಿಕೂಲ ಹವಾಮಾನದಲ್ಲಿ ಆಹಾರವಿಲ್ಲದೆ ಹೆಚ್ಚು ಸಮಯ ಬದುಕಬಲ್ಲವು. ಹೀಗಾಗಿ ಇವುಗಳನ್ನು ಭಾರ ಹೋರಲು, ಸಾಮಾನು ಸರಂಜಾಮುಗಳ ಸಾಗಾಣಿಕೆಗೆ ಹೆಚ್ಚು ಬಳಸಲಾಗುತ್ತದೆ.

ಇಷ್ಟೆಲ್ಲ ವೈಶಿಷ್ಟ್ಯಗಳನ್ನು ಹೊಂದಿರುವ ಒಂಟೆಗಳು ಇದೀಗ ಆಧುನಿಕತೆಯ ಭರಾಟೆಯಲ್ಲಿ ಒಂಟಿಯಾಗುವ ಸ್ಥಿತಿಗೆ ಬಂದು ತಲುಪಿವೆ. ಕೆಲ ವರ್ಷಗಳ ಹಿಂದೆಯಷ್ಟೇ ಜಾಗತಿಕವಾಗಿ ಒಂಟೆಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ ಈಗ ಹತ್ತರ ಪಟ್ಟಿಯಿಂದಲೂ ಹೊರಬಿದ್ದಿದೆ. 2012ರಿಂದ 2019ರ ಒಳಗೆ ಭಾರತದಲ್ಲಿ ಒಂಟೆಗಳ ಸಂಖ್ಯೆ ಶೇಕಡ 37ರಷ್ಟು ಕಡಿಮೆಯಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಇದೀಗ ಅಳಿದುಳಿದಿರುವ ಒಂಟೆಗಳ ಸಂಖ್ಯೆ ಎರಡು ಲಕ್ಷದ ಆಸುಪಾಸಿನಲ್ಲಿದ್ದು, ಕೆಲ ಅಪ್ಪಟ ಭಾರತೀಯ ತಳಿಯ ಒಂಟೆಗಳಂತೂ ವಿನಾಶದ ಅಂಚಿಗೆ ಬಂದು ತಲುಪಿವೆ. ಮರಳುಗಾಡಿನ ಹಡಗು ನಿಧಾನವಾಗಿ ಮುಳುಗುತ್ತಿದೆ.

ರಾಜಸ್ಥಾನದಲ್ಲಿ ‘ರೈಕಾ’ ಎಂಬ ಒಂಟೆಗಾಹಿ ಪಂಗಡವು ಶತಮಾನಗಳಿಂದ ಒಂಟೆಯ ಪಾಲನೆಯಲ್ಲಿ ತೊಡಗಿಸಿಕೊಂಡಿದೆ. ತಾವು ಸಾಕುವ ಒಂಟೆಗಳ ಗುಂಪಿನಿಂದ ಪ್ರಾಯಕ್ಕೆ ಬಂದ ಗಂಡುಒಂಟೆಗಳನ್ನು ಹತ್ತಿರದ ಒಂಟೆಗಳ ಸಂತೆಗೆ ಕೊಂಡೊಯ್ದು ಮಾರುವುದು, ಕಾರ್ಪೆಟ್ಟುಗಳನ್ನು ತಯಾರಿಸಲು ಬಳಸಲ್ಪಡುವ ಒಂಟೆಗಳ ಬೆನ್ನಿನ ಮೇಲಿನ ಕೂದಲನ್ನು ವರ್ತಕರಿಗೆ ವಿತರಿಸುವುದು ಮತ್ತು ಅವುಗಳ ಹಾಲನ್ನು ಮಾರುವುದರಿಂದ ತಮ್ಮ ಬದುಕಿನ ಬಂಡಿಯನ್ನು ಈ ಜನರು ನೂಕಿಕೊಂಡು ಬರುತ್ತಿದ್ದಾರೆ. ರಾಜಸ್ಥಾನದಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಾಗಿರಲು ಈ ಪಂಗಡದವರ ಕಾಣಿಕೆ ದೊಡ್ಡದಿದೆ.

ಅಲ್ಲಿನ ಬಯಲುಗಾಡುಗಳಲ್ಲಿ ಒಂಟೆಗಳ ಗುಂಪನ್ನು ಮೇಯಿಸಲು ಹೋದಾಗ ಅದರ ಬದಲಿಗೆ ಬಯಲುಗಾಡಿನ ಮಾಲೀಕರಿಗೆ ಒಂಟೆಗಳ ಹಾಲನ್ನು ಕೊಡುವುದರ ಮೂಲಕ ಈ ಒಂಟೆಗಾಹಿಗಳ ಮತ್ತು ರೈತರ ನಡುವಿನ ಬಾಂಧವ್ಯ ಗಟ್ಟಿಯಾಗಿರುತ್ತಿತ್ತು. ಜೊತೆಗೆ ಒಂಟೆಗಳ ಲದ್ದಿ ಉತ್ತಮ ಗೊಬ್ಬರವಾಗಿರುವುದರ ಕಾರಣಕ್ಕೆ ರೈತರು ಈ ಒಂಟೆಗಳನ್ನು ಬಯಲಿನಲ್ಲಿ ಮೇಯಲು ಪರವಾನಗಿ ನೀಡುತ್ತಿದ್ದರು. ಆದರೆ ಆಧುನಿಕತೆಯ ಗಾಳಿ ಬೀಸುತ್ತಿದ್ದಂತೆ ಇದೀಗ ರಾಜಸ್ಥಾನದ ಚಿತ್ರಣ ಸಂಪೂರ್ಣ ಬದಲಾಗಿದೆ. ಅಲ್ಲಿನ ಹೆಚ್ಚಿನ ಬಯಲುಗಾಡುಗಳನ್ನು ದೊಡ್ಡ ಸೌರವಿದ್ಯುತ್ ಸ್ಥಾವರಗಳು ಆಕ್ರಮಿಸಿವೆ. ಜೊತೆಗೆ ಅಲ್ಲಿಗೆ ಬಂದಿರುವ ನೀರಾವರಿ ಯೋಜನೆಗಳಿಂದ ಅಳಿದುಳಿದ ಬಯಲುಗಾಡುಗಳು ಕೃಷಿಭೂಮಿಯಾಗಿ ಮಾರ್ಪಟ್ಟಿವೆ. ಹೀಗಾಗಿ ಒಂಟೆಗಾಹಿಗಳು ಸಾಕುಪ್ರಾಣಿಗಳ ಮೇವನ್ನು ದುಬಾರಿ ದರ ತೆತ್ತು ಖರೀದಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇನ್ನೊಂದೆಡೆ ರಾಜ್ಯದ ರಸ್ತೆಸೌಕರ್ಯವು ಅಭಿವೃದ್ಧಿಗೊಂಡು ಹಳ್ಳಿಹಳ್ಳಿಗಳಿಗೆ ರಸ್ತೆಸಂಪರ್ಕ ತಲುಪಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರೀಗ ಸಾಂಪ್ರದಾಯಿಕ ಒಂಟೆಗಳ ಬದಲಿಗೆ ಮೋಟಾರು ವಾಹನಗಳನ್ನು ಕೊಳ್ಳುತ್ತಿದ್ದಾರೆ. ಉಳುಮೆಗೆ ಟ್ರಾ್ಯಕ್ಟರ್​ಗಳು ಬಂದು ಕೂತಿವೆ. ಗಡಿಭಾಗದಲ್ಲಿಯೂ ರಸ್ತೆಗಳ ಸಂಪರ್ಕ ಸುಧಾರಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ಒಂಟೆಗಳ ನಿಯುಕ್ತಿ ಕಡಿಮೆಯಾಗುತ್ತಿದೆ.

