ಟ್ರಂಪ್​ಕಾರ್ಡ್ ಪ್ರಯೋಗದ ಹೊತ್ತಲ್ಲಿ ನೆನಪಾದ ಶೇಷನ್

ವಿಜಯವಾಣಿ (6)
Published on

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

‘ನಾನು ರಾಜಕಾರಣಿಗಳನ್ನು ದ್ವೇಷಿಸುವುದಿಲ್ಲ. ಎಲ್ಲ ರಾಜಕಾರಣಿಗಳೂ ನನ್ನ ಉತ್ತಮ ಸ್ನೇಹಿತರು. ಯಾವುದೇ ಪಕ್ಷ ತೆಗೆದುಕೊಳ್ಳಿ, ಆ ಎಲ್ಲ ಪಕ್ಷಗಳ ನಾಯಕರು ನನ್ನ ಸ್ನೇಹಿತರೇ. ಆದರೆ ಕೆಟ್ಟ ರಾಜಕೀಯವನ್ನು ನಾನು ದ್ವೇಷಿಸುತ್ತೇನೆ’- ಭಾರತದ ಚುನಾವಣಾ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿರುವ ಟಿ.ಎನ್.ಶೇಷನ್ ಒಮ್ಮೆ ಹೇಳಿದ ಮಾತಿದು. ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ರಾಜಕೀಯ ನಾಯಕರಿಂದ ಅತಿ ಹೆಚ್ಚು ಟೀಕೆಗೊಳಗಾದವರು ಅವರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಂತೂ ಶೇಷನ್​ರನ್ನು ‘ಅಹಂಕಾರಿ’ ಎಂದು ಕರೆದಿದ್ದರು. ಅಪರೂಪಕ್ಕೆ ಹೊಗಳಿಕೆಯೂ ಅವರಿಗೆ ಸಿಕ್ಕಿತ್ತೆನ್ನಿ. ‘ಶೇಷನ್ ಅವರು ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಅಧಿಕಾರವ್ಯಾಪ್ತಿಯನ್ನು ಖಚಿತಪಡಿಸಿದರು. ಹಿಂದೆ ಯಾವ ಮುಖ್ಯ ಆಯುಕ್ತರೂ ಈ ಬಗೆಯಲ್ಲಿ ಕಾರ್ಯಗೈದಿರಲಿಲ್ಲ’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಬಣ್ಣಿಸಿದ್ದರು.

1954ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶೇಷನ್ ಐಎಎಸ್ ಅಧಿಕಾರಿಯಾಗಿ ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಕಾರ್ಯದರ್ಶಿ, ಕ್ಯಾಬಿನೆಟ್ ಕಾರ್ಯದರ್ಶಿ ಮುಂತಾದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಆದರೆ ಸಾರ್ವಜನಿಕ ವಲಯದಲ್ಲಿ ಅವರು ಹೆಚ್ಚು ಪರಿಚಿತರಾದದ್ದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಮೇಲೆ. ‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಚುನಾವಣಾ ಆಯೋಗ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ನಾವು ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ಈ ಮಾತನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದವರು ಶೇಷನ್. ಹಿಂದೆಲ್ಲ ಬಿಹಾರ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಮತಗಟ್ಟೆ ವಶದಂತಹ ಘಟನೆಗಳು ವರದಿಯಾಗುತ್ತಿದ್ದವು. ಶೇಷನ್ ಕಣ್ಗಾವಲಿನಲ್ಲಿ ಅದೆಲ್ಲ ಬಂದ್ ಆಯಿತು.

