

ಅದು 2010ರ ಫೆಬ್ರವರಿ 9. ಮುಂಬೈನ ಕುರ್ಲಾ ರೈಲ್ವೆ ಠಾಣೆಯ ಸಮೀಪದಲ್ಲಿರುವ ವತ್ಸಲಾತಾಯಿ ನಗರದಲ್ಲಿ ಹೊಸದಾಗಿ ಕಟ್ಟುತ್ತಿರುವ ಕಟ್ಟಡದ ಮೆಟ್ಟಿಲುಗಳ ಕೆಳಗೆ ಗೋಣಿಚೀಲವೊಂದು ಬಿದ್ದಿತ್ತು. ಕುತೂಹಲಗೊಂಡ ಕಾರ್ಮಿಕನೊಬ್ಬ ತೆರೆದು ನೋಡಿದಾಗ ಅದರಲ್ಲಿ ಪುಟ್ಟ ಬಾಲಕಿಯ ಶವವಿದ್ದುದನ್ನು ಕಂಡು ಹೌಹಾರಿ ನೆಹರೂ ನಗರ ಪೊಲೀಸ್ ಠಾಣೆಗೆ ದೂರು ನೀಡಿದ.ಪೊಲೀಸರು ಸ್ಥಳಕ್ಕೆ ಬಂದರು. ಆ ಬಾಲಕಿಯ ಗುರುತು ತಿಳಿಯಲಿಲ್ಲ. ದೇಹವನ್ನು ಮರಣೋತ್ತರ ಪರೀೆಗೆ ಒಳಪಡಿಸಿದಾಗ, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ತಿಳಿಯಿತು. ಬಾಲಕಿಯ ರಕ್ತ ಮತ್ತು ಪಾತಕಿಯ ವೀರ್ಯದ ಗುರುತನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಯಿತು.
ಮಾರನೆಯ ದಿನ, ರಾಜಸ್ಥಾನದಿಂದ ವಲಸೆ ಬಂದಿದ್ದ ಕಾರ್ಮಿಕನೊಬ್ಬ ತನ್ನ 5 ವರ್ಷದ ಮಗಳು ಎರಡು ದಿನಗಳಿಂದ ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ. ಅವನಿಗೆ ಹಿಂದಿನ ದಿನ ಸಿಕ್ಕ ಮೃತದೇಹದ ಫೋಟೋ ತೋರಿಸಲಾಯಿತು. ಆಕೆ ತನ್ನ ಮಗಳೆಂದು ಗುರುತಿಸಿದ. ಆತನಿದ್ದ ಬಡಾವಣೆಯಲ್ಲಿ ವಾಸಿಸುತ್ತಿದ್ದ ಬಹುತೇಕರು ಉತ್ತರ ಭಾರತದ ರಾಜ್ಯಗಳಿಂದ ವಲಸೆ ಬಂದ ಬಡ ಕಾರ್ಮಿಕರಾಗಿದ್ದರು. ಹಲವು ದಿನಗಳ ತನಿಖೆಯ ನಂತರವೂ ಪೊಲೀಸರಿಗೆ ಯಾವ ಸುಳಿವೂ ಸಿಗಲಿಲ್ಲ. 2010ರ ಮಾರ್ಚ್ನಲ್ಲಿ ನೆಹರು ನಗರ ಪೊಲೀಸ್ ಠಾಣೆಯ ಮುಂದಿನ ಪೊಲೀಸ್ ವಸತಿಗೃಹಗಳ ತಾರಸಿಯ ಮೇಲೆ 12 ವರ್ಷದ ಬಾಲಕಿಯ ಶವ ಬಿದ್ದಿತ್ತು. ಆ ಬಾಲಕಿಯನ್ನೂ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಆಕೆ ಪೊಲೀಸ್ ಕುಟುಂಬಕ್ಕೆ ಸೇರಿರಲಿಲ್ಲ. ಆಕೆ ಪಕ್ಕದ ಬಡಾವಣೆಯ ಐದನೇ ತರಗತಿಯ ಬಾಲಕಿಯೆಂದು ತನಿಖೆಯಲ್ಲಿ ತಿಳಿಯಿತು. ಪೊಲೀಸ್ ಸಿಬ್ಬಂದಿಯ ಮೇಲೆಯೇ ಸಾರ್ವಜನಿಕರು ಗುಮಾನಿಪಡತೊಡಗಿದಾಗ ಆ ನಿಟ್ಟಿನಲ್ಲಿಯೂ ತನಿಖೆ ನಡೆಯಿತು. ಯಾವ ಸುಳಿವೂ ಸಿಗಲಿಲ್ಲ. ಮೂರು ವಾರಗಳ ಅವಧಿಯಲ್ಲಿ ಒಂದೇ ಬಡಾವಣೆಯಲ್ಲಿ ಎರಡು ಅತ್ಯಾಚಾರ ಪ್ರಕರಣಗಳಾದದ್ದು ಬೆಚ್ಚಿ ಬೀಳಿಸಿತ್ತು.
