ರಾಷ್ಟ್ರ ರಾಜಧಾನಿಯನ್ನು ತಲ್ಲಣಗೊಳಿಸಿದ ಕೊಲೆ

delhi murder
Published on
aa kshana
ಸೌಮ್ಯ (25) ಪತ್ರಿಕೋದ್ಯಮದಲ್ಲಿ ಪದವಿ ಪಡೆದು ಪ್ರತಿಷ್ಟಿತ ನ್ಯೂಸ್ ಚಾನೆಲ್​ನ ಪೊ›ಡಕ್ಷನ್ ತಂಡದಲ್ಲಿದ್ದಳು. ತನ್ನ ತಂದೆ-ತಾಯಿಯ ಏಕೈಕ ಪುತ್ರಿಯಾಗಿದ್ದ ಆಕೆ ಅವರೊಡನೆ ದೆಹಲಿಯ ವಸಂತ್ ಕುಂಜ್ ಬಡಾವಣೆಯಲ್ಲಿ ವಾಸಿಸುತ್ತಿದ್ದಳು. ಕೆಲಸದಲ್ಲಿ ಬಹಳ ಚುರುಕಾಗಿದ್ದ ಸೌಮ್ಯ ಸಹೋದ್ಯೋಗಿಗಳ ಹಾಗೂ ಮೇಲಾಧಿಕಾರಿಗಳ ಮೆಚ್ಚುಗೆ ಗಳಿಸಿದ್ದು ಕೆಲವೇ ದಿನಗಳಲ್ಲಿ ಪದೋನ್ನತಿ ಪಡೆಯುವವಳಿದ್ದಳು. ಪ್ರತಿದಿನವೂ ದಕ್ಷಿಣ ದೆಹಲಿಯ ಮನೆಯಿಂದ 20 ಕಿ.ಮೀ. ದೂರದಲ್ಲಿ ದೆಹಲಿಯ ಕೇಂದ್ರ ಬಡಾವಣೆಯಲ್ಲಿದ್ದ ತನ್ನ ಕಚೇರಿಗೆ ಸ್ವಂತ ಕಾರಿನಲ್ಲಿಯೇ ಬಂದು ಹೋಗುತ್ತಿದ್ದಳು. ಅವಳ ಕಚೇರಿಯ ಅಧಿಕಾರಿಗಳು ಅವಳನ್ನು ರಾತ್ರಿವೇಳೆಯಲ್ಲಿ ಒಬ್ಬಂಟಿಯಾಗಿ ಮನೆಯವರೆಗೆ ಹೋಗಬೇಡ ಎಂದು ಹೇಳಿದ್ದರೂ, ‘ನಾನು ಇಲ್ಲೇ ಹುಟ್ಟಿ ಬೆಳೆದವಳು. ನನಗೆ ಇಲ್ಲಿ ಯಾವ ಭಯವೂ ಇಲ್ಲ’ ಎಂದು ಹೇಳುತ್ತ ನಡುರಾತ್ರಿಯಲ್ಲಿಯೂ ಒಬ್ಬಳೇ ಕಾರಿನಲ್ಲಿ ಹೋಗುತ್ತಿದ್ದಳು.

