

ಕೋವಿಡ್ ಕುರಿತ ಚರ್ಚೆಯಲ್ಲಿ ಸಾಕಷ್ಟು ಬೇಸತ್ತಿರುವ ನಮಗೆ ಅದರ ಕುರಿತಾದ ಸಂಶೋಧನೆ ಬಗ್ಗೆ ಅರಿತರೆ ರೋಮಾಂಚನ ಆಗುವುದು ಖಚಿತ. ಆ ಬಗ್ಗೆ ಮಾಹಿತಿ ಇಲ್ಲಿದೆ. ‘2DG’ ಎಂಬ ಔಷಧವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಎಆರ್ಡಿಒ) ಸಿದ್ಧಪಡಿಸಿರುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಓದಿದ್ದೀರಿ ಅಥವಾ ಕೇಳಿದ್ದೀರಿ. ವ್ಯವಹಾರದ ವಹಿವಾಟು ಹೇಗೆ ಹಣಕಾಸನ್ನು ಅವಲಂಬಿಸಿರುವುದೋ ಹಾಗೆ ಜೀವಕೋಶದ ವಹಿವಾಟು ಶಕ್ತಿಯನ್ನು ಅವಲಂಬಿಸಿರುತ್ತದೆ. ಆ ಶಕ್ತಿಯನ್ನು ಆಹಾರದ ಅಣುಗಳಲ್ಲಿರುವ ರಾಸಾಯನಿಕ ಶಕ್ತಿಯಾಗಿ ಒದಗಿಸಲಾಗುತ್ತದೆ.
ಆರೋಗ್ಯವಂತರ ಜೀವಕೋಶಗಳಿಗೆ ಆಹಾರವಾಗಿ ಬೆಂಬಲಿಸುವ ಆಹಾರದ ಅಣುಗಳೇ, ರೋಗಗ್ರಸ್ತ ಜೀವಕೋಶಗಳನ್ನು ತಲುಪಿದಾಗ ರೋಗವನ್ನು ಉಲ್ಬಣ ಮಾಡಲೂ ಸಾಧ್ಯ. ದೇಹದ ಪೌಷ್ಟಿಕತೆಗೆ ರೋಗಿ ತಿನ್ನುವ ಆಹಾರ ರೋಗಕಾರಕಗಳ ಪೌಷ್ಟಿಕತೆ ಹೆಚ್ಚಿಸಿ ಸಾವಿಗೂ ಕಾರಣವಾಗಬಹುದು! ಅದೇನೆ ಇರಲಿ, ಆಹಾರ ಮೈಗೂಡಿಸಿಕೊಳ್ಳುವಿಕೆ ಬಗೆಗೆ ಮೊದಲು ತಿಳಿಯೋಣ. ನಾವು ವೈವಿಧ್ಯಮಯ ಆಹಾರವನ್ನು ಸೇವನೆ ಮಾಡಿದರೂ ಅವುಗಳಲ್ಲಿನ ಬಹುಶರ್ಕರ ಆಹಾರ ವಿಭಜನೆ ಆಗಿ ಏಕಶರ್ಕರ (ಮೋನೊಸ್ಯಾಕರೈಡ್) ಆಗಿ ರಕ್ತದಲ್ಲಿ ಸೇರ್ಪಡೆ ಆಗುತ್ತದೆ.
ಸರಳವಾಗಿ ಹೇಳುವುದಾದರೆ- ಅಕ್ಕಿಯನ್ನೇ ತಿನ್ನಿ, ಸಕ್ಕರೆಯನ್ನೇ ತಿನ್ನಿ ಅವು ಜೀರ್ಣಕ್ರಿಯೆಯಲ್ಲಿ ವಿಭಜನೆಗೊಂಡು ಗ್ಲೂಕೋಸ್ (C6H12O6) ರಕ್ತವನ್ನು ಪ್ರವೇಶಿಸುತ್ತದೆ. ಹೀಗೆ ಬೇರೆ-ಬೇರೆ ಆಹಾರಗಳೂ- ಉದಾಹರಣೆಗೆ ಯಾವುದೇ ದ್ವಿದಳಧಾನ್ಯ ಸೇವನೆ ಮಾಡಿದರೂ, ಅವು ಪ್ರೋಟೀನ್ಯುುತವಾದಾಗ್ಯೂ ಮೈಗೂಡುವಾಗ (Assimilation) ಅಮಿನೋ ಆಮ್ಲಗಳಾಗಿ ದೇಹವನ್ನು ಸೇರುತ್ತವೆ. ಆದ್ದರಿಂದ ರುಚಿ, ಬೆಲೆ, ಪರಿಮಳ ಮುಂತಾದ ದೃಷ್ಟಿಯಿಂದ ಪ್ರತಿದಿನ ವೈವಿಧ್ಯಮಯ ಆಹಾರ ತಿಂದರೂ ಅವು ರಕ್ತಪರಿಚಲನೆಗೆ ಸೇರ್ಪಡೆ ಆಗುವುದು ಮೂಲ ಅಣುಗಳಾಗಿ. ಈ ಅಣುಗಳ ಪೈಕಿ ಶಕ್ತಿಯ ಆಕರ ಅಣು ಗ್ಲೂಕೋಸ್. ವಿಶೇಷ ಸಂದರ್ಭಗಳಲ್ಲಿ ಬೇರೆ ಅಣುಗಳು ಬಳಕೆ ಆಗಬಹುದು (ಅಮಿನೋಆಮ್ಲ, ಕೊಬ್ಬಿನಾಮ್ಲ), ಅವುಗಳ ಜೀರ್ಣಕ್ರಿಯೆ ನಿಧಾನ. ಅವು ಹೆಚ್ಚು ಶಕ್ತಿ ಬಿಡುಗಡೆ ಮಾಡಿದರೂ ಶಕ್ತಿ ಮೈಗೂಡಿಬರುವುದು ತಡ. ಆದರೆ ನೀರಿನಲ್ಲಿ ವಿಲೀನವಾಗಬಲ್ಲ ಸಕ್ಕರೆ, ಗ್ಲೂಕೋಸು ಬೇಗ ಮೈಗೂಡುತ್ತವೆ- ಈಗಾಗಲೇ ಹೇಳಿದ ಹಾಗೆ ಗ್ಲೂಕೋಸ್ ರೂಪದಲ್ಲಿ!
ನಾವು ಉಪವಾಸವಿದ್ದರೆ? ಆಗಲೂ ನಮ್ಮ ದೇಹದಲ್ಲಿ ಗ್ಲೂಕೋಸ್ ಆಗಬಲ್ಲ ಗೈಕ್ಲೋಜನ್ ಅಣುಗಳ ಸಂಗ್ರಹವಿದೆ. ಅದೂ ಬಹುಶರ್ಕರ. ಆ ಗ್ಲೈಕೋಜನ್ ವಿಭಜನೆ ಆಗಿ ಗ್ಲೂಕೋಸ್ನ್ನು ಉತ್ಪಾದಿಸುತ್ತದೆ. ರಕ್ತದಲ್ಲಿ ಗ್ಲೂಕೋಸ್ ಅಧಿಕವೂ ಆಗಬಾರದು, ಕಡಿಮೆಯೂ ಆಗಬಾರದು, ಅಧಿಕವಾಗದ ಹಾಗೆ, ಕಡಿಮೆಯಾಗದ ಹಾಗೆ ನೋಡಿಕೊಳ್ಳುವ ವ್ಯವಸ್ಥೆಯಿದೆ. ಅಧಿಕ ಗ್ಲೂಕೋಸ್ ಆಯಿತೆನ್ನಿ ಆಗ ಮಧುಮೇಹ ಇಲ್ಲವೆ, ಸಕ್ಕರೆ ಕಾಯಿಲೆ ಎಂದು ಹೇಳಲಾಗುತ್ತದೆ (ವಾಸ್ತವವಾಗಿ ಗ್ಲೂಕೋಸ್ ಕಾಯಿಲೆ ಎನ್ನಬೇಕು). ಗ್ಲೂಕೋಸ್ ಏಕಶರ್ಕರ.
