ಸ್ತ್ರೀ ಶಕ್ತಿಯ ಹಿಂದೆ ಯುವಕನ ಧೀಃ ಶಕ್ತಿ

LEAD
Published on

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎನ್ನುವುದು ಹಳೆಯ ನಾಣ್ಣುಡಿ. ಆದರೆ ಸ್ವಯಂ ರಕ್ಷಣೆ ಮೂಲಕ ತಮ್ಮ ಪ್ರಾಣ-ಮಾನವನ್ನು ಕಾಪಾಡಿಕೊಳ್ಳಲು ಲಕ್ಷಾಂತರ ಮಹಿಳೆಯರಿಗೆ ತರಬೇತಿ ನೀಡುತ್ತಾ, ಅವರ ಯಶಸ್ಸಿನ ಹಿಂದಿನ ಶಕ್ತಿಯಾಗಿ ಮಿಂಚುತ್ತಿರುವ ಯುವಕ ಅಭಿಷೇಕ್. ಝೀರೋದಿಂದ ಹೀರೋ ಆಗಿರುವ ಈ ಯುವಕ ಯಾರು? ಇಲ್ಲಿದೆ ವಿವರ.

2012 ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು ‘ನಿರ್ಭಯಾ’ ಅತ್ಯಾಚಾರ ಪ್ರಕರಣ. ಈ ಘಟನೆ ನಂತರ ಹಲವರು ಅತ್ಯಾಚಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಅವರಿಗೆ ಘೋರ ಶಿಕ್ಷೆಯಾಗಬೇಕೆಂದು ಬೀದಿಗಿಳಿದು ಹೋರಾಟ ನಡೆಸಿದರು. ಘಟನೆ ನಡೆದು ಕೆಲ ತಿಂಗಳು ಕಳೆಯುತ್ತಿದ್ದಂತೆಯೇ ಎಲ್ಲವೂ ತಣ್ಣಗಾದವು.

ಆದರೆ ಉತ್ತರ ಪ್ರದೇಶದ ಅಭಿಷೇಕ್ ಯಾದವ್ ಎಂಬ 25 ವರ್ಷದ ಯುವಕನಿಗೆ ಹಲವು ತಿಂಗಳು ಕಳೆದರೂ ಈ ಘಟನೆ ಸ್ಮೃತಿ ಪಟಲದಿಂದ ಹೋಗಲೇ ಇಲ್ಲ. ಏಕಿಷ್ಟು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂಬ ಬಗ್ಗೆ ಹಗಲೂ ಇರುಳೂ ಚಿಂತಿಸಿದ ಅಭಿಷೇಕ್, ಹೆಣ್ಣು ಮಕ್ಕಳು ಆತ್ಮರಕ್ಷಣೆ ಮಾಡಿಕೊಳ್ಳುವಲ್ಲಿ ಸೋಲುತ್ತಿರುವುದು ಕೂಡ ಇದಕ್ಕೆ ಕಾರಣವಿರಬಹುದು ಎಂದುಕೊಂಡರು.

ಇದಕ್ಕೆ ಪರಿಹಾರ ಕಂಡುಹಿಡಿಯಲೇಬೇಕೆಂದುಕೊಂಡ ಈ ಕರಾಟೆ ಪಟು, ತಾವು ಎಲ್ಲಾ ಹೆಣ್ಣುಮಕ್ಕಳಿಗೂ ಆತ್ಮರಕ್ಷಣೆಯ ಪಾಠ ಹೇಳಿಕೊಡಬೇಕು ಎಂದು ಪಣತೊಟ್ಟರು. ಅದರ ಫಲವಾಗಿಯೇ ಇಂದು ಉತ್ತರ ಪ್ರದೇಶ ಒಂದರಲ್ಲಿಯೇ ಎರಡೂವರೆ ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳುವುದನ್ನು ಅರಿತಿದ್ದಾರೆ. 80 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಗೂರ್ಖಾ ಬೆಟಾಲಿಯನ್​ಗಳಿಗೆ ತರಬೇತಿ ನೀಡುತ್ತಿದ್ದಾರೆ.