ನಿಯಮಕ್ಕೆ (ರೂಲ್ ಬುಕ್) ಬದ್ಧವಾಗಿರುವುದು ಮತ್ತು ಕೆಲಸಕ್ಕೆ ಅಂಟಿಕೊಳ್ಳುವುದು ಶೇಷನ್ ಜಾಯಮಾನವೇ ಆಗಿತ್ತೆನ್ನುವುದಕ್ಕೆ ಈ ಪ್ರಸಂಗ ನಿದರ್ಶನವಾಗಿ ನಿಲ್ಲುತ್ತದೆ. ಸರ್ಕಾರಿ ವೃತ್ತಿಯ ಆರಂಭಿಕ ವರ್ಷಗಳಲ್ಲಿ ಶೇಷನ್ ಮದುರೈ ಜಿಲ್ಲಾಧಿಕಾರಿಯಾಗಿದ್ದರು. ಆಗ ಕಾಶ್ಮೀರದ ಶೇಖ್ ಅಬ್ದುಲ್ಲಾ ಅವರನ್ನು ಕೊಡೈಕನಾಲ್​ನಲ್ಲಿ ಬಂಧನದಲ್ಲಿರಿಸಲಾಗಿತ್ತು. ಶೇಖ್ ಅಬ್ದುಲ್ಲಾ ಬರೆಯುತ್ತಿದ್ದ ಪತ್ರಗಳನ್ನು ಓದುವುದು ಜಿಲ್ಲಾಧಿಕಾರಿಯಾಗಿ ಶೇಷನ್ ಕರ್ತವ್ಯವಾಗಿತ್ತು. ಒಮ್ಮೆ ಅಬ್ದುಲ್ಲಾ ಅವರು ಅಂದಿನ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್​ರಿಗೆ ಪತ್ರ ಬರೆದಿದ್ದರು. ಅದನ್ನು ಶೇಷನ್ ಓದದೆಯೇ ಕಳಿಸಬೇಕು ಎಂದು ಅಬ್ದುಲ್ಲಾ ಆಗ್ರಹಿಸಿದ್ದರಂತೆ. ಆದರೆ ಶೇಷನ್ ಇದಕ್ಕೆ ಸೈಗುಡಲಿಲ್ಲ. ಇದನ್ನು ವಿರೋಧಿಸಿ ಶೇಖ್ ಅಬ್ದುಲ್ಲಾ ಆಮರಣಾಂತ ಉಪವಾಸಕ್ಕೆ ಮುಂದಾದರು. ಶೇಷನ್ ಜಪ್ಪಯ್ಯ ಅಂದರೂ ಒಪ್ಪಲಿಲ್ಲ. ಕೊನೆಗೆ ಅಬ್ದುಲ್ಲಾ ಅವರೇ ಮಣಿಯಬೇಕಾಯಿತು. ಪತ್ರ ಓದಲು ಒಪ್ಪಿ, ಉಪವಾಸ ಹಿಂದಕ್ಕೆ ಪಡೆದರು.

ಶೇಷನ್ ಕಂಚಿಮಠದ ಪರಮಭಕ್ತರಾಗಿದ್ದರು. ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳುವಾಗ ಕಂಚಿ ಪರಮಾಚಾರ್ಯರ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದರಂತೆ. ಕಂಚಿ ಶ್ರೀಗಳ ಒಪ್ಪಿಗೆಯ ಬಳಿಕವೇ ಶೇಷನ್ ಚುನಾವಣಾ ಆಯೋಗಕ್ಕೆ ಬಂದಿದ್ದು. ಒಮ್ಮೆ ಶೇಷನ್ನರಿಗೆ ವಿಶ್ವಸಂಸ್ಥೆಯಲ್ಲಿ ಉನ್ನತ ಹುದ್ದೆಯ ಆಫರ್ ಬಂದಿತ್ತು. ಕಂಚಿ ಶ್ರೀಗಳು ಹೋಗುವುದು ಬೇಡ ಎಂದಾಗ ಕುತೂಹಲಗೊಂಡ ಶೇಷನ್ ಸೀದಾ ಮಠಕ್ಕೆ ಹೋಗಿ ಕಂಚಿ ಪರಮಾಚಾರ್ಯರ ಎದುರು ಐದು ತಾಸು ಕೂತಿದ್ದರಂತೆ; ಒಂದೂ ಮಾತಾಡದೆ! ಕೊನೆಗೆ ವಿಶ್ವಸಂಸ್ಥೆ ಉದ್ಯೋಗಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ ಎಂಬ ನಿರ್ಣಯಕ್ಕೆ ಬಂದರಂತೆ. ವಿಶ್ವಸಂಸ್ಥೆಗಾದ ನಷ್ಟ ಭಾರತಕ್ಕೆ ಲಾಭವಾದದ್ದು ಹೀಗೆ.

