ಬಹುಮುಖ ಪ್ರಜ್ಞೆಯ ಜ್ಞಾನಭಾಸ್ಕರ, ಸಮಷ್ಟಿ ಪ್ರಜ್ಞೆಯ ಸಂತ

1-678a94baa1fee
Published on
ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನೆಡಿಸಿ ನೀರೆರೆದು ಪೋಷಿಸುವ ವನಸಂವರ್ಧನ ಯೋಜನೆಯ ಹರಿಕಾರರೆನಿಸಿಕೊಂಡರು ಶ್ರೀಬಾಲಗಂಗಾಧರನಾಥ ಸ್ವಾಮೀಜಿ. ಇದಕ್ಕಾಗಿ ಅವರು ಪ್ರಸಿದ್ಧ ಮಠಗಳ ಸಂತರು, ಘಟಾನುಘಟಿ ರಾಜಕಾರಣಿಗಳು, ಸಾರ್ವಜನಿಕರು ಎಲ್ಲರನ್ನೂ ಯೋಜನೆಯ ವ್ಯಾಪ್ತಿಯೊಳಗೆ ಸೇರಿಸಿಕೊಂಡರು. ಗೋವುಗಳ ಉಳಿವಿಗಾಗಿ ಅಪಾರ ಶ್ರಮ ಹರಿಸಿದರು.

ಗುರು ಎಂದರೆ ಗಹನ, ಗುರು ಎಂದರೆ ತಮಂಧ ನೀಗುವ ಬೆಳಕು, ಮುಚ್ಚಿದ ಕಣ್ಣು ತೆರೆಸಿ ಜ್ಞಾನಚಂದ್ರಿಕೆ ಚೆಲ್ಲುವ ತಮೋಹಾರಿ ಅರಿವು. ಅರಿವಿನೊಡನೆ ಅದೇ ಗುರುಗಳೆಡೆಗೆ ಸಾಗುವ ಸ್ಮರಣಪಯಣವೇ ಈ ಬರಹದ ಸಾರ. ಆ ಸತ್ಪುರುಷರ ಸ್ಮರಣೆಯೇ ಅನುಭಾವದ ಸುಗಂಧ. ಕನ್ನಡನಾಡು ಕಂಡ ಸತ್ಪುರುಷರ ಪೈಕಿ ಪರಮಪೂಜ್ಯ ಜಗದ್ಗುರು ಯುಗಯೋಗಿ ಶ್ರೀಪದ್ಮಭೂಷಣ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪ್ರಮುಖರು. ಅವರ ಧಾರ್ವಿುಕ ಶ್ರದ್ಧೆ, ಸಾಮಾಜಿಕ ಕಳಕಳಿ, ಮೃದುನುಡಿ, ಮಾತೃ ಹೃದಯದ ಬಗ್ಗೆ ಎಲ್ಲರೂ ತಿಳಿದವರೇ.

ಕನ್ನಡ ನೆಲದ ಧಾರ್ವಿುಕ ನೆಲೆ ಬಹು ವಿಸõತವಾದದ್ದು, ಪುರಾತನವಾದದ್ದು. ಪುರಾಣೇತಿಹಾಸಗಳೊಂದಿಗೆ ಬೆಸೆದುಕೊಂಡಿರುವ ಅನೇಕ ಮಠಮಾನ್ಯಗಳ ಧಾರ್ವಿುಕ ಶ್ರದ್ಧಾಕೇಂದ್ರಗಳು ನಮ್ಮಲ್ಲಿವೆ. ಇಂತಹ ಧರ್ಮಕ್ಷೇತ್ರಗಳನ್ನು ಅಸಂಖ್ಯ ಸಂತಸಂನ್ಯಾಸಿಗಳು ತಮ್ಮ ತಮ್ಮ ಶ್ರದ್ಧಾನ್ವಿತ ತ್ಯಾಗಸೇವೆಗಳೊಂದಿಗೆ ನಿರ್ವಿುಸಿದ್ದಾರೆ, ಪುನರುತ್ಥಾನ ಮಾಡಿದ್ದಾರೆ, ಏರುಗತಿಗೆ ಒಯ್ದಿದ್ದಾರೆ, ಆ ಮೂಲಕ ರಾಷ್ಟ್ರ ನಿರ್ವಣದ ಪಾವನಕಾರ್ಯಕ್ಕೆ ಕೈಜೋಡಿಸಿದ್ದಾರೆ. ಈ ಸಂತರ ಯಾದಿಯಲ್ಲಿ ಬರುವ ಆದಿಚುಂಚನಗಿರಿಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ರಾಜ್ಯದಲ್ಲಷ್ಟೇ ಅಲ್ಲದೇ ದೇಶ-ವಿದೇಶಗಳ ಧರ್ಮಕೇಂದ್ರಗಳವರೆಗೂ ವಿಶ್ವಾಸ ಹೊಂದಿದವರು.