ಆರಂಭ ಸುಲಭವಾಗಿರಲಿಲ್ಲ: ಮಾರ್ಷಲ್ ಆರ್ಟ್ ಎನ್ನುವುದು ಸ್ವಯಂ ರಕ್ಷಣೆಯ ಸಾಧನವೇನೋ ಹೌದು. ಆದರೆ ಇದನ್ನು ಕಲಿಯುವಾಗ ಮೈಗಾಗುವ ಏಟಿನಿಂದ ಹೆದರಿದ್ದ ಅಭಿಷೇಕ್ ಪಾಲಕರು ತಮ್ಮ ಮಗ ಈ ಫೀಲ್ಡ್​ಗೆ ಹೋಗಲು ಸುತರಾಂ ಒಪ್ಪಿರಲಿಲ್ಲ. ಆದರೆ ಅಭಿಷೇಕ್​ಗೆ ಪ್ರಾಥಮಿಕ ಶಾಲೆಯಿಂದಲೇ ಕರಾಟೆಯ ಹುಚ್ಚು. ಅದಕ್ಕಾಗಿ ಎಲ್ಲಾದರೂ ತರಬೇತಿ ಇದ್ದರೆ ಈ ಬಾಲಕ ಓಡುತ್ತಿದ್ದ, ಕಲಿಯುವಾಗ ಪೆಟ್ಟು ತಿಂದು ಬರುತ್ತಿದ್ದ.

ಮಕ್ಕಳ ಮೈಮೇಲೆ ಆಗುವ ಗಾಯಗಳನ್ನು ಯಾವ ಪಾಲಕರು ತಾನೇ ಸಹಿಸಿಯಾರು? ಅಭಿಷೇಕ್​ನ ಅಮ್ಮ ಕರಾಟೆಗೆ ಹೋಗಲೇಬೇಡ ಎಂದು ಒತ್ತಾಯಿಸಿದರು. ನಾಗರಿಕ ಸೇವೆಯ ಕೋರ್ಸ್ ಪಡೆದು ಒಳ್ಳೆಯ ಉದ್ಯೋಗ ಪಡಿ ಎಂದು ಹೇಳಿದರೆ, ಅದಕ್ಕೆ ಹ್ಞೂಂ ಎಂದು ಗೋಣಾಡಿಸಿದ ಅಭಿಷೇಕ್, ಮನಸ್ಸಿನಲ್ಲಿ ಮಾತ್ರ ಮಾರ್ಷಲ್ ಆರ್ಟ್ ಪಟುವಾಗಬೇಕು ಎಂದು ಪಣತೊಟ್ಟಿದ್ದ. ಪಾಲಕರ ಅಣತಿಯಂತೆ ಪಿಯುಸಿ ಮುಗಿಸಿದ ನಂತರ ಅಭಿಷೇಕ್ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಮೂಲಕ ಬ್ಯಾಚಲರ್ ಆಫ್ ಇನ್​ಫಾಮೇಷನ್ ಟೆಕ್ನಾಲಜಿ ತರಬೇತಿಗೆ ಅರ್ಜಿ ಹಾಕಿದ. ಆದರೆ ತನ್ನ ಜೀವನದ ಗುರಿಯನ್ನೂ ಬಿಡದೆ ಸಮರ ಕಲೆಗಳಲ್ಲಿ ತರಬೇತಿಯನ್ನೂ ಪಡೆಯುತ್ತಾ ಐಕಿಡೋ, ಜಿಟ್ಸು ಮತ್ತು ಕರಾಟೆಗಳಲ್ಲಿ ಸಾಧನೆಯನ್ನೂ ಮಾಡಿದ.

