ಪ್ರೀತಿಗಾಗಿ ಏಳು ಸಾವಿರ ಮೈಲಿ ಸೈಕಲ್ ತುಳಿದ ಚಿತ್ರಕಾರ!

Column F
Published on
1975ನೇ ಇಸವಿ. ಡಿಸೆಂಬರ್ ತಿಂಗಳ ಚುಮುಚುಮು ಚಳಿಗಾಲದ ಒಂದು ಮುಸ್ಸಂಜೆ.

ಆತ ಓರ್ವ ಚಿತ್ರಕಾರ. ಎದುರು ಕುಳಿತ ವ್ಯಕ್ತಿಯ ಚಿತ್ರವನ್ನು ಹತ್ತೇ ನಿಮಿಷಗಳಲ್ಲಿ ಬರೆದುಕೊಡಬಲ್ಲ ಕಲಾಕಾರ. ಕನ್ನಾಟ್​ಪ್ಲೇಸ್ ಪ್ರದೇಶದ ಕಾರಂಜಿಯೊಂದರ ಮಗ್ಗುಲಲ್ಲಿ ಕುಳಿತು ಆತ ಜೀವನೋಪಾಯಕ್ಕಾಗಿ ಚಿತ್ರ ಬರೆಯುತ್ತಿದ್ದ. ಅಷ್ಟು ಹೊತ್ತಿಗಾಗಲೇ ಆತ ಬರೆದಿದ್ದ ಇಂದಿರಾ ಗಾಂಧಿಯ ರೇಖಾಚಿತ್ರವೊಂದು ಜನಪ್ರಿಯ ವಾಗಿತ್ತು. ಸ್ಥಳೀಯ ಪತ್ರಿಕೆಗಳಲ್ಲಿ ಆ ಯುವಕನ ಬಗ್ಗೆ ವರದಿಗಳು ಬರುತ್ತಿದ್ದವು.

ಎಂದಿನಂತೆ ಆ ಸಂಜೆಯೂ ಚಿತ್ರಕಾರ ತನ್ನದೇ ಭಾವಲೋಕದಲ್ಲಿ ಮುಳುಗಿದ್ದಾಗ, ‘ಹತ್ತು ನಿಮಿಷದಲ್ಲಿ ನನ್ನ ಚಿತ್ರ ಬಿಡಿಸುತ್ತೀರಾ?’ ಎಂಬ ಪ್ರಶ್ನೆಯೊಂದು ಬಾಹ್ಯಲೋಕಕ್ಕೆ ಕರೆತಂದಿತ್ತು. ವಿದೇಶಿ ಉಚ್ಚಾರಣೆಯ ಮೆಲುದನಿಯ ಒಡತಿ ಯಾರೆಂಬ ಕುತೂಹಲದಿಂದ ತಲೆ ಎತ್ತಿದಾಗ ಕಂಡಿದ್ದಳು ಅಪೂರ್ವ ಸುಂದರಿ. ಚಿತ್ರಕಾರ ಪರವಶನಾಗಿದ್ದ. ತುಂಟ ನಗೆಯೊಂದಿಗೆ ಎದುರು ಕುಳಿತ ಆ ಶ್ವೇತಸುಂದರಿಯ ರೇಖಾಚಿತ್ರ ಮುಂದಿನ ಹತ್ತು ನಿಮಿಷಗಳಲ್ಲಿ ಸಿದ್ಧವಾಗಿತ್ತು. ಆದರೆ, ಆ ಚಿತ್ರದ ಬಗ್ಗೆ ಆಕೆಗೆ ಸಮಾಧಾನವಿಲ್ಲ, ಅವನಿಗೂ ಅಷ್ಟೇ. ‘ನಾಳೆ ಮತ್ತೆ ಬರುತ್ತೇನೆ’ ಎಂದು ಹೇಳಿ ಅವಳು ತೆರಳಿದಳು. ಈತನ ತಲೆಯಲ್ಲಿ ಸಾವಿರ ಕುದುರೆಗಳ ಕರಪುಟ. ರಾತ್ರಿಯೆಲ್ಲ ಅವಳದೇ ಧ್ಯಾನ, ವಿಚಿತ್ರ ತಳಮಳ. ಹೊತ್ತಿನ ತುತ್ತಿಗೆ ಪರದಾಡುವ ನಾನೆಲ್ಲಿ? ವಿದೇಶಿ ವನಿತೆ ಅವಳೆಲ್ಲಿ? ಅಷ್ಟು ದೊಡ್ಡ ಕನಸು ಕಾಣುವ ಯೋಗ್ಯತೆಯಾದರೂ ನನಗಿದೆಯಾ? ಕಲಾವಿದ ನಿದ್ರೆ ಮರೆತಿದ್ದ...

