ರಾಷ್ಟ್ರನಿಷ್ಠೆಗೆ ಬದ್ಧರಾಗುವ ವಿವೇಕ ಸಂಕಲ್ಪ

Vivekananda
Published on

‘ಕಷ್ಟಗಳನ್ನು ಎದುರಿಸಿದಷ್ಟೂ ನೀನು ಬಲಶಾಲಿಯಾಗುವೆ, ಆದ್ದರಿಂದ ಕಷ್ಟಗಳು ಬಂದಾಗ ಅದನ್ನು ಧೈರ್ಯದಿಂದ ಎದುರಿಸು’ ಎಂಬ ಸ್ವಾಮಿ ವಿವೇಕಾನಂದರ ಮಾತು ನಮಗೆ ಸವಾಲು ಎದುರಿಸುವ ಪ್ರೇರಣೆಯಾಗಲಿ. ಸರ್ವಶಕ್ತಿ, ಸರ್ವವ್ಯಾಪ್ತಿ, ಸರ್ವರ್ಸ³ಯಾದಂಥ ವಿವೇಕಾನಂದರ ಸಂದೇಶಗಳನ್ನು ಈ ಕ್ಷಣಕ್ಕೂ ನಮ್ಮ ಭಾರತೀಯ ಸಮಾಜ ವಿವೇಕದ ಬೆಳಕಾಗಿ ಬೆಳಗಿಸಿಕೊಳ್ಳುತ್ತಿದೆ.

ಸಕಾಲಿಕ
‘ನನಗೆ ಬೇಕಾಗಿರುವುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು, ಸಿಡಿಲಿನಂಥ ಮನಸ್ಸುಗಳು, ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ’ ಎಂಬ ಮಾತು ಒಬ್ಬ ಸನ್ಯಾಸಿಯ ಬಾಯಲ್ಲಿ ಹೊರಹೊಮ್ಮಿದಾಗ, ಅದು ಅಸಂಖ್ಯಾತ ಯುವ ಹೃದಯಗಳಿಗೆ ಸಿಂಹವಾಣಿಯಾಗಿ ಮಾರ್ದನಿಸಿತು. ಇಂಥ ಪ್ರೇರಣಾ ಸಂದೇಶಗಳಿಂದಾಗಿ ಸ್ವಾಮಿ ವಿವೇಕಾನಂದರನ್ನು ‘ವೀರ ಸನ್ಯಾಸಿ’ ಎಂದು ಸಂಬೋಧಿಸಿ ಹೆಮ್ಮೆಯಿಂದ ಅವರ ವ್ಯಕ್ತಿತ್ವವನ್ನು ಆರಾಧಿಸುತ್ತೇವೆ.

ಭಾರತ ವಿಸ್ತಾರ ನೆಲೆಯ ಬೃಹತ್ ರಾಷ್ಟ್ರ, ಅಷ್ಟೇ ಪ್ರಮಾಣದಲ್ಲಿ ಜನಸಂಖ್ಯೆಯ ಭಾರವನ್ನೂ ಹೊತ್ತುಕೊಂಡ ದೇಶ. ಈ ದೇಶದ ಮಾನವ ಸಂಪನ್ಮೂಲದ ಸದ್ಬಳಕೆ, ಇಡೀ ಜಗತ್ತನ್ನು ತನ್ನತ್ತ ಸೆಳೆಯುವ ಶಕ್ತಿಯಾಗಬಲ್ಲದು. ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಯುವಶಕ್ತಿಯನ್ನು ತನ್ನೊಡಲೊಳಗೆ ಹುದುಗಿಸಿಕೊಂಡಿರುವ ಭಾರತಾಂಬೆ ವಿಶ್ವ ಬಲಿಷ್ಠರೆಂದು ಹಮ್ಮಿನಿಂದ ಬೀಗುವವರನ್ನು ಹಿಮ್ಮೆಟ್ಟಿಸಬಲ್ಲಳು ಎಂದು ವಿವೇಕಾನಂದರು ಬಲವಾಗಿ ನಂಬಿದ್ದರು.

