

ಬ್ಯಾಂಕಿನಲ್ಲಿ ನೌಕರಿ ಸಿಕ್ಕ ಕೂಡಲೇ ವಿಜಯಕುಮಾರ್ ತನ್ನ ಸೋದರಮಾವನ ಮಗಳಾದ ಲಲಿತಾಳನ್ನು ವಿವಾಹವಾದ. ಆಕೆ ಸ್ಥಳೀಯ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ವಿಜಯಕುಮಾರ್ಗೆ ಸ್ವಂತ ಗ್ರಾಮದಲ್ಲಿ ಒಂದೂವರೆ ಎಕರೆ ವಿಸ್ತೀರ್ಣದ ಹೊಲವಿತ್ತು, ಅಲ್ಲಿ ಮನೆ ಕಟ್ಟಿಕೊಂಡು ನಿವೃತ್ತಿ ಜೀವನ ಸಾಗಿಸಬೇಕೆಂದು ಆತ ಯೋಚಿಸಿದ್ದ. ಬಲುಬೇಗನೇ ವಿಜಯಕುಮಾರ್ ಹೊಸ ವೃತ್ತಿಯಲ್ಲಿ ಪರಿಣಿತಿ, ಕಂಪ್ಯೂಟರ್ ಬಳಕೆಯಲ್ಲಿ ನಿಪುಣತೆ ಪಡೆದ. ಆತ ನಿವೃತ್ತ ಸೈನಿಕನಾಗಿದ್ದ ಕಾರಣ ಹಿರಿಯ ಅಧಿಕಾರಿಯಾದ ಶಾಖಾ ಮ್ಯಾನೇಜರ್ ಯಾವ ಕೆಲಸ ಹೇಳಿದರೂ ಮರುಮಾತಾಡದೇ ಮಾಡುತ್ತಿದ್ದ. ಬ್ಯಾಂಕಿನ ಗ್ರಾಹಕರ ಜೊತೆ ವಿನಯದಿಂದ ವರ್ತಿಸುತ್ತಿದ್ದ. ಬ್ಯಾಂಕಿನ ಬಹಳಷ್ಟು ಗ್ರಾಹಕರು ಫೋನ್ ಮೂಲಕವೇ ಅವನ ಸಹಾಯ ಕೇಳುತ್ತಿದ್ದರು. ಸಹೋದ್ಯೋಗಿಗಳಿಗೆ ಏನಾದರೂ ತೊಂದರೆಯಿದ್ದರೆ ಅವರಿಗೆ ಹೊರಗೆ ಹೋಗಲು ಅನುಕೂಲ ಮಾಡಿಕೊಟ್ಟು ಅವರ ಕೆಲಸವನ್ನೂ ತಾನೇ ಮಾಡುತ್ತಿದ್ದ. ಹೀಗಾಗಿ ಮ್ಯಾನೇಜರ್ ಆದಿಯಾಗಿ ಎಲ್ಲ ಸಹೋದ್ಯೋಗಿಗಳೂ ಅವನಿಗೆ ತಂತಮ್ಮ ಕಂಪ್ಯೂಟರುಗಳ ಪಾಸ್ವರ್ಡ್ ಕೊಟ್ಟಿದ್ದರು.