ಒಂಟೆಗಳ ಹಾಲು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದ್ದರೂ, ಅದನ್ನು ಗ್ರಾಹಕರಿಗೆ ಸರಿಯಾಗಿ ತಲುಪಿಸುವ ವ್ಯವಸ್ಥೆ ಹಿಂದಿನಿಂದಲೂ ಪರಿಣಾಮಕಾರಿಯಾಗಿಲ್ಲ. ಇವೆಲ್ಲದರ ಜೊತೆಗೆ ಇತ್ತೀಚಿನ ಬೆಳವಣಿಗೆಯೊಂದು ಒಂಟೆಗಾಹಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. 2015ರಲ್ಲಿ ರಾಜಸ್ಥಾನ ಸರ್ಕಾರವು ಒಂಟೆಯನ್ನು ರಾಜ್ಯಪ್ರಾಣಿಯನ್ನಾಗಿ ಘೊಷಿಸುವುದರ ಜೊತೆಗೆ ಅವುಗಳ ಹತ್ಯೆ ಮತ್ತು ರಾಜ್ಯದ ಹೊರಗೆ ರಫ್ತು ಮಾಡುವುದನ್ನು ನಿಷೇಧಿಸಿತು. ಒಂಟೆಗಳ ಸಂಖ್ಯೆ ಕುಸಿಯಲು ಅವುಗಳ ಹತ್ಯೆಯೇ ಪ್ರಮುಖ ಕಾರಣವೆಂಬ ದೃಷ್ಟಿಕೋನದಿಂದ ಜಾರಿಗೆ ತರಲಾದ ಆ ಕಾಯಿದೆಯ ಉದ್ದೇಶ ಸರಿಯಾಗಿ ಇದ್ದರೂ ಪರಿಣಾಮ ಬೇರೆಯದೇ ಆಯಿತು. ರಫ್ತು ನಿಲ್ಲುತ್ತಿದ್ದಂತೆ ಹೊರರಾಜ್ಯಗಳಿಂದ ರಾಜಸ್ಥಾನಕ್ಕೆ ಬರುತ್ತಿದ್ದ ಒಂಟೆವ್ಯಾಪಾರಿಗಳು ನಾಪತ್ತೆಯಾದ ಪರಿಣಾಮ ಅಲ್ಲಿನ ಒಂಟೆಗಳ ಸಂತೆಗಳು ಖಾಲಿಹೊಡೆಯತೊಡಗಿದವು. ಒಂಟೆಯ ಮಾಂಸ ಕಳ್ಳದಾರಿಯಿಂದ ಹೊರಗೆ ಹೋಗುತ್ತಿದ್ದರೂ ಕಾಯಿದೆಯ ಬರೆ ಒಂಟೆಗಾಹಿಗಳಿಗೆ ಬಿತ್ತು. ಇದೆಲ್ಲವುದರ ಪರಿಣಾಮದಿಂದ ಕಂಗೆಟ್ಟ ಅವರುಗಳು ಕುಲಕಸುಬಿಗೆ ವಿದಾಯ ಹೇಳಿ, ಒಂಟೆಗಳನ್ನು ಮಾರಲು ಸಂತೆಗೆ ಬಂದು ಕೂತರು.

ಕೆಲವೇ ವರ್ಷಗಳ ಹಿಂದೆ 80 ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಬಿಕರಿಯಾಗುತ್ತಿದ್ದ ಒಂಟೆಗಳ ದರ ಹತ್ತುಸಾವಿರದ ಕೆಳಗೆ ಕುಸಿಯಿತು. ಇದನ್ನು ಕಂಡ ಇನ್ನಷ್ಟು ಮಂದಿ ಒಂಟೆಗಾಹಿಗಳು ಊರು ಬಿಟ್ಟು ನಾಡು ಸೇರಿ ಕೂಲಿಕೆಲಸಕ್ಕೆ ಸೇರಿಕೊಂಡರು. ಈ ಎಲ್ಲ ಬೆಳವಣಿಗೆಗಳ ವಿರುದ್ಧ ಮೊಳಗಿದ ಕೂಗಿನ ಬಿಸಿ ಸರ್ಕಾರಕ್ಕೂ ತಟ್ಟಿ, ಅಲ್ಲಿನ ಸರ್ಕಾರ ಶಾಸನವನ್ನು ಮಾರ್ಪಡಿಸುವ ಜೊತೆಗೆ ಒಂಟೆಗಾಹಿಗಳಿಗೆ ಸಬ್ಸಿಡಿ ಕೊಡುವಂತಹ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಇಂತಹುದೇ ಪರಿಸ್ಥಿತಿ ಕೆಲ ವರ್ಷಗಳ ಹಿಂದೆ ಚೀನಾದಲ್ಲೂ ಉದ್ಭವವಾಗಿದ್ದಾಗ ಅಲ್ಲಿನ ಸರ್ಕಾರ ಒಂಟೆಗಾಹಿಗಳಿಗೆ ತರಬೇತಿ ಕೊಡುವುದರ ಜೊತೆಗೆ ಒಂಟೆಯ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸಿಕೊಟ್ಟ ಪರಿಣಾಮ ಅಲ್ಲಿ ಒಂಟೆಗಳ ಸಂಖ್ಯೆಯಲ್ಲಿ ಸುಧಾರಣೆ ಕಂಡುಬಂದ ಉದಾಹರಣೆ ನಮ್ಮ ಮುಂದಿದೆ. ಹೆಚ್ಚು ಪೋ›ಟೀನ್, ಕಡಿಮೆ ಲ್ಯಾಕ್ಟೋಸ್ ಹೊಂದುವುದರ ಜೊತೆಗೆ ಹಲವಾರು ಉಪಯುಕ್ತ ಖನಿಜಗಳ ಆಗರವಾಗಿರುವ ಒಂಟೆಗಳ ಹಾಲಿಗೆ ಭಾರತದಾದ್ಯಂತ ಬೇಡಿಕೆಯಿದೆ. ಈ ಹಾಲು ಹೃದ್ರೋಗ, ಸಕ್ಕರೆ ಕಾಯಿಲೆ ಮತ್ತು ಆಟಿಸಮ್ಂಥ ರೋಗಗಳಿಗೆ ಉತ್ತಮ ಔಷಧವೆನ್ನುವ ಮಾತು ಇದೆಯಾದರೂ ಈ ಹೇಳಿಕೆಗಳಿಗೆ ನಮ್ಮಲ್ಲಿನ ಅಧಿಕೃತ ಸಂಸ್ಥೆಗಳಿಂದ ಮನ್ನಣೆ ಸಿಗಬೇಕಾದ ಜರೂರತ್ತಿದೆ. ಅದರ ನಡುವೆಯೂ ಸದ್ಯಕ್ಕಿರುವ ಬೇಡಿಕೆಗೂ ಒಂಟೆಹಾಲನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಅಗತ್ಯವಾಗಿರುವ ಶೈತ್ಯಾಗಾರ ಮತ್ತು ಸಾಗಣಿಕೆಯ ಮೂಲಭೂತ ಸೌಕರ್ಯದ ಕೊರತೆಯಿಂದ ಇಷ್ಟುವರ್ಷವಾದರೂ ಸರಿಯಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ.