ಈ ಮಧ್ಯೆ, ಮುಂದಿನ ತರಬೇತಿಗಾಗಿ ಬೇರೆ ಬೇರೆ ನಗರಗಳಿಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ದುಡ್ಡು? ಪಾಲಕರಂತೂ ನಯಾಪೈಸೆ ಕೊಡುವುದಿಲ್ಲ ಎಂದು ಕಟುವಾಗಿಯೇ ಹೇಳಿಬಿಟ್ಟಿದ್ದರು. ಆಗ ನೆರವಿಗೆ ಬಂದದ್ದು ಅಭಿಷೇಕ್​ನ ಸ್ನೇಹಿತರು. ಗೆಳೆಯನ ಮಾರ್ಷಲ್ ಆರ್ಟ್ ಪ್ರೀತಿಗೆ ಮನಸೋತಿದ್ದ ಸ್ನೇಹಿತರು ಹಣ ಹೊಂದಿಸಿ ಕೊಡತೊಡಗಿದರು. ಇದರಿಂದಲೇ ಆರು ವರ್ಷಗಳ ತರಬೇತಿಯನ್ನು ಅಭಿಷೇಕ್ ಪೂರ್ಣಗೊಳಿಸಿದ. 2006ರಲ್ಲಿ ಕರಾಟೆಯಲ್ಲಿ ಬ್ಲಾ್ಯಕ್ ಬೆಲ್ಟ್ ಕೂಡ ಸಿಕ್ಕಿತು. ಆದರೆ ಪಾಲಕರಿಗೂ ನಿರಾಸೆ ಮಾಡಲು ಇಷ್ಟವಾಗದೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮೂಲಕ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದ.

ಮಹಿಳೆಯರಿಗಾಗಿ ಈ ತಂತ್ರ

ನಿರ್ಭಯಾ ಪ್ರಕರಣದ ನಂತರ ಮಹಿಳೆಯರು ತಮ್ಮ ರಕ್ಷಣೆಯನ್ನು ಸ್ವತಃ ಮಾಡಿಕೊಳ್ಳುವ ಸಂಬಂಧ ‘ಸ್ಪೆಷಲ್ ಕಮಾಂಡೋ ಟೆಕ್ನಿಕ್’ ಎಂಬ ತಂತ್ರವನ್ನು ಅಭಿಷೇಕ್ ಅಭಿವೃದ್ಧಿ ಪಡಿಸಿದ್ದಾರೆ. ಕಿರುಕುಳ ನೀಡಲು ಬರುವವರ ಸಂಪೂರ್ಣ ದೇಹವನ್ನು ಒಂದೇ ಬೆರಳಿನ ಮೂಲಕವೇ ನಿಯಂತ್ರಿಸಬಹುದಾದ ಟೆಕ್ನಿಕ್ ಇದು. ಇದು ಕ್ಲಿಕ್ ಆಗುತ್ತಿದ್ದಂತೆಯೇ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಇವರ ಬೇಡಿಕೆ ಹೆಚ್ಚಾಗಿದೆ.