ಶ್ರೀಬಾಲಗಂಗಾಧರನಾಥ ಸ್ವಾಮೀಜಿ 1945ರ ಜನವರಿ 18ರಂದು ರಾಮನಗರ ಜಿಲ್ಲೆಯ ಬಾನಂದೂರಿನಲ್ಲಿ ಜನಿಸಿದರು. ರೈತಾಪಿ ಒಕ್ಕಲಿಗ ಸಮುದಾಯದ ಚಿಕ್ಕಲಿಂಗೇಗೌಡ ಪೂರ್ವಾಶ್ರಮದ ತಂದೆ, ತಾಯಿ ಬೋರಮ್ಮ. ಮಹಾಸ್ವಾಮಿಗಳ ಹುಟ್ಟು ಹೆಸರು ಗಂಗಾಧರಯ್ಯ. ಐವರು ಒಡಹುಟ್ಟಿದವರಿದ್ದ ತುಂಬು ಕುಟುಂಬದಲ್ಲಿ 3ನೇ ಮಗುವಾಗಿ ಜನನ. ಸ್ಥಳೀಯವಾಗಿಯೇ ಶಾಲಾಶಿಕ್ಷಣ ನಡೆದರೂ ಉನ್ನತಾಭ್ಯಾಸ ಆದದ್ದು ಬೆಂಗಳೂರಿನ ಸರ್ಕಾರಿ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ. ಬಿಎಸ್ಸಿ ಪದವಿ ಪಡೆದು ಆಧ್ಯಾತ್ಮಿಕ ಮಾರ್ಗವನ್ನು ಆಯ್ದುಕೊಂಡರು. ಸಾಧುಸಂತರ ಆಶ್ರಯತಾಣವಾಗಿದ್ದ ಬೆಂಗಳೂರಿನ ಸಂಪಂಗಿರಾಮಗರದ ಚಿದಾನಂದಾಶ್ರಮದಲ್ಲಿ ಕೆಲಕಾಲ ನೆಲೆಸಿದ್ದರು. ತಮ್ಮ 19ನೇ ವರ್ಷ ವಯಸ್ಸಿನಲ್ಲೇ ಅಪಾರ ತಿಳಿವಳಿಕೆ ಹೊಂದಿದ್ದ ಅವರು ತಮ್ಮ ಗುರು ಶ್ರೀರಮಾನಂದನಾಥ ಸ್ವಾಮಿಗಳಿಗೆ ಶಿಷ್ಯವೃತ್ತಿ ಮಾಡಿಕೊಂಡು ವೇದಾಧ್ಯಯನ ನಡೆಸಿದರು.