ಆತ್ಮವಿಶ್ವಾಸ ಸ್ವಾಮಿ ವಿವೇಕಾನಂದರ ಧಮನಿ ಧಮನಿಗಳಲ್ಲೂ ಉಕ್ಕಿ ಹರಿಯುತ್ತಿತ್ತು. ಅವರ ಪ್ರತಿ ಕ್ಷಣದ ಆಲೋಚನೆ ಈ ದೇಶದ ಯುವಶಕ್ತಿಯ ಬಲವೃದ್ಧಿಯ ಮೇಲೆ ಕೇಂದ್ರೀಕೃತವಾಗಿತ್ತು. ಈ ಕಾರಣಕ್ಕಾಗಿಯೇ ಭಾರತದ ಇತಿಹಾಸದಲ್ಲಿ ಯುವಜನರ ಪಾಲಿನ ಪ್ರಖರ ಬೆಳಕಾಗಿ ವಿವೇಕಾನಂದರು ಈ ಕ್ಷಣಕ್ಕೂ ಪ್ರಜ್ವಲಿಸುತ್ತಿದ್ದಾರೆ. ಯುವಜನರ ದೈಹಿಕ ಬಲದೊಂದಿಗೆ ವಿವೇಕಾನಂದರ ಅಮೂಲ್ಯ ಸಂದೇಶಗಳು ಅವರ ವಿವೇಕದ ಬಾಗಿಲನ್ನು ಬಡಿದೆಬ್ಬಿಸುತ್ತಿರುವುದರ ಪರಿಣಾಮವೇ ಇಂದು ಈ ನೆಲದ ಸ್ವಾಭಿಮಾನಿ ಯುವಶಕ್ತಿ ವಿವೇಕಾನಂದರು ಕಂಡ ಕನಸು ನನಸು ಮಾಡುವ ಹಾದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಜನವರಿ 12ರ ಸ್ವಾಮಿ ವಿವೇಕಾನಂದರ ಜನುಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಇಡೀ ದೇಶ ಅರ್ಥಪೂರ್ಣವಾಗಿ ಆಚರಿಸಿದರೆ, ವಿಶ್ವದಲ್ಲಿನ ವಿವೇಕಾನಂದರ ಕೋಟ್ಯಂತರ ಆರಾಧಕರು ಸಾರ್ಥಕ ಸಾಧನೆಯ ಸಂಕಲ್ಪ ದಿನವಾಗಿ ಆಚರಿಸುತ್ತಾರೆ.

ಸ್ವಾಮಿ ವಿವೇಕಾನಂದರು ಎಂದರೆ ವಿವೇಕದ ಬೆಳಕು, ಸ್ವಾಭಿಮಾನದ ತಿರುಳು, ಸಾಧನೆಯ ಮಾರ್ಗದರ್ಶಿ, ಧರ್ಮದ ಸಾರಥಿ, ಜೀವನ್ಮುಖಿಯ ಕನ್ನಡಿ, ಭಾರತೀಯತೆಯ ಪರಿಪೂರ್ಣ ಶಬ್ದಕೋಶ, ರಾಷ್ಟ್ರಾಭಿಮಾನದ ಹೆಗ್ಗುರುತಿನ ಸಂಕೇತ. ಪ್ರತಿಯೊಬ್ಬರ ಜೀವನದಲ್ಲೂ ಆದರ್ಶ ವ್ಯಕ್ತಿಯೊಬ್ಬರು ಪ್ರೇರಣೆಯಾಗಬಹುದು. ಆದರೆ ಸರ್ವಕ್ಷೇತ್ರಕ್ಕೂ ಪ್ರೇರಣೆಯ ಸ್ಪರ್ಶ ನೀಡುವ ಏಕೈಕ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರು. ಅದಕ್ಕಾಗಿಯೇ ಅವರು ಭಾರತದ ಸಂತ ಕುಲದ ಹೆಮ್ಮೆಯ ತಿಲಕ, ಯುವಜನರ ಪಾಲಿನ ಚೈತನ್ಯ ಕಳಶವಾಗಿ ನಿತ್ಯಸ್ಮರಣೆಯ ದಿವ್ಯಾತ್ಮವಾಗಿದ್ದಾರೆ.