2008 ಸೆಪ್ಟಂಬರ್ 29ರ ರಾತ್ರಿಯ ಪಾಳಿಯಲ್ಲಿ ಕೆಲಸದಲ್ಲಿದ್ದ ಸೌಮ್ಯ ತನ್ನ ಕೆಲಸವನ್ನು ಮುಗಿಸುವಷ್ಟರಲ್ಲಿ 30ರ ಬೆಳಗಿನ ಜಾವ 3 ಗಂಟೆಯಾಗಿತ್ತು. ಎಂದಿನಂತೆ ಕಚೇರಿಯನ್ನು ಬಿಡುವ ಮೊದಲು ಸೌಮ್ಯ ತನ್ನ ತಂದೆ ವಿಶ್ವನಾಥನ್​ಗೆ ಕರೆ ಮಾಡಿ ತಾನು ಕೆಲವೇ ನಿಮಿಷಗಳಲ್ಲಿ ಹೊರಡುತ್ತಿರುವುದಾಗಿಯೂ ಮುಕ್ಕಾಲು ಗಂಟೆಯೊಳಗೆ ಮನೆಗೆ ಮರಳುವುದಾಗಿಯೂ ತಿಳಿಸಿದಳು. ನಾಲ್ಕು ಗಂಟೆಯಾದರೂ ಸೌಮ್ಯ ಮನೆಗೆ ಬಾರದಿದ್ದಾಗ ವಿಶ್ವನಾಥನ್ ಗಾಬರಿಯಾಗಿ ಅವಳ ಮೊಬೈಲ್ ಫೋನ್​ಗೆ ಕರೆ ಮಾಡಿದರು. ಫೋನ್ ರಿಂಗಾಗುತ್ತಲೇ ಇತ್ತು. ಯಾರೂ ಉತ್ತರಿಸಲಿಲ್ಲ. ನಂತರ ಸೌಮ್ಯಳ ಕಚೇರಿಗೆ ಫೋನ್ ಮಾಡಿದಾಗ ಅವಳ ಸಹೋದ್ಯೋಗಿಗಳು ಆಕೆ ಮನೆಗೆ ಹೋದಳು ಎಂದರು.

ಅದೇ ರಾತ್ರಿ ಸುಮಾರು 3.45 ಕ್ಕೆ ನೆಲ್ಸನ್ ಮಂಡೇಲಾ ಮಾರ್ಗ್​ನಲ್ಲಿ ಒಡಿಶಾ ಮೂಲದ ಹೋಟೆಲ್ ಕಾರ್ವಿುಕನೊಬ್ಬ ಕೆಲಸ ಮುಗಿಸಿಕೊಂಡು ರೂಮಿಗೆ ಸೈಕಲ್​ನಲ್ಲಿ ಹೋಗುತ್ತಿದ್ದ. ಆ ರಸ್ತೆಯಲ್ಲಿ ಮಾರುತಿ ಜೆನ್ ಕಾರೊಂದು ರಸ್ತೆಯ ಪಕ್ಕದ ಡಿವೈಡರ್​ಗೆ ಡಿಕ್ಕಿ ಹೊಡೆದು ನಿಂತಿದ್ದನ್ನು ಕಂಡ ಆತ ಸೈಕಲ್ಲಿನಿಂದಿಳಿದು ಕಾರಿನತ್ತ ಹೋದ. ಕಾರಿನ ಎಂಜಿನ್ ಚಾಲೂ ಇದ್ದು ಹೆಡ್​ಲೈಟ್ ಉರಿಯುತ್ತಿತ್ತು. ಕಾರಿನ ಚಾಲಕನ ಸೀಟಿನಲ್ಲಿ ಒಬ್ಬ ಯುವತಿ ಕುಳಿತಿದ್ದು ಆಕೆಯ ತಲೆ ಸ್ಟೇರಿಂಗ್​ಗೆ ಒರಗಿತ್ತು. ತಲೆಯಿಂದ ರಕ್ತ ಬರುತ್ತಿತ್ತು. ಗಾಬರಿಯಾದ ಆತ ದಾರಿಯಲ್ಲಿ ಹೋಗುತ್ತಿದ್ದ ಇತರ ವಾಹನಗಳನ್ನು ನಿಲ್ಲಿಸಿ ವಿಷಯ ತಿಳಿಸಿದ. ಎಲ್ಲರೂ ಇದೊಂದು ಆಕ್ಸಿಡೆಂಟ್ ಪ್ರಕರಣವೆನ್ನುತ್ತ ಸಹಾಯಕ್ಕೆ ಬರಲಿಲ್ಲ. ಕಡೆಗೆ ಆ ಹೋಟೆಲ್ ನೌಕರನೇ ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಅಪಘಾತವಾಗಿರುವ ಮಾಹಿತಿ ಕೊಟ್ಟ. ಹತ್ತು ನಿಮಿಷದಲ್ಲಿ ಪೊಲೀಸ್ ಕಂಟ್ರೋಲ್ ರೂಂನ ಎರಡು ವಾಹನಗಳು ಸ್ಥಳಕ್ಕೆ ಬಂದವು.

