ಭಾಷಾವಿಜ್ಞಾನ, ಸಾಹಿತ್ಯ, ಸಂಶೋಧನೆಯಲ್ಲಿ ಮೌಲಿಕ ಕೊಡುಗೆ

Sangamesh savadattimath
Published on

ಡಾ. ಬಾಳಪ್ಪ ಈರಪ್ಪ ಚಿನಗುಡಿ

ಕರ್ನಾಟಕದ ಪ್ರಮುಖ ಭಾಷಾವಿಜ್ಞಾನಿ ಸಂಶೋಧಕರಲ್ಲಿ ಒಬ್ಬರೆನಿಸಿರುವ ಪ್ರೊ. ಸಂಗಮೇಶ ಸವದತ್ತಿಮಠ ಅವರ ಬಹುಮುಖಿ ಗಟ್ಟಿ ಬರೆಹಗಳು ತಲೆಮಾರಿನ ವಿದ್ಯಾರ್ಥಿಗಳು ಮತ್ತು ಅಸಂಖ್ಯಾತ ಓದುಗರನ್ನು ಆಕರ್ಷಿಸಿದ್ದು ಈಗಲೂ ಅಚ್ಚಳಿಯದಂತಿದೆ. ಅಧ್ಯಯನಶೀಲರಿಗೆ ಭಾಷಾವಿಜ್ಞಾನದ ಕ್ಲಿಷ್ಟ ವಿಷಯಗಳನ್ನು ಓದಲು ಗ್ರಂಥಗಳೇ ಇಲ್ಲದ 1960-70ರ ದಶಕದಲ್ಲಿ ಸವದತ್ತಿಮಠ ಅವರ ಭಾಷಾವಿಜ್ಞಾನ ಕೃತಿಗಳು ಕಾಮಧೇನು ಕಲ್ಪವೃಕ್ಷವಾಗಿದ್ದವು. ಇಂದಿಗೂ ಅವು ಆಸಕ್ತರ ಗಮನಸೆಳೆಯುತ್ತಲೇ ಇವೆ. ಹರಿಹರನ ರಗಳೆಗಳ ಭಾಷಾವೈಜ್ಞಾನಿಕ ವಿಶ್ಲೇಷಣೆ ಮಾಡಿ ಬರೆದ ಅವರ ಆಂಗ್ಲ ಭಾಷೆಯಲ್ಲಿನ ಕೃತಿ ವಿದೇಶಗಳಲ್ಲೂ ಗಮನಸೆಳೆದಿದೆ. ಭಾಷಾವಿಜ್ಞಾನ ಕ್ಷೇತ್ರದಲ್ಲಿ ಅವರ 20ಕ್ಕೂ ಹೆಚ್ಚಿನ ಕೃತಿಗಳು ಅಧ್ಯಯನಶೀಲರ ಮೆಚ್ಚುಗೆಗೆ ಪಾತ್ರವಾಗಿವೆ.

ಪ್ರೊ. ಸವದತ್ತಿಮಠ ಭಾಷಾವಿಜ್ಞಾನಿ ಮಾತ್ರವಲ್ಲ, ಸಾಹಿತ್ಯ ಮತ್ತು ಸಂಶೋಧನೆ ಅವರ ಇನ್ನೆರಡು ಕಣ್ಣುಗಳು. ಸಂಶೋಧನೆಯ ತತ್ತ್ವಗಳನ್ನು ಆಳವಾಗಿ ಅರಗಿಸಿಕೊಂಡು ಅವುಗಳ ಹಿನ್ನೆಲೆಯಲ್ಲಿಯೇ ಕನ್ನಡ ಸಾಹಿತ್ಯ ಮತ್ತು ವಚನ ಸಾಹಿತ್ಯಗಳನ್ನು ವಿವೇಚಿಸಿರುವ ಅವರ ಕೃತಿಗಳು ಐತಿಹಾಸಿಕ ದಾಖಲೆಗಳಾಗಿವೆ. ಕನ್ನಡದಲ್ಲಿಯೇ ಪ್ರಪ್ರಥಮವೆನಿಸಿದ ‘ಸಂಶೋಧನ ವ್ಯಾಸಂಗ’ ಎಂಬ ದ್ವೈಮಾಸಿಕ ಶೈಕ್ಷಣಿಕ ಪತ್ರಿಕೆ ಆರಂಭಿಸಿ ಸತತ 25ಕ್ಕೂ ಹೆಚ್ಚು ವರ್ಷಗಳವರೆಗೆ ಸ್ಥಾಪಕ ಸಂಪಾದಕರಾಗಿ ಪ್ರಕಟಿಸಿದ್ದು ಅವರ ಸಾಧನೆಯ ಮೈಲಿಗಲ್ಲಾಗಿದೆ. ನವನವೀನ ವರ್ಣನಾತ್ಮಕ ವಚನಪದಕೋಶ, ವಿಷಯಾನುಗುಣ 15 ವಚನ ಸಂಪುಟಗಳು, ಆಂಗ್ಲಭಾಷೆಯಲ್ಲಿನ ವಚನ ಡಿಕ್ಷನರಿ, ಕನ್ನಡ ಸಾಹಿತ್ಯದಲ್ಲಿ ಪ್ರಪ್ರಥಮ ಅಪರೂಪದ ಕಾಣಿಕೆಗಳೆನಿಸಿವೆ. ಅನೇಕ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಅವರ ಅಂಕಣ ಬರಹಗಳೂ ಗಮನಸೆಳೆದಿವೆ. ಸವದತ್ತಿಮಠರ ಎಲ್ಲ ಕೃತಿಗಳಲ್ಲೂ ಅವರ ಸಂಶೋಧನ ಮತ್ತು ಭಾಷಾವಿಜ್ಞಾನದ ಶಿಸ್ತು ಮತ್ತು ಹೊಸ ಆಲೋಚನೆಗಳ ಅಂತರ್​ದೃಷ್ಟಿಕೋನ, ಸಾಧಾರ ಮತ್ತು ನೇರ ವಸ್ತುನಿಷ್ಠ ಪ್ರತಿಪಾದನೆಯನ್ನು ಗಮನಿಸಬಹುದು.