ಮಾರನೇ ಸಂಜೆ, ಮತ್ತದೇ ಸಮಯಕ್ಕೆ ಅವಳು ಬಂದೇಬಂದಳು. ಅದೇ ಕೆಣಕುನೋಟ, ಮುಗುಳ್ನಗೆ. ಕಲಾಕಾರನ ಎದೆಯಲ್ಲಿ ಕಂಪನ. ಇಂದು ಎಂದಿನಂತೆ ಮತ್ತೊಂದು ದಿನವಲ್ಲ, ಏನೋ ವಿಶೇಷ ಘಟಿಸಲಿದೆ ಎಂದು ಭವಿಷ್ಯ ನುಡಿಯುವ ಅಂತರ್ಮನ. ಕಲಾವಿದನ ಎದುರು ಆಕೆ ಶಿಲಾಬಾಲಿಕೆಯ ಸೊಗಸಲ್ಲಿ ಕುಳಿತಾಗ ಕಲ್ಪನೆಗಳ ನರ್ತನ. ಹತ್ತು ನಿಮಿಷಗಳಲ್ಲಿ ಚೆಲುವೆಯ ಚಿತ್ರ ಕಲಾವಿದನ ಕೈಚಳಕದಿಂದ ಸಿದ್ಧವಾಗಿತ್ತು. ಆಕೆಯ ಸೌಂದರ್ಯವನ್ನು ಪ್ರತಿಫಲಿಸುವಂಥ ಅದ್ಭುತ ಚಿತ್ರವೇ ಅದಾಗಿತ್ತು. ಆದರೂ, ಆಕೆಗೆ ಸಮಾಧಾನವಿಲ್ಲ. ಆತನಿಗೂ ಅಷ್ಟೇ. ‘ನಿಮ್ಮ ಬಗ್ಗೆ ಓದಿದ್ದೆ, ನಿಮ್ಮ ಚಿತ್ರಗಳು ಬಹಳ ಫೇಮಸ್. ಆದರೆ, ನನ್ನ ಚಿತ್ರ ಅಷ್ಟೊಂದು ತೃಪ್ತಿ ತರಲಿಲ್ಲ’ ಎಂದು ಆಕೆ ತಮಾಷೆಯಿಂದ ಛೇಡಿಸುವಂತೆ ಕೇಳಿದ್ದಳು. ಆ ಎರಡು ದಿನಗಳ ಇಪ್ಪತ್ತು ನಿಮಿಷಗಳ ಭೇಟಿಯಲ್ಲಿ ಅವರಿಬ್ಬರ ಕಣ್ಣುಗಳು ಆತ್ಮೀಯವಾಗಿಬಿಟ್ಟಿದ್ದವು. ಹಣೆಯಲ್ಲಿ ಋಣ, ಬದುಕಿನಲ್ಲಿ ಯೋಗ ಕೂಡಿಬಂದರೆ, ಅನಿರೀಕ್ಷಿತಗಳು ಘಟಿಸುತ್ತವೆ. ಕಲ್ಪನೆಗೂ ನಿಲುಕದ ಕಿನ್ನರ ಕನಸುಗಳು ನನಸಿನ ರೂಪ ಪಡೆಯುವ ಅಮೃತಘಳಿಗೆ ತಾನಾಗಿಯೇ ಒದಗಿಬರುತ್ತದೆ. ಅವರಿಬ್ಬರ ವಿಚಾರದಲ್ಲೂ ಯೋಗಾಯೋಗ ಆ ಗೋಧೂಳಿ ಸಂಜೆಯಲ್ಲಿ ಮೇಳೈಸಿತ್ತು.