2010ರ ಜೂನ್ 19ರಂದು ಅದೇ ಬಡಾವಣೆಯ ಖಾಲಿ ಗುಡಿಸಿಲೊಂದರಿಂದ ದುರ್ನಾತ ಬರುತ್ತಿದೆ ಎಂದು ಹಾದಿಹೋಕರು ಒಳಗೆ ಹೋಗಿ ನೋಡಿದಾಗ ಬಾಲಕಿಯ ಶವ ಪತ್ತೆಯಾಯಿತು. ಸುಮಾರು ಒಂಬತ್ತು ವರ್ಷ ವಯಸ್ಸಿನ ಆ ಬಾಲಕಿ ಹದಿನೈದು ದಿನಗಳ ಹಿಂದೆ ತನ್ನ ಮನೆಯಿಂದ ಕಾಣೆಯಾಗಿದ್ದಳೆಂಬ ದೂರು ದಾಖಲಾಗಿತ್ತು. ಆಕೆ ಮೇಲೆಯೂ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಮೂರೂ ದೇಹಗಳ ಮೇಲೆ ಸಿಕ್ಕ ವೀರ್ಯಾಣುಗಳ ಡಿಎನ್ಎ ಪತ್ತೆ ಮಾಡಲಾಗಿದ್ದ ಕಾರಣ ಇವುಗಳ ಹೋಲಿಕೆ ಮಾಡಲು ಹತ್ತಿರದ ಬಡಾವಣೆಗಳಲ್ಲಿದ್ದ ರೌಡಿಗಳು, ಪೂರ್ವಸಜಾ ಹೊಂದಿದವರು, ಮುಂತಾದ 880 ಜನರ ಡಿಎನ್ಎಗಳ ಮಾದರಿಗಳನ್ನು ಪಡೆಯ ಲಾಯಿತು. ಏತನ್ಮಧ್ಯೆ, ವಿಧಿವಿಜ್ಞಾನ ಪ್ರಯೋಗಶಾಲೆಯು ಮೂರು ಬಾಲಕಿಯರಲ್ಲಿ ಇಬ್ಬರನ್ನು ಅತ್ಯಾಚಾರ ಮಾಡಿದವನು ಒಬ್ಬನಾದರೆ ಜೂನ್ ತಿಂಗಳಲ್ಲಾದ ಪ್ರಕರಣದ ಅತ್ಯಾಚಾರಿ ಬೇರೆಯವನೆಂದು ತಿಳಿಸಿತು. ಶಂಕಿತ ಆರೋಪಿಗಳ ಡಿಎನ್ಎಯೊಂದಿಗೆ ಪೊಲೀಸರು ಕಲೆಹಾಕಿದ್ದ 880 ವ್ಯಕ್ತಿಗಳ ಡಿಎನ್ಎಯನ್ನು ಹೋಲಿಕೆ ಮಾಡಿದಾಗ ಗುಡಿಸಲಿನಲ್ಲಿದ್ದ ಬಾಲಕಿಯ ಮೈಮೇಲಿದ್ದ ಡಿಎನ್ಎ 19 ವರ್ಷದ ಕೇಬಲ್ ಆಪರೇಟರ್ ಜಾವೇದ್ ಶೇಖ್
ಎನ್ನುವವನದೆಂದು ಸಾಬೀತಾಯಿತು. ಆತ ತಪ್ಪನ್ನೊಪ್ಪಿಕೊಂಡು ಮೊದಲೆರಡು ಪ್ರಕರಣಗಳಿಗೆ ತನ್ನ ಸಂಬಂಧವಿಲ್ಲವೆಂದ. ಆಗ ಮೊದಲೆರಡು ಪ್ರಕರಣಗಳನ್ನು ಸಿಐಡಿ ತನಿಖೆಗೊಪ್ಪಿಸಲಾಯಿತು. ಆದರೆ ಹಲವು ತಿಂಗಳುಗಳ ತನಿಖೆಯ ನಂತರವೂ ಯಾವ ಕುರುಹೂ ಸಿಗದ ಕಾರಣ ಅವು ಕಾಣೆಯಾದ ಪ್ರಕರಣಗಳ ಕಡತಕ್ಕೆ ಸೇರಿಹೋದವು.