ಆದಿಚುಂಚನಗಿರಿ ಕ್ಷೇತ್ರ ಪುರಾಣಪ್ರಸಿದ್ಧವಾದ ಧರ್ಮಭೂಮಿ. ಕಾಪಾಲಿಕ ಸಮುದಾಯ ಅಥವಾ ನಾಥಪಂಥ ಪರಂಪರೆಯ ಶ್ರೀಭಕ್ತನಾಥ ಸ್ವಾಮೀಜಿ, ಶ್ರೀಚಂದ್ರಶೇಖರನಾಥ ಸ್ವಾಮೀಜಿ ಮತ್ತು ಶ್ರೀರಮಾನಂದನಾಥ ಸ್ವಾಮೀಜಿ ಅವರ ಮೇಲುಸ್ತುವಾರಿಯಲ್ಲಿ ಸಾಮಾನ್ಯಮಟ್ಟದ ಗ್ರಾಮೀಣ ಪರಂಪರೆಯ ಒಕ್ಕಲಿಗ ಸಮುದಾಯದವರ ಮಠವಾಗಿತ್ತು. ಶ್ರೀರಮಾನಂದನಾಥ ಸ್ವಾಮೀಜಿ ಅವರ ಅನಾರೋಗ್ಯದ ನಿಮಿತ್ತ ಮಠಕ್ಕೆ ಯೋಗ್ಯ ಉತ್ತರಾಧಿಕಾರಿಯ ಆಯ್ಕೆಗಾಗಿ ಪತ್ರಿಕಾ ಪ್ರಕಟಣೆ ಕಂಡ ಗಂಗಾಧರಯ್ಯ ಸ್ವಯಂಪ್ರೇರಿತರಾದ ಅಭ್ಯರ್ಥಿಯಾದರು. ಆಯ್ಕೆಯಾದ ಇಬ್ಬರಲ್ಲಿ ಇವರು ಒಬ್ಬರು ಮತ್ತು ಮೊದಲಿಗರು. 1968ರ ಫೆಬ್ರವರಿ 12ನೇ ತಾರೀಖು ಹಿರಿಯ ಗುರುಗಳ ಮಂತ್ರೋಪದೇಶದೊಂದಿಗೆ ಸನ್ಯಾಸ ದೀಕ್ಷೆ ಸ್ವೀಕರಿಸುವ ಮೂಲಕ ಕನ್ನಡ ನಾಡಿಗೆ ಓರ್ವ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ದೊರೆತರು.

ಆಗವರು ಸನ್ಯಾಸಿಗಳಾಗಿ ಬೆಂಗಳೂರಿನ ಕೈಲಾಸಾಶ್ರಮದಲ್ಲಿ ವಾಸ್ತವ್ಯಕ್ಕೆ ತೆರಳಿ ಸಂಸ್ಕೃತಾಧ್ಯನಕ್ಕೆ ಮೊದಲಿಟ್ಟರು. ಅದ್ವೈತವ್ಭೆದಾಂತದಲ್ಲಿ ಪದವಿ ಪಡೆದರು. ಆ ಆಶ್ರಮದ ಶ್ರೀತಿರುಚ್ಚಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ಆಧ್ಯಾತ್ಮಿಕ ವಿಚಾರಗಳ ಉನ್ನತ ಚಿಂತನಮಂಥನಗಳಾದವು. ರಮಾನಂದನಾಥ ಸ್ವಾಮೀಜಿ ದೇಹಾರೋಗ್ಯ ಕ್ಷೀಣಿಸಲು ಗುರುಸೇವೆಗೆಂದು ಕ್ಷೇತ್ರಕ್ಕೆ ಬಂದವರು ಗುರುಗಳ ನಿಧನಾನಂತರ 1974ರ ಸೆಪ್ಟೆಂಬರ್ 25ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧಿಪತಿಗಳಾಗಿ ಪಟ್ಟಕ್ಕೇರಿದರು.

ಇಲ್ಲಿಂದಾಚೆಗೇ ಒಂದು ಪವಾಡವೇ ನಡೆಯಿತೋ ಎಂಬಂತೆ ಆದಿಚುಂಚನಗಿರಿ ಒಂದು ಸಂಸ್ಥಾನವಾಗಿ, ಶ್ರೀಕ್ಷೇತ್ರವಾಗಿ ಪುನರುಜ್ಜೀವನಗೊಂಡಿತು. ಈ ವಿಕಾಸದ ಸಂಪೂರ್ಣ ಪರಿಶ್ರಮ ಮತ್ತು ಫಲ ಎರಡಕ್ಕೂ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರೇ ಭಾಜನರು.