‘ನಿಮ್ಮ ಕುಟುಂಬ ಕಾಡಿನ ಒಡೆತನ ಹೊಂದಿದೆಯೇ? ನಿಮಗೆ ಸಂಗೀತ ಇಷ್ಟವೇ?’ ಕಲಾವಿದ ವಿಚಿತ್ರ ಪ್ರಶ್ನೆಗಳನ್ನು ಕೇಳುವಾಗ ಅವಳಿಗೆ ಅದೇನೋ ತಮಾಷೆ, 10 ನಿಮಿಷದಲ್ಲಿ ಚಿತ್ರ ಬಿಡಿಸುವ ಹುಡುಗ ಕಾಡು, ಸಂಗೀತ ಎಂದೇನೇನೋ ಕೇಳುವನಲ್ಲ ಎಂಬ ಕುತೂಹಲ. ‘ಹೌದು, ಸ್ವೀಡನ್​ನಲ್ಲಿ ನಮ್ಮದು ದೊಡ್ಡ ಪರಿವಾರ. ತಲೆಮಾರುಗಳಿಂದ ಕುಟುಂಬದ ಒಡೆತನದಲ್ಲಿ ಕಾಡು ಹೊಂದಿದ್ದೇವೆ. ಪಿಯಾನೊ ನುಡಿಸುವುದು ನನಗಿಷ್ಟ. ಆದರೆ, ಇದನ್ನೆಲ್ಲ ಏಕೆ ಕೇಳುತ್ತಿರುವಿರಿ?’ ಎಂಬ ಅವಳ ಮರುಪ್ರಶ್ನೆಗೆ ಈತನಲ್ಲಿ ಮತ್ತೆ ಚಡಪಡಿಕೆ. ಹೇಳಲೋಬೇಡವೋ ಎಂಬ ಹಿಂಜರಿಕೆ.

‘ಈ ಬಡತನ, ಮೇಲು-ಕೀಳೆಂಬ ತಾತ್ಸಾರ ಶಾಶ್ವತವಲ್ಲ. ನೀನು ಜೀವನದಲ್ಲಿ ದೊಡ್ಡ ವ್ಯಕ್ತಿಯಾಗುತ್ತಿ. ನಿನಗಾಗಿ ಓರ್ವ ರಾಜಕುಮಾರಿ ದೂರ ದೇಶದಿಂದ ಬಂದೇ ಬರುತ್ತಾಳೆ. ಆಕೆ ವೃಷಭ ರಾಶಿಯಲ್ಲಿ ಹುಟ್ಟಿರುತ್ತಾಳೆ. ಅವಳ ಕುಟುಂಬ ದೊಡ್ಡ ಅರಣ್ಯದ ಒಡೆತನ ಹೊಂದಿರುತ್ತದೆ. ಅವಳು ಸಂಗೀತಪ್ರಿಯೆ ಆಗಿರುತ್ತಾಳೆ. ಅವಳನ್ನು ಮದುವೆಯಾಗಿ ನೀನು ಸುಖವಾಗಿರುತ್ತಿ. ಇದು ನಿನ್ನ ಜಾತಕದಲ್ಲಿ ಬರೆದಿದೆ. ಹೀಗೆಂದು ನನ್ನ ಅಮ್ಮ ಹೇಳುತ್ತಿದ್ದಳು’ ಎಂಬ ಚಿತ್ರಕಾರನ ಮುಗ್ಧ ಮಾತುಗಳು ಆ ತರುಣಿಯಲ್ಲೂ ಭಾವದಲೆಗಳನ್ನು ಬಡಿದೆಬ್ಬಿಸಿದವು. ‘ನಿಜಕ್ಕೂ ನಿನ್ನ ಅಮ್ಮ ಈ ರೀತಿ ಹೇಳಿದ್ದರೇ? ವಾಸ್ತವದಲ್ಲಿ ಇದೆಲ್ಲ ಸಾಧ್ಯವೇ? ಈ ಭಾರತವೇ ಒಂದು ವಿಸ್ಮಯ. ನನ್ನದು ವೃಷಭ ರಾಶಿ. ನಿನ್ನ ಮಾತು ನಂಬಲಾಗುತ್ತಿಲ್ಲ’ ಎಂದು ಆಕೆ ಹೇಳುವಾಗ ಜನ್ಮಜನ್ಮದ ಅನುಬಂಧ ಒಂದುಗೂಡಿಸಿದೆಯಾ ಎಂಬಂಥ ಸೋಜಿಗ ಇಬ್ಬರಲ್ಲೂ. ‘ಒಟ್ಟಿಗೇ ಚಹಾ ಕುಡಿಯೋಣವೇ’ ಎಂಬ ಆತನ ಆಹ್ವಾನಕ್ಕೆ ಆಕೆ ಸಹಮತದ ಮುದ್ರೆ ಸೂಚಿಸಿದ್ದು ಆ ಕ್ಷಣದ ಬಾಯ್ತಣಿಕೆಗಲ್ಲ, ಜನುಮದ ಜೋಡಿಯಾಗಿ ಬಾಳುವುದಕ್ಕೆ.

ಆ ಕಲಾವಿದ ಪ್ರದ್ಯುಮ್ನ ಕುಮಾರ್ ಮಹಾನಂದಿಯ. ಆ ಪ್ರೇಮಕನ್ನಿಕೆ ಷಾರ್ಲೆಟ್ ವಾನ್ ಶೆಡ್ವಿನ್. ಮಹಾನಂದಿಯ ಒಡಿಶಾದ ಬುಡಕಟ್ಟು ಜಿಲ್ಲೆಯೊಂದರ ಬಡ ದಲಿತ ಕುಟುಂಬದ ಕನಸುಗಾರನಾದರೆ, ಷಾರ್ಲೆಟ್ ಸ್ವೀಡನ್ನಿನ ಸಿರಿವಂತ ಕುಟುಂಬದ ಚೆಲುವೆ. ವಿಧಿ 1975ರ ಡಿಸೆಂಬರ್ 17ರಂದು ಚಳಿಮುಸ್ಸಂಜೆಯಲ್ಲಿ ಅವರಿಬ್ಬರ ಅಪೂರ್ವ ಸಂಗಮಕ್ಕೆ ಮುಹೂರ್ತ ಬರೆದಿತ್ತು.