ಆಯಾಸ, ಬಾಯಾರಿಕೆ, ಸುಸ್ತು ಆಯಿತೆನ್ನಿ, ಆಟಗಾರರು ಆಟವಾಡಿ ದಣಿದಿರುವ ಪ್ರಸಂಗ ಕಲ್ಪಿಸಿಕೊಳ್ಳಿ, ಅವರಿಗೆ ಶಕ್ತಿಪೂರಿತ ಆಹಾರ ನೀಡಬೇಕು. ಕೊಬ್ಬಿನ ಅಣುಗಳಲ್ಲಿ ಶಕ್ತಿ ಇದೆ. ಆದರೆ ತುಪ್ಪವನ್ನು ಕುಡಿದರೆ ದಿಢೀರನೆ ಶಕ್ತಿ ಬರದು. ಅವರಿಗೆ ಶಕ್ತಿ ಇರುವ ಅಣುವಿಗಿಂತ ಶಕ್ತಿಯನ್ನು ದಿಢೀರನೆ ಬಿಡುಗಡೆ ಮಾಡುವ ಅಣುಗಳನ್ನುಳ್ಳ ಆಹಾರ ನೀಡಬೇಕು. ಅದಕ್ಕೆಂದೆ ಅವರಿಗೆ ಗ್ಲೂಕೋಸ್ ದ್ರಾವಣ ನೀಡಲಾಗುತ್ತದೆ. ನೀರಿನಲ್ಲಿ ವಿಲೀನ ಆಗುವ ಗ್ಲೂಕೋಸ್ ದಿಢೀರ್ ಮೈಗೂಡಿಕೆಯಾಗಿ ಶೀಘ್ರವೇ ಶಕ್ತಿ ಬಿಡುಗಡೆ ಆಗುತ್ತದೆ.
ಇವೆಲ್ಲ ರಸಾಯನಶಾಸ್ತ್ರ ತಿಳಿದು ಅರ್ಥಮಾಡಿಕೊಂಡ ಅಂಶಗಳೇ. ಆದರೆ ಜನರಿಗೆ ಆ ಬಗ್ಗೆ ಅನುಭವದಿಂದ ತಿಳಿದಿತ್ತು. ‘ಬಾಯಾರಿದ ಹೊತ್ತಾಜ್ಯ ದೊರೆತು ಫಲವೇನು?’ (ಬಾಯಾರಿಕೆ ಆಗಿರುವಾಗ ತುಪ್ಪ ಸಿಕ್ಕರೇನು ಫಲ?) ಎಂದು 800 ವರ್ಷಗಳ ಮೊದಲೇ ಹರಿಶ್ಚಂದ್ರ ಕಾವ್ಯದಲ್ಲಿ ಪ್ರಸ್ತಾಪ ಇದೆ. ಮನೆಗೆ ಬಿಸಿಲಿನಲ್ಲಿ ಬಂದವರಿಗೆ ನೀರು, ಬೆಲ್ಲ ನೀಡುವುದು/ಪಾನಕ ನೀಡುವುದು ಈಗಲೂ ರೂಢಿಯಲ್ಲಿದೆ.
ಈಗ ಡಿ.ಆರ್.ಡಿ.ಓ.ದ ಡಾ.ಅನಿಲ್ಕುಮಾರ್ ಮಿಶ್ರಾ ಅವರ ಸಂಶೋಧನೆಯ ವೈಶಿಷ್ಟ್ಯ ಗಮನಿಸಲು ಬೇಕಾದ ಹಿನ್ನೆಲೆ ಪಡೆದಿದ್ದೇವೆ. ಗ್ಲೂಕೋಸ್ ಎನ್ನುವುದು ಆರು ಕಾರ್ಬನ್ಗಳಿರುವ ಅಣು. ಈ ಪೈಕಿ ಒಂದು ಅಣುವಿನ ಭಾಗ 'CHO' ರೂಪದಲ್ಲಿದ್ದರೆ ಉಳಿದ ನಾಲ್ಕು ಕಾರ್ಬನ್ಗಳು ‘CHOH’ ರೂಪದವು. ಒಂದು ‘CH2OH’ ರೂಪದ್ದು. ಈ ಪೈಕಿ ಎರಡನೇ ಕಾರ್ಬನ್ನಲ್ಲಿ ‘CHOH’ನ ಆಕ್ಸಿಜನ್ ತೆಗೆದುಹಾಕಿ ‘CH2’ ಆಗಿ ಪರಿವರ್ತಿಸಿದರೆ 2-Deoxy Glucose ಬರುತ್ತದೆ, ಇದನ್ನು 2ಡಿಜಿ ಎನ್ನಲಾಗುತ್ತದೆ. ಇದು ಗ್ಲೂಕೋಸಿನ ಹಾಗೆಯೇ ನೀರಿನಲ್ಲಿ ವಿಲೀನವಾಗುವಂಥದ್ದು. ಇದು ಆಹಾರದ ಶಕ್ತಿದಾಯಕ ಅಣುವನ್ನು ಔಷಧವಾಗಿ ಮಾಡಿರುವ ಜಾಣ್ಮೆ. 2ಡಿಜಿಯನ್ನು ಪುಡಿಯ ರೂಪದಲ್ಲಿ ರೋಗಿಗೆ ಬಾಯಿ ಮುಖೇನ ನೀಡಬಹುದು. ಕ್ಯಾನ್ಸರ್ ರೋಗಿಗೆ ಈ ರೀತಿ ಮಾಡುವುದರಿಂದ- 2ಡಿಜಿ ಕ್ಯಾನ್ಸರ್ ಜೀವಕೋಶಗಳಿಗೆ ಸುಲಭವಾಗಿ ಪ್ರವೇಶಿಸುವುದು. ನೀರಿನಲ್ಲಿ ವಿಲೀನವಾಗುವ ಗ್ಲೂಕೋಸ್ನ್ನು ಹೋಲುವ ಈ ಅಣುವಿಗೆ ಯಾವುದೇ ಪ್ರವೇಶ ನಿರ್ಬಂಧ ಇರುವುದಿಲ್ಲ.
ಕ್ಯಾನ್ಸರ್ ಜೀವಕೋಶಗಳು ವೇಗವಾಗಿ ಬೆಳೆಯುತ್ತಿರುತ್ತವೆ. ಕಟ್ಟಡ ಕಟ್ಟಲು ಕೂಲಿಯಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೇಗೆ ಬೇಕೋ ಹಾಗೆಯೇ ಹೆಚ್ಚಿನ ಗ್ಲೂಕೋಸ್ ಬೇಡಿಕೆಯೂ ಇರುತ್ತದೆ. ಗ್ಲೂಕೋಸ್ಗೆ ಬದಲಾಗಿ ಅಲ್ಲಿಗೆ 2ಡಿಜಿ ಹೋಗುತ್ತದೆ. ಆದರೆ 2ಡಿಜಿ ವಿಭಜನೆ ಹೊಂದಿ ಶಕ್ತಿ ಬಿಡುಗಡೆ ಮಾಡುವ ಪೈರುವೇಟ್ಗಳಾಗಿ ಚೂರಾಗದು. ಆಗ ಶಕ್ತಿ ಬಿಡುಗಡೆ ಆಗುವುದಿಲ್ಲ. ಕೂಲಿಯವರ ಹೆಸರಿನಲ್ಲಿ ಸೋಮಾರಿಗಳು ಕೆಲಸಕ್ಕೆ ಬಂದು ವಿಳಂಬ ಮಾಡಿದರೆ ಕಟ್ಟಡ ನಿರ್ಮಾಣ ಸ್ಥಗಿತ ಆಗುವ ಹಾಗೆ ಕ್ಯಾನ್ಸರ್ ಜೀವಕೋಶಗಳು ನಿಷ್ಕ್ರಿಯ ಆಗಿಬಿಡುತ್ತವೆ. ಅಂದರೆ ಕ್ಯಾನ್ಸರ್ ವಾಸಿ ಆದಹಾಗೆಯೆ. 2ಡಿಜಿ ತನ್ನ ಕೆಲಸ ಮುಗಿದಮೇಲೆ ನೀರಿನಲ್ಲಿನ ವಿಲೀನಕ ಘಟಕದಿಂದಾಗಿ ಮೂತ್ರದೊಂದಿಗೆ ಹೊರಬರಬಲ್ಲದು ಕೂಡ! ಔಷಧ ತನ್ನ ಪಾತ್ರ ಮುಗಿದ ಕೂಡಲೇ ದೇಹದಲ್ಲಿ ಉಳಿಯಬಾರದು. ಅದಕ್ಕೂ ಇಲ್ಲಿ ಅವಕಾಶವಿದೆ. ಆರೋಗ್ಯಕರ ಜೀವಕೋಶಗಳಿಗೆ ಶಕ್ತಿ ಪೊಟ್ಟಣವಾಗಿದ್ದ ಗ್ಲೂಕೋಸ್ನ್ನು 2ಡಿಜಿಯಾಗಿ ಮಾರ್ಪಾಡು ಮಾಡಿ ರೋಗಗ್ರಸ್ತಜೀವಕೋಶಗಳಿಗೆ ವಿಷವಾಗಿಸಿದ್ದೆ ಈ ತಂತ್ರ!
ವಿಶೇಷ ಎಂದರೆ 2ಡಿಜಿ ಕೋವಿಡ್ ವೈರಸ್ನ್ನು ಸೋಂಕು ಆಗಿ ಪಡೆದಿರುವ ಜೀವಕೋಶದ ಕಾರ್ಯಗಳನ್ನು ಕ್ಯಾನ್ಸರ್ ಕೋಶಗಳನ್ನು ಸ್ಥಗಿತಗೊಳಿಸಿದ ಹಾಗೆಯೇ ಸ್ಥಗಿತಗೊಳಿಸಬಲ್ಲದು ಎಂಬುದು ಸಂಶೋಧನೆ, ಪ್ರಯೋಗದಿಂದ ರುಜುವಾತಾಗಿದೆ. ಈ ಸಂಶೋಧನೆಯ ಇನ್ನೊಂದು ವಿಶೇಷ ಎಂದರೆ 2ಡಿಜಿಯನ್ನು ವೇಗವಾಗಿ ಉತ್ಪಾದನೆ ಮಾಡಲು, ವಿತರಣೆ ಮಾಡಲು ಸಾಧ್ಯ. ಬೇಕಾಗಿರುವ ಪರಿಮಾಣದಲ್ಲಿ ದುಬಾರಿ ಔಷಧ ಆಗಲಾರದು. ಚುಚ್ಚುಮದ್ದಿಗೆ ಬದಲಾಗಿ ರೋಗಿಗಳ ಬಾಯಿಗೇ ನೀಡಬಹುದಾದ ಕಾರಣ ಚಿಕಿತ್ಸೆಯೂ ಸರಳ.