ಶ್ರೀಕ್ಷೇತ್ರಕ್ಕೆ ಧರ್ವಧ್ಯಕ್ಷರಾಗಿ 1974ರಲ್ಲಿ ಅಧಿಕಾರ ವಹಿಸಿಕೊಂಡಾಗ ಮಹಾಸ್ವಾಮಿಗಳಿಗೆ 30ರ ಆಸುಪಾಸು. ಒಮ್ಮೆ ಇಳಿತ ಕಂಡು ತಟಸ್ಥವಾಗಿದ್ದ ಧರ್ಮಕ್ಷೇತ್ರವೊಂದರ ನಿರ್ವಹಣೆಯನ್ನು ಅವರು ಕೈಗೆತ್ತಿಕೊಂಡಾಗ ಮಾಡಬೇಕಾಗಿದ್ದ ಕೆಲಸದ ಪರಿಮಾಣವಾಗಲಿ, ಅದನ್ನು ನಿರ್ವಹಿಸಬೇಕಾದ ವಿಧಾನವಾಗಲಿ ಯೋಜಿತವಾಗಿರಲಿಲ್ಲ. ಆಗದು ಎಂತಹ ಮಠವೆಂದರೆ ಶ್ರೀಕಾಲಭೈರವನ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ಕೊಡುವ ತ್ರಾಣವೂ ಇರದಿದ್ದ ಮಠ. ಆಗಿದ್ದದ್ದು ಒಂದೇ, ನೂತನ ಸ್ವಾಮಿಗಳಿಗೆ ಏನಾದರೂ ಮಾಡಬೇಕೆನ್ನುವ ಕನಸು, ಮಾಡಿನೋಡುವ ಕಸುವು. ಆದದ್ದು ಮಾತ್ರ ಅದ್ಭುತ, ಈಗಲೂ ಘನಸಾಕ್ಷಿಯಾಗಿ ವಿಜೃಂಭಿಸುತ್ತಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠ.

ಮಠದ ಆರ್ಥಿಕ ಸ್ಥಿತಿ ಹೀಗಿರುವಾಗ ಮಹಾಸ್ವಾಮಿಗಳು ತಾವೇ ಖುದ್ದಾಗಿ ನೇಗಿಲು ಹಿಡಿದು ಹೊಲ ಉಳುವ ಕಾರ್ಯಕ್ಕೆ ಕೈಹಾಕದೆ ವಿಧಿ ಇರಲಿಲ್ಲ. ಗಾಡಿ ಕಟ್ಟಿಕೊಂಡು ಊರೂರು ಸುತ್ತಿ ದವಸಧಾನ್ಯ, ತೆಂಗಿನಕಾಯಿ, ಹಣ ಸಂಗ್ರಹಿಸಿದೆ ನಿರ್ವಾಹವಿರಲಿಲ್ಲ. ಒಂದು ಸಾಮಾಜಿಕ ಮಹಾಕ್ರಾಂತಿಯಿಂದ ಸಾಧಿಸಬಹುದಾದದ್ದನ್ನು ಧರ್ಮಕಾಂತಿಯಿಂದ ಮಾಡಿ ತೋರಿಸಿದರು. ಕುದುರೆಯ ಮೇಲೆ, ಚಕ್ಕಡಿಯ ಮೇಲೆ ಹಳ್ಳಿಹಳ್ಳಿ ತಿರುಗಿ ದತ್ತಿ ವಂತಿಗೆಗಳನ್ನು ತಂದರು. ಹಳ್ಳಿಗರ ಹೊಲಗದ್ದೆಗಳಿಗೆ ತೆರಳಿ ಮರಕ್ಕೊಂದು ಕಾಯಿ ಎಂಬ ವಾಡಿಕೆಯಲ್ಲಿ ತೆಂಗಿನ ಕಾಯಿಯನ್ನು ಸಂಗ್ರಹಿಸಿ ತಂದರು. ಅದರಿಂದ ಬಂದ ಆದಾಯದಲ್ಲಿ ಕ್ಷೇತ್ರದಲ್ಲಿ ಕಟ್ಟಿಸಿದ ಭವನವೇ ಕಲ್ಪತರು ಭವನ. ಒಕ್ಕಲಿಗ ಜನಸಮುದಾಯ ಸ್ವಾಮೀಜಿಯ ಉತ್ಸಾಹಕ್ಕೆ ಪೂರಕವಾಗಿಯೇ ಸ್ಪಂದಿಸಿದ್ದು ವಿಶೇಷ.

