ಬೇಸಿಗೆಯ ಬೇಗೆಗೆ ತಂಪೆರೆವ ಸೊಗದೇ ಬೇರು

Untitled design
Published on

ಇದೊಂದು ಮೂಲಿಕೆಯ ಬಗ್ಗೆ ಸರಿಯಾಗಿ ಗೊತ್ತಿದ್ದರೆ ಬೇಸಿಗೆಯ ಬೇಗೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಅದು ದೇಹಕ್ಕೆ ತಂಪು ನೀಡುವ, ಮನಸ್ಸನ್ನು ಶಾಂತಗೊಳಿಸುವ, ಶಕ್ತಿದಾಯಕವಾದ, ಬಹುತೇಕ ಎಲ್ಲಾ ಗ್ರಂಧಿಗೆ ಅಂಗಡಿಗಳಲ್ಲಿ ಲಭ್ಯವಿರುವ ಒಂದು ವಿಶೇಷ ಗಿಡಮೂಲಿಕೆ ಸಾರಿವ ಅಥವಾ ಸೊಗದೇ ಬೇರು. ಇದರ ಗುಣದ ಬಗ್ಗೆ ಹೇಳಿ ಮುಗಿಸಲು ಒಂದು ದಿನ ಸಾಲದು. ಯಾವುದೇ ಅಡ್ಡ ಪರಿಣಾಮ ಮಾಡದೇ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ.

ಇದಕ್ಕಿರುವ ಉತ್ಕೃಷ್ಟ ತಂಪುಗುಣದ ಕಾರಣ ದಿಂದಾಗಿ ಆಯುರ್ವೆದ ವೈದ್ಯರು ಉಷ್ಣ ದಿಂದಾದ ಹಲವಾರು ರೋಗಗಳಲ್ಲಿ ಇದನ್ನು ನೀಡುತ್ತಾರೆ. ಚರ್ಮರೋಗ, ತುರಿಕೆ, ಜ್ವರ, ಆಸಿಡಿಟಿ, ವೀರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಬಿಳಿಮುಟ್ಟು, ಉರಿಮೂತ್ರ, ಅತಿಯಾದ ಮುಟ್ಟಿನ ರಕ್ತಸ್ರಾವ, ದೇಹದ ಯಾವುದೇ ಭಾಗದಲ್ಲಿ ಆಗುವ ಉರಿ ಹೀಗೆ ಹಲವು ತೊಂದರೆಗಳನ್ನು ಇದು ಗುಣಪಡಿಸಬಲ್ಲುದು. ಇಂದು ಸೊಗದೇ ಬೇರನ್ನು ಹೇಗೆ ಬೇಸಿಗೆಯಲ್ಲಿ ಬಳಸಬಹುದು ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳೋಣ.

ಸಾರಿವ ಪಾನಕ ಆಯುರ್ವೆದ ಜಗತ್ತಿನಲ್ಲಿ ಪ್ರಸಿದ್ದವಾದ ಪಾನೀಯ. ಅರ್ಧ ಚಮಚದಷ್ಟು ಸೊಗದೇ ಬೇರಿನ ಚೂರುಗಳನ್ನು 2 ಲೋಟ ನೀರಿಗೆ ಹಾಕಿ ಸ್ವಲ್ಪ ಕುದಿಸಿ ಚೆನ್ನಾಗಿ ತಣ್ಣಗಾಗುವವರೆಗೆ ಮುಚ್ಚಿಡಬೇಕು. ಸೊಗದೇ ಬೇರನ್ನು ನೀರಿಗೆ ಹಾಕಿ ತುಂಬಾ ಕುದಿಸಿದರೆ ಅದರ ಗುಣಗಳು ಆವಿಯಾಗಿ ಹೋಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸ್ವಲ್ಪವೇ ಕುದಿಸಿ ತಣ್ಣಗಾದ ನಂತರ ಸೋಸಿ ಚಿಟಿಕೆಯಷ್ಟು ಏಲಕ್ಕಿ ಮತ್ತು ರುಚಿಗೆ ಬೇಕಿದ್ದರೆ ಸಾವಯವ ಬೆಲ್ಲ ಹಾಕಿದರೆ ಸಾರಿವ ಪಾನಕ ಕುಡಿಯಲು ತಯಾರು. ಕೂಡಲೇ ಆಗಬೇಕೆಂದರೆ ತಣ್ಣನೆಯ ನೀರಿಗೆ ಸೊಗದೇ ಬೇರಿನ ಪುಡಿಯನ್ನು ಹಾಕಿ ಪಾನಕ ತಯಾರಿಸಬಹುದು. ಆದರೆ ಬೇರುಗಳನ್ನು ಮನೆಗೆ ತಂದು ಪುಡಿ ಮಾಡಿಕೊಂಡರೆ ಒಳ್ಳೆಯದು. ಪುಡಿಯನ್ನೇ ತಂದರೆ ಕಲಬೆರಕೆಯಾಗಿರುವ ಸಾಧ್ಯತೆ ಇರುತ್ತದೆ. ಇದನ್ನು ಹಾಲಿನಲ್ಲಿ (ಅಥವಾ ನೀರಿನಲ್ಲಿ) ತೇಯ್ದು ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚದಷ್ಟು ಸೇವಿಸಿದರೆ ಉಳಿದೆಲ್ಲಾ ಉಪಯೋಗಗಳ ಜೊತೆಗೆ ಚರ್ಮದ ಕಾಂತಿ ಹೆಚ್ಚಲೂ ಸಹಾಯವಾಗುತ್ತದೆ. ಬೇಸಿಗೆಯಲ್ಲಿ ಉರಿಯ ಕಾರಣ ಚರ್ಮ ಹಾಳಾಗಿದ್ದರೆ ಅದನ್ನು ಸರಿಮಾಡಲು ಮತ್ತು ಹಾಳಾಗುವುದನ್ನು ತಪ್ಪಿಸಲು ಸೊಗದೇ ಬೇರಿನ ಫೇಸ್ ಪ್ಯಾಕ್ ತುಂಬಾ ಸಹಾಯಕ.