ಮುಂದೆ ನಡೆದಿದ್ದೆಲ್ಲ ಕನಸಿನಂತೆ ಭಾಸವಾದರೂ ಕನಸಲ್ಲದ ವಾಸ್ತವ. ಮಹಾನಂದಿಯ ಪಾಲಿಗೆ ಅಮ್ಮನ ಭವಿಷ್ಯ ನಿಜವಾಗಿತ್ತು. ಈತನ ಕಲೆಗೆ, ಕಥೆಗೆ, ಮುಗ್ಧತೆಗೆ ಸ್ವೀಡನ್ ಚೆಲುವೆ ಮಾರುಹೋಗಿದ್ದಳು. ಅಷ್ಟಕ್ಕೂ ಷಾರ್ಲೆಟ್​ಳನ್ನು ಭಾರತಕ್ಕೆ ವಿಧಿಯೇ ಸೆಳೆತಂದಿತ್ತು. ಲಂಡನ್​ನಲ್ಲಿ ಕಾಲೇಜು ಓದುತ್ತಿದ್ದ ಆಕೆ ಸ್ನೇಹಬಳಗದೊಂದಿಗೆ ವಾಹನದಲ್ಲಿ ಭೂ ಮಾರ್ಗವಾಗಿ ಭಾರತಕ್ಕೆ ಬಂದಿದ್ದಳು. ಯುರೋಪಿನಿಂದ ಟರ್ಕಿ, ಇರಾನ್, ಅಫ್ಘಾನಿಸ್ತಾನ, ಪಾಕಿಸ್ತಾನವನ್ನು ದಾಟಿಕೊಂಡು ಆಕೆ ದೆಹಲಿಗೆ ಬಂದಿದ್ದಳು. ಮಹಾನಂದಿಯ ಕಥೆ ಕೇಳಿ ಷಾರ್ಲೆಟ್ ತನ್ನ ಮನಸ್ಸು ಕೊಟ್ಟಳು. ಆತನ ಬದುಕಿಗೆ ಬೆಳಕಾದಳು, ಕಲೆಗೆ ಸ್ಪೂರ್ತಿಯಾದಳು. ಮಹಾನಂದಿಯ ಮತ್ತು ಷಾಲೋಟ್ ಜೋಡಿಹಕ್ಕಿಗಳಂತೆ ದೆಹಲಿ ಬೀದಿಗಳಲ್ಲಿ ವಿಹರಿಸಿದರು. ಪ್ರೇಮಲೋಕದಲ್ಲಿ ಹಾರಾಡಿದರು. ಆತನ ಆಸೆಯಂತೆ ಆಕೆ ಒಡಿಶಾಕ್ಕೂ ತೆರಳಿದಳು. ಲಂಡನ್​ನ ಕಾಲೇಜು ಕೊಠಡಿಯಲ್ಲಿ ಆಕೆ ಚಿತ್ರರೂಪದಲ್ಲಿ ನೋಡಿದ್ದ ಕಲ್ಲಿನ ರಥವನ್ನು ಕೊನಾರ್ಕ್​ನಲ್ಲಿ ನಿಜವಾಗಿ ಕಂಡಾಗ ವಿಸ್ಮಯ. ಒಡಿಶಾದ ಅಂಗುಲ್ ಜಿಲ್ಲೆಯ ಕಂದಪಾದ ಮಹಾನಂದಿಯ ಹುಟ್ಟೂರು. ಅಲ್ಲಿಗೆ ತೆರಳಿ ಅವರಿಬ್ಬರು ಬುಡಕಟ್ಟು ಸಂಪ್ರದಾಯದಂತೆ ವಿವಾಹವನ್ನೂ ಆಗುತ್ತಾರೆ. ಆ ದಿನ ಷಾರ್ಲೆಟ್ ಸೀರೆ ಧರಿಸಿರುತ್ತಾಳೆ. 1975ನೇ ಇಸವಿಯಲ್ಲಿ ಇದೆಲ್ಲ ಲೋಕವಿಸ್ಮಯದ ಸಂಗತಿ.