ಈ ನಿಟ್ಟಿನಲ್ಲಿ ಅಮೂಲ್ ಸಂಸ್ಥೆಯಿದೀಗ ಮೊದಲ ಹೆಜ್ಜೆಯಿಟ್ಟಿದ್ದು ಕಛ್ ಭಾಗದ ಒಂಟೆಗಾಹಿಗಳಿಂದ ಒಂಟೆಗಳ ಹಾಲನ್ನು ಸಂಗ್ರಹಿಸಿ ಅದನ್ನು ಐಸ್ಕ್ರೀಂ, ಚಾಕೋಲೇಟ್, ಹಾಲುಪುಡಿಯಂತಹ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸನ್ನು ಕಂಡಿದೆ. ಈ ಯಶಸ್ಸನ್ನು ಕಂಡ ಇನ್ನೂ ಕೆಲವು ಸಂಸ್ಥೆಗಳು ರಾಜಸ್ಥಾನದಲ್ಲಿ ಒಂಟೆಹಾಲಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮುಂದೆಬಂದಿವೆ.

ಕೋಲ್ಕತದ ರಾಷ್ಟ್ರೀಯ ನಾರು ತಂತ್ರಜ್ಞಾನ ಸಂಸ್ಥೆಯು ಪ್ಲಾಸ್ಟಿಕ್ ಬ್ಯಾಗುಗಳಿಗೆ ಪರ್ಯಾಯವಾಗಿ ಒಂಟೆಯ ಕೂದಲನ್ನು ಸೆಣಬಿನ ಜೊತೆಗೆ ಸೇರಿಸಿ ತಯಾರಿಸಲಾಗುವ ಚೀಲಗಳನ್ನು ಸಧ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಎಲ್ಲ ಸಂಘಟಿತ ಪ್ರಯತ್ನಗಳನ್ನು ನಮ್ಮ ಚಿಂತಕರ ಚಾವಡಿಯು ಸಮರ್ಪಕವಾಗಿ ಬಳಸಿ, ಕ್ರಿಯಾಯೋಜನೆ ರೂಪಿಸದಿದ್ದಲ್ಲಿ ಭಾರತದಲ್ಲಿ ಒಂಟೆ ಮತ್ತು ಅದರ ಮಾಲೀಕರ ಪರಿಸ್ಥಿತಿ ಚಿಂತಾಜನಕವಾಗಲಿದೆ.

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net