ಸೊಗದೇ ಬೇರನ್ನು ಹಾಲಿನಲ್ಲಿ ತೇಯ್ದು ಅಥವಾ ಇದರ ಪುಡಿಯನ್ನು ಹಾಲು ಅಥವಾ ರೋಸ್ ವಾಟರ್ ಜೊತೆ ಕಲಸಿ ಪೇಸ್ಟ್ ತಯಾರಿಸಿ ಫೇಸ್ ಪ್ಯಾಕ್ ಮಾಡಿಕೊಂಡರೆ ಬೇಸಿಗೆಯಲ್ಲಿ ಚರ್ಮದ ಸೌಂದರ್ಯಕ್ಕೆ ತುಂಬಾ ಅನುಕೂಲವಾಗುತ್ತದೆ. ಬೇಸಿಗೆಯಲ್ಲಿ ಉಷ್ಣತೆಯ ಕಾರಣದಿಂದ ಅಸಿಡಿಟಿ ಆಗುವವರಿಗೆ ಮತ್ತು ಎಚ್ ಪೈಲೋರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಉತ್ತಮ ಔಷಧ. ಒಂದು ಲೋಟ ಬೆಚ್ಚನೆಯ ಹಾಲಿಗೆ ತಲಾ ಅರ್ಧ ಚಮಚ ಜ್ಯೇಷ್ಠಮಧುವಿನ ಪುಡಿ ಮತ್ತು ಸೊಗದೇ ಬೇರಿನ ಪುಡಿ ಹಾಕಿ ದಿನಕ್ಕೊಮ್ಮೆ ಆಹಾರ ಸೇವಿಸುವ ಒಂದು ತಾಸು ಮೊದಲು ಸೇವಿಸಿದರೆ ಹೊಟ್ಟೆ ಉರಿ ಮತ್ತು ಸಂಕಟ ಚೆನ್ನಾಗಿ ಕಡಿಮೆಯಾಗಿ ದೇಹಕ್ಕೆ ತಂಪಾದ ಅನುಭವ ಆಗುತ್ತದೆ. ಬೇಸಿಗೆಯ ಉಷ್ಣತೆಗೆ ನಿದ್ದೆ ಬರುತ್ತಿಲ್ಲದಿದ್ದರೆ ಅರ್ಧ ಲೋಟ ಹಾಲು ಅಥವಾ ನೀರಿಗೆ ಕಾಲು ಚಮಚ ಸೊಗದೇ ಬೇರಿನ ಪುಡಿ ಹಾಕಿ ಮಲಗುವ

ಮೊದಲು ಕುಡಿಯಬೇಕು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಸುಸ್ತಿಗೂ ಇದು ಒಳ್ಳೆಯದು. ಕೇವಲ ಬೇಸಿಗೆಯೊಂದೇ ಅಲ್ಲದೇ ಸದಾಕಾಲ ತಲೆಬಿಸಿ ಮಾಡಿಕೊಂಡೇ ಇರುವವರಿಗೆ ಅಂದರೆ ಮಾನಸಿಕ ಒತ್ತಡ, ಸಿಟ್ಟು, ಆತಂಕದಿಂದ ಬಳಲುತ್ತಿರುವವರಿಗೂ ಸೊಗದೇ ಅನುಕೂಲಕರವೇ. ಒಟ್ಟಿನಲ್ಲಿ ಎಲ್ಲಿದ್ದರೂ ನೀ ತಂಪಾಗಿರು ಎಂದು ಸೊಗದೇ ಬೇರು ನಮಗೆ ಹೇಳುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳೋಣ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net