ವಿವಿಧೆಡೆ ಶಿಬಿರಗಳನ್ನು ನಡೆಸುವಂತೆ ಕೇಳಿಕೊಳ್ಳಲಾಯಿತು. ಹೆಣ್ಣುಮಕ್ಕಳಿಗೆ ಈ ಟೆಕ್ನಿಕ್ ಹೆಚ್ಚು ಪ್ರಯೋಜನವಾಗುತ್ತದೆಯೆಂದು ಅರಿತ ಅಭಿಷೇಕ್, ಸ್ವಂತ ಖರ್ಚಿನಲ್ಲಿಯೇ ಪ್ರಯಾಣ ಬೆಳೆಸಿ ಶಿಬಿರಗಳನ್ನು ನಡೆಸಲು ಶುರು ಮಾಡಿದರು. ಪ್ರತಿ ಶಿಬಿರದಲ್ಲಿಯೂ ಸಾವಿರಾರು ಹೆಣ್ಣುಮಕ್ಕಳು ತರಬೇತಿ ಪಡೆದುಕೊಳ್ಳಲು ಬಂದುದು ಅವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತು. ಉತ್ತರ ಪ್ರದೇಶದಲ್ಲಿ ಆದ ಈ ಪರಿಯ ಬದಲಾವಣೆಯಿಂದಾಗಿ ಹಲವಾರು ರಾಜ್ಯಗಳಲ್ಲಿಯೂ ಇವರಿಗೆ ಬೇಡಿಕೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಫೇಸ್​ಬುಕ್ ಪುಟವನ್ನು ತೆರೆದಿರುವ ಅಭಿಷೇಕ್, ತಮ್ಮ ಮುಂದಿನ ಶಿಬಿರ ಯಾವ ನಗರದಲ್ಲಿ ಎಂಬ ಬಗ್ಗೆ ಅಲ್ಲಿಯೇ ಮಾಹಿತಿ ನೀಡುತ್ತಿದ್ದಾರೆ. ಅಲ್ಲಿಗೆ ಬರಲು ಉತ್ಸುಕರಾಗಿರುವವರ ಸಂಪರ್ಕ ಸಂಖ್ಯೆ ಪಡೆದು ವಾಟ್ಸ್​ಆಪ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಮಾಹಿತಿ ನೀಡುತ್ತಿದ್ದಾರೆ.

ಗೌರವ- ದಾಖಲೆ

2015ರಲ್ಲಿ ಅಭಿಷೇಕ್ ಅವರಿಗೆ, ಉತ್ತರ ಪ್ರದೇಶ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಯಶ್ ಭಾರತಿ’ ನೀಡಿ ಗೌರವಿಸಲಾಗಿದೆ. 11 ಲಕ್ಷ ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ. ಜತೆಗೆ, ಸರ್ಕಾರದಿಂದ ಇವರಿಗೆ ತಿಂಗಳಿಗೆ 50 ಸಾವಿರ ಗೌರವ ಧನವೂ ಸಿಗುತ್ತಿದೆ.

2017ರಲ್ಲಿ 5,700 ಬಾಲಕಿಯರಿಗೆ ಸ್ವ-ರಕ್ಷಣೆ ತಂತ್ರಗಳಲ್ಲಿ ತರಬೇತಿ ನೀಡಿದರು. ಈ ಮೂಲಕ ದೆಹಲಿ ಪೊಲೀಸರು 5 ಸಾವಿರ ಬಾಲಕಿಯರಿಗೆ ತರಬೇತಿ ನೀಡಿದ್ದ ದಾಖಲೆಯನ್ನು ಮುರಿದು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಹೆಸರು ಗಿಟ್ಟಿಸಿಕೊಂಡರು.

ಮಾಡಿದ್ದೊಂದು, ಆಗಿದ್ದೊಂದು

ಮಾರ್ಷಲ್ ಆರ್ಟ್ ಬಗ್ಗೆ ಪಾಲಕರಲ್ಲಿ ಇರುವ ಅಭಿಪ್ರಾಯಗಳನ್ನು ದೂರ ಮಾಡಬೇಕು, ಇದೇ ದಿಸೆಯಲ್ಲಿ ಸಾಧನೆ ಮಾಡಬೇಕು ಎಂದು ಯೋಚಿಸಿದ ಅಭಿಷೇಕ್, 2006ರಲ್ಲಿ ‘ಅಭಿ ಸೆಲ್ಪ್ ಪೊ›ಟೆಕ್ಷನ್ ಟ್ರಸ್ಟ್’ ಶುರು ಮಾಡಿದರು. ಈ ಟ್ರಸ್ಟ್ ಅಡಿಯಲ್ಲಿ ‘ಮೇರಿ ರಕ್ಷಾ ಮೇರೆ ಹಾಥೊ ಮೇ’ ಎಂಬ ಕಾರ್ಯಕ್ರಮ ಆರಂಭಿಸಿ ಆರಂಭದಲ್ಲಿ ಪೊಲೀಸ್ ಕಮಾಂಡೋಗಳಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡಲು ಚಿಂತಿಸಿದರು.