ಡಾ. ಸವದತ್ತಿಮಠರು 17 ನಾಟಕಗಳನ್ನು ಬರೆದು ರಂಗಭೂಮಿ ಕ್ಷೇತ್ರದಲ್ಲೂ ಹೆಸರು ಮಾಡಿದವರು. ಶೆಟವಿ ಮುಂತಾದ ನಾಟಕಗಳು ರಂಗದ ಮೇಲೆ ಯಶಸ್ವಿಯಾಗಿ ಪ್ರಯೋಗಗೊಂಡಿವೆ. ನಾಟಕ ಮತ್ತು ರಂಗಭೂಮಿ ಅವರ ಹವ್ಯಾಸಿ ಕ್ಷೇತ್ರವಾದ್ದರಿಂದ ಕಲ್ಯಾಣ ಕರ್ನಾಟಕದಲ್ಲಿ ‘ರಂಗಭಾರತಿ’ ಎಂಬ ಹವ್ಯಾಸಿ ತಂಡವನ್ನು ಕಟ್ಟಿದ್ದರು. ಅವರ ನಾಟಕಗಳು ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಸಾರವಾಗಿವೆ, ಪಠ್ಯಪುಸ್ತಕಗಳಾಗಿವೆ.

ಜಾನಪದ ಕ್ಷೇತ್ರದಲ್ಲೂ ಅವರ ಕೊಡುಗೆ ವಿಶಿಷ್ಟ. ಉತ್ತರ ಕರ್ನಾಟಕದಲ್ಲಿ ಯಕ್ಷಗಾನಗಳು ಇದ್ದವು ಎಂಬುದನ್ನು ದುರುದುಂಡೀಶ ಎಂಬ ಕವಿಯ ಹಸ್ತಪ್ರತಿಗಳನ್ನು ಸಂಶೋಧಿಸಿ ಮೂರು ಯಕ್ಷಗಾನಗಳನ್ನು ಸ್ವತಃ ಸಂಪಾದಿಸಿ ಸಾಬೀತುಪಡಿಸಿದ್ದಾರೆ. ಎರಡು ಯಕ್ಷಗಾನಗಳನ್ನು ಕರ್ನಾಟಕ ಜಾನಪದ ಅಕಾಡೆಮಿಯೇ ಪ್ರಕಟಿಸಿದೆ. ಈ ಸಂಶೋಧನೆಗೆ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಕಲ್ಯಾಣ ಕರ್ನಾಟಕದ ಜನಪದ ಭಾಷೆ ಕುರಿತು ಭಾಷಾವಿಜ್ಞಾನದ ಆನ್ವಯಿಕ ಸಂಶೋಧನೆ ನಡೆಸಿದ ಪ್ರಥಮರು ಅವರು.