1990ರ ಡಿ. 12ರಿಂದ 1996ರ ಡಿ. 11ರವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಶೇಷನ್ ಅವರು ಆಯೋಗದ ನಿಜಸ್ವರೂಪ, ಅಧಿಕಾರವ್ಯಾಪ್ತಿಯನ್ನು ಜನರೆದುರು ತೆರೆದಿಟ್ಟರು. ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾದರು. ಚುನಾವಣೆ ನಡೆಸುವ ಹೊಣೆಗಾರಿಕೆ ಆಯೋಗದ್ದೇ ಹೊರತು ಸರ್ಕಾರದ್ದಲ್ಲ ಎಂಬ ಸ್ಪಷ್ಟತೆ ಹೊಂದಿದ್ದ ಅವರು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡರು. ಅರ್ಹ ಮತದಾರರಿಗೆ ವೋಟರ್ ಐಡಿ, ಚುನಾವಣಾ ವೆಚ್ಚಕ್ಕೆ ಮಿತಿ ಇತ್ಯಾದಿ ನೀತಿ ತಂದರು. ಯಾವಾಗ ಇವರನ್ನು ನಿಯಂತ್ರಿಸುವುದು ಅಸಾಧ್ಯ ಎನಿಸಿತೋ ಆಗ ಆಯೋಗಕ್ಕೆ ಇನ್ನಿಬ್ಬರು ಆಯುಕ್ತರ ನೇಮಕವಾಯಿತು.

ಚುನಾವಣಾ ಸುಧಾರಣೆಯತ್ತ ಟ್ರಂಪ್ ಚಿತ್ತ: ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಶುರುವಲ್ಲೇ ಭರ್ಜರಿ ಸದ್ದುಗದ್ದಲ ಮಾಡುತ್ತಿದ್ದಾರೆ. ಅವರ ವಲಸೆ ನೀತಿ, ತೆರಿಗೆ ನೀತಿ ಇತ್ಯಾದಿ ಬಗ್ಗೆ ಜಾಗತಿಕವಾಗಿ ಚರ್ಚೆಯಾಗುತ್ತಿದೆ. ಇದೆಲ್ಲದರ ನಡುವೆ, ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅವರ ಘೋಷಣೆ ನಮ್ಮ ಶೇಷನ್ ನೆನಪಿಗೆ ಬರುವಂತೆ ಮಾಡಿತು. ಚುನಾವಣೆ ವಿಷಯದಲ್ಲಿ ಭಾರತ, ಕೆನಡ, ಜರ್ಮನಿ ಮುಂತಾದ ದೇಶಗಳ ಮಾದರಿ ಅನುಸರಿಸುವುದು ಟ್ರಂಪ್ ಆಲೋಚನೆ.

ಮತದಾರರು ಅಮೆರಿಕದ ಪ್ರಜೆಗಳು ಎನ್ನುವುದಕ್ಕೆ ದಾಖಲೆ ಕಡ್ಡಾಯ. ಚುನಾವಣೆ ದಿನದ ಹೊರತಾಗಿ ತಡವಾಗಿ ಬರುವ ಮತಪತ್ರಗಳನ್ನು, ಅಂಚೆಯ ದಿನಾಂಕ ಮುದ್ರೆ ಇರದ ಮತಪತ್ರಗಳನ್ನು ಎಣಿಸದಿರುವುದು; ಕೆಲವು ಚುನಾವಣೆಗಳಲ್ಲಿ ಅಮೆರಿಕನ್ನರಲ್ಲದ ನಾಗರಿಕರು ದೇಣಿಗೆ ನೀಡದಂತೆ ತಡೆಯುವುದು; ರಾಜ್ಯಗಳು ಮತದಾರರ ಪಟ್ಟಿ ಹಂಚಿಕೊಳ್ಳುವುದು. ಚುನಾವಣಾ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಗಳು ಫೆಡರಲ್ ಕಾನೂನು ಜಾರಿ ಸಂಸ್ಥೆಗಳ ಜತೆ ಸಹಕರಿಸಲು ನಿರಾಕರಿಸಿದರೆ, ಅವುಗಳಿಗೆ ಫೆಡರಲ್ ಅನುದಾನ ಕಡಿತಗೊಳಿಸುವುದು- ಮುಂತಾದವು ಟ್ರಂಪ್ ಉದ್ದೇಶಿತ ಕ್ರಮಗಳಲ್ಲಿ ಸೇರಿವೆ. ಭಾರತ ಹಾಗೂ ಇತರ ಕೆಲವು ಆಧುನಿಕ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅನುಸರಿಸುತ್ತಿರುವ ಮೂಲಭೂತ ಹಾಗೂ ಅಗತ್ಯ ಚುನಾವಣಾ ರಕ್ಷಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ಅಮೆರಿಕ ವಿಫಲವಾಗಿದೆ ಎಂದೂ ಟ್ರಂಪ್ ಹೇಳಿರುವುದು ದೇಶದ ಚುನಾವಣಾ ವ್ಯವಸ್ಥೆ ಕುರಿತು ಅವರಿಗಿರುವ ಅಸಮಾಧಾನವನ್ನು ಬಿಂಬಿಸುವಂತಿದೆ. ಇಷ್ಟೆಲ್ಲ ಕಸರತ್ತಿನ ಉದ್ದೇಶ ಚುನಾವಣಾ ಅಕ್ರಮಗಳನ್ನು ತಡೆಯುವುದಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ಅಂಶಗಳತ್ತ ನೋಡುವುದಾದರೆ: ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಚುನಾವಣೆ. 8 ವರ್ಷ ತುಂಬಿದ ಅಮೆರಿಕ ಪ್ರಜೆಗಳು ಮತ ಚಲಾಯಿಸಬಹುದು ಜನಸಂಖ್ಯೆ ಆಧಾರದ ಮೇಲೆ ಎಲೆಕ್ಟರ್ಸ್ ಸ್ಥಾನ ನಿಗದಿ. ಇವರು ಸೇರಿ ಎಲೆಕ್ಟೋರಲ್ ಕಾಲೇಜ್ ರಚಿಸಿ, ಅಧ್ಯಕ್ಷರನ್ನು ನಿರ್ಣಯಿಸುತ್ತಾರೆ. ಅಮೆರಿಕದಲ್ಲಿ ನಿರ್ದಿಷ್ಟ ದಿನದಂದು ಚುನಾವಣೆ ನಡೆದರೂ, ಅದಕ್ಕೂ ಮೊದಲೇ ಕೆಲವೆಡೆ ಮತದಾನ ನಡೆಯುವುದೂ ಇದೆ (ಇದನ್ನು ಅರ್ಲಿ ವೋಟಿಂಗ್ ಎನ್ನುತ್ತಾರೆ). ಅಮೆರಿಕದಲ್ಲಿ ಭಾರತದಲ್ಲಿನ ಕೇಂದ್ರ ಚುನಾವಣಾ ಆಯೋಗದ ಹಾಗೆ ಯಾವುದೇ ಆಯೋಗವಿಲ್ಲ. ಹೇಗೆ ಚುನಾವಣೆ ನಡೆಸಬೇಕು ಎನ್ನುವುದು ಆಯಾ ರಾಜ್ಯಕ್ಕೆ ಸಂಬಂಧಿತ ವಿಚಾರ ಅಮೆರಿಕದಲ್ಲಿ ವೋಟರ್ ಐಡಿ ಇಲ್ಲ. ಚಾಲನಾ ಪರವಾನಗಿಯನ್ನೇ (ಡಿಎಲ್) ವೋಟರ್ ಐಡಿ ಥರ ಬಳಸಲಾಗುತ್ತದೆ ಇವಿಎಂ ಇಲ್ಲ, ಮತಪತ್ರ (ಬ್ಯಾಲಟ್ ಪೇಪರ್) ಮೂಲಕವೇ ಚುನಾವಣೆ ನಡೆಯುತ್ತದೆ ್ಞುತ ಚಲಾಯಿಸಿದವರಿಗೆ ‘ಐ ವೋಟೆಡ್’ ಎನ್ನುವ ಸ್ಟಿಕ್ಕರ್ ಕೊಡುತ್ತಾರಷ್ಟೆ. ನಮ್ಮಲ್ಲಿನ ಹಾಗೆ ಬೆರಳಿಗೆ ಶಾಯಿಗುರುತು ಇರುವುದಿಲ್ಲ.

ಅಮೆರಿಕದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಚುನಾವಣಾ ನಿಯಮಗಳಲ್ಲಿ ವ್ಯತ್ಯಾಸವಿರುತ್ತದೆ. ಸಂವಿಧಾನವೇ ಈ ಅವಕಾಶ ನೀಡಿದೆ. ಉದಾ: ಫೆಡರಲ್ ಚುನಾವಣೆಯಲ್ಲಿ ಮತ ಚಲಾಯಿಸಲು ಕೆಲ ರಾಜ್ಯಗಳಲ್ಲಿ ನಾಗರಿಕತ್ವದ ಪುರಾವೆ ನೀಡಬೇಕಾಗುತ್ತದೆ; ಕೆಲವು ರಾಜ್ಯಗಳಲ್ಲಿ ತಾವು ಅಮೆರಿಕ ನಾಗರಿಕರು ಎಂಬ ನಮೂನೆಗೆ ಸಹಿ ಮಾಡಿದರೆ ಸಾಕಾಗುತ್ತದೆ. (ಅಮೆರಿಕ ನಾಗರಿಕತ್ವ ಇಲ್ಲದವರು ಇಂಥ ನಮೂನೆಗೆ ಸಹಿ ಮಾಡಿದರೆ ಅಂಥವರ ಮೇಲೆ ಅಪರಾಧ ಪ್ರಕರಣ ದಾಖಲಿಸಬಹುದು ಅಥವಾ ಗಡಿಪಾರನ್ನೂ ಮಾಡಬಹುದು). ಅರ್ಲಿ ವೋಟಿಂಗ್, ಇಮೇಲ್ ಮತ, ಮತ ಎಣಿಕೆ ಪ್ರಕ್ರಿಯೆ ಹಾಗೂ ಸ್ವರೂಪ ಇತ್ಯಾದಿಗೆ ಸಂಬಂಧಿಸಿ ಪ್ರತಿ ರಾಜ್ಯದಲ್ಲಿ ಪ್ರತ್ಯೇಕ ನಿಯಮಗಳು ಇರುತ್ತವೆ. ಹೀಗಾಗಿ ಮತ ಎಣಿಕೆಯೆಂಬುದು ದೊಡ್ಡ ಸಾಹಸವೇ ಆಗಿಬಿಡುತ್ತದೆ. ಇದರಿಂದಾಗಿ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬ ಮಾಮೂಲು. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ತಿಂಗಳಾದರೂ ಫಲಿತಾಂಶ ಪೂರ್ತಿಯಾಗಿ ಪ್ರಕಟವಾಗಿರಲಿಲ್ಲ. ಡೊನಾಲ್ಡ್ ಟ್ರಂಪ್ ಅವರು ಜೋ ಬೈಡೆನ್ ವಿಜಯವನ್ನು ಮನಸ್ಪೂರ್ತಿಯಾಗಿ ಒಪ್ಪಿಕೊಂಡಿರಲಿಲ್ಲ. ಕೊನೆಗೆ, ಅಮೆರಿಕದ ಶಕ್ತಿ್ತೌಧವಾದ ಕ್ಯಾಪಿಟಲ್ ಹಿಲ್​ನಲ್ಲಿಯೇ ಗದ್ದಲಗೌಜು ನಡೆದು, ಜಾಗತಿಕವಾಗಿ ಸುದ್ದಿಯಾಯಿತು. ಬಳಿಕ, ಟ್ರಂಪ್ ಮೇಲೆ ಪ್ರಕರಣಗಳು ಕೂಡ ದಾಖಲಾದವು.