ಕೆಲಕಾಲದ ನಂತರ ವಿಜಯಕುಮಾರ್ಗೆ ಆನ್ಲೈನ್ ಜೂಜಾಟದ ಗೀಳು ಹತ್ತಿಕೊಂಡಿತು. ಆರಂಭದಲ್ಲಿ ಸುಮಾರು ಒಂದು ಸಾವಿರ ರೂಪಾಯಿ ತೊಡಗಿಸಿ ಹತ್ತು ಸಾವಿರ ರೂ.ಗಳನ್ನು ಗಳಿಸಿದಾಗ ಆತ ಜೂಜಾಟದ ವ್ಯಸನಿಯಾದ. ತನ್ನ ಹೆಂಡತಿಗೂ ಜೂಜಾಟದ ಚಟ ಕಲಿಸಿದ. ಇಬ್ಬರೂ ಸಮಯಸಿಕ್ಕಾಗಲೆಲ್ಲ ಆನ್ಲೈನ್ ತಾಣಗಳ ಮೂಲಕ ಜೂಜಾಟ ಆಡತೊಡಗಿದರು. ಏತನ್ಮಧ್ಯೆ ಷೇರು ಮಾರುಕಟ್ಟೆಯಲ್ಲಿ ಭಾರೀ ಹಣಮಾಡಬಹುದೆಂದು ಯಾರೋ ತಿಳಿಸಿದರು. ಆತ ಷೇರು ವ್ಯವಹಾರ ಆರಂಭಿಸಿ ಶೀಘ್ರದಲ್ಲಿಯೇ ಭಾರೀ ಲಾಭ ಗಳಿಸಿದ. ಇದರಿಂದ ಹೆಚ್ಚು ಹೆಚ್ಚು ಹಣವನ್ನು ಷೇರುಗಳಲ್ಲಿ ತೊಡಗಿಸುತ್ತ ಬಂದ. ಆದರೆ ಒಂದು ದಿನ ಜಾಗತಿಕ ಮಟ್ಟದಲ್ಲಿಯೇ ಷೇರು ಮಾರುಕಟ್ಟೆ ಏಕಾಏಕಿ ಕುಸಿದಾಗ ವಿಜಯಕುಮಾರ್ ಷೇರುಗಳಲ್ಲಿ ತೊಡಗಿಸಿದ್ದ 15 ಲಕ್ಷ ರೂ. ಕೇವಲ ಒಂದು ಸಾವಿರ ರೂ. ಮೌಲ್ಯಕ್ಕೆ ಇಳಿಯಿತು. ವಿಜಯಕುಮಾರ್ ಧರೆಗಿಳಿದ. ಆತನ ಸ್ನೇಹಿತನೊಬ್ಬ ಅಧೀರನಾಗಬೇಡವೆಂದು ಹೇಳಿ ಷೇರುಪೇಟೆ ಕುಸಿತದ ಸಮಯದಲ್ಲಿಯೇ ಹೆಚ್ಚು ಹೆಚ್ಚು ಹಣವನ್ನು ಪೇಟೆಯಲ್ಲಿ ಹೂಡಿದರೆ ಲಾಭ ಖಂಡಿತ ಸಾಧ್ಯ ಎಂದು ಸಲಹೆ ನೀಡಿದ. ಆದರೆ ತೊಡಗಿಸಲು ಹಣ ಬೇಕಿತ್ತು. ಅಲ್ಲದೆ ನಷ್ಟ್ಟ ಕಾರಣ ಅವನಿಗೆ ಜೀವನ ನಿರ್ವಹಿಸುವುದೇ ಕಠಿಣವಾಗಿತ್ತು. ಬಂಧುವರ್ಗದವರು, ಸ್ನೇಹಿತರಿಂದ ಸಾಲ ಮಾಡಿ ಅದನ್ನು ಷೇರುಗಳ ಖರೀದಿಗೆ ವ್ಯಯಿಸಿದ. ಸಾಲ ತೀರಿಸಲು ಮತ್ತೆ ಆನ್ಲೈನ್ ಜೂಜಾಟಕ್ಕೆ ಕೈ ಹಾಕಿದ. ಆದರೆ ಜೂಜಾಟದ ಮೂಲಕ ಹಣ ಗಳಿಸುವುದು ಅಸಾಧ್ಯವಾದ ಕಾರಣ ಸಾಲದ ಹೊರೆ ಭಾರವಾಗುತ್ತಲೇ ಹೋಯಿತು. ಸಾಲದಿಂದ ಹೇಗೆ ಮುಕ್ತನಾಗಬೇಕೆಂದು ಚಿಂತಿಸ ತೊಡಗಿದಾಗ, ಬ್ಯಾಂಕ್ ಶಾಖೆಯಲ್ಲಿ ಮಕ್ಕಳ ಹೆಸರಿನಲ್ಲಿ ಹಲವಾರು ಸ್ಥಿರ ಠೇವಣಿಗಳಿರುವುದು ಅವನಿಗೆ ನೆನಪಾಯಿತು. ಗ್ರಾಹಕರು ತಮ್ಮ ಮಕ್ಕಳ ಹೆಸರಿನಲ್ಲಿ ಅಕೌಂಟ್ ತೆರೆದರೆ ಅದು ಫಲಕೊಡುತ್ತಿದದ್ದು ಮಕ್ಕಳಿಗೆ 18 ವರ್ಷಗಳು ತುಂಬಿದಾಗ ಮಾತ್ರ. ಹೀಗಾಗಿ ಯಾವುದೇ ಗ್ರಾಹಕ ಹತ್ತರಿಂದ ಹನ್ನೆರಡು ವರ್ಷಗಳವರೆಗೆ ಠೇವಣಿ ಹಿಂಪಡೆಯುವಂತಿರಲಿಲ್ಲ. ಇಂತಹ ಠೇವಣಿಗಳನ್ನು ತಾತ್ಕಾಲಿಕವಾಗಿ ಬಳಸಿ ಸಾಲಮುಕ್ತನಾಗಬೇಕು ಎಂದು ತೀರ್ವನಿಸಿದ ವಿಜಯಕುಮಾರ್ ಆ ದಿನ ತಾನು ರಾತ್ರಿಯವರೆಗೆ ಕೆಲಸಮಾಡುತ್ತೇನೆಂದು ಮ್ಯಾನೇಜರಿಗೆ ಹೇಳಿದ.
ಎಲ್ಲರೂ ಕಚೇರಿಯಿಂದ ನಿರ್ಗಮಿಸಿದ ನಂತರ, ಈ ಹಿಂದೆ ಮ್ಯಾನೇಜರ್ ತುರ್ತು ಸಮಯದಲ್ಲಿ ಉಪಯೋಗಿಸಬೇಕೆಂದು ಹೇಳಿ ಕೊಟ್ಟಿದ್ದ ಪಾಸ್ವರ್ಡನ್ನು ಬಳಸಿ ಬ್ಯಾಂಕಿನಲ್ಲಿ ಮಕ್ಕಳ ಹೆಸರಿನಲ್ಲಿ ಇರುವ ಎಲ್ಲ ಠೇವಣಿಗಳ ಪಟ್ಟಿ ಮಾಡಿಕೊಂಡ. ಮುಂದಿನ ಎರಡು ವರ್ಷಗಳಲ್ಲಿ ಮೆಚುರಿಟಿಗೆ ಬರುವ ಠೇವಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಫಿಕ್ಸೆಡ್ ಡಿಪಾಸಿಟ್ ಅಕೌಂಟ್ಗಳಲ್ಲಿ ಆ ಸಮಯದಲ್ಲಿ ಸುಮಾರು 41 ಲಕ್ಷ ರೂ.