ಗುರುದೇವ ರಾಮಕೃಷ್ಣ ಪರಮಹಂಸರು ಹಾಗೂ ವಿವೇಕಾನಂದರ ಗುರು-ಶಿಷ್ಯ ಸಂಬಂಧಕ್ಕೆ ಹೋಲಿಸಲಾಗದ ಪಾವಿತ್ರ್ಯತೆಯಿದೆ. ಇವರ ಸಂದೇಶಗಳು ಜಗತ್ತಿಗೇ ಬೆಳಕಾಗಬಲ್ಲವು. ಸರ್ವಶಕ್ತಿ, ಸರ್ವವ್ಯಾಪ್ತಿ, ಸರ್ವರ್ಸ³ಯಾದಂಥ ಸಂದೇಶಗಳನ್ನು ಈ ಕ್ಷಣಕ್ಕೂ ನಮ್ಮ ಭಾರತೀಯ ಸಮಾಜ ವಿವೇಕದ ಬೆಳಕಾಗಿ ಬೆಳಗಿಸಿಕೊಳ್ಳುತ್ತಿದೆ.

ಸ್ವಾಮಿ ವಿವೇಕಾನಂದರನ್ನು ಈ ಭೂಮಿಗೆ ಕೊಡಮಾಡಿದ ದೈವಶಕ್ತಿ ಭರತ ಭೂಮಿಯ ಶ್ರೇಷ್ಠತೆಯನ್ನು ವಿಶ್ವಕ್ಕೇ ಪರಿಚಯಿಸಬೇಕೆಂಬ ಉದಾತ್ತ ಉದ್ದೇಶ ಹೊಂದಿರುವುದರ ಜೊತೆಗೇ ಭಾರತೀಯತೆಯನ್ನು ಬಲಿಷ್ಠಗೊಳಿಸುವ ಉದ್ದೇಶವೂ ಹೊಂದಿರಲೇಬೇಕು. ಈ ಕಾರಣಕ್ಕಾಗಿಯೇ ಭಾರತ ತನ್ನ ಮೇಲೆ ಎರಗಿ ಬಂದ ಎಲ್ಲ ಬಗೆಯ ಆಕ್ರಮಣ, ಸಾಂಸ್ಕೃತಿಕ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿದೆ. ಅಂದು ನರೇಂದ್ರ ಹೆಸರಿನ ವಿವೇಕ ಭಾರತದ ಜನಶಕ್ತಿಗೆ ಚೈತನ್ಯ ತುಂಬಿದರೆ, ವಿವೇಕರಿಂದ ಪ್ರೇರಣೆ ಪಡೆದ ಇಂದಿನ ನರೇಂದ್ರರು (ಪ್ರಧಾನಿ ನರೇಂದ್ರ ಮೋದಿಯವರು) ಭಾರತದ ಬಲಿಷ್ಠತೆಗೆ ಭದ್ರ ಬುನಾದಿ ಹಾಕುತ್ತಿದ್ದಾರೆ, ಯುವಜನರಿಗೆ ನವಚೈತನ್ಯದ ಶಕ್ತಿ ತುಂಬುತ್ತಿದ್ದಾರೆ, ತನ್ಮೂಲಕ ವಿವೇಕಾನಂದರ ಕನಸು, ಸಂಕಲ್ಪಗಳಿಗೆ ಪರಿಪೂರ್ಣ ಚೌಕಟ್ಟು ನಿರ್ವಿುಸುತ್ತಿರುವ ಭಾರತದ ಸಾಧಕ ಶಿಲ್ಪಿ ಎನಿಸಿದ್ದಾರೆ.

ಭಾರತೀಯ ಯುವಕರ ಪ್ರತಿಭೆ ಮತ್ತು ಸಾಮರ್ಥ್ಯ ನಂಬಲಸಾಧ್ಯವಾದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಜಾಗತಿಕ ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆದಾಗ, ಭಾರತೀಯ ಯುವಕರ ಪ್ರತಿಭೆ ಕಂಡು ಜಗತ್ತು ಬೆರಗಾಗುತ್ತದೆ ಎಂಬ ಪ್ರಧಾನಿ ಮೋದಿಯವರ ನುಡಿ ಸ್ವಾಮಿ ವಿವೇಕಾನಂದರ ಸಂಕಲ್ಪ ಈಡೇರುತ್ತಿರುವುದನ್ನು ಸಾಕ್ಷೀಕರಿಸುತ್ತದೆ.