ಆ ಸಮುದಾಯಕ್ಕೆ ಏನಾದರೂ ಮಾಡಬೇಕೆನ್ನುವ ಹಿರಿಯುತ್ಸಾಹದಿಂದ ಸಜ್ಜಾದ ಸ್ವಾಮೀಜಿ ಶೈಕ್ಷಣಿಕ ರಂಗಕ್ಕೆ ಕಾಲಿರಿಸಿದರು. ಆರೋಗ್ಯ, ಪರಿಸರ ಮತ್ತು ಸಾಮಾಜಿಕ ಸೇವೆ ಒಂದರ ಹಿಂದೊಂದರಂತೆ ಅವರ ಸೇವಾಪಟ್ಟಿಗೆ ಸೇರಿದವು. ಎಲ್ಲಕ್ಕಿಂತ ಮೊದಲಿಗೆ ಸಂಘಟಿತ ಶಕ್ತಿ ಇರದಿದ್ದ ಕೃಷಿಕ ಸಮುದಾಯವನ್ನು ಒಗ್ಗೂಡಿಸುವ ಮಹತ್ತರ ಹೊಣೆಗಾರಿಕೆಯೂ ಅವರಿಗಿತ್ತು. ಕೇವಲ ದಕ್ಷಿಣ ಮೈಸೂರು ಪ್ರಾಂತ್ಯದ ಭಾಗಕ್ಕೆ ಅಂದರೆ ಮಂಡ್ಯ, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ಕಾಣಬರುವ ಒಕ್ಕಲಿಗ ಒಳಪಂಗಡಗಳಿಗೆ ಮೀಸಲಾಗಿದ್ದ ಮಠ ರಾಜ್ಯಾದ್ಯಂತ ಇದ್ದ ಒಕ್ಕಲು ಸಂಸ್ಕೃತಿಯ ಶ್ರಮಿಕವರ್ಗವನ್ನು ತಲುಪಲು ಹೆಚ್ಚು ಸಮಯ ಬೇಕಾಗಲಿಲ್ಲ. ನಂತರ ದೇಶದ ಇತರ ಭಾಗಗಳ ಒಕ್ಕಲಿಗರನ್ನೂ ಒಗ್ಗೂಡಿಸಿಕೊಳ್ಳುವ ಪ್ರಯತ್ನ ಮಾಡಿದರು. ವಿಶ್ವಾದ್ಯಂತ ಇರುವ ಸಮುದಾಯವನ್ನು ಒಳಗೊಂಡು ಒಕ್ಕಲಿಗರಿಗೊಂದು ಧಾರ್ವಿುಕ ದಿಕ್ಕಾದರು, ಮಠಕ್ಕೂ ದ್ರವ್ಯಮೂಲವನ್ನು ಹೆಚ್ಚಿಸಿದರು.