ಕಾರಿನ ಕಿಟಕಿಗಳು ತೆರೆದಿದ್ದ ಕಾರಣ ಪೊಲೀಸರು ಸುಲಭವಾಗಿ ಕಾರಿನ ಬಾಗಿಲನ್ನು ತೆರೆದು ಕಾರಿನ ಚಾಲಕಿಯನ್ನು ಏಮ್್ಸ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯ ತುರ್ತವಿಭಾಗದಲ್ಲಿ ಅವಳನ್ನು ಪರೀಕ್ಷಿಸಿದ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿ, ಸಾವು ಸಂಭವಿಸಿ ಸುಮಾರು ಎರಡು ಗಂಟೆಗಳ ಮೇಲಾಗಿದೆ ಎಂದರು. ಕಂಟ್ರೋಲ್ ರೂಂ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿ ಅಪಘಾತವಾಗಿರುವ ಮಾಹಿತಿಯನ್ನು ವಸಂತ್ ಕುಂಜ್ ಪೊಲೀಸ್ ಠಾಣೆಗೆ ರವಾನಿಸಿದರು. ಠಾಣಾ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಬೆಳಕಾಗಿತ್ತು. ಕಾರಿನ ನೊಂದಣಿ ಸಂಖ್ಯೆ ಮೇರೆಗೆ ಪೊಲೀಸರು ಮೃತಳ ವಿಳಾಸವನ್ನು ಪತ್ತೆ ಮಾಡಿ ಹತ್ತಿರದಲ್ಲಿಯೇ ಇದ್ದ ಅವಳ ಮನೆಗೆ ಹೋದರು. ಅದು ಸೌಮ್ಯಳ ಮನೆಯೇ ಆಗಿತ್ತು. ಅಲ್ಲಿದ್ದ ವಿಶ್ವನಾಥನ್ ದಂಪತಿಗೆ ಸೌಮ್ಯಳ ಕಾರು ಅಪಘಾತದ ಬಗ್ಗೆ ತಿಳಿಸಿ ಅವರನ್ನು ಸ್ಥಳಕ್ಕೆ ಕರೆದೊಯ್ದರು. ವಿಶ್ವನಾಥನ್ ಆ ಕಾರು ತಮ್ಮ ಪುತ್ರಿ ಸೌಮ್ಯಳದ್ದೇ ಎಂದು ಗುರುತಿಸಿದರು. ‘ನನ್ನ ಮಗಳೆಲ್ಲಿ?’ ಎಂದವರು ವಿಚಾರಿಸಿದಾಗ ಪೊಲೀಸರು ಆಕೆ ಮೃತಪಟ್ಟಿರುವ ವಿಷಯ ತಿಳಿಸಿ, ಅವರನ್ನು ಏಮ್್ಸ ಆಸ್ಪತ್ರೆಗೆ ಕರೆದೊಯ್ದರು.