ಇದಕ್ಕಾಗಿ ಒಂದು ಶಿಬಿರ ಆಯೋಜಿಸಿದಾಗ, ಇದನ್ನು ಕಲಿತು ಏನು ಪ್ರಯೋಜನ ಎಂದವರೇ ಹೆಚ್ಚಂತೆ. ‘ಶಿಬಿರ ನೋಡುವುದಕ್ಕಾಗಿ ಕೆಲವು ಹುಡುಗಿಯರು ಬಂದಿದ್ದರು. ಅವರಲ್ಲಿ ಈ ವಿದ್ಯೆಯ ಬಗ್ಗೆ ಏನೋ ಒಂದು ರೀತಿಯ ಒಲವು ಕಾಣಿಸಿತು. ಅವರಿಗೇ ತರಬೇತಿ ನೀಡಿದರೆ ಹೇಗೆ ಎಂಬ ಯೋಚನೆ ಬಂತು. ಮೊದಮೊದಲು ಅವರೂ ನಿರಾಕರಿಸಿದರು. ಹಾಗೂ ಹೀಗೂ ಮಾಡಿ 50 ಹುಡುಗಿಯರ ಮನವೊಲಿಸಿ ಅವರಿಗೆ ತರಬೇತಿ ನೀಡಲು ಶುರು ಮಾಡಿದೆ.

ಏನಾಶ್ಚರ್ಯ... ಕೆಲವೇ ದಿನಗಳಲ್ಲಿ ಇವರ ಸಂಖ್ಯೆ 20 ಸಾವಿರಕ್ಕೆ ಏರಿತ್ತು’ ಎಂದು ಅಭಿಷೇಕ್ ತಮ್ಮ ರೋಚಕ ಆರಂಭದ ದಿನಗಳನ್ನು ನೆನೆಯುತ್ತಾರೆ. ಈ ರೀತಿ ಶುರುವಾದ ಅವರ ತರಬೇತಿಯ ಪಯಣ ನಂತರ ಪೊಲೀಸ್ ಹಾಗೂ ಸೇನಾದಳದಲ್ಲಿ ಬೇಡಿಕೆ ಕುದುರಿಸಿಕೊಳ್ಳುವಷ್ಟು ಮುಂದುವರಿಯಿತು. ಕಾಲೇಜಿನಲ್ಲಿ ಕಿರುಕುಳ ನೀಡುವ ಹುಡುಗರನ್ನು ನಮ್ಮ ವಿದ್ಯಾರ್ಥಿನಿಯರು ಚೆನ್ನಾಗಿ ನಿಭಾಯಿಸಿದ್ದಾರೆ.

ಒಬ್ಬ ವಿದ್ಯಾರ್ಥಿನಿ ಸರಗಳ್ಳತನ ನಡೆಯುವ ಸಂದರ್ಭದಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡಳು. ಹೀಗೆ ಅನೇಕ ಘಟನೆಗಳು ನಡೆದಿವೆ ಎಂಬ ಹೆಮ್ಮೆಯಿಂದ ಹೇಳುತ್ತಾರೆ ಅಭಿಷೇಕ್. 45 ವರ್ಷಕ್ಕಿಂತ ಮೇಲ್ಪಟ್ಟ 50 ಮಹಿಳೆಯರನ್ನು ಒಳಗೊಂಡಿದ್ದ ಪವರ್ ವಿಂಗ್ ಎಂಬ ಗುಂಪಿಗೆ ಸಹ ತರಬೇತಿ ನೀಡಿದ್ದಾರೆ.

| ಸುಚೇತನಾ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net