ಷಾರ್ಲೆಟ್ ತಾಯ್ನಾಡಿಗೆ ಮರಳುವ ಸಮಯ ಬರುತ್ತದೆ. ಲಂಡನ್​ಗೆ ತೆರಳಿ ವಿದ್ಯಾಭ್ಯಾಸವನ್ನೂ ಮುಗಿಸಬೇಕಿರುತ್ತದೆ. ಇತ್ತ ಮಹಾನಂದಿಯ ಪ್ರೀತಿಯ ಸೆಳೆತ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬಂಥ ಯಾತನೆ. ‘ಜೊತೆಯಲ್ಲಿ ನೀನೂ ಬಂದುಬಿಡು, ನಾನೇ ವಿಮಾನ ಟಿಕೆಟ್ ಕೊಡಿಸುತ್ತೇನೆ’ ಎಂಬ ಆಕೆಯ ಆಹ್ವಾನವನ್ನು ಆತ ವಿನಯದಿಂದಲೇ ನಿರಾಕರಿಸಿದ. ‘ನೀನು ವ್ಯಾಸಂಗ ಮುಗಿಸು, ಅಷ್ಟರಲ್ಲಿ ನಾನು ನನ್ನದೇ ದುಡಿಮೆಯ ಹಣದಿಂದ ನಿನ್ನನ್ನು ಬಂದು ಸೇರುತ್ತೇನೆ. ನಮ್ಮಿಬ್ಬರ ಪಾಲಿಗೆ ಮುಂದೆ ಸುದೀರ್ಘ ಬದುಕಿದೆ’ ಎಂದು ಸಂತೈಸಿದ. ಆಕೆ ಒಲ್ಲದ ಮನಸ್ಸಿನಿಂದ ನಿರ್ಗಮಿಸಿದಳು. ಅವರ ಪ್ರೇಮದಾಂಪತ್ಯ ಮುಂದೆ ಪತ್ರಗಳ ರೂಪದಲ್ಲಿ ಗಟ್ಟಿಗೊಂಡಿತು. ಅವಳಲ್ಲಿ, ಇವನಿಲ್ಲಿ. ನಡುವೆ ಸಪ್ತಸಾಗರದ ಅಂತರ.

ಇತ್ತ ದೆಹಲಿಯ ಆರ್ಟ್ ಸ್ಕೂಲ್​ನಲ್ಲಿ ಮಹಾನಂದಿಯ ವ್ಯಾಸಂಗವೂ ಮುಗಿಯಿತು. ಷಾಲೋಟ್​ಳನ್ನು ಕಾಣಲು ಚಿತ್ರಕಾರನ ಮನಸ್ಸು ಹಾತೊರೆಯುತ್ತಿರುತ್ತದೆ. ಅಲ್ಲಿಯವರೆಗೆ ಗಳಿಸಿದ್ದು, ತನ್ನಲ್ಲಿದ್ದಿದ್ದೆಲ್ಲವನ್ನೂ ಮಾರಿದರೂ, ವಿಮಾನದ ಟಿಕೆಟ್ ಖರೀದಿಸುವಷ್ಟು ಹಣ ಆತನಲ್ಲಿರುವುದಿಲ್ಲ. ಆದರೆ, ಮನಸ್ಸಿದ್ದರೆ ಮಾರ್ಗ. ಷಾರ್ಲೆಟ್ ಮೊದಲ ಬಾರಿ ಭಾರತಕ್ಕೆ ಬಂದಿದ್ದು ಭೂಮಾರ್ಗದಲ್ಲಿ. ಮಹಾನಂದಿಯ ಕೂಡ ತನ್ನಲ್ಲಿದ್ದ ಸ್ವಲ್ಪವೇ ಹಣದಲ್ಲಿ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿ ತನ್ನವಳು ಬಂದ ದಾರಿಯಲ್ಲೇ ಸ್ವೀಡನ್​ವರೆಗೆ ಸೈಕಲ್ ತುಳಿಯಲು ನಿರ್ಧರಿಸಿದರು. ದಾರಿಯ ಖರ್ಚಿಗೆ ಹಣವಿರಲಿಲ್ಲ. ಆದರೆ, ಷಾಲೋಟ್​ಳ ಪ್ರೀತಿ ಇತ್ತು. ಆಕೆ ಬರೆದ ಪತ್ರಗಳಿದ್ದವು. ಜೊತೆಗೆ ಕಲೆ ಇತ್ತು. 