ಗಳಿದ್ದವು. ಅವುಗಳಲ್ಲಿ ಮೂರು ಬೇರೆ ಬೇರೆ ಮಕ್ಕಳ ಅಕೌಂಟ್ಗಳಿಂದ ಸುಮಾರು 10 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿ ತನ್ನ ಪತ್ನಿಯ ಅಕೌಂಟಿಗೆ ಜಮಾ ಮಾಡಿಕೊಂಡ. ಹೇಗಿದ್ದರೂ ಈ ಹಣವನ್ನು ಮರಳಿಸಲು ದಶಕದಷ್ಟು ಸಮಯವಿದೆ; ಆ ಸಮಯದಲ್ಲಿ ತಾನು ಬ್ಯಾಂಕಿನಿಂದ ನಿವೃತ್ತಿ ಹೊಂದಿರುತ್ತೇನೆಂದೂ ಅವನಿಗೆ ತಿಳಿದಿತ್ತು. ತಾನು ಹೊರತೆಗೆದಿದ್ದ ಹಣವನ್ನು ಸಾಲ ತೀರಿಸಲು ಖರ್ಚುಮಾಡುವುದಲ್ಲದೇ ಜೂಜಾಟಕ್ಕೂ ತೊಡಗಿಸಿದ. ಹಲವು ವಾರ ಕಳೆದರೂ ತನ್ನ ಕೃತ್ಯವು ಬೆಳಕಿಗೆ ಬಾರದಿದ್ದಾಗ ಇದೇ ರೀತಿ ಮಕ್ಕಳ ಅಕೌಂಟ್ಗೆ ಕನ್ನ ಹಾಕಿದರೆ ಯಾರಿಗೂ ಸಿಕ್ಕಿಹಾಕಿಕೊಳ್ಳದೇ ಹಣಗಳಿಸಬಹುದು ಎನಿಸಿತು. ಹೀಗಾಗಿ ಆತ ಬ್ಯಾಂಕಿನಲ್ಲಿದ್ದ ಸರಿಸುಮಾರು ಅರವತ್ತು ಅಕೌಂಟ್ಗಳಲ್ಲಿದ್ದ ಹಣವನ್ನು ವಿತ್ಡ್ರಾ ಮಾಡಿಕೊಂಡ. ಈ ಹಣವೂ ಸಾಲದೆ ಬಂದಾಗ ತನ್ನ ಸ್ನೇಹಿತನ ಹೆಂಡತಿಯ ಅಕೌಂಟ್ನ ಮೇಲೆ ಆತನ ಕಣ್ಣುಬಿದ್ದಿತು. ಆಕೆಯ ಸ್ಥಿರ ಠೇವಣಿಯ ಮೂರು ಬೇರೆ ಬೇರೆ ಅಕೌಂಟ್ಗಳಲ್ಲಿ 30 ಲಕ್ಷಕ್ಕೂ ಮೇಲ್ಪಟ್ಟು ಹಣವಿದ್ದು ಅವು ಮೆಚುರಿಟಿಗೆ ಬರಲು ಐದು ವರ್ಷಗಳಿದ್ದವು. ವಿಜಯ್ಕುಮಾರ್ ಅವುಗಳಲ್ಲಿ ಒಂದು ಅಕೌಂಟನ್ನು ಅವಧಿಗೆ ಮುನ್ನವೇ ಮುಕ್ತಾಯ ಮಾಡಿದಂತೆ ತೋರಿಸಿ ಆ ಹಣವನ್ನೂ ಕಬಳಿಸಿದ. ದುರುಪಯೋಗ ಮಾಡಿಕೊಂಡಿದ್ದ ಅರ್ಧದಷ್ಟು ಹಣವನ್ನು ಆತ ತನ್ನ ಅತ್ತೆ, ಮಾವ ಮತ್ತು ಪತ್ನಿಯ ಅಕೌಂಟುಗಳಿಗೆ ವರ್ಗಾಯಿಸಿದ್ದ. ಹೀಗೆ ಗಳಿಸಿದ ಹಣವನ್ನು ಜೂಜಾಟಕ್ಕೆ ತೊಡಗಿಸಿದ್ದಲ್ಲದೇ ಸಾಲ ತೀರಿಸಲು ಬಳಸಿದ.