ಭಾರತದ ಸವಾಲುಗಳು, ಸಂಕಷ್ಟಗಳು ಇನ್ನೂ ಪೂರ್ಣವಾಗಿ ಬಗೆಹರಿದಿಲ್ಲ. ಈ ನಡುವೆ ಹಲವು ಉದ್ದೇಶಗಳು, ಕನಸುಗಳು ಈಡೇರಿರುವುದು ಈ ದಶಕದ ಬಹುದೊಡ್ಡ ಗುರಿಸಾಧನೆಯ ಹೆಗ್ಗಳಿಕೆಯಾಗಿದೆ. ರಾಮಮಂದಿರ ನಿರ್ವಣದ ಕನಸು ವಿವೇಕಾನಂದರು ಜನ್ಮ ತಳೆ ದ ತಿಂಗಳಿನಲ್ಲೇ ನನಸಾಗುತ್ತಿರುವುದು ರೋಮಾಂಚನದ ಕ್ಷಣಗಳ ಅನುಭವ ನೀಡುತ್ತಿದೆ. ಭಾರತದ ಕಿರೀಟ ಕಾಶ್ಮೀರ ಭಾರತಾಂಬೆಯ ಶಿರದಲ್ಲಿ ಸುಭದ್ರವಾಗಿ ಕಂಗೊಳಿಸಲು ಕಾರಣವಾದ ಆರ್ಟಿಕಲ್ 370ರ ರದ್ದತಿ, ಹಾಗೂ ಕೇಂದ್ರಾಡಳಿತ ಪ್ರದೇಶದ ಘೊಷಣೆಯ ಮೂಲಕ ಅತಂತ್ರ ಹಾಗೂ ಆತಂಕದ ಸ್ಥಿತಿ ಅನುಭವಿಸುತ್ತಿದ್ದ ಕಣಿವೆ ಪ್ರದೇಶದಲ್ಲಿ ಶಾಶ್ವತ ಸ್ಥಿರತೆ ಸಾಧಿಸಿದ ಸಾರ್ಥಕತೆಯ ಹಿಂದಿನ ಪ್ರೇರಣೆಯೇ ವಿವೇಕಾನಂದರು ತೋರಿದ ಗುರಿಸಾಧನೆಯ ಅನುಸರಣೆಯಾಗಿದೆ.

‘ಕಷ್ಟಗಳನ್ನು ಎದುರಿಸಿದಷ್ಟೂ ನೀನು ಬಲಶಾಲಿಯಾಗುವೆ, ಆದ್ದರಿಂದ ಕಷ್ಟಗಳು ಬಂದಾಗ ಅದನ್ನು ಧೈರ್ಯದಿಂದ ಎದುರಿಸು’ ಎಂಬ ಸ್ವಾಮಿ ವಿವೇಕಾನಂದರ ಮಾತು ನಮಗೆ ಸವಾಲು ಎದುರಿಸುವ ಪ್ರೇರಣೆಯಾಗಲಿ.

‘ದೇಶ ಈಗ ಅಮೃತ ಕಾಲದಲ್ಲಿದ್ದು, ಯುವಕರು ತಮ್ಮ ರಾಷ್ಟ್ರೀಯ ಕರ್ತವ್ಯಗಳ ಮೇಲೆ ಹೆಚ್ಚಿನ ಒತ್ತು ನೀಡಬೇಕಿದೆ. ನಾವು ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಭಾರತದ ಯುವ ಸಮುದಾಯ ಸದಾಕಾಲ ಸ್ವಾಮಿ ವಿವೇಕಾನಂದ ಅವರಿಂದ ಸ್ಪೂರ್ತಿಯನ್ನು ಪಡೆದಿದೆ. ಮುಂದೆಯೂ ನಮ್ಮ ಯುವ ಸಮುದಾಯಕ್ಕೆ ಸ್ವಾಮಿ ವಿವೇಕಾನಂದರ ಸಂದೇಶಗಳು ಮಾರ್ಗದರ್ಶನ ನೀಡಲಿವೆ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ನುಡಿಮುತ್ತು ವಿವೇಕಾನಂದರ ಸಂದೇಶಗಳ ಪ್ರಖರತೆಯ ಸತ್ವವನ್ನು ಸಾಕ್ಷೀಕರಿಸುತ್ತದೆ.