1977 ಜನವರಿ 22ರಂದು ಮಹಾನಂದಿಯ ಮಹಾಪಯಣ ಆರಂಭಗೊಂಡಿತು. ದಿನಕ್ಕೆ ಸರಾಸರಿ 70 ಕಿ.ಮೀ. ಸೈಕಲ್ ತುಳಿಯುವ ಗುರಿ. ಪಾದಗಳು ಬಾವಿನಿಂದ ಊದಿಕೊಳ್ಳುತ್ತಿದ್ದವು. ಮೈಕೈ-ಕಾಲು ನೋವು ಯಮಯಾತನೆ ನೀಡುತ್ತಿದ್ದವು. ಅಪರಿಚಿತ ದೇಶ, ಅಪರಿಚಿತ ಜನ. ಅಫ್ಘಾನಿಸ್ತಾನದಲ್ಲಿ ಹಿಂದಿ ಎಲ್ಲರಿಗೂ ತಿಳಿದಿತ್ತು. ಈತ ಜನರ ಚಿತ್ರ ಬಿಡಿಸಿದರೆ, ಕೆಲವರು ಹಣ ಕೊಡುತ್ತಿದ್ದರು. ಕೆಲವರು ಊಟ ಕೊಟ್ಟು ಒಂದು ರಾತ್ರಿ ತಂಗಲು ಅವಕಾಶ ಕೊಡುತ್ತಿದ್ದರು. ಇರಾನ್ ಗಡಿ ದಾಟಿದ ಮೇಲೆ ಭಾಷೆ ಬರದೆ ಸಂವಹನವೇ ಕಷ್ಟ. ಆದರೆ, ಕಲೆ ಮತ್ತು ಪ್ರೀತಿಯ ಭಾಷೆಗೆ ಎಲ್ಲರೂ ಸ್ಪಂದಿಸುತ್ತಿದ್ದರು. ಆ ಕಾಲದಲ್ಲಿ ದೇಶದಿಂದ ದೇಶಕ್ಕೆ ತೆರಳುವುದಕ್ಕೆ ವೀಸಾ ಕಡ್ಡಾಯವಾಗಿರಲಿಲ್ಲ. ಅಂತೂ ನಾಲ್ಕು ತಿಂಗಳ ಮಹಾಯಾನದ ನಂತರ ಮಹಾನಂದಿಯ ವೆುೕ 28ರಂದು ಸೈಕಲ್​ನಲ್ಲೇ ಯುರೋಪ್​ನ ಆಸ್ಟ್ರಿಯಾ ರಾಜಧಾನಿ ವಿಯೆನ್ನ ತಲುಪಿದರು. ಅಲ್ಲಿಂದ ಸ್ವೀಡನ್​ನ ಗೊಥೆನ್​ಬರ್ಗ್​ಗೆ ರೈಲಿನಲ್ಲಿ ತೆರಳಿದರು. ಅಷ್ಟರಲ್ಲಾಗಲೇ ಷಾರ್ಲೆಟ್​ಳನ್ನು ಸಂದಿಸಿ ಎರಡು ವರ್ಷವೇ ಕಳೆದಿತ್ತು. ಪತ್ರಗಳ ಸಂವಹನ ಇದ್ದರೂ, ಬಡ ಚಿತ್ರಕಾರನನ್ನು ಶ್ರೀಮಂತ ಪರಿವಾರದ ಆತ್ಮಸಖಿ ಸ್ವಾಗತಿಸುವಳೇ ಎಂಬ ಅಳುಕು ಮಹಾನಂದಿಯಲ್ಲಿತ್ತು. ಆದರೆ, ಷಾರ್ಲೆಟ್ ಪ್ರೀತಿ ಅಪ್ಪಟ ಬಂಗಾರ. ಆಕೆ ಬಾಳ ಇನಿಯನನ್ನು ಸ್ವಾಗತಿಸಲು ರೈಲ್ವೆನಿಲ್ದಾಣಕ್ಕೆ ಬಂದಿದ್ದರು. ಸ್ವೀಡನ್ ದೇಶ, ಭಾಷೆ, ಸಂಸ್ಕೃತಿ ಎಲ್ಲವೂ ಭಾರತೀಯ ಮಹಾನಂದಿಯ ಪಾಲಿಗೆ ಹೊಸದು, ವಿಸ್ಮಯವಾಗಿತ್ತು. ಆದರೆ, ಸ್ಪೂರ್ತಿಯಾಗಿ, ಸೇತುವೆಯಾಗಿ ಷಾಲೋಟ್ ಜತೆಗಿದ್ದರು. ಬಿಗುಮಾನದ ಪಾಲಕರ ಮನವೊಲಿಸಿ ಮಹಾನಂದಿಯರನ್ನು ಆಕೆ ತನ್ನ ಕುಟುಂಬಕ್ಕೆ ಸೇರಿಸಿಕೊಂಡರು. ಅಲ್ಲಿ ಮತ್ತೊಮ್ಮೆ ಅವರಿಬ್ಬರ ವಿವಾಹ ನಡೆಯಿತು. ಅದಾಗಿ ಮಹಾನಂದಿಯ-ಷಾರ್ಲೆಟ್ ದಾಂಪತ್ಯಕ್ಕೆ ಸದ್ಯ 44ನೇ ವರ್ಷ. ಇಬ್ಬರು ಮಕ್ಕಳ ಹೆಮ್ಮೆಯ ಕುಟುಂಬ ಅವರದು. ಮಹಾನಂದಿಯ ಸದ್ಯ ಸ್ವೀಡನ್ ಸರ್ಕಾರಕ್ಕೆ ಕಲೆ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಅವರ ಕಲಾಕೃತಿಗಳು ಜಗತ್ತಿನ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಯುನಿಸೆಫ್​ನ ಗ್ರೀಟಿಂಗ್ ಕಾರ್ಡ್​ಗಳಲ್ಲೂ ಅವರ ಚಿತ್ರಗಳು ಬಳಕೆಯಾಗಿವೆ. ಸ್ವೀಡನ್​ನಲ್ಲಿ ಒಡಿಶಾ ಸರ್ಕಾರದ ಸಾಂಸ್ಕೃತಿಕ ರಾಯಭಾರಿ ಎಂಬ ಅಧಿಕೃತ ಮನ್ನಣೆಗೂ ಅವರು ಪಾತ್ರರಾಗಿದ್ದಾರೆ.

ಒಂದು ಮುಸ್ಸಂಜೆಯ ಭೇಟಿ, ಮೊದಲ ನೋಟದ ಪ್ರೀತಿ, ಅಮ್ಮನ ಭವಿಷ್ಯವಾಣಿ ಎರಡು ದೇಶಗಳನ್ನು, ಪ್ರೀತಿಸುವ ಹೃದಯಗಳನ್ನು ಬೆಸೆದಿದ್ದು ಹೀಗೆ. ಪ್ರೀತಿಗಾಗಿ 7 ಸಾವಿರ ಮೈಲಿ ಸೈಕಲ್ ತುಳಿದ ಮಹಾನಂದಿಯ, ‘ಸೈಕಲ್ ಓಡಿಸುವುದು ನನಗೆ ಇಷ್ಟವೇನಲ್ಲ. ಆದರೆ, ಪ್ರೀತಿಗಾಗಿ ಸೈಕಲ್ ತುಳಿದೆ’ ಎಂದು ಹೇಳಿದ್ದರು. ಅವರ ಕಲೆ, ಅವರ ಬದುಕು, ಅವರ ಪ್ರೀತಿಗೆ ತಲೆಮಾರುಗಳನ್ನು ಪ್ರಭಾವಿಸುವ ಶಕ್ತಿ ಇದೆ. ಪ್ರೀತಿಯೇ ಹಾಗೆ. ಅಸಾಧ್ಯವನ್ನು, ಅಸಂಭವಗಳನ್ನು ಸಾಧ್ಯವಾಗಿಸಿಬಿಡುತ್ತದೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net