7 ವರ್ಷಗಳ ಬಳಿಕ ಮತ್ತೊಮ್ಮೆ ಮುಂಬೈನಲ್ಲಿ ಸರಣಿ ಅತ್ಯಾಚಾರದ ಪ್ರಕರಣಗಳು ವರದಿಯಾದವು. 2017ರ ಜೂನ್ನಿಂದ ಸೆಪ್ಟೆಂಬರ್ವರೆವಿಗೆ ನವೀ ಮುಂಬೈನಲ್ಲಿ ಹದಿಮೂರು ಪ್ರಕರಣಗಳು ವರದಿಯಾದವು. ಇವೆಲ್ಲದರಲ್ಲಿಯೂ ಸಂತ್ರಸ್ತರು ಎಂಟರಿಂದ ಹನ್ನೆರಡು ವರ್ಷ ವಯಸ್ಸಿನ ಬಾಲಕಿಯರಾಗಿದ್ದರು. ಸಂತ್ರಸ್ತೆ ಒಬ್ಬಂಟಿಯಾಗಿ ರಸ್ತೆಯಲ್ಲಿ ಹೋಗುವಾಗ ಸುಮಾರು 30& 32 ವರ್ಷ ವಯಸ್ಸಿನ ವ್ಯಕ್ತಿ ಆಕೆಯನ್ನು ಸಂಧಿಸಿ ನಿನ್ನ ತಂದೆ ನಿನ್ನನ್ನು ಜರೂರಾಗಿ ಕರೆತರಲು ಕಳುಹಿಸಿದ್ದಾನೆಂದು ಹೇಳಿ ಆಕೆಯನ್ನು ಹೊಸದಾಗಿ ಕಟ್ಟುತ್ತಿರುವ ಬಹುಮಹಡಿಗಳ ಕಟ್ಟಡದ ಬಳಿಗೆ ಕರೆದೊಯ್ಯುತ್ತಿದ್ದ. ನಿನ್ನ ತಂದೆಗೆ ಫೋನ್ ಮಾಡುತ್ತೇನೆನ್ನುತ್ತಾ ಯಾರಿಗೋ ಫೋನ್ ಮಾಡಿದಂತೆ ನಟಿಸುತ್ತಿದ್ದ. ನಂತರ "ನಿನ್ನ ಬಟ್ಟೆಯ ಮೇಲೆ ಕೀಟವೊಂದಿದೆ, ಅದು ಕಚ್ಚಿದರೆ ನಿನಗೆ ಕ್ಯಾನ್ಸರ್ ರೋಗ ಬರುತ್ತದೆ, ಬೇಗನೇ ಬಟ್ಟೆಯನ್ನು ಕಳಚು' ಎನ್ನುತ್ತಿದ್ದ. ಗಾಬರಿಯಾದ ಸಂತ್ರಸ್ತೆ ತನ್ನ ಮೇಲ್ವಸವನ್ನು ತೆಗೆದಾಗ ಅತ್ಯಾಚಾರ ಮಾಡಿ ಪರಾರಿಯಾಗುತ್ತಿದ್ದ. ಕೃತ್ಯ ನಡೆದ ಸ್ಥಳಗಳ ಬಳಿಯಿದ್ದ ಸಿಸಿಟಿವಿ ಕ್ಯಾಮರಾಗಳು ದಾಖಲಿಸಿದ್ದ ಸುಮಾರು 500 ಗಂಟೆಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದರು. ಸಾಧಾರಣ ಮೈಕಟ್ಟಿನ, ನೀಲಿ ಬಣ್ಣದ ಟೀ ಶರ್ಟ್ ಹಾಗೂ ಜೀನ್ಸ್ ಧರಿಸುತ್ತಿದ್ದ ಒಬ್ಬ ವ್ಯಕ್ತಿ ಕಿವಿಗೆ ಮೊಬೈಲ್ ತಾಕಿಸಿಕೊಂಡು ಮಾತನಾಡುತ್ತಿರುವ ಚಿತ್ರಗಳು ಲಭ್ಯವಾದವು. ಆ ಯುವಕನ ನಡಿಗೆ ವಿಚಿತ್ರವಾಗಿದ್ದು ಒಂದು ಕಾಲನ್ನು