ಈ ವಿವರಣೆ ಓದಿದಾಗ ಸಾಮಾನ್ಯವಾಗಿ ಏಳುವ ಸಂದೇಹ ಒಂದಿದೆ. ಅದೆಂದರೆ- 2ಡಿಜಿ ಆರೋಗ್ಯವಂತ ಜೀವಕೋಶಗಳನ್ನು ಪ್ರವೇಶಿಸದೆ ಅನಾರೋಗ್ಯಕ್ಕೆ ಒಳಗಾದ ಜೀವಕೋಶಗಳಿಗೆ ಮಾತ್ರ ತಲುಪುವುದು ಹೇಗೆ? ಯಾವುದೇ ಔಷಧವನ್ನು ದೇಹದ ಒಂದು ಭಾಗಕ್ಕೆ ನೀಡಿದಾಗ ರೋಗಗ್ರಸ್ತ ಸ್ಥಾನಗಳಿಗೆ ಮಾತ್ರ ಅದು ತಲುಪುವುದು ಅನೇಕ ಔಷಧಗಳ ವಿಷಯಯದಲ್ಲಿ ನಿಜ. ಹಾಗಾಗುತ್ತದೆಯೆಂಬ ವಿಷಯಕ್ಕೆ- ರೋಗವಾಸಿಯಾಗುವ ಪುರಾವೆ ಇದೆಯಲ್ಲ. ಅಣುಮಟ್ಟದ ಕ್ರಿಯಾವಿನ್ಯಾಸವನ್ನು (Mechanism) ಅರಿಯಲು ಪರಿಣತರಿಗೆ ಬಿಟ್ಟುಬಿಡೋಣ.
ಈ ಸಂಶೋಧನೆಯನ್ನು ಭಾರತ ಸರ್ಕಾರದ ವೈದ್ಯಕೀಯ ಸಂಸ್ಥೆಗಳು ಮೂರು ಹಂತದ ಪರೀಕ್ಷೆಗೆ ಒಳಪಡಿಸಿ-ತುರ್ತ ಪರಿಸ್ಥಿತಿಯಲ್ಲಿ ಮಾತ್ರ ಬಳಕೆ ಮಾಡಲು ಈ ಔಷಧ ಮಾನ್ಯವೆಂದು ಅನುಮತಿ ಪ್ರಮಾಣಪತ್ರ ನೀಡಿವೆ. ಕೋವಿಡ್ ಸುಳಿಯಿಂದ ಪಾರಾಗುವ ಒತ್ತಡ ಈ ಬಗೆಯ ಮನ್ನಣೆಗೆ ಕಾರಣ ಇರಬಹುದೆಂಬ ಅಪಶ್ರುತಿ ಕೂಡ ಕೇಳಿಬರುತ್ತಿದೆ. ಅದನ್ನು ಮತ್ತಷ್ಟು ಪ್ರಯೋಗಗಳಿಂದ ಖಾತರಿಪಡಿಸಬೇಕಾಗಿದೆ.
ಮುಂದಿನ ದಿನಗಳಲ್ಲಿ ಈ ಔಷಧ ಕುರಿತಂತೆ ಮಾಡಬಹುದಾದ ಪರೀಕ್ಷೆಗಳು ಇವು:
1) ಈ ಔಷಧ ಆರೋಗ್ಯಕರ ಜೀವಕೋಶಗಳ ಮೇಲೆ ಅಡ್ಡಪರಿಣಾಮ ಉಂಟುಮಾಡಬಹುದೆ?
2) ಅನುಪಾನ (ಡೋಸೇಜ್)ದಿಂದ ಅಡ್ಡಪರಿಣಾಮ ತಡೆಯಬಹುದೆ?
3) ವಿಭಿನ್ನ ವಯೋಮಾನದವರು, ವಿಭಿನ್ನ ರೋಗಗಳು ಈಗಾಗಲೇ ಇರುವವರ ಮೇಲೆ ಆಗಬಹುದಾದ ಅಡ್ಡಪರಿಣಾಮಗಳು.
4) ಕಾಲಾನುಕ್ರಮದಲ್ಲಿ ತಡವಾಗಿ ರೋಗಿಗಳಲ್ಲಿ ಕಾಣಬಹುದಾದ ಅಸಹಜತೆಗಳು.