ಮಹಾಸ್ವಾಮಿಗಳು ಬಹುಮುಖ ಪ್ರಜ್ಞೆಯ ಜ್ಞಾನಭಾಸ್ಕರ. ಹಸಿದ ಹೊಟ್ಟೆಗೆ ವಿದ್ಯೆ ಹತ್ತದು. ವಿದ್ಯೆ ಹತ್ತದೆ ಹಸಿವು ನಿವಾರಿಸಿಕೊಳ್ಳುವ ಶಕ್ತಿ ಬಾರದು ಎನ್ನುವುದನ್ನವರು ಮಂತ್ರದಂತೆ ಪಠಿಸುತ್ತಿದ್ದರು. ‘ಮಾನವ ಸೇವೆಯೇ ಮಾಧವ ಸೇವೆ’ ಎನ್ನುವ ಮೂಲಮಂತ್ರ ಅವರದಾಗಿತ್ತು. ಹಾಗಾಗಿಯೇ ಅನ್ನ, ಅಕ್ಷರ, ಆಶ್ರಯದಂತಹ ತ್ರಿವಿಧ ದಾಸೋಹದ ಸೌಲಭ್ಯ ಕೊಟ್ಟು ವಿದ್ಯಾಕ್ಷೇತ್ರಕ್ಕೆ ಜನರನ್ನು ಬೆಸೆದರು. ಅವರ ಈ ಪ್ರಯತ್ನಕ್ಕೆ ಸಿಕ್ಕ ಜನಸ್ಪಂದನೆ ಅವರ ನಿರೀಕ್ಷೆಗೂ ಮೀರಿತ್ತು. ಅವರ ಪೀಠಾಧಿಕಾರದ ನಂತರ ಮಠದ ಚಿತ್ರಣವೇ ಬದಲಾಗಿಹೋಯಿತು. ಕ್ಷೇತ್ರ ಭೌತಿಕವಾಗಿ ಎಷ್ಟು ಅಭಿವೃದ್ಧಿ ಕಂಡಿತೋ ಅದರ ಹತ್ತಾರು ಪಟ್ಟು ಘನತೆಯನ್ನು ಗಳಿಸಿಕೊಂಡಿತು.

ಇಂದು ದೇಶಾದ್ಯಂತ ಆದಿಚುಂಚನಗಿರಿ ಮಠದ 40 ಶಾಖಾ ಮಠಗಳು, ಸುಮಾರು 500ರಷ್ಟು ಶಿಕ್ಷಣ ಸಂಸ್ಥೆಗಳು, ನಾಲ್ಕು ಇಂಜಿನಿಯರಿಂಗ್, ಎರಡು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಎರಡು ಆಯುರ್ವೆದ ಕಾಲೇಜುಗಳು, ಅತ್ಯಾಧುನಿಕ ಆಸ್ಪತ್ರೆಗಳು, ಅಂಧರ ಶಾಲೆ, ಸಂಸ್ಕೃತ ವೇದಾಗಮ ಶಾಲೆ, ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯಗಳು ಸ್ಥಾಪನೆಯಾಗಿದ್ದರೆ, ಅವೆಲ್ಲ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯ ಅವಿರತ ಸೇವೆಯ ಫಲ. ಜಾತಿ, ಧರ್ಮ, ಮತ, ಪಂಗಡ, ವರ್ಗ, ವರ್ಣಭೇದಗಳ ಎಲ್ಲೆಗೆರೆಗಳನ್ನು ತೊಡೆದು ಏಕರೂಪದ ಶಿಕ್ಷಣ ಮತ್ತು ಸಂಸ್ಕಾರವನ್ನು ಮಠದಲ್ಲಿ ನೀಡಿದ ಹಿರಿಮೆ ಅವರದು. ಇಂದು ಸರ್ವಧರ್ಮಗಳ ಹತ್ತಾರು ಲಕ್ಷ ವಿದ್ಯಾರ್ಥಿಗಳು ಮಠದ ಕಕ್ಷೆಯಲ್ಲಿ ಕಲಿಯುತ್ತಿದ್ದಾರೆ.

ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನೆಡಿಸಿ ನೀರೆರೆದು ಪೋಷಿಸುವ ವನಸಂವರ್ಧನ ಯೋಜನೆಯ ಹರಿಕಾರರೆನಿಸಿಕೊಂಡರು. ಇದಕ್ಕಾಗಿ ಅವರು ಪ್ರಸಿದ್ಧ ಮಠಗಳ ಸಂತರು, ಘಟಾನುಘಟಿ ರಾಜಕಾರಣಿಗಳು, ಸಾಮಾಜಿಕ ಮುಖಂಡರು, ಅಧಿಕಾರಿಗಳು, ಪರಿಸರತಜ್ಞರು, ಸಾರ್ವಜನಿಕರು ಎಲ್ಲರನ್ನೂ ಯೋಜನೆಯ ವ್ಯಾಪ್ತಿಯೊಳಗೆ ಸೇರಿಸಿಕೊಂಡರು. ಬರಗಾಲದ ಹೊಡೆತದಿಂದಾಗಿ ಮೇವಿಲ್ಲದೆ ಕಟುಕರ ಪಾಲಾಗುತ್ತಿದ್ದ ಗೋವುಗಳ ಉಳಿವಿಗಾಗಿ ಅಪಾರ ಶ್ರಮ ಹರಿಸಿದರು. ಹಲವೆಡೆ ಗೋಶಾಲೆಗಳನ್ನು ತೆರೆಸಿದರು.