ಮೇಲಕ್ಕೆತ್ತಿ ಹಾಗೂ ಎಡಗೈಯನ್ನು ದೇಹಕ್ಕೆ ತಾಕಿಸಿಕೊಂಡೇ ನಡೆಯುತ್ತಿದ್ದ. ಕುಕೃತ್ಯ ನಡೆಸಿದ ದಿನಗಳಂದು ಆತ ಮೀರಾ ರೋಡ್ ಬಡಾವಣೆಯ ಕಡೆ ಹೋಗುತ್ತಿದ್ದ. ಆತ ಅಲ್ಲಿಯ ನಿವಾಸಿಯಿರಬಹುದೆಂದು ಊಹಿಸಿ ಅಲ್ಲಿ ಹೆಚ್ಚಿನ ನಿಗಾ ಇಡಲಾಯಿತು. ಆ ವ್ಯಕ್ತಿಯ ಫೋಟೋಗಳನ್ನು ಕರಪತ್ರ ಮಾಡಿಸಿ ಹಂಚಲಾಯಿತು. ನವೀ ಮುಂಬೈನ ಎಲ್ಲಾ ಪೋಸ್ಟ್ಮ್ಯಾನ್ಗಳಿಗೆ ಶಂಕಿತನ ಫೋಟೋ ನೀಡಿ ಪತ್ರಗಳನ್ನು ರವಾನೆ ಮಾಡುವಾಗ ಆತನನ್ನು ಕಂಡರೆ ತಿಳಿಸಲು ಕೋರಲಾಯಿತು. ಪೊಲೀಸರ 20 ತಂಡಗಳು ಮಾರುವೇಷದಲ್ಲಿ ವಿವಿಧ ಬಡಾವಣೆಗಳಲ್ಲಿ ಶಂಕಿತ ನನ್ನು ಹುಡುಕುತ್ತಿದವು. ಆತ ಯಾವಾಗಲೂ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಕಾರಣ ಆ ಸಮಯದಲ್ಲಿ ಕೃತ್ಯ ನಡೆದ ಜಾಗದಲ್ಲಿ ಯಾವ ಟೆಲಿೋನ್ಗಳು ಚಾಲನೆಯಲ್ಲಿದ್ದವೆಂದು ಪರಿಶೀಲಿಸಲಾಯಿತು. ಸೆಪ್ಟೆಂಬರ್ 22ರಂದು ಇನ್ನೊಬ್ಬ ಬಾಲಕಿಯ ಅತ್ಯಾಚಾರವಾಯಿತು. ಆ ಸಮಯದಲ್ಲಿ ನವೀ ಮುಂಬೈನ ಪೊಲೀಸ್ ಆಯುಕ್ತ
ರಾಗಿದ್ದ ಸಂಜಯ್ ಕುಮಾರ್ 2010ರಲ್ಲಿ ನಡೆದ ನೆಹರೂ ನಗರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖಾಧಿ ಕಾರಿಯಾಗಿದ್ದರು. ಅಂದಿನ&ಈಗಿನ ಪ್ರಕರಣಗಳಿಗೆ ಸಂಬಂಧವಿರಬಹುದೆಂದು ಊಹಿಸಿದ ಅವರು ಶಂಕಿತನು ಅಲ್ಲಿಯವರೆಗೆ ಮಾಡಿದ್ದ 15 ಅತ್ಯಾಚಾರ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಶಂಕಿತನು ಸಾಧಾರಣ ವಾಗಿ ಬುಧವಾರ ಮತ್ತು ಗುರುವಾರ ಬೆಳಗಿನ 11 ರಿಂದ ಸಂಜೆಯ 6 ಗಂಟೆಯೊಳಗೆ ಕುಕೃತ್ಯ ಮಾಡುತ್ತಿದ್ದ.