ಸೃಜನಶೀಲ ಸಾಹಿತ್ಯದಲ್ಲೂ ಇವರು ಹಿಂದೆಬಿದ್ದಿಲ್ಲ. ಒಂದು ಕಾದಂಬರಿ, ಒಂದಿಷ್ಟು ಕಥೆ-ಕವನಗಳು, ವ್ಯಕ್ತಿಚಿತ್ರಗಳು, ಅಂಕಣ ಬರೆಹಗಳು, ಲಲಿತಪ್ರಬಂಧಗಳು, ಹರಟೆಗಳು, ಕೃತಿ ವಿಮರ್ಶೆಗಳು, ಮುನ್ನುಡಿಗಳು... ಹೀಗೆ ಇವರ ಬರವಣಿಗೆಯ ಪ್ರವಾಹ ಓತಪೋ›ತವಾಗಿ ಹರಿದಿದೆ. ಇವರ ಸೃಜನ, ಸಂಪಾದನೆ, ವಿಮರ್ಶಾಸಾಹಿತ್ಯ, ಸಮಗ್ರಸಾಹಿತ್ಯ ಕುರಿತು ವಿಶ್ವವಿದ್ಯಾಲಯಗಳಲ್ಲಿ ಪಿಎಚ್​ಡಿಗಾಗಿ ವಿದ್ಯಾರ್ಥಿಗಳು ಅಧ್ಯಯನ ಕೈಕೊಂಡಿದ್ದಾರೆ, ಪಿಎಚ್​ಡಿ ಪದವಿ ಪಡೆದಿದ್ದಾರೆ.

ಅವರ ಮಹತ್ವದ ಕೃತಿಗಳು: ಕನ್ನಡಭಾಷಾ ವ್ಯಾಸಂಗ, ತೌಲನಿಕ ದ್ರಾವಿಡ ಭಾಷಾವಿಜ್ಞಾನ, ಆರ್ಯಭಾಷಾವ್ಯಾಸಂಗ. ವರ್ಣನಾತ್ಮಕ ವಚನಪದಕೋಶ, ವಿಷಯವಚನ ಸಂಪುಟಗಳು, ಜನಪ್ರಿಯ ವಚನನಿಘಂಟು, ಅಭಿನವಪಾಶುಪತ- ವೀರಶೈವ ಲಿಂಗಾಯತ, ಶೆಟವಿ ಮತ್ತು ಇತರ ನಾಟಕಗಳು, ಸಂಕ್ರಾಮ, ವೀರಶೈವ ಪರಿಶೋಧ.

ದಂಡಯ್ಯನವರು ಮತ್ತು ಪಾರ್ವತಿ ಅವರ ಹಿರಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಮುರಗೋಡ ಗ್ರಾಮದಲ್ಲಿ 01-04-1943ರಂದು ಜನಿಸಿದ ಸಂಗಮೇಶ ಸವದತ್ತಿಮಠ, ಅವರು ಎಂಎ, ಪಿಎಚ್.ಡಿ ಪದವೀಧರರಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಮರಿಟಸ್ ಪ್ರಾಧ್ಯಾಪಕರಾಗಿ, 38 ವರ್ಷಗಳ ಸುದೀರ್ಘ ಕಾಲ ಶಿಕ್ಷಕರಾಗಿ, ಆಡಳಿತಗಾರರಾಗಿ, ಭಾಷಾವಿಜ್ಞಾನಿಯಾಗಿ, ಸಂಶೋಧಕರಾಗಿ, ವಿದ್ವನ್​ವುಂಡಳಿಗಳ ಸದಸ್ಯ, ಅಧ್ಯಕ್ಷರಾಗಿ ಬಹುಬಗೆಯಲ್ಲಿ ಕಾರ್ಯನಿರ್ವಹಿಸಿದವರು.

ಮಲೇಶಿಯಾ, ಸಿಂಗಾಪುರ, ಕೆನಡಾ, ಅಮೆರಿಕಾ ಮುಂತಾದ ದೇಶಗಳಿಗೆ ಭೇಟಿ ನೀಡಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. 135ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಮತ್ತು 500ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಮೊದಲುಗೊಂಡು 35 ಪ್ರತಿಷ್ಠಿತ ಪ್ರಶಸ್ತಿಗಳಿಗೆ, ಹಲವು ವಿಶ್ವವಿದ್ಯಾಲಯ ಸಂಘಸಂಸ್ಥೆಗಳ ಗೌರವಗಳಿಗೆ ಭಾಜನರಾಗಿದ್ದಾರೆ.

(ಲೇಖಕರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಸಾಹಿತಿ)

ಇಂದು ವಿಚಾರ ಸಂಕಿರಣ

ಡಾ. ಸಂಗಮೇಶ ಸವದತ್ತಿಮಠರ ಬಹುಮುಖಿ ಸಾತ್ವಿಕ ವ್ಯಕ್ತಿತ್ವವನ್ನು, ಸಾಹಿತ್ಯಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಅನನ್ಯ ಸೇವೆಯನ್ನು ಗುರುತಿಸಿ ಅಭಿಮಾನಿಗಳು ಅವರ 80ನೇ ಜನ್ಮವರ್ಷದ ನಿಮಿತ್ತ ಫೆ. 25ರಂದು ಧಾರವಾಡದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net