ಆಸ್ಪತ್ರೆಯಲ್ಲಿ ಮಗಳ ಶವವನ್ನು ವಿಶ್ವನಾಥನ್ ಗುರುತಿಸಿದ ನಂತರ ಪೊಲೀಸರು ಅಪಘಾತವಾಗಿ ಸಾವಾಗಿರುವ ಪ್ರಕರಣವೊಂದನ್ನು ದಾಖಲಿಸಿ ಮುಂದಿನ ತನಿಖೆಕೈಗೊಂಡರು. ಈ ನಡುವೆ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮೃತಳ ತಲೆಗೆ ಗುಂಡು ತಾಕಿರುವ ಕಾರಣ ಆಕೆಯ ಸಾವಾಗಿದೆ; ಸಾವಿಗೆ ಕಾರಣವಾದ ಒಂದೇ ಗುಂಡನ್ನು 10 ಮೀಟರ್ ದೂರದಿಂದ ಹಾರಿಸಿರಬಹುದು ಎಂದು ಸ್ಥಳದಲ್ಲಿದ್ದ ಪೊಲೀಸರು ಮತ್ತು ವಿಶ್ವನಾಥನ್​ರಿಗೆ ತಿಳಿಸಿದರು. ಗುಂಡನ್ನು ಮೃತದೇಹದಿಂದ ಹೊರತೆಗೆಯಲಾಯಿತೆಂದು ತಿಳಿಸಿದ ಅವರು ಅದನ್ನು ಪೊಲೀಸರಿಗೆ ತೋರಿಸಿದರು. ಅದು ಪಿಸ್ತೂಲುಗಳಲ್ಲಿ ಉಪಯೋಗಿಸುವಂತಹ 9 ಎಂ.ಎಂ ವ್ಯಾಸದ ಗುಂಡಾಗಿತ್ತು. ಈ ಮಾಹಿತಿಯ ಮೇರೆಗೆ ಸೌಮ್ಯಳ ಕೊಲೆಯಾಗಿದೆ ಎನ್ನುವುದು ವಿದಿತವಾಯಿತು.

ಸೌಮ್ಯ ಒಬ್ಬ ಪತ್ರಕರ್ತೆಯಾಗಿದ್ದ ಕಾರಣ ಆಕೆ ಯಾವುದೋ ಪ್ರಭಾವಿಯ ಗುಟ್ಟನ್ನು ರಟ್ಟು ಮಾಡಿ ಅವರ ಕೆಂಗಣ್ಣಿಗೆ ತುತ್ತಾಗಿ ಕೊಲೆಯಾಗಿರಬಹುದು ಎಂದು ಪೊಲೀಸರು ಭಾವಿಸಿದರು. ಅಪಘಾತ ನಡೆದ ಸ್ಥಳವನ್ನು ಕೂಲಂಕಶವಾಗಿ ಪರಿಶೀಲಿಸಿದಾಗ ಸೌಮ್ಯಳ ಕಾರಿನಲ್ಲಿಯೂ ಒಂದು 9 ಎಂ.ಎಂ ಬುಲೆಟ್ ಸಿಕ್ಕಿತಲ್ಲದೆ ಅವಳ ಬ್ಯಾಗಿನಿಂದ ಹಣದ ಪರ್ಸ್ ಕಾಣೆಯಾಗಿತ್ತು. ಆಗ ಇದು ದರೋಡೆಗಾಗಿ ಮಾಡಿರುವ ಕೊಲೆಯೆಂದು ಪೊಲೀಸರು ರ್ತಸಿ ಮುಂದಿನ ತನಿಖೆಯನ್ನು ಕೈಗೊಂಡರು. ನೆಲ್ಸನ್ ಮಂಡೇಲಾ ರಸ್ತೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಕೊಲೆಯಾಗುವ ಹತ್ತು ನಿಮಿಷ ಮೊದಲು ಒಂದು ಸ್ಯಾಂಟ್ರೋ ಕಾರು ಸೌಮ್ಯಳ ಕಾರನ್ನು ಹಿಂಬಾಲಿಸುತ್ತಿದ್ದುದು ಕಂಡಿತು. ಆದರೆ ಆ ಕಾರಿನ ನಂಬರ್ ಪ್ಲೇಟ್ ವಿವರಗಳು ಸಿಗಲಿಲ್ಲ. ನಾಲ್ಕು ತಿಂಗಳ ತನಿಖೆಯ ನಂತರವೂ ಸೌಮ್ಯಳ ಕೊಲೆ ಪ್ರಕರಣ ಒಂದು ಕೋಲ್ಡ್ ಕೇಸ್ ಆಗಿ ಕಡತಗಳಲ್ಲಿ ಉಳಿಯಿತು.