ಇದಾದ ಕೆಲ ದಿನಗಳ ನಂತರ ವಿಜಯಕುಮಾರ್ನ ಸ್ನೇಹಿತನ ಪತ್ನಿಗೆ ಹಣದ ಅವಶ್ಯಕತೆಯುಂಟಾದಾಗ ಆಕೆ ತನ್ನ ಸ್ಥಿರ ಠೇವಣಿಯನ್ನು ಅವಧಿಗೆ ಮುನ್ನ ವಾಪಸ್ ಪಡೆಯಲು ಬ್ಯಾಂಕಿಗೆ ಬಂದಳು. ತನ್ನ ಅಕೌಂಟ್ನಿಂದ ಒಂದು ಠೇವಣಿ ಈಗಾಗಲೇ ನಗದಾಗಿದೆಯೆಂದು ತಿಳಿದು ಹೌಹಾರಿದ ಆಕೆ ಬ್ಯಾಂಕ್ ಮಾನೇಜರ್ಗೆ ದೂರನ್ನು ನೀಡಿದಳು. ಇದು ಹೇಗಾಯಿತೆಂದು ಪರಿಶೀಲನೆ ನಡೆಯಿತು. ತನ್ನ ಕೃತ್ಯವು ಬೆಳಕಿಗೆ ಬರಬಹುದೆಂದು ಹೆದರಿದ ವಿಜಯಕುಮಾರ್ ತನ್ನ ಹೆಂಡತಿಗೆ ಕಾಯಿಲೆಯಾಗಿದೆಯೆಂದು ಹೇಳಿ ದೀರ್ಘಾವಧಿಯ ರಜೆ ಹಾಕಿ ನೆರೆ ರಾಜ್ಯಕ್ಕೆ ಹೋದ. ಬ್ಯಾಂಕಿನ ಅಧಿಕಾರಿಗಳಿಗೆ ವಿಜಯಕುಮಾರನೇ ಹಣ ದೋಚಿದ್ದಾನೆಂದು ತಿಳಿದು ಬಂದಾಗ ಅವರು ಬ್ಯಾಂಕಿನ ಇತರ ಠೇವಣಿಗಳು ನಗದಾಗಿರುವ ಬಗ್ಗೆ ತನಿಖೆ ನಡೆಸಿದರು. ಆಗ ಆತ ಮಕ್ಕಳ ಸ್ಥಿರ ಠೇವಣಿಯಿಂದ ಸುಮಾರು ನಾಲ್ಕು ಕೋಟಿ ರೂ.ಗಳನ್ನು ದುರುಪಯೋಗ ಮಾಡಿರುವುದಾಗಿ ತಿಳಿಯಿತು. ಕೂಡಲೇ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದರು. ವಿಜಯಕುಮಾರ್ನ ವಿರುದ್ಧ ನಂಬಿಕೆದ್ರೋಹ, ಮೋಸ ಮತ್ತು ಹಣ ದುರ್ವ್ಯವಹಾರದ ಪ್ರಕರಣ ದಾಖಲಾಯಿತು. ಏತನ್ಮಧ್ಯೆ ನೆರೆಯ ರಾಜ್ಯದ ರಾಜಧಾನಿಗೆ ಹೋಗಿದ್ದ ವಿಜಯಕುಮಾರ್, ಅಜಯ್ ಕುಮಾರ್ ಎನ್ನುವ ಹೆಸರಿನಿಂದ ವಾಸಮಾಡತೊಡಗಿದ. ತನ್ನ ಮೊಬೈಲನ್ನು ಯಾರಿಗೋ ಮಾರಿದ. ತನ್ನ ಸಿಮ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು ಇವೆಲ್ಲವನ್ನೂ ನಾಶ ಮಾಡಿದ. ಖಾಸಗಿ ಬ್ಯಾಂಕೊಂದರಲ್ಲಿ ತಾನೊಬ್ಬ ನಿವೃತ್ತ ಸೈನ್ಯಾಧಿಕಾರಿಯೆಂದು ಹೇಳಿ ಹೊಸ ಅಕೌಂಟ್ ತೆರೆದ, ಹೊಸ ಮೊಬೈಲ್ ಖರೀದಿಸಿದ.