ಕ್ಷೇತ್ರದಲ್ಲಿ ಪುಟ್ಟದಾಗಿದ್ದ ಕ್ಷೇತ್ರಪಾಲಕ ಶ್ರೀಕಾಲಭೈರವೇಶ್ವರನ ಗುಡಿಯನ್ನು ತೆರವುಗೊಳಿಸಿ ಅವನಿಗಾಗಿ ಮಹಾ ದೇಗುಲವನ್ನು ನಿರ್ವಿುಸಿದರು. ಇದಕ್ಕಾಗಿ ಅವರು ಕೈಗೊಂಡದ್ದು 100 ಕೋಟಿ ರೂ.ಗಳ ವೆಚ್ಚದ ಬೃಹತ್ ಯೋಜನೆ. ಉತ್ತರ ಭಾರತದಲ್ಲಿ ನಡೆಯುವ ಕುಂಭಮೇಳಕ್ಕೆ ಸಂವಾದಿಯಾಗಿ ದಕ್ಷಿಣ ಭಾರತದಲ್ಲೂ ಕುಂಭಮೇಳ ನಡೆಯಬೇಕೆಂದು ಸಂಕಲ್ಪಿಸಿಕೊಂಡು ಮೈಸೂರು ಜಿಲ್ಲೆಯ ತಿರುಮಕೂಡಲಿನ ತ್ರಿವೇಣಿಸಂಗಮದಲ್ಲಿ ಮೇಳವನ್ನು ಆರಂಭಿಸಿದರು. ಇದಕ್ಕಾಗಿ ಅವರು ಕನ್ನಡನಾಡಿನ ಪ್ರಮುಖ ಮಠಗಳ ಪೀಠಾಧಿಪತಿಗಳನ್ನೆಲ್ಲ ಒಗ್ಗೂಡಿಸಿದರು.

ಒಂದು ಸರ್ಕಾರ ಮಾಡಬಹುದಾದ ಸಾಧನೆಯನ್ನು ಅವರು ಒಬ್ಬಂಟಿಯಾಗಿ ಮಾಡಿದರು. ದೂರದರ್ಶಿತ್ವ, ನಿಸ್ವಾರ್ಥಸೇವೆ, ಅವರನ್ನು ವಿಶ್ವಪಥಿಕನಂತೆ ಮಾಡಿವೆ. ಉನ್ನತ ಪ್ರಶಸ್ತಿ ಪುರಸ್ಕಾರ ಅವರನ್ನು ಅರಸಿಕೊಂಡು ಬಂದಿದೆ, ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2002ರಲ್ಲಿ ಕರ್ನಾಟಕ ಸರ್ಕಾರದಿಂದ ‘ಪರಿಸರ ರತ್ನ’, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯ, ಅಮೆರಿಕದ ಇಂಟರ್​ನ್ಯಾಷನಲ್ ವೇದಿಕ್ ಹಿಂದು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅವರ ಪಾಲಿಗೆ ಸಂದಿವೆ. 1993ರಲ್ಲಿ ಷಿಕಾಗೊದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ‘ಅಭಿನವ ವಿವೇಕಾನಂದ’, ಅಮೆರಿಕ, ಯೂರೋಪ್ ದೇಶಗಳ ಹಿಂದು ದೇಗುಲಗಳ ಪರಿಷತ್ತಿನ ‘ಸನಾತನ ಧರ್ಮರತ್ನ’, ಬಿರುದು ಬಾವಲಿಗಳು ಶ್ರೀಗಳಿಗೆ ಅಲಂಕಾರವಾಗಿವೆ.