ರಾಜ್ಯಗಳ ಚುನಾವಣಾ ಸಂಬಂಧಿ ನಿಯಮಗಳಲ್ಲಿ ಅಮೆರಿಕ ಸಂಸತ್ ಮಧ್ಯಪ್ರವೇಶಿಸಬಹುದೆ ಹೊರತು ಅಧ್ಯಕ್ಷರಿಗೆ ಆ ಅಧಿಕಾರ ಇಲ್ಲ. ಕಾನುನುಬದ್ಧ ವಲಸಿಗರು ಹಾಗೂ ಅಲ್ಪಸಂಖ್ಯಾತರ ಮತಹಕ್ಕನ್ನು ಮೊಟಕುಗೊಳಿಸಿ ರಿಪಬ್ಲಿಕನ್ ಪಕ್ಷಕ್ಕೆ ಅನುಕೂಲ ಮಾಡಿಕೊಡುವುದು ಟ್ರಂಪ್ ಇರಾದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೆ, ಅನಧಿಕೃತ ವಲಸಿಗರನ್ನು ಒಳಗೆ ಬಿಟ್ಟುಕೊಂಡು ಅವರಿಗೆ ಮತ ನೋಂದಣಿಗೆ ಅವಕಾಶ ನೀಡುವ ಮೂಲಕ ಡೆಮಾಕ್ರಟರು ತಮಗೆ ಅನುಕೂಲವಾಗುವಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎಂದು ಟ್ರಂಪ್ ಬಳಗ ಪ್ರತ್ಯಾರೋಪ ಮಾಡುತ್ತಿದೆ. ಹಾಗೆ ನೋಡಿದರೆ, ನಮ್ಮಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಗಳ ಫಲಿತಾಂಶ ಬೇಗನೆ ಪ್ರಕಟವಾಗುತ್ತದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದರೆ ಮಧ್ಯಾಹ್ನ 4-5 ಗಂಟೆ ಹೊತ್ತಿಗೆಲ್ಲ ಬಹುತೇಕ ಕ್ಷೇತ್ರಗಳ ಫಲಿತಾಂಶ ಗೊತ್ತಾಗಿರುತ್ತದೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ತುಸು ವಿಳಂಬವಾಗಬಹುದು. ಮಧ್ಯಾಹ್ನ 12 ಗಂಟೆ ಹೊತ್ತಿಗೇ ಫಲಿತಾಂಶದ ಟ್ರೆಂಡ್ ಗೊತ್ತಾಗಿ, ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ ಅಭ್ಯರ್ಥಿಯ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸುವುದು ಸಾಮಾನ್ಯ ದೃಶ್ಯ.

ನಮ್ಮಲ್ಲಿನ ಚುನಾವಣೆಗಳಲ್ಲಿ ಬಹುತೇಕವಾಗಿ ಏಕಸೂತ್ರತೆ ಇರುತ್ತದೆ. ಮತದಾರರ ಯಾದಿಯಲ್ಲಿ ಹೆಸರು ಇದ್ದರೆ, ಆಧಾರ್ ಕಾರ್ಡ್, ವೋಟರ್ ಐಡಿ, ಡಿಎಲ್ ಮುಂತಾದ ದಾಖಲೆಗಳನ್ನು ತೋರಿಸಿ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ. ಚುನಾವಣಾ ಆಯೋಗವೇ ಮತದಾರರ ಯಾದಿಯನ್ನು ಪರಿಷ್ಕರಿಸುತ್ತದೆ. ಲೋಕಸಭೆ- ವಿಧಾನಸಭಾ ಚುನಾವಣೆಗಳನ್ನು ನಡೆಸುವುದು ಕೇಂದ್ರ ಆಯೋಗದ ಜವಾಬ್ದಾರಿ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆಯಾ ರಾಜ್ಯ ಚುನಾವಣಾ ಆಯೋಗಗಳು ನಡೆಸುತ್ತವೆ. ಇಲ್ಲಿ ಅಧಿಕಾರವ್ಯಾಪ್ತಿ ಸ್ಪಷ್ಟವಾಗಿದೆ. ಸರ್ಕಾರಗಳಿಗೆ ಚುನಾವಣೆ ವಿಷಯದಲ್ಲಿ ಅಧಿಕಾರವಿಲ್ಲ. ಚುನಾವಣೆಯ ಸಮಗ್ರ ಹೊಣೆ ಆಯೋಗದ್ದೇ ಆಗಿರುತ್ತದೆ. ಸುಸೂತ್ರ ಚುನಾವಣೆ ನಡೆಸುವಲ್ಲಿ ಆಯೋಗಕ್ಕೆ ಸಹಕರಿಸುವುದು ಸರ್ಕಾರಗಳ ಕರ್ತವ್ಯವಾಗಿರುತ್ತದೆ. ಮತದಾರರ ಗುರುತಿನ ಚೀಟಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಚಾರ ಈಗ ಚರ್ಚೆಯಲ್ಲಿದ್ದು, ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದೆ. ಇದು ಸಾಧ್ಯವಾದಲ್ಲಿ ಇನ್ನಷ್ಟು ಪಾರದರ್ಶಕತೆ ಪಕ್ಕಾ.

ಕೊನೇ ಮಾತು: ಹೀಗೆಂದಾಕ್ಷಣ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊರತೆಗಳೇ ಇಲ್ಲವೆಂದು ಷರಾ ಬರೆಯಲಾಗದು. ಆದರೆ ನ್ಯೂನತೆ, ಸಮಸ್ಯೆಗಳನ್ನು ಗುರುತಿಸಿ ಸರಿಪಡಿಸುವ ಪ್ರಕ್ರಿಯೆ ಕೂಡ ಒಂದು ಮಟ್ಟಿಗೆ ನಡೆಯುತ್ತಿರುವುದನ್ನು ಅಲ್ಲಗಳೆಯಲಾಗದು. ಸವೋಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ಹಂತಗಳ ನ್ಯಾಯಾಲಯಗಳು ಕೂಡ ತೀರ್ಪುಗಳ ಮುಖಾಂತರ ಶುದ್ಧೀಕರಣ ಕಾರ್ಯದಲ್ಲಿ ತೊಡಗಿವೆ. ಜನಪ್ರಾತಿನಿಧ್ಯ ಕಾಯ್ದೆಗೆ ಕಾಲಕಾಲಕ್ಕೆ ತಿದ್ದುಪಡಿಗಳಾಗಿವೆ. ಆದರೆ ಒಟ್ಟಾರೆಯಾಗಿ ರಾಜಕಾರಣದ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವನೆ ಇರುವುದನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿ, ತಮ್ಮನ್ನು ತಾವು ಸುಧಾರಿಸಿಕೊಳ್ಳುವತ್ತ ಹೆಜ್ಜೆಹಾಕಬೇಕಿದೆ. ‘ರಾಜಕೀಯದ ಅಪರಾಧೀಕರಣ’ ಎಂಬ ಪದ ಇಲ್ಲದಂತಾದರೆ ಅದಕ್ಕಿಂತ ಸಮಾಧಾನ ಇನ್ನೇನಿದೆ? ಟಿ.ಎನ್. ಶೇಷನ್ ಹೇಳಿದಂತೆ, ಕೆಟ್ಟ ರಾಜಕೀಯದ ಬಗ್ಗೆ ಮಾತ್ರ ತಿರಸ್ಕಾರ ಇದ್ದರೆ ತೊಂದರೆ ಇಲ್ಲ. ಒಟ್ಟಿನಲ್ಲಿ, ಭಾರತ ಸರ್ವಾಂಗ ಸುಂದರ ಪ್ರಜಾಪ್ರಭುತ್ವವಾಗಲಿ ಎಂಬುದು ಆಶಯ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net