ಬುಧವಾರ ಮತ್ತು ಗುರುವಾರಗಳಂದು ಪೊಲೀಸರ ಗಸ್ತನ್ನು ತೀವ್ರಗೊಳಿಸಲಾಯಿತು. ಸೆಪ್ಟೆಂಬರ್ 26 ಬುಧವಾರದಂದು ಪೊಲೀಸರ ಒಂದು ತಂಡ ಸಿಸಿಟಿವಿ ಚಿತ್ರಗಳಲ್ಲಿ ಇದ್ದಂತಹ ವ್ಯಕ್ತಿ ಓಡಾಡುತ್ತಿದ್ದುದ್ದನ್ನು ಕಂಡು ಅವನನ್ನು ತಡೆದು ಹೆಸರನ್ನು ಕೇಳಿದಾಗ, ತಾನು ರೆಹಾನ್ ಖುರೇಷಿ, ವಯಸ್ಸು 34, ಕಂಪನಿಯೊಂದರ ಸೇಲ್ಸ್ ಮ್ಯಾನ್ ಎಂದ. ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಯಿತು. ಆತ ಹೇಳಿದ್ದ ಕಂಪನಿಗೆ ಫೋನ್ ಮಾಡಿದಾಗ, ಖುರೇಷಿ ಕೆಲಸ ಸರಿಯಾಗಿ ಮಾಡದ ಕಾರಣ ಆತನನ್ನು ನೌಕರಿಯಿಂದ ವಜಾ ಮಾಡಿರುವುದಾಗಿ ತಿಳಿಸಿತು. ಅವನನ್ನು ಬಂಧಿಸಿಟ್ಟಿದ್ದ ರೂಮಿಗೆ ಕ್ಯಾಮರಾ ಅಳವಡಿಸಿ ದುಷತ್ಯಕ್ಕೆ ಒಳಗಾದ ಹಲವು ಸಂತ್ರಸ್ತೆಯರಿಗೆ ತೋರಿಸಿದಾಗ ಎಲ್ಲರೂ ಅವನನ್ನು ಗುರುತಿಸಿದರು. ನಂತರ ಖುರೇಷಿಯ ರಕ್ತದ ಮಾದರಿಯನ್ನು ಡಿಎನ್ಎ ಪರೀೆಗೆ ಒಳಪಡಿಸಲಾಯಿತು. 2010ರಲ್ಲಿ ನೆಹರೂ ನಗರ ಬಡಾವಣೆಯಲ್ಲಿ ನಡೆದ 2 ಅತ್ಯಾಚಾರ ಪ್ರಕರಣಗಳಲ್ಲಿ ಸಿಕ್ಕ ಡಿಎನ್ಎ ಜತೆಗೆ ಖುರೇಷಿಯ ಡಿಎನ್ಎ ತಾಳೆಯಾಯಿತು. ಅವನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ನೆಹರೂ ನಗರವಲ್ಲದೆ ನವೀ ಮುಂಬೈನಲ್ಲಿ ನಡೆದ ಎಲ್ಲ ಅತ್ಯಾಚಾರಗಳನ್ನೂ ಮಾಡಿದವನು ತಾನೇ ಎಂದು ಒಪ್ಪಿಕೊಂಡ. ತನ್ನ ಹೇಳಿಕೆಯಲ್ಲಿ ಖುರೇಷಿ ಹೀಗೆಂದ: ನಾನು ಎಸ್ಎಸ್ಎಲ್ಸಿ ನಂತರ ಔದ್ಯೋಗಿಕ ತರಬೇತಿ ಕೇಂದ್ರಕ್ಕೆ (ಐಟಿಐ) ಸೇರಿ ಡಿಪ್ಲೊಮಾ ಪಡೆದೆ. ಸಣ್ಣಪುಟ್ಟ ನೌಕರಿಗಳನ್ನು ಮಾಡಿಕೊಂಡಿದ್ದೆ. ನೆಹರೂ ನಗರ ಬಡಾವಣೆಯಲ್ಲಿಯೇ ನನ್ನ ಮನೆಯಿತ್ತು. ನನಗೆ ತಡೆಯಲಾರದಷ್ಟು ಲೈಂಗಿಕ ಹಸಿವೆಯಿತ್ತು. ಹೀಗಾಗಿ 2010 ರಲ್ಲಿ ನಾನಿದ್ದ ಬಡಾವಣೆಯ ನಿವಾಸಿಗಳಾಗಿದ್ದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದೆ. ಅವರು ನನ್ನನ್ನು ಗುರುತಿಸುತ್ತಾರೆನ್ನುವ ಭಯದಿಂದ ಅವರ ಕೊಲೆ ಮಾಡಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಸಿಕ್ಕೀಬಿಳುವೆನೆಂದು ಹೆದರಿ ಸೌದಿ ಅರೇಬಿಯಾಗೆ ಓಡಿಹೋದೆ. ಅಲ್ಲಿ ಒಂದು ವರ್ಷ ನೌಕರಿ ಮಾಡಿದೆ. ಮುಂಬೈಗೆ ವಾಪಸಾದ ನಂತರ ನೆಹರೂ ನಗರ ಬಡಾವಣೆಯಲ್ಲಿರಲು ಇಷ್ಟವಿರದೆ ಮೀರಾ ರೋಡ್ ಬಡಾವಣೆಯಲ್ಲಿ ವಾಸಿಸುತ್ತಿರುವೆ.' ತನ್ನ ಕುಟುಂಬ ಉತ್ತರಪ್ರದೇಶದಿಂದ ಬಂದಿದ್ದು, ತಂದೆ ದರೋಡೆ ಪ್ರಕರಣವೊಂದರಲ್ಲಿ ಕೊಲೆಯಾಗಿದ್ದನೆಂದು ತಿಳಿಸಿದ ಖುರೇಷಿ ತಾನು ಯಾರನ್ನು ಅತ್ಯಾಚಾರ ಮಾಡಬೇಕೆಂದಿದ್ದನೋ ಅವರನ್ನು ಎರಡು ಮೂರು ದಿನಗಳ ಕಾಲ ಅನುಸರಿಸುತ್ತಿದ್ದೆ ಎಂದ. ಅದುವರೆಗೆ 20ಕ್ಕೂ ಹೆಚ್ಚು ಅತ್ಯಾಚಾರಗಳನ್ನು ಮಾಡಿರುವುದಾಗಿ ತಿಳಿಸಿದ ಆತ ತನಗಿನ್ನೂ ಲಗ್ನವಾಗಿಲ್ಲವೆಂದ. ಎಲ್ಲಾ ಪ್ರಕರಣಗಳಲ್ಲಿಯೂ ಖುರೇಷಿಯ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಯಾವುದೂ ವಿಚಾರಣೆಗೆ ಬಂದಿಲ್ಲ. "ಬಲವಲ್ಲ, ಬುದ್ಧಿಶಕ್ತಿಯಲ್ಲ, ನಿಲ್ಲದ ಪ್ರಯತ್ನವೇ ನಮ್ಮೊಳಗಿನ ಸಾಮರ್ಥ್ಯವನ್ನು ಹೊರತರುವ ಮಂತ್ರ' ಎಂದರು ವಿನ್ಸ್ಟನ್ ಚರ್ಚಿಲ್. ಆರೋಪಿಯನ್ನು ಪತ್ತೆಮಾಡಲೇಬೇಕೆಂಬ ಪೊಲೀಸರ ಸತತ ಪ್ರಯತ್ನವೇ ಖುರೇಷಿ ಪತ್ತೆಯಾಗಲು ಕಾರಣವಾಯಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)