ಅದೇನೇ ಇರಲಿ. ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕು, ಕಾಯದೆ ವಿಧಿಯಿಲ್ಲ, ಕಾಲಾಯ ತಸ್ಮೈ ನಮಃ. ಆದರೆ ಒಂದಂತೂ ನಿಜ- ಕ್ಯಾನ್ಸರ್ಗೆ ಔಷಧ ಹುಡುಕುವುದು ಕಠಿಣ ಎಂದು ಭಾವಿಸಲಾಗಿದ್ದಾಗ ಇಷ್ಟು ಸರಳ, ಸುಲಭ ಬೆಲೆಯ ಕುತೂಹಲಕಾರಿ ಔಷಧ ಪತ್ತೆ ಆದದ್ದು ಅಷ್ಟೇ ಗಂಭೀರವಾದ ಇನ್ನೊಂದು ಕಾಯಿಲೆಗೂ ಪರಿಹಾರವಾದ ಸೋಜಿಗ ಮಾತ್ರ ಅನಿರ್ವಚನೀಯ, ಅಂದರೆ ಮಾತಿಗೆಟುಕದೆ ಇರುವಂತಹದು.
ಅಂತೂ ಆರು ಆಕ್ಸಿಜನ್ ಇರುವ ಆರು ಕಾರ್ಬನ್ನ ಏಕಶರ್ಕರ ಆಹಾರ, ಆ ಪೈಕಿ ಒಂದು ಆಕ್ಸಿಜನ್ ಇಲ್ಲವಾಗಿಸಿದರೆ, ಅದೂ 2ನೇ ಕಾರ್ಬನ್ನಲ್ಲಿ ಮಾತ್ರ- ಅದು ರೋಗಕಾರಕಗಳನ್ನು ನಿಷ್ಕ್ರಿಯಗೊಳಿಸುವ ಔಷಧ ಎಂಬುದು- ರಸಾಯನಶಾಸ್ತ್ರರಿಗೂ ಸೋಜಿಗವಾಗಿ ಕಾಣುವ ಅಂಶ (C6H12O5 - 2DG, C6H12O6-ಗ್ಲೂಕೋಸ್). ಅಂತಹ ಸೋಜಿಗಗಳ ಗಣಿ ರಸಾಯನಶಾಸ್ತ್ರ.
CH3CH2OH- ಎನ್ನುವುದು ಮದ್ಯದ ಮೂಲ ಅಣು, ಇದು ಅಮಲುಕಾರಕ. ಇಏ3ಣಏ- ಎನ್ನುವುದು ಕುಡಿದ ಕೂಡಲೇ ಮರಣವನ್ನುಂಟು ಮಾಡುವ ವಿಷ. ಇಏ2ನಲ್ಲಿರುವ ಏಇಏ ಬಂಧ ಹಾಗೆ ನೋಡಿದರೆ ಅಷ್ಟೊಂದು ಬದಲಾವಣೆ ಮಾಡುವುದಿಲ್ಲ, ಆದ್ದರಿಂದ ಮೆಥೆನಾಲ್ ಮತ್ತು ಇಥೆನಾಲ್ಗಳ ರಾಸಾಯನಿಕ ಕ್ರಿಯೆ ಒಂದೇ(ಪ್ರೖೆಮರಿ ಆಲ್ಕಹಾಲ್ಗಳು) ಆದರೆ ಜೈವಿಕಕ್ರಿಯೆಯಲ್ಲಿ ಒಂದು ಮಾರಕ ಮತ್ತೊಂದು ಮಾದಕ! ಇದರ ಪೂರ್ಣ ಚಿತ್ರ ವಿವರಿಸುವ ತಾಕತ್ತು- ಪರಿಣತರಿಗೆ ಸವಾಲು. ಅಜ್ಞಾನವನ್ನು ಶಪಿಸದೆ ಅಚ್ಚರಿಯಾಗಿ ಆನಂದಿಸುವ ನಮ್ಮಂಥವರಿಗೆ ಅನೇಕ ಬೆರಗುಗಳು ಶುದ್ಧ ವಿಜ್ಞಾನದ ಎಲ್ಲ ಕ್ಷೇತ್ರಗಳಲ್ಲೂ ಲಭ್ಯ, ರಸಾಯನಶಾಸ್ತ್ರ ರಸಪೂರ್ಣ ಶಾಸ್ತ್ರ
(ಲೇಖಕರು ವಿಜ್ಞಾನ ಸಂವಹನಕಾರರು, ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕರು)