

ಸುಸಂವಾದಕ್ಕೆ ವೇದಿಕೆಯಾಗಬೇಕಾದ ಸಂಸತ್ತಿನ ಕಲಾಪಗಳು ಗದ್ದಲ, ಗೊಂದಲಕ್ಕೆ ಬಲಿಯಾಗುತ್ತಿರುವುದು ದುರ್ದೈವದ ಸಂಗತಿ. ಈ ಬಾರಿಯ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಕಲಾಪ ಸುಗಮವಾಗಿ ನಡೆದದ್ದು ಬಹು ವಿರಳ. ಒಂದಿಲ್ಲ ಒಂದು ಕಾರಣ ಅಥವಾ ವಿವಾದ ಮುಂದಿಟ್ಟುಕೊಂಡು ಸದನದ ಕಲಾಪ ನಡೆಯಲು ಬಿಡುತ್ತಿಲ್ಲ. ಇದು ಯಾವ ಸಂಸದೀಯ ನಡವಳಿಕೆ? ಈ ರೀತಿಯ ವರ್ತನೆಯಿಂದ ಏನು ಸಾಧಿಸಿದಂತಾಗುತ್ತದೆ? ರ್ಚಚಿಸಲು ಹಲವು ಜ್ವಲಂತ ಸಮಸ್ಯೆಗಳು ಇರುವಾಗ ರಾಜಕೀಯ ಪ್ರತಿಷ್ಠೆಗಾಗಿ ಹೀಗೆ ಸದನದ ಕಲಾಪವನ್ನು ಬಲಿ ಕೊಡುತ್ತಿರುವುದು ಸರಿಯಲ್ಲ.
ಈ ವಿಷಯದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ವಿವೇಚನೆಯಿಂದ ನಡೆದುಕೊಳ್ಳಬೇಕು. ಕಲಾಪ ಸುಗಮವಾಗಿ ನಡೆಯಬೇಕು. ಪ್ರತಿಪಕ್ಷಗಳ ಬೇಡಿಕೆಯಂತೆ ‘ಆಪರೇಷನ್ ಸಿಂಧೂರ’ದ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ದೀರ್ಘ ಚರ್ಚೆ ನಡೆಲಾಗಿದೆ. ಪ್ರತಿಪಕ್ಷಗಳ ಅನುಮಾನಗಳಿಗೆ ಸರ್ಕಾರ ಉತ್ತರವೂ ನೀಡಿದೆ. ದೇಶದ ಹಲವು ರಾಜ್ಯಗಳು ಪ್ರವಾಹದಿಂದ ತತ್ತರಿಸಿವೆ. ಉತ್ತರಾಖಂಡ ಮೇಘಸ್ಪೋಟದ ಆಘಾತದಿಂದ ಹೊರಬಂದಿಲ್ಲ. ಇಂಥ ಸಂಕಷ್ಟದ ಹೊತ್ತಿನಲ್ಲಿ ಜನರ ನೆರವಿಗೆ ಹೇಗೆ ನಿಲ್ಲಬಹುದು ಎಂಬುದರ ಬಗ್ಗೆ ತಕ್ಷಣ ನಿರ್ಣಯಕ್ಕೆ ಬರುವುದನ್ನು ಬಿಟ್ಟು ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪ ಮಾಡುತ್ತ ಸದನದ ಅಮೂಲ್ಯ ಸಮಯವನ್ನು ಮತ್ತು ತೆರಿಗೆದಾರರ ಕೋಟ್ಯಂತರ ಹಣವನ್ನು ಹಾಳುಮಾಡುತ್ತಿರುವುದು ಸರಿಯಲ್ಲ.
ಎಲ್ಲ ಸಮಯದಲ್ಲೂ ರಾಜಕೀಯ ಮೇಲಾಟವೇ ಮುಖ್ಯವಾದರೆ, ಜನರ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವವರಾರು? ಪ್ರಮುಖ ವಿಷಯಗಳನ್ನು ರ್ಚಚಿಸುವವರಾರು? ಹಿಂದೆಲ್ಲ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಗಂಭೀರ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿದ್ದವು. ಅಲ್ಲದೆ, ಕಲಾಪದ ಮೂಲಕ ದೇಶಕ್ಕೆ ಒಂದು ಸಂದೇಶವನ್ನು ನೀಡುತ್ತಿದ್ದವು. ಅದಕ್ಕಾಗಿಯೇ, ‘ಸಂಸತ್ತಿನ ದನಿ’ ಎಂಬ ಹಿರಿಮೆ ಕೂಡ ಸೇರಿಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕಲಾಪ ಹಳಿತಪು್ಪತ್ತಿರುವುದು, ಬೇಡದ ಕಾರಣಗಳಿಗಾಗಿ ಸುದ್ದಿ ಆಗುತ್ತಿರುವುದು ದುರದೃಷ್ಟಕರ ಬೆಳವಣಿಗೆ.
ಸಂಸತ್ತಿನ ಮುಂಗಾರು ಅಧಿವೇಶನವನ್ನು ಆಡಳಿತ ಮತ್ತು ಪ್ರತಿಪಕ್ಷಗಳು ರಚನಾತ್ಮಕವಾಗಿ ಬಳಸಿಕೊಳ್ಳಬೇಕು. ಆದರೆ, ಎರಡೂ ಕಡೆಯ ಪ್ರತಿಷ್ಠೆಗೆ ಕಲಾಪ ಬಲಿಯಾಗಿದೆ. ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಸಹಜವೇ. ಇದರ ನಿವಾರಣೆಗೆ ಚರ್ಚೆ ವೇದಿಕೆಯಾಗಬೇಕೆ ಹೊರತು ಕಲಹ, ಕೂಗಾಟ-ಚೀರಾಟವಲ್ಲ. ಸಂಸತ್ತಿನ ಕಲಾಪವನ್ನು ಇಡೀ ದೇಶ ಗಮನಿಸುತ್ತದೆ, ಚರ್ಚೆಗಳನ್ನು ಗಂಭೀರವಾಗಿ ಆಲಿಸುತ್ತದೆ ಎಂಬ ಸರಳ ವಾಸ್ತವ ನಮ್ಮ ಸಂಸದರಿಗೆ, ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗೆ ತಿಳಿಯದೆ ಇರುವಂಥದ್ದೇನಲ್ಲ. ಆದರೆ, ರಾಜಕೀಯ ಪ್ರತಿಷ್ಠೆಯಲ್ಲಿ ತಮ್ಮದೇ ಗೆಲುವಾಗಬೇಕು ಎಂಬ ಧೋರಣೆಯೇ ಇಂಥ ಅಪಸವ್ಯಗಳಿಗೆ ನಾಂದಿಯಾಗುತ್ತಿದೆ.
ಅರ್ಥಪೂರ್ಣ ಚರ್ಚೆ ನಡೆಸುವ ಮೂಲಕ ನಿಷ್ಕರ್ಷಕ್ಕೆ ಬರಲು ಇವರಿಗೆ ಏನು ಅಡ್ಡಿ? ಚರ್ಚೆ ನಡೆದ ಮೇಲೂ ಯಾವುದಾದರೂ ವಿಷಯದ ಬಗ್ಗೆ ಅಸಮಾಧಾನವಿದ್ದರೆ ಸಂಸತ್ತಿನ ಹೊರಗೆ ವಿರೋಧವನ್ನು ಪ್ರದರ್ಶಿಸಲು ಅವಕಾಶವಿದೆ. ಆದರೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸುವ ಕಲಾಪವನ್ನು ಹಾಳು ಮಾಡಿ, ಚರ್ಚೆಯ ವಾತಾವರಣವನ್ನೇ ನುಂಗಿಹಾಕುವ ಪ್ರವೃತ್ತಿ ಕೊನೆಗೊಳ್ಳಬೇಕು. ಈ ಬಗೆಯ ಗದ್ದಲದಿಂದ ಸಂಸದೀಯ ಮೌಲ್ಯಗಳಿಗೂ ಅವಮಾನವಾದಂತಾಗಿದೆ. ರಾಜ್ಯಗಳ ವಿಧಾನಸಭಾ ಕಲಾಪಗಳಿಗೂ ಈ ಮಾತು ಅನ್ವಯವಾಗುತ್ತದೆ.