ವಿವೇಕರ ಸ್ಮರಣೆಯ ರಾಷ್ಟ್ರೀಯ ಯುವ ದಿನ ಬರೀ ಆಚರಣೆಯಲ್ಲ, ಅದು ದಿವ್ಯ ಪ್ರೇರಣೆಯನ್ನು ಅನುಭವಿಸುವ ಕ್ಷಣಗಳು, ಈ ಹಿನ್ನೆಲೆಯಲ್ಲಿಯೇ ಮೋದಿಯವರು, ‘ಭಾರತದ ಮನಸ್ಸು ಕೂಡ ಯುವಕ, ಭಾರತ ತನ್ನ ಸಾಮರ್ಥ್ಯದಲ್ಲೂ ಯುವಶಕ್ತಿಯಾಗಿದೆ, ಭಾರತ ತನ್ನ ಕನಸುಗಳಲ್ಲಿ ಯುವತನ ಹೊಂದಿದೆ. ಭಾರತದ ಚಿಂತನೆಯೂ ಯುವಕರಂತೆ ಇದೆ. ಭಾರತ ಎಂದೂ ಯುವದೇಶವಾಗಿದೆ. ಕಾರಣ ಭಾರತ ಯುವಕರಂತೆ ಆಧುನೀಕರಣವನ್ನು, ತಂತ್ರಜ್ಞಾನವನ್ನು ಸ್ವೀಕರಿಸುವ ದೇಶವಾಗಿದೆ. ಪ್ರಾಚೀನ ಸಂಸ್ಕೃತಿಯೂಲ್ಲೂ ನವೀನತೆಯನ್ನು ಅಳವಡಿಸಿದ ದೇಶ ಭಾರತವಾಗಿದೆ’ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

2024 ಭಾರತ ಹಲವು ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಮುಂದೆ ಇನ್ನಷ್ಟು ಐತಿಹಾಸಿಕ ನಿರ್ಣಯಗಳು, ಅಭಿವೃದ್ಧಿಯ ದಿಟ್ಟಹೆಜ್ಜೆಗಳು, ಸ್ವಾಮಿ ವಿವೇಕಾನಂದರ ದೂರದೃಷ್ಟಿಯ ಕನಸುಗಳ ಸಾಕಾರಕ್ಕೆ ಕಾರಣವಾಗಬೇಕಿದೆ. ಈ ನಿಟ್ಟಿನಲ್ಲಿ ಯುವಶಕ್ತಿಯನ್ನೇ ಬಹುವಾಗಿ ನೆಚ್ಚಿಕೊಂಡಿದ್ದ ಸ್ವಾಮಿ ವಿವೇಕಾನಂದರ ಮಹಾಸಂಕಲ್ಪವನ್ನು ಪರಿಪೂರ್ಣವಾಗಿ ಈಡೇರಿಸಲು ನಮ್ಮ ಯುವಶಕ್ತಿ ಈ ದಿನದಿಂದಲೇ ವಿರಮಿಸಲು ಅವಕಾಶ ನೀಡದಂತೆ ಭಾರತವನ್ನು ಬಲಿಷ್ಠಗೊಳಿಸಲು, ಸ್ವಾವಲಂಬಿ ವ್ಯವಸ್ಥೆಯ ಮೇಲೆ ಗಟ್ಟಿಯಾಗಿ ನೆಲೆಯೂರಲು, ಎದುರಾಗಲಿರುವ ದುಷ್ಟ ಸವಾಲುಗಳನ್ನು ಮೆಟ್ಟಿ ನಿಲ್ಲಲು ಶಪಥ ಮಾಡಬೇಕಿದೆ. ಆ ಮೂಲಕ ಸ್ವಾಮಿ ವಿವೇಕಾನಂದರ ಜಯಂತಿಯ ರಾಷ್ಟ್ರೀಯ ಯುವ ದಿನಕ್ಕೆ ನಾವು ರಾಷ್ಟ್ರನಿಷ್ಠೆಯ ಗುರುಕಾಣಿಕೆ ಸಮರ್ಪಿಸೋಣ.

(ಲೇಖಕರು ಬಿಜೆಪಿ ರಾಜ್ಯಾಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net