ಸೌಮ್ಯಳಿದ್ದ ಬಡಾವಣೆಯ ಸಮೀಪದಲ್ಲಿರುವ ವಸಂತ್ ವಿಹಾರ್ ಬಡಾವಣೆಯಲ್ಲಿ 25 ವರ್ಷ ವಯಸ್ಸಿನ ಜಿಗಿಶಾ ತನ್ನ ತಂದೆ-ತಾಯಿ ಜತೆಸ ವಾಸಿಸುತ್ತಿದ್ದಳು. ಆಕೆ ನೊಯ್ಡಾದ ಐಟಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. 2009ರ ಮಾರ್ಚ್ 17ರ ರಾತ್ರಿ ಪಾಳಿಯಲ್ಲಿ ಕೆಲಸಮಾಡಿದ ಜಿಗಿಶಾ, 18ರ ಬೆಳಗಿನ ಮೂರು ಗಂಟೆಗೆ ಕಚೇರಿಯ ಕೆಲಸ ಮುಗಿಸಿ ಮನೆಗೆ ತೆರಳಲು ಕಚೇರಿಯ ಕ್ಯಾಬ್ ಹತ್ತಿದಳು. ‘ನಾನು ಮನೆಗೆ ಹೊರಟಿದ್ದೇನೆ’ ಎಂದು ತಾಯಿ ಸಬಿತಗೆ ಫೋನ್ ಕರೆ ಮಾಡಿದ ಆಕೆ, ನಾಲ್ಕೂವರೆ ಗಂಟೆಯಾದರೂ ಮನೆಗೆ ಬರಲಿಲ್ಲ. ಮಗಳು ಆ ರಾತ್ರಿ ಅಫೀಸಿನಲ್ಲೇ ಇದ್ದಿರಬಹುದೆಂದು ಊಹಿಸಿದ ಸಬಿತ ಸುಮ್ಮನಾದರು. ಏಕೆಂದರೆ ಈ ಹಿಂದೆ ಮೂರ್ನಾಲ್ಕು ಬಾರಿ ಆಕೆ ಮನೆಗೆ ಬರುತ್ತಿದ್ದೇನೆಂದು ಹೇಳಿಯೂ ಆಫೀಸಿನಲ್ಲಿಯೇ ಉಳಿದಿದ್ದಳು.

ಆದರೆ ಅದೇ ಸಂಜೆ ಐದು ಗಂಟೆಗೆ ಜಿಗಿಶಾಳನ್ನು ಕಚೇರಿಗೆ ಕರೆದೊಯ್ಯಲು ಅವಳ ಅಫೀಸ್ ಕ್ಯಾಬ್ ಮನೆಗೆ ಬಂದಾಗ ಅವಳ ತಂದೆ ಜಗದೀಶ್​ಗೆ ಆಶ್ಚರ್ಯವಾಯಿತು. ಅವರು ಕ್ಯಾಬ್ ಡ್ರೈವರನ್ನುದ್ದೇಶಿಸಿ, ‘ಜಿಗಿಶಾ ಇಂದು ಬೆಳಗಿನ ಜಾವ ಮನೆಗೆ ವಾಪಸಾಗಲಿಲ್ಲ, ಆಕೆ ಕಚೇರಿಯಲ್ಲಿಯೇ ಉಳಿದಿರಬೇಕು’ ಎಂದಾಗ ಅಚ್ಚರಿಗೊಂಡ ಆತ, ‘ಇದೇನು ಸಾರ್ ಹೀಗೆ ಹೇಳುತ್ತಿದ್ದೀರಿ? ನಿನ್ನೆ ರಾತ್ರಿ ನಾನೇ ಜಿಗಿಶಾಳನ್ನು ಆಫೀಸಿನಿಂದ ಕರೆದುಕೊಂಡು ಬಂದು ನಿಮ್ಮ ಮನೆಯ ಮುಂದೆ ಇಂದು ಮುಂಜಾನೆ 4.15ಕ್ಕೆ ಡ್ರಾಪ್ ಮಾಡಿದ್ದೇನೆ. ಮೇಡಂ ಕ್ಯಾಬಿನಿಂದಿಳಿದಾಗ ಯಾರೊಡನೆಯೋ ಪೋನ್​ನಲ್ಲಿ ಮಾತನಾಡುತ್ತಿದ್ದರು’ ಎಂದ.

ಗಾಬರಿಯಾದ ಜಗದೀಶ್ ಜಿಗಿಶಾಳ ಕಚೇರಿಗೆ ಕರೆ ಮಾಡಿ ಜಿಗಿಶಾ ಮನೆಗೆ ಬಾರದಿರುವ ಮಾಹಿತಿ ಕೊಟ್ಟರು. ಆದರೆ ಅಲ್ಲಿಯ ಸಿಬ್ಬಂದಿ ಆಕೆ ಎಲ್ಲಿಗೆ ಹೋದಳೆಂದು ತಮಗೆ ಗೊತ್ತಿಲ್ಲ ಎಂಬ ಹಾರಿಕೆಯ ಉತ್ತರವನ್ನು ಕೊಟ್ಟರು. ಜಿಗಿಶಾ ಉಪಯೋಗಿಸುತ್ತಿದ್ದ ಎರಡೂ ಮೊಬೈಲ್ ಫೋನ್​ಗಳಿಗೆ ಜಗದೀಶ್ ಕರೆ ಮಾಡಿದರು. ಅವೆರಡೂ ಸ್ವಿಚ್ ಆಫ್ ಆಗಿದ್ದವು. ರಾತ್ರಿ 9 ಗಂಟೆಗೆ ಜಿಗಿಶಾಳ ಕಚೇರಿಯ ಅಧಿಕಾರಿಗಳು ಜಗದೀಶ್​ರ ಮನೆಗೆ ಬಂದು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ಸೂಚಿಸಿದರು.

ಜಗದೀಶ್ ಘೊಷ್ ತಮ್ಮ ವ್ಯಾಪ್ತಿಯ ವಸಂತ್ ವಿಹಾರ್ ಪೊಲೀಸ್ ಠಾಣೆಗೆ ಹೋಗಿ ತಮ್ಮ ಮಗಳು ಜಿಗಿಶಾ ಕಳೆದ ರಾತ್ರಿಯಿಂದ ನಾಪತ್ತೆಯಾಗಿರುವಳೆಂದು ದೂರು ಕೊಟ್ಟಾಗ ಅವರು ದೂರನ್ನೇ ತೆಗೆದುಕೊಳ್ಳದೆ ‘ನಿಮ್ಮ ಮಗಳು ತನ್ನ ಬಾಯ್ಫ್ರೆಂಡ್ ಜತೆಗೆ ಓಡಿಹೋಗಿರಬಹುದು’ ಎಂದರು. ‘ನನ್ನ ಮಗಳಿಗೆ ಯಾವುದೇ ಬಾಯ್ಫ್ರೆಂಡ್ ಇಲ್ಲ. ದಯಮಾಡಿ ಮಗಳು ನಾಪತ್ತೆಯಾಗಿರುವ ದೂರನ್ನು ದಾಖಲಿಸಿ’ ಎಂದು ಜಗದೀಶ್ ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ದೂರನ್ನು ದಾಖಲಿಸಲಿಲ್ಲ. (ಮುಂದುವರಿಯುವುದು)

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net