ಆಂಧ್ರಪ್ರದೇಶದ ಪೊಲೀಸರು ವ್ಯಾಪಕ ಜಾಲ ಬೀಸಿದ್ದರೂ ಆತ ಪತ್ತೆಯಾಗಲಿಲ್ಲ. ಆತನ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಫೋನುಗಳಿಗೆ ಬರುವ ಕರೆಗಳ ಬಗ್ಗೆ ತೀವ್ರ ನಿಗಾ ಇಡಲಾಯಿತು. ಚಾಲಾಕಿ ವಿಜಯಕುಮಾರ್ ತನ್ನ ಹತ್ತಿರದವರನ್ನು ಫೋನಿನ ಮೂಲಕ ಸಂರ್ಪಸುವುದನ್ನೇ ಬಿಟ್ಟಿದ್ದ. ಆದರೊಮ್ಮೆ ತುರ್ತು ಕಾರಣಕ್ಕಾಗಿ ಸ್ನೇಹಿತನ ಜೊತೆ ಮಾತನಾಡಬೇಕಾಗಿ ಬಂದು, ಹೊಸ ಮೊಬೈಲ್ ಮೂಲಕ ಕರೆ ಮಾಡಿದ. ಆ ಸ್ನೇಹಿತ, ‘ನಿನ್ನನ್ನು ಪೊಲೀಸರು ಹುಡುಕುತ್ತಿದ್ದಾರೆ’ ಎಂದು ಎಚ್ಚರಿಸಿದ. ಸ್ನೇಹಿತನ ಫೋನನ್ನು ಗಮನಿಸುತ್ತಿದ್ದ ಪೊಲೀಸರು ವಿಜಯಕುಮಾರ್ನ ಹೊಸ ಫೋನ್ ನಂಬರನ್ನು ಪಡೆದು ಅವನು ಅಡಗಿದ್ದ ಊರಿಗೆ ಬಂದರು. ಆತನ ಮನೆಯೆಲ್ಲಿದೆ ಎಂದು ಪತ್ತೆಮಾಡಲು ಹೋದಾಗ ಆತ ಮನೆಗೆ ಊಟ ತರಿಸಿಕೊಳ್ಳಲು ಹೋಟೆಲಿಗೆ ಅದೇ ನಂಬರಿನಿಂದ ತನ್ನ ಮನೆಯ ವಿಳಾಸ ನೀಡಿದ್ದಾಗಿ ತಿಳಿಯಿತು. ಈ ಮಾಹಿತಿಯ ಮೇರೆಗೆ ಅವನ ಮನೆಯನ್ನು ಹುಡುಕಿದ ಪೊಲೀಸರು ಅವನನ್ನು ಬಂಧಿಸಿದರು. ತಾನು ಗುಳುಂ ಮಾಡಿದ ಬಹುತೇಕ ಹಣವನ್ನು ವಿಜಯಕುಮಾರ್ ಜೂಜಾಟಕ್ಕೆ ಬಳಸಿದ್ದ ಕಾರಣ ಸ್ವಲ್ಪ ಪ್ರಮಾಣದ ಹಣವನ್ನಷ್ಟೇ ಪೊಲೀಸರು ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಸದ್ಯ ವಿಜಯಕುಮಾರ್ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿದ್ದಾನೆ. ಅವನಿಗೆ ತನ್ನ ಪಾಸ್ವರ್ಡನ್ನು ಕೊಟ್ಟ ಬ್ಯಾಂಕ್ ಮ್ಯಾನೇಜರ್ ಅಮಾನತ್ತಾಗಿದ್ದಾನೆ. ‘ಆಡಿದ ನಳ ಕೆಟ್ಟ, ಆಡಿ ಧರ್ಮಜ ಕೆಟ್ಟ, ಬೇಡಿದವ ಕೆಟ್ಟನವನೊಬ್ಬ ನಾಡೊಳಗೆ ಆಡದೇ ಕೆಟ್ಟ ಸರ್ವಜ್ಞ’ ಎಂದಂತೆ ಜೂಜಾಟವಾಡುವವರಿಗಲ್ಲದೆ ಅವರ ಸುತ್ತಲಿದ್ದವರಿಗೂ ಕೆಡುಕೇ ಗಟ್ಟಿ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)