300 ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನೆಲ್ಲ ಸೊನ್ನೆಯಿಂದ ಆರಂಭಿಸಿದ ಒಬ್ಬ ವ್ಯಕ್ತಿ ಕೇವಲ ಮೂರೂವರೆ ದಶಕಗಳಲ್ಲಿ ಕ್ರಾಂತಿಯೋಪಾದಿಯಲ್ಲಿ ಮಾಡಿ ಪೂರೈಸುತ್ತಾರೆಂದರೆ ಅದು ಅವರ ದಣಿವರಿಯದ ಚೈತನ್ಯದ ದ್ಯೋತಕ. ಇಷ್ಟೆಲ್ಲ ಮಾಡಿದ್ದರೂ ಅವರು ಇನ್ನೂ ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ, ಆದರೆ ಈ ದೇಹ ಸಹಕರಿಸುತ್ತಿಲ್ಲ ನೋಡಿ ಎಂದು ಹೇಳುತ್ತಿದ್ದರು. ನಿಜವಾದ ಅರ್ಥದಲ್ಲಿ ಕರ್ಮಯೋಗಿ ಆದವರು ಮಾತ್ರ ಹೇಳಬಹುದಾದ ಮಾತಿದು. ಅವರ ಮಟ್ಟಿಗೆ ಕಾಯಕವೇ ನಿತ್ಯಪೂಜೆ. ಪ್ರಕೃತಿಯಾಟಕ್ಕೆ ಮಣಿದು, ಬಳಲಿದ ತಮ್ಮ ದೇಹಶ್ರೀಯನ್ನು ತೊರೆದು 2013ನೇ ಜನವರಿ 13ನೇ ತಾರೀಖಿನಂದು ದಿವ್ಯತೆಯ ಕಡೆಗೆ ನಿರ್ಗಮಿಸಿದರು.

‘ಅಜ್ಞಾನದ ತಮಸ್ಸು ಹರಿದು, ಸುಜ್ಞಾನದ ದಿವ್ಯತೆ ಅರಿತದ್ದೇ ಆದರೆ ಭಗವಂತನಿಗೆ ನೆಲೆಸಲು ಬೇರೆಲ್ಲಿ ಜಾಗಬೇಕು? ನಮ್ಮಂತರಂಗವೇ ಸಾಕು’ ಎನ್ನುತ್ತಿದ್ದ ಮಹಾಸ್ವಾಮಿಗಳು ಏರಿದ ಎತ್ತರಕ್ಕೆ ಏರುವುದು ಸುಲಭವಲ್ಲ. ಇಂತಹ ಅನುನಯದ ಭಾವಗಳನ್ನು ಸ್ಪುರಿಸುತ್ತಿದ್ದದ್ದರಿಂದಲೇ ಶಿವಪಥವನ್ನು ತಲುಪಲು ಮೊದಲು ಗುರುಪಥವನ್ನು ಕ್ರಮಿಸಬೇಕು ಎನ್ನುವ ಮಾತು ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಅನ್ವಯಿಸುವಂತಿದೆ. ಅದಕ್ಕಿಂತ ಹೆಚ್ಚಾಗಿ ಅವರು ತಮ್ಮ ಸಾತ್ವಿಕ ನಡೆನುಡಿಯಿಂದ ಜನರ ಹೃದಯ ಸಾಮ್ರಾಜ್ಯವನ್ನು ಆಳಿದರು. ಅವರು ಹಚ್ಚಿದ ಅದೆಷ್ಟೋ ಹಣತೆಗಳು ಇಂದಿಗೂ ಬೆಳಗುತ್ತಿವೆ. ಇಂದು ಅವರ 80ನೇ ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಈ ನೆನಪಿನ ಪಯಣ.

(ಲೇಖಕರು ಮೈಸೂರಿನ ವಿದ್ಯಾವರ್ಧಕ, ತಾಂತ್ರಿಕ ಮಹಾವಿದ್ಯಾಲಯದ ಆಡಳಿತಾಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net